ಓದು ಕಲಿತ ಊಳಿಗದವನ ಪ್ರಶ್ನೆಗಳು.

ಓದು ಕಲಿತ ಊಳಿಗದವನ ಪ್ರಶ್ನೆಗಳು.

ಥೀಬ್ಸ್‍ನ ಏಳುಸುತ್ತಿನ ಕೋಟೆ
ಕಟ್ಟಿದವರಾರು ಗೊತ್ತೆ?
ಹೊತ್ತಿಗೆಗಳಲಿದೆ ರಾಯರ ಹೆಸರು.
ಮೆತ್ತಿದೆಯೇನು ಅವರ ಕೈಗಿಷ್ಟಾದರು ಕೆಸರು.

ಸುಟ್ಟಿತೆಷ್ಟು ಬಾರಿ ಬ್ಯಾಬಿಲೋನ್ ನಗರ,
ಕಟ್ಟಿ ಕೊಟ್ಟವರಾರು ಮರಳಿ, ಬಲ್ಲಿರಾ..?

ಬೆಳಗಿದೆ ಮಿನುಗಿದೆ ಲಿಮಾ
ಫಳಫಳಿಸಿದೆ ಹೊನ್ನಿನ ಕಾಂತಿಯಲಿ!
ಕಟ್ಟಿದ ಕಾರ್ಮಿಕನವನು
ಮಲಗುವ ಮನೆಯಿರುವದದೆಲ್ಲಿ?

ಚೀನಾ ಗೋಡೆಯ ಮುಗಿಸಿದ ಸಂಜೆ
ಏನಾಯಿತು ಆ ಮೇಸ್ತ್ರಿಗೆ ಮುಂದೆ..?  
ಓಹೋ ರೋಮಿನ ಕಮಾನುಗಳೇನು?
ಯಾರೋ ಇದನು ಕಟ್ಟಿದ ಮನುಜನು?

ಸೀಸರ್ ಗೆಲುವದು ಯಾವನ ಮೇಲೋ?
ಗೀತಗಳಲ್ಲಿ ಹಾಡುವುದೇನೋ
ಬೈಜಾಂಟಿಯನ್ನರ ಅರಮನೆಯೇನೋ?
ಮುಳುಗಿದ ಅಟ್ಲಾಂಟಿಸಿನ ಜನರು
ಮುಳುಗುವ ಮೊದಲಿನ ಕೂಗದು ಏನೋ?

ಭಾರತವನ್ನೇ ಗೆದ್ದೆ ಎನ್ನುವ
ಯವನರ ರಾಜನೆ ತಾನೆ ಬೀಗುವ
ಅಲೆಕ್ಸಾಂಡರನೊಬ್ಬನೇ ಏನು?
ಗಾಲರ ಗೆದ್ದ ಸೀಸರನೆಡೆಗೆ
ಅಡಿಗೆ ಭಟ್ಟನ ಜೊತೆಯಿಲ್ಲವೇನು?

ಅಳುತಿರುವಾಗ ಸ್ಪೇನಿನ ಫಿಲಿಪನು
ಅಳದೇ ಉಳಿದನೇ ಊಳಿಗದವನು?
ಏಳು ವರುಷಗಳ ಕಾಳಗ ಗೆದ್ದನು
ಫ್ರೆಡರಿಕನವನು ಒಂಟಿಯೇನು?

ಗೆಲುವಿನ ಕತೆಯಿದೆ ಪುಟಪುಟದಲ್ಲೂ
ಗೆಲುವಿನ ಕುಣಿತಕೆ ಜೊತೆಯದು ಏನು?
ಗೆದ್ದವ ಮೆಲ್ಲುವ ಸವಿಯನು ಸವಿಯಲು
ಮುದ್ದೆಯ ಮಾಡುವ ಆಳಿನದೇನು?

ಎಷ್ಟೋ ಮಾತಿದೆ, ಎಷ್ಟೋ ಕತೆಯಿದೆ
ಕೇಳದೆ ಉಳಿದ ಪ್ರಶ್ನೆಗಳಷ್ಟಿವೆ.

ಬ್ರೆಷ್ಟ್ ನ ಮತ್ತೊಂದು ಕವಿತೆ  Questions From A Worker Who Reads  ಭಾವಾನುವಾದ

Rating
No votes yet

Comments

Submitted by makara Fri, 08/09/2013 - 10:55

ಮೊದ್ಮಣಿಯವರೆ,
ಪಾರ್ಥಸಾರಥಿಗಳು ಮತ್ತು ಗಣೇಶರು ಅಭಿಪ್ರಾಯ ಪಟ್ಟಂತೆ ಮೂಲ ಕವನ ಮತ್ತು ನಿಮ್ಮ ಭಾಷಾಂತರ ಎರಡೂ ಬಹಳ ಚೆನ್ನಾಗಿವೆ. ಮೂಲ ಕವನದ ಆಶಯ ಒಂದು ಕಾರ್ಯದ ಕ್ರೆಡಿಟ್ಟನ್ನು ಕೇವಲ ನಾಯಕರೇ ಏಕೆ ಪಡೆದುಕೊಳ್ಳುತ್ತಾರೆ ಎಂದಲ್ಲವೇ? ಇದಕ್ಕೆ ನನ್ನ ಅಭಿಪ್ರಾಯ ಹೀಗಿದೆ.
ಮಂತ್ರಕ್ಕೆ ಉಪಯೋಗವಾಗದ ಅಕ್ಷರವಿಲ್ಲ, ಅದೇ ವಿಧವಾಗಿ ಔಷಧಿ ಉಪಯೋಗಕ್ಕೆ ಬಾರದ ಬೇರಿಲ್ಲ, ಹಾಗೆಯೇ ಅಪ್ರಯೋಜಕ ಪುರುಷನಿಲ್ಲ ಆದರೆ ದುರ್ಲಭವಾಗಿರುವುದು ಇವೆಲ್ಲವನ್ನೂ ಸದ್ಬಳಕೆ ಮಾಡಿಕೊಳ್ಳುವವರು; ಎನ್ನುತ್ತದೆ ಸಂಸ್ಕೃತ ಒಂದು ಶ್ಲೋಕ. ಯಾರು ಇವೆಲ್ಲವನ್ನೂ ಸರಿಯಾಗಿ ಬಳಿಸಿಕೊಳ್ಳುತ್ತಾನೆಯೋ ಅವನೇ ನಾಯಕ. ಹಾಗಾಗಿ ಕೀರ್ತಿ, ಹೆಸರುಗಳು ಅವನಿಗೇ ಸಲ್ಲುತ್ತವೆ.
ಒಂದು ಮ್ಯಾಚನ್ನು ಗೆಲ್ಲಬೇಕಾದರೆ ಅದರ ಯಶಸ್ಸಿನ ಹಿಂದೆ ಒಬ್ಬ ನಾಯಕನಿರುತ್ತಾನೆ. ಉದಾಹರಣೆಗೆ ಸಚಿನ್ ಮ್ಯಾನ್ ಆಫ್ ದ ಮ್ಯಾಚ್ ಆದರೂ ಸಹ ಒಂದು ವೇಳೆ ಅವನಿಗೆ ನಾಯಕತ್ವ ವಹಿಸಿದ್ದರೆ ಅವನು ಮ್ಯಾಚನ್ನು ಗೆಲ್ಲುತ್ತಿದ್ದ ಎಂದು ಹೇಳಲಾಗದು. ಆದ್ದರಿಂದ ಯಾವಾಗಲೂ ನಾಯಕ ಮುಖ್ಯವಾಗುತ್ತಾನೆಯೇ ಹೊರತು ಇತರೇ ಆಟಗಾರರಲ್ಲ. ನಾಯಕನ ಮುಂದಾಳತ್ವ, ದೂರದೃಷ್ಟಿಯ ಫಲಗಳಿಂದಲೇ ಕಾರ್ಯಸಾಧನೆಯಾಗುವುದು ಆದ್ದರಿಂದ ಅದರ ಕ್ರೆಡಿಟ್ ಅವನಿಗೇ ಹೋಗುತ್ತದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by modmani Wed, 08/14/2013 - 13:19

ಶ್ರೀಧರ ಬಂಡ್ರಿಯವರಿಗೆ ವಂದನೆಗಳು.

ಈ ಕವಿತೆಯ ಆಶಯ ಕೇವಲ ನಾಯಕರೇ ಕ್ರೆಡಿಟ್ ಪಡೆದುಕೊಳ್ಳುವುದನ್ನು ಪ್ರಶ್ನಿಸುವುದಕ್ಕೆ ಸೀಮಿತವಾಗಿಲ್ಲ. ಬ್ರೆಷ್ಟ್‍ನ ಚಟುವಟಿಕೆಗಳನ್ನು ಗಮನಿಸಿದರೆ, ಅವನ ಸಮಾಜವಾದಿ ಮನೋಧರ್ಮ ನಮ್ಮರಿವಿಗೆ ಬರುತ್ತದೆ. ಅದಕ್ಕಾಗಿಯೇ ಅವನು ಬರೆದ ಸಂಯುಕ್ತ ದಳದ ಹಾಡನ್ನು ನೀವು ನೋಡಬಹುದು. ಅವನ ನಾಟಕಗಳಲ್ಲಿಯೂ ಕಾಣುವುದು ಈ ಕಾಳಜಿಯೇ. ಗೆಲಿಲಿಯೋ, ಥ್ರೀ ಪೆನ್ನಿ ಒಪೆರಾ ಕಕೇಚಿಯನ್ ಚಾಕ್ ಸರ್ಕಲ್, ಇವೆಲ್ಲಾ ಇದಕ್ಕೆ ಉದಾಹರಣೆಗಳು. ಈ ಹಿನ್ನೆಲೆಯಲ್ಲಿ ಬರೀ ಪ್ರಶ್ನೆ ಕೇಳದೆ, ಅದರೊಡನೆ ದುಡಿಯುವ ವರ್ಗವನ್ನು ಎಚ್ಚರಿಸುವ ಕೆಲಸವನ್ನೂ ಬ್ರೆಷ್ಟ್ ಮಾಡುತ್ತಿದ್ದಾನೆ. ಅವನ ಕಾಲಘಟ್ಟದಲ್ಲಿ ಪ್ರಮುಖವಾಗಿದ್ದ ಕಾರ್ಲ್ ಮಾರ್ಕ್ ಮುಂತಾದ ಕಮ್ಯುನಿಸ್ಟ್ ನಾಯಕರ ಪ್ರಭಾವವೂ ಇದಕ್ಕೆ ಕಾರಣವಿರಬಹುದು.

ಈ ಹೊತ್ತಿನ ಸಮಯದಲ್ಲಿ, ಭಾರತ ಕ್ಯಾಪಿಟಲಿಸಂ ಗೆ ತನ್ನ ಹೆಬ್ಬಾಗಿಲನ್ನು ತೆರೆದುಕೊಂಡು, ತದನಂತರ ಆಡಳಿತದ ಬಿಗಿಯನ್ನು ತಂತ್ರಙ್ಞಾನ ಅರಿಮೆ ಮತ್ತು ಕೀಳರಿಮೆಗಳಿಂದ ಕಳೆದುಕೊಂಡು ಸೊರಗಿರುವಾಗ, ಒಂದು ಕಾಲದಲ್ಲಿ ಕ್ಯಾಪಿಟಲಿಸಂ ಬೆಂಬಲಿಸಿದ ಮಂದಿಗೆ ಇಂದು ನಿರಾಸೆ ಕಾಡುತ್ತಿದೆ.

ಮಾರುತಿ ಮತ್ತು ಬಜಾಜ್ ಕಾರ್ಖಾನೆಗಳಲ್ಲಿನ ಮುಷ್ಕರದ ಪರಿಣಾಮ ಇದಕ್ಕೊಂದು ಉದಾಹರಣೆ, ೧೯೯೦ರಲ್ಲಿ ಚೀನಾದ ತಿಯನ್ಮಾನ್ ಚೌಕದ ದುರಂತಕ್ಕೆ ಕಾರಣೀಭೂತವಾದ ವಿದ್ಯಮಾನಗಳು ಇಂದಿಲ್ಲಿ ನಡೆಯುತ್ತಿಲ್ಲವೇ? ಕ್ಯಾಪಿಟಲಿಸಂ ನ ಮೂಲಭೂತ ತತ್ವಕ್ಕೇ ಎಳ್ಳುನೀರು ಬಿಟ್ಟು ಇಷ್ಟ ಬಂದಂತೆ ಅದನ್ನು ಬಳಸಿಕೊಳ್ಳುತ್ತಿರುವುದನ್ನು ನಾವು ಕಾಣಬಹುದು. ಭ್ರಷ್ಟಾಚಾರ ಮಿತಿಮೀರಿರುವಾಗ ಒಮ್ಮೊಮ್ಮೆ ಮನಸ್ಸು ಮತ್ತೆ ಕಮ್ಯುನಿಸಂ ನ ಕಡೆಗೆ ವಾಲುವುದೂ ಉಂಟು.

ಅದು ನಾನು ಈ ಕವನಗಳನ್ನು ಕನ್ನಡೀಕರಿಸಲು ಮುಖ್ಯ ಕಾರಣ.

ಮೆಚ್ಚಿದ್ದಕ್ಕಾಗಿ ನನ್ನಿ.

ಗಣೇಶ ಮತ್ತು ಪಾರ್ಥರಿಗೆ, ಕೃತಙ್ಞತೆಗಳು.