೭೬. ಶ್ರೀ ಲಲಿತಾ ಸಹಸ್ರನಾಮ ೨೭೫ರಿಂದ ೨೭೬ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೭೫ - ೨೭೬
Bhānu-maṇḍala-madhyastā भानु-मण्डल-मध्यस्ता (275)
೨೭೫. ಭಾನು-ಮಂಡಲ-ಮಧ್ಯಸ್ಥಾ
ದೇವಿಯು ಸೂರ್ಯಮಂಡಲದ ಮಧ್ಯದಲ್ಲಿದ್ದಾಳೆ. ಛಾಂದೋಗ್ಯ ಉಪನಿಷತ್ತು (೧.೬.೬) ಹೀಗೆ ಹೇಳುತ್ತದೆ, "ಸೂರ್ಯನ ಪಥದ ಅಥವಾ ಕಕ್ಷೆಯ ಮಧ್ಯದಲ್ಲಿ ಒಂದು ದೈವವಿದೆ; ಅದು ಯೋಗಿಗಳಿಂದ ನೋಡಲ್ಪಡುತ್ತದೆ. ಮತ್ತವನ ಶರೀರವು ಬಂಗಾರದಂತೆ ಹೊಳೆಯುತ್ತದೆ. ಸೂರ್ಯ ಮಂಡಲದ ಮಧ್ಯದಲ್ಲಿರುವ, ಯಾರು ಎಲ್ಲಾ ವೇದಗಳ ಮೂರ್ತ ರೂಪವೋ ಮತ್ತು ತನ್ನ ಪ್ರಭೆಯನ್ನು ವಿವಿಧ ಪ್ರಪಂಚಗಳ ಎಲ್ಲೆಡೆ ಬೀರುತ್ತಾನೆಯೋ ಅಂತಹ ರೂಪಕ್ಕೆ ಪ್ರಣಾಮಗಳು". (ಇಲ್ಲಿ ವಿವಿಧ ಪ್ರಪಂಚಗಳೆಂದರೆ ಪೂರ್ಣ ಗಾಯತ್ರೀ ಮಂತ್ರಲ್ಲಿರುವ ಏಳು ವ್ಯಾಹೃತಿಗಳು. ಪ್ರಪಂಚಗಳೆಂದರೆ ಮೇಲಿನ ಏಳು ಲೋಕಗಳನ್ನು ಹಾಗೂ ಕೆಳಗಿನ ಏಳು ಲೋಕಗಳನ್ನು ಒಟ್ಟಾರೆಯಾಗಿ ೧೪ ಲೋಕಗಳನ್ನು ಕುರಿತು ಹೇಳುತ್ತದೆ. ಈ ಕಲ್ಪನೆಯ ಲೋಕಗಳು ಒಬ್ಬನ ಪ್ರಜ್ಞೆಯ ವಿವಿಧ ಸ್ತರಗಳು ಅಥವಾ ರೂಪಾಂತರಗಳು. ಅಥವಾ ಮೂರು ಲೋಕಗಳಾದ ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ ಇವುಗಳನ್ನೂ ಪ್ರತಿನಿಧಿಸಬಹುದು).
ಅನಾಹತ ಚಕ್ರವನ್ನೂ ಸಹ ಭಾನು ಮಂಡಲ ಎಂದು ಕರೆಯಲಾಗಿದೆ ಮತ್ತು ಕುಂಡಲಿನೀ ಸಹ ಬಂಗಾರದಂತೆ ಹೊಳೆಯುತ್ತದೆ. ಬಹುಶಃ ಈ ನಾಮವು ಅವಳ ಕುಂಡಲಿನೀ ರೂಪದ ಕುರಿತಾಗಿ ಇರಬಹುದೆನಿಸುತ್ತದೆ.
Bhairavī भैरवी (276)
೨೭೬. ಭೈರವೀ
ಭೈರವನ (ಶಿವನ) ಹೆಂಡತಿಯು ಭೈರವೀ ಆಗಿದ್ದಾಳೆ. ಅವರಿಬ್ಬರೂ ಬೇರ್ಪಡಸಲಾಗದವರು.
ಶಿವನ ಭೈರವ ರೂಪವನ್ನು ಕುರಿತು ತಿಳಿದುಕೊಳ್ಳುವುದು ಆಸಕ್ತಿದಾಯಕವಾಗಿದೆ. ‘ಭ’ ಎಂದರೆ ಪ್ರಪಂಚದ ಪರಿಪಾಲನೆ ಅಥವಾ ಅದನ್ನು ಸ್ಥಿತಿಯಲ್ಲಿಡುವುದು, ‘ರ’ ಎಂದರೆ ಮಹಾಪ್ರಳಯ ಮತ್ತು ‘ವ’ ಎಂದರೆ ಪುನಃಸೃಷ್ಟಿ. ಶಿವನ ಈ ರೂಪವು ಅವನ ಸೂಕ್ಷ್ಮರೂಪಗಳಲ್ಲೊಂದಾಗಿದ್ದು ಇದು ಶಕ್ತಿಯ ಸಾರಕ್ಕೆ (ಆದರೆ ಸ್ವಯಂ ಶಕ್ತಿ ದೇವಿಗಲ್ಲ) ನಿಲುಕಲಾರದ್ದಾಗಿದ್ದು ಇದು ಪರಬ್ರಹ್ಮದ ಅವತಾರವಾಗಿದೆ. ಈ ಹಂತವು ಪ್ರಜ್ಞೆಯ ಎಲ್ಲಾ ಹಂತಗಳನ್ನು ಮೀರಿದ್ದಾಗಿದೆ; ಅಲ್ಲಿ ಯಾವುದೇ ತತ್ವಗಳಾಗಲಿ, ಮಂತ್ರಗಳಾಗಲಿ, ಅಥವಾ ಓಂಕಾರವಾಗಲಿ ಇರುವುದಿಲ್ಲ; ವಾಸ್ತವವಾಗಿ ಭೈರವನು ಎಲ್ಲದಕ್ಕೂ ಅತೀತನಾಗಿದ್ದಾನೆ.
ವಿಜ್ಞಾನಭೈರವವೆನ್ನುವ ಯೋಗಾಭ್ಯಾಸದ ಸರಣಿಯನ್ನು ಕುರಿತಾದ ಪುರಾತನ ಕಾಶ್ಮೀರ ದೇಶದ ಗ್ರಂಥವಿದೆ ಅದರಲ್ಲಿನ ೨೪ನೇ ಶ್ಲೋಕವು ಹೀಗೆ ಹೇಳುತ್ತದೆ. "ನಮ್ಮ ಉಸಿರಾಟದಲ್ಲಿ ಎರಡು ಘಟ್ಟಗಳಿವೆ. ಒಂದು ಹೊರಗಿನ ಸ್ಥಳವಾಗಿದ್ದು ಅಲ್ಲಿ ನಿಃಶ್ವಾಸವು ಕೊನೆಗೊಳ್ಳುತ್ತದೆ ಮತ್ತೊಂದು ಘಟ್ಟವು ನಮ್ಮ ಶ್ವಾಸಕ್ರಿಯೆಯ ಅಂತರ್ಗತ ಭಾಗದಲ್ಲಿದ್ದು ಅಲ್ಲಿ ಉಚ್ವಾಸವು ಕೊನೆಗೊಳ್ಳುತ್ತದೆ. ಈ ಎರಡೂ ತುದಿಗಳಲ್ಲಿ ಉಸಿರು ಒಂದು ಕ್ಷಣ ವಿರಮಿಸುತ್ತದೆ. ಇಲ್ಲಿ ವಿರಮಿಸುತ್ತದೆ ಎಂದರೆ ಅದು ಒಂದು ಅರೆಕ್ಷಣ ನಿಲ್ಲುವುದಲ್ಲ ಆದರೆ ಅದು ಜೀವಂತ ಶಕ್ತಿಯನ್ನು ತಡೆಹಿಡಿಯಲ್ಪಟ್ಟ ಸ್ಥಿತಿಯಂತಿರುತ್ತದೆ. ಒಬ್ಬರು ಈ ಶಕ್ತಿಯಮೇಲೆ ಗಮನವನ್ನು ಕೇಂದ್ರೀಕರಿಸಿದರೆ ಅದು ಬ್ರಹ್ಮಸಾಕ್ಷಾತ್ಕಾರಕ್ಕೆ ಸಹಾಯಕವಾಗುತ್ತದೆ. ಈ ಶಕ್ತಿಯನ್ನೇ ಭೈರವೀ ಎಂದು ಕರೆಯಲಾಗಿದೆ. ಈ ವಿಧವಾದ ಅಧಿಕಾರಯುತವಾದ ವಿಶ್ಲೇಷಣೆಯು ಪರಬ್ರಹ್ಮದ ಪ್ರಕಾಶ ಮತ್ತು ವಿಮರ್ಶ ಅಂಶಗಳನ್ನು ದೃಢಪಡಿಸುತ್ತದೆ. ಶಕ್ತಿಯು ಮೇಲಿನಿಂದ ಕೆಳಕ್ಕೆ ಪ್ರಾಣವಾಗಿ ಚಲಿಸುವುದರಿಂದ ಇದು ವಿಮರ್ಶ ರೂಪವಾಗಿದೆ. ಪ್ರಕಾಶವು ಜಡವಾಗಿದ್ದು ಸ್ವಯಂಪ್ರಕಾಶವಾದ ಅಂತರಾತ್ಮವಾಗಿದೆ. ಈ ಕಾರಣಕ್ಕಾಗಿಯೇ ಯೋಗವು ಉಸಿರಾಟದ ಮೇಲೆ ಗಮನವನ್ನು ಕೇಂದ್ರೀಕರಿಸುವುದನ್ನು ಕಲಿಸಿಕೊಡುತ್ತದೆ.
ನಾವು ಗುಡಿಗಳಲ್ಲಿ ಕಾಣುವ ಭೈರವ ರೂಪವು ಇಲ್ಲಿ ಚರ್ಚಿಸುತ್ತಿರುವ ಭೈರವವಲ್ಲ. ಅಲ್ಲಿ ಕಾಣುವ ಭೈರವರು ಗುಡಿಗಳನ್ನು ಮತ್ತು ಸಮುದಾಯಗಳನ್ನು ಕಾಪಾಡುವ ರಕ್ಷಕರಾಗಿದ್ದಾರೆ.
ಸಾಮನ್ಯವಾಗಿ ನಾವು ಅರ್ಥಮಾಡಿಕೊಳ್ಳ ಬೇಕಾದುದೇನೆಂದರೆ ಶಿವ ಮತ್ತು ಶಕ್ತಿಯರ ಐಕ್ಯರೂಪವನ್ನು ವಾಕ್ ಎಂದು ಕರೆಯಲಾಗಿದೆ. ಶಿವ ಎನ್ನವುದು ಶಬ್ದದ ಅರ್ಥವಾದರೆ ಶಕ್ತಿಯು ಆ ಶಬ್ದದ ಮೂಲವಾಗಿದೆ. ಶಿವ ಮತ್ತು ಶಕ್ತಿಯರನ್ನು ಬೇರ್ಪಡಿಸಲಾಗದೆಂದು ಹೇಳಲಾಗಿದೆ. ಅವರು ಶಬ್ದ ಮತ್ತು ಅದರರ್ಥಂತೆ ಒಟ್ಟಿಗಿದ್ದಾರೆ. ಒಬ್ಬರು ಅರ್ಥವನ್ನು ಅದರ ಶಬ್ದದಿಂದ ಬೇರ್ಪಡಿಸಲಾರರು. ಇದೇ ಉದಾಹರಣೆಯು ಭೈರವ ಮತ್ತು ಭೈರವಿಯರಿಗೆ ಅನ್ವಯವಾಗುತ್ತದೆ.
ಹನ್ನೆರಡು ವರ್ಷದ ಬಾಲಕಿಯನ್ನು ಸಹ ಭೈರವೀ ಎಂದು ಕರೆಯಲಾಗುತ್ತದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 275-276 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೭೬. ಶ್ರೀ ಲಲಿತಾ ಸಹಸ್ರನಾಮ ೨೭೫ರಿಂದ ೨೭೬ನೇ ನಾಮಗಳ ವಿವರಣೆ
ಶ್ರೀಧರರೆ, ಲಲಿತಾ ಸಹಸ್ರನಾಮ ೨೭೫ - ೨೭೬ ರ ಕಾವ್ಯ ಸಾರ ತಮ್ಮ ಅವಗಾಹನೆ, ಪರಿಶೀಲನೆಗೆ. ಒಂದೆರಡು ಕಡೆ ಸ್ವಲ್ಪ ಹೆಚ್ಚೆ ತಿಣುಕಾಡಿಸಿತಾಗಿ, ನಿಮಗೆ ತುಸು ಹೆಚ್ಚೆ ಕೆಲಸ ಕೊಡುವುದೆಂದು ಕಾಣುತ್ತದೆ, ನೋಡೋಣ :-)
ಲಲಿತಾ ಸಹಸ್ರನಾಮ ೨೭೫ - ೨೭೬
_____________________________________
೨೭೫. ಭಾನು-ಮಂಡಲ-ಮಧ್ಯಸ್ಥಾ
ಅನಾಹತ ಚಕ್ರ ಭಾನುಮಂಡಲ ಕುಂಡಲಿನೀ ಸುವರ್ಣ ಪ್ರಕಾಶ
ಸೂರ್ಯಮಂಡಲ ನಡು ಕಕ್ಷೆಯಲುಪಸ್ಥಿತ ದೇವಿ ಸ್ವರ್ಣ ಸದೃಶ
ಯೋಗಿ ದೃಷ್ಟಿಗೆ ನಿಕಟ ಸರ್ವ ವೇದ ಮೂರ್ತರೂಪೆ ಪ್ರಭಾನ್ವಿತ
ಸಪ್ತ ವ್ಯಾಹೃತಿ ಹದಿನಾಲ್ಕುಲೋಕ ಪ್ರಜ್ಞಾಸ್ತರ ರೂಪ ಪ್ರಜ್ಞಾವಸ್ಥ!
೨೭೬. ಭೈರವೀ
ಸರ್ವಾತೀತ ಭೈರವ ರೂಪಾ ಮೀರುತ ಪ್ರಜ್ಞೆಯೆಲ್ಲಾ ಹಂತ
ತತ್ವ ಮಂತ್ರ ಓಂಕಾರಗಳಾವುದಿರದ ಪರಬ್ರಹ್ಮದ ಸಂಕೇತ
ಶಕ್ತಿ ಸಾರಕೆ ನಿಲುಕದ ಶಿವ ಸೂಕ್ಷ್ಮರೂಪಕಂತರ್ಗತೆ ಭೈರವಿ
'ಭ' ಸುಸ್ಥಿತಿ 'ರ' ತಿರೋಧಾನ 'ವ' ಅನುಗ್ರಹಾ ನಾಮ ಛವಿ!
ಉಸಿರಾಟದಲಿ ನಿಃಶ್ವಾಸಾಂತ ಬಾಹ್ಯ, ಉಚ್ವಾಸಾಂತ ಅಂತರ್ಗತ ಘಟ್ಟ
ಇಬ್ಬದಿ ತುದಿ ಪಯಣ ಕ್ಷಣ ವಿಶ್ರಾಮ ಉಸಿರೆ, ಜೀವಂತ ಶಕ್ತಿ ಹಿಡಿದಿಟ್ಟ
ಬ್ರಹ್ಮ ಸಾಕ್ಷಾತ್ಕಾರಕೆ ಕೇಂದ್ರೀಕೃತ ಗಮನ, ಆ ಭೈರವ ಶಕ್ತಿಯೆ ಸಾಧನ
ಪ್ರಾಣ ಶಕ್ತಿ ಚಲನ ವಿಮರ್ಶಾರೂಪ, ಜಡ ಪ್ರಕಾಶಾ ಅಂತರಾತ್ಮದ ಗುಣ!
ದ್ವಾದಶ ವಯೊ ಮುಗ್ದತೆ, ಬಾಲೆಯಂತೇ ಭೈರವೀ ಮನ
ಶಿವ ಶಕ್ತಿಯ ಐಕ್ಯ ರೂಪ ವಾಕ್, ನಾಮದಲಿಹ ಸಂಧಾನ
ಶಿವವೆಂದರೆ ಶಬ್ದಾರ್ಥವಾಗೆ, ಶಕ್ತಿಯಾಗಿರಲಾ ಶಬ್ದಮೂಲ
ಶಬ್ದಾರ್ಥದಂತೆ ಅವಿಭಕ್ತ, ಭೈರವ ಭೈರವಿ ಐಕ್ಯದೆ ಸ್ಥೂಲ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೭೬. ಶ್ರೀ ಲಲಿತಾ ಸಹಸ್ರನಾಮ ೨೭೫ರಿಂದ ೨೭೬ನೇ ನಾಮಗಳ ವಿವರಣೆ by nageshamysore
ಉ: ೭೬. ಶ್ರೀ ಲಲಿತಾ ಸಹಸ್ರನಾಮ ೨೭೫ರಿಂದ ೨೭೬ನೇ ನಾಮಗಳ ವಿವರಣೆ
ಎಲ್ಲಾ ಕವನಗಳು ಅದ್ಭುತವಾಗಿ ಮೂಡಿ ಬಂದಿವೆ ನಾಗೇಶರೆ. ಈ ಅಲ್ಪ ಬದಲಾವಣೆಯತ್ತ ಗಮನ ಕೊಡಿ; ವಿಮರ್ಶಾ=ವಿಮರ್ಶ, ಪ್ರಕಾಶಾ=ಪ್ರಕಾಶ. (೨೭೬ರ ಕವನದ ೨ನೇ ಪಂಕ್ತಿಯ ಕೊನೆಯ ಸಾಲು).
ಆಭಿನಂದನೆಗಳು ಹಾಗು ಶುಭರಾತ್ರಿ, ನಾಗೇಶರೆ.
In reply to ಉ: ೭೬. ಶ್ರೀ ಲಲಿತಾ ಸಹಸ್ರನಾಮ ೨೭೫ರಿಂದ ೨೭೬ನೇ ನಾಮಗಳ ವಿವರಣೆ by makara
ಉ: ೭೬. ಶ್ರೀ ಲಲಿತಾ ಸಹಸ್ರನಾಮ ೨೭೫ರಿಂದ ೨೭೬ನೇ ನಾಮಗಳ ವಿವರಣೆ
ಶ್ರೀಧರರೆ ತಿದ್ದಿದ ಪಂಕ್ತಿ ಕೆಳಗಿದೆ. ಯಾಕೊ ಅಂತಿಮ ಕೊಮ್ದಿ ಹಾಕಿದರೂ ಕೆಲಸ ಮಾಡುತ್ತಿಲ್ಲ. ಅದಕ್ಕೆ ಕೊಂಡಿಯ ಬದಲು ಕೊಂಡಿ ಸಿದ್ದವಾದ ಮಾಹಿತಿ ಹಾಕಿಬಿಡುತ್ತೇನೆ. ಹೇಗೂ ಹೋಮ್ ಪೇಜಿಗೆ ಹೋದರೆ ಕಂತಿನ ಸಂಖ್ಯೆಯನುಸಾರ ಎಲ್ಲಾ ಸಾಲಾಗಿ ಸಿಗುತ್ತದೆ. ಇದರ ಕೊಂಡಿಯೂ ಈಗ ಸಿದ್ದವಾಗಿದೆ!
ಉಸಿರಾಟದಲಿ ನಿಃಶ್ವಾಸಾಂತ ಬಾಹ್ಯ, ಉಚ್ವಾಸಾಂತ ಅಂತರ್ಗತ ಘಟ್ಟ
ಇಬ್ಬದಿ ತುದಿ ಪಯಣ ಕ್ಷಣ ವಿಶ್ರಾಮ ಉಸಿರೆ, ಜೀವಂತ ಶಕ್ತಿ ಹಿಡಿದಿಟ್ಟ
ಬ್ರಹ್ಮ ಸಾಕ್ಷಾತ್ಕಾರಕೆ ಕೇಂದ್ರೀಕೃತ ಗಮನ, ಆ ಭೈರವ ಶಕ್ತಿಯೆ ಸಾಧನ
ಪ್ರಾಣ ಶಕ್ತಿ ಚಲನ ವಿಮರ್ಶ ರೂಪ, ಜಡ ಪ್ರಕಾಶ ಅಂತರಾತ್ಮದ ಗುಣ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೭೬. ಶ್ರೀ ಲಲಿತಾ ಸಹಸ್ರನಾಮ ೨೭೫ರಿಂದ ೨೭೬ನೇ ನಾಮಗಳ ವಿವರಣೆ by nageshamysore
ಉ: ೭೬. ಶ್ರೀ ಲಲಿತಾ ಸಹಸ್ರನಾಮ ೨೭೫ರಿಂದ ೨೭೬ನೇ ನಾಮಗಳ ವಿವರಣೆ
ಕೊಂಡಿ ಕೆಲಸ ಮಾಡದಿದ್ದರೂ ಪರವಾಗಿಲ್ಲ; ಯಾವುದೋ ಒಂದು ಕಂತಿನಲ್ಲಿರುವ ಕೊಂಡಿಯ ಮೂಲಕ ನಿಮ್ಮ ಬ್ಲಾಗನ್ನು ಸೇರಬಹುದು ಬಿಡಿ. ನಾಗೇಶರೆ, ನನಗೆ ಪದೇ ಪದೇ ಆಶ್ಚರ್ಯವೆನಿಸುವುದೆಂದರೆ ಅಷ್ಟು ಕ್ಲಿಷ್ಟವಾದ ವಿಷಯಗಳನ್ನು ಅರ್ಥಮಾಡಿಕೊಂಡು ಅದರ ಸಾರವನ್ನು ಗ್ರಹಿಸಿ ಅದನ್ನು ಅದ್ಭುತವಾಗಿ ಕಾವ್ಯಕ್ಕಿಳಿಸುವ ನಿಮ್ಮ ಪ್ರತಿಭೆಯ ಕುರಿತು! ನಿಮ್ಮ ಪ್ರತಿಭೆಗೆ ನನ್ನ ನಮನಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ.
In reply to ಉ: ೭೬. ಶ್ರೀ ಲಲಿತಾ ಸಹಸ್ರನಾಮ ೨೭೫ರಿಂದ ೨೭೬ನೇ ನಾಮಗಳ ವಿವರಣೆ by makara
ಉ: ೭೬. ಶ್ರೀ ಲಲಿತಾ ಸಹಸ್ರನಾಮ ೨೭೫ರಿಂದ ೨೭೬ನೇ ನಾಮಗಳ ವಿವರಣೆ
<<<<<..... ನನ್ನ ನಮನಗಳು>>>>> = " ಹಾಗೆ ಬರೆಸುತ್ತಿರುವ ಲಲಿತೆಯ ಕೃಪೆಗೆ, ಅದನ್ನು ಸುಲಭವಾಗಿಸುವಂತಹ ಅದ್ಭುತ ವಿವರಣೆ ಹೊಸೆಯುತ್ತಿರುವ ಶ್ರೀಯುತ ರವಿಯವರ ಮತ್ತು ನಿಮ್ಮ ಪ್ರತಿಭೆ, ಶ್ರದ್ದೆಗೆ ಮೊದಲ ನಮನಗಳು" . ನಾನೇನಿದ್ದರೂ ವ್ಯಾಸ ಭಾರತ ಬರೆದುಕೊಂಡು ಹೋದ ಗಣಪನ ಹಾಗೆ - ನಿಮ್ಮ ಚಿತ್ತಗಳಲ್ಲಭಿವೃದ್ಧಿಯಾದದ್ದನ್ನು ಬರಿ ಕಾವ್ಯ ಪಾಕದಲೆತ್ತೆತ್ತಿಡುವುದಷ್ಟೆ - ಬಾಣಸಿಗನ ಹಾಗೆ :-) ಒಟ್ಟಾರೆ ಇದೆಲ್ಲಾ ಸೇರಿ ಓದುಗರಿಗೆ ಭಕ್ತಿ ನಳಪಾಕ ಸಿಕ್ಕರೆ ನಾವೆಲ್ಲರೂ ಧನ್ಯರಾದಂತೆ!