೮೬. ಶ್ರೀ ಲಲಿತಾ ಸಹಸ್ರನಾಮ ೩೧೧ರಿಂದ ೩೧೬ನೇ ನಾಮಗಳ ವಿವರಣೆ

೮೬. ಶ್ರೀ ಲಲಿತಾ ಸಹಸ್ರನಾಮ ೩೧೧ರಿಂದ ೩೧೬ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೧೧-೩೧೬

Rasyā रस्या (311)

೩೧೧. ರಸ್ಯಾ

            ದೇವಿಯು ಆತ್ಮದ ಸಾರ ರೂಪದಲ್ಲಿದ್ದಾಳೆ. ರಸ (ಸಾರ) ಎನ್ನುವುದರ ಅರ್ಥವನ್ನು ತೈತ್ತರೀಯ ಉಪನಿಷತ್ತಿನ (೨.೭) ಮೂಲಕ ತಿಳಿದುಕೊಳ್ಳಬಹುದು, ಅದು ’ರಸೋ ವೈ ಸಹಃ’ ಎಂದು ಹೇಳುತ್ತದೆ. ಇದರರ್ಥ, "ಅದನ್ನು ಮಧರುತೆಯೊಂದಿಗೆ (ಸಿಹಿಯೊಂದಿಗೆ) ಗುರುತಿಸಬೇಕು". ಅದು ಮುಂದುವೆರೆಯುತ್ತಾ ಹೇಳುತ್ತದೆ, "ಯಾರಾದರೂ ಈ ಮಧುರತೆಯನ್ನು ಹೊಂದಿದ್ದರೆ ಅವರು ಸಂತೋಷವಾಗಿರುತ್ತಾರೆ" ಮತ್ತು ಈ ಮಧುರತೆಯ ಮೂಲವು ಅತ್ಮದಿಂದ ಹೊರಹೊಮ್ಮುತ್ತದೆ. ಸಂತೋಷವೇ ಪರಮಾನಂದವಾಗಿದ್ದು ಮತ್ತು ಆ ಪರಮಾನಂದವನ್ನು ವ್ಯಕ್ತಿಯೊಬ್ಬನು ಆತ್ಮಸಾಕ್ಷಾತ್ಕರವನ್ನು ಹೊಂದಿದಾಗ ಮಾತ್ರ ಅನುಭವಿಸಬಹುದು. "ಅದನ್ನು ಮಧರುತೆಯೊಂದಿಗೆ (ಸಿಹಿಯೊಂದಿಗೆ) ಗುರುತಿಸಬೇಕು" ಎನ್ನುವಲ್ಲಿನ ‘ಅದು’ ಶಬ್ದವು ಪರಮ ಆತ್ಮವನ್ನು ಸೂಚಿಸುತ್ತದೆ. ಈ ನಾಮವು ದೇವಿಯು ಪರಮ ಆತ್ಮದ ರೂಪದಲ್ಲಿದ್ದಾಳೆಂದು ಪ್ರಚುರಪಡಿಸುತ್ತದೆ. ಆ ಪರಮ ಆತ್ಮದ ಸಂಕುಚಿತ ಬ್ರಹ್ಮಾಂಡದ ರೂಪವನ್ನೇ ತೋರಿಕೆಯ ಆತ್ಮದ ಮೂಲಕ ಸಾಕ್ಷಾತ್ಕರಿಸಿಕೊಳ್ಳಬೇಕು.

Raṇatkiṅkiṇi-mekhalā रणत्किङ्किणि-मेखला (312)

೩೧೨. ರಣತ್ಕಿಂಕಿಣಿ-ಮೇಖಲಾ

              ದೇವಿಯು ಸೊಂಟದ ಪಟ್ಟಿಯನ್ನು ಧರಿಸಿದ್ದು ಅದರಲ್ಲಿ ಕಿರು ಘಂಟೆಗಳು ನೇತಾಡುತ್ತಿವೆ. ಇದೇ ವಿಧವಾದ ವರ್ಣನೆಯು ಸೌಂದರ್ಯಲಹರಿಯಲ್ಲಿಯೂ (ಸ್ತೋತ್ರ ೭) ಸ್ಥಾನ ಪಡೆಯುತ್ತದೆ ಮತ್ತದು ಹೇಳುತ್ತದೆ, "ನಿನ್ನ ಸಪೂರವಾದ (ನಾಜೂಕಾದ) ಸೊಂಟವು ಝಣಝಣ ಸದ್ದುಮಾಡುವ ಸಣ್ಣ ಘಂಟೆಗಳಿರುವ ಎಳೆಗಳಿಂದ ಕೂಡಿದ ಬಂಗಾರದ ಒಡ್ಯಾಣದಿಂದ ಅಲಂಕರಿಸಲ್ಪಟ್ಟಿದೆ.  ಯಾವಾಗ ದೇವಿಯು ನಡೆಯುತ್ತಾಳೆಯೋ ಆಗ ಈ ಕಿರು ಘಂಟೆಗಳು ಕಿಣಿಕಿಣಿ ಸದ್ದು ಮಾಡುತ್ತಾ ಅದರ ಮೂಲಕ ನಾದದ (ಶಬ್ದದ) ಉಗಮವಾಗುತ್ತದೆ. ಶಬ್ದವು ಮಣಿಪೂರಕ ಅಥವಾ ನಾಭಿ ಚಕ್ರದಿಂದ ಉತ್ಪನ್ನವಾಗುತ್ತದೆ; ಎಲ್ಲಿ ಒಡ್ಯಾಣವು ಧರಿಸಲ್ಪಡುವುದೋ ಅಲ್ಲಿ. ಶಿವನ ಡಮರುಗದಿಂದಲೂ ಶಬ್ದವು ಉತ್ಪನ್ನವಾಗುತ್ತದೆಂದು ಹೇಳಲಾಗುತ್ತದೆ. ಇದೇ ವಿಧವಾಗಿ ದೇವಿಯ ಒಡ್ಯಾಣದಿಂದ (ಸೊಂಟದ ಪಟ್ಟಿ/ ಡಾಬುವಿನಿಂದ) ಶಬ್ದದ ಉಗಮವಾಗುತ್ತದೆ ಎಂದು ಹೇಳಬಹುದು.

