೮೩. ಶ್ರೀ ಲಲಿತಾ ಸಹಸ್ರನಾಮ ೩೦೧ನೇ ನಾಮದ ವಿವರಣೆ
ಲಲಿತಾ ಸಹಸ್ರನಾಮ - ೩೦೧
Hrīṁkārī ह्रींकारी (301)
೩೦೧. ಹ್ರೀಂಕಾರೀ
ದೇವಿಯು ’ಹ್ರೀಂ’ ಮಾಯಾ ಬೀಜಾಕ್ಷರದ ರೂಪದಲ್ಲಿದರುತ್ತಾಳೆ. ಹ್ರೀಂ ಅನ್ನು ಶಾಕ್ತ ಪ್ರಣವ ಅಥವಾ ಶಕ್ತಿ ಪ್ರಣವ ಎಂದೂ ಸಹ ಕರೆಯುತ್ತಾರೆ; ಇದರರ್ಥ ಶಕ್ತಿಯ ಆರಾಧಕರು ಹ್ರೀಂ ಬೀಜಾಕ್ಷರವನ್ನು ಶಕ್ತಿಯ ಪ್ರಣವ ಬೀಜವೆಂದು ಕರೆಯುತ್ತಾರೆ. ಇದನ್ನು ಭುವನೇಶ್ವರೀ ಬೀಜವೆಂದೂ (ನಾಮ ೨೯೪ ಭುವನೇಶ್ವರೀ ಆಗಿದೆ) ಕರೆಯುತ್ತಾರೆ. ಪ್ರಣವವೆಂದರೆ ಪರಮೋನ್ನತವಾದ ॐ (ಓಂ). ಹ್ರೀಂ ಬೀಜದ ಶಕ್ತಿಯು ॐನಷ್ಟೇ ಶಕ್ತಿಶಾಲಿಯಾಗಿದೆ. ಆದ್ದರಿಂದ ಪಂಚದಶೀ ಮಂತ್ರದ ಪ್ರತಿಯೊಂದು ಕೂಟವೂ ಹ್ರೀಂ ಬೀಜದೊಂದಿಗೆ ಮುಕ್ತಾಯವಾಗುತ್ತದೆ. ಹ್ರೀಂ ಎನ್ನುವುದು ಹ (ह) + ರ (र) + ಈ (ई) + ಮ (म) + ಬಿಂದು (') ಇವುಗಳ ಸಂಕೀರ್ಣವಾಗಿದೆ. ‘ಹ’ ಅಕ್ಷರವು ಆವಿರ್ಭಾವವನ್ನು (ಅನಾವರಣವನ್ನು) ಸೂಚಿಸಿದರೆ, ‘ರ’ ಅಕ್ಷರವು ಒಳಗೆಳೆದುಕೊಳ್ಳುವಿಕೆಯನ್ನು (ಮಾಯೆಯಿಂದ ಒಳಸೆಳೆದುಕೊಳ್ಳುವಿಕೆ) ಸೂಚಿಸುತ್ತದೆ, ‘ಈ’ ಅಕ್ಷರವು ಪರಿಪೂರ್ಣತೆಯನ್ನು ಸಂಕೇತಿಸಿದರೆ, ಬಿಂದುವು (ಬೀಜಾಕ್ಷರದ ಮೇಲಿರುವ ಚುಕ್ಕಿಯು) ಇವು ಮೂರನ್ನೂ ನಿಯಂತ್ರಿಸುತ್ತದೆ. ಆದ್ದರಿಂದ ‘ಹ್ರೀಂ’ ಎನ್ನುವುದರ ಒಟ್ಟು ಅರ್ಥವು