೮೯. ಶ್ರೀ ಲಲಿತಾ ಸಹಸ್ರನಾಮ ೩೨೩ರಿಂದ ೩೨೯ನೇ ನಾಮಗಳ ವಿವರಣೆ
ಪೀನಿಯಲ್ ಗ್ಲ್ಯಾಂಡ್ ಚಿತ್ರಕೃಪೆ: http://www.celtoslav...
ಲಲಿತಾ ಸಹಸ್ರನಾಮ ೩೨೩ - ೩೨೯
Kadamba-kusuma-priyā कदम्ब-कुसुम-प्रिया (323)
೩೨೩. ಕದಂಬ-ಕುಸುಮ-ಪ್ರಿಯಾ
ದೇವಿಯು ಕದಂಬ ವೃಕ್ಷಗಳ ಮಧ್ಯದಲ್ಲಿ ವಾಸವಾಗಿದ್ದು (ನಾಮ ೬೦) ಅದರ ಹೂವುಗಳನ್ನು ಬಹಳ ಇಷ್ಟಪಡುತ್ತಾಳೆ. ಇದೇ ನಾಮವು ಲಲಿತಾ ತ್ರಿಶತಿಯಲ್ಲಿ ೧೧ನೇ ನಾಮವಾಗಿ ಬರುತ್ತದೆ. ಲಲಿತಾ ತ್ರಿಶತಿಯು ೩೦೦ ನಾಮಗಳನ್ನು ಒಳಗೊಂಡಿದೆ. ಈ ಮನ್ನೂರು ಸಂಖ್ಯೆಯು (೩೦೦) ಪಂಚದಶೀ ಮಂತ್ರದ ಹದಿನೈದು ಬೀಜಾಕ್ಷರಗಳನ್ನು ೨೦ರಿಂದ ಗುಣಿಸುವುದರಿಂದ ಬಂದಿದೆ. ಪಂಚದಶೀ ಮಂತ್ರದ ಮೊದಲನೇ ಬೀಜಾಕ್ಷರವು ’ಕ’(क) ಆಗಿದೆ. ಲಲಿತಾ ತ್ರಿಶತಿಯಲ್ಲಿನ ಮೊದಲ ಇಪ್ಪತ್ತು ನಾಮಗಳು ಈ ಬೀಜದಿಂದ ಮೊದಲಾಗುತ್ತವೆ ಮತ್ತು ಮುಂದಿನ ಇಪ್ಪತ್ತು ನಾಮಗಳು ಪಂಚದಶೀ ಮಂತ್ರದ ಮುಂದಿನ ಅಕ್ಷರವಾದ ಎ (ए) ಇಂದ ಪ್ರಾರಂಭವಾಗುತ್ತವೆ. ತ್ರಿಶತಿಯು ಬಹಳಷ್ಟು ಶಕ್ತಿಯುತವಾದದ್ದೆಂದು ಪರಿಗಣಿತವಾಗಿದೆ ಏಕೆಂದರೆ ಅದರ ಉಗಮವು ಪಂಚದಶೀ ಮಂತ್ರದ ಮೂಲಕ ಆಗಿರುವುದರಿಂದ.
ಐದು ವಿಧವಾದ ಪವಿತ್ರ ವೃಕ್ಷಗಳಿವೆಯೆಂದು ಹೇಳಲಾಗುತ್ತದೆ ಮತ್ತು ಕದಂಬವು ಅವುಗಳಲ್ಲೊಂದು. ಈ ಐದು ಪವಿತ್ರ ವೃಕ್ಷಗಳು, ನಾಲ್ಕು ಅಂತಃಕರಣಗಳು ಅಂದರೆ ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರಗಳನ್ನು ಪ್ರತಿನಿಧಿಸಿದರೆ ಐದನೆಯದು ಹೃದಯವನ್ನು ಪ್ರತಿನಿಧಿಸುತ್ತದೆ ಮತ್ತಲ್ಲಿ ಆತ್ಮವು ನಿವಸಿಸುತ್ತದೆ ಎನ್ನಲಾಗಿದೆ. (ಕೆಲವೊಂದು ಆಧುನಿಕ ವ್ಯಾಖ್ಯಾನಗಳು ಆತ್ಮವು ದೈವ ಗ್ರಂಥಿಯಾದ ಪೀನಿಯಲ್ ಗ್ಲ್ಯಾಂಡ್ ಎನ್ನುವದರೊಳಗೆ ನಿವಸಿಸುತ್ತದೆ ಎಂದು ಹೇಳುತ್ತವೆ). ಕದಂಬ ವೃಕ್ಷಗಳ ಹೂವಿನ ಸುವಾಸನೆಯನ್ನು ಮನಸ್ಸಿನ ಮಾರ್ಪಾಟುಗಳೊಂದಿಗೆ ಹೋಲಿಸಲಾಗಿದೆ.
