೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೯೦ - ೨೯೪
Sakalāgama-saṃdoha-śukti-saṃpuṭa-mauktikā सकलागम-संदोह-शुक्ति-संपुट-मौक्तिका (290)
೨೯೦. ಸಕಲಾಗಮ-ಸಂದೋಹ-ಶುಕ್ತಿ-ಸಂಪುಟ-ಮೌಕ್ತಿಕಾ
ದೇವಿಯ ಮೂಗುತಿಯನ್ನು ಕುರಿತು ೨೦ನೇ ನಾಮದಲ್ಲಿ ಚರ್ಚಿಸಲಾಗಿದೆ. ಉಂಗುರಾಕಾರದ ಈ ಮೂಗುತಿಯ ಮುತ್ತಿನಿಂದ ಮಾಡಲ್ಪಟ್ಟಿದ್ದು ಅದು ವೇದಗಳು ವಿಧಿಸುವ ಆಗಮಗಳನ್ನು ಆವರಿಸಿದೆ (ಸುತ್ತುವರೆದಿದೆ).
ಆಗಮಗಳೆಂದರೆ ಸಾಂಪ್ರದಾಯಿಕ ತತ್ವ-ನಂಬಿಕೆಗಳಾಗಿದ್ದು ಅವುಗಳು ಧಾರ್ಮಿಕ ಕ್ರಿಯೆಗಳಲ್ಲಿ ಮತ್ತು ವಿಶೇಷವಾಗಿ ದೇವಸ್ಥಾನಗಳಲ್ಲಿ ಅನುಸರಿಸಬೇಕಾದ ಆಚರಣೆಗಳನ್ನು ಕುರಿತ ಕಟ್ಟುಪಾಡುಗಳಾಗಿವೆ. ಇದು ಬಹಳ ವಿಶಾಲವಾದ ವಿಷಯವಾಗಿದ್ದು ಇದು ವಾಸ್ತು ಶಾಸ್ತ್ರ, ಜ್ಯೋತಿಷ, ಖಗೋಳ ಶಾಸ್ತ್ರ ಮೊದಲಾದವುಗಳನ್ನು ಒಳಗೊಂಡಿದೆ. ಈ ಮುಂಚಿನ ನಾಮಗಳಲ್ಲಿ ವೇದಗಳೂ ಸಹ ಬ್ರಹ್ಮವನ್ನು ವಿವರಿಸಲಾರವು ಎಂದು ಹೇಳಿದೆ. ಇದೇ ವಿಧವಾಗಿ ಆಗಮಗಳೂ ಸಹ ಬ್ರಹ್ಮವನ್ನು ವಿವರಿಸಲಾರವು. ತೈತ್ತರೀಯ ಉಪನಿಷತ್ತಿನಲ್ಲಿ ಹೀಗೆ ಹೇಳಲಾಗಿದೆ, "ಶಬ್ದಗಳು ಮತ್ತು ಆಲೋಚನೆಗಳು ಸಹ ಬ್ರಹ್ಮದಿಂದ ಹಿಂದಿರುಗಿ ಬರುತ್ತವೆ ಏಕೆಂದರೆ ಅವು ಅಲ್ಲಿ ತಲುಪಲು ಸಾಧ್ಯವಿಲ್ಲ." ಆದ್ದರಿಂದ ಶಬ್ದಗಳಿಂದ ರಚಿತವಾದ ವೇದಗಳಿಂದ ಬ್ರಹ್ಮವನ್ನು ತಲುಪಲಾಗುವುದಿಲ್ಲ, ಬ್ರಹ್ಮವು ಶಬ್ದಗಳಿಗೆ ಅತೀತವಾಗಿದೆ. ಶಬ್ದಗಳು ಅಥವಾ ಆಲೋಚನೆಗಳ ಮೂಲಕ ಏನನ್ನಾದರೂ ಮನಗಾಣಬೇಕಾದರೆ ಅದರ ಪರಿಚಯ ಅಥವಾ ಅನುಭವವಿರಬೇಕಾಗುತ್ತದೆ. ಆದರೆ ಬ್ರಹ್ಮವನ್ನು ಈ ಮೂಲಕ ಅರಿಯಲಾಗದು. ಬ್ರಹ್ಮವನ್ನು ಅರಿಯಲು ಇರುವ ಏಕೈಕ ಮಾರ್ಗವೆಂದರೆ ಆಂತರಿಕ ಶೋಧನೆ. ಬ್ರಹ್ಮಕ್ಕೆ ಹೋಲಿಸಿದರೆ ವೇದ ಅಥವಾ ಶಾಸ್ತ್ರಗಳು ನಿಕೃಷ್ಟವೆನಿಸುತ್ತವೆ (ಅಲ್ಪವೆನಿಸುತ್ತವೆ).
ಆದ್ದರಿಂದ ಈ ನಾಮವು ವೇದ ಮತ್ತು ಶಾಸ್ತ್ರಗಳು ದೇವಿಯ ಚಿಕ್ಕದಾದ ಮೂಗುತಿಯ ಆವರಣದೊಳಗೆ ಇವೆ ಎಂದು ಹೇಳುತ್ತದೆ.
