" ಶರಾವತಿ "

" ಶರಾವತಿ "

ಚಿತ್ರ

 

     

 

ಆಷಾಡದಾ ಬೆಳಗು ಹಿಡಿದ 

ಸೋನೆ ಮಳೆಯು 

ಜಡಗಟ್ಟಿದಾ ಮನಕೆ 

ಹಿಡಿಸಿತ್ತು ಗ್ರಹಣ 

'ಜಲಪಾತ' ಪಡೆದಿತ್ತು ಗತ ವೈಭವ 

ಮುದುಡಿದಾ ಮನಕೆ 

ಚೇತನವ ನೀಡಿತ್ತು ಕೈಗೊಂಡ 

ಆ ವಿನೂತನ ಪಯಣ 

 

ಸುತ್ತೆಲ್ಲ ಚೆಲ್ಲಿ ಚೆದುರಿದ 

ಹಸಿರು  ವರ್ಣದ ರಂಗು

ಹಿನ್ನೆಲೆಗೆ ವ್ಯಾಪಿಸಿದ 

ಅನಂತಾಕಾಶ ವಿಧ ವಿಧದ 

ಮೇಘಗಳು ಎಡ ಬಿಡದೆ 

ಸುರಿವ 'ಕುಂಭದ್ರೋಣ' 

ಅಲ್ಲಿಯೂ ಇಲ್ಲಿಯೂ 

ದೀರ್ಘ ದಿಗಂತದ ವರೆಗೆ 

 

ವರುಣನಾಘಾತಕ್ಕೆ ಸಿಲುಕಿದಾ 

ಪ್ರಕೃತಿ ತೆರೆದು ಕೊಂಡಿದ್ದಳಾಕೆ 

ಹೊಸ ಅನುಭವಕೆ 

ಮುದಗೊಳಿಸುತ್ತಿದ್ದಳಾ ಸಿರಿ 

ಎಲ್ಲ ಜೀವಿಗಳನ್ನು ತಕ್ಕಂತೆ 

ಅವರವರ 'ಅನುಭಾವಕೆ' 

 

ನಿಶೆ ಹಿಂದೆ ಸರಿದಂತೆ 

ಉಷೆ ಮೂಡಿ ಬಂದಂತೆ

ಸೂರ್ಯ|ನುದಯಿಸಲಿದ್ದ 

ಪೂರ್ವ ಬಾನಂಗಣದಿ

ಕೆನ್ನೀರ ಕಡಲಿಂದ 

'ಹೊನ್ನಿನಾ ಪದಕ' ಮೇಲೆ 

ಮೇಲೇರುತ್ತ ತುಂಬಿತ್ತು 

ಚೈತನ್ಯ ಜಡ ಜೀವಿಗಳಿಗೆ

 

ಕಪ್ಪಡರಿದಂಬರ 

ಹೆಪ್ಪುಗಟ್ಟಿದ ಮೋಡ 

ಮದಗಜದ ತೆರದಲಿ 

ಮದವೇರಿದಾ 'ವರುಣ'

ಭುವಿಯ ಮಕ್ಕಳಿಗೆಲ್ಲ 

ಬೀತಿಯನು ಹುಟ್ಟಿಸುತ 

ಆಕ್ರಮಣ ನಡೆಸಿದ್ದ 

ಭೂಮಂಡಲದೆಡೆಗೆ

 

 

ಸಪ್ತಾಶ್ವಗಳನೇರಿ 

ದಿನಕರನು ಹೊರಟಿರಲು 

ವರುಣ ಹಿಮ್ಮೆಟ್ಟುವ 

ಸಮಯವನು ಕಾದು 

ಭಾಸ್ಕರನನಪ್ಪಲು 

ಕಾತರಿಸುತಿದ್ದಳಾ

'ಪ್ರಕೃತಿ ತರಳೆ'

ಹಿಮ್ಮೆಟ್ಟಿದಾ ಮಂಜು 

ಕಂಡಿತ್ತು ವೈಭೋಗ 

ಗುಡ್ಡ ಬೆಟ್ಟದ ಸುತ್ತ 

ಹಸಿರು ಗರ್ಭದ ಸಿರಿಯು 

 

ರಾಜನಾ ಆರ್ಭಟದಿ 

ರಾಣಿಯಾ ಗತ್ತಿನಲಿ 

ಭೋರೆಂದು ಭೋರಿಡುವ

ಅಂಬಿನಾ ರೀತಿಯಲಿ 

ಅಷ್ಟೆತ್ತರದ 

ಬೆಟ್ಟದಾ ತುದಿಯಿಂದ 

ಕಲ್ಲು ಬಂಡೆಗಳ ಹಾರಿ 

ನುಗ್ಗುತಿದ್ದಳು 'ಅಂಬಿ' 

ಕತ್ತಲೆಯ ಸೀಳಿ ಪ್ರಪಾತದೆಡೆಗೆ

 

ಏನಿದು ಅಂಬಿ ಎನಿತಾವೇಶ

ಏಕೆ ಹುಚ್ಚೆದ್ದಿರುವಿ ಯಾರನು 

ಸೇರಲು ಕಾತುರಗೊಂಡಿರುವಿ?

ಸ್ವಲ್ಪವೂ ನಾಚಿಕೆಯಿಲ್ಲದವಳೆ!

 

ಆಕಾಶದಾ ವರುಣ 

ಭುವಿಯ ಸಂಗಕೆ ಬರಲು 

ನಾನಾದೆ ಅಂಬಿ 

ಎಲ್ಲರನು ತಣಿಸುತ್ತ ಜೀವ 

ಕಳೆ ತುಂಬುತ್ತ 

ಪಯಣಿಸುವೆ ನಾನು 

ಕಾಯಕ ಪೂರೈಸಿ 

ಸೇರಲಾ ಧೀಮಂತ 

ಸಮುದ್ರ ರಾಜನೆಡೆಗೆ 

 

ನನಗೇಕೆ ನೀವು ಬಂಧನವ 

ತೊಡಿಸುವಿರಿ ಆಕಾರ ಲಿಂಗ 

ವರ್ಣ ಬೇಧವುಂಟೆ ನನಗೆ 

ಏಕೆನಗೆ ವಿಧಿಸುವಿರಿ ?

ನಿಮ್ಮಯ ಲೋಕದ ಕಟ್ಟುಪಾಡು 

 

ಹೊಗಳದಿರಿ ಎನ್ನನು

ದೇವತೆ ನೀನೆಂದು ತೆಗಳದಿರಿ

ಎನ್ನನು ಜಾರಿಣಿ ನೀನೆಂದು 

ಮೋಹಿಸದಿರಿ ಎನ್ನನು 

ಪ್ರೇಯಸಿಯ ತೆರದಲಿ !

ಯಾರಾದರೇನೆನಗೆ ಎಲ್ಲರನು 

ಪ್ರೀತಿಸುವೆ ಎಂದೆನುತ 

ಎಲ್ಲ ಜೀವಿಗಳಲಿ ಜೀವಕಳೆ

ತುಂಬುತ್ತ ಹರಿಯುತ್ತಿದ್ದಳಾ

'ಶರಾವತಿ' ವಾರಿಧಿಯೆಡೆಗೆ 

 

          ***

 

Rating
No votes yet

Comments

Submitted by H A Patil Sat, 08/03/2013 - 17:54

ಮಾನ್ಯ ಸಂಪದಿಗರಲ್ಲಿ ವಿನಂತಿ. ಕವನ ಬರೆದು ಕಾಪಿ ಪೇಷ್ಟ ಮಾಡಿ ಸೇವ್ ಕೊಟ್ಟಬಳಿಕ ಕವನವು ಲೇಖನ ರೂಪ ಪಡೆದಿದೆ. ನಿರ್ವಾಹಕ ತಂಡದವರು ಇದನ್ನು ಗಮನಿಸಿ ಸರಿಪಡಿಸುವರಾಗಿ ಅಪೇಕ್ಷಿಸುತ್ತೇನೆ. ಈ ಅಚಾತುರ್ಯಕ್ಕೆ ಕ್ಷಮೆಇರಲಿ. ವಂದನೆಗಳು.

Submitted by kavinagaraj Sun, 08/04/2013 - 15:40

In reply to by H A Patil

ವೆಂಕಟೇಶರ ಪದ್ಯವೂ ಹೀಗೆಯೇ ಆಗಿದೆ. ಭಾವಸುಂದರತೆಯಲ್ಲಿ ಶರಾವತಿ ಕಂಗೊಳಿಸಿದ್ದಾಳೆ!

Submitted by H A Patil Tue, 08/13/2013 - 18:56

In reply to by kavinagaraj

ಕವಿ ನಾಗರಾಜರವರಿಗೆ ವಂದನೆಗಳು

ಇಂದು ಸಂಪದಕ್ಕೆ ಇಂದು ಮರಳಿದ್ದೆನೆ ಈ ಕವನ ಕುರಿತು ಬರದ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by nageshamysore Sat, 08/03/2013 - 18:21

ಪಾಟೀಲರೆ ಅಲ್ಲಿಗೆ ಪ್ರಯಾಣ ಮಾಡಿ ನೋಡುತ್ತ, ಅನುಭವಿಸುತ್ತಾ ಬರೆದ ಹಾಗೆ ಕಂಡಿತು? ರಮಣೀಯ ಪ್ರಕೃತಿಯ ಮಡಿಲಲ್ಲಿ ಮೇಳೈಸಿದ ಎಲ್ಲ ಪ್ರಕೃತಿ ಶಕ್ತಿಗಳ ತಿಕ್ಕಾಟ, ಹೋರಾಟವನ್ನು ಬಿಚ್ಚಿಡುತ್ತ ಅಂಕೆಯಿಲ್ಲದ ನೀರಾಂಗನೆಯ ಸುಖ ದುಃಖ ವಿಚಾರಿಸಿ ವಿವರಿಸುವತನಕ - ಜತೆಯಲ್ಲೆ ಸಾಗಿದ ಅನುಭವ. ಸಾಲುಗಳು ಮಿಶ್ರವಾಗಿ ತುಸು ಓದಲು ತಿಣುಕಾಡಿಸಿದರೂ, ಕವಿ ಭಾವ ಗ್ರಹಿಕೆಗೆ ಕಷ್ಟವಾಗಲಿಲ್ಲ. ('ಬರಹ' ತರಹದ ಯಾವುದಾದರೂ ಎಡಿಟರಿನಲ್ಲಿ ಟೈಪ್ ಮಾಡಿ ಆಮೇಲೆ ಸಂಪದಕ್ಕೆ ಕಾಪಿ ಮಾಡಿದರೆ ಈ ತೊಡಕಿರಲಾರದು ಎಂದು ನನ್ನ ಅನಿಸಿಕೆ - ಹೆಚ್ಚು ಅನುಭವವಿರುವ ಸಂಪದಿಗರು ಸೂಕ್ತವಾಗಿ ವಿವರಿಸಬಹುದು)

Submitted by H A Patil Tue, 08/13/2013 - 19:05

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು

ಕಾರಣಾಂತರಗಳಿಂದ ಸಂಪದಕ್ಕೆ ಬರಲಾಗಿರಲಿಲ್ಲ ನಿಮಗೂ ಮತ್ತು ಕವಿ ನಾಗರಾಜ ರವರಿಗೂ ವಿಳಂಬವಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಇದು ನಾನು ಮೊದಲು ದಾಖಲಿಸಿ ಇಟ್ಟುಕೊಂಡ ಕವನ, ಇದು ಹುಟ್ಟಿದ್ದೆ ಒಂದು ವಿಶಿಷ್ಟ ಸಂಧರ್ಭದಲ್ಲಿ, ಕವನ ಲೇಖನ ರೂಪದಲ್ಲಿ ಬಂದಿದೆ,ಮೆಚ್ಚುಗೆಗೆ ಧನ್ಯವಾದಗಳು, ಓದುಗ ರಿಗೆ ಆದ ತೊಂದರೆಗೆ ಕ್ಷಮೆಯಿರಲಿ ಧನ್ಯವಾದಗಳು.