ಸುಬ್ಬನ ಅಜ್ಜಿ ಜೊತೆ someಭಾಷಣೆ !
ಇತ್ತೀಚೆಗೆ ಬಹಳ ಬಿಜಿ ಆಗಿದ್ದರಿಂದ ಸುಬ್ಬನ ಮನೆ ಕಡೆ ಹೋಗಲಾಗಲೇ ಇಲ್ಲ ... ಸುಬ್ಬನ ಅಜ್ಜಿ ಒಮ್ಮೆ ತಮ್ಮೂರಿಗೆ ಹೋಗಿ ಸುಬ್ಬನ ಮನೆಗೆ ವಾಪಸ್ ಕೂಡ ಬಂದಾಯ್ತು ಅಂತ ತಿಳಿದ ಮೇಲೆ ಹೋಗಲಾಗದೇ ಇದ್ದೀತೇ?
ಕುರುಕಲು ಆಸೆ ಹೊತ್ತು, ಅವನ ಮನೆ ಮುರುಕಲು ಗೇಟು ತೆರೆದು, ನನ್ನ ಹಿಂದೆಯೇ ಚಿಲಕ ಜಡಿದು ಒಳ ಹೋದೆ ... ಗೇಟು ತೆರೆದಿಟ್ಟಲ್ಲಿ ಬೀದಿ ನಾಯಿಗಳು ಒಳ ಹೊಕ್ಕು ರಂಗೋಲಿ ಗಲೀಜು ಮಾಡುತ್ತದೆ ಎಂದು ಒಮ್ಮೆ ಅಜ್ಜಿ ಹೇಳಿದ್ದು ನೆನಪಿತ್ತು ...
ಗಾರೆ ನೆಲೆದ ಮೇಲೆ ನಾಲ್ಕು ಹೆಜ್ಜೆ ನೆಡೆದಂತೆ, ವಿಶಾಲವಾದ ರಂಗೋಲಿ ಮತ್ತದರ ಮಧ್ಯೆ ಹಣತೆಯ ದೀಪ ... ಬಿಳಿ ರಂಗವಲ್ಲಿಗೆ, ಕೆಮ್ಮಣ್ ಬಾರ್ಡರ್ ... ತುಳಸೀಕಟ್ಟೆ’ಗೆ ಢಾಳಾಗಿ ಅರಿಶಿನ-ಕುಂಕುಮ ಹಚ್ಚಿಕೊಂಡು ನಗುತ್ತಿದ್ದ ತುಳಸೀಗಿಡ ಬಲಗಡೆ ... ಕಟ್ಟೆಯ ಮುಂದೆ ಪರ್ಮನೆಂಟ್ ಪ್ಲಾಸ್ಟಿಕ್ ರಂಗವಲ್ಲಿ ಹಾಳೆ ... ಅಲ್ಲಲ್ಲೇ ನಾಲ್ಕಾರು ಮಂತ್ರಾಕ್ಷತೆ ಕಾಳು ... ಕಟ್ಟೆಯಲ್ಲಿನ ಮಣ್ಣಿಗೆ ಚುಚ್ಚಿದ್ದ ಗಂಧದಕಡ್ಡಿಯ ಪರಿಮಳಕ್ಕೋ ಅಥವಾ ನವಿರಾಗಿ ಬೀಸುತ್ತಿದ್ದ ತಂಗಾಳಿಗೋ ಗೊತ್ತಿಲ್ಲ ಒಟ್ಟಾರೆ ತುಳಸಿ ಲೈಟಾಗಿ ತಲೆದೂಗುತ್ತಿದ್ದಳು ...
ಅಜ್ಜಿಯ ಆಗಮನ ಸೂಚಿಸುವ ತೆರೆದಿಟ್ಟ ಬಾಗಿಲು .. ಬಾಗಿಲ ಪಟ್ಟಿಗೆ ಗೋಣಿ ದಾರಕ್ಕೆ ಹಸಿರು ಮಾವಿನ ಎಲೆಗಳನ್ನು ಸ್ಟೇಪ್ಲರ್ ಪಿನ್’ಗಳಿಂದ ಪಿನ್ ಮಾಡಲಾಗಿತ್ತು. ಹಣೆಗೆ ತಿಲಕವಿಟ್ಟಂತೆ, ಪಟ್ಟಿಯ ಮಧ್ಯೆ "ಓಂ"ಕಾರವಿತ್ತು ... ಓಂ’ಕಾರದ ಎರಡು ತುದಿಗಳಲ್ಲಿ ಮುದ್ರೆಯಂತೆ ಮಾವಿನ ಪಂಟಗಳು. ಬಾಗಿಲ ಒಂದು ಬದಿಯಲ್ಲಿ ಅಜ್ಜಿ ಇಲ್ಲದಿದ್ದಾಗ್ ಮಾತ್ರ ಉಪಯೋಗಕ್ಕೆ ಬರುವ ಕಾಲಿಂಗ್ ಬೆಲ್, ಇನ್ನೊಂದು ಬದಿಯ ಗೋಡೆಯ ಮೇಲೆ, ಕರೀ ಪೈಂಟ್’ನಲ್ಲಿ ಬರೆದಿತ್ತು "ನಾಳೆ ಬಾ" ಎಂದು ... ಹಲವಾರು ವರ್ಷಗಳ ಹಿಂದೆ ಅಜ್ಜಿ ಬರೆಸಿದ್ದ ಎರಡು ಪದಗಳನ್ನು ಅಳಿಸಿಹಾಕಲು ಇನ್ನೂ ಯಾರಿಗೂ ಧೈರ್ಯ ಬಂದಿಲ್ಲ ... ಸೋಜಿಗ ಅಂದರೆ ಬಾಗಿಲಿಗೆ ಬಂದು ಅದನ್ನು ಓದಿ ನಮ್ ಸುಬ್ಬ ಒಂದೆರಡು ಬಾರಿ ಗೇಟಿನವರೆಗೂ ವಾಪಸ್ಸು ಹೋಗಿ ಮತ್ತೆ ಒಳಗೆ ಬಂದಿದ್ದ, ಅದು ತನಗಲ್ಲ ಎಂದು ಅರಿವಾಗಿ !!!
ಇಷ್ಟೆಲ್ಲ ಅಪರೂಪದ ದೃಶ್ಯಾವಳಿ ಕಂಡು, ನಾಚಿದ ಮುಖದ ಕೆಂಪಾದ ಕೆನ್ನೆಯಂತಿದ್ದ ರೆಡ್ ಆಕ್ಸೈಡ್’ನ ಕೆಂಪು ಮೆಟ್ಟಿಲ ಮೇಲೆ ಚಪ್ಪಲಿ ಬಿಡಲು ಮನಸ್ಸಾಗದೆ, ರಂಗವಲ್ಲಿ ದಾಟಿ ಹೋಗಿ, ಗೇಟಿನ ಸಮೀಪ ಚಪ್ಪಲಿ ಬಿಟ್ಟೆ. ಇನ್ನೂ ಅಲ್ಲೇ ಇದ್ರೆ ವಾಪಸ್ ಹೋಗುವಾಗ ಹಾಕಿಕೊಂಡು ಹೋದರಾಯಿತು ! ಚಪ್ಪಲಿ ಕಳೆದರೆ ಶನಿಕಾಟ ತಪ್ಪಿತು ಅಂತ ನಮ್ಮಜ್ಜಿ ಅನ್ನುತ್ತಿದ್ದರು ... ಆ ವಿಷಯ ನನಗೆ ಇನ್ನೂ ಅರ್ಥವಾಗಿಲ್ಲ ... ಹೋಗ್ಲಿ ಬಿಡಿ, ಮತ್ತೆ ನೆಡೆದು, ಬಾಗಿಲೊಳು ಕಾಲಿಟ್ಟಾಗ ಕಿವಿಗೆ ರಪ್ಪನೆ ಬಿದ್ದಿದ್ದು "ಕಲಿಗಾಲ, ಕಲಿಗಾಲ" ಅಂಬೋ ಮಾತು ....
ನಾ ಕಾಲಿಟ್ಟಾಗ ಹೇಳಿದ್ದರಿಂದ ಅವರು ನನಗೆ ’ಕಲಿ’ ಅಂತಿದ್ದಾರೇನೋ ಅಂದುಕೊಂಡೆ ... ಇರಲಾರದು ... ನನ್ನಿಂದ ಯಾರಿಗೂ ಕೆಡಕಾಗಿಲ್ಲ (ಅಂತ ಅಂದುಕೊಂಡಿದ್ದೀನಿ) .. ನನಗೂ ಕೂಡ ... ನನಗಾಗಿರೋದೆಲ್ಲ ಬೇರೆಯವರಿಂದಾನೇ ... ಅರ್ಥಾತ್ ಈ ಸುಬ್ಬ, ಆ ಬಾಸು ಹೀಗೆ ... ಅಜ್ಜಿಯ ಗಲಾಟೆ ಮುಂದುವರೆದಿತ್ತು ...
"ಹಸೀ ಬಾಣಂತಿ ಅನ್ನೋ ಪರಿಜ್ಞ್ನಾನ ಬೇಡಾ?" ಅನ್ನೋದೇ? ಯಾರಿಗೆ ಅನ್ನುತ್ತಿದ್ದರೆ ಅನ್ನೋದು ಅರ್ಥವಾಗಲಿಲ್ಲ ... ನನಗಂತೂ ಅಲ್ಲ ಅನ್ನೋದು ಗ್ಯಾರಂಟಿ ಆಯ್ತು ... ಒಳಗೆ ಹೋದೆ ... "ಮಗು ಆದ ಎರಡು ದಿನಕ್ಕೇ ತುಂಡು ಲಂಗದಲ್ಲಿ ಬೀದಿಗೆ ಬರೋದೇ? ಜೊತೆಗೆ ಮಗೂನ್ನ ಬೀದಿಗೆ ಕಕೊಂಡ್ ಬರೋದೇ? ಹೇಳೋವ್ರು ಕೇಳೋವ್ರು ಯಾರೂ ಇಲ್ಲ ಇವಕ್ಕೆ ... ಹುಡುಗು ಪಾಳ್ಯ ... ಇವಕ್ಕಂತೂ ಅರ್ಥವಾಗೋಲ್ಲ, ಹಿರಿಯರು ಅಂತ ಇದ್ದಾರಲ್ಲ, ಆ ಯಮ್ಮ ಹೇಳಬಹುದಿತ್ತಲ್ಲವೇ?"
ತಡೆಯಲಾರದೆ ಒಳಗೆ ಅಡಿಯಿಟ್ಟು "ಅಜ್ಜೀ, ಆರೋಗ್ಯಾನಾ?" ಅಂದೆ .. "ಬಂದ್ಯೇನೋ ಹು.ಮು.ದೇ ... ಎಲ್ಲಿ ಹೋಗಿದ್ದೀ ಇಷ್ಟು ದಿನಾ" ...
