೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೩೦೨ - ೩೦೬
Hrīmatī ह्रीमती (302)
೩೦೨. ಹ್ರೀಮತೀ
‘ಹ್ರೀ’ ಎಂದರೆ ವಿನಮ್ರತೆ. ವೇದಗಳು ದೇವಿಯನ್ನು ವಿನಮ್ರತೆ, ಮನಸ್ಸು, ತೃಪ್ತಿ, ಆಸೆ ಮತ್ತು ಪೋಷಣೆ ಮೊದಲಾದವುಗಳ ‘ವರ ಪ್ರಧಾತೆ’ ಎಂದು ವಿವರಿಸುತ್ತವೆ. ಇವೆಲ್ಲವೂ ಮಾಯೆಯನ್ನು ಸೂಚಿಸುತ್ತವೆ. ದೇವಿಯ ಮಾಯಾ ರೂಪವನ್ನು ಈ ನಾಮದಲ್ಲಿ ವಿವರಿಸಲಾಗಿದೆ. ದೇವಿಯ ವಿನಮ್ರ ಗುಣವು ಆಕೆಯನ್ನು ಒಣ ಪ್ರತಿಷ್ಠೆ ಮತ್ತು ಆಡಂಬರಗಳಿಂದ ಕೂಡಿದ ಧಾರ್ಮಿಕ ಕ್ರಿಯೆಗಳಲ್ಲಿ ಭಾಗವಹಿಸದಂತೆ ತಡೆಹಿಡಿಯುತ್ತದೆ. ದೇವಿಯು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅಪಮಾನವೆಂದು ಭಾವಿಸುತ್ತಾಳೆ. ಶಕ್ತಿಯ ಆರಾಧನೆಯು ಯಾವಾಗಲೂ ಬಹಿರಂಗವಾಗಿರದೆ ಏಕಾಂತವಾಗಿರಬೇಕು. ದೇವಿಯು ಇಂತಹ ಆಂತರಂಗಿಕ ಅಥವಾ ಏಕಾಂತ ಪೂಜೆಗಳನ್ನು ಇಷ್ಟಪಡುತ್ತಾಳೆ. ದೇವಿಯನ್ನು ಅಂತರಂಗದಲ್ಲಿ ಪೂಜಿಸುವುದರಿಂದ ಆಕೆಯ ಸೂಕ್ಷ್ಮರೂಪಗಳಾದ ‘ಕಾಮಕಲಾ’ ಮತ್ತು ‘ಕುಂಡಲಿನೀ’ ರೂಪಗಳ ಅರಿವುಂಟಾಗುತ್ತದೆ. ಬಾಹ್ಯ ಪೂಜೆಗಳಿಗಿಂತ ಅಂತರಂಗದ ಪೂಜೆಗಳ ಮೂಲಕ ದೇವಿಯ ಸಾಕ್ಷಾತ್ಕಾರವು ಶೀಘ್ರವಾಗಿ ಆಗುತ್ತದೆ.
Hṛdyā हृद्या (303)
೩೦೩. ಹೃದ್ಯಾ
ದೇವಿಯು ಹೃದಯದಲ್ಲಿ ನೆಲೆಸಿರುತ್ತಾಳೆ. ಆತ್ಮವು ಹೃದಯದ ಮಧ್ಯ ಭಾಗದಲ್ಲಿ ಇರತ್ತದೆಂದು ಹೇಳಲಾಗುತ್ತದೆ. ಹೃದಯವು ಕರುಣೆ ಮತ್ತು ಪ್ರೀತಿಗಳ ಸಂಕೇತವೂ ಅಗಿದೆ. ದೇವಿಯು ಜಗನ್ಮಾತೆಯಾಗಿರುವುದರಿಂದ ಈ ಗುಣಗಳು ಆಕೆಯಲ್ಲಿ ಅಂತರ್ಗತವಾಗಿವೆ ಅಥವಾ ಆಕೆಯು ಎಲ್ಲರಿಂದಲೂ ಪ್ರೀತಿಸಲ್ಪಡುತ್ತಾಳೆ ಎಂದು ಅರ್ಥೈಸಬಹುದು.
ಕಠೋಪನಿಷತ್ತು (೨.೧.೧೨-೧೩) ಹೀಗೆ ಹೇಳುತ್ತದೆ, "ಅಂಗುಷ್ಟ ಮಾತ್ರವಿರುವ (ಹೆಬ್ಬರಳಿನ ಗಾತ್ರದಷ್ಟಿರುವ) ಪುರುಷನು (ಆತ್ಮನು) ಹೊಗೆರಹಿತ ಜ್ವಾಲೆಯಂತೆ ಕಾಣಿಸುತ್ತಾನೆ ಮತ್ತವನು ದೇಹದ ಮಧ್ಯಭಾಗದಲ್ಲಿ ವಿರಮಿಸುತ್ತಾನೆ".
Heyopādeya-varjitā हेयोपादेय-वर्जिता (304)
೩೦೪. ಹೇಯೋಪಾದೇಯ-ವರ್ಜಿತಾ
ದೇವಿಗೆ ಸಮ್ಮತಿಯಾಗಲಿ ಅಥವಾ ಅಸಮ್ಮತಿಯಾಗಲಿ ಯಾವುದೂ ಇಲ್ಲ. ಸಮ್ಮತಿ ಮತ್ತು ಅಸಮ್ಮತಿ (ಇದನ್ನು ಮಾಡು ಮತ್ತು ಇದನ್ನು ಮಾಡಬೇಡ) ಎನ್ನುವುಗಳನ್ನು ಶಾಸ್ತ್ರಗಳು ವಿಧಿಸುತ್ತವೆ. ಈ ಶಾಸ್ತ್ರಗಳಿಗೆ ಆಧಾರವಾಗಿರುವುದು ವೇದಗಳು ಮತ್ತು ನಮ್ಮ ಪೂರ್ವಿಕರು ಅನುಸರಿಸುತ್ತಿದ್ದ ಕೆಲವೊಂದು ಪದ್ಧತಿಗಳು. ಶಾಸ್ತ್ರಗಳೆಂದರೆ ನೀತಿ ನಿಯಮಾವಳಿ(ಧಾರ್ಮಿಕ ಕಟ್ಟುಪಾಡು)ಗಳಾಗಿದ್ದು ಅವು ಕೆಲವೊಂದು ಕಾರ್ಯಗಳನ್ನು ಸಮ್ಮತಿಸುತ್ತವೆ ಮತ್ತು ಕೆಲವೊಂದು ಕಾರ್ಯಗಳನ್ನು ಮಾಡದಂತೆ ನಿರ್ಭಂದ ಹೇರುತ್ತವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಶಾಸ್ತ್ರಗಳು ನಾವು ಅನುಸರಿಸಬೇಕಾದ ನೀತಿ ನಿಯಮಾವಳಿಗಳ ಕುರಿತಾದ ಕಟ್ಟಳೆಗಳ ಸಂಗ್ರಹ ಗ್ರಂಥಗಳೆಂದು ಹೇಳಬಹದು. ಬಹುತೇಕ ಶಾಸ್ತ್ರಗಳು ನಮ್ಮ ಪೂರ್ವಿಕರು ಅನುಸರಿಸುತ್ತಿದ್ದ ಪದ್ಧತಿಗಳ ಮೇಲೆ ಆಧಾರಿತವಾಗಿವೆ. ಶತಮಾನಗಳ ಹಿಂದೆ ಅನುಸರಿಸುತ್ತಿದ್ದ ಮಾರ್ಗದರ್ಶಕಗಳು ಇಂದಿಗೂ ಪ್ರಸ್ತುತವಾಗಿವೆ ಅಥವಾ ಅನ್ವಯವಾಗುತ್ತವೆಂದು ಹೇಳಲಾಗದು. ಆದ್ದರಿಂದ ಶಾಸ್ತ್ರಗಳ ಮರ್ಮವನ್ನು ಅರಿಯದೇ ಅವುಗಳನ್ನು ಅನುಸರಿಸುವುದು ಅರ್ಥರಹಿತವೆನಿಸುತ್ತದೆ. ಇಂದಿನ ಪರಿಸ್ಥಿತಿಗಳಿಗನುಗುಣವಾಗಿ ಹೊಂದಿಕೊಂಡು ಹೋಗುವುದು ಪಾಪಕಾರ್ಯವೆನಿಸುವುದಿಲ್ಲ. ಆದರೆ ಈ ರೀತಿಯ ಸಮ್ಮತಿ-ಅಸಮ್ಮತಿಗಳು ಮಾನವರಿಗೆ ಅನ್ವಯವಾಗುತ್ತವೆಯೇ ಹೊರತು ಪರಬ್ರಹಕ್ಕಲ್ಲ.