              ಈ ವಿಧವಾದ ವಿವರಣೆಗಳು ಪ್ರಾರಂಭಿಕ ಹಂತದಲ್ಲಿರುವ ಸಾಧಕರಿಗೆ ದೇವಿಯ ಸ್ಥೂಲ ರೂಪವನ್ನು ಅರಿಯಲು ಸಹಾಯಕವಾಗುತ್ತವೆ ಎಂದು ಹೇಳಲಾಗುತ್ತದೆ. ದೇವಿಗೆ ನಾಲ್ಕು ರೂಪಗಳಿವೆ, ಅವುಗಳು ಹೀಗಿವೆ -  ಸ್ಥೂಲ, ಸೂಕ್ಷ್ಮ, ಸೂಕ್ಷ್ಮತರ ಅಥವಾ ಕಾಮಕಲಾ ರೂಪ ಮತ್ತು ಸೂಕ್ಷ್ಮಾತೀಸೂಕ್ಷ್ಮ ರೂಪವಾದ ಕುಂಡಲಿನೀ ರೂಪ. ದೇವಿಯ ಸ್ಥೂಲರೂಪದ ವರ್ಣನೆಯು ನಮಗೆ ಹನ್ನೆರಡನೇ ನಾಮದಿಂದ ಐವತ್ತೊಂದರವರೆಗೆ ಸಿಗುತ್ತದೆ. ಆಕೆಯ ಸೂಕ್ಷ್ಮರೂಪದ ಅಂದರೆ ಮಂತ್ರರೂಪದ ವರ್ಣನೆಯು ನಮಗೆ ೮೫ನೇ ನಾಮದಿಂದ ೮೯ನೇ ನಾಮದವರೆಗೆ ಸಿಗುತ್ತದೆ. ದೇವಿಯ ಕಾಮಕಲಾ ರೂಪದ (ಸೂಕ್ಷ್ಮತರ ರೂಪದ) ವರ್ಣನೆಯು ನಮಗೆ ೮೮ ಮತ್ತು ೮೯ರಲ್ಲಿ ಸಿಗುತ್ತದೆ (ನಾಮ ೩೨೨ ಕಾಮಕಲಾ ರೂಪಾ ಆಗಿದೆ). ಅಂತಿಮವಾಗಿ, ದೇವಿಯ ಸೂಕ್ಷ್ಮಾತೀಸೂಕ್ಷ್ಮ ರೂಪದ ವರ್ಣನೆಯು ೯೦ನೇ ನಾಮದಿಂದ ಪ್ರಾರಂಭವಾಗಿ ೧೧೧ನೇ ನಾಮದವರೆಗೆ ಇರುತ್ತದೆ. (ನಾಮ ೪೭೫ರಿಂದ ೫೩೪ರವರೆಗೆ ಮಾನಸಿಕ ಚಕ್ರಗಳ ಕುರಿತಾದ ಚರ್ಚೆಯು ಕಂಡು ಬರುತ್ತದೆ.)

Ramā रमा (313)

೩೧೩. ರಮಾ

             ರಮಾ ಎಂದರೆ ವಿಷ್ಣುವಿನ ಸಂಗಾತಿಯಾದ ಐಶ್ವರ್ಯಕ್ಕೆ ಅಧಿದೇವತೆಯಾದ ಲಕ್ಷ್ಮೀ. ದೇವಿಯು ಲಕ್ಷ್ಮೀ ರೂಪದಲ್ಲಿದ್ದಾಳೆ ಮತ್ತು ತನ್ನ ಭಕ್ತರಿಗೆ ಅವಳು ಐಶ್ವರ್ಯಗಳನ್ನು ದಯಪಾಲಿಸುತ್ತಾಳೆ. ಇಲ್ಲಿ ಐಶ್ವರ್ಯವೆಂದರೆ ಐಹಿಕ ಸುಖಭೋಗಗಳು ಮತ್ತು ಪಾರಮಾರ್ಥಿಕ ಸಂಪದಗಳು ಅಥವಾ ಭುಕ್ತಿ ಮತ್ತು ಮುಕ್ತಿ ಸಾಧಕಗಳು. ೩೧೩, ೩೧೪ ಮತ್ತು ೩೧೫ನೇ ನಾಮಗಳು ಒಟ್ಟಾಗಿ ಕಾಮಕಲಾ ಬೀಜವಾದ ’ಈಂ’ (ईँ) ರೂಪವಾಗುತ್ತದೆ. ಈ ನಾಮವು ’ಈ’ ಅಕ್ಷರವನ್ನು ಕೊಡುತ್ತದೆ (ಲಕ್ಷ್ಮೀ ಎನ್ನುವ ಶಬ್ದದಲ್ಲಿನ ಕಡೆಯ ಅಕ್ಷರವು ‘ಈ’ ಎನ್ನುವುದನ್ನು ಗಮನಿಸಿ).