Kalyāṇī कल्याणी (324)
೩೨೪. ಕಲ್ಯಾಣೀ
ದೇವಿಯು ಶುಭಪ್ರದತೆಯ ಸ್ವರೂಪವಾಗಿದ್ದಾಳೆ. ಕಲ್ಯಾಣವೆಂದರೆ ಮಾದರಿಯಾದ, ಒಳ್ಳೆಯ, ಉದಾರ, ನೀತಿಯುಕ್ತ, ಉದಾಹರಣೆಯಾಗಿ ನಿಲ್ಲಬಲ್ಲ ಮೊದಲಾದ ಅರ್ಥಗಳನ್ನು ಹೊಂದಿದೆ. ಋಗ್ವೇದವು (೧.೩೧.೯) ಕಲ್ಯಾಣ ಶಬ್ದವನ್ನು ಬಳಸಿದೆ. ಆ ವೇದವು ಹೇಳುತ್ತದೆ, तनूक्र्द बोधि परमतिश्च कारवे तवं कल्याण वसु विश्वमोपिषे - ತನೂಕ್ರದ ಬೋಧಿ ಪರಮತಿಶ್ಚ ಕಾರವೇ ತವಂ ಕಲ್ಯಾಣ ವಸು ವಿಶ್ವಮೋಪಿಷೇ", ಇಲ್ಲಿ ಕಲ್ಯಾಣ ಶಬ್ದವು ಯೋಗ್ಯವಾದದ್ದನ್ನು ತಿಳಿಸಲು ಬಳಸಲಾಗಿದೆ. ಕಲ್ಯಾಣೀ ನಾಮವು ಲಲಿತಾ ತ್ರಿಶತೀಯಲ್ಲಿ ೨ನೇ ನಾಮವಾಗಿ ಬರುತ್ತದೆ. ಮಂಗಳಕರ ಅಥವಾ ಶುಭಪ್ರದವಾದ ಗುಣಗಳ ಶಕ್ತಿಯು ಧನಾತ್ಮಕ ಶಕ್ತಿಯ ರೂಪದಲ್ಲಿ ಪ್ರಕಟಗೊಳ್ಳುವುದನ್ನು ನಾವು ಶಕ್ತಿಯುತವಾದ ತರಂಗಗಳ ಮೂಲಕ ತಿಳಿದುಕೊಳ್ಳಬಹುದು.
Jagatī -kandā जगती -कन्दा (325)
೩೨೫. ಜಗತೀ
ದೇವಿಯು ಈ ಪ್ರಪಂಚದ ‘ಕಾರಣ’ಳಾಗಿದ್ದಾಳೆ. ಈ ಪ್ರಪಂಚದ ಉಗಮಕ್ಕೆ ಕಾರಣವನ್ನು ಬ್ರಹ್ಮಕ್ಕೆ ಆರೋಪಿಸಲಾಗಿದೆ. ಈ ಸಹಸ್ರನಾಮದಲ್ಲಿ ದೇವಿಯ ಪರಬ್ರಹ್ಮ ಸ್ವರೂಪವನ್ನು ವಿವಿಧ ಲಕ್ಷಣಗಳ ಮೂಲಕ ಪದೇ ಪದೇ ಒತ್ತು ಕೊಟ್ಟು ಹೇಳಲಾಗಿದೆ. ಆಕೆಯು ”ಪ್ರಕಾಶ ವಿಮರ್ಶ ಮಹಾ ಮಾಯಾ ಸ್ವರೂಪಿಣೀ’ ಆಗಿದ್ದು ಈ ಬ್ರಹ್ಮಾಂಡದ ಸೃಷ್ಟಿಯನ್ನು ಮಾಡುತ್ತಾಳೆ.
Karuṇārasa-sāgarā करुणारस-सागरा (326)
೩೨೬. ಕರುಣಾರಸ-ಸಾಗರಾ
ದೇವಿಯು ಕರುಣೆಯ ಸಾಗರವಾಗಿದ್ದಾಳೆ. ಕರುಣೆ ಎಂದರೆ ದಯೆ ಮತ್ತು ರಸವೆಂದರೆ ಸಾರ ಮತ್ತು ಸಾಗರವೆಂದರೆ ಮಹಾ ಸಮುದ್ರ. ದಯೆಯು ಆಕೆಯ ಸಹಜ ಸ್ವಭಾವವಾಗಿದೆ, ಏಕೆಂದರೆ ಆಕೆಯು ಜಗನ್ಮಾತೆಯಾಗಿದ್ದಾಳೆ. ’ಲಲಿತಾ ತ್ರಿಶತೀ’ಯಲ್ಲಿನ ೯ನೇ ನಾಮವು ‘ಕರುಣಾಮೃತ ಸಾಗರಾ’ ಆಗಿದ್ದು ಅದೂ ಸಹ ಇದೇ ಅರ್ಥವನ್ನು ಹೊಮ್ಮಿಸುತ್ತದೆ. ಆದಿ ಶಂಕರರು ಈ ಕೆಳಗಿನ ವಿಧವಾಗಿ ವ್ಯಾಖ್ಯಾನವನ್ನು ಮಾಡುತ್ತಾರೆ, "ಸಾಗರವು ಯಾವುದೇ ವಿಧವಾದ ಕದಲಿಕೆಯನ್ನು ಮಾಡದೇ ಅದು ಮಳೆಗೆ ಕಾರಣವಾಗಿದೆ ಮತ್ತು ಈ ಸಮಸ್ತ ಪ್ರಪಂಚವು ಆ ನೀರಿನ ಮೇಲೆ ನಿಂತಿದೆ. ಒಂದು ಹನಿ ನೀರು ತನ್ನಷ್ಟಕ್ಕೆ ತಾನೇ ಮೋಡಗಳಿಂದ ಕಳಚಿಕೊಂಡು ಇನ್ನೊಂದು ಸ್ತರವನ್ನು ಒಳಹೊಗುತ್ತದೆ (ಅಂದರೆ ಆಕಾಶವನ್ನು ಬಿಟ್ಟು ಭೂಮಿಯನ್ನು ಸೇರುತ್ತದೆ) ಕೇವಲ ಈ ಪ್ರಪಂಚವನ್ನು ಪೋಷಿಸಲು. ನೀರಿನ ಈ ಕ್ರಿಯೆಯಿಂದಾಗಿ ಅದಕ್ಕೇ ಯಾವುದೇ ವಿಧವಾದ ಪ್ರಯೋಜನವಿಲ್ಲ. ಈ ರೀತಿಯಾಗಿ ತಾಯಿಯ ಮಮತೆಯಿದೆ". ಈ ಕರುಣೆಯನ್ನು ಪರಮೋನ್ನತವೆನ್ನಲಾಗಿದೆ ಏಕೆಂದರೆ ಆಕೆಯು ಬೇಧಭಾವವನ್ನು ಮಾಡುವವಳಲ್ಲ. ಅವಳ ಮಟ್ಟಿಗೆ ಹೇಳುವುದಾದರೆ ಎಲ್ಲರೂ ಆಕೆಯ ಮುಂದೆ ಸಮಾನರು, ಇದು ಆಕೆಯನ್ನು ಜಗನ್ಮಾತೆ ಎಂದು ಕರೆಯಲು ಇನ್ನೊಂದು ಕಾರಣವಾಗಿದೆ.
Kalāvatī कलावती (327)
೩೨೭. ಕಲಾವತೀ
ದೇವಿಯು ಅರವತ್ತನಾಲ್ಕು ವಿಧವಾದ ವಿದ್ಯೆಗಳನ್ನು ಹೊಂದಿದ್ದಾಳೆ ಅಥವಾ ಅವಳ ಬಳಿ ಅರವತ್ತನಾಲ್ಕು ವಿಧವಾದ ವಿದ್ಯೆಗಳಿವೆ; ಇವನ್ನು ೨೩೬ನೇ ನಾಮದಲ್ಲಿ ಅದಾಗಲೇ ಚರ್ಚಿಸಲಾಗಿದ್ದು ಅದೇ ವ್ಯಾಖ್ಯಾನವನ್ನು ಇಲ್ಲಿ ಪುನಃ ಕೊಡಲಾಗಿದೆ. (ದೇವಿಯು ೬೪ ವಿಧದ ಕಲೆಗಳ ಮೂರ್ತರೂಪವಾಗಿದ್ದಾಳೆ. ತಂತ್ರಶಾಸ್ತ್ರದಲ್ಲಿ ಅರವತ್ತನಾಲ್ಕು ವಿಧವಾದ ಕಲೆ/ ವಿದ್ಯೆಗಳಿವೆ. ಇವನ್ನು ಪುಷ್ಠೀಕರಿಸಲು ಅಥವಾ ಅಲ್ಲಗಳೆಯಲು ಯಾವುದೇ ವಿಧವಾದ ಗಂಭೀರವಾದ ಪ್ರಮಾಣಗಳಿಲ್ಲ. ಕಲೆ ಎಂದರೆ ಸಾಮಾಜಿಕ ಹಾಗು ವೈಜ್ಞಾನಿಕ ವಿಷಯ ಮತ್ತು ಕೌಶಲ್ಯಗಳನ್ನು ತಿಳಿಸಿಕೊಡುವ ವಿದ್ಯೆ ಅಥವಾ ತತ್ವಗಳೆಂದೂ ಸಹ ವಿವರಿಸಬಹುದು. ಇವೆಲ್ಲವೂ ಶಿವ ಮತ್ತು ಅವನ ಸಂಗಾತಿಯಾದ ಪಾರ್ವತಿ ಇವರ ನಡುವಿನ ಸಂಭಾಷಣೆಯ ರೂಪದಲ್ಲಿವೆ. ಈ ೬೪ ವಿಧವಾದ ಕಲೆಗಳು ಅಷ್ಟ ಸಿದ್ಧಿಗಳಿಂದ (ಅತಿಮಾನುಷ ಶಕ್ತಿಗಳಿಂದ) ಉಗಮವಾಗುತ್ತವೆ. ಸ್ವತಃ ಶಿವನೇ ಈ ಅರವತ್ತನಾಲ್ಕು ಕಲೆಗಳ ಕುರಿತಾಗಿ ಪಾರ್ವತಿಗೆ ಹೇಳುತ್ತಾನೆ).
ಸೌಂದರ್ಯ ಲಹರಿಯ ೩೧ನೇ ಸ್ತೋತ್ರವು ಹೀಗೆ ಹೇಳುತ್ತದೆ, "ಚತುಃ ಷಷ್ಠಿ ತಂತ್ರೈಃ ಸಕಲಮ್" ಅಂದರೆ ಈ ಅರವತ್ತನಾಲ್ಕು ವಿದ್ಯೆಗಳು ಎಲ್ಲವನ್ನೂ ಒಳಗೊಂಡಿವೆ. ಅರವತ್ತನಾಲ್ಕು ತಂತ್ರ ಶಾಸ್ತ್ರಗಳು ಪಂಚದಶೀ ಮಂತ್ರದಿಂದ ಉಗಮವಾಗಿ ಪಂಚದಶೀ ಮಂತ್ರದಲ್ಲಿಯೇ ಕೊನೆಗೊಳ್ಳುತ್ತವೆ. ಈ ವಿಷಯವು ಸೌಂದರ್ಯ ಲಹರಿಯ ಅದೇ ಸ್ತೋತ್ರದಿಂದ ಸ್ಪಷ್ಟವಾಗುತ್ತದೆ, ಅದು ಹೇಳುತ್ತದೆ, “ಇದಂ ತೇ ತಂತ್ರಮ್" ಅಂದರೆ ಬಹುಶಃ ಇದು ಪಂಚದಶೀ ಮಂತ್ರವನ್ನೇ ಕುರಿತದ್ದಾಗಿರಬೇಕು ಏಕೆಂದರೆ ಸೌಂದರ್ಯ ಲಹರಿಯ ಮುಂದಿನ ಸ್ತೋತ್ರದಲ್ಲಿ ‘ಪಂಚದಶೀ ಮಂತ್ರ’ವನ್ನು ಸ್ಪಷ್ಟವಾಗಿ ಹೇಳಲಾಗಿದೆ (ಉಲ್ಲೇಖಿಸಲಾಗಿದೆ). ದೇವಿಗೆ ಮತ್ತು ಆಕೆಯ ಪಂಚದಶೀ ಮಂತ್ರಕ್ಕೆ ಭೇದವಿಲ್ಲದೇ ಇರುವುದರಿಂದ ದೇವಿಯು ಎಲ್ಲಾ ಅರವತ್ತನಾಲ್ಕು ವಿಧವಾದ ತಂತ್ರಗಳ ರೂಪದಲ್ಲಿದ್ದಾಳೆಂದು ಹೇಳಲಾಗಿದೆ. ಈ ಅರವತ್ತನಾಲ್ಕು ತಂತ್ರ ವಿದ್ಯೆಗಳನ್ನು ಶಿವನು ಅವನ ಸಂಗಾತಿಯ ಅಪೇಕ್ಷೆಯ ಮೇರೆಗೆ ಈ ಪ್ರಪಂಚಕ್ಕೆ ಸಾರಿ ಹೇಳಿದನು. ನಾಮ ೨೩೬ ಮತ್ತು ೩೨೭ನೇ ನಾಮಗಳಲ್ಲಿನ ವ್ಯತ್ಯಾಸವು ಬಹಳ ಸೂಕ್ಷ್ಮವಾಗಿದೆ. ಮೊದಲಿನ ನಾಮವು ಆಕೆಯು ಈ ಅರವತ್ತನಾಲ್ಕು ವಿದ್ಯೆ ಅಥವಾ ಕಲೆಗಳ ರೂಪದಲ್ಲಿದ್ದಾಳೆಂದು ಹೇಳಿದರೆ ಈ ನಾಮವು ಆಕೆಯು ಈ ಅರವತ್ತನಾಲ್ಕು ವಿಧವಾದ ವಿದ್ಯೆಗಳನ್ನು ಹೊಂದಿದ್ದಾಳೆಂದು ಹೇಳುತ್ತದೆ. ಇದರಲ್ಲಿರುವ ವ್ಯತ್ಯಾಸವೇನೆಂದರೆ ಹೊಂದುವುದು ಮತ್ತು ಪ್ರತಿಫಲಿಸುವುದಾಗಿದೆ ಅಥವಾ ಪ್ರಕಾಶ (ಸ್ವತಃ ಹೊಳೆಯುವುದು) ಮತ್ತು ವಿಮರ್ಶ (ಪ್ರತಿಫಲಿಸುವುದು) ಆಗಿದೆ.
Kalālāpā कलालापा (328)
೩೨೮. ಕಲಾಲಾಪಾ
ಅವಳ ಮಾತೇ ಕಲಾತ್ಮಕವಾಗಿದೆ. ಲಲಿತಾ ತ್ರಿಶತೀಯಲ್ಲಿನ ೧೫೬ನೇ ನಾಮವೂ ಸಹ ಕಲಾಲಾಪಾ ಆಗಿದೆ. ಕಲಾ ಎಂದರೆ ಸಾಮಾನ್ಯವಾಗಿ ಅರವತ್ತನಾಲ್ಕು ಸಾಮಾಜಿಕ ವಿದ್ಯೆಗಳನ್ನು ಸೂಚಿಸುತ್ತದೆ. ಆದರೆ ಕಲಾ ಎನ್ನುವುದು ಮಧುರವಾದ ಧ್ವನಿಯನ್ನೂ ಸೂಚಿಸುತ್ತದೆ. ಆಲಾಪ ಎಂದರೂ ಮಾತೆನ್ನುವ ಅರ್ಥವಿದೆ. ಈ ನಾಮವು ದೇವಿಯ ಮಧುರವಾದ ಧ್ವನಿಯು ಕಲಾತ್ಮಕವಾಗಿದೆ ಎಂದು ತಿಳಿಸುತ್ತದೆ.
ಸೌಂದರ್ಯ ಲಹರಿಯ ೩೮ನೇ ಸ್ತೋತ್ರವು ೧೮ ವಿಧವಾದ ಕಲೆಗಳನ್ನು ಹೆಸರಿಸುತ್ತದೆ, "ಯಾರೊಂದಿಗಿನ ಸಂಭಾಷಣೆಯಿಂದ, ಹದಿನೆಂಟು ಕಲೆಗಳ ಸಿದ್ಧಿಯು (ಪರಿಪೂರ್ಣತೆಯು) ಉಂಟಾಗುತ್ತದೆಯೋ". ಈ ಹದಿನೆಂಟು ವಿದ್ಯೆಗಳ ಕುರಿತಾಗಿ ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತದೆ. ಇದರಲ್ಲಿ ಮೊದಲನೆಯದು, ಷೋಡಶೀ ಮಂತ್ರದ ಹದಿನಾರು ಬೀಜಾಕ್ಷರಗಳು, ದೇವಿ ಮತ್ತು ಒಬ್ಬನ ಗುರು ಇವು ಹದಿನೆಂಟಾಗಿವೆ” ಎಂದು ಹೇಳುತ್ತದೆ. ಇದನ್ನೇ अष्टादशगुणितविद्या - ಅಷ್ಟಾದಶಗುಣಿತವಿದ್ಯಾ ಎನ್ನುತ್ತಾರೆ. ಮತ್ತೊಂದು ವಿಧವಾದ ವಿಶ್ಲೇಷಣೆಯು ಇದನ್ನು ಹದಿನೆಂಟು ವಿಧವಾದ ವಿದ್ಯೆಗಳಾದ - ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಜ್ಯೋತಿಷ, ಛಂದಸ್ಸು, ಋಗ್ ವೇದ, ಯಜುರ್ ವೇದ, ಸಾಮ ವೇದ, ಅಥರ್ವ ವೇದ, ಪೂರ್ವ ಮತ್ತು ಉತ್ತರ ಮೀಮಾಂಸಗಳು, ನ್ಯಾಯ, ಪುರಾಣ, ಧರ್ಮ ಶಾಸ್ತ್ರ, ಆಯುರ್ವೇದ, ಧನುರ್ವೇದ, ಗಾಂಧರ್ವ ಮತ್ತು ನೀತಿ ಶಾಸ್ತ್ರ, ಎಂದು ಹೇಳುತ್ತದೆ. ಇದರ ಒಟ್ಟು ಅರ್ಥವೇನೆಂದರೆ ದೇವಿಯ ಮಧುರವಾದ ಧ್ವನಿಯಿಂದ ಈ ಹದಿನೆಂಟು ವಿದ್ಯೆಗಳ ಉಗಮವಾಗುತ್ತವೆ ಮತ್ತು ಈ ವಿದ್ಯೆಗಳನ್ನು ಪಡೆಯುವುದರಿಂದ ವ್ಯಕ್ತಿಯೊಬ್ಬನಿಗೆ ಅವನ ಮನಸ್ಸಿನ ಮೂಲಕ ಯುಕ್ತಾಯುಕ್ತ ವಿವೇಚನೆಯು (ಒಳ್ಳೆಯದು ಮತ್ತು ಕೆಟ್ಟದು ಇವುಗಳ ವ್ಯತ್ಯಾಸದ ತಿಳುವಳಿಕೆಯು) ಉಂಟಾಗುತ್ತದೆ.
Kāntā कान्ता (329)
೩೨೯. ಕಾಂತಾ
ದೇವಿಯು ಸುಂದರವಾಗಿದ್ದಾಳೆ. ೩೨೪ನೇ ನಾಮವು ಅವಳ ಶುಭಪ್ರದತೆಯಿಂದ ಉಂಟಾಗುವ ತರಂಗಗಳ ಕುರಿತಾಗಿ ಚರ್ಚಿಸಿತು. ಈ ನಾಮವು ದೇವಿಯ ಸೌಂದರ್ಯವು ಕಾಂತಿಯುಕ್ತವಾಗಿ ತರಂಗಗಳನ್ನು ಹೊಮ್ಮಿಸುತ್ತಿದೆ ಎಂದು ಹೇಳುತ್ತದೆ, ಇದು ಅವಳ ಸ್ಥೂಲ ಸ್ವರೂಪವನ್ನು ಕುರಿತದ್ದಾಯಿತು. ಈ ನಾಮವು ಅವಳ ಪರಬ್ರಹ್ಮ ಸ್ವರೂಪದ ಬಗ್ಗೆಯೂ ಹೇಳುತ್ತದೆ. ’ಕಾ’ ಎಂದರೆ ಪರಬ್ರಹ್ಮ ಮತ್ತು ‘ಅಂತ’ ಎಂದರೆ ಅಂತಿಮವಾದದ್ದು (ಕಟ್ಟಕಡೆಯದು). ಆದ್ದರಿಂದ ಕಾಂತಾ ಎಂದರೆ ಪರಮೋನ್ನತವಾದ ಪರಬ್ರಹ್ಮವೆಂದೂ ಆಗುತ್ತದೆ. (೩೨೫ನೇ ನಾಮವನ್ನೂ ನೋಡಿ).
