೭೭. ಶ್ರೀ ಲಲಿತಾ ಸಹಸ್ರನಾಮ ೨೭೭ರಿಂದ ೨೮೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೭೭ - ೨೮೦
Bhagamālinī भगमालिनी (277)
೨೭೭. ಭಗಮಾಲಿನೀ
ದೇವಿಯು ನಿತ್ಯ ತಿಥಿ ದೇವಿಯರಲ್ಲೊಬ್ಬರಾದ ಭಗಮಾಲಿನಿಯ ರೂಪದಲ್ಲಿದ್ದಾಳೆ. ಹದಿನೈದು ತಿಥಿ ನಿತ್ಯ ದೇವಿಯರಿದ್ದು ಪ್ರತಿ ನಿತ್ಯ ದೇವಿಯು ಒಂದೊಂದು ಚಾಂದ್ರಮಾನದ ದಿನಗಳನ್ನು ಪ್ರತಿನಿಧಿಸುತ್ತಾಳೆ. (ತಿಥಿ ಎಂದರೆ ಒಂದು ಚಾಂದ್ರಮಾನ ದಿವಸ). ದೇವಿಯ ಮಂತ್ರದಲ್ಲಿ ಭಗ ಎನ್ನುವುದು ಅನೇಕ ಬಾರಿ ಬರುತ್ತದೆ. ಆದ್ದರಿಂದ ಈ ತಿಥಿ ನಿತ್ಯ ದೇವಿಯನ್ನು ಭಗಮಾಲಿನೀ ಎಂದು ಕರೆದಿದ್ದಾರೆ. ತಿಥಿ ನಿತ್ಯ ದೇವಿಯರನ್ನು ಶ್ರೀ ಚಕ್ರದ ನವಾವರಣ ಪೂಜೆಯ ಸಮಯದಲ್ಲಿ ಆರಾಧಿಸುತ್ತಾರೆ.
ಲಿಂಗ ಪುರಾಣದಲ್ಲಿ (೧.೯೯.೬-೭) ಭಗಾ ಎನ್ನವ ದೇವಿಯ ಕುರಿತು ಉಲ್ಲೇಖವಿದೆ. "ಆಕೆಯು ಜಗದ ತಾಯಿಯಾಗಿದ್ದಾಳೆ. ಮತ್ತವಳ ಹೆಸರು ಭಗಾ. ಆಕೆಯು ಲಿಂಗ ರೂಪದಲ್ಲಿರುವ ಮೂರು ಭಾಗಗಳುಳ್ಳ ದೇವರ ಪೀಠದ ತಳಭಾಗವಾಗಿದ್ದಾಳೆ”. ಈ ವಿವರಣೆಯು ಉಮಾ ಮತ್ತು ಮಹೇಶ್ವರ (ಶಕ್ತಿ ಮತ್ತು ಶಿವ) ಇವರಿಗೆ ಅತ್ಯಂತ ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ. ಲಿಂಗವು ಇರಿಸಲ್ಪಡುವ ಪೀಠವನ್ನು ಸಹ ಭಗಾ ಎಂದು ಕರೆಯುತ್ತಾರೆ.
ಭಗಾ ಎಂದರೆ ೨೭೯ನೇ ನಾಮದಲ್ಲಿ ವಿವರಿಸಲ್ಪಡುವ ಶಕ್ತಿಯ ಆರು (ಷಡ್) ಗುಣಗಳು. ದೇವಿಯು ಈ ಆರು ವಿಧವಾದ ಐಶ್ವರ್ಯಗಳಿಂದ ಹೊಸೆದ ಮಾಲೆಯನ್ನು ಧರಿಸಿದ್ದಾಳೆ.