Rākenduvadanā राकेन्दुवदना (314)

೩೧೪. ರಾಕೇಂದು ವದನಾ

             ದೇವಿಯು ಮುಖವನ್ನು ಪೂರ್ಣ ಚಂದ್ರನಿಗೆ ಹೋಲಿಸಲಾಗಿದೆ, ಏಕೆಂದರೆ ಪೂರ್ಣಚಂದ್ರನು ಕಲೆಗಳಿಂದ ಮುಕ್ತನಾಗಿರುತ್ತಾನೆ. ಪೂರ್ಣಚಂದ್ರನು ಈ ಅಕ್ಷರದ ಮೇಲಿನ ಬಿಂದುವನ್ನು ಪ್ರತಿನಿಧಿಸುತ್ತದೆ; ಮತ್ತದು ಬೀಜಾಕ್ಷರವಾದ ’ಈಂ’ (ईं) ಆಗಿ ರೂಪಿತವಾಗುತ್ತದೆ. ಈ ಹಂತದಲ್ಲಿ ಈ (ई) ಅಕ್ಷರವು ಕೇವಲ ಬಿಂದುವೊಂದನ್ನು ಮಾತ್ರವೇ ತನ್ನ ಮೇಲಿರಿಸಿಕೊಂಡು ’ಈಂ’ (ईं) ಆಗಿದೆ ಆದರೆ ಅದಿನ್ನೂ ಕಾಮಕಲಾ ರೂಪವಾಗಿ ಪರಿವರ್ತನೆಯಾಗಬೇಕಾಗಿದೆ.

Ratirūpā रतिरूपा (315)

೩೧೫. ರತಿರೂಪಾ

             ದೇವಿಯು ಮನ್ಮಥ ಅಥವಾ ಕಾಮನ ಹೆಂಡತಿಯಾದ ರತಿಯ ರೂಪದಲ್ಲಿದ್ದಾಳೆ. ಮೊದಲಿನೆರಡು ನಾಮಗಳಲ್ಲಿ,  ’ಈಂ’ ಬೀಜದ (ಬೀಜಾಕ್ಷರದ) ಉಗಮವಾದರೆ ಅದು ಈ ನಾಮದಲ್ಲಿ ಸಂಪೂರ್ಣ ಬೀಜವಾಗಿ (ಬೀಜಾಕ್ಷರವಾಗಿ) ಹೊರಹೊಮ್ಮುತ್ತದೆ. ರತಿ ಮತ್ತು ಆಕೆಯ ಸಂಗಾತಿ ಮನ್ಮಥ ಇವರಿಬ್ಬರೂ ತಮ್ಮ ಕಾಮುಕತೆಗೆ ಹೆಸರಾಗಿದ್ದಾರೆ. ಕಾಮಕಲಾವು ಸಂಪೂರ್ಣ ಶುಭಪ್ರದವಾಗಿದ್ದು ಅದು ಸೂಕ್ಷ್ಮವಾಗಿ ಸೃಷ್ಟಿಕ್ರಿಯೆಯನ್ನು ಸೂಚಿಸುತ್ತದೆ. ಹಿಂದಿನ ನಾಮದಲ್ಲಿ ರೂಪಗೊಂಡ ’ಈಂ’ ಬೀಜಾಕ್ಷರವು ಈ ನಾಮದಲ್ಲಿ ’ಕಾಮಕಲಾ’ ಆಗಿ ಪರಿವರ್ತಿತಗೊಳ್ಳುತ್ತದೆ. ‌ईं ಎನ್ನುವುದು ‌ಮೇಲಿನ ಅರ್ಧಚಂದ್ರದ ವೃತ್ತವು ಹೆಚ್ಚಾದ ‌ईं ಆಗುತ್ತದೆ ಅಥವಾ ಕಾಮಕಲಾದಲ್ಲಿ ईंನ ಮೇಲ್ಭಾಗದಲ್ಲಿರುವ ಭಾಗಶಃ c ಅಕ್ಷರದ ರೂಪದಲ್ಲಿದ್ದ ಅರ್ಧಚಂದ್ರವು ಅಗಲವಾದ U ಆಕಾರದ ಅರ್ಧಚಂದ್ರವಾಗಿ ಬದಲಾಗುತ್ತದೆ.  ಕಾಮಕಲಾವನ್ನು ೩೨೨ನೇ ನಾಮವಾದ ಕಾಮಕಲಾ ರೂಪದಲ್ಲಿ ವಿಶದವಾಗಿ ಚರ್ಚಿಸಲಾಗಿದೆ.

Ratipriyā रतिप्रिया (316)

೩೧೬. ರತಿಪ್ರಿಯಾ

            ದೇವಿಗೆ ಮನ್ಮಥನ ಹೆಂಡತಿಯಾದ ರತಿಯೆಂದರೆ ಬಹಳಷ್ಟು ಅಕ್ಕರೆ. ಉಪದೇವತೆಗಳಾದ ಯಕ್ಷಿಣಿಯೊಬ್ಬಳ ಹೆಸರೂ ಸಹ ರತಿಪ್ರಿಯಾ ಆಗಿದ್ದು ಅವಳು ಐಶ್ವರ್ಯವನ್ನು ಕರುಣಿಸುವವಳಾಗಿದ್ದಾಳೆ. ಆಕೆಯನ್ನು ಕುಬೇರನ ಹೆಂಡತಿ ಎಂದು ಹೇಳಲಾಗುತ್ತದೆ. ಕುಬೇರನು ಯಕ್ಷರ ಮುಖ್ಯಸ್ಥನಾಗಿದ್ದಾನೆ. ರತಿಪ್ರಿಯಾ ದೇವಿಯ ಮಂತ್ರವು ಬಹಳ ಸಂಕ್ಷಿಪ್ತವಾಗಿದ್ದು ವ್ಯಕ್ತಿಯೊಬ್ಬನು ಈ ಮಂತ್ರವನ್ನು ರಾತ್ರಿ ವೇಳೆಯಲ್ಲಿ ಆಲದ ಮರದ ಮೇಲೆ ಕುಳಿತು ಪಠಿಸಬೇಕು. ಆಕೆಯು ಆ ವ್ಯಕ್ತಿಯ ಎದುರಿಗೆ ಸ್ವತಃ ಪ್ರಕಟಗೊಂಡು ಅವರಿಗೆ ಐಶ್ವರ್ಯವನ್ನು ಕೊಡುತ್ತಾಳೆಂದು ಹೇಳಲಾಗಿದೆ. ಆಕೆಯ ಮಂತ್ರವು

                    ॐ रं श्रीं ह्रीं धं धनते रतिप्रिये स्वाहा

                    ಓಂ ರಂ ಶ್ರೀಂ ಹ್ರೀಂ ಧಂ ಧನತೇ ರತಿಪ್ರಿಯೇ ಸ್ವಾಹಾ.