Rājarājārcitā राजराजार्चिता (305)
೩೦೫. ರಾಜರಾಜಾರ್ಚಿತಾ
ದೇವಿಯು ರಾಜಾಧಿರಾಜರುಗಳಿಂದ ಮತ್ತು ಚಕ್ರವರ್ತಿಗಳಿಂದ ಪೂಜಿಸಲ್ಪಡುತ್ತಾಳೆ. ಈ ನಾಮವನ್ನು ಮುಂದಿನ ನಾಮದೊಂದಿಗೆ ಓದಿಕೊಳ್ಳಬೇಕು. ರಾಜರಾಜ ಎಂದರೆ ಇಲ್ಲಿ ಅದು ಶಿವನನ್ನು ಪ್ರತಿನಿಧಿಸುತ್ತದೆ. ಆಕೆಯು ಶಿವನ ಪ್ರಿಯ ಪತ್ನಿಯಾಗಿರುವುದರಿಂದ, ಶಿವನು ಆಕೆಯನ್ನು ಪೂಜಿಸುತ್ತಾನೆ (ಆರಾಧಿಸುತ್ತಾನೆ) ಎನ್ನುವುದು ಸಮಂಜಸವಾದ ವಿಶ್ಲೇಷಣೆ ಎನ್ನಬಹುದು. ಸ್ತ್ರೀಯರನ್ನು ಅವರ ಮಾತೃತ್ವದ ಗುಣಕ್ಕಾಗಿ ಪೂಜಿಸಲಾಗುತ್ತದೆ ಮತ್ತು ಶಿವನು ವಿಶ್ವಗುರುವಾಗಿರುವುದರಿಂದ ಅವನು ತಾನು ಭೋದಿಸಿದ್ದನ್ನು ಅನುಸರಿಸುತ್ತಾನೆ.
ಈ ನಾಮಕ್ಕೆ ಇನ್ನೊಂದು ವಿಶ್ಲೇಷಣೆಯೂ ಇದೆ. ರಾಜರಾಜನೆಂದರೆ ಕುಬೇರ, ಮನು ಮತ್ತು ಇತರೇ ಹತ್ತು ಜನ ಸೇರಿ ಒಟ್ಟು ಹನ್ನೆರಡು ರಾಜರಾಜರಿದ್ದಾರೆ. ಇವರ ಬಗೆಗಿನ ಹೆಚ್ಚಿನ ವಿವರಗಳಿಗೆ ೨೩೮ನೇ ನಾಮದ ಚರ್ಚೆಯನ್ನು ನೋಡಿ. ಈ ಪ್ರತಿಯೊಬ್ಬರೂ ದೇವಿಯನ್ನು ತಮ್ಮದೇ ಆದ ರೀತಿಯಲ್ಲಿ ಪೂಜಿಸುತ್ತಾರೆ ಮತ್ತು ಅವರಿಗೆ ತಮ್ಮದೇ ಆದ ಪ್ರತ್ಯೇಕ ಪಂಚದಶೀ ಮಂತ್ರವಿದ್ದು ಅದು ೧೫ ಬೀಜಾಕ್ಷರಗಳಿರುವ ಮಂತ್ರದ ಮೂಲಸ್ವರೂಪವನ್ನು ಬದಲಾಯಿಸದೇ ಮಾರ್ಪಾಡಾಗುತ್ತಾ ಹೋಗುತ್ತದೆ. ಈ ಎಲ್ಲಾ ಹನ್ನೆರಡು ರಾಜರಾಜರುಗಳ ಹೆಸರುಗಳೂ ಸಹ ಈ ಸಹಸ್ರನಾಮದಲ್ಲಿ ಸ್ಥಾನವನ್ನು ಪಡೆದುಕೊಂಡಿವೆ. ಆದ್ದರಿಂದ ದೇವಿಯು ಈ ಹನ್ನೆರಡು ರಾಜರಾಜರುಗಳಿಂದ ಪೂಜಿಸಲ್ಪಡುತ್ತಾಳೆಂದು ಹೇಳಲಾಗುತ್ತದೆ. ಅವರುಗಳು ದೇವಿಯನ್ನು ಪ್ರಾಮಾಣಿಕ ಭಕ್ತಿಯಿಂದ ಪೂಜಿಸಿದ್ದರಿಂದ ಅವರುಗಳನ್ನು ರಾಜರಾಜರೆಂದು ಕರೆಯಲಾಗಿದೆ ಮತ್ತು ಅವರಿಗೆ ಆ ಮಾನ್ಯತೆಯನ್ನು ದೇವಿಯು ಕೊಡಮಾಡಿದ್ದಾಳೆ.
Rājñī राज्ञी (306)
೩೦೬. ರಾಜ್ಞೀ
ರಾಜ್ಞೀ ಎಂದರೆ ರಾಣಿ ಎಂದರ್ಥ. ಈ ನಾಮವು ಹಿಂದಿನ ನಾಮದ ಮುಂದುವರಿಕೆಯಾಗಿದೆ. ರಾಜರಾಜನಾಗಿರುವ ಶಿವನ ಹೆಂಡತಿಯಾಗಿರುವುದರಿಂದ, ದೇವಿಯು ಈ ಸಮಸ್ತ ಪ್ರಪಂಚದ ರಾಣಿಯಾಗಿದ್ದಾಳೆ. ಈ ವಿಶ್ವವು ಶಿವ ಮತ್ತು ಶಕ್ತಿಯರಿಂದ ಪರಿಪಾಲಿಸಲ್ಪಡುತ್ತಿದೆ. ಬಹುಶಃ ಈ ಕಾರಣದಿಂದಾಗಿಯೇ ದೇವಿಯನ್ನು ಮಾತೆಯೆಂದು ಸಂಭೋದಿಸಲಾಗುತ್ತದೆ ಅಥವಾ ಸಂಕ್ಷಿಪ್ತವಾಗಿ ಮಾ ಎಂದು ಕರೆಯುತ್ತಾರೆ. ಯಾವಾಗ ಒಬ್ಬರು ಮಾ ಎಂದು ದೇವಿಯನ್ನು ಕರೆಯುತ್ತಾನೆಯೋ ಆಗ ಅವನಲ್ಲಿ ದೇವಿಯು ತನಗೆ ಸಂಭಂದಿಸದವಳೆನ್ನುವ ಭಾವನೆ ಉಂಟಾಗಿ ಆಕೆಯು ನಮಗೆ ಮತ್ತಷ್ಟು ಹತ್ತಿರದವಳೆನಿಸುತ್ತಾಳೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 302-306 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ
ಶ್ರೀಧರರೆ, ಲಲಿತಾ ಸಹಸ್ರನಾಮ ೩೦೨ - ೩೦೬ ರ (ಕಂತು ೮೪) ಕಾವ್ಯರೂಪದ ಮೊದಲ ಆವೃತ್ತಿ ತಮ್ಮ ಪರಿಷ್ಕರಣೆಗೆ :-)
ಲಲಿತಾ ಸಹಸ್ರನಾಮ ೩೦೨ - ೩೦೬
_________________________________________
೩೦೨. ಹ್ರೀಮತೀ
ಬಾಹ್ಯಾಡಂಬರಕಿಂತ ಏಕಾಂತ, ಅಂತರಂಗಿಕ ಪೂಜಾರಾಧನೆ ಮಿಗಿಲು
ಕಾಮಕಲಾ ಕುಂಡಲಿನೀ ಸೂಕ್ಷ್ಮ ರೂಪ, ದೇವಿ ಸಾಕ್ಷಾತ್ಕಾರಕೆ ಮೆಟ್ಟಿಲು
ವರ ಪ್ರಧಾತೆ ಮಾಯಾಸೂಚಿ ವಿನಮ್ರತೆ ಮನಸ್ಸು ಆಸೆ ಪೋಷಣೆ ತೃಪ್ತಿ
ತಡೆದು ವಿನಮ್ರದಲಿ ಒಣಪ್ರತಿಷ್ಠೆ ಆಡಂಬರ ಮಾಯರೂಪಿಣಿ ಹ್ರೀಮತೀ!
೩೦೩. ಹೃದ್ಯಾ
ಅಂಗುಷ್ಟ ಮಾತ್ರ ಗಾತ್ರದಿ, ದೇಹ ಮಧ್ಯದಿ ವಿರಮಿಸಿ ಪುರುಷಾತ್ಮ
ದಿವ್ಯಜ್ಯೋತಿ ಪ್ರಕಾಶದಿ ಹೊಳೆವ ಧೂಮರಹಿತ ಜ್ವಾಲಾರೂಪಾತ್ಮ
ಅನಂತ ಸಾಗರ ಜಗನ್ಮಾತೆ, ಪ್ರೀತಿ ಕರುಣೆಯಾಗಿ ಹೃದಯ ಮಧ್ಯ
ಅವಿರತ ನೆಲೆಸಿ ಸಲಹಿ, ಸಕಲರ ಭಕ್ತಿ ಪ್ರೀತಿಗೆ ಪಾತ್ರಳು ಹೃದ್ಯಾ!
೩೦೪. ಹೇಯೋಪಾದೇಯ-ವರ್ಜಿತಾ
ಅದು ಬೇಕು ಇದು ಬೇಡ, ಶಾಸ್ತ್ರಗಳು ವಿಧಿಸಿದ ಕಟ್ಟಳೆ ನೀತಿ
ಕಾಲಧರ್ಮಮರ್ಮ ಅರಿತನ್ವಯಿಸದಿರೆ ಅಪ್ರಸ್ತುತ ಅಸಮ್ಮತಿ
ಸಮ್ಮತಿ ಅಸಮ್ಮತಿ ನಿರ್ಬಂಧತೆ ಕಟ್ಟುಪಾಡಿರದ ಬ್ರಹ್ಮ ಲಲಿತ
ಮಾನವಾನ್ವಯನಿಯಮ ದೇವಿ ಹೇಯೋಪಾದೇಯ ವರ್ಜಿತಾ!
೩೦೫. ರಾಜರಾಜಾರ್ಚಿತಾ
ವಿಶ್ವ ಗುರು ಶಿವ ತಾ ಭೋಧಿಸಿದ್ದನು ಅನುಸರಿಸುತ
ಪ್ರಿಯ ಸತಿಯ ವಿಶ್ವ ಮಾತಾ ಗುಣವನಾರಾಧಿಸುತ
ಕುಬೇರಾಧಿ ಮನು ದ್ವಾದಶ ರಾಜರಾಜಾ ಪಂಚದಶಿ
ಭಕ್ತಿಪೂಜೆಗೆ ರಾಜರಾಜಾರ್ಚಿತಾ ಮೆಚ್ಚುತಲಿ ಹರಸಿ!
೩೦೬. ರಾಜ್ಞೀ
ಜಗದ ರಾಜರಾಜಾ ಶಿವನ ಸತಿ ಸಮಸ್ತ ಪ್ರಪಂಚದ ರಾಣಿ
ಶಿವ ಶಕ್ತಿಯಿಂ ಪರಿಪಾಲಿತ ವಿಶ್ವ, ದೇವಿ ಮಾತಾಸ್ವರೂಪಿಣಿ
ಮಾತೃತ್ವ ಕಟ್ಟಿದ ಸಂಬಂಧ ಭಕ್ತನಿಗೆ ಬಿಡಿಸಲಾಗದ ಬಂಧ
ಆತ್ಮ ಜ್ಞಾನಕೆ ರಾಣಿಯಾಗುತ ಲಲಿತಾ ರಾಜ್ಞೀ ಅನುಬಂಧ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ by nageshamysore
ಉ: ೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ
ನಾಗೇಶರೆ,
೩೦೨ರಿಂದ ೩೦೬ನೇ ನಾಮಗಳ ಕವನದ ಕುರಿತ ಪರಿಷ್ಕೃತ ರೂಪ ನಿಮ್ಮ ಅವಗಾಹನೆಗೆ ತರುತ್ತಿದ್ದೇನೆ. ಕವನಗಳು ಎಂದಿನಂತೆ ಉತ್ತಮವಾಗಿ ಮೂಡಿ ಬಂದಿವೆ; ಮೊದಲನೇ ಪಂಕ್ತಿಯ ಕಡೆಯ ಎರಡು ಸಾಲುಗಳನ್ನು ಸ್ವಲ್ಪ ಪರಾಂಭರಿಸಿ :)
೩೦೨. ಹ್ರೀಮತೀ
:
:
ವರ ಪ್ರಧಾತೆ ಮಾಯಾಸೂಚಿ ವಿನಮ್ರತೆ ಮನಸ್ಸು ಆಸೆ ಪೋಷಣೆ ತೃಪ್ತಿ
ತಡೆದು ವಿನಮ್ರದಲಿ ಒಣಪ್ರತಿಷ್ಠೆ ಆಡಂಬರ ಮಾಯರೂಪಿಣಿ ಹ್ರೀಮತೀ!
ಈ ಪಂಕ್ತಿಯ ಈ ಎರಡು ಸಾಲುಗಳು ವಿವರಣೆಯನ್ನು ಸೂಕ್ತವಾಗಿ ವಿವರಿಸಿದರೂ ಸಹ ಸ್ವಲ್ಪ ಗೋಜಲೆನಿಸುತ್ತವೆ; ಅವನ್ನು ಸ್ವಲ್ಪ ಬದಲಾಯಿಸಿದರೆ ಹೆಚ್ಚು ಸಮಂಜಸವೆನಿಸುತ್ತದೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
ವಿ.ಸೂ.: ರಾಜ್ಞೀ ನಾಮದ ಕವನ ಈ ಕಂತಿನ ಹೈಲೈಟ್!
In reply to ಉ: ೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ by makara
ಉ: ೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ
ಶ್ರೀಧರರೆ, ಈ ರೂಪ ಸರಿಯಾದೀತಾ ನೋಡಿ:
೩೦೨. ಹ್ರೀಮತೀ
ಬಾಹ್ಯಾಡಂಬರಕಿಂತ ಏಕಾಂತ, ಅಂತರಂಗಿಕ ಪೂಜಾರಾಧನೆ ಮಿಗಿಲು
ಕಾಮಕಲಾ ಕುಂಡಲಿನೀ ಸೂಕ್ಷ್ಮ ರೂಪ, ದೇವಿ ಸಾಕ್ಷಾತ್ಕಾರಕೆ ಮೆಟ್ಟಿಲು
ಮಾಯೆಯವರ ಕರುಣಿಸಿಯು ಢಂಬಾಚಾರ ತಾನೊಲ್ಲದ ವಿನಮ್ರತೆ 'ಹ್ರೀ'
ಒಣಪ್ರತಿಷ್ಠೆ ಆಡಂಬರ ಮೇಳಕೆ ಬರಲೊಲ್ಲಳು ಮಾಯರೂಪಿಣಿ ಹ್ರೀಮತೀ!
In reply to ಉ: ೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ by nageshamysore
ಉ: ೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ
ನಾಗೇಶರೆ,
ಈ ರೂಪವೂ ಹಿಂದಿನದಕ್ಕಿಂತ ಉತ್ತಮವಾದರೂ ಸಹ ಅಷ್ಟು ತೃಪ್ತಿಕರವೆನಿಸಲಿಲ್ಲ. ನಿಮ್ಮ ಎರಡೂ ರೂಪಗಳ ಸಂಕರಣದಿಂದ ಸ್ವಲ್ಪ ಹೊಸ ರೂಪಕೊಟ್ಟಿದ್ದೇನೆ. ಅದನ್ನು ಇನ್ನಷ್ಟು ಪರಿಷ್ಕೃತಗೊಳಿಸಿ ಅಂತಿಮಗೊಳಿಸಿ.
ಮಾಯಾಸೂಚಿ ವಿನಮ್ರತೆ ಮನಸ್ಸು ಆಸೆ ಪೋಷಣೆ ತೃಪ್ತಿ ವರ ಪ್ರಧಾತೆ
ಒಣಪ್ರತಿಷ್ಠೆ ಆಡಂಬರಗಳ ಮೇಳಕೆ ಬರಲೊಲ್ಲಳು ಹ್ರೀಮತೀ ಶ್ರೀ ಲಲಿತೆ!
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ by makara
ಉ: ೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ
ಶ್ರೀಧರರೆ,
ನೀವು ಮಾರ್ಪಡಿಸಿದ ರೂಪಕ್ಕಿಂತ ಹೆಚ್ಚಿನ ಬದಲಾವಣೆ ನನಗೂ ತೋಚುತ್ತಿಲ್ಲ. ಬೇರೇನೂ ಹೊಳೆಯದಿದ್ದದೆ ಇದನ್ನೆ ಉಳಿಸಿಕೊಳ್ಳೋಣ. ಈ ರೂಪಕ್ಕೆ ಅಂತಿಮ ಕೊಂಡಿಯನ್ನು ನೀಡುತ್ತೇನೆ :-)
೩೦೨. ಹ್ರೀಮತೀ
ಬಾಹ್ಯಾಡಂಬರಕಿಂತ ಏಕಾಂತ, ಅಂತರಂಗಿಕ ಪೂಜಾರಾಧನೆ ಮಿಗಿಲು
ಕಾಮಕಲಾ ಕುಂಡಲಿನೀ ಸೂಕ್ಷ್ಮ ರೂಪ, ದೇವಿ ಸಾಕ್ಷಾತ್ಕಾರಕೆ ಮೆಟ್ಟಿಲು
ಮಾಯಾಸೂಚಿ ವಿನಮ್ರತೆ ಮನಸ್ಸು ಆಸೆ ಪೋಷಣೆ ತೃಪ್ತಿ ವರ ಪ್ರಧಾತೆ
ಒಣಪ್ರತಿಷ್ಠೆ ಆಡಂಬರಗಳ ಮೇಳಕೆ ಬರಲೊಲ್ಲಳು ಹ್ರೀಮತೀ ಶ್ರೀಲಲಿತೆ!
In reply to ಉ: ೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ by nageshamysore
ಉ: ೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ
ಸಧ್ಯಕ್ಕೆ ಇದನ್ನು ಹಾಗೆಯೇ ಉಳಿಸಿಕೊಳ್ಳೋಣ; ಹೊಸ ವಿಚಾರ ಹೊಳೆದರೆ ಅದನ್ನು ಬ್ಲಾಗಿನಲ್ಲಿ ಸರಿಪಡಿಸಬಹುದು. ಇದನ್ನೇ ಅಂತಿಮಗೊಳಿಸಿ, ನಾಗೇಶರೆ.