ಆವಿರ್ಭಾವ, ಒಳಗೆಳೆದುಕೊಳ್ಳುವಿಕೆ ಮತ್ತು ಪರಿಪೂರ್ಣತೆಯಾಗಿದೆ. ಪರಿಪೂರ್ಣತೆಯನ್ನು ಒಳಗೊಂಡ ಮೂರ್ತರೂಪವೇ ‘ಹ್ರೀಂ’ ಬೀಜವೆನ್ನುವುದು ಇದರ ಶಬ್ದಶಃ ಅರ್ಥವಾಗಿದೆ. ಇದರಿಂದ ವ್ಯಕ್ತವಾಗುವುದೇನೆಂದರೆ ಮಾಯಾ ಅಥವಾ ಭ್ರಮೆಯು ಪರಬ್ರಹ್ಮದ ಸುತ್ತಲೂ ಮುಸುಕನ್ನು ಉಂಟುಮಾಡುತ್ತದೆ ಮತ್ತು ಈ ಮುಸುಕನ್ನು ಒಬ್ಬನು ಶಕ್ತಿಯ ಪರಮಚೈತನ್ಯದ ಅರಿವುಂಟಾದಾಗ ಹೋಗಲಾಡಿಸಬಹುದು ಅಥವಾ ಸರಿಸಬಹುದು. ಎಲ್ಲಿಯವರೆಗೆ ’ಕ್ರಿಯಾ ಶಕ್ತಿಯ’ನ್ನು ಅಥವಾ ಶಕ್ತಿ ದೇವಿಯನ್ನು ಸಂಪೂರ್ಣವಾಗಿ ಅರಿಯಲಾಗದೋ ಅಲ್ಲಿಯವರೆಗೆ ಜಡಶಕ್ತಿ ಸ್ವರೂಪಿಯಾದ ಶಿವನ ನಾಡಿಯನ್ನು ತಿಳಿಯಲಾಗದು. ವಾಸ್ತವವಾಗಿ ಈ ಬೀಜವನ್ನು ಶಿವ-ಶಕ್ತಿ ಬೀಜವೆನ್ನುತ್ತಾರೆ, ಏಕೆಂದರೆ ’ಹ’ವು ಶಿವನ ಬೀಜಾಕ್ಷರವನ್ನು ಪ್ರತಿನಿಧಿಸಿದರೆ ಕಾಮಕಲಾ ಬೀಜವಾದ ‘ಈಂ’ (ईं) ಶಕ್ತಿಯನ್ನು ಪ್ರತಿನಿಧಿಸುತ್ತದೆ. ಬೀಜಾಕ್ಷರ ’ರ’ವು ಇವೆರಡೂ ಬೀಜಾಕ್ಷರವನ್ನು ಒಂದುಗೂಡಿಸಿ ಇದನ್ನು ಶಿವಶಕ್ತಿ ಬೀಜವನ್ನಾಗಿಸುತ್ತದೆ. ಯಾವುದೇ ಬೀಜಾಕ್ಷರದಲ್ಲಿ ’ರ’ ಅಕ್ಷರದ ಪಾತ್ರವು ಮಹತ್ವದ್ದಾಗಿರುತ್ತದೆ, ಏಕೆಂದರೆ ’ರ’ ಅಕ್ಷರದ ಧ್ವನಿಯು ಧ್ವನಿಗಳಲ್ಲೆಲ್ಲಾ ಪ್ರಮುಖನೆನಿಸಿದೆ. ಯಾವಾಗಲಾದರೂ ’ಹ್ರೀಂ’ ಅನ್ನು ಉಚ್ಛರಿಸಿದರೆ ಅದು ಶಾಂತಿ ಮತ್ತು ಮಂಗಳವನ್ನು ಉಂಟುಮಾಡುತ್ತದೆ.
ಯಾವುದೇ ಬೀಜಾಕ್ಷರದಲ್ಲಿ ಬಿಂದುವು ಪ್ರಮುಖವಾಗಿದೆ ಮತ್ತು ಬಹುತೇಕ ಬೀಜಾಕ್ಷರಗಳು ಬಿಂದುವನ್ನು ಹೊಂದಿವೆ. ಉದಾಹರಣೆಗೆ, ಹ(ह) ಅಕ್ಷರವನ್ನು ತೆಗೆದುಕೊಳ್ಳಿ ಅದರ ಮೇಲೆ ಒಂದು ಬಿಂದುವನ್ನಿರಿಸಿದಾಗ ಅದು ಹಂ(हं) ಆಗುತ್ತದೆ. ಬಿಂದುವಿಲ್ಲದೇ ಹೋದರೆ ಅಕ್ಷರವೊಂದು ಕೇವಲ ಅಕ್ಷರವಾಗಿಯೇ ಉಳಿದು ಬಿಡುತ್ತದೆ ಆದರೆ ಆ ಅಕ್ಷರದ ಮೇಲೆ ಬಿಂದುವನ್ನು ಇಟ್ಟಾಗ ಮಾತ್ರ ಅದು ಬೀಜಾಕ್ಷರವಾಗುತ್ತದೆ. ಬಿಂದುವು ಅತ್ಯಂತ ಚಿಕ್ಕದಾದರೂ ಸಹ ಅದು ಬಹಳ ಶಕ್ತಿಯುತವಾದದ್ದು. ಬಿಂದುವಿನಲ್ಲಿ ಮೂರು ಪ್ರಮುಖವಾದ ಉಪವಿಭಾಗಗಳಿದ್ದು ಅದು ಶಿವ ಮತ್ತು ಶಕ್ತಿಯರ ಐಕ್ಯತೆಯೆಡೆಗೆ ಕರೆದೊಯ್ಯುತ್ತದೆ ಮತ್ತು ಅಲ್ಲಿಂದ ಪರಬ್ರಹ್ಮದ ಮೂರು ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳು ಉದ್ಭವವಾಗುತ್ತವೆ. ಮೂರು ಪ್ರಮುಖವಾದ ಉಪವಿಭಾಗಗಳೆಂದರೆ ಬಿಂದುವು ಪ್ರತಿನಿಧಿಸುವ ಶಿವ, ಬೀಜವು ಪ್ರತಿನಿಧಿಸುವ ಶಕ್ತಿ ಮತ್ತು ಅವರಿಬ್ಬರ ಐಕ್ಯತೆಯನ್ನು ಸೂಚಿಸುವ ನಾದ. ಬಿಂದುವು ’ಹ’ದ ಮೇಲಿದೆ ಮತ್ತು ಹ್ರೀಂ ಬೀಜಾಕ್ಷರದಲ್ಲಿನ ಒಂದು ಅಕ್ಷರವು ಹಂ (ಹ+ಅ+ಮ) ಎನ್ನುವ ಉಚ್ಛಾರಣೆ ಹೊಂದಿದೆ. ಈ ಹಂ ಬೀಜವು ಹ್ರೀಂ ಬೀಜದ ಭಾಗವಾಗಿದ್ದು ಇದರಲ್ಲಿನ ’ಹ’ವು ಸೃಷ್ಟಿಯನ್ನು ಪ್ರತಿನಿಧಿಸಿದರೆ, ’ಅ’ವು ಸ್ಥಿತಿಯನ್ನು ಪ್ರತಿನಿಧಿಸುತ್ತದೆ ಮತ್ತು ’ಮ’ವು ಲಯವನ್ನು ಪ್ರತಿನಿಧಿಸುತ್ತದೆ; ಮತ್ತು ಈ ಮೂರೂ ಕ್ರಿಯೆಗಳು ಪರಬ್ರಹ್ಮದ ಕ್ರಿಯೆಗಳಾಗಿವೆ. ಬಿಂದುವು ತನ್ನ ಉಗಮ ಸ್ಥಾನದಿಂದ ಮೊದಲುಗೊಂಡು ಅದು ಸೇರಬೇಕಾಗಿರುವ ಜಾಗದವರೆಗೆ ಸೂಕ್ಷ್ಮ ಬದಲಾವಣೆಗಳನ್ನು ತೆಳೆಯುತ್ತಾ ಸಾಗುತ್ತದೆ. ಅದು ಪರಾ ಶಕ್ತಿಯಾಗಿ ಉಗಮವಾಗಿ, ಪಶ್ಯಂತೀ ಮತ್ತು ಮಧ್ಯಮಾ ಆಗಿ ಮಾರ್ಪಟ್ಟು ವೈಖರೀ ಆಗಿ ಗಮ್ಯವನ್ನು ಮುಟ್ಟುತ್ತದೆ (ಹೆಚ್ಚಿನ ವಿವರಗಳಿಗೆ ನಾಮ ೨೯೯ನ್ನು ನೋಡಿ). ಅದು ಗಮ್ಯವನ್ನು ಸೇರುವ ಮಾರ್ಗದಲ್ಲಿ ಪಂಚಭೂತಗಳಿಂದ ಶಕ್ತಿಯನ್ನು ಪಡೆದು, ಬ್ರಹ್ಮ, ವಿಷ್ಣು ಮತ್ತು ರುದ್ರ ಇವರ ಆಶೀರ್ವಾದವನ್ನು ಪಡೆದು ಅದು ಎಂಟು ವಿಧವಾದ ಬದಲಾವಣೆಗಳನ್ನು ಹೊಂದುತ್ತದೆ. ಅದು ತನ್ನ ಯಾತ್ರೆಯನ್ನು ಹೃದಯ ಚಕ್ರದಲ್ಲಿ ’ಅ’(अ)ದಿಂದ ಆರಂಭಿಸಿ, ಕಂಠದಲ್ಲಿನ ಚಕ್ರಕ್ಕೆ ಸಾಗಿ ಅಲ್ಲಿ ’ಉ’(उ)ನೊಂದಿಗೆ ಸೇರಿಕೊಂಡು ಮೇಲಿನ ದವಡೆಯ ಅಂಗುಳದವರೆಗೆ (Palate) ಸಾಗಿ ಅಲ್ಲಿ ’ಮ’(मं)ದೊಂದಿಗೆ ಸಂಯೋಗವಾಗುತ್ತದೆ; ಇಲ್ಲಿ ’ಓಂ’ನ ಮೂರು ಅಕ್ಷರಗಳಾದ (ಅ+ಉ+ಮ) ಇವುಗಳಿವೆಯನ್ನುವುದನ್ನು ಗಮನಿಸಿ. ಮೇಲ್ದವಡೆಯ ಅಂಗುಳದಿಂದ ಮುಂದೆ ಸಾಗಿ ಅದು ಹಣೆಯ ಭಾಗಕ್ಕೆ ಬಂದು ಅಲ್ಲಿ ಬ್ರಹ್ಮಾಂಡದ ಶಕ್ತಿಯನ್ನು ಕಿರೀಟ ಚಕ್ರದಿಂದ ಪಡೆದು ಶೂನ್ಯ (ಬ್ರಹ್ಮಾಂಡದ ನಿರ್ವಾತ) ಲೋಕವನ್ನು ಒಳಹೊಗುತ್ತದೆ ಮತ್ತಲ್ಲಿ ಯಾವುದೇ ವಿಧವಾದ ಶಕ್ತಿಯು ಕ್ರಿಯಾಶೀಲವಾಗಿರುವುದಿಲ್ಲ; ಮತ್ತಲ್ಲಿಂದ ಮುಂದುವರಿದು ಅದು ತಲೆಬುರುಡೆಯ ಮೇಲ್ಗಡೆ ಸಾಗಿ ಅದರಲ್ಲಿನ ಬ್ರಹ್ಮರಂಧ್ರದ ಮೂಲಕ ಮಹಾ ಶೂನ್ಯ (ಬ್ರಹ್ಮಾಂಡದ ಮಹಾ ನಿರ್ವಾತ)ದೊಂದಿಗೆ ಸಂಪರ್ಕವೇರ್ಪಡಿಸಿಕೊಳ್ಳುತ್ತದೆ; ಅಲ್ಲಿ ಸೃಷ್ಟಿಯು ಜರುಗುತ್ತದೆ. ಅದು ಅಲ್ಲಿಂದ ಮತ್ತಷ್ಟು ಮುಂದೆ ಸಾಗಿದಾಗ ಸೃಷ್ಟಿಯು ಸರ್ವಾಂತರ್ಯಾಮಿಯಾಗಿ, ಬ್ರಹ್ಮಾಂಡದ ಸ್ವಯಂ ಪ್ರಕಾಶದ ಕಾಂತಿಯಿಂದ ಜೀವದ ಇರುವಿಕೆಯು ಪ್ರಾರಂಭವಾಗುತ್ತದೆ. ಆದ್ದರಿಂದ ಬಿಂದುವು ಶಿವ ಮತ್ತು ಶಕ್ತಿಯರ ಐಕ್ಯತೆಯಿಂದ ಹುಟ್ಟು ಪಡೆದ, ಸೂರ್ಯನಂತೆ ಕಾಂತಿಯುಕ್ತ ಚುಕ್ಕಿಯ ರೀತಿಯಲ್ಲಿರುತ್ತದೆಂದು ಹೇಳಲಾಗಿದೆ.
ಹ್ರೀಂ ಬೀಜಾಕ್ಷರಕ್ಕೂ ಮತ್ತು ಶಿವ-ಶಕ್ತಿ ಐಕ್ಯರೂಪಕ್ಕೆ ಯಾವುದೇ ವಿಧವಾದ ಭೇದವಿಲ್ಲ; ಉಗಮ ಸ್ಥಾನಕ್ಕೂ ಮತ್ತು ಜಗತ್ತಿನ ಸರ್ವನಾಶದ ಸ್ಥಾನಕ್ಕೂ ಭೇದವಿಲ್ಲ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 301 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೮೩. ಶ್ರೀ ಲಲಿತಾ ಸಹಸ್ರನಾಮ ೩೦೧ನೇ ನಾಮದ ವಿವರಣೆ
ಶ್ರೀಧರರೆ, ಲಲಿತಾ ಸಹಸ್ರನಾಮ - ೩೦೧ ರ ಸಾರ ನನ್ನ ಗ್ರಹಿಕೆಗೆ ನಿಲುಕಿದ ಮಟ್ಟಿಗೆ - ತಮ್ಮ ಪರಿಷ್ಕರಣೆಗೆ :-)
ಲಲಿತಾ ಸಹಸ್ರನಾಮ - ೩೦೧
____________________________________________
೩೦೧. ಹ್ರೀಂಕಾರೀ
ಪ್ರಣವವೆಂದರೆ ಪರಮೋನ್ನತ ಬೀಜಾಕ್ಷರವಾಗಿಹ 'ಓಂ'
ಶಕ್ತಿ ಪ್ರಣವ ಭುವನೇಶ್ವರಿ ಬೀಜ ಸಮ ಶಕ್ತಿಶಾಲಿ 'ಹ್ರೀಂ'
ಪ್ರತಿ ಕೂಟ ಪಂಚದಶೀ ಮಂತ್ರ ಮುಕ್ತಾಯ ಬೀಜಾಕ್ಷರೀ
ಮಾಯಾ ಬೀಜಾಕ್ಷರ ರೂಪಧಾರಿಣಿ ಲಲಿತೆ ಹ್ರೀಂಕಾರಿ!
ಪರಿಪೂರ್ಣತೆ ಮೂರ್ತರೂಪ, ಹ ರ ಈ ಮ ಬಿಂದು ಸಂಕೀರ್ಣವಾಗಿ ಹ್ರೀಂ
ಅವಿರ್ಭಾವ 'ಹ' ಮಾಯ ಒಳಸೆಳೆದುಕೊಳ್ಳುವಿಕೆ 'ರ' ಪರಿಪೂರ್ಣತೆ 'ಈ'
ಅನುಸ್ವಾರ ಯೋಗವಾಹ, ಈ ಮೂರ ನಿಯಂತ್ರಿಸೆ ಸಂಯೋಜಕ ಬಿಂದು
ಅನಾವರಣ ಒಳಗೆಳೆದುಕೊಳ್ಳುವ ಪರಿಪೂರ್ಣತೆ 'ಹ್ರೀಂ' ಬೀಜಾರ್ಥಸಿಂಧು!
ಶಿವನ ಬೀಜಾಕ್ಷರ ಪ್ರತಿನಿಧಿ 'ಹ', ಶಕ್ತಿ ಪ್ರತಿನಿಧಿ 'ಈಂ' ಕಾಮಕಲಾ ಬೀಜ
ಎರಡನೊಂದುಗೂಡಿಸೊ ಧ್ವನಿ ವಕ್ತಾರ 'ರ', ಸಂಯೋಜಿಸಿ ಶಿವ ಶಕ್ತಿ ತೇಜ
ಮಾಯೆ ಮುಸುಕಲಿ ಪರಬ್ರಹ್ಮ, ಸರಿಸಲು ಬೇಕು ಪರಮ ಚೈತನ್ಯದರಿವು
ಕ್ರಿಯಾಶಕ್ತಿಯನರಿಯದೆ ಪೂರ್ಣ, ಜಡಶಕ್ತಿ ಸ್ವರೂಪಿ ಶಿವನಾಡಿ ದುಸ್ತರವು!
ಬಿಂದುವಿರೆ ಬೀಜಾಕ್ಷರ ಇರದಿರೆ ಬರಿಯಕ್ಷರ, ಕಿರುಮೂರ್ತಿಗೆ ಶಕ್ತಿ ಬಹಳ
ಸೃಷ್ಟಿ ಸ್ಥಿತಿ ಲಯ ಕ್ರಿಯೋದ್ಭವ ಶಿವಶಕ್ತಿ ಐಕ್ಯತೆಗೊಯ್ವ ಉಪವಿಭಾಗಬಲ
ಬಿಂದು ರೂಪೆ ಶಿವ ಬೀಜ ರೂಪೆ ಶಕ್ತಿ ನಾದವಾಗಿ ಐಕ್ಯತೆ ಮೂರರ ಸಂಗಮ
'ಹ್ರಿಂ' ಭಾಗಾಂಶ 'ಹಂ', ಸೃಷ್ಟಿ 'ಹ' ಸ್ಥಿತಿ 'ಅ' ಲಯ 'ಮ' ಕ್ರಿಯೆ ಪರಬ್ರಹ್ಮ!
ಪರಾ ಶಕ್ತಿ ಉಗಮ ಬಿಂದು ಸೂಕ್ಷ್ಮದೆ, ಪಶ್ಯಂತೀ ಮಧ್ಯಮಾ ವೈಖರಿ ಗಮ್ಯಕೆ
ಪಂಚಭೂತ ಶಕ್ತಿ ಮಾರ್ಗ ತ್ರಿಮೂರ್ತಿಗಳಾಶೀರ್ವಾದ ಅಷ್ಟ ರೂಪ ಯಾತ್ರೆಗೆ
'ಆ' ಅರಂಭ ಹೃದ್ಚಕ್ರ 'ಉ' ಸೇರಿ ಕಂಠ 'ಮ' ದವಡೆಯಂಗಳ ಸಂಗಮ 'ಓಂ'
ಕಿರೀಟ ಬ್ರಹ್ಮಾಂಡ ಶಕ್ತಿ ಶೂನ್ಯ ಲೋಕ, ಮಹಾಶೂನ್ಯಕೆ ಬ್ರಹ್ಮರಂಧ್ರ ದ್ವಾರಂ!