          ಈ ಮಂತ್ರವನ್ನು ಒಂದು ಲಕ್ಷಬಾರಿ ಜಪಿಸಿದ ನಂತರ ಪುರಶ್ಚರಣವನ್ನು ಕೈಗೊಳ್ಳಬೇಕು.

******

          ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 311-316 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Sat, 08/10/2013 - 11:30

ಶ್ರೀಧರರೆ, ೮೬ ನೇ ಕಂತಿನ ಪ್ರಥಮಾವೃತ್ತಿ ತಮ್ಮ ಪರಿಷ್ಕರಣೆಗೆ :-)

೩೧೧. ರಸ್ಯಾ 
ಪರಮಾತ್ಮದ ಮಾಧುರ್ಯ ಮಧುರ ಸಾರವಾಗಿಹಳು ಶ್ರೀ ಲಲಿತೆ
ಆತ್ಮಮೂಲದ ಪರಮಾನಂದ ಆತ್ಮಸಾಕ್ಷಾತ್ಕಾರದಲನುಭವಿಸುತೆ
ತೋರಿಕೆಯಾತ್ಮ ರೂಪ ಹತ್ತಲು ಸಾಧನೆ ಮೆಟ್ಟಿಲು ಸಿಹಿಯೆ ರಸ್ಯಾ 
ಸಮಷ್ಟಿ ಬ್ರಹ್ಮಾಂಡ ಅಂಶವಾಗೆ ದೇಹಾತ್ಮ ಪರಮಾತ್ಮ ಸಾಮರಸ್ಯ!

೩೧೨. ರಣತ್ಕಿಂಕಿಣಿ-ಮೇಖಲಾ 
ಚತುರ್ ರೂಪಿಣಿ ಸ್ಥೂಲ ಸೂಕ್ಷ್ಮ ಕಾಮಕಲಾ ಸೂಕ್ಷಾತೀಸೂಕ್ಷ್ಮ ದೇವಿ
ಲಲಿತೆಯನರಿವ ಸಾಧಕ ಸ್ಥೂಲದಿಂ ಕುಂಡಲಿನೀಯರಿಯುವ ಛವಿ
ಮಣಿಪೂರಕ ನಾಭಿ ಚಕ್ರದೊಡ್ಯಾಣದಿಂದುಗಮ ಢಮರುಗ ನಿನಾದ
ನಡುಪಟ್ಟಿ ಕಿರುಘಂಟೆ ಝೇಂಕಾರ ರಣತ್ಕಿಂಕಿಣಿಮೇಖಲಾ ಸ್ಥೂಲದ!

೩೧೩. ರಮಾ 
ಐಹಿಕ ಸುಖಭೋಗ ಪಾರಮಾರ್ಥಿಕ ಸಂಪದಗಳ ಐಶ್ವರ್ಯ
ಭುಕ್ತಿ ಮುಕ್ತಿ ಸಾಧಕಗಳಧಿದೇವತೆ ವಿಷ್ಣು ಸಂಗಾತಿ ಕಾರ್ಯ
ಲಕ್ಷ್ಮೀ ರೂಪದಲಿಹಳು ದೇವಿ ಗಮನಿಸಿ ಭಕ್ತರಾ ಕೈಂಕರ್ಯ
ದಯಪಾಲಿಸಿ ರಮಾರೂಪಿ ಲಲಿತೆ ಅರಿತವರಾ ಆಂತರ್ಯ!

೩೧೪. ರಾಕೇಂದು ವದನಾ 
ಕಲಾ ಮುಕ್ತ ಸದನಾ, ಪೂರ್ಣಚಂದ್ರ ಪರಿಪೂರ್ಣ ವದನ
ದೇವೀ ಮುಖಕಮಲವನು, ಹೋಲುತ ಸುಧೆಯಾಗುವನ
'ಈ' ಮೇಲಿನ ಬಿಂದು ಚಂದ್ರಮಾ, 'ಈಂ' ಬೀಜಾಕ್ಷರವಾಗಿ
ಕಾಮಕಲಾ ಪೂರ್ವ ರೂಪ, ರಾಕೇಂದು ವದನಾ ತಾನಾಗಿ!

೩೧೫. ರತಿರೂಪಾ 
'ಈಂ'ಬೀಜಾಕ್ಷರ ಪೂರ್ಣವಾಗಲೆ ಪ್ರೇರಕ ಅಪ್ರತಿಮ ರತಿರೂಪ
ರತಿಮನ್ಮಥ ಸಾಂಗತ್ಯ ಸೃಷ್ಟಿ ಸೂಕ್ಷ್ಮ ಶುಭ ಬೀಜಾಕ್ಷರ ಸ್ವರೂಪ
ಅಂಗಜಸತಿ ರತಿರೂಪದಿ ಕಾಮಕಲಾ ವೈಭವ ಸೃಷ್ಟಿಸಿ ಲಲಿತೆ
ನಿರಂತರ ಸೃಷ್ಟಿಗೆ ಬರೆದಾ ಮುನ್ನುಡಿ ರತಿರೂಪಾ ಹೆಸರಾಗುತೆ!

