ಸೌರವ್ ಗಂಗೂಲಿ
ಸೌರವ್ ಗಂಗೂಲಿ ನನ್ನ ಅಚ್ಚು ಮೆಚ್ಚಿನ ಕ್ರಿಕೆಟ್ ಆಟಗಾರ. ಹೀಗೆಂದಾಗ ಎಲ್ಲರ ಮನಸ್ಸಲ್ಲೂ ಒಂದು ಪ್ರಶ್ನೆ... ಕ್ರಿಕೆಟ್‌ನ ದೇವರು ಸಚಿನ್, ಮೊದಲ ವಿಶ್ವಕಪ್ ತಂದುಕೊಟ್ಟ ಕಪಿಲ್, ಸಾಲು ಸಾಲು ಸರಣಿ, ವಿಶ್ವಕಪ್, ಐಪಿಎಲ್ ಗಳನ್ನು ಗೆದ್ದಂತಹ ಧೋನಿ.. ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿದ ಬ್ರಾಡ್‌ಮಾನ್, ಲಾರಾ, ದ್ರಾವಿಡ್, ಸೆಹ್ವಾಗ್..... ಇವರನ್ನೆಲ್ಲಾ ಬಿಟ್ಟು ನಾನೇಕೆ ಗಂಗೂಲಿಯನ್ನು ನೆನಪಿಸುತ್ತಿದ್ದೇನೆ.? ಕಾರಣ ಖಂಡಿತ ಇದೆ.
2000 ಭಾರತದ ಕ್ರಿಕೆಟ್‌ನ ಕರಾಳ ವರ್ಷ, ತಂಡದ ನಾಯಕ ಅಜರುದ್ದೀನ್ ಹಾಗೂ ತಂಡದ ಪ್ರಮುಖ ಆಟಗಾರರೆಲ್ಲಾ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಬಿದ್ದು ಇಡೀ ಭಾರತ ತಂಡಕ್ಕೇ ಬರಸಿಡಿಲು ಬಡಿದಂತಾಗಿತ್ತು. ವಿಶ್ವ ಕ್ರಿಕೆಟ್‌ನಲ್ಲಿ ಭಾರತ 8ನೇ ಸ್ಥಾನಕ್ಕೆ ಕುಸಿಯಿತು. ಇಂಥ ಪರಿಸ್ಥಿತಿಯಿಂದ ಭಾರತವನ್ನು ಕಾಪಾಡುವ ಹೊಣೆಯನ್ನು ಕ್ರಿಕೆಟ್ ದೇವರಿಗೆ (ಸಚಿನ್) ವಹಿಸಲಾಯಿತು. ಸಚಿನ್ ಶ್ರೇಷ್ಠ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಪರಿಸ್ಥಿತಿ, ಸನ್ನಿವೇಶಗಳಿಂದಾಗಿ ಸಚಿನ್ ತಮ್ಮ ಗುರಿ ತಲುಪಲಾಗಲಿಲ್ಲ. ಭಾರತೀಯ ಕ್ರಿಕೆಟ್ ಅಧೋಗತಿಯನ್ನು ತಡೆಯಲು ದೇವರೇ ವಿಫಲವಾದ ನಂತರ ಮುಂದೇನು.? ಎಂಬ ನಿರಾಸೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಭಾರತ ಕ್ರಿಕೆಟ್ ತಂಡ ಬಲ ಕಳೆದುಕೊಂಡಿತ್ತು. ಕ್ರಿಕೆಟಿಗರಂತೂ ಆತ್ಮಸ್ಥೈರ್ಯವನ್ನೇ ಮರೆತಿದ್ದರು. ಆಯ್ಕೆ ಸಮಿತಿಯ ಮುಂದಿದ್ದದ್ದು ಒಂದೇ ಆಯ್ಕೆ ಅದು ಸೌರವ್ ಚಂಡಿದಾಸ್ ಗಂಗೂಲಿ.