ಬ್ರಹ್ಮಾಂಡದ ಮಹಾನಿರ್ವಾತ, ಮಹಾಶೂನ್ಯದ ಜತೆ ಸಂಪರ್ಕ ಸೃಷ್ಟಿ ಕ್ರಿಯೆ
ಸರ್ವಾಂತರ್ಯಾಮಿಯಾಗುತ ಸೃಷ್ಟಿ ಸ್ವಯಂಪ್ರಭೆ ಜೀವದ ಪ್ರಸ್ತುತಿ ಯಾತ್ರೆ
'ಹ್ರೀಂ' ಬೀಜಾಕ್ಷರವೆ ಶಿವ ಶಕ್ತಿ ಐಕ್ಯತೆ, ಬಿಂದು ಸಂಗಮ ಕಾಂತಿಯುತ ಚುಕ್ಕೆ
ಒಂದೆ ಸ್ಥಾನ ಜಗದುಗಮ ಸರ್ವನಾಶಕೆ, ಶಾಂತಿ ಮಂಗಳ 'ಹ್ರಿಂ' ಉಚ್ಛಾರಕೆ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೮೩. ಶ್ರೀ ಲಲಿತಾ ಸಹಸ್ರನಾಮ ೩೦೧ನೇ ನಾಮದ ವಿವರಣೆ by nageshamysore
ಉ: ೮೩. ಶ್ರೀ ಲಲಿತಾ ಸಹಸ್ರನಾಮ ೩೦೧ನೇ ನಾಮದ ವಿವರಣೆ
ನಾಗೇಶರೆ,
ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ನಿಮ್ಮ ಕಾವ್ಯಾತ್ಮಕ ವಿವರಣೆಯನ್ನು ಓದುತ್ತಾ ನಾನು ಮಂತ್ರಮುಗ್ದನಾಗಿಬಿಟ್ಟೆ. ಅಷ್ಟು ಅದ್ಭುತವಾಗಿ ಪದಗಳನ್ನು ಸಂಯೋಜಿಸಿದ್ದೀರ. ಈ ದೀರ್ಘ ಕವನದಲ್ಲಿ ಎಲ್ಲೂ ತೊಡಕುಗಳು ಕಾಣಿಸಲಿಲ್ಲ ಅಷ್ಟು ರಸವತ್ತರಾಗಿದೆ ಮತ್ತು ಸಾರವತ್ತಾಗಿದೆ ಕವನ. ಆದರೂ ದೃಷ್ಟಿ ಚುಕ್ಕೆಯಂತೆ ಒಂದೇ ಒಂದು ಸಣ್ಣ ಅನುಮಾನವಿದೆ; ಅದೇನೆಂದರೆ - ಕೆಳಗಿನ ಸಾಲುಗಳಲ್ಲಿನ "ಪ್ರಸ್ತುತಿ ಯಾತ್ರೆ" ಅರ್ಥವಾಗಲಿಲ್ಲ. ಅದನ್ನು ಸ್ವಲ್ಪ ವಿವರಿಸಿ/ಮಾರ್ಪಡಿಸಿ.
ಬ್ರಹ್ಮಾಂಡದ ಮಹಾನಿರ್ವಾತ, ಮಹಾಶೂನ್ಯದ ಜತೆ ಸಂಪರ್ಕ ಸೃಷ್ಟಿ ಕ್ರಿಯೆ
ಸರ್ವಾಂತರ್ಯಾಮಿಯಾಗುತ ಸೃಷ್ಟಿ ಸ್ವಯಂಪ್ರಭೆ ಜೀವದ ಪ್ರಸ್ತುತಿ ಯಾತ್ರೆ
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೮೩. ಶ್ರೀ ಲಲಿತಾ ಸಹಸ್ರನಾಮ ೩೦೧ನೇ ನಾಮದ ವಿವರಣೆ by makara
ಉ: ೮೩. ಶ್ರೀ ಲಲಿತಾ ಸಹಸ್ರನಾಮ ೩೦೧ನೇ ನಾಮದ ವಿವರಣೆ
ಶ್ರೀಧರರೆ, ಎಲ್ಲಾ ಲಲಿತೆಯ ಕೈವಾಡವೆ ಇರಬೇಕು. ಈ ಕಂತನ್ನು ಕೈಗೆತ್ತಿಕೊಂಡಾಗ ಈ ಸಂಕಿರ್ಣತೆಯನ್ನು ಕವನವಾಗಿಸುವುದು ಕಷ್ಟ ಎಂಬ ಅನಿಸಿಕೆಯಲ್ಲೆ ಆರಂಭಿಸಿದೆ. ಆದರೆ ನಿಮ್ಮ ವಿವರಣೆಯೊಡನೆ ಸಾಲುಸಾಲಾಗಿ ಸಾಗಿದಂತೆ, ಕವನದ ಸಾಲುಗಳು ಹೊಳೆಯತೊಡಗಿದವು;
ಸಾವಿರ ನಾಮಾವಳಿಯ ತನಕ ಹೀಗೆ ಸಾಗುವ ಶಕ್ತಿ ಇಬ್ಬರಿಗೂ ಆ ದೇವಿ ಕೊಡಲಿ :-)
ಪ್ರಸ್ತುತ (ಪ್ರಸ್ತುತಿ ಎಂದು ತಪ್ಪಾಗಿ ಟೈಪಿಸಿದ್ದೆ) -ಜೀವದ 'ಇರುವಿಕೆ'ಯ ಅರ್ಥ ಹೊರಡಿಸಲು ಬಳಸಿದ್ದೆ (ಪ್ರಸ್ತುತ - ಎಂದರೆ ಸದ್ಯದ, ಈಗಿನ - ಎಂಬರ್ಥ ಹೊರಡುತ್ತದೆ, ನೇರವಾಗಿ 'ಇರುವಿಕೆ' ಎಂಬರ್ಥ ಬರುವುದಿಲ್ಲ). ಆ ಹೊತ್ತಲಿ ಬೇರೆ ಸೂಕ್ತ ಪದ ಹೊಳೆಯಲಿಲ್ಲ. ನೀವು ಪ್ರಶ್ನೆ ಕೇಳಿದಾಗ 'ಅಸ್ಥಿತ್ವ' ಸೂಕ್ತವಿರಬಹುದೆನಿಸಿತು - ಅದನ್ನೆ ಬಳಸಿ ತಿದ್ದಿದ್ದೇನೆ. ಹಾಗೆಯೆ ಕೊನೆಯ ಸಾಲಿನಲ್ಲಿದ್ದ 'ಹ್ರಿಂ' ಅನ್ನು ಬದಲಿಸಿ 'ಹ್ರೀಂ' ಎಂದು ಸರಿಪಡಿಸಿದ್ದೇನೆ (ಬೆಳಿಗ್ಗೆ ಸಂಪದದಲ್ಲಿ ಹಾಕಿದ ಮೇಲೆ ಗಮನಿಸಿದ್ದೆ). ಮಾರ್ಪಾಟಾದ ಪಂಕ್ತಿ ಈ ಕೆಳಕಂಡಂತಿದೆ. ಸೂಕ್ತವೆನಿಸಿದರೆ ಇದನ್ನು ಅಂತಿಮಗೊಳಿಸೋಣ.
ಬ್ರಹ್ಮಾಂಡದ ಮಹಾನಿರ್ವಾತ, ಮಹಾಶೂನ್ಯದ ಜತೆ ಸಂಪರ್ಕ ಸೃಷ್ಟಿ ಕ್ರಿಯೆ
ಸರ್ವಾಂತರ್ಯಾಮಿಯಾಗುತ ಸೃಷ್ಟಿ ಸ್ವಯಂ ಪ್ರಭೆ ಜೀವದ ಅಸ್ಥಿತ್ವ ಯಾತ್ರೆ
'ಹ್ರೀಂ' ಬೀಜಾಕ್ಷರವೆ ಶಿವ ಶಕ್ತಿ ಐಕ್ಯತೆ, ಬಿಂದು ಸಂಗಮ ಕಾಂತಿಯುತ ಚುಕ್ಕೆ
ಒಂದೆ ಸ್ಥಾನ ಜಗದುಗಮ ಸರ್ವನಾಶಕೆ, ಶಾಂತಿ ಮಂಗಳ 'ಹ್ರೀಂ' ಉಚ್ಛಾರಕೆ!