೩೧೬. ರತಿಪ್ರಿಯಾ
ಸೃಷ್ಟಿಕಾರ್ಯ ನಿರಂತರವಿರಿಸೊ ಮನ್ಮಥ ಸತಿ ದೇವಿಗೆ ಪ್ರೀತಿ
ಐಶ್ವರ್ಯ ಸಂಪದ ಕರುಣೆ ಕುಬೇರನರಾಣಿ ರತಿಪ್ರಿಯಾ ರೀತಿ
ಯಕ್ಷರಾಣಿ ಒಲಿಸೆ ಸಂಕ್ಷಿಪ್ತಮಂತ್ರ ಆಲದಿ ಪಠಿಸಿದರೆ ನಿಶೀಥ
ರತಿಪ್ರಿಯಾ ರೂಪದಿ ಸರ್ವಸಂಪದ ನೀಡುವಳು ದೇವಿ ಲಲಿತೆ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

ನಾಗೇಶರೆ,
ಈ ಬಾರಿಯ ಕವನದಲ್ಲಿ ಹೊಸ ಪದಗಳ ಪ್ರಯೋಗ ಮಾಡಿದ್ದೀರ. ನಿಜಕ್ಕೂ ಈ ಪದಗಳ ಪರಿಚಯವಾದುದಕ್ಕೆ ಸಂತೋಷವೆನಿಸುತ್ತಿದೆ. ಇವುಗಳ ಅರ್ಥ ವಿವರಣೆಗಾಗಿ ನಾನು ಪದಕೋಶವನ್ನು ನೋಡಬೇಕಾಯಿತು ಎನ್ನುವುದು ಬೇರೆ ವಿಷಯ. ಈ ಹೊಸ ಪದಗಳು ಕವನದ ಅಂದವನ್ನು ಹೆಚ್ಚಿಸಿವೆ. ಎಲ್ಲಾ ಕವನಗಳೂ ಒಂದಕ್ಕಿಂತ ಚೆನ್ನಾಗಿದ್ದು ದೇವಿಯ ಕಾಮಕಲಾ ರೂಪವನ್ನು ಒಂದೊಂದೇ ನಾಮಗಳು ವಿಶದ ಪಡಿಸುತ್ತಾ ಹೋದಂತೆ ನಿಮ್ಮ ಕವನಗಳೂ ಅದೇ ಅನುಕ್ರಮದಲ್ಲಿ ಉತ್ತಮವಾಗುತ್ತಾ ಹೋಗಿವೆ. ೩೧೨. ರಣತ್ಕಿಂಕಿಣಿ-ಮೇಖಲಾ ಈ ಪಂಕ್ತಿಯ ಕಡೆಯ ಎರಡು ಸಾಲುಗಳು ಮಾತ್ರ ಸ್ವಲ್ಪ ಗೋಜಲೆನಿಸುತ್ತವೆ. ಉಳಿದಂತೆ ಎಲ್ಲಾ ಸರಿಯಾಗಿವೆ.

೩೧೧. ರಸ್ಯಾ = ಚೆನ್ನಾಗಿದೆ.

೩೧೨. ರಣತ್ಕಿಂಕಿಣಿ-ಮೇಖಲಾ
:
:
ಮಣಿಪೂರಕ ನಾಭಿ ಚಕ್ರದೊಡ್ಯಾಣದಿಂದುಗಮ ಢಮರುಗ ನಿನಾದ
ನಡುಪಟ್ಟಿ ಕಿರುಘಂಟೆ ಝೇಂಕಾರ ರಣತ್ಕಿಂಕಿಣಿಮೇಖಲಾ ಸ್ಥೂಲದ!
ಎಲ್ಲಿ ದೇವಿಯು ಒಡ್ಯಾಣವನ್ನು ಧರಿಸುತ್ತಾಳೆಯೋ ಆ ಪ್ರದೇಶದಲ್ಲಿರುವ ಮಣಿಪೂರಕ ಚಕ್ರದಲ್ಲಿ ಶಬ್ದದ ಉಗಮವಾಗುತ್ತದೆ. ಇದರ ಸೂಚಕವೇ ದೇವಿಯ ಒಡ್ಯಾಣದಲ್ಲಿರುವ ಕಿರುಗಂಟೆಯ ಸದ್ದು. ಕೆಲವೊಂದು ಕೃತಿಗಳ ಪ್ರಕಾರ ಶಬ್ದವು ಶಿವನ ಡಮರುಗದಿಂದ ಉಂಟಾಗುತ್ತದೆ. ಈ ಹಿನ್ನಲೆಯಲ್ಲಿ ಈ ಪಂಕ್ತಿಯ ಕಡೆಯ ಎರಡು ಸಾಲುಗಳನ್ನು ಬದಲಾಯಿಸಿ.

೩೧೩. ರಮಾ =ಉತ್ತಮವಾಗಿದೆ

೩೧೪. ರಾಕೇಂದು ವದನಾ =ಇನ್ನೂ ಚೆನ್ನಾಗಿದೆ

೩೧೫. ರತಿರೂಪಾ =ಎಲ್ಲದಕ್ಕಿಂತ ಚೆನ್ನಾಗಿದೆ

೩೧೬. ರತಿಪ್ರಿಯಾ=ಚೆನ್ನಾಗಿ ಮೂಡಿ ಬಂದಿದೆ.

ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ನಾನು ಈ ಕವನದಲ್ಲೆ ತಿಣುಕಿದ್ದೆನೆಂದು ಎಷ್ಟು ಸೊಗಸಾಗಿ ಹಿಡಿದು ಹಾಕಿಬಿಟ್ಟಿರಿ! 