ಆಗಮಗಳ ಕುರಿತು ಇನ್ನಷ್ಟು ವಿವರಗಳು
ಅದ್ವೈತ ಸಿದ್ಧಾಂತವು ಆರು ವಿಧವಾದ ಜ್ಜಾನಗಳನ್ನು ಮಾನ್ಯ ಮಾಡುತ್ತದೆ. ಅವುಗಳೆಂದರೆ ನೇರವಾದ ಗ್ರಹಿಕೆ/ಅನುಭವ (ಪ್ರತ್ಯಕ್ಷ), ನಿಷ್ಕರ್ಷೆ ಅಥವಾ ಕ್ರಮಬದ್ಧ ಜ್ಞಾನ (ಅನುಮಾನ), ಶಬ್ದ ಪ್ರಮಾಣ (ಶಾಸ್ತ್ರ ಅಥವಾ ವೇದಗಳ ಪ್ರಮಾಣ), ಹೋಲಿಕೆ (ಉಪಮಾನ), ಪ್ರತಿಪಾದನೆ (ಅರ್ಥಾಪತ್ತಿ) ಮತ್ತು ಕಲ್ಪನೆಯಲ್ಲದ್ದು (ಅನುಪಲಬ್ಧಿ). ಶಬ್ದ ಎನ್ನುವುದು ನಂಬಲರ್ಹವಾದ ಜ್ಞಾನವಾಗಿದ್ದು ಇದನ್ನು ಆಗಮಗಳ ಮೂಲಕ ಪಡೆಯಬಹುದಾಗಿದೆ; ಈ ಅಧಿಕಾರಯುತ ಶಬ್ದ ಅಥವಾ ವಾಕ್ಯಗಳು ಎಲ್ಲಾ ವಿಧವಾದ ದೋಷಗಳಿಂದ ಮುಕ್ತವಾಗಿವೆ. ಆಗಮಗಳು ಜ್ಞಾನದ ಭಂಡಾರವಾಗಿದ್ದು ಇವುಗಳನ್ನು ಭಾರತೀಯ ತತ್ವಸಿದ್ಧಾಂತಗಳ ಬಹುತೇಕ ಪ್ರತಿಪಾದಕರು ಒಪ್ಪಿಕೊಳ್ಳುತ್ತಾರೆ. ಈ ಶಬ್ದಗಳು ಅಥವಾ ನುಡಿಗಳು ಭ್ರಮೆ, ತಪ್ಪು, ಕಪಟತೆ ಮತ್ತು ದೋಷಗಳಿಂದ ಮುಕ್ತವಾದ ಗ್ರಹಣೇಂದ್ರಿಯ ಮತ್ತು ಮನಸ್ಸುಳ್ಳ ವ್ಯಕ್ತಿಯ ನಂಬಲರ್ಹ ಗ್ರಹಿಕೆಗಳಾಗಿವೆ. ಆದ್ದರಿಂದ ಇಲ್ಲಿ ಕಾರಣವು ನಂಬಿಕೆಯ ಮೇಲೆ ಆಧಾರಿತವಾಗಿದೆ. ನಂಬಲರ್ಹವಾದುದರ ಮೇಲೆ ನಂಬಿಕೆಯಿರಿಸಿಕೊಳ್ಳವುದು ಅತಾರ್ಕಿಕವಲ್ಲ. ಸಾಮಾನ್ಯವಾಗಿ ಆಗಮಗಳೆಂದರೆ ಶ್ರುತಿ ವಾಕ್ಯಗಳು/ವೇದದ ನುಡಿಗಟ್ಟುಗಳು.
Puruṣārtha-pradā पुरुषार्थ-प्रदा (291)
೨೯೧. ಪುರುಷಾರ್ಥ-ಪ್ರದಾ
ಪುರುಷಾರ್ಥ ಎಂದರೆ ಮಾನವ ಜೀವನದ ಚತುರ್ವಿಧ ಮೌಲ್ಯಗಳು. ಅವೆಂದರೆ ಧರ್ಮ (ಸರಿಯಾದ ಮಾರ್ಗ ಅಥವಾ ಒಳ್ಳೆಯ ಗುಣಗಳು), ಅರ್ಥ (ಬಯಕೆ ಅಥವಾ ಉದ್ದೇಶ), ಕಾಮ (ಆಸೆ ಮತ್ತು ಆಕಾಂಕ್ಷೆಗಳು) ಮತ್ತು ಮೋಕ್ಷ (ಮುಕ್ತಿ). ಪುರಾತನ ಶಾಸ್ತ್ರಗಳು ಮಾನವನ ಈ ಮಹತ್ತರವಾದ ವಿಷಯಗಳನ್ನು ನಿಷೇಧಿಸುವುದಿಲ್ಲ ಎನ್ನುವುದು ಗಮನಾರ್ಹ. ಅವು ಇವುಗಳಿಗಳಲ್ಲಿ ಆಸಕ್ತಿ ತೆಳೆದು ಮೋಹಬಂಧನಕ್ಕೆ ಒಳಗಾಗಬಾರದೆಂದು ಹೇಳುತ್ತವೆ. ಆದರೆ ಹಲವಾರು ಸಂದರ್ಭಗಳಲ್ಲಿ ಇವನ್ನು ತಪ್ಪಾಗಿ ಉಲ್ಲೇಖಿಸಲಾಗುತ್ತದೆ. ದೇವಿಯು ಈ ಪುರಷಾರ್ಥಗಳನ್ನು ಪ್ರಸಾದಿಸುವವಳಾಗಿದ್ದಾಳೆ.
ಇನ್ನೊಂದು ವಿಧವಾದ ವಿಶ್ಲೇಷಣೆಯೂ ಇದೆ. ಪುರುಷ ಎಂದರೆ ಶಿವ (ಶಕ್ತಿ ಎಂದರೆ ಪ್ರಕೃತಿ), ಅರ್ಥ ಎಂದರೆ ಮುಕ್ತಿ ಮತ್ತು ಪ್ರದಾ ಎಂದರೆ ಕೊಡುವ. ಶಿವನು ಶಕ್ತಿಯ ಮೂಲಕ ಮುಕ್ತಿಯನ್ನು ಕರುಣಿಸುತ್ತಾನೆ. ಇಲ್ಲಿ ಶಕ್ತಿಯ ಮಹತ್ವವನ್ನು ಒತ್ತಿ ಹೇಳಲಾಗಿದೆ ಅಥವಾ ಶಿವ ಮತ್ತು ಶಕ್ತಿಯರ ಪರಸ್ಪರ ಅವಲಂಭನೆಯನ್ನು ಈ ನಾಮದ ಮೂಲಕ ಉಲ್ಲೇಖಿಸಲಾಗಿದೆ.
Pūrṇā पूर्णा (292)
೨೯೨. ಪೂರ್ಣಾ
ದೇವಿಯು ಎಲ್ಲಾ ವಿಧದಲ್ಲಿ ಪರಿಪೂರ್ಣಳಾಗಿದ್ದು (ಯಾವುದೇ ವಿಧವಾದ ಕಳಂಕಗಳಿಲ್ಲದೆ/ಲೋಪಗಳಿಲ್ಲದೆ) ಆಕೆಯು ಎಲ್ಲದರ ಒಟ್ಟು ಮೊತ್ತವಾಗಿದ್ದಾಳೆ. ಬೃಹದಾರಣ್ಯಕ ಉಪನಿಷತ್ತು ಹೀಗೆ ಹೇಳುತ್ತದೆ,
"पूर्णमदः पूर्णमिदं पूर्णात्पूर्ण्मुदच्यते। पूर्णस्य पूर्णमादाय पूर्णमेवावशिष्यते ॥
ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣ್ಮುದಚ್ಯತೇ| ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ || ಅಂದರೆ ಆ ಬ್ರಹ್ಮವು ಅನಂತವಾಗಿದೆ ಮತ್ತು ಈ ಬ್ರಹ್ಮಾಂಡವು (ಪ್ರಪಂಚವು) ಅನಂತವಾಗಿದೆ. ಒಂದು ಅನಂತತೆಯು ಇನ್ನೊಂದು ಅನಂತತೆಯ ಮೂಲಕ ಹೊರಹೊಮ್ಮುತ್ತದೆ. ಅದರ ನಂತರ ಒಂದು ಅನಂತವು ಮತ್ತೊಂದರ ಅನಂತತೆಯನ್ನು (ಪ್ರಪಂಚದ) ಪಡೆದು ಅದು ಅನಂತವಾಗಿಯೇ (ಪರಬ್ರಹ್ಮವಾಗಿಯೇ) ಉಳಿಯುತ್ತದೆ”. ಸರ್ವಾಂತರ್ಯಾಮಿಯಾದ ಪರಬ್ರಹ್ಮವನ್ನು ವರ್ಣಿಸಲು ಇದಕ್ಕಿಂತ ಉತ್ತಮವಾದ ಶ್ಲೋಕವಿಲ್ಲ. ದೇವಿಯು ಅದು (ಪರಬ್ರಹ್ಮ; ಏಕೆಂದರೆ ಪರಬ್ರಹ್ಮವೊಂದೇ ದೋಷರಹಿತವಾಗಿದ್ದು ಪರಿಪೂರ್ಣವಾಗಿರುತ್ತದೆ) ಆಗಿದ್ದಾಳೆ.
Bhoginī भोगिनी (293)
೨೯೩. ಭೋಗಿನೀ
ಭೋಗವೆಂದರೆ ಪ್ರಾಪಂಚಿಕ ಸುಖಗಳು. ದೇವಿಯು ಎಲ್ಲಾ ವಿಧವಾದ ಭೋಗಗಳನ್ನು ಅನುಭವಿಸುತ್ತಾಳೆ. ಆಕೆಯು ಭೋಗಗಳ ಮೂರ್ತರೂಪವಾಗಿದ್ದು, ತನ್ನ ಸೃಷ್ಟಿಯ ಭೋಗಗಳನ್ನು ಸವಿಯುತ್ತಾಳೆ. ಬಹುಶಃ ಈ ನಾಮವು ಹಿಂದಿನ ನಾಮದಿಂದ ವ್ಯುತ್ಪನ್ನವಾಗಿರಬೇಕು; ಏಕೆಂದರೆ ಪರಬ್ರಹ್ಮವು ಪರಬ್ರಹ್ಮದೆಡೆಗೇ ಸಾಗುತ್ತದೆ ಎನ್ನುವುದು ಹಿಂದಿನ ನಾಮದ ಅಭಿಪ್ರಾಯ. ಇಲ್ಲಿ ಭೋಗಗಳೆಂದರೆ ದೇವಿಯ ಸೃಷ್ಟಿಕಾರ್ಯಗಳು ಮತ್ತು ಆಕೆಯು ತನ್ನ ಸೃಷ್ಟಿಕ್ರಿಯೆಯ ಫಲಗಳನ್ನು ಆನಂದಿಸುತ್ತಾಳೆ. ಒಂದು ಹೇಳಿಕೆಯಿದೆ, ಅದೇನೆಂದರೆ ದೇವರು ನಮ್ಮ ಎಲ್ಲಾ ಕ್ರಿಯೆಗಳನ್ನು ಗಮನಿಸುತ್ತಾನೆ ಎನ್ನುವುದು.
ಭೋಗಿನೀ ಎನ್ನುವುದು ಸ್ತ್ರೀ ಸರ್ಪವೊಂದರ ಹೆಸರಾಗಿದ್ದು ಅದು ದೇವಿಯ ಕುಂಡಲಿನೀ ರೂಪವನ್ನು ಸೂಚಿಸುತ್ತದೆ. ಆದರೆ ಆ ವಿವರಣೆಯು ಈ ಸಂದರ್ಭದಲ್ಲಿ ಸಮಂಜಸವೆನಿಸುವುದಿಲ್ಲ.
Bhuvaneśvarī भुवनेश्वरी (294)
೨೯೪. ಭುವನೇಶ್ವರೀ
ಭುವನವೆಂದರೆ ಈ ಪ್ರಪಂಚ. ದೇವಿಯು ಈ ವಿಶ್ವವನ್ನು ಆಳುವವಳು (ಈಶ್ವರೀ). ಈ ಭೂಮಿಯನ್ನು ಒಳಗೊಂಡು ಏಳು ಪ್ರಪಂಚಗಳು ಕೆಳಗೆ ಇವೆ ಮತ್ತು ಈ ಭೂಮಿಯ ಮೇಲೆ ಏಳು ಪ್ರಪಂಚಗಳು ಇವೆ; ಇವೆಲ್ಲವನ್ನೂ ಒಟ್ಟಾಗಿ ವಿಶ್ವವೆನ್ನುತ್ತಾರೆ. ಈ ಹದಿನಾಲ್ಕರ ಸಂಖ್ಯೆಯು ಐದು ತತ್ವಗಳ ಮತ್ತು ಅಂತಃಕರಣಗಳ ಉತ್ಪನ್ನಗಳನ್ನು ಪ್ರತಿನಿಧಿಸುತ್ತದೆ.
