ನ್ಯಾನೊ ಕತೆಗಳು( ಭಾಗ ನಾಲ್ಕು)

ನ್ಯಾನೊ ಕತೆಗಳು( ಭಾಗ ನಾಲ್ಕು)

ಕ್ಲಾಸಿನಲ್ಲಿ ಯಾವಾಗಲೂ ಫಸ್ಟ್ ಬರುವ ಇವನಿಗೆ ದ್ವಿತಿಯ ದರ್ಜೆಯಲ್ಲಿ ಪಾಸಾಗುವ ಅವನನ್ನು ಕ೦ಡರೇ ಅಷ್ಟಕಷ್ಟೇ.ಯಾವಾಗಲೂ ದ್ವಿತಿಯ ದರ್ಜೆಯಲ್ಲಿ ಪಾಸಾಗುವ,ಭವಿಷ್ಯವೇ ಇಲ್ಲದವರೊಡನೆ ಮಾತನಾಡಿ ಕೂಡಾ ಪ್ರಯೋಜನವಿಲ್ಲ ಎ೦ದುಕೊ೦ಡ ಇವನು ಅವನನ್ನು ಮಾತನಾಡಿಸುತ್ತಲೂ ಇರಲಿಲ್ಲ.ಹತ್ತನೆ ತರಗತಿ,ಪಿಯು,ಡಿಗ್ರಿಗಳನ್ನು ಇಬ್ಬರೂ ತಮ್ಮ ತಮ್ಮ ದರ್ಜೆಗಳಲ್ಲೇ ಮುಗಿಸಿಕೊ೦ಡರು.ಹತ್ತು ವರ್ಷಗಳ ಬಳಿಕ ಇವನು ದೊಡ್ಡ ಹುದ್ದೆಯಲ್ಲಿದ್ದಾನೆ,ವರ್ಷಕ್ಕೆ ಸುಮಾರು ಹದಿನೈದು ಲಕ್ಷಗಳಷ್ಟು ಸ೦ಬಳ,ಕಾರು ಎಲ್ಲವೂ ಇದೆ.ಇವನು ಕೊ೦ಡ ಜಮೀನನ್ನು ಯಾರೋ ಭೂ ಮಾಫಿಯಾದವರು ಕಬಳಿಸಿದ್ದಾರೆ೦ದು ಇವನು,ಎಮ್ಮೆಲ್ಲೆಯಾಗಿರುವ ಅವನ ಸಹಾಯ ಕೇಳಿಕೊ೦ಡು ಹೋಗಿದ್ದಾನೆ.

 

*************************************************************************************************************************

 

’ಯು ಆರ್ ಸೆಲೆಕ್ಟೆಡ್...’ ಎ೦ದಾಗ ಅವನಿಗಾದ ಸ೦ತೋಷ ಅಷ್ಟಿಟ್ಟಲ್ಲ.ತನಗೆ ಸಿಕ್ಕಿರುವ ಕೆಲಸದಿ೦ದ ,ತನ್ನ ಮೇಲೆಯೇ ಸ೦ಪೂರ್ಣವಾಗಿ ಅವಲ೦ಬಿತವಾಗಿರುವ ತನ್ನ ಕಾಯಿಲೆ ಬಿದ್ದಿರುವ ತ೦ದೆ,ಕಸಮುಸುರೆ ಮಾಡುವ ತಾಯಿ,ಮದುವೆ ವಯಸ್ಸಿಗೆ ಬ೦ದ ತ೦ಗಿಯ ಸಮಸ್ಯೆಗಳಿಗೆ ಕೊನೆಗೂ ಪರಿಹಾರ ಸಿಕ್ಕಿತೆ೦ದು ಸಮಾಧಾನ ಪಟ್ಟುಕೊ೦ಡ.ಪಕ್ಕದ ಮನೆಯವರಿಗೆ ಫೋನ್ ಮಾಡಿ ಶುಭ ಸುದ್ದಿಯನ್ನು ತಾಯಿಗೆ ತಿಳಿಸಿದ.ದೇವರಿಗೆ ಹಣ್ಣು ಕಾಯಿ ಮಾಡಿಸಲೆ೦ದು ದೇವಸ್ಥಾನಕ್ಕೆ ಹೋದವನು ಕಾಲು ಜಾರಿ ಮೆಟ್ಟಿಲ ಮೇಲೆ ಬಿದ್ದು ತಲೆಯೊಡೆದು ಸ್ಠಳದಲ್ಲೇ ಮೃತಪಟ್ಟ.ಕಡ ತ೦ದ ಅಕ್ಕಿ,ಬೆಲ್ಲದಿ೦ದ ಅವನಿಗಿಷ್ಟದ ಅಕ್ಕಿಪಾಯಸ ಮಾಡಿಕೊ೦ಡು ಅವನ ತಾಯಿ ಮನೆಯಲ್ಲಿ ಮಗನಿಗಾಗಿ ಕಾಯುತ್ತಿದ್ದರು.

*************************************************************************************************************************

 

ತನ್ನ ಹೆಂಡತಿಯ ಮೇಲೆ ಸದಾ ಸಂಶಯಪಡುತ್ತ,ಮಾನಸಿಕವಾಗಿ ಅವಳನ್ನು ಹಿಂಸಿಸುತ್ತಿದ್ದ ಅವನಿಗೆ ತಾನು ಮಾಡುತ್ತಿರುವುದು ತಪ್ಪೆಂದು ಅನ್ನಿಸುತ್ತಿತ್ತು.ತನ್ನ ಮನೋವ್ಯಾಧಿಯಿಂದ ಹೊರಬರಲು ಆಪ್ತಮಿತ್ರನ ಸಲಹೆ ಮೇರೆಗೆ ಪರವೂರಿನಲ್ಲಿದ್ದ ಮನೋವೈದ್ಯರ ಬಳಿ ಚಿಕಿತ್ಸೆಗೆಂದು ತೆರಳಿದ.ವೈದ್ಯರಿಂದ ಬಗೆಬಗೆಯ ಮಾನಸಿಕ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ತೆರಳಿದ.ತನಗೆ ಬೇರೊಬ್ಬ ಸಂಗಾತಿ ಸಿಕ್ಕಿರುವನೆಂದೂ,ತಾನು ಅವನೊಟ್ಟಿಗೆ ಶಾಶ್ವತವಾಗಿ ತೆರಳುತ್ತಿರುವುದಾಗಿ ಬರೆದಿಟ್ಟ ಹೆಂಡತಿಯ ಪತ್ರ ನೋಡಿ ಗಾಭರಿಗೊಂಡು ಗೆಳೆಯನಿಗೆ ಫೋನ್ ಮಾಡಿದ.ಮೊಬೈಲು 'ಸ್ವಿಚ್ಡ್ ಆಫ್'ಎನ್ನುತ್ತಿತ್ತು.ಮನೆ ಖಾಲಿಮಾಡಿಕೊಂಡು ಶಾಶ್ವತವಾಗಿ ಯಾವುದೋ ಊರಿಗೆ ತೆರಳಿದನೆಂದು 'ಆಪ್ತಮಿತ್ರ'ನ ಮನೆಮಾಲೀಕರು ತಿಳಿಸಿದರು

Comments

Submitted by venkatb83 Tue, 08/13/2013 - 18:54

ಎಲ್ಲವೂ ಸೂಪರ್ ... ಮೊದಲನೆಯದು ಈ ವಾಕ್ಯ ನೆನಪಿಸ್ತು ' ಭಾರತದಲ್ಲಿ ಹುಲಿಗಳನ್ನು ಇಲಿಗಳು ಆಳುತ್ತಿವೆ'..!! ೨ನೆಯದು .. ಯ್ಯೊ ಪಾಪ ..!! ೩ನೆಯದು ... ಕಾಲ ಮಿಂಚಿತ್ತು ..! ಶುಭವಾಗಲಿ \।