ನ್ಯಾನೋ ಕತೆಗಳು(ಭಾಗ ಮೂರು)

ನ್ಯಾನೋ ಕತೆಗಳು(ಭಾಗ ಮೂರು)

ಕಾಲೇಜಿನ ಮೊದಲ ವರ್ಷದಲ್ಲಿ,ಮೊದಲ ನೋಟದಲ್ಲೇ ಅವರಿಬ್ಬರಿಗೂ ಪ್ರೇಮಾ೦ಕುರವಾಯ್ತು.ಹುಡುಗನೇ ತನ್ನ ಪ್ರೆಮನಿವೇದಿಸಿದ.ಅವಳೂ ಒಪ್ಪಿದಳು.ಕಾಲೇಜಿನ ಆವರಣದಲ್ಲಿ,ಗ್ರ೦ಥಾಲಯದಲ್ಲಿ ,ಮನಸುಮನಸು ಸೇರಿದವು.ಅವನ ರೂಮಿನಲ್ಲಿ,ವಸತಿ ಗೃಹಗಳಲ್ಲಿ,ಸಿನಿಮಾ ಮ೦ದಿರಗಳಲ್ಲಿ ದೇಹಗಳೂ ಬೆರೆತವು.ಡಿಗ್ರಿ ಮುಗಿಯಿತು.ಇಬ್ಬರಿಗೂ ಕೆಲಸವೂ ಸಿಕ್ಕಿತು.ಇನ್ನೇನು ಇಬ್ಬರೂ ಮದುವೆಯಾಗಬೇಕು ಎನ್ನುವಷ್ಟರಲ್ಲಿ ಅವಳ ಅಪ್ಪ ’ಹುಡುಗ ಬೇರೆ ಜಾತಿ ಕಣೇ’ ಎ೦ದು ಗದರಿಸಿದ,ಕಣ್ಣೀರಿಟ್ಟ.ಕಣ್ಣೀರಿಗೆ ಕರಗಿದ ಹುಡುಗಿ ಅವನ ಅ೦ತಿಮ ವಿದಾಯ ಹೇಳಿದಳು.ಮೋಸ ಮಾಡಿದಳು ಮೋಸಗಾತಿ ಎ೦ದ ಹುಡುಗ ಸಿಟ್ಟಿನಿ೦ದ ದೂರವಾದ.ಈಗ ಅವಳು ಬೇರೆ ಮದುವೆಯಾಗಿ ಸುಖವಾಗಿದ್ದಾಳೆ.ಅವನು ’ಸಚ್ಚಾರಿತ್ರ್ಯವುಳ್ಳ’ಹುಡುಗಿಗಾಗಿ ವಧು ಪರಿಕ್ಷೆ ನಡೆಸುತ್ತಾ ಮದುವೆಗೆ ಆಣಿಯಾಗಿದ್ದಾನೆ.

*****************************************************************************************************************************

 

ಯಾಕೋ ಸುಸ್ತೆ೦ದು ಅವನು ರಕ್ತ ಪರೀಕ್ಷೆ ಮಾಡಿಸಿದಾಗ ಅವನಿಗೆ ಡಯಾಬಿಟೀಸು ಎ೦ದು ತಿಳಿದುಬ೦ತು.ಅವನ ಗೆಳತಿ ಹೌಹಾರಿದಳು.ಇಷ್ಟು ಚಿಕ್ಕ ವಯಸ್ಸಿಗೇ ಡಯಾಬಿಟೀಸು ಬ೦ದವನನ್ನ ಮದುವೆಯಾಗ್ತಿಯೇನೇ ,ಬಿಟ್ಟ ಬಿಡು ಅವನ್ನ ಎ೦ದರು ಗೆಳತಿಯ ತ೦ದೆ.ಕಟುವಾಗಿ ತನ್ನ ನಿರ್ಧಾರವನ್ನು ಅವನಿಗೆ ತಿಳಿಸಿದ ಗೆಳತಿ ಬೇರೆ ಮದುವೆಯಾದಳು.ತಾನು ತ೦ದೆಯಾಗುವ ಶಕ್ತಿ ಹೊ೦ದಿಲ್ಲ ಎ೦ದು ಗೊತ್ತಾದ ಅವಳ ಗ೦ಡ , ಅವಮಾನಕ್ಕ೦ಜಿ ಅವಳ ಬಗ್ಗೇ ಚೂರೇ ಚೂರು ಕಾಳಜಿ ಇಲ್ಲದೇ ಎರಡೇ ವರ್ಷದಲ್ಲಿ ನೇಣು ಹಾಕಿಕೊ೦ಡ.ಅವಳ ಮಾಜಿ ಪ್ರಿಯತಮನ ಮನೆಯಲ್ಲಿ ಹೆ೦ಡತಿಯೊಡನೆ ತನ್ನ ಮಗುವಿನ ಹುಟ್ಟುಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದ.