ಬದಲಿಸಿದ ರೂಪ ಕೆಳಕಂಡಂತಿದೆ. ಶಿವ ಡಮರುಗ ಶಬ್ದದ ಕಲ್ಪನೆಯನ್ನು ಕವಿಸಮಯವಾಗಿಸಿ ದೇವಿಯ ಕಿರುಗೆಜ್ಜೆಯ ಸದ್ದು ಶಿವನ ಡಮರುಗದ ಸದ್ದಿನ ರೂಪದಲಿ ಅನುರಣಿತವಾಗಿ ದೇವಿಗೆ ಆಮೋದ ತಂದಿತು - ಎನ್ನುವ ಅರ್ಥದಲ್ಲಿ ಪ್ರಯೋಗಿಸಿದ್ದೇನೆ. ಅರ್ಥ ಪಲ್ಲಟವಾದರೆ ಕವಿಸಮಯಕ್ಕೆ 'ಅರ್ಧ ಚಂದ್ರ' ಪ್ರಯೋಗ ಮಾಡುತ್ತೇನೆ.

P.S. ಇವತ್ತಿನ ಕಾವ್ಯಗಳೆಲ್ಲ ಹುಟ್ಟಿದ್ದು ಬೆಳಗಿನ ವಾಕಿಂಗ್ ನಲ್ಲಿ ಉದ್ಯಾನವೊಂದರ ಕಲ್ಲು ಬೆಂಚಿನ ಮೇಲೆ. ಹೊಸ ಜಾಗ ಹೊಸ ಪದ ನೆನಪಿಸಿತೇನೊ....ನಿಜ ಹೇಳುವುದಾದರೆ ಹಿಂದೊಮ್ಮೆ ಬೇರೆ ಕವನದಲ್ಲಿ ಆ ಪದಗಳ ಪ್ರಯೋಗವಾಗಿತ್ತು. ಇಂದು ಸಾಂಧರ್ಭಿಕವಾಗಿ ನೆನಪಾಯ್ತೆಂದು ಕಾಣುತ್ತದೆ :-)

೩೧೨. ರಣತ್ಕಿಂಕಿಣಿ-ಮೇಖಲಾ
ಚತುರ್ ರೂಪಿಣಿ ಸ್ಥೂಲ ಸೂಕ್ಷ್ಮ ಕಾಮಕಲಾ ಸೂಕ್ಷಾತೀಸೂಕ್ಷ್ಮ ದೇವಿ
ಲಲಿತೆಯನರಿವ ಸಾಧಕ ಸ್ಥೂಲದಿಂ ಕುಂಡಲಿನೀಯರಿಯುವ ಛವಿ
ಉಗಮಿಸೆ ಮಣಿಪೂರಕಚಕ್ರನಾದ ಕಟಿಬಂಧದ ಕಿರುಘಂಟೆ ನಿನಾದ
ಅನುರಣಿಸೆ ಶಿವ ಡಮರುಗ ಶಬ್ದ ರಣತ್ಕಿಂಕಿಣಿ ಮೇಖಲಾ ಆಮೋದ!

ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು
 

ನಾಗೇಶರೆ,
ನಿಮ್ಮ ಕವಿಸಮಯವು ಖಂಡಿತಾ ತುಂಬಾ ಚೆನ್ನಾಗಿದೆ. ಆದರೆ ನೀವೇ ವ್ಯಕ್ತಪಡಿಸಿರುವ ಭಯದಂತೆ ಇದು ವಿವರಣೆಯ ಆಶಯಕ್ಕೆ ಪೂರಕವಾಗಿಲ್ಲ :(
ನಿಮ್ಮ ಗೊಂದಲವೇನೆಂದು ನನಗೆ ಅರ್ಥವಾಗುತ್ತಿದೆ. ಏಕೆಂದರೆ ಒಂದೇ ಬಾರಿಗೆ ಅನೇಕ ವಿಷಯಗಳನ್ನು ಇಲ್ಲಿ ಹೇಳಿರುವುದರಿಂದ ಉಂಟಾದ ಸಹಜ ಗೊಂದಲವದು. ದೇವಿಗೆ ನಾಲ್ಕು ವಿಧವಾದ ರೂಪಗಳಿವೆ. ಅವೆಂದರೆ ಸ್ಥೂಲ ರೂಪ, ಸೂಕ್ಷ್ಮ ರೂಪ, ಸೂಕ್ಷ್ಮತರ (ಅತಿ ಸೂಕ್ಷ್ಮ) ಹಾಗು ಸೂಕ್ಷ್ಮಾತೀಸೂಕ್ಷ್ಮ ರೂಪ; ಅವುಗಳನ್ನು ಅನುಕ್ರಮವಾಗಿ ಹೀಗೆ ಹೇಳಬಹುದು, ಬಾಹ್ಯ ಅವಯವಗಳು ಮತ್ತವುಗಳ ವರ್ಣನೆ; ಪಂಚದಶೀ ಮಂತ್ರ, ಕಾಮಕಲಾ ರೂಪ (ಇದು ಸಾಂಕೇತಿಕವಾದದ್ದು) ಹಾಗು ಕಡೆಯದು ಕುಂಡಲಿನೀ ರೂಪವಾಗಿದೆ. ಒಮ್ಮೆಲೇ ದೇವಿಯ ಸೂಕ್ಷಾತೀಸೂಕ್ಷ್ಮ ರೂಪವನ್ನು ಅರಿಯಲಾಗದು. ಆದ್ದರಿಂದ ಅದನ್ನು ಸ್ಥೂಲದಿಂದ ಪ್ರಾರಂಭಿಸಿ ಅಂತಿಮವಾಗಿ ಕುಂಡಲಿನೀ ರೂಪವನ್ನು ಅರಿಯುವಲ್ಲಿ ಮುಕ್ತಾಯಗೊಳಿಸಬೇಕು. ಸ್ಥೂಲ ರೂಪದ ವರ್ಣನೆಯಲ್ಲಿ ಮೊದಲಿಗೆ ದೇವಿಯ ಭೌತಿಕ ರೂಪದ ವರ್ಣನೆಯು ಬರುತ್ತದೆ - ಅವಳಿಗೆ ಎಷ್ಟು ಕೈಗಳಿವೆ; ಅವುಗಳನ್ನು ಪ್ರತಿನಿಧಿಸುವ ಅಂಗದೇವತೆಗಳು ಮತ್ತು ಅವಳು ಧರಿಸಿರುವ ಆಯುಧಗಳು/ವಸ್ತುಗಳು ಮತ್ತು ಅವು ಏನನ್ನು ಪ್ರತಿನಿಧಿಸುತ್ತವೆ ಎನ್ನುವುದರ ಕುರಿತಾದ ವರ್ಣನೆಯು ಬರುತ್ತದೆ. ಇದಾದ ನಂತರ ದೇವಿಯ ಮೈಬಣ್ಣ, ಅವಳ ಕೂದಲುಗಳ ಬಣ್ಣ, ಅವಳ ಮೂಗಿನ ರಚನೆ, ಅವಳು ಧರಿಸಿರುವ ಕಿರೀಟ, ಆಕೆಯು ಧರಿಸಿರುವ ಆಭರಣಗಳು ಹೀಗೆ ಹೆಚ್ಚಿನ ವಿವರಣೆಗಳು ದೊರೆಯುತ್ತವೆ. ಭೌತಿಕ ರೂಪವೆಂದರೆ ಮೇಲ್ನೋಟಕ್ಕೆ ಕಾಣುವ ಅಂಶಗಳು. ಸ್ಥೂಲ ರೂಪವೆಂದಾಗ ಒಂದೊಂದೇ ಭಾಗಗಳನ್ನು ಗಮನವಿಟ್ಟು ನೋಡಿದಾಗ ಕಾಣುವ ಅಂಶಗಳು. ಇದುವರೆಗೆ ನಿಮಗೆ ಎಲ್ಲಾ ಸ್ಪಷ್ಟವಾಗಿದೆ ಎಂದುಕೊಳ್ಳುತ್ತೇನೆ.
ಇನ್ನು ಇಲ್ಲಿನ ವಿವರಣೆಗೆ ಬರೋಣ, ಅದೇನೆಂದರೆ ಸಾಮಾನ್ಯ ಜನರಿಗೆ ನಾಭಿಯ ಪ್ರದೇಶದಿಂದ ಶಬ್ದದ ವ್ಯುತ್ಪತ್ತಿಯಾಗುತ್ತೆನ್ನುವುದನ್ನು ಸಾಂಕೇತಿಕವಾಗಿ ತಿಳಿಸುವುದಕ್ಕಾಗಿ ದೇವಿಯು ನಡುವಿನಲ್ಲಿ ಅಥವಾ ಮಣಿಪೂರಕ ಚಕ್ರವಿರುವ (ನಾಭಿ ಚಕ್ರದ) ಪ್ರದೇಶದಲ್ಲಿ ದೇವಿಯು ಧರಿಸಿರುವ ಕಿರುಘಂಟೆಗಳಿಂದ ಶಬ್ದವು ಉಂಟಾಗುತ್ತದೆನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಇದಕ್ಕೂ ಶಿವನ ಡಮರುಗದ ಶಬ್ದಕ್ಕೂ ಸಂಭಂದವಿಲ್ಲ. ಶಬ್ದವು ಶಿವನ ಡಮರುಗದಿಂದ ಉತ್ಪನ್ನವಾಗುವುದೆಂದು ಕೆಲವು ಪಂಡಿತರು ಅಭಿಪ್ರಾಯ ಪಡುವುದನ್ನು ಮೂಲ ಲೇಖಕರು ಇಲ್ಲಿ ಉಲ್ಲೇಖಿಸಿದ್ದಾರಷ್ಟೇ!

(ಶಬ್ದದ ವ್ಯುತ್ಪತ್ತಿಯು ಪರಾ ಹಂತದಿಂದ ಆರಂಭಗೊಂಡು, ಪಶ್ಯಂತೀ ಹಾಗೂ ಮಧ್ಯಮಾ ಆಗಿ ಮಾರ್ಪಾಟುಗೊಂಡು ಅಂತಿಮವಾಗಿ ವೈಖರೀ ಆಗಿ ಹೊರಹೊಮ್ಮುತ್ತದೆ. ಅದು ಒಂದೊಂದು ಚಕ್ರದಲ್ಲಿ ಒಂದೊಂದು ವಿಧವಾಗಿ ಮಾರ್ಪಟ್ಟು ಅಂತಿಮವಾಗಿ ವಿಶುದ್ಧ ಚಕ್ರದ ಮೂಲಕ ಹೊರಬರುತ್ತದೆ. ಇದುವೇ ಚಕ್ರಗಳಿಗೆ ಮತ್ತು ಶಬ್ದಕ್ಕೆ ಇರುವ ಸಂಭಂದ. ವಿವರಗಳಿಗೆ ನಾಮ ೨೨೯ರ ವಿವರಣೆಗಳನ್ನು ನೋಡಿ). ಈಗ ವಿಷಯ ಸ್ಪಷ್ಟವಾಯಿತೆಂದುಕೊಳ್ಳುತ್ತೇನೆ ಅಥವಾ ಇನ್ನಷ್ಟು ಹೆಚ್ಚು ಗೊಂದಲವಾಯಿತೋ! :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ನಿಜ - ಶಿವನ ಡಮರುಗ ಮೂಲ ಶಬ್ದದ ವಿಚಾರ ಕಳುವಾಗದಿರಲು, ನಾನು ಯತ್ನಿಸುತ್ತಿದ್ದೆ. ಅದೀಗ ನಿಮ್ಮ ವಿವರಣೆಯಿಂದ ಮೂಲವಿವರಣೆಗೆ ಅನಾವಶ್ಯಕ ಎಂದು ಮನದಟ್ಟಾಯಿತು. ಕಡೆಯ ಸಾಲನು ತುಸು ಮಾರ್ಪಡಿಸಿದ್ದೇನೆ - ಶಿವ ಡಮರುಗ ಪ್ರಸ್ತಾಪವನ್ನು ಕೈಬಿಟ್ಟು.

ನಾನು ತುಸು ಹೆಚ್ಚು ತಪ್ಪು ಮಾಡುವುದು ಒಳಿತೆಂದು ಕಾಣುತ್ತಿದೆ - ಇದರಿಂದ ನಿಮ್ಮ ಅದ್ಬುತ ಹಾಗೂ ಸರಳ (ಮೂಲ ಅವತರಣಿಕೆಯಲ್ಲಿರದ) ವಿವರಣೆ ಕಾಣುವ ಸೌಭಾಗ್ಯ :-)

೩೧೨. ರಣತ್ಕಿಂಕಿಣಿ-ಮೇಖಲಾ
ಚತುರ್ ರೂಪಿಣಿ ಸ್ಥೂಲ ಸೂಕ್ಷ್ಮ ಕಾಮಕಲಾ ಸೂಕ್ಷಾತೀಸೂಕ್ಷ್ಮ ದೇವಿ
ಲಲಿತೆಯನರಿವ ಸಾಧಕ ಸ್ಥೂಲದಿಂ ಕುಂಡಲಿನೀಯರಿಯುವ ಛವಿ
ಉಗಮ ಮಣಿಪೂರಕಚಕ್ರ ನಾದ ಕಟಿಬಂಧದ ಕಿರುಘಂಟೆ ನಿನಾದ
ದೇವಿ ಹೆಜ್ಜೆಗನುರಣಿಸುತ ಶಬ್ದ ರಣತ್ಕಿಂಕಿಣಿ ಮೇಖಲಾ ಆಮೋದ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

ನಾಗೇಶರೆ,
ನೀವು ತಪ್ಪು ಮಾಡಿದ್ದರಿಂದ ನನಗೂ ಒಂದು ವಿಧವಾಗಿ ಲಾಭವಾಯಿತು. ಏಕೆಂದರೆ ಅದನ್ನು ತಪ್ಪು ಎಂದು ತಿಳಿಸಬೇಕೆಂದರೆ ನಾನು ವಿಷಯವನ್ನು ಸರಿಯಾಗಿ ಅರಿತಿರಬೇಕಲ್ಲವೇ? ಹೀಗೆ ವಿಷಯವನ್ನು ಸರಿಯಾಗಿ ಅರಿಯಬೇಕಾದರೆ ಅಧ್ಯಯನ ಮತ್ತು ಮನನ ಮಾಡಿದಾಗ ವಿಷಯಗಳು ಸ್ಪಷ್ಟವಾಗುತ್ತವೆಲ್ಲವೇ? ಇರಲಿ, ಕವನದಲ್ಲಿ ಎಲ್ಲಾ ವಿಷಯಗಳನ್ನೂ ಹಿಡಿದಿಡುವುದು ತ್ರಾಸದಾಯಕ ಕೆಲಸವೇ ಹಾಗಾಗಿ ಕೆಲವೊಂದು ವಿಷಯಗಳನ್ನು ಕೈಬಿಡುವುದು ಅನಿವಾರ್ಯವಾಗುತ್ತದೆ. ಈಗ ಅಂತಿಮವಾಗಿ ನೀವು ಕೊಟ್ಟಿರುವ ಪರಿಷ್ಕೃತ ರೂಪ ಹೆಚ್ಚು ಅರ್ಥಗರ್ಭಿತವಾಗಿದೆ ಮತ್ತು ಮುಖ್ಯವಾದ ಅಂಶಗಳೊನ್ನೊಳಗೊಂಡಿದೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ನಾಗೇಶರೆ,
ನೀವು ತಪ್ಪು ಮಾಡಿದ್ದರಿಂದ ನನಗೂ ಒಂದು ವಿಧವಾಗಿ ಲಾಭವಾಯಿತು. ಏಕೆಂದರೆ ಅದನ್ನು ತಪ್ಪು ಎಂದು ತಿಳಿಸಬೇಕೆಂದರೆ ನಾನು ವಿಷಯವನ್ನು ಸರಿಯಾಗಿ ಅರಿತಿರಬೇಕಲ್ಲವೇ? ಹೀಗೆ ವಿಷಯವನ್ನು ಸರಿಯಾಗಿ ಅರಿಯಬೇಕಾದರೆ ಅಧ್ಯಯನ ಮತ್ತು ಮನನ ಮಾಡಿದಾಗ ವಿಷಯಗಳು ಸ್ಪಷ್ಟವಾಗುತ್ತವೆಲ್ಲವೇ? ಇರಲಿ, ಕವನದಲ್ಲಿ ಎಲ್ಲಾ ವಿಷಯಗಳನ್ನೂ ಹಿಡಿದಿಡುವುದು ತ್ರಾಸದಾಯಕ ಕೆಲಸವೇ ಹಾಗಾಗಿ ಕೆಲವೊಂದು ವಿಷಯಗಳನ್ನು ಕೈಬಿಡುವುದು ಅನಿವಾರ್ಯವಾಗುತ್ತದೆ. ಈಗ ಅಂತಿಮವಾಗಿ ನೀವು ಕೊಟ್ಟಿರುವ ಪರಿಷ್ಕೃತ ರೂಪ ಹೆಚ್ಚು ಅರ್ಥಗರ್ಭಿತವಾಗಿದೆ ಮತ್ತು ಮುಖ್ಯವಾದ ಅಂಶಗಳೊನ್ನೊಳಗೊಂಡಿದೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಸರಿ ಶ್ರೀಧರರೆ, ಈ ರೂಪದಲ್ಲೆ ಅಂತಿಮ ಕೊಂಡಿ ಕೊಟ್ಟಿದ್ದೇನೆ.
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು