ನೆನಪಿನಾಳದಿಂದ ೨೨ - ಸುಟ್ಟ ಏಡಿ ತಿಂದು ಜಾತಿ ಕೆಟ್ಟ ಪ್ರಸಂಗ

ನೆನಪಿನಾಳದಿಂದ ೨೨ - ಸುಟ್ಟ ಏಡಿ ತಿಂದು ಜಾತಿ ಕೆಟ್ಟ ಪ್ರಸಂಗ

ಸುಂದರ ಸೂರ್ಯೋದಯ, ಬೆಟ್ಟದಂಚಿನಿಂದ ಇಣುಕುತ್ತಿದ್ದ ರವಿ, ಭೂರಮೆಯ ಅಂಗಾಂಗಗಳಿಗೆಲ್ಲ ಬಂಗಾರದ ಬಣ್ಣವ ತುಂಬುತ್ತಾ ಉದಯಿಸಿ ಬರುತ್ತಿದ್ದ.  ಗಾವುದ ದೂರದ ಗದ್ದೆ ಬಯಲುಗಳೆಲ್ಲ ಹಸಿರ ತೊನೆಯ ತೊಯ್ದಾಡಿಸುತ್ತ ಆ ಬಂಗಾರದ ಬಣ್ಣದ ಸವಿಯನ್ನು ಅನುಭವಿಸುತ್ತಿದ್ದವು, ಗೆಳೆಯ ಶಿವರಾಮ ಬೆಳಿಗ್ಗೆಯೇ ಮನೆಯ ಬಳಿ ಬಂದು ಮೆಲ್ಲನೆ ಉಸುರಿದ್ದ, ಈ ದಿನ ಶಾಲೆಗೇ ಚಕ್ಕರ್ ಹೊಡೆಯೋಣ, ರಾಮಣ್ಣ ಮೇಷ್ಟ್ರು ಪಾಠ ಮಾಡುವಾಗ ಮಧ್ಯೆ ಮಲಗಿಬಿಡುತ್ತಾರೆ ಆ ಸಮಯದಲ್ಲಿ ನಾವು ಮೂತ್ರ ವಿಸರ್ಜನೆಯ ನೆಪದಲ್ಲಿ ಹೊರ ಬಂದು ಕೆರೆಗೆ ಹೋಗೋಣ, ಮಳೆಬಂದು ಕೆರೆಯ ತುಂಬ ನೀರು ತುಂಬಿ ನಿಂತಿದೆ, ಎಲ್ಲ ಕಾಲುವೆಗಳಲ್ಲೂ ನೀರು ಹರಿಯುತ್ತಿದೆ, ಸಾಕಷ್ಟು ಏಡಿಗಳನ್ನು ಹಿಡಿಯಬಹುದು, ಕಾರ ಹಚ್ಚಿ ಕೆಂಡದಲ್ಲಿ ಸುಟ್ಟು ತಿನ್ನಬಹುದು, ಸಿದ್ಧವಾಗಿರು ಎಂದಿದ್ದ.  

 

 ಶಾಲೆಯ ಘಂಟೆ ಢಣ ಢಣ ಬಾರಿಸುತ್ತಿದ್ದಂತೆ ಸಾಲಿನಲ್ಲಿ ನಿಂತೆವು ಭೀಮಣ್ಣ ಮಾಸ್ತರ ಮಗ ಶ್ರೀನಾಥ ಮತ್ತವನ ಸಂಗಡಿಗರು ಹೇಳಿ ಕೊಟ್ಟಂತೆ ರಾಗವಾಗಿ "ಸ್ವಾಮಿದೇವನೆ ಲೋಕಪಾಲನೆ, ತೇನಮೋಸ್ತು ನಮೋಸ್ತುತೇ " ನಾವೂ ಹಾಡಿ ಮುಗಿಸಿ ನಮ್ಮ ತರಗತಿಗೆ ಹೋಗಿ ಕುಳಿತೆವು.   ಅಂದುಕೊಂಡಂತೆಯೇ ರಾಮಣ್ಣ ಮಾಸ್ತರು ಬಂದರು, ಒಂದರ್ಧ ಘಂಟೆ ಕನ್ನಡ ಪಾಠ ಮಾಡಿ, ಕೆಲವು ಪದ್ಯಗಳನ್ನು ಹೇಳಿ  ಕೊಟ್ಟು, ನಮಗೆ ತಾತ್ಪರ್ಯ ಬರೆಯಿರಿ ಎಂದು ಹೇಳಿ ನಿದ್ದೆಗೆ ಜಾರಿದರು.  ಇದನ್ನೇ ಕಾಯುತ್ತಿದ್ದ ಶಿವರಾಮ ಮೆಲ್ಲನೆ ಮೇಲೆದ್ದ, ಸಾರ್, ಒಂದ ಮಾಡಿ ಬತ್ತೀವಿ ಎಂದ, ನಿದ್ದೆಯಲ್ಲಿದ್ದ ರಾಮಣ್ಣ ಮಾಸ್ತರು ಹೋಗಿ, ಬೇಗ ಬನ್ನಿ ಎಂದರು.   ನನಗೆ ಕಣ್ಸನ್ನೆ ಮಾಡಿದ ಶಿವರಾಮನ ಜೊತೆಗೆ, ಗೋಪಾಲ, ಶಿವ, ಆವುನಿ, ಆಂಜನಿ, ರಾಮ, ವೇಣು  ಮತ್ತಿತರರು  ಜೊತೆಯಾದರು. ತರಗತಿಯಿಂದ ಆಚೆ ಬಂದು ಶಾಲೆಯ ಪಕ್ಕದಲ್ಲೇ ಹರಿಯುತ್ತಿದ್ದ ಕಾಲುವೆಯ ಬಳಿಯಲ್ಲಿ ನಾನು ಚಡ್ಡಿ ಮೇಲೆತ್ತಿ ಒಂದ ಮಾಡಲು ನಿಂತರೆ, ಶಿವರಾಮ ಹಿಂದಿನಿಂದ ಜಾಡಿಸಿ ಒದ್ದಿದ್ದ,  ಪೃಷ್ಠದ ಮೇಲೆ ಬಿದ್ದ ಆ ಒದೆತಕ್ಕೆ ನಾನು ಅಂಗಾತ ಕಾಲುವೆಯ ನೀರಿನಲ್ಲಿ ಬಿದ್ದಿದ್ದೆ, ನನ್ನನ್ನು ಎತ್ತುವವನಂತೆ ನಟಿಸುತ್ತಾ ಬಂದ ಅವನು ಕಾಲುವೆಯ ಬದುಗಳಲ್ಲಿದ್ದ ಸಣ್ಣ ಸಣ್ಣ ಬಿಲಗಳಲ್ಲಿ ಕೈ ಹಾಕಿ ಒಮ್ಮೆಗೇ ನಾಲ್ಕಾರು ಏಡಿಗಳನ್ನು ಹಿಡಿದಿದ್ದ,    ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಾ, ಅವನ ಕೈ ಕಚ್ಚಲು ಯತ್ನಿಸುತ್ತಿದ್ದ ಏಡಿಗಳಲ್ಲಿ   ಒಂದೆರಡನ್ನು ನನ್ನ ಮೇಲೆಸೆದು ಹಿಡ್ಕಳಲೇ ಮಂಜಾ ಎಂದು ಕೂಗಿ ನಗುತ್ತಿದ್ದ, ನನ್ನ ಮೇಲೆ ಬಿದ್ದ ಏಡಿಗಳಲ್ಲಿ ಒಂದು ನನ್ನ ಬಲಭಾಗದ ತೋಳನ್ನು ಗಟ್ಟಿಯಾಗಿ ಕಚ್ಚಿ ಹಿಡಿದಾಗ ಅಸಾಧ್ಯ ನೋವಾಗಿ, ಅದನ್ನು ಕಿತ್ತೆಳೆದಾಗ, ಆ ಕೊಂಡಿ ಅಲ್ಲೇ ಉಳಿದು, ಅದರ ಇಡೀ ದೇಹ ನನ್ನ ಎಡಗೈನಲ್ಲಿತ್ತು.   ಅದೇ ಸಮಯಕ್ಕೆ ನಮ್ಮ ಗುಂಪಿನ ಇನ್ನುಳಿದವರೆಲ್ಲ ಸದಸ್ಯರು ಹತ್ತಾರು ಏಡಿಗಳನ್ನು ಹಿಡಿದಿದ್ದರು. 

 

 ಅಲ್ಲಿಂದ ನಮ್ಮ ಪಯಣ ಸಾಗಿದ್ದು ಊರಾಚೆಗಿದ್ದ ಹೊಲೇರ ಹಟ್ಟಿಗೆ!   ಕಪ್ಪಗಿದ್ದ ಶಿವರಾಮ ಜಾತಿಯಲ್ಲಿ ಹೊಲೆಯನಾದರೂ ಪ್ರಾಥಮಿಕ ಶಾಲೆಯ ನಮ್ಮ ಪುಂಡ ಸಾಹಸಿಗಳ ಗುಂಪಿಗೆ ನಾಯಕನಾಗಿದ್ದ.    ಅವರ ಮನೆ ಎಂಬ ಗುಡಿಸಲಿಗೆ ಕರೆದೊಯ್ದ ಶಿವರಾಮ ಅಡಿಗೆ ಮನೆಯ ಒಲೆಗೆ ಕೆಲವು ಸೌದೆ ತುಂಡುಗಳನ್ನಿಟ್ಟು ಬೆಂಕಿ ಹಾಕಿ, ನಾವು ಹಿಡಿದಿದ್ದ ಏಡಿಗಳನ್ನೆಲ್ಲ ಸ್ವಲ್ಪ ಉಪ್ಪು ಕಾರ ಸವರಿ ಸುಡತೊಡಗಿದ.  ಹಸಿ ಹಸಿ ಏಡಿಗಳು ಬೆಂಕಿಯಲ್ಲಿ ಸುಡುತ್ತಿದ್ದರೆ ಒಂದು ರೀತಿಯ ಹಿತವಾದ ಕಮಟು ವಾಸನೆ ಇಡೀ ಗುಡಿಸಲನ್ನು ಆವರಿಸಿಕೊಂಡಿತ್ತು. ಅವರ ಅವ್ವ ಮತ್ತು ಅಜ್ಜಿ ಮಾಡಿದ್ದನ್ನು ನೋಡಿ ಕಲಿತಿದ್ದ ಶಿವರಾಮನಿಗೆ ಆ ಅಡಿಗೆಯನ್ನ್ನು ಮಾಡಿ ನಮಗೆಲ್ಲ ತಿನ್ನಿಸಬೇಕೆಂಬ ಮಹದಾಸೆ ಬಹಳ ದಿನಗಳಿಂದಲೂ ಕಾಡುತ್ತಿತ್ತಂತೆ! ಅಂದು ಅವನ ಮನದಾಸೆ ಈಡೇರಿದ್ದ ಖುಷಿಯಲ್ಲಿ ಎಲ್ಲರಿಗಿಂತ ಹೆಚ್ಚಾಗಿ ನನಗೇ ತಿನ್ನಿಸಿದ್ದ.  ಮೈಸೂರಿನಲ್ಲಿ ಖಾಲಿ ದೋಸೆ, ಇಡ್ಲಿ-ವಡೆ, ಚಿತಾನ್ನ ತಿಂದು ಬೆಳೆದಿದ್ದ ನನಗಂತೂ ಈ ಉಪ್ಪು ಕಾರ ಹಚ್ಚಿ ಸುಟ್ಟ ಏಡಿಯ ರುಚಿ ನಿಜಕ್ಕೂ ಬೇರೆಯಾಗಿಯೇ ಕಂಡಿತ್ತು,  ಆ ಸಮಯಕ್ಕೆ ಶಿವರಾಮ ನನಗೆ ಆರಾಧ್ಯ ದೈವವಾಗಿಬಿಟ್ಟಿದ್ದ.  

 

ಊರಾಚಿನ ಹೊಲೇರ ಹಟ್ಟಿಯ ಅವರ ಗುಡಿಸಲಿನಿಂದ ಹೊರಟ ನಮಗೆ ಅವನು ಪದೇ ಪದೇ ಎಚ್ಚರಿಸಿದ್ದ, ಲೋ ಯಾರಿಗೂ ಹೇಳ್ಬೇಡ್ರೋ ನನಮಕ್ಳಾ, ಊರಲ್ಲಿ ಗೊತ್ತಾದರೆ ದೊಡ್ಡ ರಾಮಾಯಣ ಆಗೋಗುತ್ತೆ, ಹುಷಾರು ಕಣ್ರಲಾ ಅಂದಿದ್ದ.  ಸೀದಾ ತರಗತಿಯೊಳಗೆ ಬಂದರೆ ರಾಮಣ್ಣ ಮಾಸ್ತರು ಇನ್ನೂ ನಿದ್ರೆಯ ಮಂಪರಿನಲ್ಲೇ ಇದ್ದರು,   ಶ್ರೀನಾಥ ಮತ್ತವನ ಗೆಳೆಯರು ನಮ್ಮ ಮೇಲೊಂದು ಕಣ್ಣಿಟ್ಟಿದ್ದರು,  ನಾವು ಒಂದ ಮಾಡಲೆಂದು ಹೋಗಿದ್ದು, ಬಹಳ ಸಮಯದ ನಂತರ ಹಿಂದಿರುಗಿದ್ದು,  ನಮ್ಮ ಬಾಯಿಯಿಂದ ಬರುತ್ತಿದ್ದ ಸುಟ್ಟ ಏಡಿಯ ವಾಸನೆ,  ಎಲ್ಲವನ್ನೂ ರಾಮಣ್ಣ ಮಾಸ್ತರರ ಕಿವಿಯಲ್ಲಿ ಉರುಬಿದ್ದ ಶ್ರೀನಾಥ, ನಾವೆಲ್ಲರೂ ಕಿವಿ ಹಿಡಿದುಕೊಂಡು ಒಂದು ಘಂಟೆಯ ಹೊತ್ತು "ಕೋಣ" ಬಗ್ಗಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ.  ಅಂದಿನಿಂದ ಶಿವರಾಮ ಮತ್ತು ಶ್ರೀನಾಥ ಇಬ್ಬರದ್ದೂ ಒಂದೊಂದು ಗುಂಪಾಯಿತು, ಚೆನ್ನಾಗಿ ಓದುತ್ತಾ ಚುರುಕಾಗಿದ್ದ ಭ್ರಾಂಬ್ರು  ಹುಡುಗ್ರು ಶ್ರೀನಾಥನ ಹಿಂದಿದ್ದರೆ ಉಳಿದೆಲ್ಲ ಜಾತಿಗಳ ಹುಡುಗರು ಶಿವರಾಮನ ಹಿಂದೆ ಸೇರಿದ್ದರು. 

 

ಸಂಜೆ ಮನೆಗೆ ಬಂದಾಗ ಅಕ್ಕನ ಜೊತೆ ನಮ್ಮ ಸಾಹಸಗಾಥೆಯನ್ನು ಹಂಚಿಕೊಳ್ಳುತ್ತಾ ಒಂದು ಘಂಟೆ ಕೋಣ ಬಗ್ಗಿದ್ದರಿಂದ ಹಿಡುಕೊಂಡಿದ್ದ ಕೈಕಾಲುಗಳನ್ನು ನೀವಿ ಸರಿ ಮಾಡುವಂತೆ ಕೇಳಿದ್ದೆ.  ಅಮೃತಾಂಜನ ನೀವಿ ಅಕ್ಕ ನನ್ನ ಕೈ ಕಾಲುಗಳನ್ನು ತೀಡುತ್ತಿದ್ದಾಗ ಆಸ್ಪತ್ರೆಯಿಂದ ಮನೆಗೆ ಬಂದ ಅಮ್ಮ ಏನಾಯಿತು ಎಂದರು, ಅಕ್ಕ ನನ್ನ ಅಂದಿನ ಕಥೆಯನ್ನೆಲ್ಲ ಒದರಿದ್ದಳು, ಅಯ್ಯೋ ರಾಮಾ, ನಿನಗೇನು ಬಂತೋ ಕೇಡುಗಾಲ, ಹೊಲೇರ ಮನೆಗೋಗಿ ತಿಂದು ಬಂದಿದೀಯಲ್ಲೋ, ನಿಮ್ಮಪ್ಪನಿಗೆ ಗೊತ್ತಾದರೆ   ಮೂಳೆ ಮುರೀತಾರೆ ನಿನಗೆ, ಎಂದು  ಶಪಿಸುತ್ತಾ ಮೊದಲು ಸ್ನಾನ ಮಾಡು ಹೋಗು ಎಂದು ಬಚ್ಚಲು ಮನೆಗಟ್ಟಿದ್ದರು. ಇದ್ಯಾಕೆ ಏನು ಎಂದು ಒಂದೂ ಅರಿವಾಗದ ನಾನು, ಬಚ್ಚಲು ಮನಗೆ ಹೋಗಿ ಸ್ನಾನಕ್ಕೆ ಸಿದ್ಧನಾಗುವಾಗ ಬಂದ ಅಜ್ಜಿ, "ಅಯ್ಯೋ ಮುಂಡೆಗಂಡ ನಿನಗೇನು ಬುದ್ಧಿ ಇಲ್ವೇನೋ, ನಾವು ಮೈಸೂರಿನವರು ಕಣೋ ಕಂದ ಹಂಗೆಲ್ಲಾ ಹೊಲೇರ ಮನೆಗೋಗಿ ತಿನ್ನಬಾರದು ಕಣೋ, ನಮ್ಮ ದೇವ್ರು ಮೆಚ್ಚೋದಿಲ್ಲಾ" ಅಂತ ಬುದ್ಧಿ ಹೇಳಿ, ಸ್ನಾನ ಮಾಡಿಸುತ್ತಾ ಸೀಗೆಪುಡಿ ಹಾಕಿ ನನ್ನ ಮೈನೆಲ್ಲಾ ಎಮ್ಮೆ ತಿಕ್ಕುವಂತೆ ತಿಕ್ಕಿದ್ದರು,  ನಾಲಿಗೆ ಆ ಮಾಡು ಅಂತ ಹೇಳಿ, ಅವರೇ   ತಮ್ಮ  ಕೈಯಾರೆ ನನ್ನ ನಾಲಿಗೆ ತಿಕ್ಕಿ, ಅಳಿದುಳಿದಿದ್ದ ಏಡಿಗಳ ಬಾಡಿಗಳನ್ನು ವಾಂತಿ ಮಾಡಿಸಿದ್ದರು.   ಸಂಜೆ ಜಮೀನ್ದಾರ ಶಿವಪ್ಪನವರ ಮನೆಗೆ ಹೋಗಿ ಹಸುವಿನ ಗಂಜಲ ತಂದು ಮನೆಗೆಲ್ಲ ಎಸೆದು ವಿಶೇಷ ಪೂಜೆ  ಮಾಡಿದ್ದರು ನಮ್ಮಜ್ಜಿ.   ಸಧ್ಯಕ್ಕೆ ರಾತ್ರಿ ಹೋಟೆಲು ಮುಚ್ಚಿ ಮನೆಗೆ ಬಂದ ಅಪ್ಪನಿಗೆ ಈ ವಿಚಾರ ಯಾರೂ ಹೇಳಲಿಲ್ಲ. 

 

ಮರುದಿನ ಶಾಲೆಗೆ  ಹೋಗುವಾಗ ಎಂದಿನಂತೆ ಅಪ್ಪನ ಹೋಟೆಲ್ಲಿಗೆ ಬಂದು ನಾನು ಮತ್ತು ಅಕ್ಕ ಇಬ್ಬರೂ ಇಡ್ಲಿ ತಿನ್ನುತ್ತಿರುವಾಗ ಶಿವರಾಮನ ಅಪ್ಪ ಹೋಟೆಲ್ಲಿಗೆ ಬಂದು ಇಡ್ಲಿ ಕೊಡಿ ಭಟ್ರೇ ಎಂದಾಗ, ಅಪ್ಪ ಅವನಿಗೆ ಸೂರಿನಲ್ಲಿ ಸಿಗಿಸಿದ್ದ ಅಲ್ಯುಮಿನಿಯಂ ತಟ್ಟೆ ಮತ್ತು ಲೋಟ ತೋರಿಸಿದ್ದರು,  ಮರು ಮಾತಾಡದೆ ಆ ತಟ್ಟೆ ಲೋಟ ತೆಗೆದುಕೊಂಡು ಹೊರಗಡೆ ಹೋಗಿ ಅಲ್ಲಿಟ್ಟಿದ್ದ ನೀರಿನಲ್ಲಿ ತೊಳೆದುಕೊಂಡು ಬಂದು ಆಚೆಯೇ ಕುಳಿತು ಅಪ್ಪ  ಇಡ್ಲಿಗಾಗಿ ಕಾಯುತ್ತಿದ್ದ, ನಾನು ತಿಂಡಿ ತಿಂದು ಮುಗಿಸಿ ನನ್ನ ತಟ್ಟೆ ಲೋಟ ತೊಳೆದಿಟ್ಟು ಶಾಲೆಗೇ ಹೋಗಲು ನನ್ನ ಬ್ಯಾಗನ್ನೆತ್ತಿಕೊಂಡೆ, ಆಗ ಅಪ್ಪ ಒಂದು ಗ್ಲಾಸ್ ಟೀ ನನ್ನ ಕೈಗೆ ಕೊಟ್ಟು, ಶಿವರಾಮನ ಅಪ್ಪನಿಗೆ ಕೊಡಲು ಹೇಳಿದರು.  ನಾನು ಅದೇ ಗ್ಲಾಸಿನಲ್ಲಿ ಶಿವರಾಮನ ಅಪ್ಪನಿಗೆ ಟೀ ಕೊಟ್ಟರೆ ಆತ ಅದನ್ನು ತನ್ನ ಬಳಿಯಿದ್ದ ಡೊಂಕಾದ ಲೋಟಕ್ಕೆ ಬಗ್ಗಿಸಿಕೊಂಡು ಖಾಲಿ ಗ್ಲಾಸನ್ನು ನನ್ನ ಕೈಗಿತ್ತ.  ಆ ಗ್ಲಾಸನ್ನು ನಾನು ಅಪ್ಪನಿಗೆ ಕೊಡಲು ಹೋದರೆ ಛಟೀರೆಂದು ಅಪ್ಪ ನನ್ನ ಕಪಾಳಕ್ಕೆ ಬಿಗಿದಿದ್ದರು.  ತಲೆ ಬುಡ ಅರ್ಥವಾಗದ ನಾನು ಕೆಳಗೆ ಬಿದ್ದಿದ್ದೆ, ಓಡಿ ಬಂದು ಅಕ್ಕ ನನ್ನನ್ನು ಮೇಲೆತ್ತಿದ್ದಳು. "ಅವರಿಗೆ ನಾವು ಕುಡಿಯುವ  ಲೋಟವನ್ನು ಮುಟ್ಟಿಸಬಾರದು ಕಣೋ, ನಿನಗೆ ಅಷ್ಟೂ ಗೊತ್ತಾಗೋದಿಲ್ವಾ"  ಅಂತ ಮೂತಿ ತಿವಿದ ಅಕ್ಕ, ಅಲ್ಲಿಂದ ನನ್ನು ಓಡಿಸಿಕೊಂಡು ಶಾಲೆಗೆ  ಕರೆ ತಂದಿದ್ದಳು. ಅಪ್ಪನ  ಕೈಯ್ಯಿಂದ  ಇನ್ನೂ ಬೀಳಬಹುದಿದ್ದ ಏಟುಗಳಿಂದ ನನ್ನನ್ನು ಆ ಕ್ಷಣಕ್ಕೆ ಬಚಾವು ಮಾಡಿದ್ದಳು.  

 

ಅದು ಹೇಗೋ  ಶಿವರಾಮನ ಗುಡಿಸಲಿನಲ್ಲಿ ಏಡಿಗಳನ್ನು ಸುಟ್ಟು ತಿಂದ ಕಥೆ ಊರಿನಲ್ಲಿ ಎಲ್ಲರಿಗೂ ಗೊತ್ತಾಗಿ ದೊಡ್ಡ ರಾಮಾಯಣವೇ ಆಗಿ ಹೋಯಿತು, ಪಂಚಾಯಿತಿ ಸೇರಿಸಿದ ಊರಿನ ಹಿರಿಯರು ಶಿವರಾಮ ಮಾಡಿದ ತಪ್ಪಿಗೆ ಅವನಪ್ಪ ಅಮ್ಮನಿಗೆ ಒಂದು ತಿಂಗಳ ಕಾಲ ಊರಿನಲ್ಲಿ ಯಾರೂ ಕೂಲಿ ಕೆಲಸ ಕೊಡಬಾರದೆಂದು ತಾಕೀತು ಮಾಡಿದ್ದರು, ಸರ್ಕಾರಿ ಕೆಲಸದ ನಿಮಿತ್ತ ಆ ಊರಿಗೆ ಹೊಸದಾಗಿ ಬಂದಿದ್ದ ನನ್ನಮ್ಮ ಅಪ್ಪನನ್ನು ಕರೆಸಿ ಮತ್ತೊಮ್ಮೆ ನಿಮ್ಮ ಮಕ್ಕಳು ಹೊಲೇರ ಹಟ್ಟಿಯಲ್ಲಿ ಹೋಗಿ ಅಮೇಧ್ಯ ತಿನ್ನದಂತೆ ನೋಡಿಕೊಳ್ಳಿ ಇಲ್ಲದಿದ್ದರೆ ನಿಮ್ಮ ಮೇಲೂ ನಮ್ಮೂರಿನ ಪಂಚಾಯಿತಿಯ ರೀತಿ ಕ್ರಮ ತೊಗೋಬೇಕಾಗುತ್ತೆ ಅಂತ ಎಚ್ಚರಿಕೆ  ಕೊಟ್ಟಿದ್ದರು.  ನನ್ನ ಏಡಿ ತಿಂದ ಪ್ರಸಂಗದ ಅರಿವೇ ಇಲ್ಲದ ಅಪ್ಪ, ಪಂಚಾಯಿತಿಯಲ್ಲಿ  ಊರಿನವರ ಮೇಲೆ ಏರಿ ಹೋಗಿ ಅವಮಾನವನ್ನನುಭವಿಸಿ ಮುಜುಗರಕ್ಕೀಡಾಗಿದ್ದರು.  ಇದೇನೂ ಗೊತ್ತಿಲ್ಲದ ನಾನು ಮತ್ತು ಅಕ್ಕ ಎಂದಿನಂತೆ ಶಾಲೆ ಮುಗಿಸಿ ಸಂಜೆ ಮನೆಗೆ ಬಂದೆವು, ಸ್ವಲ್ಪ ಸ್ವಲ್ಪ ಕಥೆ ಗೊತ್ತಾಗಿದ್ದ ಅಜ್ಜಿ, ಬೇಗ ಊಟ ಮಾಡಿ ನೀವಿಬ್ರೂ ಮಲಕ್ಕೊಳ್ರೋ, ನಿಮ್ಮಪ್ಪ ಬರೋವರೆಗೂ ಎದ್ದಿರಬೇಡಿ ಅಂತ ಎಚ್ಚರಿಸಿ, ಬೇಗ ಊಟ ಮಾಡಿ ಮಲಗಿಸಿದ್ದರು.  

 

ಆದರೆ ನನ್ನ ಗ್ರಹಚಾರ ಕೆಟ್ಟಿತ್ತು, ಹೋಟೆಲು  ಮುಚ್ಚಿ ಮನೆಗೆ ಬರುವಾಗಲೇ ದಾರಿಯಲ್ಲಿದ್ದ ಹುಣಿಸೇಮರದಿಂದ ಸರಿಯಾದ ಕೋಲೊಂದನ್ನು ಸಿದ್ಧ ಮಾಡಿಕೊಂಡು ಬಂದಿದ್ದ ಅಪ್ಪ,  ನನ್ನ ಹೊದಿಕೆ ಕಿತ್ತೆಸೆದು ಏಳೋ ಮ್ಯಾಲೆ, ಬೋ...... ಮಗನೆ, ಹೋಗಿ ಕಚಡಾ ತಿನ್ನಕ್ಕೆ ನಿನಗೆ ಅವರ ಮನೇನೆ ಸಿಕ್ಕಿತ್ತಾ, ನಮ್ಮ ಜಾತಿ ಕೆಡಿಸಿ ನನಗೆ ಊರವರ ಮುಂದೆ ಅವಮಾನ ಮಾಡ್ತೀಯಾ ಅಂತ ಕಿರುಚಾಡಿ ಒಂದನೆ ತರಗತಿಯಲ್ಲಿ  ಓದುತ್ತಿದ್ದ ನನ್ನ  ಎಳೆಯದಾ ದ ಹಸಿ ಮೈ ಹಸಿರುಗಟ್ಟುವಂತೆ ಬಾರಿಸಿ ತನ್ನ ಕೋಪವನ್ನೆಲ್ಲ ತೀರಿಸಿಕೊಂಡಿದ್ದರು.  ಅಳುತ್ತಾ 'ಬೇಡಪ್ಪಾ ಅವನನ್ನು ಹೊಡಿಬೇಡ' ಎಂದು ಅಡ್ಡ ಬಂದ ಅಕ್ಕನಿಗೂ ಸಾಕಷ್ಟು ಏಟುಗಳು ಬಿದ್ದಿದ್ದವು.  ಅಂದು ರಾತ್ರಿಯೆಲ್ಲ ಅಳುತ್ತಾ ನೋವಿನಿಂದ ನರಳುತ್ತಿದ್ದ ನನ್ನನ್ನು ನಾಯಿಮರಿಯಂತೆ ತನ್ನ ಎದೆಗವುಚಿಕೊಂಡೆ ಮಲಗಿದ್ದಳು ನನ್ನಕ್ಕ.  ನನಗೂ ಅಕ್ಕನಿಗೂ ಅಂದು ಅಪ್ಪ ವಿಠಲಾಚಾರಿಯ ಸಿನಿಮಾದಲ್ಲಿ ಬರುವ ಭಯಂಕರ ರಾಕ್ಷಸನಂತೆ ಕಂಡಿದ್ದರು.  ಅಪ್ಪನ ರೌದ್ರಾವತಾರ ಕಂಡು ಬೆದರಿದ್ದ ಅಮ್ಮ, ಅಜ್ಜಿಯರು ನಮ್ಮಿಬ್ಬರ ಹತ್ತಿರಕ್ಕೆ ಬರುವ  ಸಾಹಸವನ್ನೇ ಮಾಡಿರಲಿಲ್ಲ.  ಮೂರು ದಿನ ಭಯಂಕರ ಜ್ವರದಿಂದ ನರಳಿದ್ದ ನಾನು ಶಾಲೆಗೇ ಹೋಗಿರಲಿಲ್ಲ, ನನಗೆ ಚಿಕಿತ್ಸೆ ನೀಡಿದ ಅಂಕಣ್ಣ ಡಾಕ್ಟರು ಇನ್ನೊಮ್ಮೆ ಮಕ್ಕಳಿಗೆ ಈ ರೀತಿ ಹೊಡೆಯಬಾರದು ಅಂತ ನಿನ್ನ ಗಂಡನಿಗೆ ಹೇಳಮ್ಮಾ ಅಂತ ಅಮ್ಮನಿಗೆ  ಉಪದೇಶ ಮಾಡಿದ್ದರು.  ಕೋಪ ಬಂದರೆ ಅವರು ಯಾರ ಮಾತನ್ನೂ ಕೇಳುವುದಿಲ್ಲ ಸಾರ್, ರಾಕ್ಷಸನ ಥರ ಆಗಿಬಿಡುತ್ತಾರೆ ಎಂದಿದ್ದರು ಅಸಹಾಯಕರಾದ ಅಮ್ಮ.   

 

ಸಿನಿಮಾಸ್ಕೋಪ್ ಸಿನಿಮಾದಂತೆ ಇಂದು ಬೆಳಿಗ್ಗೆ ಈ ಪ್ರಸಂಗ ನನ್ನ ಮನಸ್ಸಿನಲ್ಲಿ ಹಾದು  ಹೋದಾಗ ಗಾಢನಿದ್ದೆಯಿಂದೆದ್ದು ಕಣ್ಣು ಬಿಟ್ಟೆ, ಬಾಲ್ಕನಿಯ ಕಿಟಕಿ ತೆರೆದು ಹೊರಗೆ ಮುಖವಿಟ್ಟರೆ ಬೀಸುತ್ತಿತ್ತು ಮರಳುಗಾಡಿನ ಸುಡುಗಾಳಿ.  ಬಾಲ್ಕನಿ ಮುಚ್ಚಿ ಬಂದವನು ಬರೆಯಲು ಕುಳಿತೆ.  ನೆನಪಿನಾಳದಿಂದ ಹೊರಬಂದ ಈ ಪ್ರಸಂಗ ಮರೆಯಾದ ನನ್ನ ಅಕ್ಕನನ್ನು ಬಹುವಾಗಿ ನೆನಪಿಸಿ ಕಾಡತೊಡಗಿದೆ ಇಂದು. 

Rating
No votes yet

Comments

Submitted by venkatb83 Fri, 07/26/2013 - 18:17

"ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಾ, ಅವನ ಕೈ ಕಚ್ಚಲು ಯತ್ನಿಸುತ್ತಿದ್ದ ಏಡಿಗಳಲ್ಲಿ ಒಂದೆರಡನ್ನು ನನ್ನ ಮೇಲೆಸೆದು ಹಿಡ್ಕಳಲೇ ಮಂಜಾ ಎಂದು ಕೂಗಿ ನಗುತ್ತಿದ್ದ, ನನ್ನ ಮೇಲೆ ಬಿದ್ದ ಏಡಿಗಳಲ್ಲಿ ಒಂದು ನನ್ನ ಬಲಭಾಗದ ತೋಳನ್ನು ಗಟ್ಟಿಯಾಗಿ ಕಚ್ಚಿ ಹಿಡಿದಾಗ ಅಸಾಧ್ಯ ನೋವಾಗಿ, ಅದನ್ನು ಕಿತ್ತೆಳೆದಾಗ, ಆ ಕೊಂಡಿ ಅಲ್ಲೇ ಉಳಿದು, ಅದರ ಇಡೀ ದೇಹ ನನ್ನ ಎಡಗೈನಲ್ಲಿತ್ತು. "

;()))

ಮಂಜಣ್ಣ - ಬಹು ದಿನಗಳ ನಂತರ ನಿಮ್ಮಿಂದ ಒಂದು ಒಳ್ಳೆ ಆಪ್ತ ನೆನಪಿನ ಬರಹ ..
ನಾ ಚಿಕ್ಕವನಾಗಿದ್ದಾಗ - ನಮ್ ದೊಡ್ಡಮ್ಮನ ಮಗ ನಮ್ಮೂರ ಹಳ್ಳಿಯ ಹಳ್ಳದಲ್ಲಿ (ನೀರ ತೊರೆ) ಮಣ್ಣಿನ ರಂದ್ರಗಳಲ್ಲಿ ಅವಿತು ಕುಳಿತಿರುವ ಏಡಿ ಹಿಡಿಯಲು ಹೋಗುತ್ತಿದ್ದ , ಮಣ್ಣ ಬಿಲದಲ್ಲಿ ಕೈ ತೂರಿಸಿ ದೊಡ್ಡ ದೊಡ್ಡ ಏಡಿ ಹಿಡಿದು ಅವುಗಳ ಅವಯವ ಮುರಿದು ಹಾಕುತ್ತಿದ್ದ (ಇಲ್ಲವಾದರೆ ತಪ್ಪಿಸ್ಕೊಂಡು ಓಡುವವು -ಕೈಗೆ ಬಂದ ತುತ್ತು ಬಾಯಿಗೆ ಬರದು ..!!).. ಆ ಕ್ರಿಯೆಯನ್ನು ನೋಡುತ್ತಿದ್ದ ನಾನು ಅವನ ಆ ಧೈರ್ಯಕ್ಕೆ ಶಭಾಶ್ ಎನ್ನುತ್ತಿದ್ದೆ .. ಪುಟ್ಟ ಏಡಿಗಳನ್ನು ಹಿಡಿಯಲು ಭಯ ಪಡುತ್ತಿದ್ದ ನನ್ನನ್ನು ನೋಡಿ ಅವನು ಗೇಲಿ ಮಾಡಿ ನಗುತ್ತಿದ್ದ ...!

ಅದೊಮ್ಮೆ ಅದೇ ರೀತಿ ಆ ಮಣ್ಣಿನ ಬಿಲದಲ್ಲಿ ಅವನು ಕೈ ತೂರಿಸಿ ಹೊರಗೆಳೆದಾಗ ಬಂದದ್ದು .... ಏಡಿ ಅಲ್ಲ .. ನೀರ್ ಹಾವು ...!! ಅದನ್ನು ಸತ್ತೆನೋ ಎಂದು ಕೈ ಬೀಸಿ ಬಟ್ಟೆ ವಾಶ್ ಮಾಡುತ್ತಿದ್ದ ಮಹಿಳೆಯರ ಮೇಲೆ ಎಸೆದು ಪರಾರಿ ಆಗಿದ್ದೆವು. ;()))

ಏಡಿಗಳನ್ನು ಅದರಲ್ಲೂ ಅದರ ಕೈ ಕಾಲುಗಳನ್ನು ಉಪ್ಪು ಖಾರ ಹಾಕಿ ಬೇಯಿಸಿ ಆ ಕೈ ಕಾಲು ಬಾಯಲ್ಲಿಟ್ಟು ಸೊರ್ರ್ ಅಂತಾ ಹೇರಿದಾಗ ಅಲ್ಲಿ ಬರುತ್ತಿದ್ದ ಸ್ವಾಧ ಯಾವುದರಲ್ಲೂ ಆ ರುಚಿ ಸಿಗಲಿಕ್ಕಿಲ್ಲ ..! ಈಗಲೂ ಬಾಯಿ ನೀರೂರುತ್ತಿದೆ ..!!
ಏಡಿಯ ಅತ್ತಿತ್ತ ಬಹು ಡಿಗ್ರೀ ಯಾನ್ಗಲ್ ವರೆಗೆ ಆಡುವ ಅದರ ಕಣ್ಣುಗಳನ್ನು (ಅಗಲವಾಗಿದ್ದು ವಿಚಿತ್ರ ಅನ್ನಿಸುತ್ತಿತ್ತು)ನೋಡಿ ಅಚ್ಚರಿ ಆಗ್ತಿತ್ತು ..
ಹಾಗೆಯೇ ಸದ್ಧು ಕೇಳಿ ಭಯ ಪಟ್ಟು ಓಡಿ ಹೋಗಿ ಕ್ಷಣಾರ್ಧದಲ್ಲಿ ಮಣ್ಣಲ್ಲಿ ನೀರಲ್ಲಿ ಮರೆ ಆಗುವ ಅವುಗಳ ಶಕ್ತಿ ಬಗ್ಗೆ ... !!
ಆಮೇಲೆ ಮರಳ ದಂಧೆ ಹೆಚ್ಚಿ -ಎಲ್ಲೆಲಿಂದಲೋ ಜನ ಬಂದು ಟ್ರಾಕ್ಟರ್ ಲೋಡ್ಗೆ ಬರೇ ಹತ್ತು ಇಪ್ಪತ್ತು ಕೊಟ್ಟು ಮರಳು ಖಾಲಿ ಮಾಡಿ ಭಾರೀ ಮಳೆಗೆ ಮಣ್ಣೂ ಕೊಚ್ಚಿ ಹೋಗಿ ಹಳ್ಳವೇ ಹದಗೆಟ್ಟು ಏಡಿ ಮೀನು ಎಲ್ಲವೂ ಕಾಣೆಯಾದವು .. :(೯

ನೀವು ನಿಮ್ಮಗಿಂತ ಮುಂಚಿನವರು ನಮಗಿಂತ ಪುಣ್ಯವಂತರು -ಬಹುತೇಕ ಎಲ್ಲ ಗ್ರಾಮೀಣ ಕ್ರೀಡೆಗಳು (ಕಬಡ್ಡಿ -ಮರ ಕೋತಿ ಆಟ - ಲಗೋರಿ -ಇತ್ಯಾದಿ )ಆಡಿ ನೋಡಿ ನಲಿದವರು , ನಾ ಮಾತು ನನ್ನ ವಾರಿಗೆಯವರು ಸಹ ಅಲ್ಪ ಸ್ವಲ್ಪ ಅಧ್ರುಸ್ತವಂತರು - ಆದ್ರೆ ಈಗೀಗ ಇರುವ ಯುವಕ ಯುವತಿಯರಿಗೆ ಈ ಸುಮಧುರ ಅನುಭವ ಸಿಕ್ಕೊಲ್ಲ ..;(೯
ಎಂದಿರೂ ಸಿಸ್ಟಂ - ಕ್ರಿಕೆಟ್ -ಫೇಸ್ಬುಕ್ ಅಸ್ತೆ ..!

ನನಗೆ ನೆನಪಿರುವ ಹಾಗೆ ಬರೀ ಏಡಿಯ ಅವಯವ ಮಾತ್ರ ಸೊರ್ ಎಂದು ಹೀರಿದ ನೆನಪು ಇದೆ , ಏಡಿಯ ದೇಹದ ಭಾಗವನ್ನೆಲ್ಲ ತಿನ್ನುವರೆ?

ನಿಮ್ಮ ಬರಹದ ಮೂಲಕ ನಾನು ಸುಮಾರು ೧೫ ವರ್ಷ ಹೋದೆ ಹೋದೆ ..!

ನಿಮಂ ಇನ್ನಸ್ಟು ಅನುಭವದ ಬರಹಗಳಿಗೆ ಎದುರು ನೋಡುವೆ ..
ಹಾಗೆಯೇ ಸಾಧ್ಯವದಸ್ತು ಸಕ್ರಿಯರಾಗಿರಿ ..