"ತುಂಬಾ ಬಿಜಿ ಇದ್ದೆ ಅಜ್ಜಿ ಅದಕ್ಕೇ ಬರೋಕ್ಕೆ ಆಗಲಿಲ್ಲ"
ಅಜ್ಜಿ ನುಡಿದರು "ಎಲ್ಲ ವಿದ್ಯಾವಂತರೇ ... ನಿಮಗೆ ಬರೋದೇ ಎರಡು ಪದ .. ಒಂದು ಬಿಜಿ ಇನ್ನೊಂದು ಸಾರಿ .. ಏನು ಕಡೆದು ಕಟ್ಟೆ ಹಾಕ್ತೀರೋ ಬಿಜಿ ಬಿಜಿ ಅಂತ .. ಬೆಳಗ್ಗಿಂದ ಸಂಜೆವರೆಗೂ ದುಡೀತೀರ, ಬಟ್ಟೆ ನೆರಿಗೆ ಹೋಗಲ್ಲ, ಕ್ರಾಪು ಸೊಟ್ಟಗಾಗಲ್ಲ ... ಥಂಡಿ ಗಾಳಿ ಕೋಣೆಯಲ್ಲಿ ಕೂತು ಹರಟೆ ... ಎರಡು ಕೂಸು ಹಡೆದೇ ಸುಸ್ತು ನಿಮ್ ಸುಪುನಾತಿ ಹೆಂಡ್ರಿಗೆ ... ಅವುಗಳ ಜೊತೆ ಆಟ ಆಡೋಕ್ಕು ನಿಮಗೆ ಪುರುಸೊತ್ತಿಲ್ಲ ... ಅದೇನು ಬಿಜೀನೋ ಏನು ಕಥೆಯೋ? ನಮ್ ಕಾಲ್ದಲ್ಲಿ ಎಂಟೂ - ಹತ್ತು ಮಕ್ಕಳನ್ನ ಹೆತ್ತು, ದಿನವಿಡೀ ದುಡಿದರೂ ಬಿಜಿ ಅಂತ ಹೇಳ್ತಿರ್ಲಿಲ್ಲ ..." ...
ಅಯ್ಯಯ್ಯಪ್ಪ ... ಅಜ್ಜಿ ಕುರುಕಲು ತಿಂಡಿ ಮಾಡಿದ ಹಾಗಿಲ್ಲ .. ಬರೀ ಖಾರದ ಪುಡಿಗಳನ್ನೇ ಮಾಡಿರಬೇಕು ಅನ್ನಿಸುತ್ತೆ !
"ಹೋಗ್ಲಿ ಬಿಡಿ ಅಜ್ಜಿ, ನಾವು ಎಷ್ಟೇ ಮಾಡಿದರೂ ನಿಮ್ಮಷ್ಟು ಗಟ್ಟಿ ಇರೋಲ್ಲ ... ಅದ್ಸರೀ, ಯಾರನ್ನೋ ಬೈತಾ ಇದ್ರಿ? ಎದುರು ಮನೆ ರಮಾ ಆಂಟಿ ಸೊಸೆಯನ್ನೇ?"
"ಅಲ್ವೋ ಹು.ಮು.ದೇ ... ಅದೇನೋ ಅದು ಆಂಟಿ ಕುಂಟಿ ಅನ್ಕೊಂಡು ... ದೊಡ್ಡಮ್ಮ ಚಿಕ್ಕಮ್ಮ’ಗಳು ಹೋಗಿ ಆಂಟಿ’ಗಳು ಬಂದು ಸಂಬಂಧಗಳೇ ಕಿತ್ತು ಹೋಗಿದೆ ಅನ್ನಿಸುತ್ತೆ ... ಎಣ್ಣೆ ಹಾಕೋ ತವ ಹೋಗಿ ಅದೆಂಥದೋ ನಾನ್-ಸ್ಟಿಕ್ ಬಂದ ಹಾಗೆ"
ಯಾಕೋ ಸರಿಯಾದ ಟೈಮ್’ನಲ್ಲಿ ಬರಲಿಲ್ಲ ನಾನು ... ಬೇಜಾನ್ ಉಗೀತಿದ್ದಾರೆ ಅಜ್ಜಿ ...
"ಅದು ಸರಿ, ರಮಾಳ ಸೊಸೆ ಬಾಣಂತಿ ಅಂತ ನಿನಗ್ಯಾರೋ ಹೇಳಿದ್ರು ?" .... ನಾನು ಏನು ಹೇಳಲಿ? ರಮಾ ಆಂಟಿ ಮಗನಿಗೆ ತನ್ನ ಹೆಂಡತಿ ಬಸುರಿ ಅಂತ ಗೊತ್ತಾಗಿದ್ದೇ ಆಕೆಯ ಫೇಸ್ಬುಕ್ ಸ್ಟೇಟಸ್’ನಿಂದ ... ಅಷ್ಟು ಬಿಜಿ ನಮ್ ಟೆಕ್ಕಿ ಜನ ... ಕೂತು ಮಾತನಾಡುವಷ್ಟು ಪುರುಸೊತ್ತೆಲ್ಲಿದೆ? !!!
"ನಾನು ಆಡ್ತಿರೋದು ಆ ಗೇಟು ಬಿಳಿಯಮ್ಮನ ಬಗ್ಗೆ ... ಟಿ.ಬಿ.ಯಲ್ಲಿ ತೋರಿಸ್ತಿದ್ರಲ್ಲಾ .. ನೋಡಿದ್ಯೋ ಇಲ್ಲಾ ಅದಕ್ಕೂ ಬಿಜೀನೋ?"
ಟಿ.ಬಿ ಅಲ್ಲ ಅಜ್ಜಿ ... ಟಿ.ವಿ ... ಓಹೊಹೋ! ಇವರು ಹೇಳ್ತಿರೋದು ಕೇಟ್ ಮತ್ತು ವಿಲಿಯಂ ಬಗ್ಗೆ ... ಪಬ್ಲಿಕ್ ಎದುರಿಗೆ ಮಗುವನ್ನ ತೋರಿಸಿದಾಗ ಬಂದ ದಿರುಸಿನ ಬಗ್ಗೆ. ಕೇಟ್’ಗೆ ಬುದ್ದಿ ಹೇಳಲಿಲ್ಲ ಅಂತ ಪಾಪ ಮಹಾರಾಣಿಗೆ ಸಹಸ್ರನಾಮ ... "ಅಜ್ಜೀ, ಅದು ಆ ದೇಶದ ಸಂಸ್ಕೃತಿ ... ಅದೂ ಅಲ್ಲದೇ ಅವರುಗಳು ರಾಜಮನೆತನದವರು ... ಮಗುವನ್ನು ನೋಡಲು ಜನತೆ ಕಾದಿರ್ತಾರೆ ... ಮೂರು ತಿಂಗಳ ಮೇಲೆ ಮಗುವನ್ನು ತೋರಿದರೆ ಅಷ್ಟು ಹೊತ್ತಿಗೆ ಜನರಲ್ಲಿ ಆಸಕ್ತೀನೇ ಹೊರಟು ಹೋಗಿರುತ್ತೆ ... ಜನರನ್ನು ಪ್ರತಿಬಿಂಬಿಸೋ ಸ್ಥಾನದಲ್ಲಿದ್ದಾಗ ಅವರಿಗೆ ಇಷ್ಟವಿದೆಯೋ ಇಲ್ಲವೋ ಜನತೆಗೆ ಬೇಕೆಂದಂತೆ ಆಡಲೇಬೇಕಾಗುತ್ತೆ" ...
"ನೀನೋ ಸರಿಯಾಗಿದ್ದೀಯಾ ... ಪರಂಗಿಯವರು ದೇಶ ಬಿಟ್ಟು ಹೋದರೂ ಅವರ ವಕಾಲತ್ತು ವಹಿಸಿಕೊಂಡೇ ಮಾತಾಡ್ತೀಯಾ"
"ಹಾಗಲ್ಲಾ ಅಜ್ಜೀ ... ಇದರಲ್ಲಿ ಪರಂಗಿ, ಸೀಬೇಕಾಯಿ ಅಂತೆಲ್ಲ ಏನೂ ಇಲ್ಲ ... ಜನತೆಯನ್ನೋ, ದೇಶವನ್ನೋ, ಸ್ಥಾನವನ್ನೋ ಪ್ರತಿನಿಧಿಸಬೇಕಾದರೆ ಅವರ ತನ ಬಿಟ್ಟುಕೊಡಬೇಕಾಗುತ್ತೆ ... ಉದಾಹರಣೆಗೆ ರಾಜಕುಮಾರಿ ಕೇಟ್ ಸಾರು-ಅನ್ನ ಕಲಿಸಿಕೊಂಡು, ಸೋಫದ ಮೇಲೆ ಚಕ್ಕಂ ಬಕ್ಕಳ ಹಾಕಿಕೊಂಡು, ಟಿ.ವಿ ನೋಡ್ಕೊಂಡ್, ತನ್ನ ಕೈಯಾರೆ ಊಟ ಮಾಡಬೇಕೂ ಅಂತ ಅಂದುಕೊಂಡರೆ ಅದನ್ನ ಮಾಡಲು ಸಾಧ್ಯವೇ? ನಾವು ಯಾರನ್ನಾದರೂ ಪ್ರತಿನಿಧಿಸಬೇಕಾದರೆ, ನಮಗೆ ಇಷ್ಟ ಇದೆಯೋ ಇಲ್ವೋ ಅವರ ಇಚ್ಚೆಗೆ ತಕ್ಕಂತೆ ಆಡಬೇಕಾಗುತ್ತೆ" ...
"ಸರಿ, ಸರಿ ... ಹೊರಗೆ ನಮ್ ಕಣ್ಣ ಮುಂದೆ ನೆಡೆದುಕೊಳ್ಳೋ ರೀತಿಯಲ್ಲೇ ಜನ ತಮ್ಮ ಮನೆಯ ನಾಲ್ಕು ಗೋಡೆ ಮಧ್ಯೆನೂ ಇರ್ತಾರೆ ಅಂತ ನಿನಗೇನು ಗೊತ್ತೇನೋ ಹು.ಮು.ದೇ? ನಾನು ಮಾಡಿರೋ ಹೊಸ ಸಾರಿನಪುಡಿ ಸಾರಿನ ವಾಸನೆ ಬಂದಿದೆ ನಿನಗೆ, ಅದನ್ನ ರಾಜಕುಮಾರಿ ಹೆಸರಲ್ಲಿ ನನ್ ಮುಂದೆ ಕಥೆ ಕಟ್ಟಿದ್ದೀಯಾ ಅಷ್ಟೇ, ಕ.ಮು.ದೇ "
ಅರ್ರರ್ರೇ! ಕುರುಕಲು ಬದಲು ಖಾರದ ಪುಡಿಗಳನ್ನೇ ಮಾಡಿರೋದು ಅಂತ ಎಷ್ಟು ಚೆನ್ನಾಗಿ ಊಹೆ ಮಾಡಿದೆ ನಾನು !!! ಊಟ ಸಾರು-ಅನ್ನ ಅಂದ ಕೂಡಲೇ ನೆನಪಾಯ್ತು ...
"ಅಜ್ಜೀ, ಸುಬ್ಬ ಎಲ್ಲಿ?"
"ಅದು ಮಲಗಿದೆ ... " ಆಹ್! ಸುಬ್ಬನೇನು ದನವೇ, ಅದು ಅನ್ನಲಿಕ್ಕೆ?
"ಏನಾಯ್ತು ?" "ಮೊನ್ನೆ ಮೂಲೆ ಮನೆ ಶಾಮಾಚಾರ್ ಅವರ ವರ್ಷಾಬ್ದಿಕಕ್ಕೆ ಹೋಗಿದ್ದ ... ಅವನು ಎಷ್ಟು ವಡೆ ತಿಂದನೋ, ಅದರ ಎರಡರಷ್ಟು ಬಚ್ಚಲಿಗೆ ಹೋಗಿ ಬಂದಿದ್ದಾನೆ .. ನೀನೇ ಲೆಕ್ಕ ಹಾಕಿಕೋ"
ಆ! ಈಗ ಅವನು ಎಷ್ಟು ವಡೆ ತಿಂದ ಅಂತ ಲೆಕ್ಕ ಹಾಕಲೋ ಅಥವಾ ಎಷ್ಟು ಬಚ್ಚಲಿಗೆ ಹೋಗಿದ್ದ ಅಂತ ಲೆಕ್ಕ ಹಾಕಲೋ?
"ಹೊರಗೆ ಊಟಕ್ಕೆ ಹೋದ ಮೇಲೆ ಸ್ವಲ್ಪ ಕೈ ಹಿಡಿತ ಮಾಡಬೇಕಾಗುತ್ತೆ ಅಲ್ವೇ ಅಜ್ಜಿ? " ಸಾರು-ಅನ್ನ ತಿನ್ನೋಕ್ಕೆ ಮುಂಚೆ ಅಜ್ಜಿ ಕಣ್ ಮುಂದೆ ಒಳ್ಳೆಯವನಾಗಬೇಕಲ್ವೇ?
"ಬ್ರಾಹ್ಮಣ ಅಂತ ಊಟಕ್ಕೆ ಯಾಕೆ ಕರೀತಾರೆ ಅಂದರೆ ಹೋದ ಆತ್ಮ ಬ್ರಾಹ್ಮಣ ರೂಪದಲ್ಲಿ ಬಂದು ಊಟ ಮಾಡ್ತಾರೆ ಅನ್ನೋ ನಂಬಿಕೆಯಿಂದ. ಹಾಗೆ ಕರೆದ ಮೇಲೆ, ಎಲೆ ಮುಂದೆ ಕೂತು ಕೋಳಿ ತರಹ ಎಲೆ ಕೆರೆದು ಎದ್ದು ಬಿಟ್ರೆ, ಹೋದವರ ಆತ್ಮಕ್ಕೆ ಶಾಂತಿ ಸಿಗಲಿಲ್ಲ ಅಂತ ಊಟಕ್ಕೆ ಕರೆದವರು ಅಂದುಕೊಳ್ಳೋಲ್ವೇ? ಅದಕ್ಕೇ ಬಿಡು ನಿನ್ ಯಾರೂ ಊಟಕ್ಕೆ ಕರೆಯೋಲ್ಲ. ಅದೂ ಅಲ್ದೇ, ನಾವು ಯಾರನ್ನಾದರೂ ಪ್ರತಿನಿಧಿಸಬೇಕಾದರೆ, ನಮಗೆ ಇಷ್ಟ ಇದೆಯೋ ಇಲ್ವೋ ಅವರ ಇಚ್ಚೆಗೆ ತಕ್ಕಂತೆ ಆಡಬೇಕಾಗುತ್ತೆ .... ಹೌದೋ ಅಲ್ವೋ?" ಅಂತ ಅಡುಗೆ ಮನೆಯೊಳಗೆ ಬೀಗುತ್ತ ನೆಡೆದರು ಅಜ್ಜಿ !
ಥತ್ತೇರೀಕೆ!! ಬೇಕಿತ್ತಾ ನನಗೆ?
Comments
ಉ: ಸುಬ್ಬನ ಅಜ್ಜಿ ಜೊತೆ someಭಾಷಣೆ !
In reply to ಉ: ಸುಬ್ಬನ ಅಜ್ಜಿ ಜೊತೆ someಭಾಷಣೆ ! by kavinagaraj
ಉ: ಸುಬ್ಬನ ಅಜ್ಜಿ ಜೊತೆ someಭಾಷಣೆ !
ಉ: ಸುಬ್ಬನ ಅಜ್ಜಿ ಜೊತೆ someಭಾಷಣೆ !
In reply to ಉ: ಸುಬ್ಬನ ಅಜ್ಜಿ ಜೊತೆ someಭಾಷಣೆ ! by RAMAMOHANA
ಉ: ಸುಬ್ಬನ ಅಜ್ಜಿ ಜೊತೆ someಭಾಷಣೆ !
ಉ: ಸುಬ್ಬನ ಅಜ್ಜಿ ಜೊತೆ someಭಾಷಣೆ !
In reply to ಉ: ಸುಬ್ಬನ ಅಜ್ಜಿ ಜೊತೆ someಭಾಷಣೆ ! by gopinatha
ಉ: ಸುಬ್ಬನ ಅಜ್ಜಿ ಜೊತೆ someಭಾಷಣೆ !
ಉ: ಸುಬ್ಬನ ಅಜ್ಜಿ ಜೊತೆ someಭಾಷಣೆ !
In reply to ಉ: ಸುಬ್ಬನ ಅಜ್ಜಿ ಜೊತೆ someಭಾಷಣೆ ! by makara
ಉ: ಸುಬ್ಬನ ಅಜ್ಜಿ ಜೊತೆ someಭಾಷಣೆ !