ಕನ್ನಡದವರಿಗಾದ ಅವಮಾನ

ಕನ್ನಡದವರಿಗಾದ ಅವಮಾನ

ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡುಗಾರಿಕೆಯ ಕಾರ್ಯಕ್ರಮ ಸಿಡ್ನಿಯಲ್ಲಿ ಇತ್ತೀಚೆಗೆ ನಡೆಯಿತು. ನಾನು ಹೋಗಲಿಲ್ಲ. ಹೋಗಬೇಕು ಅನಿಸಲಿಲ್ಲ.

ತುಂಬಾ ಇಂಪಾಗಿ ಹಾಡಬಲ್ಲ ಎಸ್.ಪಿಯ ಹಲವಾರು ವರ್ಷಗಳ "ಟ್ರೇನ್ಡ್" ದನಿಯಾಗಲಿ, ತೀಡಿತೀಡಿ ನುಣುಪಾದ "ಕಲ್ಚರ್ಡ್" ದನಿಯಾಗಲಿ ನನ್ನಲ್ಲಿ ಉತ್ಸಾಹ ಕೆರಳಿಸುತ್ತಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಇಂಡಿಯಾದ ಹಲವಾರು ಜನಪ್ರಿಯ ಹಾಡುಗಾರರ ತೊಂದರೆ ಇದು ಅನಿಸುತ್ತದೆ. ಇರಲಿ ಅದು ಮತ್ತಾವಾಗಲಾದರೂ ಬೇರೆಯಾಗಿಯೇ ಯೋಚಸಲು ಇಟ್ಟುಕೊಳ್ಳುತ್ತೇನೆ.

ನುಣುಪಾದ ದನಿಯಷ್ಟೇ ಈತನ ಕಾರ್ಯಕ್ರಮಕ್ಕೆ ಹೋಗದಿರಲು ಕಾರಣವಲ್ಲ. ಟೀವಿ ಕಾರ್ಯಕ್ರಮಗಳಲ್ಲಿ ಈತ ಮಾತಾಡುವ ಒಡಕೊಡಕು ಕನ್ನಡವೂ, ತನ್ನನ್ನು ತಾನು ಕಂಡಾಪಟ್ಟೆ ಸೀರಿಯಸ್ಸಾಗಿ ಪರಿಗಣಿಸುವುದು, ಹಾಗಾಗಿ ಕಾರ್ಯಕ್ರಮದಲ್ಲಿ ಹಾಡುವವರ ಬಗ್ಗೆ ಬೆಟ್ಟದ ಮೇಲೆ ಕೂತವನಂತೆ ಆಡುವ ನಮ್ರತೆಯಿಲ್ಲದ ಮಾತು ಇವೆಲ್ಲಾ ಈತನ ಬಗ್ಗೆ ನನಗೆ ಒಳ್ಳೆಯ ಭಾವ ಮೂಡಿಸಿಲ್ಲ. ಈತ ನಡೆಸಿಕೊಡುವ ಕಾರ್ಯಕ್ರಮದ ವಿನ್ಯಾಸದ ಬಗ್ಗೆಯೇ ಕಿರಿಕಿರಿಯಿದೆ. ಅದು ಬೇರೆ ಮಾತು.

ಈಗ, ಈತನ ಕಾರ್ಯಕ್ರಮಕ್ಕೆ ಹೋಗಿ ಬಂದ ಕನ್ನಡದವರು ಹುಯ್ಯಿಲಿಡುತ್ತಿದ್ದಾರೆ. ನಾಕೈದು ಕನ್ನಡ ಹಾಡುಗಳನ್ನಷ್ಟೇ ಹಾಡಿದ. ಕನ್ನಡಕ್ಕೆ ಅವಮಾನ ಮಾಡಿದ. ತಾವು ಕೊಟ್ಟ ದುಡ್ಡಿಗೂ ಅನ್ಯಾಯವಾಯಿತು ಎಂದು ರೇಗುತ್ತಿದ್ದಾರೆ. ಅದರ ಬಗ್ಗೆ ಇಲ್ಲೆಲ್ಲಾ ಕೂಗಾಟ ಎದ್ದಿದೆ. ನನಗೆ ಮೊದಲೇ ಗೊತ್ತಿತ್ತು ಎನ್ನುವಂತ ಸೋಗಿನ ಮಾತು ನಾನು ಆಡುತ್ತಿಲ್ಲ. ಯಾಕೆಂದರೆ ಹೀಗಾಗುತ್ತದೆಂದು ಯಾರಿಗೂ ಗೊತ್ತಿರಲಿಲ್ಲ. ಆದರೆ ಊಹಿಸುವುದು ಕಷ್ಟದ ಸಂಗತಿಯೇನಾಗಿರಲಿಲ್ಲ.

ಕೆಲವು ವರ್ಷಗಳ ಹಿಂದೆ, ಈತನ ಕಾರ್ಯಕ್ರಮದ ಬಗ್ಗೆ ಚರ್ಚಿಸುತ್ತಿದ್ದ ಗೆಳೆಯರ ನಡುವೆ ನನ್ನ ಅಸಮಾಧಾನವನ್ನು ಹೇಳಿದಾಗ ಎಲ್ಲರೂ ಸಾರಾಸಗಟಾಗಿ ನನ್ನನ್ನು ತಿರಸ್ಕರಿಸಿದ್ದರು. ನಾನೊಬ್ಬ ದೇಶದ್ರೋಹಿ ಎನ್ನುವಂತೆ ಕಡಿಕಾರಿದ್ದರು. ಆದರೂ ನನ್ನ ನಿಲುವು ನಾನು ಬಿಟ್ಟುಕೊಟ್ಟಿರಲಿಲ್ಲ. ಕಾರಣ, ಆ ನಿಲುವನ್ನು ನಾನು ನನ್ನ ಮಟ್ಟಿಗಾಗುವಷ್ಟು ಗಂಭೀರವಾಗಿ ಯೋಚಿಸಿ ತಳೆದದ್ದಾಗಿತ್ತು. ನಾವು ಯಾವುದೋ ಮೆಚ್ಚುಗೆಯ ಭ್ರಾಂತಿನಲ್ಲಿ ಕುರುಡಾಗುವುದು ಸಹಜ. ಆದರೆ ತೆರೆದ ಮನಸ್ಸಿನಿಂದ, ಎಚ್ಚರದಿಂದ ನೋಡಿಕೊಂಡರೆ ಇಂತಹ ಆಘಾತವಾಗಬೇಕಾಗಿಲ್ಲ ಎಂಬ ಕಾರಣಕ್ಕೆ ಹೇಳಿದೆ ಅಷ್ಟೆ.

ಸಿಡ್ನಿಯ ಕನ್ನಡ ರೇಡಿಯೋ ಕಾರ್ಯಕ್ರಮದಲ್ಲಿ ಈತ ತಾನು ೩೬೦೦೦ ಹಾಡುಗಳನ್ನು ಹಾಡಿರುವುದಾಗಿ ಹೇಳಿಕೊಂಡ. ಸದ್ಯದಲ್ಲೇ ಗಿನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿನಲ್ಲಿ ದಾಖಲಾಗಲಿದೆ ಎಂದು ಈತನ ವೆಬ್‌ಸೈಟಿನಲ್ಲಿ ಐದಾರು ವರ್ಷದಿಂದ ಇದೆ. ನಲವತ್ತು ವರ್ಷದಲ್ಲಿ ನಲವತ್ತು ಸಾವಿರ ಹಾಡುಗಳೆಂದರೆ, ವರ್ಷಕ್ಕೆ ಸಾವಿರ ಹಾಡುಗಳೆಂದರೆ, ದಿನಕ್ಕೆ ಮೂರು ಹಾಡುಗಳನ್ನು ಹಾಡಬೇಕು. ಒಂದೆರಡು ದಿನ ಹತ್ತಿಪ್ಪತ್ತು ಹಾಡಿದ್ದೇನೆ ಎಂದು ಬೇರೆ ಹೇಳಿಕೊಂಡಿರುವುದು ಜಾಣತನವೇ ಸರಿ. ಆದರೆ ೩೬೦೦೦ ಹಾಡು ಹಾಡಿದ್ದೇನೆ ಅನ್ನುವುದು, ರೆಕಾರ್ಡಿಂಗ್ ಮಾಡಿದ್ದೇನೆ ಎಂದರ್ಥವಲ್ಲ. ಹಾಗಾದರೆ, ಅದಕ್ಕೆ ಆಧಾರವಿದೆಯೆ?

ಹತ್ತು ಹಾಡುಗಳನ್ನು "ಪ್ರಾಮಾಣಿಕ"ವಾಗಿ ಹಾಡಿದರೆ ಸಾರ್ಥಕವಲ್ಲವೆ ಎಂದು ಹಲವಾರು ಸಲ ಅನಿಸಿದೆ.

Rating
No votes yet

Comments