೭೮. ಶ್ರೀ ಲಲಿತಾ ಸಹಸ್ರನಾಮ ೨೮೧ರಿಂದ ೨೮೬ನೇ ನಾಮಗಳ ವಿವರಣೆ

೭೮. ಶ್ರೀ ಲಲಿತಾ ಸಹಸ್ರನಾಮ ೨೮೧ರಿಂದ ೨೮೬ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೨೮೧ - ೨೮೬

Unmeṣa-nimiṣotpanna-vipanna-bhuvānavalī ऊन्मेष-निमिषोत्पन्न-विपन्न-भुवानवली (281)

೨೮೧. ಉನ್ಮೇಷ-ನಿಮಿಷೋತ್ಪನ್ನ-ವಿಪನ್ನ-ಭುವಾನವಲೀ

ಉನ್ಮೇಷವೆಂದರೆ ಕಣ್ಣು ರೆಪ್ಪೆಗಳನ್ನು ತೆರೆಯುವುದು ಮತ್ತು ನಿಮಿಷ ಎಂದರೆ ಅವುಗಳನ್ನು ಮುಚ್ಚಿಕೊಳ್ಳುವುದು.

              ಈ ಪ್ರಪಂಚದ ಸೃಷ್ಟಿ ಮತ್ತು ಲಯಗಳು ಅವಳು ಕಣ್ಣೆವೆಯಿಕ್ಕುವುದರೊಳಗೆ ಆಗುತ್ತವೆ. ಯಾವಾಗ ದೇವಿಯು ತನ್ನ ಕಣ್ಣನ್ನು ತೆರೆಯುತ್ತಾಳೆಯೋ ಆಗ ಈ ವಿಶ್ವದ ಸೃಷ್ಟಿಯಾಗುತ್ತದೆ ಮತ್ತು ಯಾವಾಗ ಆಕೆಯು ಕಣ್ಣನ್ನು ಮುಚ್ಚಿಕೊಳ್ಳುತ್ತಾಳೆಯೋ ಆಗ ಈ ವಿಶ್ವವು ಲಯವಾಗುತ್ತದೆ (ವಿಪನ್ನವಾಗುತ್ತದೆ). ದೇವಿಯು ಈ ಕ್ಲಿಷ್ಟವಾದ ಕೆಲಸಗಳನ್ನು ಅತೀ ಸುಲಭವಾಗಿ ಮಾಡುತ್ತಾಳೆ. ಪರಬ್ರಹ್ಮವು ಎಷ್ಟು ಸುಲಭವಾಗಿ ಈ ವಿಶ್ವದ ಸೃಷ್ಟಿ ಮತ್ತು ಲಯಗಳನ್ನು ಉಂಟುಮಾಡುತ್ತದೆ ಎನ್ನುವುದನ್ನು ಈ ನಾಮವು ಒತ್ತಿ ಹೇಳುತ್ತದೆ.

              ಸೌಂದರ್ಯ ಲಹರಿಯ ೫೫ನೇ ಶ್ಲೋಕವು ಇದೇ ಬಾವಾರ್ಥವನ್ನು ಹೊರಹೊಮ್ಮಿಸುತ್ತದೆ. "ನೀನು ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಂದಿಗೆ ಈ ಪ್ರಪಂಚವು ಲಯಹೊಂದಿ ಮತ್ತೆ ಸೃಷ್ಟಿಸಲ್ಪಡುತ್ತದೆ ಎಂದು ಋಷಿಗಳು ಸಾರಿದ್ದಾರೆ. ಬಹುಶಃ ನನಗನಿಸುತ್ತದೆ ನಿನ್ನ ಕಣ್ಣುಗಳು ಮಿಟುಕಿಸುವುದರಿಂದ ವಿನಾಯಿತಿ ಪಡೆದಿವೆ ಎಂದು; ಈ ಸಮಸ್ತ ಪ್ರಪಂಚವು ಲಯಹೊಂದುವುದನ್ನು ತಪ್ಪಿಸಲು ಮತ್ತದು ಉಂಟಾದದ್ದೇ ನಿನ್ನ ಕಣ್ಣುಗಳ ತೆರಯುವಿಕೆಯಿಂದ".

              ಈ ನಾಮವು ಸೃಷ್ಟಿಕ್ರಿಯೆಯ ಸೂಕ್ಷ್ಮತೆಯನ್ನು ತಿಳಿಸುತ್ತದೆ. ಕಾಶ್ಮೀರ ಗ್ರಂಥಗಳು, ಉನ್ಮೇಷ ಎನ್ನುವುದನ್ನು ಇಚ್ಛಾ ಶಕ್ತಿಯನ್ನು ಬಹಿರ್ಗತಗೊಳಿಸುವ ಸೃಷ್ಟಿಕ್ರಿಯೆಯ ಪ್ರಾರಂಭವೆಂದು ವಿಶ್ಲೇಷಿಸುತ್ತವೆ. ಉನ್ಮೇಷ ಎನ್ನುವುದು ಆಧ್ಯಾತ್ಮಿಕ ಪ್ರಜ್ಞೆಯ ಅನಾವರಣ ಎಂಬ ಅರ್ಥವನ್ನೂ ಕೊಡುತ್ತದೆ; ಇದನ್ನು ಆಂತರಿಕ ಪ್ರಜ್ಞೆಯ ಮೇಲೆ ಕೇಂದ್ರೀಕರಿಸುವುದರ ಮೂಲಕ ಹೊಂದಬಹುದು.

Sahasra-śīrṣa-vadanā सहस्र-शीर्ष-वदना (282)

೨೮೨. ಸಹಸ್ರ-ಶೀರ್ಷ-ವದನಾ

              ಸಹಸ್ರ ಎಂದರೆ ಈ ಸಂದರ್ಭದಲ್ಲಿ ಅನಂತ ಅಥವಾ ಲೆಕ್ಕವಿಲ್ಲದಷ್ಟು ಎಂದು ಅರ್ಥೈಸಬೇಕು; ಅದರ ಶಬ್ದಶಃ ಅರ್ಥವು ಸಾವಿರ ಎನ್ನುವುದಾಗಿದೆ. ದೇವಿಗೆ ಲೆಕ್ಕವಿಲ್ಲದಷ್ಟು ತಲೆಗಳು ಮತ್ತು ಮುಖಗಳಿವೆ. ಮುಂದಿನ ಎರಡು ನಾಮಗಳೂ ಇದೇ ಅರ್ಥವನ್ನು ಹೊಂದಿವೆ. ದೇವಿಯ ಶ್ರೇಷ್ಠತೆಯನ್ನು ಮಾತುಗಳಿಂದ ವರ್ಣಿಸಲು ವಿಫಲರಾದ ವಾಕ್-ದೇವಿಯರುಗಳು ಅದನ್ನು ಕಲ್ಪನೆಗೆ ನಿಲುಕುವಂತೆ ಮಾಡಿ ದೇವಿಯ ಸರ್ವಶ್ರೇಷ್ಠತೆಯನ್ನು ಮೆರೆಸಿದ್ದಾರೆ. ವಾಸ್ತವವಾಗಿ ಅದನ್ನು ಶಬ್ದಶಃ ಅರ್ಥದಲ್ಲೂ ನಿಜವೆಂದು ಪರಿಗಣಿಸಬಹುದು. ಏಕೆಂದರೆ ಪರಬ್ರಹ್ಮಕ್ಕೆ ಹಲವಾರು ಜಾಗಗಳಲ್ಲಿ ಒಂದೇ ಸಮಯದಲ್ಲಿ ಕೈಗೊಳ್ಳಬೇಕಾದ ಬಹಳಷ್ಟು ಕೆಲಸಗಳಿರುವುದರಿಂದ ಅದಕ್ಕೆ ಲೆಕ್ಕವಿಲ್ಲದಷ್ಟು ತಲೆಗಳ ಅವಶ್ಯಕತೆಯಿದೆ.

              ಪರಬ್ರಹಕ್ಕೆ ಲೆಕ್ಕವಿಲ್ಲದಷ್ಟು ತಲೆಗಳಿರುವುದನ್ನು ವೇದೋಪನಿಷತ್ತುಗಳಲ್ಲಿ ಬಣ್ಣಿಸಲಾಗಿದೆ. ಭಗವದ್ಗೀತೆಯಲ್ಲಿ (೧೩.೧೩) ಹೀಗೆ ಹೇಳಲಾಗಿದೆ, "ಅವನು ಸಕಲವನ್ನೂ ಆವರಿಸಿ ಈ ಪ್ರಪಂಚದಲ್ಲಿ ನಿವಸಿಸುತ್ತಾನೆ; ಅವನ ಕೈಕಾಲುಗಳು ಎಲ್ಲಾ ದಿಕ್ಕುಗಳಲ್ಲಿದ್ದು, ಅವನ ಕಣ್ಣು ಮತ್ತು ಕಿವಿಗಳು, ಅವನ ಬಾಯಿ ಮತ್ತು ತಲೆಗಳು ಸಹ".

              ಬ್ರಹ್ಮಕ್ಕೆ ರೂಪವಿಲ್ಲ ಆದ್ದರಿಂದ ಅದಕ್ಕೆ ಗ್ರಹಣೇಂದ್ರಿಯಗಳಿಲ್ಲ. ಬ್ರಹ್ಮವನ್ನು ಎರಡು ವಿಧವಾಗಿ ವಿವರಿಸಬಹುದು ಒಂದು ಅಲ್ಲಗಳೆಯುವುದರ ಮೂಲಕ (ನಕಾರಾತ್ಮಕವಾಗಿ) ಮತ್ತೊಂದು ಸಕಾರಾತ್ಮವಾಗಿ ಅಥವಾ ದೃಢೀಕರಿಸುವ ಮೂಲಕ. ಈ ನಾಮಗಳು ಬ್ರಹ್ಮವನ್ನು ದೃಢೀಕರಣದ ಮೂಲಕ ವಿವರಿಸುತ್ತವೆ. ಈ ವಿವರಣೆಗಳು ಬ್ರಹ್ಮಾಂಡದ ಮೇಧಾವಿತನವೆಂದು (ಬುದ್ಧಿಯೆಂದು) ಕರೆಯಲ್ಪಟ್ಟಿವೆಯಾದ್ದರಿಂದ ಇವು ಮಾನವನ ಬುದ್ಧಿಮತ್ತೆಗೆ ನಿಲುಕಲಾರದವುಗಳಾಗಿವೆ.