ಶುಭವಾಗಲಿ
\।

ಏಡಿಗಳನ್ನು ಅದರಲ್ಲೂ ಅದರ ಕೈ ಕಾಲುಗಳನ್ನು ಉಪ್ಪು ಖಾರ ಹಾಕಿ ಬೇಯಿಸಿ ಆ ಕೈ ಕಾಲು ಬಾಯಲ್ಲಿಟ್ಟು ಸೊರ್ರ್ ಅಂತಾ ಹೇರಿದಾಗ ಅಲ್ಲಿ ಬರುತ್ತಿದ್ದ ಸ್ವಾಧ ಯಾವುದರಲ್ಲೂ ಆ ರುಚಿ ಸಿಗಲಿಕ್ಕಿಲ್ಲ ..! ಈಗಲೂ ಬಾಯಿ ನೀರೂರುತ್ತಿದೆ ..!!
ಏಡಿ ಚಿತ್ರ-ಪಾಲಚಂದ್ರರು ತೆಗೆದದ್ದು
ನಿಮ್ಮ ನೆನಪಿನಾಳದ ಪ್ರಸಂಗ, ಆ ಕಾಲಕ್ಕೆ ನಮ್ಮನ್ನು ಕೊಂಡೋಯ್ತು ಮಂಜಣ್ಣ.

ನಿದ್ರೆಗಣ್ಣು ಇರಬೇಕು. ಕೊಂಡಿಗಳು ಕೈಕೊಡುತ್ತಿವೆ.:) ಪಾಲಚಂದ್ರರು ಹಾಕಿದ ಸುಂದರ ಏಡಿಯ ಚಿತ್ರಕ್ಕಾಗಿ "ಏಡಿ-ಸಂಪದ" ಎಂದು ಗೂಗ್‌ಲ್ ಸರ್ಚ್ ಮಾಡಿ.

ಧನ್ಯವಾದಗಳು, ಹಾಗೇ ನೆನಪಿಗೆ ಬಂದ ಬಾಲ್ಯದ ದಿನಗಳನ್ನು ಅಕ್ಷರದಲ್ಲಿಳಿಸಿದೆ.

ಸಪ್ತಗಿರಿಗಳೆ, ಸಿಂಗಪೂರದ ಕಡೆ ಏಡಿ (ಕ್ರಾಬ್) ತುಂಬಾ ತುಟ್ಟಿಯಾ ಹಾಗೂ ಹೆಸರಾಂತ ಆಹಾರ. ಇಲ್ಲಿ ಸಿಕ್ಕುವ ಸೈಜುಗಳು ದೊಡ್ಡದಿರುವಂತೆ ಕಾಣುತ್ತಿವೆ. ಬಾರಿ ಕಾಳು ಮಾತ್ರವಲ್ಲದೆ, ದೇಹವನ್ನು ಚಪ್ಪರಿಸುತ್ತಾರೆ - ಅದಕ್ಕೆಂದೆ ಇಕ್ಕಳಗಳನ್ನು ಕೊಡುತ್ತಾರೆ:-) ಅಂದಹಾಗೆ ನಾನು ಕಂಡ ಮತ್ತೊಂದು ಸೋಜಿಗದ ವಿಷಯವೆಂದರೆ - ಅದನ್ನುಬ್ನೋಡುತ್ತಲೆ ಬೆನ್ನು ಮೇಲಾಗಿಸಿ ಗಂಡೊ, ಹೆಣ್ಣೊ ಹೇಳಿಬಿಡುತ್ತಾರೆ ಇಲ್ಲಿನ ಏಡಿ ಪ್ರೇಮಿಗಳು. ಅದರ ಪ್ರಕಾರವೆ ದೇಹ ಬಿಡಿಸಲು ಕ್ರಮವಿದೆಯೆಂದೂ ಕಾಣುತ್ತದೆ. ಕಾಲಿಗಿಂತ ಹೆಚ್ಚು ದೇಹದಲ್ಲೆ ಲಭ್ಯವಾದರೂ ಏಡಿಗಳ ಒಟ್ಟಾರೆ ಗಾತ್ರ ಗಮನಿಸಿದರೆ ಇಳುವರಿ ಶೇಕಡಾ 15-20ಕ್ಕಿಂತ ಹೆಚ್ಚಿರುವಂತೆ ಕಾಣುವುದಿಲ್ಲ!

Submitted by nageshamysore Sat, 07/27/2013 - 08:04

ಮಂಜುರವರೆ, ರಜೆಯಲ್ಲಿ ಹಳ್ಳಿಯ ಭೇಟಿಯ ನೆನಪು ಮಾಡಿಸಿತು ನಿಮ್ಮ ಲೇಖನ. ಗೆಳೆಯನೊಬ್ಬನ ಹೊಲದ ಪಕ್ಕ ಹರಿದು ಹೋಗುತ್ತಿದ್ದ ಕಾಲುವೆಯಲ್ಲಿ ಕಾಲಿಟ್ಟುಕೊಂಡು, ಮಣ್ಣಿನ ಗೋಡೆಯ ಹಾಗೂ ಬಂಡೆಯ ಸಂದಿಯಲ್ಲಿ ಕಾಣುವ ಪುಟ್ಟ ಏಡಿ ನಳ್ಳಿಗಳನ್ನು ನೋಡುತ್ತಿದ್ದ, ಹಿಡಿದಾಡುತ್ತಿದ್ದ ದಿನಗಳು. ಆದರೆ ಅದಕ್ಕಿಂತ ಹೆಚ್ಚಾಗಿ ತಟ್ಟಿದ್ದು ನೀವು ಹಾಸ್ಯದ ಮೂಸೆಯಲ್ಲಿ ಬಿಂಬಿಸಿದ ಸಾಮಾಜಿಕ ಸನ್ನಿವೇಶ, ಪರಿಸ್ಥಿತಿಯ ಚಿತ್ರಣ. ಈಗಲೂ ಅದೆ ಸ್ಥಿತಿ ಇದೆಯೊ ಇಲ್ಲವೊ ಗೊತ್ತಿಲ್ಲ - ಅದರೆ ಆ ಅಂಶ ಮಾತ್ರ ವಾಸ್ತವದ ವ್ಯಂಗ್ಯ. ಅಂತೆಯೆ ಅಂತ್ಯದ ವಿಷಾದ ಅಕ್ಕನ ನೆನಪಿನ ರೂಪದಲ್ಲಿ ಮನ ತಟ್ಟುತ್ತದೆ.