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 323-329 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೮೯. ಶ್ರೀ ಲಲಿತಾ ಸಹಸ್ರನಾಮ ೩೨೩ರಿಂದ ೩೨೯ನೇ ನಾಮಗಳ ವಿವರಣೆ
ಶ್ರೀಧರರೆ, ೮೯ ನೆ ಕಂತಿನ ಸಾಅರ ತಮ್ಮ ಪರಿಷ್ಕರಣೆಗೆ ಸಿದ್ದ (ತುಸು ಆತುರದಲೆ ಹೊಸೆದದ್ದು)
(88 /90ಇನ್ನು ಬಾಕಿ ಇದೆ) :-)
ಲಲಿತಾ ಸಹಸ್ರನಾಮ ೩೨೩ - ೩೨೯
೩೨೩. ಕದಂಬ-ಕುಸುಮ-ಪ್ರಿಯಾ
ಪವಿತ್ರ ವೃಕ್ಷಗಳೈದರ ಗಣ ಪ್ರತಿನಿಧಿಸಿ ಹೃದಯ ನಾಲ್ಕಂತಃಕರಣ
ಕದಂಬ ಪುಷ್ಪ ಸುವಾಸನೆಯಂತೆ ಮಾರ್ಪಾಟಾಗುವ ಮನಸ ಕರಣ
ಮೆಚ್ಚಿದಾ ಹೂವೃಕ್ಷ ಮಧ್ಯೆ ದೇವಿ ವಾಸ ಆತ್ಮ ನೆಲೆಸಿದಂತೆ ಹೃದಯ
ಪಂಚದಶೀ ಮೂಲ ತ್ರಿಶತಿ ಓಲೈಸೆ ದೇವಿ ಕದಂಬ ಕುಸುಮ ಪ್ರಿಯಾ!
೩೨೪. ಕಲ್ಯಾಣೀ
ಮಂಗಳಕರ ಶುಭಪ್ರದ ಧನಾತ್ಮಕ ಶಕ್ತಿರೂಪ ಕಲ್ಯಾಣ
ಯೋಗ್ಯತಮ ಪ್ರಕಟವಾಗಿಸುತ ಶಕ್ತಿತರಂಗ ಮುಖೇನ
ಶುಭದಾಯಿನಿ ಲಲಿತೆ ಅವಳಾಗಿ ಶುಭಪ್ರದ ಸ್ವರೂಪಿಣಿ
ದೇವಿ ತ್ರಿಶತಿಯಲೂ ಪೂಜಿಪ ಶುಭನಾಮವೀ ಕಲ್ಯಾಣೀ!
೩೨೫. ಜಗತೀ
ಪ್ರಕಾಶ ವಿಮರ್ಶ ಮಹಾ ಮಾಯ ಸ್ವರೂಪಿಣೀ ಸ್ವಗತಾ
ಈ ಪ್ರಪಂಚಗದುಗಮಕೆ ಲಲಿತಾ ಬ್ರಹ್ಮ ಕಾರಣೀಭೂತ
ಜಗಕೆ ಕಾರಣವಾಗುತಲಿ ಪರಬ್ರಹ್ಮ ಲಕ್ಷಣವ ಹಿಡಿದೆತ್ತಿ
ತೋರಿಹಳು ಸಾರಿ ತಾ ಜಗಕೆ ಪರಬ್ರಹ್ಮರೂಪಿಣಿ ಜಗತೀ!
೩೨೬. ಕರುಣಾರಸ-ಸಾಗರಾ
ಮೋಡ ಕಳಚಿದ ನೀರಹನಿ ಪೊರೆವಂತೆ ಇಳೆಯ ತನುಮನ
ನಿರಂತರ ಜಲಚಕ್ರದೀ ಆವರ್ತನಕಿರದೆಯೂ ಸ್ವಪ್ರಯೋಜನ
ನಿಸ್ವಾವರ್ಥದೀ ಕರುಣೆಯೆ ಪರಮೋನ್ನತ ಭೇಧಭಾವ ರಹಿತ
ಅಂತೆ ಕರುಣಾರಸ ಸಾಗರಾ ಲಲಿತೆ ಸ್ಪುರಿಸಿರೆ ಕರುಣಾಮೃತ!
೩೨೭. ಕಲಾವತೀ
ಅರವತ್ತನಾಲ್ಕು ಕಲೆಗಳಿಗೊಡತಿ ಲಲಿತೆ ಕಲಾವತೀ
ಸಕಲ ವಿದ್ಯಾಂತರ್ಗತವೆ ಉಗಮಾಂತಿಮ ಪಂಚದಶೀ
ದೇವೀ ತಾ ಪಂಚದಶೀಮಂತ್ರ ಅರವತ್ತನಾಲ್ಕು ತಂತ್ರ
ಪ್ರಕಾಶ ಸ್ವರೂಪ ವಿದ್ಯೆ ಕಲೆಯಾಗಿಹ ಲಲಿತಾ ಪಾತ್ರ!
೩೨೮. ಕಲಾಲಾಪ
ಮಾತೇ ಕಲಾತ್ಮಕ ಲಲಿತೆಯ ಧ್ವನಿ ಮಾಧುರ್ಯತೆ ಆಲಾಪ
ಅರವತ್ತನಾಲ್ಕು ಕಲೆ ಸಾಮಾಜಿಕ ವಿದ್ಯೆಗೊಡತಿ ಕಲಾಲಾಪಾ
ಅಷ್ಟಾದಶಗುಣಿತವಿದ್ಯೆ ದೇವಿ ಮಧುರದನಿಯಿಂದುಗಮಿಸುತ
ಯುಕ್ತಾಯುಕ್ತ ವಿವೇಚನೆ ಕಲಿಯುತ ಮನಗಳರಿವಾ ಸುಕೃತ!
೩೨೯. ಕಾಂತಾ
ಸೆಳೆವ ಸಮ್ಮೋಹನ ರೂಪ ಸೌಂದರ್ಯವೆ ಕಾಂತಾ
ಅಪರಿಮಿತ ಕಾಂತಿ ತರಂಗ ರೂಪದಲಿ ಹೊಮ್ಮುತ
ಪರಬ್ರಹ್ಮ ಸೌಂದರ್ಯಕೆ ಪರಬ್ರಹ್ಮವೆ ಸಾಟಿಯಿತ್ತ
'ಕಾ' ಪರಬ್ರಹ್ಮ 'ಅಂತ' ಪರಮೋನ್ನತವ ಸಾರುತ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೮೯. ಶ್ರೀ ಲಲಿತಾ ಸಹಸ್ರನಾಮ ೩೨೩ರಿಂದ ೩೨೯ನೇ ನಾಮಗಳ ವಿವರಣೆ by nageshamysore
ಉ: ೮೯. ಶ್ರೀ ಲಲಿತಾ ಸಹಸ್ರನಾಮ ೩೨೩ರಿಂದ ೩೨೯ನೇ ನಾಮಗಳ ವಿವರಣೆ
ನಾಗೇಶರೇ,
ಆತುರದಲ್ಲಿ ಹೊಸೆದಿದ್ದರೂ ಗುರಿ ತಪ್ಪಾಗಿಲ್ಲ; ಎಲ್ಲಾ ಪದ್ಯಗಳೂ ಚೆನ್ನಾಗಿ ಮೂಡಿ ಬಂದಿವೆ. ಈ ಕಂತಿನಲ್ಲಿ ನನಗೆ ಹೆಚ್ಚು ಮುದ ಕೊಟ್ಟದ್ದು ೩೨೮. ಕಲಾಲಾಪ. ೩೨೬. ಕರುಣಾರಸ ಸಾಗರದಲ್ಲಿ ಒಂದು ಚಿಕ್ಕ ಅಚ್ಚಿನ ದೋಷವಿದೆ. ಅದನ್ನು ಸರಿಪಡಿಸಿ. ನಿಸ್ವಾವರ್ಥದೀ=ನಿಸ್ವಾರ್ಥದಿ ಮಾಡಿ ಸಾಕು.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೮೯. ಶ್ರೀ ಲಲಿತಾ ಸಹಸ್ರನಾಮ ೩೨೩ರಿಂದ ೩೨೯ನೇ ನಾಮಗಳ ವಿವರಣೆ by makara
ಉ: ೮೯. ಶ್ರೀ ಲಲಿತಾ ಸಹಸ್ರನಾಮ ೩೨೩ರಿಂದ ೩೨೯ನೇ ನಾಮಗಳ ವಿವರಣೆ
ಶ್ರೀಧರರೆ, ತಪ್ಪನ್ನು ತಿದ್ದಿ ಕೊಂಡಿಯನ್ನು ಅಂತಿಮಗೊಳಿಸಿ ಹಾಕಿದ್ದೇನೆ (ಹಾಗೆಯೆ 'ಜಗತೀ'ಯಲ್ಲಿ ಒಂದಕ್ಷರ ಎರಡು ಬಾರಿ ಪುನರಾವರ್ತನೆಯಾಗಿತ್ತು - ಅದನ್ನು ತಿದ್ದಿದ್ದೇನೆ)
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು