ಪ್ರಶ್ನೆ

ಪ್ರಶ್ನೆ

                                                                                                                      ಪ್ರಶ್ನೆ ಹನ್ನೆರಡು ವರ್ಷದ ಹುಡುಗ ಕೇಳುತ್ತಾನೆ, ಗುರುಗಳೆ, ಅತ್ತ್ಯುತ್ತಮವಾದ ಕೆಲಸ ಯಾವುದು? ನಾನು ತುಂಬ ದುಡ್ಡು ಗಳಿಸಬೇಕು, ದೊಡ್ಡ ವ್ಯಕ್ತಿಯೆನಿಸಿಕೊಳ್ಳಬೇಕು ಎನ್ನುವ ಭಾವನೆಯಲ್ಲಿ. ಯಾವುದೋ ಲಹರಿಯಲ್ಲಿದ್ದ ಗುರುಗಳು ಚಿಂತನೆಗೆ ಭಂಗ ತಂದ ಕೋಪದಲ್ಲಿ “ತಿಳುವಳಿಕೆಯಿಂದ ತಿಳಿಯುವ ಕಾಲ ಬಂದಾಗ ತಿಳಿಯುತ್ತೆ. ಈಗ ಹೋಗು.” ಎಂದು ದಬಾಯಿಸಿದರು. ಹುಚ್ಚು ಕಲ್ಪನೆಯಲ್ಲಿ ತೇಲಾಡುತ್ತಿದ್ದವನಿಗೆ ನೀರೆರಚಿ ಎಬ್ಬಿಸಿದಂತಾಯಿತು. ನಿರಾಸೆಯ ಮುಖ ಗುರುಗಳಿಗೆ ತೋರಿಸದೆ ಅವರಿಗಾಗಿ ತೆಗೆದಿಟ್ಟಿದ್ದ ಕಾಫಿ ಕಪ್ಪು ತರಲು ಒಳಗೆ ಹೋದ.           ಆದರೆ ಹುಡುಗನ ತಲೆಯಲ್ಲಿ ಪ್ರಶ್ನೆ ಹಾಗೆಯೇ ಉಳಿಯಿತು. ಓದಲು ಪುಸ್ತಕವನ್ನು ಕೈಯಲ್ಲಿ ಹಿಡಿದಾಗ ಪ್ರಶ್ನೆ ದುತ್ತೆಂದು ಎದ್ದು ನಿಲ್ಲುವುದು. ಆಗ ವಿಚಾರಪರವಶನಾಗುವನು. ನಾನೇಕೆ ಓದಬೇಕು? ಕಾರಣವೇ ಇಲ್ಲದ್ದನ್ನು ಓದಿ ಪ್ರಯೋಜನವೇನು? ಹೀಗೆ ಅಂದುಕೊಳ್ಳುತ್ತಿರುವಾಗಲೇ ಮೊನ್ನೆ ತನ್ನ ಶಾಲೆಯಲ್ಲಿ ನಡೆದ ಕಾರ್ಯಕ್ರಮ ಸ್ಮøತಿ ಪಟಲದಲ್ಲಿ ಕಾಣುವುದು. ಮುಖ್ಯವಾಗಿ ಅವತ್ತು ಮುಖ್ಯ ಅತಿಥಿಯಾಗಿದ್ದಂತ ವ್ಯಕ್ತಿಯನ್ನು ನೆನಪಿಸಿಕೊಂಡು, ಹೌದು ನಾನೂ ಅವರ ಹಾಗೆ ಆಗಬೇಕು. ಅವರು ಧರಿಸಿದ ಸೂಟ್ ಏನು! ಆಡುವ ಮಾತುಗಳೇನು! ಎಲ್ಲರೂ ಅವರ ಹಸ್ತಾಕ್ಷರಕ್ಕೆ ಮುತ್ತುವ ರೀತಿ ಏನು! ಅಬ್ಬಾ! ಅದೆಲ್ಲ ಸರಿ, ಹಾಗೆ ಆಗೋದಿಕ್ಕೆ ಏನು ಮಾಡಬೇಕು? ಉತ್ತರ ಕಂಡುಕೊಳ್ಳಲೇಬೇಕು ಎಂಬರ್ಥದ ಪ್ರಶ್ನೆ.          