’ಹ್ರೀಂ’ (ह्रीं) ಎನ್ನುವುದು ಭುವನೇಶ್ವರಿಯ ಬೀಜಾಕ್ಷರವಾಗಿದ್ದು; ಇದನ್ನು ಮಾಯಾ ಬೀಜವೆಂದೂ ಕರೆಯುತ್ತಾರೆ. ಈ ಬೀಜಕ್ಕೆ ಸೃಷ್ಟಿ ಮಾಡುವ ಶಕ್ತಿಯಿದ್ದು ಇದನ್ನು ಅತ್ಯಂತ ಶಕ್ತಿಯುತವಾದ ಬೀಜಗಳಲ್ಲೊಂದು ಎಂದು ಪರಿಗಣಿಸಲಾಗಿದೆ; ಏಕೆಂದರೆ ಇದು ಶಿವನ ಬೀಜಾಕ್ಷರವಾದ ’ಹ’ (ह), ಅಗ್ನಿಯ ಬೀಜಾಕ್ಷರವಾದ ’ರಂ’(रं) ಮತ್ತು ಕಾಮಕಲಾ ಬೀಜವಾದ ಈಂ (ईं) ಇವುಗಳ ಸಂಕೀರ್ಣವಾಗಿದೆ. ಯಾವಾಗ ದೇವಿಯು ಎಲ್ಲಾ ವಿಧವಾದ ಭೋಗಗಳನ್ನು ಅನುಭವಿಸುತ್ತಿದ್ದಾಳೆಯೋ ಆಗ ಆಕೆಯು ಖಂಡಿತವಾಗಿಯೂ ಮಹಾನ್ ಆಡಳಿತಗಾರಳಾಗಿರಬೇಕು; ಅದನ್ನೇ ಇಲ್ಲಿ ಒತ್ತುಕೊಟ್ಟು ಹೇಳಲಾಗಿದೆ. ಭುವನೇಶ್ವರನೆಂದರೆ ಶಿವನಾಗಿದ್ದು ಅವನ ಪತ್ನಿಯು ಭುವನೇಶ್ವರಿಯಾಗಿದ್ದಾಳೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 290-294 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ
ಶ್ರೀಧರರೆ, ಲಲಿತಾ ಸಹಸ್ರನಾಮ ೨೯೦ - ೨೯೪ ತಮ್ಮ ಪರಿಷ್ಕರಣೆಗೆ. ಕೊನೆಕೊನೆಗೆ ತುಸು ಹಿಡಿತ ಸಡಿಲಾದಂತೆ ಭಾಸವಾಯ್ತು ಅ ಬಹುಶಃ ನಿದ್ರೆಯ ಸೆಳೆತ? ನೀವು ಕಣ್ಣಾಡಿಸಿದ ಮೇಲೆ ಅವು ಹೇಗೂ ಸಿಗುತ್ತವಲ್ಲ, ತಿದ್ದುಪಡಿಗೆ :-)
ಲಲಿತಾ ಸಹಸ್ರನಾಮ ೨೯೦ - ೨೯೪
೨೯೦. ಸಕಲಾಗಮ-ಸಂದೋಹ-ಶುಕ್ತಿ-ಸಂಪುಟ-ಮೌಕ್ತಿಕಾ
ದೇವಿಯ ಕಿರು ಮೂಗುತಿಗೂ ಕಿರಿದು, ವೇದಾಗಮಕು ಬ್ರಹ್ಮ ವಿವರಿಸಲಾಗದು
ಶಬ್ದ ವಾಸ್ತು ಖಗೋಳ ಜ್ಯೋತಿಷಾಗಮಕ್ ಅತೀತ, ತಾನಾಗೆ ಬ್ರಹ್ಮತಲುಪದು
ಆಂತರಿಕ ಶೋಧನೆಗಷ್ಟೆ ಸಫಲ, ಬ್ರಹ್ಮ ಮಾರ್ಗದಲೊಯ್ದು ಆತ್ಮ ಸಾಕ್ಷಾತ್ಕಾರ
ಮಿಕ್ಕೆಲ್ಲಾಚರಣೆ ಕಟ್ಟುಪಾಡ ವ್ಯಾಪಾರ, ಬೆಳಗಲಷ್ಟೆ ಮುತ್ತಮೂಗುತಿಯುಂಗುರ!
ಆಗಮಗಳ ಕುರಿತು ಇನ್ನಷ್ಟು ವಿವರಗಳು
ಶ್ರುತಿ ವಾಕ್ಯ ವೇದ ನುಡಿಗಟ್ಟು ಸಾರ, ಆಗಮಗಳ ಜ್ಞಾನ ಭಂಡಾರ
ಭ್ರಮೆ ತಪ್ಪು ಕಪಟತೆ ದೋಷಮುಕ್ತ, ಗ್ರಹಣೇಂದ್ರಿಯಾ ಮನಸಾರ
ನಂಬಿಕೆಯಾಧಾರಿತ ಕಾರಣ, ನಂಬಲರ್ಹ ತರ್ಕ ಸಿದ್ದಾಂತ ಜ್ಞಾನ
ಶಬ್ದ ಪ್ರಮಾಣ ದೋಷ ವಿಮುಕ್ತ ಜ್ಞಾನ, ಆಗಮ ಮುಖೇನ ಗ್ರಹಣ!
೨೯೧. ಪುರುಷಾರ್ಥ-ಪ್ರದಾ
ಧರ್ಮ ಅರ್ಥ ಕಾಮ ಮೋಕ್ಷಗಳೆ ಪುರುಷಾರ್ಥ
ಮಾನವ ಜೀವನ ಚತುರ್ವಿಧ ಮೌಲ್ಯದಸಂಕೇತ
ಮೋಹಬಂಧನ ಬಿಡೆ ದೇವಿ ಪುರುಷಾರ್ಥ ಪ್ರದ
ಶಿವ ಪುರುಷ ಪ್ರಕೃತಿ ಶಕ್ತಿ ಸಂಗಮ ಮುಕ್ತಿ ಸದಾ!
೨೯೨. ಪೂರ್ಣಾ
ಬ್ರಹ್ಮದಂತೆ ಅನಂತ ಬ್ರಹ್ಮಾಂಡ, ಅನಂತದಿಂದನಂತ ಹೊರಹೊಮ್ಮುತ
ಅನಂತೇ ಅನಂತೋತ್ಪತ್ತಿಹಿಃ, ಅನಂತವಾಗುಳಿಯುವ ಪರಬ್ರಹ್ಮ ಸ್ವಗತ
ದೋಷರಹಿತ ಪರಿಪೂರ್ಣತೆ ಸ್ವತಃ, ಪರಬ್ರಹ್ಮದೆ ಮಾತ್ರ ಕಾಣುವ ಗುಣ
ಲೋಪ ಕಳಂಕರಹಿತಾ ಲಲಿತ, ತಾನೆ ಆಗೆಲ್ಲದರ ಮೊತ್ತ ದೇವಿಪೂರ್ಣಾ!
೨೯೩. ಭೋಗಿನೀ
ಭೋಗಿನೀ ನಾಗಿಣಿ ದೇವೀ, ಕುಂಡಲಿನೀ ಸಮಾನ ಸುಖ ಐಭೋಗ ಧಾರಿಣಿ
ಪ್ರಾಪಂಚಿಕ ಸುಖಭೋಗ ಮೂರ್ತರೂಪಿಣಿ, ಸವಿದೆ ಸ್ವಯಂಸೃಷ್ಟಿ ಭೋಗಿನೀ
ಸೃಜಿಸಿದ ಶಿಲ್ಪಿ ಸ್ವಸೃಷ್ಟಿಗೆ ತಾನೆ ಆನಂದ, ಅಂತೆಯೆ ಸೃಷ್ಟಿಕ್ರಿಯೆ ಫಲಸುಖ
ಅನುಭವಿಸುತಲೆ ಆನಂದಿಸುವಳೆ ಲಲಿತೆ, ಎಲ್ಲರ ಕ್ರಿಯೆ ಗಮನಿಸುತ ಲೆಕ್ಕ!
೨೯೪. ಭುವನೇಶ್ವರೀ
ಶಿವ ಭುವನೇಶ್ವರ, ಸತಿ ಶಕ್ತಿಯೆ ಭುವನೇಶ್ವರಿ ಭೋಗಿನಿಯಾಡಳಿತ ಅದ್ಭುತ
ಸೃಷ್ಟಿ ಶಕ್ತಿ ಮಾಯಾಬೀಜ, ಮಂತ್ರಾಕ್ಷರ ಶಿವ ಅಗ್ನಿ ಕಾಮಕಲಾ ಸಂಕೀರ್ಣತ
ಭುವನವೇ ಪ್ರಪಂಚ ಮೇಲೆ ಕೇಳಗೇಳೇಳು ಲೋಕದ ವಿಶ್ವವವನಾಳಿ ಈಶ್ವರಿ
ಪಂಚತತ್ವ ಅಂತಃಕರಣೋತ್ಪನ್ನ ಪ್ರತಿನಿಧಿ ಹದಿನಾಲ್ಕು, ವಿಶ್ವವೆ ಭುವನೇಶ್ವರೀ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ by nageshamysore
ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ
ನಾಗೇಶರೆ,
ನಿದ್ರಾದೇವಿ ನಿಮ್ಮನ್ನು ಆಲಿಂಗಿಸಲು ಬಂದರೆ ಲಲಿತಾ ದೇವಿ ಆಕೆಯನ್ನು ಸುಮ್ಮನೇ ಬಿಡುವಳೇ; ಖಂಡಿತಾ ಇಲ್ಲ ಆದ್ದರಿಂದ ಆಕೆ ನಿಮ್ಮಿಂದ ಒಳ್ಳೆಯ ಕವನಗಳನ್ನೇ ಬರೆಸಿದ್ದಾಳೆ. ಮೊದಲನೇ ಪಂಕ್ತಿ ಹಾಗೂ ಆಗಮದ ಕುರಿತಾದ ವಿವರಣೆಗಳ ಏಕೋ ಸ್ವಲ್ಪ ಗೋಜಲೆನಿಸಿದಂತೆ ಕಂಡರೂ ಸಹ ಉಳಿದಂತೆ ೨೯೧ರಿಂದ ೨೯೪ನೇ ಪಂಕ್ತಿಗಳು ಅರ್ಥಗರ್ಭಿತವಾಗಿ ಮೂಡಿ ಬಂದಿವೆ.
೨೯೦. ಸಕಲಾಗಮ-ಸಂದೋಹ-ಶುಕ್ತಿ-ಸಂಪುಟ-ಮೌಕ್ತಿಕಾ
ದೇವಿಯ ಕಿರು ಮೂಗುತಿಗೂ ಕಿರಿದು, ವೇದಾಗಮಕು ಬ್ರಹ್ಮ ವಿವರಿಸಲಾಗದು
(ವೇದ ಮತ್ತು ಆಗಮಗಳು ದೇವಿಯ ಮೂಗುತಿಗಿಂತಲೂ ಕಿರಿದು ಅದಕ್ಕೇ ಅವನ್ನು ದೇವಿಯ ಮೂಗುತಿಯು ಆವರಿಸಲ್ಪಟ್ಟಿದೆ ಎಂದು ವಿವರಣೆಯಲ್ಲಿ ಕೊಟ್ಟಿದೆ. ಮೇಲಿನ ಸಾಲು ಈ ಭಾವವನ್ನು ಹಿಡಿದಿಡುವಲ್ಲಿ ಅಷ್ಟು ಸಫಲವಾಗಿಲ್ಲ ಎನಿಸುತ್ತಿದೆ. ಅಲ್ಪ ಬದಲಾವಣೆ ಮಾಡಿದರೆ ಸರಿಹೋಗಬಹುದು).
ಶಬ್ದ ವಾಸ್ತು ಖಗೋಳ ಜ್ಯೋತಿಷಾಗಮಕ್ ಅತೀತ, ತಾನಾಗೆ ಬ್ರಹ್ಮತಲುಪದು
(ವಾಸ್ತು ಖಗೋಳ ಜ್ಯೋತಿಷಗಳಿಗತೀತ, ವಾಕ್ ಸಹ ಬ್ರಹ್ಮ ತಲುಪದು ಎನ್ನುವ ಅರ್ಥ ಬರುವಂತೆ ಮಾಡಿ, ಏಕೆಂದರ ಆಗಮ ಮೊದಲನೇ ಸಾಲಿನಲ್ಲಾಗಲೇ ಬಂದಿರುವುದರಿಂದ ಇಲ್ಲಿ ಅದು ಪುನರುಕ್ತಿಯಾಗುತ್ತದೆ. ಹಾಗಾಗಿ ಮೊದಲನೇ ಮತ್ತು ಎರಡನೇ ಸಾಲುಗಳನ್ನು ಸೂಕ್ತವಾಗಿ ಮಾರ್ಪಡಿಸಲು ಸಾಧ್ಯವೇ ನೋಡಿ).