ಗಂಗೂಲಿ ನಾಯಕನಾದಾಗ ಭಾರತದ ಕ್ರಿಕೆಟ್ ಮೂಲೆ ಸೇರಿತ್ತು, ಕ್ರಿಕೆಟಿಗರು, ಅಭಿಮಾನಿಗಳಿನ್ನೂ ಫಿಕ್ಸಿಂಗ್ ಗುಂಗಿನಲ್ಲಿದ್ದರು. ಆದರೆ ಗಂಗೂಲಿ ತಮ್ಮ ಆಕ್ರಮಣಕಾರಿ ನಿಲುವು, ಅಚಲ ಪ್ರಯತ್ನದಿಂದಾಗಿ ದುರ್ಬಲ ಭಾರತ ತಂಡ 8ನೇ ಸ್ಥಾನದಿಂದ ಮೇಲೆದ್ದು 2ನೇ ಸ್ಥಾನದಲ್ಲಿ ವಿರಾಜಮಾನವಾಯಿತು. ಬಲಿಷ್ಠ ತಂಡಗಳಿಗೆ ಸವಾಲಾಗಿ ನಿಂತಿದ್ದು ಇದೇ ಗಂಗೂಲಿ ನಾಯಕತ್ವ. ಗೋಡೆ ಖ್ಯಾತಿಯ ನಮ್ಮ ರಾಹುಲ್ ದ್ರಾವಿಡ್ ಗಂಗೂಲಿ ಬಗ್ಗೆ ಹೇಳಿದ ಮಾತು, "ನಾನು ಬ್ಯಾಟ್ ಹಿಡಿದಾಗ ನನಗೆ ಬಲ ತುಂಬುವುದು ದೇವರು ಮತ್ತು ಆಫ್ ಸೈಡಿನ ದೇವರು ಗಂಗೂಲಿ". ಆಸ್ಟ್ರೇಲಿಯಾ ಕಂಡ ಶ್ರೇಷ್ಟ ಕ್ರಿಕೆಟ್ ನಾಯಕ ಸ್ಟಿವ್ ವಾ ಈ ಕೆಳಗಿನಂತೆ ಹೇಳುತ್ತಾರೆ, "ನೀವು ಗಂಗೂಲಿಯನ್ನು ಇಷ್ಟಪಡುತ್ತೀರೋ, ಇಲ್ಲವೋ ಎಂಬುದು ವಿಷಯವಲ್ಲ, ಆದರೆ ಅವರನ್ನು ಖಂಡಿತ ಗೌರವಿಸಬೇಕು"
2003ರ ವಿಶ್ವಕಪ್ ಭಾರತದ ಪಾಲಿಗೆ ಅಗ್ನಿ ಪರೀಕ್ಷೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬತ್ತಿತ್ತು ನಮ್ಮ ತಂಡದ ಸ್ಥಿತಿ. ಇಲ್ಲಿಂದ ಗಂಗೂಲಿ ತಂಡವನ್ನು ಮುನ್ನಡೆಸಿದ ರೀತಿ ನೋಡಿ ಇಡೀ ಕ್ರಿಕೆಟ್ ಜಗತ್ತೇ ಅಚ್ಚರಿ ಪಟ್ಟಿತ್ತು. ಅತಿರಥ ಮಹಾರಥರಿಗೆ, ಟೀಕಾಕಾರರಿಗೆ, ವಾಕ್ಸಮರಗಳಿಗೆ ಮೈದಾನದಲ್ಲೇ ಉತ್ತರ ಕೊಟ್ಟು, ಫೈನಲ್‌ಗೆ ಏರಿತ್ತು ಗಂಗೂಲಿ ಪಡೆ. ಇಲ್ಲಿಂದ ಮುಂದೆ ದುರ್ಬಲ ತಂಡ, ಎದುರಾಳಿಗಳಿಗೆ ಸಿಂಹಸ್ವಪ್ನವಾಗಿ ಟೀಮ್ ಇಂಡಿಯಾ, ದಾದಾ ಸೈನ್ಯ, ದೈತ್ಯಸಂಹಾರಿ ಎಂಬಿತ್ಯಾದಿ ಹೆಸರುಗಳಿಂದ ರಾರಾಜಿಸತೊಡಗಿತು. ಗಂಗೂಲಿಗೆ ಒಲಿದು ಬಂದ ಬಿರುದುಗಳಿಗೇನೂ ಕಡಿಮೆಯಿಲ್ಲ. ತಂಡದ ಸಹಸದಸ್ಯರು 'ದಾದಾ' ಎಂದರು, ಅಭಿಮಾನಿಗಳು 'ಕ್ರಿಕೆಟಿನ ಮಹಾರಾಜ್' ಎಂದರು, 'ಕಲ್ಕತ್ತಾದ ರಾಜಕುಮಾರ' 'ಬಂಗಾಳದ ಹುಲಿ' ಹೀಗೆ ವರ್ಣರಂಜಿತ ಕ್ರಿಕೆಟ್ ಬದುಕನ್ನು ಬದುಕಿದ ಹುಲಿ ಎಲ್ಲ ಕ್ರಿಕೆಟ್ ದಾಖಲೆಗಳನ್ನು ಮೀರಿ ನಿಂತ ಕ್ರಿಕೆಟಿಗ. ಇವತ್ತು ನಾವು ಕಾಣುತ್ತಿರುವ ಯಶಸ್ವಿ ನಾಯಕ ಧೋನಿ, ಗಂಗೂಲಿಯ ಆಯ್ಕೆ ಮತ್ತು ದೂರದೃಷ್ಠಿತ್ವದ ಫಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಕೊನೆಯ ಮಾತು, ನಾನಿಲ್ಲಿ ಯಾರನ್ನು ಯಾರಿಗೂ ಹೋಲಿಸುತ್ತಿಲ್ಲ. ಗಂಗೂಲಿಯನ್ನು ಇಷ್ಟಪಡುತ್ತಿದ್ದೇನೆ ಅಂದಾಕ್ಷಣ ಇತರರು ಇಷ್ಟವಿಲ್ಲವೆಂದಲ್ಲ.ಅಂಕಿ ಅಂಶಗಳನ್ನಿಟ್ಟು ನೋಡಿದರೆ ಶ್ರೇಷ್ಟಾತಿಶ್ರೇಷ್ಟ ಆಟಗಾರರ ಪಟ್ಟಿ ದೊರೆಯಬಹುದು. ಏಕೋ ದಾದಾ ಬಗ್ಗೆ ಬರೆಯಬೇಕೆನಿಸಿತು, ಹಾಗಾಗಿ ಈ ಬರಹ.
Comments
ಉ: ಸೌರವ್ ಗಂಗೂಲಿ
ನೀವು ತಿಳಿಸಿದ ಹಾಗೆ ಗಂಗೂಲಿ ಭಾರತ ಕ್ರಿಕೆಟ್ ತಂಡದ ಒಬ್ಬ ಅತ್ಯುತಮ ನಾಯಕ. ಆದರೆ ಗಂಗೂಲಿಯ ನೀವು ಬರೆಯುವಾಗ ಕೆಲವು ಹೇಳಿಕೆಗಳು ತಿರುಚಲಾಗಿದೆ..
>> "ನಾನು ಬ್ಯಾಟ್ ಹಿಡಿದಾಗ ನನಗೆ ಬಲ ತುಂಬುವುದು ದೇವರು ಮತ್ತು ಆಫ್ ಸೈಡಿನ ದೇವರು ಗಂಗೂಲಿ".
ರಾಹುಲ್ ದ್ರಾವಿಡ್ ಹೇಳಿದ್ದು "After God, Ganguly is the better offside player" (ದೇವರ ನಂತರ ಗಂಗೂಲಿ ಆಫ್ ಸೈಡಿನ ಅತ್ಯುತಮ ಆಟಗಾರ)
>> ಇವತ್ತು ನಾವು ಕಾಣುತ್ತಿರುವ ಯಶಸ್ವಿ ನಾಯಕ ಧೋನಿ, ಗಂಗೂಲಿಯ ಆಯ್ಕೆ ಮತ್ತು ದೂರದೃಷ್ಠಿತ್ವದ ಫಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ
(ಯಾರಿಗೂ ತಿಳಿಯದ ವಿಷಯವನ್ನು) ಅದು ಹೇಗೆ ಎಂದು ವಿವರಿಸುತ್ತಿರಾ ?
ದೋನಿ ಭಾರತ ತಂಡಕ್ಕೆ ಬರಲು ಕಾರಣ ಆಯ್ಕೆಗಾರಾರಿಗೆ (ಕಿರಣ್ ಮೋರೆ, ವೆಂಗಸರ್ಕಾರ್) ಸಲ್ಲಬೇಕು, ಜೊತೆಗೆ ofcourse ದೋನಿಯ ಸ್ಪೋಟಕ ಬ್ಯಾಟಿಂಗ್ ಕಾರಣ. 'East zone' ನಲ್ಲಿ ಕ್ರಿಕೆಟ್ ಅಂದರೆ ಕೇವಲ ಕಲ್ಲಕತ್ತ ತಂಡವೆಂಬುದಾಗಿತ್ತು. ಅಂತಹ ಸಮಯದಲ್ಲಿ ದೋನಿಯನ್ನು ಹುಡುಕಿ ಬೆಳಕಿಗೆ ತಂದ್ದದ್ದು ಆಯ್ಕೆಗಾರಾರು.ಹೊರತು ಗಂಗೂಲಿಯಲ್ಲ.