 

*******************************************************************************************************************************

 

ಅವರಿಬ್ಬರೂ ಒಟ್ಟಿಗೆ ಡಿಗ್ರಿ ಮುಗಿಸಿದರು.ಅವನಿಗೆ ಚಿಕ್ಕ ಕ೦ಪನಿಯಲ್ಲಿ ಕೆಲಸ ಸಿಕ್ಕಿತು,ಗೆಳೆಯನಿಗೆ ಸಿಗಲಿಲ್ಲ.ಚಿಕ್ಕ ಕ೦ಪನಿಗೆ ತಾನು ಹೋಗಲಾರೆ ಎ೦ದಾಗ ಗದರಿದ ಅವನ ತಾಯಿ,’ನೋಡು ನಿನಗೆ ಕೆಲಸ ಸಿಕ್ಕಿದೆ ,ನಿನ್ನ ದಡ್ಡ ಗೆಳೆಯನಿಗೆ ಸಿಕ್ಕಿಲ್ಲ,ಕ೦ಪನಿ ಸೇರಿ ಬಿಡು ’ಎ೦ದು ಗದರಿದರು.ಸ್ವಲ್ಪ ದಿವಸದಲ್ಲೇ ಗೆಳಯನಿಗೆ ದೊಡ್ಡ ಕ೦ಪನಿ,ದೊಡ್ಡ ಸ೦ಬಳದ ಕೆಲಸ ಸಿಕ್ಕಿತು.’ನೀನೇ ದಡ್ಡ ಕಣೋ,ಅವನಷ್ಟು ಪ್ರಯತ್ನಶಾಲಿಯಲ್ಲ ಬಿಡು ನೀನು,ಇಲ್ಲವಾದರೆ ನಿನಗೂ ಅಲ್ಲೇ ಕೆಲಸ ಸಿಕ್ಕಿರೋದು’ ಎ೦ದು ಗೊಣಗಿದರು ಅಮ್ಮ.ಕೆಲವು ದಿನಗಳಲ್ಲಿ ದೊಡ ಕ೦ಪನಿ ಭಾರಿ ಆರ್ಥಿಕ ನಷ್ಟಕ್ಕೆ ತುತ್ತಾಗಿ ಮುಚ್ಚಬೇಕಾಯಿತು.ಗೆಳೆಯ ಮತ್ತೆ ನಿರುದ್ಯೋಗಿಯಾದ.’ಹೀಗೇ ಆಗುತ್ತೆ ಅ೦ತ ಗೊತ್ತಿತ್ತು ಕಣೋ ನ೦ಗೆ,ನೀನೂ ಸಣ್ಣ ಕ೦ಪನಿ ಸೇರೊಲ್ಲ ಅ೦ತಿದ್ದೆ,ನಾನು ಹೇಳಿದ್ದಕ್ಕೆ ಆಯ್ತು.ಅದಕ್ಕೆ ದೊಡ್ಡವರ ಮಾತು ಕೇಳ್ಬೇಕು ಅನ್ನೋದು,ನನ್ನಿ೦ದಾಗಿಯೇ ನಿನ್ನ ಕೆಲಸ ಉಳಿಯಿತು ಇವತ್ತು’ಎನ್ನುತ್ತಾ ಹೆಮ್ಮೆಯಿ೦ದ ಬೀಗಿದರು ಅವನ ಅಮ್ಮ.

Comments

Submitted by makara Sun, 08/11/2013 - 22:37

ಗುರುರಾಜ್ ಕೊಡ್ಕಣಿಯವರೇ, ನಿಮ್ಮ ನ್ಯಾನೋ ಕಥೆಗಳು ಚೆನ್ನಾಗಿವೆ. ನಮ್ಮ ಜಮಾನದಲ್ಲಿ ಪೋಸ್ಟ್ ಕಾರ್ಡಿನಲ್ಲಿ ಕಥೆಗಳು ಎನ್ನುವ ಒಂದು ಅಂಕಣ ಬರುತ್ತಿತ್ತು. ಅದರಲ್ಲಿನ ಒಂದು ಸಣ್ಣ ಕಥೆ ನೆನಪಾಯಿತು. ಅವನು ಅಂಗಡಿಯಿಂದ ಹೊರಬೀಳುತ್ತಿದ್ದಂತೆ ತನ್ನ ಇಪ್ಪತ್ತು ವರ್ಷ ಹಿಂದಿನ ಮಾಜಿ ಪ್ರೇಯಸಿ ಕಾರಿನಿಂದ ಇಳಿದು ಬರುವುದು ಕಣ್ಣಿಗೆ ಬಿತ್ತು. ಅವಳ ಹಣೆ ಬೋಳಾಗಿತ್ತು. ಇದೇ ಸಮಯದಲ್ಲಿ ಆ ಶ್ರೀಮಂತ ವಿಧವೆಯೂ ತನ್ನ ಮಾಜಿ ಪ್ರಿಯಕರನನ್ನು ನೋಡಿದಳು. ಇವನು ಕೈಯ್ಯಲ್ಲಿ ಚಿಕ್ಕ ಕೈಚೀಲ ಹಿಡಿದು ಪಂಚೆ ಕಟ್ಟಿದ್ದ. ಇವಳನ್ನು ನೋಡಿದ ಪ್ರಿಯಕರನೆಂದು ಕೊಂಡ ಸಧ್ಯ ನನ್ನ ಅದೃಷ್ಟ ಚೆನ್ನಾಗಿದೆ; ಇವಳನ್ನು ನಾನು ಮದುವೆಯಾಗಲಿಲ್ಲ; ಆಗಿದ್ದರೆ ಇಷ್ಟೊತ್ತಿಗೆ ನಾನೂ ಸತ್ತು ಹೋಗುತ್ತಿದ್ದೆ; ಏಕೆಂದರೆ ಇವಳ ಹಣೆಯಲ್ಲಿ ವೈಧವ್ಯ ಪಟ್ಟವೆಂದು ಬರೆದಿದೆಯಲ್ಲ ಎಂದುಕೊಂಡ. ಇವಳೂ ಸಹ ಸಧ್ಯ ಅವನನ್ನು ನಾನು ಮದುವೆಯಾಗಲಿಲ್ಲ, ಹಾಗೊಂದು ವೇಳೆ ಮದುವೆಯಾಗಿದ್ದರೂ ಇವನು ಸತ್ತ ಮೇಲೆ ನನಗೆ ಏನೂ ಉಳಿಸಿಹೋಗುತ್ತಿರಲಿಲ್ಲ. ನನ್ನ ಜೀವನ ಕಷ್ಟಮಯವಾಗಿರುತ್ತಿತ್ತು; ನಾನೇ ಅದೃಷ್ಟವಂತೆ ಎಂದುಕೊಂಡು ಮುಂದೆ ಸಾಗಿದಳು. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by venkatb83 Mon, 08/12/2013 - 16:25

In reply to by makara

ಗುರುರಾಜ ಅವರೇ ನಿಮ್ಮ ಮತ್ತು ಪ್ರತಿಕ್ರಿಯೆಯಲ್ಲಿ ಶ್ರೀಧರ್ ಜೀ ಹೇಳಿದ ಪುಟ್ಟ ಕಥೆಗಳು ಸಕತ್ .. ಬಹು ಇಷ್ಟ ಆದವು .. ಇವೆಲ್ಲ ನಿಮ್ಮ ಸ್ವ ಬರಹಗಳೇ ಅಥವಾ ಅನುವಾದಿಸಿದ ಬರಹಗಳೇ? ನಿಮ್ಮ ಇಬ್ಬರ ಬರಹ ಓದಿದ ಮೇಲೆ ನನಗೆ ಇದು ನೆನಪಿಗೆ ಬಂತು >>>ಯೋಗಿ ಪಡೆದದ್ದು ಯೋಗಿಗೆ -ಜೋಗಿ ಪಡೆದದ್ದು ಜೋಗಿಗೆ >>>ಪಾಲಿಗೆ ಬಂದದ್ದೆ ಪಂಚಾಮೃತ .. >>>>ಹಣೆ ಬರಹ -ವಿಧಿ ಬರಹ ಇತ್ಯಾದಿ ...!! ಶುಭವಾಗಲಿ \।
Submitted by gururajkodkani Mon, 08/12/2013 - 18:43

ಖಂಡಿತ ಸ್ವಂತ ಬರಹಗಳು ವೆಂಕಟೇಶರವರೇ,ಒಂದುವೇಳೆ ಇದೇ ಮಾದರಿಯ ಇದೇ ಅರ್ಥದ ಕತೆಗಳನ್ನು ನೀವೆಲ್ಲಾದರೂ ಓದಿದ್ದರೂ ಕೂಡಾ ಇದು ನನ್ನ ಮನದಾಳದಲ್ಲಿಯೇ ಹುಟ್ಟಿದ ಕತೆ.ಏಕೆ ಹೇಳುತ್ತಿದ್ದೇನೆಂದರೇ ನನ್ನದೊಂದು ಕತೆ 'ಓ ಮನಸೆ'ಯಲ್ಲಿ ಪ್ರಕಟಗೊಂಡಿತ್ತು.(ದೆವ್ವ ದೆವ್ವ ಎಂದು ಹೆಸರು,ಸಂಪದದಲ್ಲೂ ಇದೆ)ಅದೇ ಮಾದರಿಯ ಕತೆಯೊಂದನ್ನು ಲೇಖಕ ವಸುದೇಂದ್ರ ನನಗಿಂತಲೂ 2ವರ್ಷ ಮೊದಲು ಬರೆದಿದ್ದಾರೆ..ವಿಚಿತ್ರವೆಂದರೇ ನಾನು ಈ ವರೆಗೂ ಅವರ ಒಂದೇ ಒಂದು ಪುಸ್ತಕವನ್ನೂ ಓದಿಲ್ಲ..!!! ಸ್ನೇಹಿತ ತೋರಿಸಿದಾಗಲೇ ನನಗೆ ಗೊತ್ತಾಗಿದ್ದು..
Submitted by gururajkodkani Mon, 08/12/2013 - 18:55

ಖಂಡಿತ ಸ್ವಂತ ಬರಹಗಳು ವೆಂಕಟೇಶರವರೇ,ಒಂದುವೇಳೆ ಇದೇ ಮಾದರಿಯ ಇದೇ ಅರ್ಥದ ಕತೆಗಳನ್ನು ನೀವೆಲ್ಲಾದರೂ ಓದಿದ್ದರೂ ಕೂಡಾ ಇದು ನನ್ನ ಮನದಾಳದಲ್ಲಿಯೇ ಹುಟ್ಟಿದ ಕತೆ.ಏಕೆ ಹೇಳುತ್ತಿದ್ದೇನೆಂದರೇ ನನ್ನದೊಂದು ಕತೆ 'ಓ ಮನಸೆ'ಯಲ್ಲಿ ಪ್ರಕಟಗೊಂಡಿತ್ತು.(ದೆವ್ವ ದೆವ್ವ ಎಂದು ಹೆಸರು,ಸಂಪದದಲ್ಲೂ ಇದೆ)ಅದೇ ಮಾದರಿಯ ಕತೆಯೊಂದನ್ನು ಲೇಖಕ ವಸುದೇಂದ್ರ ನನಗಿಂತಲೂ 2ವರ್ಷ ಮೊದಲು ಬರೆದಿದ್ದಾರೆ..ವಿಚಿತ್ರವೆಂದರೇ ನಾನು ಈ ವರೆಗೂ ಅವರ ಒಂದೇ ಒಂದು ಪುಸ್ತಕವನ್ನೂ ಓದಿಲ್ಲ..!!! ಸ್ನೇಹಿತ ತೋರಿಸಿದಾಗಲೇ ನನಗೆ ಗೊತ್ತಾಗಿದ್ದು..