ಆಂತರಿಕ ಶೋಧನೆಗಷ್ಟೆ ಸಫಲ, ಬ್ರಹ್ಮ ಮಾರ್ಗದಲೊಯ್ದು ಆತ್ಮ ಸಾಕ್ಷಾತ್ಕಾರ
ಶೋಧನೆಗಷ್ಟೆ=ಶೋಧನೆಯಷ್ಟೆ
ಮಿಕ್ಕೆಲ್ಲಾಚರಣೆ ಕಟ್ಟುಪಾಡ ವ್ಯಾಪಾರ, ಬೆಳಗಲಷ್ಟೆ ಮುತ್ತಮೂಗುತಿಯುಂಗುರ!
ಕಟ್ಟುಪಾಡ ವ್ಯಾಪಾರ=ಕಟ್ಟಳೆಗಳಚಾರ/ಕಟ್ಟುಪಾಡು ಆಚಾರ ಹೀಗೆ ಬದಲಾವಣೆ ಮಾಡಿದರೆ ಸರಿಹೋಗಬಹುದೇನೋ ನೋಡಿ.
ಆಗಮಗಳ ಕುರಿತಾದ ಇನ್ನಷ್ಟು ವಿವರಗಳ ಪಂಕ್ತಿಯನ್ನೂ ಸಹ ಸರಳಗೊಳಿಸಲು ಸಾಧ್ಯವೇ ನೋಡಿ. ಒಟ್ಟಾರೆ ಅರ್ಥವೇನೋ ಸರಿಯಾಗಿದೆ ಆದರೆ ಏಕೋ ಸರಾಗವಾಗಿ ಓದಿಸಿಕೊಂಡು ಹೋಗುತ್ತಿಲ್ಲ ಎನಿಸುತ್ತಿದೆ.
ಉಳಿದಂತೆ ಎಲ್ಲಾ ಪಂಕ್ತಿಗಳು ಚೆನ್ನಾಗಿವೆ. ಅವನ್ನು ಅಂತಿಮಗೊಳಿಸಬಹುದು.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ by makara
ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ
ಶ್ರೀಧರರೆ, ಲಲಿತಾ ಸಹಸ್ರನಾಮ ೨೯೦ ರ ಮತ್ತು ಆಗಮದ ವಿವರಣೆಯ ತಿದ್ದುಪಡಿಸಿದ ರೂಪ. ಮಾರ್ಪಡಿಸುವ ಬದಲು ಹೆಚ್ಚುಕಡಿಮೆ, ಪೂರಾ ಬದಲಿಸಿಬಿಟ್ಟಿದ್ದೇನೆ :-)
೨೯೦. ಸಕಲಾಗಮ-ಸಂದೋಹ-ಶುಕ್ತಿ-ಸಂಪುಟ-ಮೌಕ್ತಿಕಾ
ಪರಬ್ರಹ್ಮ ಲಲಿತಾ ವೈಶಾಲ್ಯ, ವೇದಾಗಮದಿಂ ವಿವರಿಸಲಸದಳ
ದೇವಿಯ ಕಿರುಮೂಗುತಿಯಷ್ಟೆ, ಸುತ್ತಾವರಿಸುತ ವೇದಾಗಮಗಳ
ವಾಕ್ವಾಸ್ತು ಖಗೋಳ ಜೋತಿಷ, ಕಟ್ಟುಪಾಡು ಬ್ರಹ್ಮ ತಲುಪದ ಸಾರ
ಆಂತರಿಕ ಶೋಧನೆಯಷ್ಟೆ ಸಫಲ, ಬ್ರಹ್ಮಮಾರ್ಗ ಆತ್ಮ ಸಾಕ್ಷಾತ್ಕಾರ!
ಆಗಮಗಳ ಕುರಿತು ಇನ್ನಷ್ಟು ವಿವರಗಳು
ಪ್ರತ್ಯಕ್ಷಾನುಭವ ನೇರ ಗ್ರಹಿಕೆ, ನಿಷ್ಕರ್ಷೆ- ಕ್ರಮಬದ್ದ ಜ್ಞಾನಾ ಅನುಮಾನ
ಪ್ರತಿಪಾದನೆ ಅರ್ಥಾಪತ್ತಿ, ವಾಸ್ತವ ಅನುಪಲಬ್ದಿ, ಹೋಲಿಕೆ ಉಪಮಾನ
ಶಾಸ್ತ್ರವೇದದೆ ಶಬ್ದ ಪ್ರಮಾಣ, ಈ ಷಡ್ಜ್ಞಾನ ದೋಷಾತೀತ ಜ್ಞಾನ ಭಂಢಾರ
ನಂಬಲರ್ಹ ತಕ್ಕ ಕಾರಣ ತರ್ಕ, ಶ್ರುತಿ ವಾಕ್ಯ ವೇದ ನುಡಿಗಟ್ಟೆ ಆಗಮ ಸಾರ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ by nageshamysore
ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ
ಸಂಪೂರ್ಣ ಬದಲಾದ ರೂಪ ಈಗ ಮನಸ್ಸಿಗೆ ಮುದ ನೀಡುತ್ತಿದೆ ನಾಗೇಶರೆ. ಅದಕ್ಕಾಗಿ ಅಭಿನಂದನೆಗಳು.
೨೯೦. ಸಕಲಾಗಮ-ಸಂದೋಹ-ಶುಕ್ತಿ-ಸಂಪುಟ-ಮೌಕ್ತಿಕಾ
ಪರಬ್ರಹ್ಮ ಲಲಿತಾ ವೈಶಾಲ್ಯ, ವೇದಾಗಮದಿಂ ವಿವರಿಸಲಸದಳ
ದೇವಿಯ ಕಿರುಮೂಗುತಿಯಷ್ಟೆ, ಸುತ್ತಾವರಿಸುತ ವೇದಾಗಮಗಳ
ವಾಕ್ವಾಸ್ತು ಖಗೋಳ ಜೋತಿಷ, ಕಟ್ಟುಪಾಡು ಬ್ರಹ್ಮ ತಲುಪದ ಸಾರ
ಕಟ್ಟುಪಾಡು ಬದಲು ಶಾಸ್ತ್ರಾಚಾರ ಉಪಯೋಗಿಸಬಹುದು. ಏಕೆಂದರೆ ಕಟ್ಟುಪಾಡುಗಳೆಂದರೆ ಶಾಸ್ತ್ರಗಳಲ್ಲಿ ವಿಧಿಸಿದ ಆಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸುವುದೇ ಆಗಿದೆ.
ಆಂತರಿಕ ಶೋಧನೆಯಷ್ಟೆ ಸಫಲ, ಬ್ರಹ್ಮಮಾರ್ಗ ಆತ್ಮ ಸಾಕ್ಷಾತ್ಕಾರ!
ಆಗಮಗಳ ಕುರಿತು ಇನ್ನಷ್ಟು ವಿವರಗಳು
ಪ್ರತ್ಯಕ್ಷಾನುಭವ ನೇರ ಗ್ರಹಿಕೆ, ನಿಷ್ಕರ್ಷೆ- ಕ್ರಮಬದ್ದ ಜ್ಞಾನಾ ಅನುಮಾನ
ಜ್ಞಾನಾ=ಜ್ಞಾನ
ಪ್ರತಿಪಾದನೆ ಅರ್ಥಾಪತ್ತಿ, ವಾಸ್ತವ ಅನುಪಲಬ್ದಿ, ಹೋಲಿಕೆ ಉಪಮಾನ
ಮೇಲಿನೆರಡು ಸಾಲುಗಳು ಸರಿಯಾಗಿ ಮೂಡಿ ಬಂದಿವೆ.
ಶಾಸ್ತ್ರವೇದದೆ ಶಬ್ದ ಪ್ರಮಾಣ, ಈ ಷಡ್ಜ್ಞಾನ ದೋಷಾತೀತ ಜ್ಞಾನ ಭಂಢಾರ
ನಂಬಲರ್ಹ ತಕ್ಕ ಕಾರಣ ತರ್ಕ, ಶ್ರುತಿ ವಾಕ್ಯ ವೇದ ನುಡಿಗಟ್ಟೆ ಆಗಮ ಸಾರ!
ಕಡೆಯ ಎರಡು ಸಾಲುಗಳಲ್ಲಿ ಮತ್ತೆ ಸ್ವಲ್ಪ ಗೊಂದಲವಿದೆ. ಕೆಳಗಿನ ಸಾಲುಗಳನ್ನು ಮತ್ತೊಮ್ಮೆ ಓದಿಕೊಂಡರೆ ಅದನ್ನು ಹೇಗೆ ತಿದ್ದಬಹುದೆಂಬ ಉಪಾಯ ನಿಮಗೆ ಸಿಗಬಹುದು ಎಂದುಕೊಳ್ಳುತ್ತೇನೆ.
"ಈ ಶಬ್ದಗಳು ಅಥವಾ ನುಡಿಗಳು ಭ್ರಮೆ, ತಪ್ಪು, ಕಪಟತೆ ಮತ್ತು ದೋಷಗಳಿಂದ ಮುಕ್ತವಾದ ಗ್ರಹಣೇಂದ್ರಿಯ ಮತ್ತು ಮನಸ್ಸುಳ್ಳ ವ್ಯಕ್ತಿಯ ನಂಬಲರ್ಹ ಗ್ರಹಿಕೆಗಳಾಗಿವೆ. ಆದ್ದರಿಂದ ಇಲ್ಲಿ ಕಾರಣವು ನಂಬಿಕೆಯ ಮೇಲೆ ಆಧಾರಿತವಾಗಿದೆ. ನಂಬಲರ್ಹವಾದುದರ ಮೇಲೆ ನಂಬಿಕೆಯಿರಿಸಿಕೊಳ್ಳವುದು ಅತಾರ್ಕಿಕವಲ್ಲ. ಸಾಮಾನ್ಯವಾಗಿ ಆಗಮಗಳೆಂದರೆ ಶ್ರುತಿ ವಾಕ್ಯಗಳು/ವೇದದ ನುಡಿಗಟ್ಟುಗಳು."
ಮೇಲಿನ ವಾಕ್ಯಗಳನ್ನು ಬೇರೆ ವಿಧವಾಗಿ ಹೇಳಿದರೆ ಅದರ ಭಾವವು ಹೀಗಿದೆ. ಶಬ್ದ ಪ್ರಮಾಣವೆಂದರೆ ವೇದಗಳಲ್ಲಿ ಉಲ್ಲೇಖಿತವಾಗಿರುವ ವಾಕ್ಯಗಳು ಅಥವಾ ನುಡಿಗಟ್ಟುಗಳು. ಅವನ್ನು ದಾಖಲಿಸಿದ ವ್ಯಕ್ತಿಗಳು ಎಲ್ಲಾ ವಿಧವಾದ ದೋಷಗಳಿಂದ (ಭ್ರಮೆ, ತಪ್ಪು, ಕಪಟತೆ ಮೊದಲಾದ ದೋಷಗಳಿಂದ) ಮುಕ್ತವಾಗಿದ್ದರು ಹಾಗಾಗಿ ಅವುಗಳಲ್ಲಿನ ವಿಷಯಗಳು ನಂಬಲರ್ಹವಾಗಿವೆ. ಆದ್ದರಿಂದ ನಂಬಲರ್ಹವಾದುದರ ಮೇಲೆ ನಂಬಿಕೆಯನ್ನಿರಿಸಿಕೊಳ್ಳುವುದು ತರ್ಕಬದ್ಧವಾಗಿಯೇ ಇದೆ (ಅತಾರ್ಕಿಕವಲ್ಲ) ಎಂದು ಹೇಳಲಾಗಿದೆ. ಈ ಶಬ್ದ ಅಥವಾ ಶ್ರುತಿ ವಾಕ್ಯಗಳ ಅಥವಾ ವೇದಗಳಲ್ಲಿನ ನುಡಿಗಟ್ಟುಗಳ ಸಾರವೇ ಆಗಮಗಳು.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ by makara
ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ
ಈ ಬಾರಿಯ ತಿದ್ದುಪಡಿ ಸೂಕ್ತವಾಗಿದೆಯೆ ನೋಡಿ ಶ್ರೀಧರರೆ. ನಿಮ್ಮ ಹೆಚ್ಚಿನ ವಿವರಣೆಯಿರದಿದ್ದರೆ ಕಷ್ಟವಾಗುತ್ತಿತ್ತು - ನನಗೆ 'ದೋಷಮುಕ್ತ' ವ್ಯಕ್ತಿಯ ಕುರಿತಾದದ್ದು ಎಂದು ಗೊತ್ತಾಗಿರಲೆ ಇಲ್ಲ. ಷಡ್ ಜ್ಞಾನಗಳೆ ದೋಷಮುಕ್ತ ಎಂದು ಅರ್ಥೈಸಿಕೊಂಡಿದ್ದೆ. ನಿಮ್ಮ ವಿವರಣೆಯಿಂದ ಅದು ತಿದ್ದುಪಡಿಯಾಯ್ತು, ಧನ್ಯವಾದಗಳು!
೨೯೦. ಸಕಲಾಗಮ-ಸಂದೋಹ-ಶುಕ್ತಿ-ಸಂಪುಟ-ಮೌಕ್ತಿಕಾ
ಪರಬ್ರಹ್ಮ ಲಲಿತಾ ವೈಶಾಲ್ಯ, ವೇದಾಗಮದಿಂ ವಿವರಿಸಲಸದಳ
ದೇವಿಯ ಕಿರುಮೂಗುತಿಯಷ್ಟೆ, ಸುತ್ತಾವರಿಸುತ ವೇದಾಗಮಗಳ
ವಾಕ್ವಾಸ್ತು ಖಗೋಳ ಜೋತಿಷ, ಶಾಸ್ತ್ರಾಚಾರ ಬ್ರಹ್ಮ ತಲುಪದ ಸಾರ
ಆಂತರಿಕ ಶೋಧನೆಯಷ್ಟೆ ಸಫಲ, ಬ್ರಹ್ಮಮಾರ್ಗ ಆತ್ಮ ಸಾಕ್ಷಾತ್ಕಾರ!
ಆಗಮಗಳ ಕುರಿತು ಇನ್ನಷ್ಟು ವಿವರಗಳು
ಪ್ರತ್ಯಕ್ಷಾನುಭವ ನೇರ ಗ್ರಹಿಕೆ, ನಿಷ್ಕರ್ಷೆ- ಕ್ರಮಬದ್ದ ಜ್ಞಾನ ಅನುಮಾನ
ಪ್ರತಿಪಾದನೆ ಅರ್ಥಾಪತ್ತಿ, ವಾಸ್ತವ ಅನುಪಲಬ್ದಿ, ಹೋಲಿಕೆ ಉಪಮಾನ
ಶಾಸ್ತ್ರವೇದ ಶಬ್ದ ಪ್ರಮಾಣ, ಸಂಗ್ರಹಿಸಿದ ಮಹಾತ್ಮ ಸಕಲ ದೋಷಮುಕ್ತ
ಶೃತಿ ವಾಕ್ಯಗಳ ಸಾರವೆ ಆಗಮ, ನಂಬಲರ್ಹ ಮೂಲ ತರ್ಕ ಗೌರವಿಸುತ!
ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು
In reply to ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ by nageshamysore
ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ
ನಾಗೇಶರೆ,
ಈಗ ಹೆಚ್ಚು ಅರ್ಥಪೂರ್ಣವಾಗಿವೆ ಎರಡೂ ಕವನಗಳು. ಎಷ್ಟೇ ಆದರೂ ನೀವು ಹಠಬಿಡದ ತಿವಿಕ್ರಮನಂತೆ ಛಲದಂಕ ಮಲ್ಲರಲ್ಲವೇ? ಹಿಡಿದ ಕಾರ್ಯವನ್ನು ಸಾಧಿಸುವವರೆಗೆ ಬಿಡುವವರಲ್ಲ ಎಂದು ಅರ್ಥವಾಯಿತು. :))
ವಂದನಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ by makara
ಉ: ೮೦. ಶ್ರೀ ಲಲಿತಾ ಸಹಸ್ರನಾಮ ೨೯೦ರಿಂದ ೨೯೪ನೇ ನಾಮಗಳ ವಿವರಣೆ
ಶ್ರೀಧರರೆ, ಮೊದಲೊಮ್ಮೆ ಹೇಳಿದ್ದಂತೆ - 'start with a wrong assumption to reach right conclusion' (ತಪ್ಪನಿಸಿಕೆಯೊಂದಿಗೆ ಆರಂಭಿಸಿದರೂ ಕೂಡಾ, ಸೂಕ್ತವಾದ ತೀರ್ಮಾನಕ್ಕೆ ತಲುಪಿದರೆ ಸರಿ). ಕಲಿಯುವಾಗ ತಪ್ಪು ಮಾಡಲು (ತನ್ಮೂಲಕ ಕಲಿತು ಸರಿಯಾಗಲಿಕ್ಕೆ) ಹೆದರದ ಧೈರ್ಯವಿರಬೇಕು ಎನ್ನುವ ಭಂಡ ವಾದದೊಂದಿಗೆ ಮುನ್ನುಗ್ಗುತ್ತಿದ್ದೇನೆ. ಬುದ್ದಿವಂತರು ಅಳುಕುವ ಕಡೆ ಮೂರ್ಖರು ಲಗ್ಗೆಯಿಡುತ್ತಾರೆ - ಎನ್ನುವಂತಾಗದಿದ್ದರೆ, ಸರಿ :-)
ಈ ಕೊಂಡಿಯನ್ನು ಅಂತಿಮಗೊಳಿಸೋಣ. ನಾನು ವೆಬ್ಸೈಟಿಗೆ ಬಿಡುಗಡೆ ಮಾಡುತ್ತಿದ್ದೇನೆ.