ಒಂದು ದಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ದಾಟಿ ಕಾಲೇಜಿನ ಆವರಣಕ್ಕೆ ಆಸ್ತೆಯಿಂದ ಅನಾವರಣಗೊಂಡ. ಈಗ ವಯಸ್ಕನಾಗಿದ್ದ ಮತ್ತು ಹಳ್ಳಿಯಿಂದ ಬಡ್ತಿ ಪಡೆದು ನಗರಕ್ಕೆ ಕಾಲಿಟ್ಟಿದ್ದ. ಹೊಸ ಜಗತ್ತಿಗೆ, ಹೊಸತನಕ್ಕೆ ಹಾತೊರೆಯುತ್ತಿದ್ದವನಿಗೆ ನಿದ್ದೆ ಬಂದವನಿಗೆ ಹಾಸಿಕೊಟ್ಟಂತಾಗಿತ್ತು. ತನ್ನ ಎಲ್ಲ ಪ್ರಶ್ನೆಗಳ ಮುಖೇನ ಉತ್ತರವನ್ನು ಹುಡುಕುತ್ತಿದ್ದವನಿಗೆ ಉತ್ತರ ಸಿಕ್ಕಿದೆ ಎಂದು ಭ್ರಮಿಸಿದ್ದ. ಹಾಗಾಗಿ ಈಗ ಅವನಿಗೆ ಎಲ್ಲವೂ ಗೊತ್ತು. ಯಾವುದನ್ನು ಅಭ್ಯಸಿಸಿದರೆ ಏನಾಗಬಹುದೆಂದು.          ಹಿಗೊಂದು ದಿನ ವಿಶ್ವವಿದ್ಯಾಲಯದಿಂದ ಕೊಡಬಹುದಾದ ಎಲ್ಲ ಪ್ರಮಾಣ ಪತ್ರಗಳನ್ನು ಪಡೆದ. ಮತ್ತೆ ಅದೇ ಪ್ರಶ್ನೆ. ಮುಂದೆ ಏನು? ಕೆಲಸ. ಅದೂ ದೊರೆಯಿತು. ಕೆಲಸದ ಮೊದಲನೆ ದಿನ ಅವನಿಗೆ ಹಬ್ಬ. ಎಷ್ಟೋ ವರ್ಷಗಳಿಂದ ಕಲ್ಪಿಸಿಕೊಂಡ, ಅದಕ್ಕಾಗಿಯೇ ಎಲ್ಲ ಇದ್ದ ಬಿದ್ದ ಪದವಿಗಳನ್ನು ಪಡೆದಿದ್ದ. ದಿನವೂ ಏಳುವುದಕ್ಕಿಂತ ಎರಡು ಘಂಟೆ ಮೊದಲೆ ಎದ್ದ. ಸ್ನಾನ ಮಾಡಿ, ಶುಭ್ರವಾದ ಬಟ್ಟೆಹಾಕಿಕೊಂಡು, ಕಾಲಿಗೆ ಹಿಂದಿನ ದಿನವೇ ತಂದಿಟ್ಟ ಬೂಟುಗಳನ್ನು ಮೆಟ್ಟಿ, ಠೀಕು ಠಾಕಾಗಿ ಗಡಿಯಾರ ನೋಡುತ್ತ ನಿಂತ. ಅಂತೂ ಕಛೇರಿಗೆ ಹೋಗುವ ಸಮಯವಾಯಿತು, ಹೊರಟ. ಉತ್ಸಾಹದಿಂದ ಕೆಲಸದ ಬಗ್ಗೆ ತಿಳಿದುಕೊಂಡ. ಆಗಲೇ ಸಂಜೆಯಾಯಿತು. ಮನೆಗೆ ಬರುವ ತವಕ. ಮತ್ತೆ ಗಡಿಯಾರ ನೋಡುತ್ತ ಕಳಿತ. ಅಷ್ಟರಲ್ಲಿ ಇವನಿಗೆ ಕೆಲಸ ಕೊಟ್ಟ ಧಣಿಯ ಕರೆ ಬಂತು. “ಇವತ್ತು ಇಷ್ಟು ಸಾಕು, ನಾಳೆಯಿಂದ ಸಮಯಕ್ಕೆ ಸರಿಯಾಗಿ ಕಛೇರಿಗೆ ಬನ್ನಿ” ಎಂದರು. ಇವನು ಖುಷಿಯಿಂದ ಉಬ್ಬಿಹೋದ, ಬೇಗ ಬಿಟ್ಟರೆಂಬ ಕಾರಣಕ್ಕೆ.          ಸಂತೋಷದಿಂದ ಮನೆಗೆ ಬಂದು ಅಛೇರಿಯಲ್ಲಿ ನಡೆದುದೆಲ್ಲವನ್ನು ಸ್ನೇಹಿತರಿಗೆ, ಮನೆಯವರಿಗೆ ವಿವರಿಸಿ, ತನ್ನ ಸಂತೋಷದಲ್ಲಿ ಅವರನ್ನು ಭಾಗಿಯನ್ನಾಗಿ ಮಾಡಿಕೊಂಡ. ಅಲ್ಲಿಗೆ ಅವನ ಭಾವೋಧ್ವೇಗ ಸ್ವಲ್ಪ ಕಡಿಮೆಯಾಯಿತು. ಮರುದಿನ ಅದೇ ಸಂತೋಷವನ್ನ ಹೊತ್ತುಹೋದ. ಇಂತಹ ತರಾತುರಿಯಲ್ಲಿ ಒಂದು ತಿಂಗಳು ಕಳೆದದ್ದು ಗೊತ್ತೇಯಾಗಲಿಲ್ಲ. ಮೋದಲ ಸಂಬಳವನ್ನು ತೆಗೆದುಕೊಂಡು ಖುಷಿ ಖುಷಿಯಿಂದ ಕರ್ಚು ಮಾಡಿದ. ನನ್ನ ಬೆವರಿನ ಪ್ರತಿಫಲ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿದ. ಇದಾದ ಕೆಲವು ತಿಂಗಳುಗಳ ನಂತರ ಈ ಭಾವನೆ ಅವನಲ್ಲಿರಲಿಲ್ಲ. ಕಾರಣ ಜವಾಬ್ದಾರಿಗಳು ಮೈಮೇಲೆ ಬಿದ್ದಿದ್ದವು. ಅವುಗಳನ್ನು ಹೊರುವ ಅನಿವಾರ್ಯತೆ ಅವನನ್ನು ಕಾಡುತ್ತಿತ್ತು.         ದಿನಗಳೆದಂತೆ ಕಣ್ಣುಗಳಲ್ಲಿ ಸೂಸುತ್ತಿದ್ದ ಹೊಳಪು ಕಡಿಮೆಯಾಗಿ ದಣಿವಿನ ಛಾಯೆ ಅವುಗಳನ್ನು ಆವರಿಸಿತು. ಮಾಡುವ ಕೆಲಸದ ಮೇಲೆ ಬೇಸರಿಕೆಯಾಗಿ ಅದನ್ನೇ ಟೀಕಿಸಹತ್ತಿದ. ಈಗ ಮತ್ತೇ ಅವನ ಹೆಬ್ಬಯಕೆ ಬಾಯ್ದೆರೆದು ನಿಂತಂತಾಗಿ ಅದಕ್ಕೆ ಅಣಿಯಾದ. ಮಾಡುತ್ತಿರುವ ಕೆಲಸಕ್ಕಿಂತ ಎಲ್ಲದರಲ್ಲೂ ದ್ವಿಗುಣತೆಯಿರುವ ಕೆಲಸ ಹುಡುಕಲು ಬರದಿಂದ ಶುರುಮಾಡಿದ. ಯಾವುದೇ ತೊಂದರೆ ಇಲ್ಲದೆ ಅದೂ ಸಿಕ್ಕಿತು. ಎರಡನೇ ಮದುವೆ ಆಗುವ ಹಾಗೆ ಆ ಕೆಲಸಕ್ಕೂ ಸೇರಿಕೊಂಡ. ಈ ಅನುಭವವೂ ಕೂಡ ಬಹಳ ಕಾಲ ಬಾಳಲಿಲ್ಲ. ಇಂತಹ ಅನುಭವಗಳೇ ಪದೇ ಪದೇ ಪುನರಾವರ್ತಿತಗೊಂಡು ಒಂದು ದಿನ ತನ್ನ ಹೆಬ್ಬಯಕೆಯನ್ನು ಬದಿಗೊತ್ತಿ, ನಡೆದು ನಡೆದು ದಣಿದುಕೊಂಡ ವ್ಯಕ್ತಿ ಕಾಲು ಚಾಚಿಕೊಂಡು ಕುಳಿತುಕೊಳ್ಳುವ ಹಾಗೆ, ಉತ್ಸಾಹವನ್ನೇ ಕಳೆದುಕೊಂಡು ಕುಳಿತ. ಎಲ್ಲವೂ ನಗಣ್ಯವೆನಿಸಹತ್ತಿದವು. ಜೀವನ ದುರ್ಲಭವಾಯಿತು. ಮತ್ತೇ ವಿಚಾರಪರವಶನಾದ-ನಾನೇಕೆ ಇಷ್ಟೇಲ್ಲ ಮಾಡಿದೆ? ಯಾರಿಗೋಸ್ಕರ ಮಾಡಬೇಕಿತ್ತು? ಗುರುಗಳು ತಾನು ಚಿಕ್ಕವನಿದ್ದಾಗ ಹೇಳಿದ ಮಾತು ನೆನಪಾಗಿ-ನಾನು ಕೇಳಿದ ಪ್ರಶ್ನೆಗೆ ಅವರ ಉತ್ತರ ಸರಿಯಾಗಿದೆ ಎಂದೆನಿಸಿತು. ಇದೆಲ್ಲವನ್ನೂ ಯೋಚಿಸುತ್ತಾ ಸಂತೆಯ ಒಂದು ಬದಿಯಲ್ಲಿ ನಿಂತ ತನ್ನ ಕಾರಿನ ಕಿಟಕಿಯಿಂದಾಚೆ ಕಣ್ಣಾಯಿಸಿದ-         ಅವರದೇ ಕೆಲಸಗಳಲ್ಲಿ ನಿರತರಾಗಿರುವ ತರಕಾರಿ ವ್ಯಾಪಾರದವರು, ಕಿರಾಣಿ ಅಂಗಡಿಯವರು, ಮಕ್ಕಳಾಟಿಕೆ ಮಾರುವವ, ಜನಸಂಧಿಯಲ್ಲೂ ತೂರಿಕೊಂಡು ನುಗ್ಗಿಕೊಂಡು ನುಸುಳುವ ಬಿಕ್ಷುಕ. ಇದಾವುದರ ಪರಿವೆ ಇಲ್ಲದೆ ತನ್ನ ಆಟದಲ್ಲಿ ಮೈಮರೆತ ಮಗು. ದಾರಿಗೆ ಅಡ್ಡವಾಗಿ ನಿಂತ ಜಟಕಾಗಾಡಿಯವ, ಅವನನ್ನೇ ಬೈಯಲು ಬಂದಂತೆ ಬೈಯುತ್ತಿರುವ ದಾರಿಕಾಣದ ವಿದ್ಯಾವಂತ ಜನಗಳು. ಪಕ್ಕದಲ್ಲಿಯೇ ವಿದ್ಯೆಗೆ ವಿನಯವೇ ಭೂಷಣವೆಂದು ಬರೆದು ತೂಗು ಹಾಕಿರುವ ಪುಸ್ತಕದಂಗಡಿ. ಕಾಲಲ್ಲಿ ನಾಯಿಗೆರೆ ಇದ್ದವರ ಹಾಗೆ ಅವಸರವಸರವಾಗಿ ಓಡಾಡುತ್ತಿರುವ ಜನಜಂಗುಳಿ. ಇವರ ರಕ್ಷೆಣೆಗೆ ನಿಂತಂತೆ ಷರತ್ತುಬದ್ದವಾಗಿ ಪಾದರಕ್ಷೆಗಳನ್ನು ಮಾರುತ್ತಿರುವ ವ್ಯಾಪಾರಿ.        ಇವರೆಲ್ಲರೂ ತನ್ನಂತೆಯೇ ಮನುಷ್ಯರು. ಆದರೆ ವ್ಯಕ್ತಿತ್ವ ಬೇರೆ, ಅಂತಸ್ತು ಬೇರೆ, ಜೀವನ ಸ್ತರ ಬೇರೆ. ನಮ್ಮೆಲ್ಲರಲ್ಲಿಯೂ ಇರಬೇಕಾದ ಮತ್ತು ಬೇಕಾದ ಭಾವ ಒಂದೇ-ನೆಮ್ಮದಿ-ಇದಿಲ್ಲದಿದ್ದರೆ ವ್ಯಕ್ತಿತ್ವ, ಅಂತಸ್ತು, ಜೀವನ ಸ್ತರ ಇವು ಯಾವ ಲೆಕ್ಕಕ್ಕೂ ಜಮಾ ಆಗುವುದಿಲ್ಲ.        ಇದನ್ನರಿತ ಅವನ ಕಣ್ಣುಗಳು ಸಮಾಧಾನ ಹಾಗೂ ಜೀವನ ಸ್ಥಿರತೆಯನ್ನು ಹೊರಸೂಸಿದವು. ಈ ಸತ್ಯವೇ ನಮ್ಮ ಜೀವನಕ್ಕೆ ದಾರಿ. ಬಿಸಿಲುಗುದುರೆಯ ಹಾಗೆ ಜೀವನ, ಅಲ್ಲವೇ? ಕಾಣಿಸುತ್ತೆ, ಕಲ್ಪಿಸುತ್ತೆ ಆದರೆ ಹತ್ತಿರ ಹೋದರೆ ಏನೂ ಇಲ್ಲ. ಅನುಭವ ಅನುಗಾಲ ಬಾಳುವಂತದ್ದು.        ಈ ಜೀವನಕ್ಕೆ ಒಬ್ಬೋಬ್ಬರು ಒಂದೋಂದು ಅರ್ಥವನ್ನು ಕಲ್ಪಿಸಿ ಮತ್ತಷ್ಟು ಗೋಜುಗೋಜಲಾಗಿ ಮಾಡಿಟ್ಟಿದ್ದಾರೆ. ನಿಜ ಹೇಳಬೇಕೆಂದರೆ ಇವರಾರೂ ವೃತ್ತದ ಕೇಂದ್ರ ಬಿಂದುವಿನಂತೆ ನಿಂತು ನೋಡಿಲ್ಲ ಎಂಬುದು ಸ್ಪಷ್ಟವಾಗುತ್ತೆ. ಒಂದು ವೇಳೆ ಇವರೆಲ್ಲರೂ ಕೇಂದ್ರ ಬಿಂದುವಿನಂತೆ ನಿಂತು ನೋಡಿದ್ದರೆ ಉತ್ತರ ಒಂದೇ ಯಾಗಿರುತ್ತಿತ್ತು. ಗಣಿತದಲ್ಲಿ ತೋರಿಸುವ ವ್ಯಾಸದ ಹಾಗೆ. ಪ್ರತಿ ಮನುಷ್ಯನ ದೃಷ್ಟಿಕೋನ ಬೇರೆ ಬೇರೆ ಆದರೆ ಜೀವನದ ದೃಷ್ಟಿ ಒಂದೇ ಅಲ್ಲವೇ? ಈ ಭೂಮಿ ಮೇಲೆ ಇರುವಷ್ಟು ದಿನ ಚಂದಾಗಿರಬೇಕು. ನಮಗೆ ಸರಿ ಅನಿಸಿದ್ದನ್ನು ಮಾಡಬೇಕು. ನಮ್ಮ ಚಟುವಟಿಕೆಗಳಿಂದ ಇನ್ನೋಬ್ಬರಿಗೆ ತೊಂದರೆಯಾಗದ ಹಾಗೆ.                                                                                                                                                                                                                                                                                                                                      -ಜೀವನಕ್ಕೆ ಅರ್ಥವಿಲ್ಲ.                                                                                                                                                                                                                                                              -ಧಾತು (ಉದಯಕುಮಾರ)  

Comments

Submitted by RAMAMOHANA Mon, 08/12/2013 - 13:51

ತೇಲಿಸಿಕೊಂಡು ಹೋಗುವ‌ ಸೊಗಸಾದ‌ ನಿರೂಪಣೆ ಉದಯಕುಮಾರರೆ. ಪ್ರೆಶ್ನೆ ಕೇಳುವ‌ ಬಾಲಕನ‌ ಪಾತ್ರದಲ್ಲಿ ನಮ್ಮತನ‌ ಸಾಗುತ್ತದೆ. ಚೆನ್ನಾಗಿದೆ ಜೀವನ‌ ದ‌ರ್ಶನ‌. ಧನ್ಯವಾದಗಳು_ ರಾಮೋ.
Submitted by Dhaatu Tue, 08/13/2013 - 16:40

In reply to by RAMAMOHANA

ಧನ್ಯವಾದಗಳು ರಾಮೋ ಅವರೆ. ಸಂಪದ ಮನೆಗೆ ಗೃಹ ಪ್ರವೇಶ ಮಾಡಿದ ಪ್ರಥಮ ದಿನವೇ ನನ್ನನ್ನು ನಿಮ್ಮ ಪ್ರತಿಕ್ರಿಯೆಯ ಮೂಲಕ ಸ್ವಾಗತಿಸಿದ್ದಿರಿ.
Submitted by makara Tue, 08/13/2013 - 18:31

ಇದು ಚಿಕ್ಕಂದಿನಲ್ಲಿ ನನಗೆ ನನ್ನ ತಂದೆಯವರು ಹೇಳುತ್ತಿದ್ದ ಕಥೆ. ಒಬ್ಬನ ಬಳಿ ಮೂರು ರೊಟ್ಟಿಗಳಿದ್ದವು. ಅವನಿಗೆ ಹಸಿವೆಯಾದಾಗ ಅವನು ತನ್ನ ಬಳಿಯಲ್ಲಿದ್ದ ಒಂದು ರೊಟ್ಟಿಯನ್ನು ತಿಂದ, ಹಸಿವೆ ಇಂಗಲಿಲ್ಲ. ಸರಿ, ಎರಡನೇ ರೊಟ್ಟಿಯನ್ನೂ ತಿಂದ ಆಗಲೂ ಹಸಿವು ನೀಗಲಿಲ್ಲ. ಕಡೆಯದಾಗಿ ಮೂರನೇ ರೊಟ್ಟಿಯನ್ನೂ ತಿಂದ ಆಗ ಅವನ ಹಸಿವೆಯು ಇಂಗಿ ಹೊಟ್ಟೆ ತುಂಬಿ ತೃಪ್ತಿಯಾಯಿತು. ಆಗ ಅವನೆಂದುಕೊಂಡ, ಛೇ ಎಂಥಾ ತಪ್ಪು ಮಾಡಿದೆ. ಈ ಮೂರನೇ ರೊಟ್ಟಿಯನ್ನು ಮೊದಲೇ ತಿಂದು ಬಿಟ್ಟಿದ್ದರೆ ಆಗಲೇ ನನ್ನ ಹೊಟ್ಟೆ ತುಂಬುತ್ತಿತ್ತಲ್ಲ, ಅನಾವಶ್ಯಕವಾಗಿ ಎರಡು ರೊಟ್ಟಿಗಳನ್ನು ಹಾಳು ಮಾಡಿದೆನಲ್ಲ! ಹೀಗೆಯೇ ಹಲವಾರು ಅನುಭವಗಳಾದ ಮೇಲೆ ತಿಳುವಳಿಕೆ ಮೂಡುವುದು. ಆದ್ದರಿಂದ ಮೊದಲೇ ಇದನ್ನು ಅರಿತಿದ್ದರೆ ಜೀವನ ಸುಗುಮವಾಗುತ್ತಿತ್ತು ಎನ್ನುಕೊಳ್ಳುವುದು ತಪ್ಪಾಗುತ್ತದೆ. ಚಿಂತನಾರ್ಹ ಮತ್ತು ಸರಳ ಬರಹಕ್ಕೆ ಅಭಿನಂದನೆಗಳು, ಉದಯ್ ಅವರೆ.
Submitted by Dhaatu Wed, 08/14/2013 - 16:27

In reply to by makara

ಶ್ರೀಧರ ಬಂಡ್ರಿಯವರಿಗೆ, ಜಾನಪದ ಕಥೆಗಳು ಎಷ್ಟು ಸರಳ ಮತ್ತು ಗಮನಾರ್ಹ ವಾಗಿರುತ್ತವೆಂದರೆ ನೀವು ಹೇಳಿರುವ ಕಥೆಯೇ ಸಾಕ್ಷಿ. ನಿಮ್ಮ ತಂದೆಯವರು ನಿಮಗೆ ದಾಟಿಸಿದ ಜೀವನಾನುಭವದ ಕಥೆಯನ್ನು ನಮ್ಮೆಡೆಗೆ ದಾಟಿಸಿದ್ದಿರಿ ಮತ್ತು ನನ್ನ ಮೊದಲ ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ತುಂಬುಹೃದಯದ ಧನ್ಯವಾದಗಳು.