Padmāsanā पद्मासना (278)
೨೭೮. ಪದ್ಮಾಸನಾ
ದೇವಿಯು ಕಮಲದ (ಪದ್ಮದ) ಮೇಲೆ ಆಸೀನಳಾಗಿದ್ದಾಳೆ ಅಥವಾ ಅವಳು ಪದ್ಮಾಸನದ ಭಂಗಿಯಲ್ಲಿ ಕುಳಿತಿದ್ದಾಳೆ (ಪದ್ಮಾಸನವೆನ್ನುವುದು ಯೋಗದಲ್ಲಿ ಕಾಲುಗಳನ್ನು ಅಡ್ಢವಾಗಿ ಮಡಚಿಕೊಂಡು ಕುಳಿತುಕೊಳ್ಳುವ ಒಂದು ಭಂಗಿ). ಪದ್ಮವೆಂದರೆ ಕಮಲ, ಹಾಗಾಗಿ ಒಬ್ಬರು ಪದ್ಮಾಸನದ ಭಂಗಿಯಲ್ಲಿ ಕುಳಿತಾಗ ಅದು ಕಮಲದ ಹೂವಿನಂತೆ ಕಾಣಿಸುತ್ತದೆ. ಕಮಲದ ಬಳ್ಳಿಗಳನ್ನು ಪ್ರಕೃತಿ (ವಸ್ತುಗಳ ಮೂಲ) ಮತ್ತು ಅದರ ಎಸಳುಗಳನ್ನು ವಿಕೃತಿಗೆ (ವೈವಿಧ್ಯತೆಗೆ, ಬದಲಾದ ಸ್ಥಿತಿಗಳಿಗೆ) ಹೋಲಿಸಲಾಗಿದೆ, ಮತ್ತದರ ದೇಟನ್ನು (ಕಾಂಡವನ್ನು) ಜ್ಞಾನಕ್ಕೆ ಹೋಲಿಸಲಾಗಿದೆ. ಪದ್ಮ ಎಂದರೆ ಐಶ್ವರ್ಯದ ಅಧಿದೇವತೆಯಾದ ಲಕ್ಷ್ಮಿಯನ್ನು ಪ್ರತಿನಿಧಿಸುತ್ತದೆ. ಈ ಸಂದರ್ಭದಲ್ಲಿ ದೇವಿಯು ತನ್ನ ಭಕ್ತರಿಗೆ ಸಂಪತ್ತನ್ನು ಹಂಚುತ್ತಾಳೆನ್ನುವುದು ಇದರ ಅರ್ಥ. ಇಲ್ಲಿ ಸಂಪದವೆಂದರೆ ಕೇವಲ ಐಹಿಕ ಭೋಗಗಳಲ್ಲ, ಅದರೊಂದಿಗೆ ಭೌದ್ಧಿಕ ಸಂಪತ್ತೂ ಸಹ; ಮತ್ತು ಬ್ರಹ್ಮಸಾಕ್ಷಾತ್ಕಾರ ಹೊಂದಲು ಬೇಕಾದ ಉನ್ನತ ಸ್ತರದ ಪ್ರಜ್ಞೆಯನ್ನು ಹೊಂದುವ ಸಾಮರ್ಥ್ಯವನ್ನು ಸಹ ದೇವಿಯು ಕೊಡಮಾಡುತ್ತಾಳೆ. ಪದ್ಮಾಸನವೆಂದರೆ, ಸೃಷ್ಟಿಕರ್ತನಾದ ಬ್ರಹ್ಮನನ್ನು ಸಹ ಸೂಚಿಸಬಹುದು.
Bhagavatī भगवती (279)
೨೭೯. ಭಗವತೀ
ದೇವಿಯು ಶಿವನಿಂದ ಮಂಗಳಕರ ಗುಣವನ್ನು ಹಾಗೂ ಅವನಂತೆ ಸ್ವತಂತ್ರ ಆಭಿವ್ಯಕ್ತಿಯ (ಸ್ವತಂತ್ರವಾಗಿ ಕಾರ್ಯನಿರ್ವಹಿಸುವ) ವಿಶೇಷ ಶಕ್ತಿಯನ್ನು ಹೊಂದಿದ್ದಾಳೆ.
ಈ ನಾಮವು ೨೭೭ನೇ ನಾಮದ ಮುಂದುವರಿಕೆಯಾಗಿದೆ. ಭಗ ಎನ್ನುವುದು ಶಕ್ತಿಯ ಆರು ಗುಣಗಳನ್ನು ಪ್ರತಿನಿಧಿಸುತ್ತದೆ. ಅವೆಂದರೆ, ಶ್ರೇಷ್ಠತೆ (ಸಾರ್ವಭೌಮತೆ), ಧರ್ಮನಿಷ್ಠೆ, ಪ್ರಸಿದ್ಧಿ (ಕೀರ್ತಿ), ಅಭ್ಯುದಯ (ಸಮೃದ್ಧಿ), ಬುದ್ಧಿವಂತಿಕೆ ಮತ್ತು ವಿವೇಕ (ವಿವೇಚನೆ). ಈ ನಾಮವು ಬ್ರಹ್ಮದ ಕೆಲವೊಂದು ಪ್ರಮುಖವಾದ ಗುಣಗಳನ್ನು ಒತ್ತಿ ಹೇಳಲು ಪ್ರಯತ್ನಿಸುತ್ತದೆ. ದೇವಿಯು ಈ ವಿಶೇಷ ಗುಣಗಳಿಂದ ಕೂಡಿದವಳಾಗಿದ್ದಾಳೆ. ಆರು ಗುಣಗಳ ಇನ್ನೊಂದು ಸಮೂಹವಿದೆ ಅವೆಂದರೆ ಸೃಷ್ಟಿ ಮತ್ತು ಲಯ, ವರ್ಧಿಸುವುದು ಮತ್ತು ಕ್ಷೀಣಿಸುವುದು, ಜ್ಞಾನ ಮತ್ತು ಅಜ್ಞಾನಗಳು. ದೇವಿಯು ಸಕಲ ದೇವಾನುದೇವತೆಗಳಿಂದ ಪೂಜಿಸಲ್ಪಡುವುದರಿಂದ ಅವಳನ್ನು ಭಗವತೀ ಎಂದು ಕರೆಯಲಾಗಿದೆ. ವಿಷ್ಣು ಸಹಸ್ರನಾಮದ ೫೫೮ನೇ ನಾಮವು ಭಗವಾನ್ ಆಗಿದೆ ಮತ್ತದು ಇದೇ ಅರ್ಥವನ್ನು ಹೊಂದಿದೆ. ಭಗವತೀ ಎನ್ನುವುದರ ಪುಲ್ಲಿಂಗ ರೂಪವನ್ನು ವಿಷ್ಣು ಸಹಸ್ರನಾಮದಲ್ಲಿ ಉಪಯೋಗಿಸಲಾಗಿದೆ.
Padmanābha-sahodarī पद्मनाभ-सहोदरी (280)
೨೮೦. ಪದ್ಮನಾಭ ಸಹೋದರೀ
ದೇವಿಯು ಭಗವಾನ್ ವಿಷ್ಣುವಿನ ತಂಗಿಯಾಗಿದ್ದಾಳೆ. ಬ್ರಹ್ಮ ಮತ್ತು ಲಕ್ಷ್ಮೀ, ವಿಷ್ಣು ಮತ್ತು ಉಮಾ, ಶಿವ ಮತ್ತು ಸರಸ್ವತೀ ಇವರುಗಳು ಅವಳಿಗಳಾಗಿದ್ದಾರೆ. ಅವರು ಕ್ರಮವಾಗಿ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಪ್ರತಿನಿಧಿಸುತ್ತಾರೆ. ಸರಸ್ವತಿಯು ಬ್ರಹ್ಮನನ್ನು ಮದುವೆಯಾದರೆ, ಲಕ್ಷ್ಮಿಯು ವಿಷ್ಣುವನ್ನು ಮತ್ತು ಉಮೆಯು ಶಿವನನ್ನು ಮದುವೆಯಾದಳು. ಸೃಷ್ಟಿ ಕ್ರಿಯೆಯಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಪರಸ್ಪರ ಅವಲಂಭಿಸಿರುವುದನ್ನು ಬಹಳ ಸುಂದರವಾಗಿ ಪುರಾಣವು ಈ ರೀತಿಯಾಗಿ ವಿವರಿಸುತ್ತದೆ.
ಬ್ರಹ್ಮವು ಎರಡು ಅಂಶಗಳಾಗಿ ವಿಭಜಿಸಲ್ಪಟ್ಟಿದೆ. ಒಂದು ಧರ್ಮವಾದರೆ ಮತ್ತೊಂದು ಅದನ್ನು ಹೊಂದಿರುವುದಾಗಿದೆ. ಪರಬ್ರಹ್ಮದ ಧರ್ಮದ ಅಂಶವು ಸ್ತ್ರೀ ಹಾಗೂ ಪುರುಷಾಂಶಗಳಾಗಿ ಎರಡಾಗಿ ವಿಭಜಿಸಲ್ಪಟ್ಟಿದೆ. ವಿಷ್ಣುವು ಬ್ರಹ್ಮದ ಧರ್ಮದ ಅಂಶವಾದ ಪುಲ್ಲಿಂಗ ರೂಪವಾಗಿದ್ದು ಅವನು ಸ್ಥಿತಿಕರ್ತನಾಗಿದ್ದಾನೆ. ಶಕ್ತಿಯು ಧರ್ಮದ ಸ್ತ್ರೀ ರೂಪವಾಗಿದ್ದು ಆಕೆಯು ಶಿವನ ಹೆಂಡತಿಯಾಗಿದ್ದಾಳೆ ಮತ್ತು ಆಕೆಯನ್ನು ಉಮಾ ಎಂದು ಕರೆಯುತ್ತಾರೆ. ಶಿವ ಮತ್ತವನ ಹೆಂಡತಿ ಉಮಾ ಮತ್ತು ವಿಷ್ಣು ಇವರನ್ನು ಒಟ್ಟಾಗಿ ಬ್ರಹ್ಮವೆಂದು ಈ ನಾಮದಲ್ಲಿ ಸಂಬೋಧಿಸಲಾಗಿದೆ.
೨೭೮, ೨೭೯ ಮತ್ತು ೨೮೦; ಈ ಮೂರು ನಾಮಗಳು ಸೂಕ್ಷ್ಮವಾಗಿ ಪಂಚದಶೀ ಮಂತ್ರದ ಮೊದಲ ಕೂಟವಾದ ವಾಗ್ಭವ ಕೂಟವನ್ನು (क ए ई ल ह्रीं - ಕ ಏ ಈ ಲ ಹ್ರೀಂ) ಸೂಚಿಸುತ್ತವೆ. ಆದ್ದರಿಂದ ಈ ನಾಮಗಳು ಇತರೇ ನಾಮಗಳಲ್ಲಿರುವಂತೆ ಯಾವುದೇ ರೀತಿಯ ಗಂಭೀರವಾದ ಅರ್ಥವನ್ನು ಹೊಂದಿಲ್ಲ. ವಾಸ್ತವವಾಗಿ ಈ ನಾಮಗಳು ಮಂತ್ರದ ರಹಸ್ಯ ರೂಪವನ್ನು ಹೇಳುತ್ತವೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 277-280 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೭೭. ಶ್ರೀ ಲಲಿತಾ ಸಹಸ್ರನಾಮ ೨೭೭ರಿಂದ ೨೮೦ನೇ ನಾಮಗಳ ವಿವರಣೆ
ಶ್ರೀಧರರೆ, ಲಲಿತಾ ಸಹಸ್ರನಾಮ ೨೭೭ - ೨೮೦ ರ ಸಾರಂಶದ ಯತ್ನ ತಮ್ಮ ಪರಿಶೀಲನೆಗೆ :-)
ಲಲಿತಾ ಸಹಸ್ರನಾಮ ೨೭೭ - ೨೮೦
________________________
೨೭೭. ಭಗಮಾಲಿನೀ
ಶಕ್ತಿಯ ಷಡ್ ಗುಣಗಳು ಭಗಾ, ಹೊಸೆದು ಮಾಲೆ ಧರಿಸಿದ ಸೊಗ
ಲಿಂಗವಿಡುವ ಪೀಠ ತಳವೆ ಭಗ, ಉಮಾ ಮಹೇಶ್ವರ ಸಂಯೋಗ
ಪಂಚದಶಾ ಚಂದ್ರಮಾನ ದಿವಸ, ನಿತ್ಯ ದೇವಿಯರ ಪ್ರತಿನಿಧಿಸುತ
ತಿಥಿ ನಿತ್ಯ ದೇವಿ ಭಗಮಾಲಿನೀ ರೂಪದೆ, ಜಗನ್ಮಾತೆ ಲಲಿತೆ ಸ್ವತಃ!
೨೭೮. ಪದ್ಮಾಸನಾ
ಪದ್ಮವೆನೆ ಐಶ್ವರ್ಯಲಕ್ಷ್ಮಿ, ಹಂಚುತ ಐಹಿಕ ಬೌದ್ಧಿಕ ಸಂಪದ
ಬ್ರಹ್ಮಸಾಕ್ಷಾತ್ಕಾರದ ಉನ್ನತ ಸ್ತರ, ಪ್ರಜ್ಞ್ನೆ ಹೊಂದಿಸಿ ಪ್ರಬುದ್ಧ
ಬಳ್ಳಿಯೆ ಪ್ರಕೃತಿ ಎಸಳೆ ವಿಕೃತಿ, ದೇಟಲಿಟ್ಟು ಜ್ಞಾನದ ಕಾಂಡ
ಪದ್ಮಾಸನಾ ಯೋಗಾಸನ ಭಂಗಿ ಪದ್ಮಾಸೀನ ಲಲಿತೆ ನೋಡ!
೨೭೯. ಭಗವತೀ
ಶಿವ ಮಂಗಳಕರ ಗುಣ ಸ್ವಯಂ ಅಭಿವ್ಯಕ್ತಿ ಶಕ್ತಿ ದೇವಿ ಭಗವತೀ
ಶ್ರೇಷ್ಟತೆ ಧರ್ಮನಿಷ್ಟೆ ಕೀರ್ತಿ ಸಮೃದ್ಧಿ ಬುದ್ಧಿ ವಿವೇಕಗಳ ಷಡ್ಶಕ್ತಿ
ಸೃಷ್ಟಿ ಲಯ ವರ್ಧನೆ ಕ್ಷೀಣಿಕೆ ಜ್ಞಾನ ಅಜ್ಞಾನ ಮತ್ತಾರು ಗುಣಾ
ಸಕಲ ದೇವಾನುದೇವತೆಗಳಿಂ ಪೂಜಿತೆ ಭಗವತೀ ಬ್ರಹ್ಮಲಕ್ಷಣ!
೨೮೦. ಪದ್ಮನಾಭ ಸಹೋದರೀ
ಬ್ರಹ್ಮ ಲಕ್ಷ್ಮೀ, ವಿಷ್ಣು ಉಮಾ, ಶಿವ ಸರಸ್ವತಿಗಳ ಅವಳಿ ಜೋಡಿ
ವಿವಾಹದಲಿ ಸೃಷ್ಟಿ ಸ್ಥಿತಿ ಲಯ, ಪರಸ್ಪರಾವಲಂಬನೆ ಮೋಡಿ
ಪರಬ್ರಹ್ಮ ಪುರುಷ ಧರ್ಮಾಂಶ ವಿಷ್ಣು, ಸ್ತ್ರೀ ಧರ್ಮಾಂಶ ಲಲಿತೆ
ಧರ್ಮ ಹೊಂದಲೆ ಮರ್ಮ, ಶಿವ ಶಕ್ತಿ ವಿಷ್ಣು ಸಂಗಮವೆ ಬ್ರಹ್ಮತೆ!
ಧನ್ಯವಾದಗಳು,
ನಾಗೇಶ ಮೈಸೂರು
In reply to ಉ: ೭೭. ಶ್ರೀ ಲಲಿತಾ ಸಹಸ್ರನಾಮ ೨೭೭ರಿಂದ ೨೮೦ನೇ ನಾಮಗಳ ವಿವರಣೆ by nageshamysore
ಉ: ೭೭. ಶ್ರೀ ಲಲಿತಾ ಸಹಸ್ರನಾಮ ೨೭೭ರಿಂದ ೨೮೦ನೇ ನಾಮಗಳ ವಿವರಣೆ
ನಾಗೇಶರೆ,
ಕೆಳಗಿನ ಅಲ್ಪ ಬದಲಾವಣೆಗಳನ್ನು ಮಾಡಿ ಅಂತಿಮ ಕೊಂಡಿ ಕೊಡಬಹುದು.
೨೭೭. ಭಗಮಾಲಿನೀ
:
:
ಪಂಚದಶಾ ಚಂದ್ರಮಾನ ದಿವಸ, ನಿತ್ಯ ದೇವಿಯರ ಪ್ರತಿನಿಧಿಸುತ
:
ಈ ಕವನ ಸರಿಯಾಗಿದೆ; ಆದರೆ ಚಂದ್ರಮಾನವೋ ಅಥವಾ ಚಾಂದ್ರಮಾನವೋ ಇವೆರಡರಲ್ಲಿ ಯಾವುದರ ಪ್ರಯೋಗ ಸಾಧುವೋ ನನಗೆ ಸರಿಯಾಗಿ ತಿಳಿಯದು. ಏಕೆಂದರೆ ನಾವು ಚಾಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎಂದು ಹೇಳುತ್ತೇವಲ್ಲವೇ? ಆದ್ದರಿಂದ ಈ ಅನುಮಾನವಷ್ಟೇ. ಉಳಿದಂತೆ ಕವನದ ಆಶಯ ವಿವರಣೆಗೆ ಪೂರಕವಾಗಿದೆ.
೨೭೮. ಪದ್ಮಾಸನಾ - ಈ ಕಂತಿನಲ್ಲಿ ನನಗೆ ಬಹಳ ಮೆಚ್ಚುಗೆಯಾದದ್ದು ಈ ಪಂಕ್ತಿ. ಅದರಲ್ಲೂ ಕಡೆಯ ಎರಡು ಸಾಲುಗಳನ್ನು ನೀವು ಹೊಂದಿಸಿದ ಪರಿ ಅದ್ಭುತವಾಗಿದೆ.
೨೭೯. ಭಗವತೀ
:
ಶ್ರೇಷ್ಟತೆ ಧರ್ಮನಿಷ್ಟೆ ಕೀರ್ತಿ ಸಮೃದ್ಧಿ ಬುದ್ಧಿ ವಿವೇಕಗಳ ಷಡ್ಶಕ್ತಿ
ಶ್ರೇಷ್ಟತೆ=ಶ್ರೇಷ್ಠತೆ; ಧರ್ಮನಿಷ್ಟೆ=ಧರ್ಮನಿಷ್ಠೆ ಇವು ಹೆಚ್ಚು ಬಳಕೆಯಲ್ಲಿವೆ.
ಸೃಷ್ಟಿ ಲಯ ವರ್ಧನೆ ಕ್ಷೀಣಿಕೆ ಜ್ಞಾನ ಅಜ್ಞಾನ ಮತ್ತಾರು ಗುಣಾ
ಗುಣಾ=ಗುಣ ಇಲ್ಲಿ ದೀರ್ಘಬೇಕಿಲ್ಲವೆನಿಸುತ್ತದೆ? ಮತ್ತು ಹ್ರಸ್ವವು ಪ್ರಾಸಕ್ಕೂ ಸರಿಹೋಗುತ್ತದೆ.
ಸಕಲ ದೇವಾನುದೇವತೆಗಳಿಂ ಪೂಜಿತೆ ಭಗವತೀ ಬ್ರಹ್ಮಲಕ್ಷಣ!
೨೮೦. ಪದ್ಮನಾಭ ಸಹೋದರೀ - ಈ ಕಂತಿನ ಮತ್ತೊಂದು ಸೂಪರ್ ಪಂಕ್ತಿ ಈ ಪದ್ಮನಾಭ ಸಹೋದರೀ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೭೭. ಶ್ರೀ ಲಲಿತಾ ಸಹಸ್ರನಾಮ ೨೭೭ರಿಂದ ೨೮೦ನೇ ನಾಮಗಳ ವಿವರಣೆ by makara
ಉ: ೭೭. ಶ್ರೀ ಲಲಿತಾ ಸಹಸ್ರನಾಮ ೨೭೭ರಿಂದ ೨೮೦ನೇ ನಾಮಗಳ ವಿವರಣೆ
ಶ್ರೀಧರರೆ, ತಿದ್ದುಪಡಿಸಿದ ರೂಪ ಕೆಳಗಿದೆ. ಜತೆಗೆ ೨೭೭ ರಲ್ಲಿ 'ಪಂಚದಶಾ' ಬದಲಿಸಿ 'ಪಂಚದಶ' ಮಾಡಿದ್ದೇನೆ. ಏನಾದರೂ ಅರ್ಥ ಪಲ್ಲಟವಾಗುವುದಾದರೆ ಮತ್ತೆ ಬದಲಿಸುವೆ. ಇಲ್ಲವಾದರೆ ಇದನ್ನೆ ಅಂತಿಮ ರೂಪವಾಗಿ ಊಳಿಸಿಕೊಳ್ಳೋಣ :-) (ವೆಬ್ ಸೈಟಿನ ಅಂತಿಮ ರೂಪವನ್ನು ಪ್ರಕಟಿಸಿದ್ದೇನೆ)
ಲಲಿತಾ ಸಹಸ್ರನಾಮ ೨೭೭ - ೨೮೦
________________________
೨೭೭. ಭಗಮಾಲಿನೀ
ಶಕ್ತಿಯ ಷಡ್ ಗುಣಗಳು ಭಗಾ, ಹೊಸೆದು ಮಾಲೆ ಧರಿಸಿದ ಸೊಗ
ಲಿಂಗವಿಡುವ ಪೀಠ ತಳವೆ ಭಗ, ಉಮಾ ಮಹೇಶ್ವರ ಸಂಯೋಗ
ಪಂಚದಶ ಚಾಂದ್ರಮಾನ ದಿವಸ, ನಿತ್ಯ ದೇವಿಯರ ಪ್ರತಿನಿಧಿಸುತ
ತಿಥಿ ನಿತ್ಯ ದೇವಿ ಭಗಮಾಲಿನೀ ರೂಪದೆ, ಜಗನ್ಮಾತೆ ಲಲಿತೆ ಸ್ವತಃ!
೨೭೮. ಪದ್ಮಾಸನಾ
ಪದ್ಮವೆನೆ ಐಶ್ವರ್ಯಲಕ್ಷ್ಮಿ, ಹಂಚುತ ಐಹಿಕ ಬೌದ್ಧಿಕ ಸಂಪದ
ಬ್ರಹ್ಮಸಾಕ್ಷಾತ್ಕಾರದ ಉನ್ನತ ಸ್ತರ, ಪ್ರಜ್ಞ್ನೆ ಹೊಂದಿಸಿ ಪ್ರಬುದ್ಧ
ಬಳ್ಳಿಯೆ ಪ್ರಕೃತಿ ಎಸಳೆ ವಿಕೃತಿ, ದೇಟಲಿಟ್ಟು ಜ್ಞಾನದ ಕಾಂಡ
ಪದ್ಮಾಸನಾ ಯೋಗಾಸನ ಭಂಗಿ ಪದ್ಮಾಸೀನ ಲಲಿತೆ ನೋಡ!
೨೭೯. ಭಗವತೀ
ಶಿವ ಮಂಗಳಕರ ಗುಣ ಸ್ವಯಂ ಅಭಿವ್ಯಕ್ತಿ ಶಕ್ತಿ ದೇವಿ ಭಗವತೀ
ಶ್ರೇಷ್ಠತೆ ಧರ್ಮನಿಷ್ಠೆ ಕೀರ್ತಿ ಸಮೃದ್ಧಿ ಬುದ್ಧಿ ವಿವೇಕಗಳ ಷಡ್ಶಕ್ತಿ
ಸೃಷ್ಟಿ ಲಯ ವರ್ಧನೆ ಕ್ಷೀಣಿಕೆ ಜ್ಞಾನ ಅಜ್ಞಾನ ಮತ್ತಾರು ಗುಣ
ಸಕಲ ದೇವಾನುದೇವತೆಗಳಿಂ ಪೂಜಿತೆ ಭಗವತೀ ಬ್ರಹ್ಮಲಕ್ಷಣ!
೨೮೦. ಪದ್ಮನಾಭ ಸಹೋದರೀ
ಬ್ರಹ್ಮ ಲಕ್ಷ್ಮೀ, ವಿಷ್ಣು ಉಮಾ, ಶಿವ ಸರಸ್ವತಿಗಳ ಅವಳಿ ಜೋಡಿ
ವಿವಾಹದಲಿ ಸೃಷ್ಟಿ ಸ್ಥಿತಿ ಲಯ, ಪರಸ್ಪರಾವಲಂಬನೆ ಮೋಡಿ
ಪರಬ್ರಹ್ಮ ಪುರುಷ ಧರ್ಮಾಂಶ ವಿಷ್ಣು, ಸ್ತ್ರೀ ಧರ್ಮಾಂಶ ಲಲಿತೆ
ಧರ್ಮ ಹೊಂದಲೆ ಮರ್ಮ, ಶಿವ ಶಕ್ತಿ ವಿಷ್ಣು ಸಂಗಮವೆ ಬ್ರಹ್ಮತೆ!
In reply to ಉ: ೭೭. ಶ್ರೀ ಲಲಿತಾ ಸಹಸ್ರನಾಮ ೨೭೭ರಿಂದ ೨೮೦ನೇ ನಾಮಗಳ ವಿವರಣೆ by nageshamysore
ಉ: ೭೭. ಶ್ರೀ ಲಲಿತಾ ಸಹಸ್ರನಾಮ ೨೭೭ರಿಂದ ೨೮೦ನೇ ನಾಮಗಳ ವಿವರಣೆ
ನಾಗೇಶರೆ,
ಪಂಚದಶಾವನ್ನು ಪಂಚದಶ ಎಂದು ಸರಿಯಾಗಿ ಬದಲಾವಣೆ ಮಾಡಿದ್ದೀರ ಅದನ್ನು ನಾನು ಗಮನಿಸಿರಲಿಲ್ಲ. ಉಳಿದಂತೆ ಎಲ್ಲಾ ಕವನಗಳು ಈಗ ಸರಿಯಾಗಿವೆಯಾದ್ದರಿಂದ ಅಂತಿಮ ಪ್ರಕಟಣೆಯನ್ನು ಮಾಡಬಹುದು.
ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