              ಮಹಾನಾರಾಯಣ ಉಪನಿಷತ್ತು (೧.೧೩) ಹೀಗೆ ಹೇಳುತ್ತದೆ, "ಅವನು (ಪರಬ್ರಹ್ಮನು) ಈ ಸಮಸ್ತ ಪ್ರಪಂಚದ ಸರ್ವಜೀವಿಗಳ ಕಣ್ಣು, ಮುಖ, ಕೈಕಾಲುಗಳನ್ನು ಹೊಂದಿದವನಾಗಿದ್ದಾನೆ (विश्वतश्चक्षुः विश्व्तोमुखः – ವಿಶ್ವತಶ್ಚಕ್ಷುಃ ವಿಶ್ವತೋಮುಖಃ)". ಹೀಗೆ ಆ ಉಪನಿಷತ್ತು ಬ್ರಹ್ಮವು ಸಮಸ್ತ ಪ್ರಪಂಚದ ಎಲ್ಲಾ ಜೀವಿಗಳಲ್ಲಿ ಅಸ್ತಿತ್ವದಲ್ಲಿದೆಯೆಂದು ದೃಢೀಕರಿಸುತ್ತದೆ. ಪುರುಷಸೂಕ್ತವೂ ಸಹ, ಪುರುಷನಿಗೆ (ಪರಬ್ರಹ್ಮನಿಗೆ) ಸಾವಿರಾರು ತಲೆಗಳು, ಸಾವಿರಾರು ಕಣ್ಣುಗಳು ಮತ್ತು ಸಾವಿರಾರು ಕಾಲುಗಳು ಇವೆ ಎಂದು ಹೇಳುತ್ತದೆ. ಈ ಸಮಸ್ತ ಪ್ರಪಂಚದ ಪ್ರತಿಯೊಂದು ಧಾತುವೂ ಪ್ರತ್ಯೇಕಗೊಳಿಸಲ್ಪಟ್ಟ ಬ್ರಹ್ಮಾಂಡ ಪ್ರಜ್ಞೆಯಾಗಿದೆ.

Sahasrākṣī सहस्राक्षी (283)

೨೮೩. ಸಹಸ್ರಾಕ್ಷೀ

             ದೇವಿಗೆ ಸಹಸ್ರಾರು ಕಣ್ಣುಗಳಿವೆ. ವಿಷ್ಣು ಸಹಸ್ರನಾಮದ ೨೨೬ನೇ ನಾಮವಾದ ‘ಸಹಸ್ರಾಕ್ಷಃ’ ಸಹ ಇದೇ ಅರ್ಥವನ್ನು ಹೊಂದಿದೆ.

Sahasrapād सहस्रपात् (284)

೨೮೪. ಸಹಸ್ರಪಾತ್

              ದೇವಿಯು ಸಾವಿರಾರು ಪಾದಗಳನ್ನು ಹೊಂದಿದ್ದಾಳೆ. ವಿಷ್ಣು ಸಹಸ್ರನಾಮದ ೨೨೭ನೇ ನಾಮ ’ಸಹಸ್ರಪಾತ್‌’ ಸಹ ಇದೇ ಅರ್ಥವನ್ನು ಹೊಂದಿದೆ. ಪುರುಷ ಸೂಕ್ತವು,  “सहस्र-शीर्षा पुरुषः । सहस्राक्षः सहस्रपात् ॥ - “ಸಹಸ್ರ-ಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್||" ಎನ್ನುವುದರೊಂದಿಗೆ ಪ್ರಾರಂಭವಾಗುತ್ತವೆ.

              ಪಂಚದಶೀ ಮಂತ್ರದ ಮೊದಲನೆಯ ಕೂಟವು ರಹಸ್ಯವಾಗಿ ೨೭೮ ರಿಂದ ೨೮೪ನೇ ನಾಮಗಳಲ್ಲಿ ಬಹಿರಂಗವಾಯಿತು. ಎರಡನೇ ಹಾಗು ಮೂರನೇ ಕೂಟಗಳು (ह स क ह ल ह्रीं। स क ल ह्रीं॥ - ಹ ಸ ಕ ಹ ಲ ಹ್ರೀಂ| ಸ ಕ ಲ ಹ್ರೀಂ|| ) ಇವುಗಳು ೨೮೧ರಿಂದ ೨೮೪ನೇ ನಾಮಗಳಲ್ಲಿ ಬಹಿರಂಗವಾಗಿವೆ.

Ābrahma-kīṭa-jananī आब्रह्म-कीट-जननी (285)

೨೮೫. ಆಬ್ರಹ್ಮ-ಕೀಟ-ಜನನೀ

             ದೇವಿಯು ಸರ್ವಶ್ರೇಷ್ಠವಾದ ಸೃಷ್ಟಿಕರ್ತೆ. ಆಕೆಯು ಬ್ರಹ್ಮನಿಂದ ಹಿಡಿದು ಸಣ್ಣ ಕೀಟದವರೆಗೂ ಎಲ್ಲವನ್ನೂ ಸೃಷ್ಟಿಸುತ್ತಾಳೆ. ಬ್ರಹ್ಮ ಎಂದರೆ ಇಲ್ಲಿ ಮನುಷ್ಯರು, ಏಕೆಂದರೆ ಮಾನವ ರೂಪವು ದೇವರ ಸೃಷ್ಟಿಯಲ್ಲೆಲ್ಲಾ ಶ್ರೇಷ್ಠವೆನಿಸಿದೆ. ಈ ನಾಮಗಳ ಇರಿಸುವಿಕೆಯನ್ನು ಗಮನಿಸಿ. ಪರಬ್ರಹ್ಮವನ್ನು ೨೮೧ರಿಂದ ೨೮೪ನೇ ನಾಮದವರೆಗೆ ವಿವರಿಸಿದ ನಂತರ ಈ ನಾಮದಲ್ಲಿ ಅದರ ವಿವರಣೆಯನ್ನು ಘನೀಕರಿಸಿ (ಒಟ್ಟಾಗಿಸಿ/ಗಟ್ಟಿಗೊಳಿಸಿ) ಪರಬ್ರಹ್ಮದ ಸೃಷ್ಟಿಕ್ರಿಯೆಯನ್ನು ತಿಳಿಸುತ್ತವೆ. ಮೊದಲು ಬ್ರಹ್ಮಕ್ಕೆ ಲೆಕ್ಕವಿಲ್ಲದಷ್ಟು ತಲೆಗಳು, ಕಿವಿಗಳು ಕಾಲುಗಳಿವೆ ಎಂದು ವರ್ಣಿಸುವುದರ ಉದ್ದೇಶ, ದೇವಿಯು ಈ ಸೃಷ್ಟಿಯನ್ನು ಎಷ್ಟು ಸುಲಭವಾಗಿ ಕೈಗೊಳ್ಳಲ್ಲಬಲ್ಲಳು ಎನ್ನುವುದರ ಮಹತ್ವವನ್ನು ಬಿಡಿಸಿ ಹೇಳುವುದಾಗಿದೆ.

Varṇāśrama-vidhāyinī वर्णाश्रम-विधायिनी (286)

೨೮೬. ವರ್ಣಾಶ್ರಮ-ವಿಧಾಯಿನೀ

              ವರ್ಣಾಶ್ರಮ ಎಂದರೆ ವೇದಗಳಲ್ಲಿ ಪ್ರತಿಪಾದಿಸಿರುವ ಜೀವನ ಪದ್ಧತಿ. ವೇದಗಳು ಜನರನ್ನು ಅವರ ಜ್ಞಾನ ಮತ್ತು ಸಾಮರ್ಥ್ಯಗಳಿಗನುಗುಣವಾಗಿ ವರ್ಗೀಕರಿಸುತ್ತವೆ. ಉದಾಹರಣೆಗೆ, ಸೈನಿಕರು ದೇಶದ ಗಡಿಗಳನ್ನು ರಕ್ಷಿಸಲು ಅವಶ್ಯಕವಾಗಿದ್ದರೆ, ವ್ಯವಾಸಾಯಗಾರರು ಜೀವನಾವಶ್ಯಕವಾದ ಧಾನ್ಯಗಳನ್ನು ಬೆಳೆಸುತ್ತಾರೆ, ವರ್ತಕರು ಸರಕು-ಸರಂಜಾಮುಗಳನ್ನು ಒದಗಿಸಲು ಅವಶ್ಯಕವಾಗಿದ್ದಾರೆ, ಮತ್ತು ಪುರೋಹಿತರು ಯಜ್ಞ-ಯಾಗದಿಗಳನ್ನು ಕೈಗೊಳ್ಳಲು ಅವಶ್ಯರಾಗಿರುತ್ತಾರೆ. ವೇದಗಳು ಈ ವರ್ಗೀಕರಣವು ಹುಟ್ಟಿನಿಂದಲ್ಲದೆ ವ್ಯಕ್ತಿಯೊಬ್ಬನು ಕೆಲವೊಂದು ಕೆಲಸಗಳನ್ನು ನಿರ್ವಹಿಬಲ್ಲ ಸಾಮರ್ಥ್ಯದ ಮೇಲೆ ಅದು ಅವಲಂಭಿಸಿದೆ ಎನ್ನುತ್ತವೆ. ಏಕೆಂದರೆ ಒಬ್ಬ ವ್ಯಾಪಾರಿಯು ದೇಶದ ಗಡಿಗಳನ್ನು ಸಮರ್ಥವಾಗಿ ರಕ್ಷಿಸುತ್ತಾನೆಂದು ಆಶಿಸುವುದು ತರ್ಕಬದ್ಧವಾಗಿರಲಾರದು. ಆದ್ದರಿಂದ ಒಬ್ಬನ ಪ್ರವೃತ್ತಿ, ಸಾಮರ್ಥ್ಯ, ಜ್ಞಾನ ಮತ್ತು ಅನುಭವ ಇವುಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ವರ್ಗೀಕರಿಸಬಹುದು. ಈ ವಿಧವಾದ ವರ್ಗೀಕರಣವು ಕೇವಲ ಮಾನವ ಸಂತತಿಗೆ ಮಾತ್ರ ಅನ್ವಯವಾಗುತ್ತದೆ. ದೇವಿಯು ವೇದಗಳಿಗಿಂತ ಪ್ರತ್ಯೇಕವಾಗಿಲ್ಲದವಳಾದ್ದರಿಂದ ಮತ್ತು ಎಲ್ಲಾ ವೇದಗಳು ಅವಳಿಂದಲೇ ಉದ್ಭವವಾಗಿರುವುದರಿಂದ, ಸ್ವಯಂ ದೇವಿಯೇ ಈ ವಿಧವಾದ ವರ್ಗೀಕರಣವನ್ನು ಮಾಡಿದ್ದಾಳೆ ಎಂದು ಹೇಳಲಾಗಿದೆ.

             ಈ ಪ್ರಪಂಚವನ್ನು ಸೃಷ್ಟಿಸಿದ ನಂತರ ಅದನ್ನು ಪರಿಣಾಮಕಾರಿಯಾಗಿ ಪರಿಪಾಲಿಸಲು ದೇವಿಯು ವೇದಗಳನ್ನು ಸೃಷ್ಟಿಸಿದಳು. ವೇದಗಳು ಮಾನವನು ತನ್ನ ಜೀವನದಲ್ಲಿ ಅನುಸರಿಸಬೇಕಾದ ಕಟ್ಟುಪಾಡುಗಳನ್ನು ನಿರ್ದೇಶಿಸುತ್ತವೆ. ವೇದಗಳಲ್ಲಿ ಸೂಚಿಸಲ್ಪಟ್ಟಿರುವ ಮಾರ್ಗವನ್ನು ಧರ್ಮ ಅಥವಾ ಸರಿಯಾದ ಮಾರ್ಗವೆಂದು ಹೇಳಲಾಗಿದೆ. ಒಬ್ಬನು ವೇದಗಳಲ್ಲಿ ನಿರುಕ್ತಗೊಳಿಸಿದ ಧರ್ಮಮಾರ್ಗದಿಂದ ವಿಚಲಿತನಾದರೆ ಅವನು ಕರ್ಮಗಳಿಂದ ಬಾಧೆಗೊಳಗಾಗಿ ಹಲವಾರು ಜನ್ಮಗಳನ್ನು ಹೊಂದಬೇಕಾಗುತ್ತದೆ.

             ಇದನ್ನೇ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ಹೇಳಿದ್ದಾನೆ. “ಕರ್ತವ್ಯಗಳನ್ನು ಅವನಲ್ಲಿ ಉಗಮವಾದ ಸಹಜ ಗುಣಗಳಿಗನುಗುಣವಾಗಿ ನಿರ್ದೇಶಿಸಲಾಗುತ್ತದೆ (ಅಧ್ಯಾಯ ೧೮.೪೧). ಪ್ರತಿಯೊಬ್ಬನೂ ತನ್ನ ಕರ್ತವ್ಯದಲ್ಲಿ ಶ್ರದ್ಧೆಯನ್ನು ತೋರಿದರೆ ಅವನು ಅತ್ಯುನ್ನತವಾದ ಯಶಸ್ಸನ್ನು ಪಡೆಯುತ್ತಾನೆ. ಒಬ್ಬನು ತನ್ನ ಹುಟ್ಟು ಸ್ವಭಾವದಿಂದ ಬಂದ ಕರ್ತವ್ಯವನ್ನು ಎಷ್ಟು ಸಮರ್ಪಣಾ ಭಾವದಿಂದ ಮಾಡುತ್ತಾನೆಯೋ ಅಷ್ಟರಮಟ್ಟಿಗೆ ಯಶಸ್ಸನ್ನು ಪಡೆಯುತ್ತಾನೆ (ಅಧ್ಯಾಯ ೧೮.೪೫). ಒಂದು ವೇಳೆ ನಾನು ಕ್ರಿಯೆಗಳನ್ನು ಸಮಚಿತ್ತದಿಂದ ಮಾಡದೇ ಹೋದರೆ, ಕರ್ತವ್ಯಗಳ ಅಸಮರ್ಪಕ ಮಿಶ್ರಣವನ್ನು ಮಾಡಿದ್ದಕ್ಕೆ ನಾನು ಕಾರಣವಾಗುತ್ತೇನೆ ಮತ್ತು ಈ ಪ್ರಪಂಚವು ವಿನಾಶಹೊಂದುತ್ತದೆ (ಅಧ್ಯಾಯ ೩.೨೪).”

******

            ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 281-286 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Sun, 08/04/2013 - 13:49

ಶ್ರೀಧರರೆ, ಲಲಿತಾ ಸಹಸ್ರನಾಮ ೨೮೧ - ೨೮೬ರ ಸಾರ ಸಂಗ್ರಹ ಪರಿಷ್ಕರಣೆಗೆ ಸಿದ್ದ :-)

ಲಲಿತಾ ಸಹಸ್ರನಾಮ ೨೮೧ - ೨೮೬

೨೮೧. ಉನ್ಮೇಷ-ನಿಮಿಷೋತ್ಪನ್ನ-ವಿಪನ್ನ-ಭುವಾನವಲೀ 
ಕಣ್ಣಿವೆಯಿಕ್ಕುವುದರೊಳಗೆ, ಸೃಷ್ಟಿ ಲಯಗಳ ಚತುರತೆ ಮಾತೆ
ಕಣ್ತೆರೆವ ಉನ್ಮೇಷ ಸೃಷ್ಟಿಸಿತೆ, ಮುಚ್ಚೆ ನಿಮಿಷ ಲಯ ದೃಷ್ಟಿಸುತೆ
ಬ್ರಹ್ಮದ ಇಚ್ಛಾಶಕ್ತಿ ಆಧ್ಯಾತ್ಮಿಕ ಪ್ರಜ್ಞಾ, ಸೃಷ್ಟಿಸೂಕ್ಷ್ಮ ಅನಾವರಣ
ಉನ್ಮೇಷ ನಿಮಿಷೋತ್ಪನ್ನ ವಿಪನ್ನ ಭುವಾನವಲೀ ಲಲಿತಾ ಕರುಣ!

೨೮೨. ಸಹಸ್ರ-ಶೀರ್ಷ-ವದನಾ
ಸಮಸ್ತ ಪ್ರಪಂಚದ ಪ್ರತಿ ಧಾತು, ಬ್ರಹ್ಮಾಂಡ ಪ್ರಜ್ಞೆಯ ತುಣುಕೆ
ಅಗಣಿತ ಶಿರ ಕೈ ಕಾಲು ಮೊಗ, ನಾಸಿಕ ನೇತ್ರವೆಲ್ಲೆಡೆ ಬ್ರಹ್ಮಕೆ
ಏಕಕಾಲ ಸರ್ವ ಲೋಕಪಾಲ, ನಿಭಾವಣೆ ಬ್ರಹ್ಮ ಮೇಧಾವಿತನ
ಸಕಾರಾತ್ಮ ಸಹಸ್ರ ಶೀರ್ಷ ವದನ ವಾಗ್ದೇವಿಗೂ ಎಟುಕದ ಕ್ಷಣ!

೨೮೩. ಸಹಸ್ರಾಕ್ಷೀ 
ಸೃಷ್ಟಿ ಲಯಗಳ ನಡುವಿನ ಲೋಕಪಾಲನೆ ಸಮಸ್ಥಿತಿ
ಬ್ರಹ್ಮಾಂಡ ಪರಿಪಾಲನೆ ನಿಭಾವಣೆಗೆಲ್ಲ ಸಮ ಸ್ಪೂರ್ತಿ
ದೇವ ದೇವಿನಿ ಯೋಗಿನಿ ಮಂತ್ರಿಣೀ ಲಲಿತೆಯ ಅಕ್ಷೀ
ಕೂಟವೈಭೋಗದೆ ಜಗನಡೆಸುವಳು ದೇವಿ ಸಹಸ್ರಾಕ್ಷೀ!

೨೮೪. ಸಹಸ್ರಪಾತ್ 
ಪಂಚದಶೀ ಮಂತ್ರ ಕೂಟ, ನಾಮಗಳಲೇ ಅಂತರ್ಗತ
ಅರಿತಂತೆ ನಾಮಾವಳಿ ಸೂಕ್ತ, ಬೀಜಾಕ್ಷರ ಬಹಿರ್ಗತ
ಸಹಸ್ರನಾಮ ಮಂತ್ರಕೂಟಧಾಮ, ಅರಿಯೆ ಕಿಂಚಿತ್
ಹೆಜ್ಜೆ ಗುರುತೆಲ್ಲೆಡೆ ಸುಳಿವಿಟ್ಟು, ಲಲಿತೆ ಸಹಸ್ರಪಾತ್!

೨೮೫. ಆಬ್ರಹ್ಮ-ಕೀಟ-ಜನನೀ 
ಅಗಣಿತ ಶಿರ ಕರ್ಣ ಕರ ಚರಣ ನೇತ್ರಾದಿ ಸೃಷ್ಟಿಕಾರ್ಯದೆ ನಿರತ
ಮನುಜನಿಂದಿಡಿದೆ ಕ್ರಿಮಿ ಕೀಟ, ಸಕಲಜೀವಿಯ ದೇವಿ ಸೃಷ್ಟಿಸುತ
ಹಂಚುತ ಸತತ ಸೃಷ್ಟಿಗೆ, ಮರು ಸೃಷ್ಟಿಯ ಪರಬ್ರಹ್ಮದ ಸಿದ್ದಾಂತ
ಪೀಳಿಗೆಯಿಂ ಪೀಳಿಗೆಗೆ ದಾಟಿಸಿ, ಆಬ್ರಹ್ಮ ಕೀಟ ಜನನೀ ವೃತ್ತಾಂತ!

೨೮೬. ವರ್ಣಾಶ್ರಮ-ವಿಧಾಯಿನೀ 
ಸೃಷ್ಟಿ ಸಮರ್ಪಕ ಪರಿಪಾಲನೆ, ಅನುಸರಣೆಗೆ ವೇದ ಮಾರ್ಗ
ಲಲಿತಾ ಸೃಷ್ಟಿ ಸನ್ಮಾರ್ಗ, ವಿಚಲಿಸಿರೆ ಜನ್ಮಾಂತರ ದೌಭಾಗ್ಯ
ಪ್ರವೃತ್ತಿ ಶಕ್ತಿ ಜ್ಞಾನಾನುಭವದೆ ವರ್ಗೀಕರಿಸಿ ವರ್ಣ ಹೂ ಧಾನಿ
ಗುಣಾನುಸಾರ ಕರ್ತವ್ಯ ನಿರ್ದೇಶಿಸಿ ವರ್ಣಾಶ್ರಮ ವಿಧಾಯಿನೀ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

೨೮೩. ಸಹಸ್ರಾಕ್ಷೀ
ಸೃಷ್ಟಿ ಲಯಗಳ ನಡುವಿನ ಲೋಕಪಾಲನೆ ಸಮಸ್ಥಿತಿ
= ಲೋಕಪಾಲನೆ ಸೃಷ್ಟಿ ಲಯಗಳ ನಡುವಿನ ಸಮಸ್ಥಿತಿ; ಹೀಗೆ ಮಾಡಿದರೆ ಮೂಲ ಅರ್ಥಕ್ಕೆ ಧಕ್ಕೆಯುಂಟಾಗುವುದಿಲ್ಲ.
ಬ್ರಹ್ಮಾಂಡ ಪರಿಪಾಲನೆ ನಿಭಾವಣೆಗೆಲ್ಲ ಸಮ ಸ್ಪೂರ್ತಿ
ದೇವ ದೇವಿನಿ ಯೋಗಿನಿ ಮಂತ್ರಿಣೀ ಲಲಿತೆಯ ಅಕ್ಷೀ
ದೇವಿನಿ=ದೇವಿ
ಕೂಟವೈಭೋಗದೆ ಜಗನಡೆಸುವಳು ದೇವಿ ಸಹಸ್ರಾಕ್ಷೀ!
ಜಗನಡೆಸುವಳು=ಜಗಪಾಲಿಪಳು
೨೮೪. ಸಹಸ್ರಪಾತ್
ಪಂಚದಶೀ ಮಂತ್ರ ಕೂಟ, ನಾಮಗಳಲೇ ಅಂತರ್ಗತ
ಕೂಟ=ತ್ರಿಕೂಟ
ಅರಿತಂತೆ ನಾಮಾವಳಿ ಸೂಕ್ತ, ಬೀಜಾಕ್ಷರ ಬಹಿರ್ಗತ
ಸಹಸ್ರನಾಮ ಮಂತ್ರಕೂಟಧಾಮ, ಅರಿಯೆ ಕಿಂಚಿತ್
ಹೆಜ್ಜೆ ಗುರುತೆಲ್ಲೆಡೆ ಸುಳಿವಿಟ್ಟು, ಲಲಿತೆ ಸಹಸ್ರಪಾತ್!
ಸುಳಿವಿಟ್ಟು- ಇದಕ್ಕಿಂತ ಹೆಚ್ಚಿನ ಸರಳ ಪದ ಸಾಧ್ಯವೇ ಆಲೋಚಿಸಿ
೨೮೫. ಆಬ್ರಹ್ಮ-ಕೀಟ-ಜನನೀ
ಈ ಪಂಕ್ತಿಯಲ್ಲಿ ಏನೂ ತಿದ್ದುಪಡಿಗಳಿಲ್ಲ.
೨೮೬. ವರ್ಣಾಶ್ರಮ-ವಿಧಾಯಿನೀ
ಸೃಷ್ಟಿ ಸಮರ್ಪಕ ಪರಿಪಾಲನೆ, ಅನುಸರಣೆಗೆ ವೇದ ಮಾರ್ಗ
ಲಲಿತಾ ಸೃಷ್ಟಿ ಸನ್ಮಾರ್ಗ, ವಿಚಲಿಸಿರೆ ಜನ್ಮಾಂತರ ದೌಭಾಗ್ಯ
ದೌಭಾಗ್ಯ=ದೌರ್ಭಾಗ್ಯ
ಪ್ರವೃತ್ತಿ ಶಕ್ತಿ ಜ್ಞಾನಾನುಭವದೆ ವರ್ಗೀಕರಿಸಿ ವರ್ಣ ಹೂ ಧಾನಿ
ಹೂ ಧಾನಿ=ಹೂದಾನಿ
ಗುಣಾನುಸಾರ ಕರ್ತವ್ಯ ನಿರ್ದೇಶಿಸಿ ವರ್ಣಾಶ್ರಮ ವಿಧಾಯಿನೀ!
ನಿರ್ದೇಶಿಸಿ=ನಿರ್ದೇಶಕಿ/ನಿರ್ದೇಶಿಸಿಹ

ಈ ಕಂತಿನಲ್ಲಿ ಅತ್ಯಂತ ಮುದ ನೀಡಿದ್ದು ಆಬ್ರಹ್ಮ ಕೀಟ ಜನನೀ ಪಂಕ್ತಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ನಾಗೇಶರೆ,
ಲಲಿತಾ ಸಹಸ್ರನಾಮ ೨೮೧ - ೨೮೬ರ ಪರಿಷ್ಕರೆಣೆಯನ್ನು ನಿಮ್ಮ ಅವಗಾಹನೆಗೆ ಕಳುಹಿಸುತ್ತಿದ್ದೇನೆ.

೨೮೧. ಉನ್ಮೇಷ-ನಿಮಿಷೋತ್ಪನ್ನ-ವಿಪನ್ನ-ಭುವಾನವಲೀ
ಕಣ್ಣಿವೆಯಿಕ್ಕುವುದರೊಳಗೆ, ಸೃಷ್ಟಿ ಲಯಗಳ ಚತುರತೆ ಮಾತೆ
ಚತುರತೆ - ಇದಕ್ಕೆ ಬೇರೆ ಶಬ್ದವನ್ನೇನಾದರೂ ಆಲೋಚಿಸಬಹುದೇ ನೋಡಿ. ಉಂಟು ಮಾಡುವ ಎನ್ನುವ ಅರ್ಥಹೊಂದಿದ್ದರೆ ಸಮಂಜಸವಾಗಿರುತ್ತದೆ. ಸೃಜಿಪ ಸೂಕ್ತವಾಗಬಹುದೇನೋ!
ಕಣ್ತೆರೆವ ಉನ್ಮೇಷ ಸೃಷ್ಟಿಸಿತೆ, ಮುಚ್ಚೆ ನಿಮಿಷ ಲಯ ದೃಷ್ಟಿಸುತೆ
ಸೃಷ್ಟಿಸಿತೆ=ಸೃಷ್ಟಿಸೆ
ಬ್ರಹ್ಮದ ಇಚ್ಛಾಶಕ್ತಿ ಆಧ್ಯಾತ್ಮಿಕ ಪ್ರಜ್ಞಾ, ಸೃಷ್ಟಿಸೂಕ್ಷ್ಮ ಅನಾವರಣ
ಪ್ರಜ್ಞಾ=ಪ್ರಜ್ಞೆ
ಉನ್ಮೇಷ ನಿಮಿಷೋತ್ಪನ್ನ ವಿಪನ್ನ ಭುವಾನವಲೀ ಲಲಿತಾ ಕರುಣ!

೨೮೨. ಸಹಸ್ರ-ಶೀರ್ಷ-ವದನಾ
:
:
ಸಕಾರಾತ್ಮ ಸಹಸ್ರ ಶೀರ್ಷ ವದನ ವಾಗ್ದೇವಿಗೂ ಎಟುಕದ ಕ್ಷಣ!
ಸಕಾರಾತ್ಮ=ಸಗುಣಾತ್ಮಕ ಮಾಡಿ ಏಕೆಂದರೆ ಸಕಾರಾತ್ಮ ಎಂದರೆ ಒಪ್ಪಿಗೆ ಅಥವಾ ದೃಢಪಡಿಸು ಎನ್ನುವ ಅರ್ಥಗಳು ಬರುತ್ತವೆ. ಇಲ್ಲಿ ಸಗುಣ ಬ್ರಹ್ಮದ ಕುರಿತಾಗಿ ಹೇಳುತ್ತಿರುವುದರಿಂದ ಸಗುಣಾತ್ಮಕ ಸರಿಯಾದ ಶಬ್ದವೆನಿಸುತ್ತದೆ.

೨೮೩. ಸಹಸ್ರಾಕ್ಷೀ
ಸೃಷ್ಟಿ ಲಯಗಳ ನಡುವಿನ ಲೋಕಪಾಲನೆ ಸಮಸ್ಥಿತಿ
= ಲೋಕಪಾಲನೆ ಸೃಷ್ಟಿ ಲಯಗಳ ನಡುವಿನ ಸಮಸ್ಥಿತಿ; ಹೀಗೆ ಮಾಡಿದರೆ ಮೂಲ ಅರ್ಥಕ್ಕೆ ಧಕ್ಕೆಯುಂಟಾಗುವುದಿಲ್ಲ.
ಬ್ರಹ್ಮಾಂಡ ಪರಿಪಾಲನೆ ನಿಭಾವಣೆಗೆಲ್ಲ ಸಮ ಸ್ಪೂರ್ತಿ
ದೇವ ದೇವಿನಿ ಯೋಗಿನಿ ಮಂತ್ರಿಣೀ ಲಲಿತೆಯ ಅಕ್ಷೀ
ದೇವಿನಿ=ದೇವಿ
ಕೂಟವೈಭೋಗದೆ ಜಗನಡೆಸುವಳು ದೇವಿ ಸಹಸ್ರಾಕ್ಷೀ!
ಜಗನಡೆಸುವಳು=ಜಗಪಾಲಿಪಳು
೨೮೪. ಸಹಸ್ರಪಾತ್
ಪಂಚದಶೀ ಮಂತ್ರ ಕೂಟ, ನಾಮಗಳಲೇ ಅಂತರ್ಗತ
ಕೂಟ=ತ್ರಿಕೂಟ
ಅರಿತಂತೆ ನಾಮಾವಳಿ ಸೂಕ್ತ, ಬೀಜಾಕ್ಷರ ಬಹಿರ್ಗತ
ಸಹಸ್ರನಾಮ ಮಂತ್ರಕೂಟಧಾಮ, ಅರಿಯೆ ಕಿಂಚಿತ್
ಹೆಜ್ಜೆ ಗುರುತೆಲ್ಲೆಡೆ ಸುಳಿವಿಟ್ಟು, ಲಲಿತೆ ಸಹಸ್ರಪಾತ್!
ಸುಳಿವಿಟ್ಟು- ಇದಕ್ಕಿಂತ ಹೆಚ್ಚಿನ ಸರಳ ಪದ ಸಾಧ್ಯವೇ ಆಲೋಚಿಸಿ
೨೮೫. ಆಬ್ರಹ್ಮ-ಕೀಟ-ಜನನೀ
ಈ ಪಂಕ್ತಿಯಲ್ಲಿ ಏನೂ ತಿದ್ದುಪಡಿಗಳಿಲ್ಲ.
೨೮೬. ವರ್ಣಾಶ್ರಮ-ವಿಧಾಯಿನೀ
ಸೃಷ್ಟಿ ಸಮರ್ಪಕ ಪರಿಪಾಲನೆ, ಅನುಸರಣೆಗೆ ವೇದ ಮಾರ್ಗ
ಲಲಿತಾ ಸೃಷ್ಟಿ ಸನ್ಮಾರ್ಗ, ವಿಚಲಿಸಿರೆ ಜನ್ಮಾಂತರ ದೌಭಾಗ್ಯ
ದೌಭಾಗ್ಯ=ದೌರ್ಭಾಗ್ಯ
ಪ್ರವೃತ್ತಿ ಶಕ್ತಿ ಜ್ಞಾನಾನುಭವದೆ ವರ್ಗೀಕರಿಸಿ ವರ್ಣ ಹೂ ಧಾನಿ
ಹೂ ಧಾನಿ=ಹೂದಾನಿ
ಗುಣಾನುಸಾರ ಕರ್ತವ್ಯ ನಿರ್ದೇಶಿಸಿ ವರ್ಣಾಶ್ರಮ ವಿಧಾಯಿನೀ!
ನಿರ್ದೇಶಿಸಿ=ನಿರ್ದೇಶಕಿ/ನಿರ್ದೇಶಿಸಿಹ

ಈ ಕಂತಿನಲ್ಲಿ ಅತ್ಯಂತ ಮುದ ನೀಡಿದ್ದು ಆಬ್ರಹ್ಮ ಕೀಟ ಜನನೀ ಪಂಕ್ತಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಲಲಿತಾ ಸಹಸ್ರನಾಮ ೨೮೧ - ೨೮೬ರ ಸಾರ ತಿದ್ದುಪಡಿ ರೂಪ :-)

ಲಲಿತಾ ಸಹಸ್ರನಾಮ ೨೮೧ - ೨೮೬

೨೮೧. ಉನ್ಮೇಷ-ನಿಮಿಷೋತ್ಪನ್ನ-ವಿಪನ್ನ-ಭುವಾನವಲೀ
ಕಣ್ಣಿವೆಯಿಕ್ಕುವುದರೊಳಗೆ, ಸೃಷ್ಟಿ ಲಯಗಳ ಸೃಜಿಪಳು ಮಾತೆ
ಕಣ್ತೆರೆವ ಉನ್ಮೇಷ ಸೃಷ್ಟಿಸೆ, ಕಣ್ಮುಚ್ಚೆ ನಿಮಿಷ ಲಯ ದೃಷ್ಟಿಸುತೆ
ಬ್ರಹ್ಮದ ಇಚ್ಛಾಶಕ್ತಿ ಆಧ್ಯಾತ್ಮಿಕ ಪ್ರಜ್ಞೆ, ಸೃಷ್ಟಿ ಸೂಕ್ಷ್ಮ ಅನಾವರಣ
ಉನ್ಮೇಷ ನಿಮಿಷೋತ್ಪನ್ನ ವಿಪನ್ನ ಭುವಾನವಲೀ ಲಲಿತಾ ಕರುಣ!

೨೮೨. ಸಹಸ್ರ-ಶೀರ್ಷ-ವದನಾ
ಸಮಸ್ತ ಪ್ರಪಂಚದ ಪ್ರತಿ ಧಾತು, ಬ್ರಹ್ಮಾಂಡ ಪ್ರಜ್ಞೆಯ ತುಣುಕೆ
ಅಗಣಿತ ಶಿರ ಕೈ ಕಾಲು ಮೊಗ, ನಾಸಿಕ ನೇತ್ರವೆಲ್ಲೆಡೆ ಬ್ರಹ್ಮಕೆ
ಏಕಕಾಲ ಸರ್ವ ಲೋಕಪಾಲ, ನಿಭಾವಣೆ ಬ್ರಹ್ಮ ಮೇಧಾವಿತನ
ಸಗುಣಾತ್ಮಕ ಸಹಸ್ರ ಶೀರ್ಷ ವದನ ವಾಗ್ದೇವಿಗು ಎಟುಕದ ಕ್ಷಣ!

೨೮೩. ಸಹಸ್ರಾಕ್ಷೀ
ಲೋಕಪಾಲನೆ ಸೃಷ್ಟಿ ಲಯಗಳ ನಡುವಿನ ಸಮಸ್ಥಿತಿ
ಬ್ರಹ್ಮಾಂಡ ಪರಿಪಾಲನೆ ನಿಭಾವಣೆಗೆಲ್ಲ ಸಮ ಸ್ಪೂರ್ತಿ
ದೇವ ದೇವಿ ಯೋಗಿನಿ ಮಂತ್ರಿಣೀ ಲಲಿತೆಯ ಅಕ್ಷೀ
ಕೂಟವೈಭೋಗದೆ ಜಗಪಾಲಿಪಳು ದೇವಿ ಸಹಸ್ರಾಕ್ಷೀ!

೨೮೪. ಸಹಸ್ರಪಾತ್
ಪಂಚದಶೀ ಮಂತ್ರ ತ್ರಿಕೂಟ, ನಾಮಗಳಲೆ ಅಂತರ್ಗತ
ಅರಿತಂತೆ ನಾಮಾವಳಿ ಸೂಕ್ತ, ಬೀಜಾಕ್ಷರ ಬಹಿರ್ಗತ
ಸಹಸ್ರನಾಮ ಮಂತ್ರಕೂಟಧಾಮ, ಅರಿಯೆ ಕಿಂಚಿತ್
ಹೆಜ್ಜೆ ಗುರುತೆಲ್ಲೆಡೆ ಪಸರಿಸುತ, ಲಲಿತೆ ಸಹಸ್ರಪಾತ್!

೨೮೫. ಆಬ್ರಹ್ಮ-ಕೀಟ-ಜನನೀ
ಅಗಣಿತ ಶಿರ ಕರ್ಣ ಕರ ಚರಣ ನೇತ್ರಾದಿ ಸೃಷ್ಟಿಕಾರ್ಯದೆ ನಿರತ
ಮನುಜನಿಂದಿಡಿದೆ ಕ್ರಿಮಿ ಕೀಟ, ಸಕಲಜೀವಿಯ ದೇವಿ ಸೃಷ್ಟಿಸುತ
ಹಂಚುತ ಸತತ ಸೃಷ್ಟಿಗೆ, ಮರು ಸೃಷ್ಟಿಯ ಪರಬ್ರಹ್ಮದ ಸಿದ್ದಾಂತ
ಪೀಳಿಗೆಯಿಂ ಪೀಳಿಗೆಗೆ ದಾಟಿಸಿ, ಆಬ್ರಹ್ಮ ಕೀಟ ಜನನೀ ವೃತ್ತಾಂತ!

೨೮೬. ವರ್ಣಾಶ್ರಮ-ವಿಧಾಯಿನೀ
ಸೃಷ್ಟಿ ಸಮರ್ಪಕ ಪರಿಪಾಲನೆ, ಅನುಸರಣೆಗೆ ವೇದ ಮಾರ್ಗ
ಲಲಿತಾ ಸೃಷ್ಟಿ ಸನ್ಮಾರ್ಗ, ವಿಚಲಿಸಿರೆ ಜನ್ಮಾಂತರ ದೌರ್ಭಾಗ್ಯ
ಪ್ರವೃತ್ತಿ ಶಕ್ತಿ ಜ್ಞಾನಾನುಭವದೆ ವರ್ಗೀಕರಿಸಿ ವರ್ಣ ಹೂದಾನಿ
ಗುಣಾನುಸಾರ ಕರ್ತವ್ಯ ನಿರ್ದೇಶಕಿ ವರ್ಣಾಶ್ರಮ ವಿಧಾಯಿನೀ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

ನಾಗೇಶರೆ ಈಗ ಕವನಗಳು ಇನ್ನಷ್ಟು ಅರ್ಥಗರ್ಭಿತವಾಗಿ ಮೂಡಿ ಬಂದಿವೆ. ಸುಳುವಿಟ್ಟು=ಪಸರಿಸಿ ಒಳ್ಳೆಯ ಪದವನ್ನೇ ಹುಡುಕಿದ್ದೀರ. ಆದರೆ ೨೮೨. ಸಹಸ್ರ-ಶೀರ್ಷ-ವದನಾ; ಈ ಪಂಕ್ತಿಯ ಕಡೆಯ ಸಾಲಿನಲ್ಲಿದ್ದ ವಾಗ್ದೇವಿಗೂ -ಇದನ್ನು ಹಾಗೇ ಉಳಿಸಿಕೊಂಡಿದ್ದರೆ ಸರಿಹೋಗುತ್ತಿತ್ತು; ಏಕೆಂದರೆ ಅದನ್ನು ಒತ್ತು ಕೊಟ್ಟು ಹೇಳಿದಂತಿರುತ್ತಿತ್ತು. ಅದನ್ನು ವಾಗ್ದೇವಿಗೂ ಎಂದು ಮಾರ್ಪಡಿಸಿ. ಉಳಿದಂತೆ ಎಲ್ಲಾ ಸರಿಯಾಗಿವೆ; ಈಗ ಅಂತಿಮ ಕೊಂಡಿಯನ್ನು ಕೊಡಬಹುದೆನಿಸುತ್ತದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, 'ವಾಗ್ದೇವಿಗೂ' ಸರಿಪಡಿಸಿದ್ದೇನೆ. ಹಾಗೆ ಅಂತಿಮ ರೂಪವನ್ನು ವೆಬ್ ಸೈಟಿಗೂ ಹಾಕಿದ್ದೇನೆ - ನಾಗೇಶ ಮೈಸೂರು :-)

೨೮೨. ಸಹಸ್ರ-ಶೀರ್ಷ-ವದನಾ
ಸಮಸ್ತ ಪ್ರಪಂಚದ ಪ್ರತಿ ಧಾತು, ಬ್ರಹ್ಮಾಂಡ ಪ್ರಜ್ಞೆಯ ತುಣುಕೆ
ಅಗಣಿತ ಶಿರ ಕೈ ಕಾಲು ಮೊಗ, ನಾಸಿಕ ನೇತ್ರವೆಲ್ಲೆಡೆ ಬ್ರಹ್ಮಕೆ
ಏಕಕಾಲ ಸರ್ವ ಲೋಕಪಾಲ, ನಿಭಾವಣೆ ಬ್ರಹ್ಮ ಮೇಧಾವಿತನ
ಸಗುಣಾತ್ಮಕ ಸಹಸ್ರ ಶೀರ್ಷ ವದನ ವಾಗ್ದೇವಿಗೂ ಎಟುಕದ ಕ್ಷಣ!

Submitted by ಗಣೇಶ Mon, 08/05/2013 - 23:09

ಶ್ರೀಧರ್ ಜಿ, " ಪಂಚದಶೀ ಮಂತ್ರದ ಮೊದಲನೆಯ ಕೂಟವು ರಹಸ್ಯವಾಗಿ ೨೭೮ ರಿಂದ ೨೮೪ನೇ ನಾಮಗಳಲ್ಲಿ ಬಹಿರಂಗವಾಯಿತು. ಎರಡನೇ ಹಾಗು ಮೂರನೇ ಕೂಟಗಳು (ह स क ह ल ह्रीं। स क ल ह्रीं॥ - ಹ ಸ ಕ ಹ ಲ ಹ್ರೀಂ| ಸ ಕ ಲ ಹ್ರೀಂ|| ) ಇವುಗಳು ೨೮೧ರಿಂದ ೨೮೪ನೇ ನಾಮಗಳಲ್ಲಿ ಬಹಿರಂಗವಾಗಿವೆ." ‍ಇದು ಅರ್ಥವಾಗಲಿಲ್ಲ.

Submitted by makara Wed, 08/07/2013 - 09:06

ಗಣೇಶ್ ಜಿ,
ನೀವು ಕೇಳಿದ ಪ್ರಶ್ನೆಯನ್ನು ಉತ್ತರಿಸಲು ಪ್ರಯತ್ನಿಸುತ್ತೇನೆ. ನಾನು ಎಷ್ಟರ ಮಟ್ಟಿಗೆ ಅದಕ್ಕೆ ಸೂಕ್ತ ವ್ಯಕ್ತಿಯೋ ತಿಳಿಯದು; ಏಕೆಂದರೆ ಚೇಳಿನ ಮಂತ್ರವೇ ಸರಿಯಾಗಿ ಗೊತ್ತಿಲ್ಲದವನು ಹಾವಿನ ಹುತ್ತಕ್ಕೆ ಕೈಹಾಕಬಾರದಲ್ಲವೇ? ನಿಮ್ಮ ಪ್ರಶ್ನೆ ಈ ವಿಧವಾಗಿದೆ.
" ಪಂಚದಶೀ ಮಂತ್ರದ ಮೊದಲನೆಯ ಕೂಟವು ರಹಸ್ಯವಾಗಿ ೨೭೮ ರಿಂದ ೨೮೬ನೇ ನಾಮಗಳಲ್ಲಿ ಬಹಿರಂಗವಾಯಿತು. ಎರಡನೇ ಹಾಗು ಮೂರನೇ ಕೂಟಗಳು (ह स क ह ल ह्रीं। स क ल ह्रीं॥ - ಹ ಸ ಕ ಹ ಲ ಹ್ರೀಂ| ಸ ಕ ಲ ಹ್ರೀಂ|| ) ಇವುಗಳು ೨೮೧ರಿಂದ ೨೮೪ನೇ ನಾಮಗಳಲ್ಲಿ ಬಹಿರಂಗವಾಗಿವೆ." ‍ಇದು ಅರ್ಥವಾಗಲಿಲ್ಲ.
ನಾನು ಪ್ರಯೋಗಿಸಿರುವ ಮೇಲಿನ ವಾಕ್ಯದಲ್ಲಿ ಎರಡು ದೋಷಗಳಿವೆ. ಮೊದಲನೆಯದು ಆಲೋಚಿಸದೇ ಮತ್ತು ಕಣ್ತಪ್ಪಿನ ದೋಷದಿಂದ ತಪ್ಪಾಗಿ ಅಚ್ಚು ಮಾಡಿರುವುದು ಮತ್ತು ಎರಡನೆಯದು ವ್ಯಾಕರಣಕ್ಕೆ ಸಂಭಂದಿಸಿದ್ದು. ವಾಸ್ತವವಾಗಿ ೨೭೮ರಿಂದ ೨೮೦ರಲ್ಲಿ ಪಂಚದಶೀ ಮಂತ್ರದ ಮೊದಲನೇ ಕೂಟವಾದ ವಾಗ್ಭವ ಕೂಟದ ಅಕ್ಷರಗಳಾ ಕ-ಎ-ಈ-ಲ-ಹ್ರೀಂ (क-ए-ई-ल-ह्रीं) ಬಹಿರಂಗವಾಗಿವೆ. ಆಗ, ಸರಿಯಾದ ವ್ಯಾಕರಣಬದ್ಧ ಮತ್ತು ಅಚ್ಚು ತಪ್ಪಿಲ್ಲದ ಪ್ರಯೋಗವು ಈ ವಿಧವಾಗಿ ಇರುತ್ತದೆ,
"ಪಂಚದಶೀ ಮಂತ್ರದ ಮೊದಲನೆಯ ಕೂಟವು (ಕ-ಎ-ಈ-ಲ-ಹ್ರೀಂ क-ए-ई-ल-ह्रीं) ೨೭೮ರಿಂದ ೨೮೦ನೇ ನಾಮಗಳಲ್ಲಿ ರಹಸ್ಯವಾಗಿ ಬಹಿರಂಗಗೊಂಡರೆ(ಸೂಕ್ಷ್ಮವಾಗಿ ಅನಾವರಣಗೊಳಿಸಲ್ಪಟ್ಟರೆ), ಎರಡನೇ ಹಾಗು ಮೂರನೇ ಕೂಟಗಳು (ह स क ह ल ह्रीं। स क ल ह्रीं॥ - ಹ ಸ ಕ ಹ ಲ ಹ್ರೀಂ| ಸ ಕ ಲ ಹ್ರೀಂ|| ) ೨೮೧ರಿಂದ ೨೮೪ನೇ ನಾಮಗಳಲ್ಲಿ ಬಹಿರಂಗವಾಗಿವೆ.
ಇನ್ನು ಅವು ಹೇಗೆ ಬಹಿರಂಗವಾಗಿವೆ ಎನ್ನುವ ಪ್ರಶ್ನೆಗೆ ಬರೋಣ, ಅದಕ್ಕೂ ಮೊದಲು ಕೆಳಗಿನ ವಿಷಯಗಳನ್ನು ಗಮನಿಸಿ.
೧. ಶ್ರೀ ಮಾತಾ, ೨. ಶ್ರೀ ಮಹಾರಾಜ್ಞೀ http://sampada.net/b...
ಮೇಲಿನ ನಾಮಗಳ ವಿವರಣೆಯಲ್ಲಿನ ಕೆಳಗಿನ ವಾಕ್ಯವನ್ನು ಗಮನಿಸಿ.
ಷೋಡಶೀ ಮಂತ್ರದ ಹದಿನಾರನೇ ಬೀಜಾಕ್ಷರವಾದ ಶ್ರೀಂ(श्रीं) ಅನ್ನು ಶ್+ರ್+ಈ+ಮ್=ಶ್ರೀ ಎನ್ನುವುದು ಲಕ್ಷ್ಮಿಯ ಬೀಜಾಕ್ಷರವಾಗಿದ್ದು ಇದು ಪರಿಪಾಲನೆಯ ಬೀಜವಾಗಿದೆ; ಅದನ್ನು ಈ ನಾಮದ ಮೊದಲ ಅಕ್ಷರವು ಒಳಗೊಂಡಿದೆ.
ಅದೇ ವಿಧವಾಗಿ, ೮. ರಾಗಸ್ವರೂಪ-ಪಾಶಾಢ್ಯಾ, ೯. ಕ್ರೋಧಾಕಾರಙ್ಕುಶೋಜ್ವಲಾ, ೧೦. ಮನೋರೂಪೇಕ್ಷು-ಕೋದಂಡಾ, ೧೧. ಪಂಚತನ್ಮಾತ್ರ-ಸಾಯಕಾ http://sampada.net/b...
೮,೯,೧೦ ಮತ್ತು ೧೧ನೇ ನಾಮಗಳಲ್ಲಿ ರಹಸ್ಯವಾದ ಬೀಜಾಕ್ಷರಗಳು ಹುದುಗಿವೆ. ಉದಾಹರಣೆಗೆ, ಎಂಟನೇ ನಾಮದಲ್ಲಿ ಹ್ರೀಂ (ह्रीं) ಬೀಜಾಕ್ಷರವು ಅಡಗಿದೆ ಇದನ್ನು ಮಾಯಾಬೀಜವೆನ್ನುತ್ತಾರೆ. ಎಂಟನೆಯ ನಾಮವು ರಾಗಸ್ವ ಎಂದು ಪ್ರಾರಂಭವಾಗುತ್ತದೆ, ರ+ಅಗ+ಸ್ವ. ‘ಅಗ’ ಎಂದರೆ ಶಿವ ಮತ್ತು ಅವನ ಬೀಜವು ಹಾಂ (हां). ಇದನ್ನು ಹ ಎಂದು ತೆಗೆದುಕೊಳ್ಳಬೇಕು. ಮುಂದಿನದು ರ(र) ಮತ್ತು ಇದನ್ನು ಅದೇ ವಿಧದಲ್ಲಿ ತೆಗೆದುಕೊಳ್ಳಬೇಕು. ಸ್ವ ಎಂದರೆ ಈಂ(ईं), ಈ ಅಕ್ಷರದ ಮೇಲೆ ಬಿಂದು (ಚುಕ್ಕೆ) ಇದೆ ಎನ್ನುವುದನ್ನು ಗಮನಿಸಬೇಕು. ಆದ್ದರಿಂದ, ಹ+ರ+ಈಂ=ಹ್ರೀಂ ಮೂಲಕ ಹ್ರೀಂ ಬೀಜಾಕ್ಷರವು ಉಂಟಾಗುತ್ತದೆ. ಇದೇ ರೀತಿ ಉಳಿದ ಮೂರು ನಾಮಗಳಲ್ಲಿ ಬೀಜಾಕ್ಷರಗಳಾದ - ’ದ, ರ, ಕ, ಲ, ಯ, ಸ, ವ, ಆ, ಈ, ಊ’ಗಳು ರಹಸ್ಯವಾಗಿ ಹುದುಗಿವೆ. (ಆದ್ದರಿಂದ ಲಲಿತಾ ಸಹಸ್ರನಾಮವು ವೇದಗಳಿಗೆ ಸಮಾನವಾದುದೆಂದು ಪರಿಗಣಿತವಾಗಿದೆ. ಮುಖ್ಯವಾಗಿ ನೆನಪಿಡಬೇಕಾದದ್ದೇನೆಂದರೆ ಈ ಸಹಸ್ರನಾಮವನ್ನು ರಾಗ ಅಥವಾ ಸಂಗೀತದ ಸ್ವರಗಳ ಮೂಲಕ ಹಾಡಬಾರದು).
ಆ ಬೀಜಾಕ್ಷರಗಳನ್ನು ಕೆಳಗಿನ ವಿಧಾನದಂತೆ ತಿಳಿದುಕೊಳ್ಳಬಹುದೆನ್ನುವುದನ್ನು ಗಮನಿಸಿ:
ಕ್ರೋಧಾಕಾರಙ್ಕುಶೋಜ್ವಲಾ=ಕ್ರೋಧ+ಆಕಾರ+ಅಂಕುಶ+ಉಜ್ವಲಾ ....ಇದರಲ್ಲಿ ಕ, ರ, ಲ, ಆ, ವ, ಇವೆ.
ಮನೋರೂಪೇಕ್ಷು-ಕೋದಂಡಾ=ಮನೋ+*ರೂಪ+ಈಕ್ಷು+ಕೋದಂಡಾ...ಇದರಲ್ಲಿ ಈ, ಊ, ದ ಇವೆ. (*ರೂ=ರ್+ಊ)
ಪಂಚತನ್ಮಾತ್ರ-ಸಾಯಕಾ....ಇದರಲ್ಲಿನ ಸಾಯಕಾದಲ್ಲಿ ಸ ಮತ್ತು ಯ ಇವೆ.

ಇನ್ನು ಪಂಚದಶೀ ಮಂತ್ರದ ವಿವರಣೆಗೆ ಬರೋಣ
ಪಂಚದಶೀ ಮಂತ್ರ http://sampada.net/b...
ವಾಗ್ಭವ ಕೂಟವು ಐದು ಬೀಜಾಕ್ಷರಗಳನ್ನು ಹೊಂದಿದೆ ಅವುಗಳೆಂದರೆ - ಕ‍ಎ-ಈ‍ಲ-ಹ್ರೀಂ ( क‍-ऎ-ई‍-ल-ह्रीं )
ಮಧ್ಯ ಕೂಟವು ಆರು ಬೀಜಾಕ್ಷರಗಳನ್ನು ಹೊಂದಿದೆ ಅವುಗಳೆಂದರೆ - ಹ-ಸ-ಕ-ಹ-ಲ-ಹ್ರೀಂ (ह्-स- क- ह्-ल- ह्रीं)
ಶಕ್ತಿ ಕೂಟವು ನಾಲ್ಕು ಬೀಜಾಕ್ಷರಗಳನ್ನು ಹೊಂದಿದೆ ಅವುಗಳೆಂದರೆ - ಸ-ಕ-ಲ-ಹ್ರೀಂ ( स-क-ल-ह्रीं )

ಮೇಲೆ ತಿಳಿಸಿರುವುವು ಪಂಚದಶೀ ಮಂತ್ರದ ಹದಿನೈದು ಬೀಜಾಕ್ಷರಗಳು. ಈ ಮಂತ್ರವು ಈ ಬೀಜಗಳ ಮೂಲಕ ನೇರವಾಗಿ ವ್ಯಕ್ತವಾಗುವುದಿಲ್ಲ; ಆದರೆ ಸಂಸ್ಕೃತದ ಕೆಳಗಿನ ಶ್ಲೋಕದ ಮೂಲಕ ಪರೋಕ್ಷವಾಗಿ ವ್ಯಕ್ತವಾಗುತ್ತದೆ.

ಕಾಮೋ ಯೋನಿ: ಕಮಲಾ ವಜ್ರಪಾಣಿರ್ಗುಹಾಹಸಾ ಮತರಿಶ್ವಾಭ್ರಾಮಿಂದ್ರಃ |
ಪುನರ್ಗುಹಾಸಕಲ ಮಾಯಯಾ ಚ ಪುರುಚ್ಯೇಷಾ ವಿಶ್ವಮಾತಾದಿವಿದ್ಯಾ||

कामो योनि: कमला वज्रपाणिर्गुहाहसा मतरिश्वाभ्रामिन्द्रः।
पुनर्गुहासकल मायया च पुरुच्येषा विश्वमातादिविद्या॥

ಈ ಶ್ಲೋಕದಲ್ಲಿ ಪಂಚದಶೀ ಮಂತ್ರದ ಹದಿನೈದು ಬೀಜಾಕ್ಷರಗಳು ಹುದುಗಿವೆ. ಇದು ಈ ಮಂತ್ರವು ಅತ್ಯಂತ ನಿಗೂಢವಾದುದು ಎನ್ನುವುದರ ಸ್ಪಷ್ಟ ಸಂಕೇತವಾಗಿದೆ. ಈ ಮಂತ್ರದಿಂದ ಪಂಚದಶೀ ಮಂತ್ರದ ಹದಿನೈದು ಬೀಜಾಕ್ಷರಗಳನ್ನು ಹೀಗೆ ಪಡೆಯಲಾಗಿದೆ. ಕಾಮಾನ್ (ಕ), ಯೋನಿಃ (ಎ), ಕಮಲಾ (ಈ), ವಜ್ರಪಾಣಿರ್ (ಲ), ಗುಹಾ (ಹ್ರೀಂ), ಹ (ಹ), ಸಾ (ಸ), ಮತರಿಶ್ವಾ (ಕ), ಅಬ್ರಮ್ (ಹ), ಇಂದ್ರಃ (ಲ) l ಪುನರ್ (ಪುನರ್ ಎಂದರೆ ಮತ್ತೆ) ಗುಹಾ (ಹ್ರೀಂ), ಸಕಲ (ಸ, ಕ, ಲ) ಮಾಯಯಾ (ಹ್ರೀಂ) ಚ ಪುರುಚ್ಯೇಷಾ ವಿಶ್ವಮಾತಾದಿವಿದ್ಯಾ ll

ಮೊದಲನೇ ಕೂಟವು ಐದು ಬೀಜಾಕ್ಷರಗಳಾದ ಕ-ಎ-ಈ-ಲ-ಹ್ರೀಂ ಅನ್ನು ಒಳಗೊಂಡಿದೆ. ಎಲ್ಲಾ ಮೂರು ಕೂಟಗಳು ಹ್ರೀಂ ಬೀಜದಿಂದ ಕೊನೆಗೊಳ್ಳುತ್ತವೆ ಮತ್ತು ಹ್ರೀಂ ಅನ್ನು ಹೃಲ್ಲೇಖಾ ಎಂದು ಕರೆಯುತ್ತಾರೆ. ಈ ಹೃಲ್ಲೇಖಕ್ಕೆ ಬಹಳ ಮಹತ್ವವನ್ನು ಕೊಡಲಾಗಿದೆ ಮತ್ತು ಇದನ್ನು ಮಾಯಾ ಬೀಜವೆಂದೂ ಕರೆಯುತ್ತಾರೆ. ವಾಗ್ಭವ ಕೂಟವನ್ನು ಅಗ್ನಿ ಖಂಡ ಎಂದೂ ಕರೆಯಲಾಗುತ್ತದೆ ಏಕೆಂದರೆ ಇದು ಲಲಿತಾಂಬಿಕೆಯ ಜ್ಞಾನ ಶಕ್ತಿಯನ್ನು ಸೂಚಿಸುತ್ತದೆ. ಕ ಎಂದರೆ, ಸೃಷ್ಟಿಕರ್ತನಾದ ಬ್ರಹ್ಮ, ಎ ಎಂದರೆ ಜ್ಞಾನದ ಅಧಿದೇವತೆಯಾದ ಸರಸ್ವತೀ. ಈ ಎಂದರೆ ಲಕ್ಷ್ಮೀ, ಲ ಎಂದರೆ ಇಂದ್ರ ಮತ್ತು ಹ್ರೀಂ ಎಂದರೆ ಶಿವ ಮತ್ತು ಶಕ್ತಿಯರ ಐಕ್ಯವಾಗುವಿಕೆ. ಕ ಬೀಜವು ಕಾಮ ಕಲಾ ಬೀಜವಾದ ಕ್ಲೀಂ (क्लीं) ಎನ್ನುವುದರ ಮೂಲವಾಗಿದೆ.
ಎರಡನೆಯದಾದ ಕಾಮರಾಜ ಕೂಟದಲ್ಲಿ, ಹ ಎನ್ನುವುದು ಎರಡು ಬಾರಿ ಪುನರಾವೃತವಾಗಿದೆ. ಮೊದಲನೇ ಹ ಅಕ್ಷರವು ಶಿವನಾದರೆ ಎರಡನೆಯದು ಆಕಾಶ ತತ್ವವನ್ನು ಸೂಚಿಸುತ್ತದೆ (ಸೌಂದರ್ಯ ಲಹರಿಯ ೩೨ನೇ ಸ್ತೋತ್ರವು ಈ ಎರಡನೇ ಹ ಬೀಜಾಕ್ಷರವನ್ನು ಸೂರ್ಯನೆಂದು ಉಲ್ಲೇಖಿಸುತ್ತದೆ) ಮತ್ತು ಈ ಕೂಟದಲ್ಲಿರುವ ಸ ಅಕ್ಷರವು ವಿಷ್ಣುವನ್ನು ಸೂಚಿಸುತ್ತದೆ. ಆದರೆ ಪಂಚಭೂತಗಳ ಸಂಕೇತಾಕ್ಷರಗಳಲ್ಲಿ ಸ ಎನ್ನುವುದು ವಾಯು ತತ್ವವನ್ನು ಸೂಚಿಸುತ್ತದೆ. ಹ ಬೀಜವನ್ನು ನಪುಂಸಕ ಬೀಜವೆಂದೂ ಕರೆಯಲಾಗಿದೆ; ಬಹುಶಃ ಈ ಕಾರಣದಿಂದಾಗಿಯೇ ಹ್ರೀಂ ಬೀಜವು ಶಿವ-ಶಕ್ತಿಯರ ಐಕ್ಯತೆಯನ್ನು ಸೂಚಿಸುತ್ತದೆ. ಮೊದಲನೇ ಕೂಟದಲ್ಲಿ ಬ್ರಹ್ಮನನ್ನು ಹೆಸರಿಸಲಾಗಿದೆ, ಏಕೆಂದರೆ ಮೊದಲನೇ ಕೂಟವು ಸೃಷ್ಟಿಯನ್ನು ಸೂಚಿಸುತ್ತದೆ. ಸ್ಥಿತಿಪಾಲನೆಯ ಈ ಕೂಟದಲ್ಲಿ ವಿಷ್ಣುವನ್ನು ಹೆಸರಿಸಲಾಗಿದೆ, ಏಕೆಂದರೆ ಅವನು ಸ್ಥಿತಿಕರ್ತನಾಗಿದ್ದಾನೆ.
ಈ ಹಿನ್ನಲೆಯಲ್ಲಿ ನಿಮ್ಮ ಪ್ರಶ್ನೆಗೆ ಸಂಭಂದಿಸಿದಂತೆ; ೨೭೮ರಿಂದ ೨೮೦ನೇ ನಾಮಗಳು ಮತ್ತು ೨೮೧ರಿಂದ ೨೮೪ನೇ ನಾಮಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.
೨೭೮. ಪದ್ಮಾಸನಾ; ೨೭೯. ಭಗವತೀ; ೨೮೦. ಪದ್ಮನಾಭ ಸಹೋದರೀ;
ವಾಗ್ಭವ ಕೂಟವು ಐದು ಬೀಜಾಕ್ಷರಗಳನ್ನು ಹೊಂದಿದೆ ಅವುಗಳೆಂದರೆ - ಕ‍ಎ-ಈ‍ಲ-ಹ್ರೀಂ ( क‍-ए-ई‍-ल-ह्रीं )
ಪದ್ಮಾಸನಾ ಎಂದರೆ ಅದು ಪದ್ಮಾಸನ ಎಂದು ಕರೆಯಲ್ಪಡುವ ಸೃಷ್ಟಿಕರ್ತ ಬ್ರಹ್ಮನ ಹೆಂಡತಿಯೂ ಆಗಬಹುದು. ಮತ್ತು ಬ್ರಹ್ಮ ಮತ್ತು ಸರಸ್ವತಿಯರ ಬೀಜಾಕ್ಷರಗಳು ಕ್ರಮವಾಗಿ ’ಕ’ ಮತ್ತು ’ಎ’ ಆಗಿವೆ. ಪದ್ಮಾ (ಕಮಲಾ) ಅಂದರೆ ಪರೋಕ್ಷವಾಗಿ ಲಕ್ಷ್ಮಿಯನ್ನು ಸೂಚಿಸುತ್ತದೆ ಮತ್ತವಳ ಬೀಜಾಕ್ಷರವು ಈ ಆಗಿದೆ. ಅಥವಾ ಭಗವ’ತೀ’ ಮಂತ್ರದಲ್ಲಿನ ’ಈ’ ಲಕ್ಷ್ಮೀ ಬೀಜವಾಗಿದೆ. ಭಗವತೀ ಎಂದರೆ ಅದು ವಿಶ್ವಯೋನಿಯನ್ನೂ ಸೂಚಿಸುತ್ತದೆ ಮತ್ತು ಪಂಚದಶೀ ಮಂತ್ರದ ಪ್ರಕಾರ ಯೋನಿಯ ಬೀಜಾಕ್ಷರವು (ಎ) ಆಗಿದೆ. ಭಗ ಎಂದರೆ ಶ್ರೇಷ್ಠತೆ (ಸಾರ್ವಭೌಮತೆ), ಧರ್ಮನಿಷ್ಠೆ, ಪ್ರಸಿದ್ಧಿ (ಕೀರ್ತಿ), ಅಭ್ಯುದಯ (ಸಮೃದ್ಧಿ), ಬುದ್ಧಿವಂತಿಕೆ ಮತ್ತು ವಿವೇಕ (ವಿವೇಚನೆ); ಬಹುಶಃ ಇವು ಸರ್ವತ್ರ ವಿಜಯಿಯಾಗುವ ಇಂದ್ರನ ಗುಣಗಳನ್ನು ತಿಳಿಸಬಹುದು ಹಾಗಾಗಿ ಪರೋಕ್ಷವಾಗಿ ಇದು ಅವನ ಬೀಜಾಕ್ಷರವಾದ ’ಲ’ವನ್ನು ಸೂಚಿಸಬಹುದು. ಪದ್ಮನಾಭ ಸಹೋದರೀ ಎನ್ನುವಲ್ಲಿ ದೇವಿಯು ಭಗವಾನ್ ವಿಷ್ಣುವಿನ ತಂಗಿಯಾಗಿದ್ದಾಳೆ. ಬ್ರಹ್ಮ ಮತ್ತು ಲಕ್ಷ್ಮೀ, ವಿಷ್ಣು ಮತ್ತು ಉಮಾ, ಶಿವ ಮತ್ತು ಸರಸ್ವತೀ ಇವರುಗಳು ಅವಳಿಗಳಾಗಿದ್ದಾರೆ. ಅವರು ಕ್ರಮವಾಗಿ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಪ್ರತಿನಿಧಿಸುತ್ತಾರೆ. ಸರಸ್ವತಿಯು ಬ್ರಹ್ಮನನ್ನು ಮದುವೆಯಾದರೆ, ಲಕ್ಷ್ಮಿಯು ವಿಷ್ಣುವನ್ನು ಮತ್ತು ಉಮೆಯು ಶಿವನನ್ನು ಮದುವೆಯಾದಳು. ಸೃಷ್ಟಿ ಕ್ರಿಯೆಯಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಪರಸ್ಪರ ಅವಲಂಭಿಸಿರುವುದನ್ನು ಬಹಳ ಸುಂದರವಾಗಿ ಪುರಾಣವು ಈ ರೀತಿಯಾಗಿ ವಿವರಿಸುತ್ತದೆ. ಹಾಗಾಗಿ ಈ ನಾಮವು ಪರೋಕ್ಷವಾಗಿ ಸೃಷ್ಟಿ, ಸ್ಥಿತಿ ಮತ್ತು ಲಯಬೀಜವಾದ ಹ್ರೀಂ ಅನ್ನು ಸೂಚಿಸುತ್ತದೆ.

೨೮೧.ಉನ್ಮೇಷ-ನಿಮಿಷೋತ್ಪನ್ನ-ವಿಪನ್ನ-ಭುವಾನವಲೀ; ೨೮೨.ಸಹಸ್ರ-ಶೀರ್ಷ-ವದನಾ; ೨೮೩.ಸಹಸ್ರಾಕ್ಷೀ; ೨೮೪.ಸಹಸ್ರಪಾತ್;

ಮಧ್ಯ ಕೂಟವು ಆರು ಬೀಜಾಕ್ಷರಗಳನ್ನು ಹೊಂದಿದೆ ಅವುಗಳೆಂದರೆ - ಹ-ಸ-ಕ-ಹ-ಲ-ಹ್ರೀಂ (ह्-स- क- ह्-ल- ह्रीं)
ಶಕ್ತಿ ಕೂಟವು ನಾಲ್ಕು ಬೀಜಾಕ್ಷರಗಳನ್ನು ಹೊಂದಿದೆ ಅವುಗಳೆಂದರೆ - ಸ-ಕ-ಲ-ಹ್ರೀಂ ( स-क-ल-ह्रीं )
೨೮೧.ಉನ್ಮೇಷ-ನಿಮಿಷೋತ್ಪನ್ನ-ವಿಪನ್ನ-ಭುವಾನವಲೀ ಎನ್ನುವುದು ಸೃಷ್ಟಿ ಮತ್ತು ಲಯಗಳನ್ನು ಸೂಚಿಸುವುದರಿಂದ ಅದು ಸಹಜವಾಗಿಯೇ ಹ್ರೀಂ ಬೀಜಾಕ್ಷರಗಳನ್ನು ಪ್ರತಿನಿಧಿಸುತ್ತದೆ. ೨೮೨ ರಿಂದ ೨೮೪ರವರೆಗೆ ಸಹಸ್ರ ಎನ್ನುವಲ್ಲಿ ಸ,ಹ,ಗಳು ಬರುತ್ತವೆ. ಮತ್ತು ಇವೆಲ್ಲವೂ ಪರಬ್ರಹ್ಮದ ಕ್ರಿಯೆಯಾದ ಪಾಲನೆಯನ್ನು ಕುರಿತು ಹೇಳುವುದರಿಂದ ಅವುಗಳನ್ನು ಪರಿಪಾಲನೆಯ ಬೀಜವಾದ ಹ್ರೀಂನೊಂದಿಗೆ ಸಮೀಕರಿಸಬಹುದು. ಮೊದಲನೇ ನಾಮದಲ್ಲಿ ಸೃಷ್ಟಿಯನ್ನುಂಟು ಮಾಡಲು ಸೃಷ್ಟಿಕರ್ತನಾದ ಬ್ರಹ್ಮನ ಪ್ರಸ್ತಾಪವು ಪರೋಕ್ಷವಾಗಿ ಬರುವುದರಿಂದ ಅವನ ಬೀಜವಾದ ’ಕ’ವು ಇದರಲ್ಲಿ ಹುದುಗಿದೆ ಎಂದು ತಿಳಿಯಬಹುದೇನೋ? ಅದೇ ವಿಧವಾಗಿ ಸೃಷ್ಟಿ ಪ್ರಕ್ರಿಯೆಯು ಪಂಚಭೂತಗಳಿಂದ ಉಂಟಾಗುವುದರಿಂದ ಅವುಗಳ ಅಧಿದೇವತೆಯಾದ ಇಂದ್ರನ ಬೀಜವಾದ ’ಲ’ವನ್ನು ಇದರಲ್ಲಿ ಹುದುಗಿದೆ ಎಂದುಕೊಳ್ಳಬಹುದೇನೋ?
ಮೇಲಿನ ವಿಶ್ಲೇಷಣೆಗಳನ್ನು ನನಗೆ ತಿಳಿದಂತೆ ಮಾಡಿದ್ದೇನೆ; ಇದು ಸಮಂಜಸವಾದುದೆಂದು ಖಂಡಿತವಾಗಿಯೂ ಹೇಳಲಾರೆ; ಇದನ್ನು ಶ್ರೀಯುತ ವಿ. ರವಿಯವರನ್ನು ಕೇಳಿ ಸ್ಪಷ್ಟ ಪಡಿಸಿಕೊಳ್ಳಬೇಕು. ಅವರ ಮುಂದೆಯೂ ಈ ಪ್ರಶ್ನೆಯನ್ನಿಟ್ಟು ಅದಕ್ಕೆ ಸಮರ್ಪಕವಾದ ಉತ್ತರ ಬಂದ ಕೂಡಲೇ ಅದನ್ನು ಸಂಪದಿಗರೊಂದಿಗೆ ಹಂಚಿಕೊಳ್ಳುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