೯೨. ಶ್ರೀ ಲಲಿತಾ ಸಹಸ್ರನಾಮ ೩೩೮ರಿಂದ ೩೪೦ನೇ ನಾಮಗಳ ವಿವರಣೆ

೯೨. ಶ್ರೀ ಲಲಿತಾ ಸಹಸ್ರನಾಮ ೩೩೮ರಿಂದ ೩೪೦ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೩೮ - ೩೪೦

Veda-jananī वेद-जननी (338)

೩೩೮. ವೇದ-ಜನನೀ

           ವೇದಗಳನ್ನು ಸೃಷ್ಟಿಸಿದವಳು. ಇದರ ಶಬ್ದಶಃ ಅರ್ಥವನ್ನು ಹೀಗೆ ವಿವರಿಸಬಹುದು, ದೇವಿಯು ವೇದಗಳಿಗೆ ಜನ್ಮವಿತ್ತವಳು. ವೇದಗಳು ಪರಬ್ರಹ್ಮದಿಂದ ಶಬ್ದ ರೂಪದಲ್ಲಿ ಉಗಮವಾದವು. ಶಬ್ದವು ಪುರಾತನ ಋಷಿಗಳಿಂದ ಅರಿಯಲ್ಪಟ್ಟಿತ್ತು ಮತ್ತದನ್ನು ಅವರು ತಮ್ಮ ಶಿಷ್ಯರಿಗೆ ಮೌಖಿಕವಾಗಿ ವರ್ಗಾಯಿಸಿದರು. ಇತ್ತೀಚಿನ ಕೆಲವು ವರ್ಷಗಳ ಹಿಂದೆಯಷ್ಟೇ ವೇದಗಳು ಗ್ರಂಥ ರೂಪದಲ್ಲಿ ಪ್ರಚುರಪಡಿಸಲ್ಪಟ್ಟವು. ಗ್ರಂಥಕ್ಕಿಂತ ಹೆಚ್ಚಾಗಿ ಮಂತ್ರಗಳ ಸರಿಯಾದ ಉಚ್ಛಾರಣೆ ಬಹಳ ಮುಖ್ಯವಾದುದು ಮತ್ತು ತಪ್ಪಾದ ಉಚ್ಛಾರಣೆ ಅಥವಾ ತಪ್ಪು ಸ್ವರಗಳು ಅವಾಂಛಿತ ಫಲಿತಗಳಿಗೆ ದಾರಿ ಮಾಡಿಕೊಡಬಹುದು. ಈ ಕಾರಣಕ್ಕಾಗಿಯೇ ವೇದಗಳನ್ನು ಮೌಖಿಕವಾಗಿ ಬೋಧಿಸುವ ಪರಿಪಾಠ ಬೆಳೆದು ಬಂದಿದೆ. ವೇದಗಳು ಶಬ್ದ ಬ್ರಹ್ಮದ ಮೂಲಕ ಉದ್ಭವವಾಗಿವೆ.

           ಮುಂಡಕ ಉಪನಿಷತ್ತು (೧.೧.೫) ಬೇರೆ ರೀತಿಯಾದ ವ್ಯಾಖ್ಯಾನವನ್ನು ಕೊಡುತ್ತದೆ. "ಎರಡು ವಿಧವಾದ ಜ್ಞಾನಗಳಿದ್ದು ಅವು ಲೌಕಿಕ ಅಥವಾ ಅಪರಾ ಮತ್ತು ಆಧ್ಯಾತ್ಮಿಕ ಅಥವಾ ಪರಾ ಆಗಿವೆ. ಅಪರಾ ವಿದ್ಯೆಯು ನಾಲ್ಕು ವೇದಗಳು, ಧ್ವನಿಶಾಸ್ತ್ರ, ಶಾಸ್ತ್ರ ವಿಧಿತ ಕರ್ಮಗಳು, ವ್ಯಾಕರಣ, ಶಬ್ದೋತ್ಪತ್ತಿ ಶಾಸ್ತ್ರ, ಛಂದಸ್ಸು ಮತ್ತು ಖಗೋಳ ಶಾಸ್ತ್ರಗಳಾಗಿವೆ. ಆದರೆ ಪರಾ ವಿದ್ಯೆಯು ಯಾವುದರಿಂದ ಬ್ರಹ್ಮವನ್ನು ಅರಿಯಬಹುದೋ ಅದಾಗಿದೆ ಮತ್ತದು ಯಾವಾಗಲೂ ಒಂದೇ ತೆರನಾಗಿದ್ದು ಅದು ನಾಶವಾಗುವುದಿಲ್ಲ."

          ಆದರೆ ಬೃಹದಾರಣ್ಯಕ ಉಪನಿಷತ್ತು (೨.೪.೧೦) ಇದನ್ನು ಇನ್ನೊಂದು ವಿಧವಾಗಿ ವ್ಯಾಖ್ಯಾನಿಸುತ್ತದೆ. "ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದ, ಇತಿಹಾಸ, ಪುರಾಣ, ಕಲೆಗಳು, ಉಪನಿಷತ್ತುಗಳು, ಸಾರಗರ್ಭಿತ ಶ್ಲೋಕಗಳು, ಸೂತ್ರಗಳು, ಟೀಕೆ ಮತ್ತು ಟಿಪ್ಪಣಿಗಳು ಅಥವಾ ವ್ಯಾಖ್ಯಾನಗಳು ಅನಂತ ಸತ್ಯದ ಉಸಿರಿದ್ದಂತೆ".

          ಪುರುಷ ಸೂಕ್ತವು ಇನ್ನೊಂದು ವಿಧವಾದ ವಿಶ್ಲೇಷಣೆಯನ್ನು ಕೊಡುತ್ತದೆ. ಅದು ಹೇಳುವುದೇನೆಂದರೆ, ದೇವತೆಗಳು ಮತ್ತು ಋಷಿಮುನಿಗಳು ಸರ್ವಾಹುತ ಯಜ್ಞವನ್ನು ಕೈಗೊಂಡು ಯಜ್ಞ ದೇವತೆಯಾಗಿ ಪುರಷನನ್ನು ಆವಾಹನೆ ಮಾಡಿದರು ಆಗ ಈ ಯಜ್ಞದ ಫಲವಾಗಿ ವೇದಗಳು ಉದಿಸಿದವು. ಪುರಷ ಎಂದರೆ ಬ್ರಹ್ಮವಾಗಿದ್ದು ಅವನಿಂದ ವೇದಗಳು ಹೊರಹೊಮ್ಮಿದವು.

           ಇಲ್ಲಿ ವಿವಿಧ ವ್ಯಾಖ್ಯೆಗಳು ಇದ್ದಾಗ್ಯೂ ಸಹ ಎಲ್ಲವೂ ನಿರ್ಣಯಾತ್ಮಕವಾಗಿ ಹೇಳುವುದೇನೆಂದರೆ, ವೇದಗಳು ಅಥವಾ ಸೂಕ್ಷ್ಮ ರೂಪದ ಶಬ್ದವು ಪರಬ್ರಹ್ಮನಿಂದ ಉಗಮವಾದವು ಎನ್ನುವುದಾಗಿದೆ.

Viṣṇu-māyā विष्णु-माया (339)

೩೩೯. ವಿಷ್ಣು-ಮಾಯಾ

        ದೇವಿಯು ವಿಷ್ಣುವಿನ ಮಾಯೆಯಾಗಿದ್ದಾಳೆ. ವಿಷ್ಣವು ಸರ್ವಾಂತರ್ಯಾಮಿಯಾಗಿದ್ದು ಅವನು ಈ ಜಗತ್ತಿನ ಸ್ಥಿತಿಕಾರಕನಾಗಿದ್ದಾನೆ. ಬ್ರಹ್ಮದ ಸ್ಥಿತಿಕಾರಕ ಕ್ರಿಯೆಯನ್ನು ವಿಷ್ಣುವೆಂದು ಕರೆಯಲಾಗುತ್ತದೆ. ನಾರಾಯಣ ಸೂಕ್ತವು ಹೇಳುತ್ತದೆ, "ವಿಷ್ಣುವು ಅಂತರಂಗ ಮತ್ತು ಬಹಿರಂಗಗಳೆರಡೆರಲ್ಲಿಯೂ ವ್ಯಾಪಿಸಿದ್ದಾನೆ. ಶಕ್ತಿಯು ಮಾಯೆಯ ಸ್ವರೂಪದಲ್ಲಿದ್ದು ಅದು ಬ್ರಹ್ಮದ  ಸುತ್ತಲೂ ಒಂದು ವಿಧವಾದ ಮುಸುಕನ್ನು ಏರ್ಪಡಿಸುತ್ತದೆ. ಎಲ್ಲಿಯವರೆಗೆ ಈ ಮಾಯೆಯ ಮುಸುಕನ್ನು ಸರಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಬ್ರಹ್ಮದ ಸಾಕ್ಷಾತ್ಕಾರವಾಗುವುದಿಲ್ಲ ಆದ್ದರಿಂದ ಶಕ್ತಿ ಆರಾಧನೆಗೆ ಅಷ್ಟೊಂದು ಮಹತ್ವವನ್ನು ಕೊಡಲಾಗಿದೆ. ಶಕ್ತಿ ದೇವಿಗೆ ಈ ಪ್ರಪಂಚವನ್ನು ಪರಿಪಾಲಿಸಲು ಶಿವನು ತನ್ನ ಸ್ವಾತಂತ್ರ್ಯ ಶಕ್ತಿಯನ್ನು ಆಕೆಗೆ ಕೊಟ್ಟಿದ್ದಾನೆ.

           ಶ್ರೀಕೃಷ್ಣನು ಭಗವದ್ಗೀತೆಯಲ್ಲಿ (೭.೧೪) ಹೀಗೆ ಹೇಳುತ್ತಾನೆ, "ತ್ರಿಗುಣಗಳಿಂದ ಕೂಡಿದ ನನ್ನ ಮಾಯೆಯನ್ನು ಅಧಿಗಮಿಸುವುದು ಬಹು ಕಷ್ಟಕರವಾದದ್ದು. ಯಾರು ನನ್ನಲ್ಲಿ ಶರಣಾಗತಿಯನ್ನು ಹೊಂದುತ್ತಾರೆಯೋ ಅವರು ಮಾತ್ರ ಈ ಮಾಯೆಯ ಹಿಡಿತದಿಂದ ಪಾರಾಗಬಲ್ಲರು". ಗೀತೆಯ ಈ ಶ್ಲೋಕವನ್ನು ಬಹಳ ಮಹತ್ವಪೂರ್ಣವಾದದ್ದೆಂದು ಪರಿಗಣಿಸಬೇಕು. ಒಂದೇ ಶ್ಲೋಕದಲ್ಲಿ ಶ್ರೀಕೃಷ್ಣನು ಮಾಯೆಯ ತತ್ವವನ್ನು ಕುರಿತು ಹೇಳುವುದಲ್ಲದೆ ಅದನ್ನು ಹೇಗೆ ಅಧಿಗಮಿಸಬೇಕೆಂದೂ ಹೇಳುತ್ತಾನೆ. ಮಾಯೆಯು ಸಾತ್ವಿಕ, ರಾಜಸಿಕ ಮತ್ತು ತಾಮಸಿಕ - ಈ ತ್ರಿಗುಣಗಳ ಸಂಕೀರ್ಣವಾಗಿದೆ. ಈ ಮೂರು ಗುಣಗಳ ಮಾರ್ಪಾಡುಗಳಿಂದ ಸೃಷ್ಟಿಯ ಅನಾವರಣವಾಗುತ್ತದೆ. ಒಬ್ಬನು ಈ ಮೂರು ಗುಣಗಳನ್ನು ಅಧಿಗಮಿಸಲು ಶಕ್ಯನಾದಾಗ ಅವನು ಮಾಯೆಯ ಮುಸುಕನ್ನು ಪಕ್ಕಕ್ಕೆ ಸರಿಸುವಲ್ಲಿ ಮೊದಲನೇ ಹೆಜ್ಜೆಯನ್ನಿರಿಸಿದಂತೆ. ಮುಂದಿನ ಹಂತವೇ ಭಗವಂತನಲ್ಲಿ ಶರಣಾಗತಿ ಹೊಂದುವುದು. ಶ್ರೀಕೃಷ್ಣನು ಹೇಳುತ್ತಾನೆ, ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿದ್ಯ -  मामेव ये प्रपद्यन्ते मायामेतां तरन्तिद्य ಅಂದರೆ ಯಾರು ನನ್ನಲ್ಲಿ ಶರಣಾಗತಿಯನ್ನು ಕೋರುತ್ತಾನೆಯೋ ಅವನು ಖಂಡಿತವಾಗಿ ಈ ಮಾಯೆಯನ್ನು ಅಧಿಗಮಿಸುತ್ತಾನೆ."

Vilāsinī विलासिनी (340)

೩೪೦. ವಿಲಾಸಿನೀ

           ವಿಲಾಸವೆಂದರೆ ತುಂಟಾಟವಾಡುವುದು. ಒಂದು ವ್ಯಾಖ್ಯಾನವು ಆಕೆಯು ಶಿವನೊಂದಿಗೆ ಕಾಮ ಸಲ್ಲಾಪಗಳನ್ನು ಆಡುವುದರಲ್ಲಿ ಆಸಕ್ತಳಾಗಿದ್ದಾಳೆ ಎನ್ನುತ್ತದೆ. ಸಾಮಾನ್ಯವಾಗಿ ಬಿಂಬಿಸುವಂತೆ ಇಂತಹ ಕ್ರಿಯೆಗಳನ್ನು ಇಲ್ಲಿ ಪಾಪವೆಂದು ಪರಿಗಣಿಸಲಾಗಿಲ್ಲ. ಈ ವಿಧವಾದ ಕ್ರಿಯೆಗಳಿಲ್ಲದಿದ್ದರೆ ಸಂತಾನೋತ್ಪತ್ತಿಯು ಆಗುವುದಾದರೂ ಹೇಗೆ? ದೈವೀ ಕ್ರಿಯೆಯಾದ ಸಂತಾನೋತ್ಪತ್ತಿಯು ಜರುಗದೇ ಇದ್ದರೆ ಸೃಷ್ಟಿ ಕಾರ್ಯವೇ ತಲ್ಲಣಗೊಳ್ಳುತ್ತದೆ. ಪುರಾತನ ಗ್ರಂಥಗಳೂ ಸಹ ಇಂತಹ ಕ್ರಿಯೆಗಳಿಂದ ದೂರವಿರಲು ನಿರ್ಭಂದಿಸುವುದಿಲ್ಲ. ಆದರೆ ಅದೇ ಸಮಯದಲ್ಲಿ ಅವುಗಳು ಕೆಲವೊಂದು ಕಠಿಣವಾದ ನೀತಿ ನಿಯಮಗಳನ್ನು ವಿಧಿಸುವುದಲ್ಲದೇ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸುತ್ತವೆ. 

           ವಿಲಾಸವೆಂದರೆ ಹೊರಹೊಮ್ಮಿಸುವಿಕೆಯ ಶಕ್ತಿ ಎನ್ನುವ ಅರ್ಥವೂ ಇದೆ ಮತ್ತದನ್ನು ‘ವಿಕ್ಷೇಪ ಶಕ್ತಿ’ ಎಂದೂ ಕರೆಯಲಾಗುತ್ತದೆ (ಈ ’ಹೊರಹೊಮ್ಮುವಿಕೆಯ ಶಕ್ತಿ’ಯಿಂದ ಈ ಪ್ರಪಂಚವನ್ನೂ ಸಹ ಹೊರಹೊಮ್ಮಿದಂತೆ ತೋರುವ ಸಾಧ್ಯತೆಯೂ ಇದೆ). ಇದುವೇ ಮಾಯೆಯ ನಿಜವಾದ ಕ್ರಿಯೆಯಾಗಿದ್ದು, ಅದು ಅಂತಿಮ ಸತ್ಯವನ್ನು ಮುಸುಕಿನಿಂದ ಮರೆಮಾಚಿ ಅದನ್ನು ಮತ್ತೇನೋ ಎಂದು ತೋರಿಸಿ ಭ್ರಮೆ ಉಂಟಾಗಿಸುತ್ತದೆ. ಈ ವಿಶ್ಲೇಷಣೆಯು ಹೆಚ್ಚು ಸಮಂಜಸವೆನಿಸುತ್ತದೆ ಏಕೆಂದರೆ ಈ ನಾಮವು ಹಿಂದಿನ ನಾಮವಾದ ವಿಷ್ಣು-ಮಾಯಾ ಎನ್ನುವುದನ್ನು ಅನುಸರಿಸಿದೆ. ದೇವಿಯು ವಿಷ್ಣುವಿನ ಮಾಯೆಯ ರೂಪದಲ್ಲಿರುತ್ತಾಳಾದ್ದರಿಂದ (ವಿಷ್ಣುವು ಸರ್ವಾಂತರ್ಯಾಮಿಯಾಗಿದ್ದಾನೆ) ಸಹಜವಾಗಿಯೇ ಆಕೆಯು ಭ್ರಮೆಯನ್ನುಂಟು ಮಾಡುತ್ತಾಳೆ.

******

     ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 338-340 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Thu, 08/15/2013 - 03:47

ಶ್ರೀಧರರೆ, ೯೨. ಶ್ರೀ ಲಲಿತಾ ಸಹಸ್ರನಾಮದ ವಿವರಣೆ ಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೩೩೮ - ೩೪೦
________________________________________

೩೩೮. ವೇದ-ಜನನೀ 
ಶಬ್ದ ಬ್ರಹ್ಮದ ಮುಖೇನ ಉದ್ಭವ ವೇದ, ಜನ್ಮವಿತ್ತಳು ವೇದ ಜನನೀ
ಸ್ವಚ್ಛ ಮಂತ್ರೋಚ್ಛಾರಸ್ವರ ವಾಂಛಿತ ಫಲಿತಕೆ ಮೌಖಿಕದೆ ಅವತರಣಿ
ಪುರಾತನ ಋಷಿಮುನಿಗಳರಿತು ಸಂತತಿಯಿಂಸಂತತಿ ಜ್ಞಾನಪ್ರಸಾರ
ಮುಂಡಕ ಬೃಹದಾರಣ್ಯಕ ಪುರುಷಸೂಕ್ತ ವ್ಯಾಖ್ಯೆ ಪರಬ್ರಹ್ಮವೆ ಆಕರ!

೩೩೯. ವಿಷ್ಣು-ಮಾಯಾ 
ಸಾತ್ವಿಕ ರಾಜಸಿಕ ತಾಮಸಿಕ ತ್ರಿಗುಣ ಸಂಕೀರ್ಣವಾಗಿಹ ಮಾಯೆ
ಸೃಷ್ಟಿಯನಾವರಣದಿ ಶರಣಾಗತನಷ್ಟೆ ಅಧಿಗಮಿಸಿ ಮುಕ್ತನಾಗಿಹೆ
ಸ್ಥಿತಿಕಾರಕ ಪರಬ್ರಹ್ಮ ಸ್ಥಿತಿ ವಿಷ್ಣುಮಾಯಾ ಸರ್ವಾಂತರ್ಯಾಮಿನಿ
ಶಿವಶಕ್ತಿಗಿತ್ತ ಸ್ವಾತಂತ್ರ್ಯ, ಮಾಯೆ ತೆರೆವಾತ್ಮಸಾಕ್ಷಾತ್ಕಾರದಾಯಿನಿ!

೩೪೦. ವಿಲಾಸಿನೀ
ವಿಲಾಸವೆನೆ ವಿಕ್ಷೇಪ ಪ್ರಚಂಡ ಶಕ್ತಿ ಹೊರಹೊಮ್ಮಿಸಿದ ಪ್ರಪಂಚ
ಮಾಯಾ ಭ್ರಮೆ ಮುಸುಕಿನಡಿ ಬಚ್ಚಿಟ್ಟ ಸೃಷ್ಟಿ ಕಾರ್ಯದ ಕುಂಚ
ಸುಲಲಿತ ದೇವಿಗೀ ಪ್ರಕ್ಷೇಪ ಸರಸ ತುಂಟಾಟ ಸಲ್ಲಾಪದ ಸೊಗ
ವಿಲಾಸಿನೀ ಲಲಿತೆ ಸೃಷ್ಟಿಸಿದೀಜಗ ಬ್ರಹ್ಮಲೀಲಾಜಾಲ ಸೊಬಗ!
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

ನಾಗೇಶರೆ,
ನಿಮ್ಮ ಸಹಜ ಶೈಲಿಯಲ್ಲಿ ಕವನಗಳು ಎಂದಿನಂತೆ ಚೆನ್ನಾಗಿಯೇ ಮೂಡಿ ಬಂದಿವೆ. ಒಂದೆರಡು ಕಡೆ ಒಂದೆರಡು ಪದಗಳನ್ನು ಬದಲಾಯಿಸಿದರೆ ಕವಿತೆಯ ಲಾಲಿತ್ಯ ಇನ್ನಷ್ಟು ಹೆಚ್ಚುತ್ತದೆ ಎಂದು ಕೊಳ್ಳುತ್ತೇನೆ.
೩೩೮. ವೇದ-ಜನನೀ
ಶಬ್ದ ಬ್ರಹ್ಮದ ಮುಖೇನ ಉದ್ಭವ ವೇದ, ಜನ್ಮವಿತ್ತಳು ವೇದ ಜನನೀ
ಜನ್ಮವಿತ್ತಳು=ಕಾರಣೀಭೂತಳು
ಸ್ವಚ್ಛ ಮಂತ್ರೋಚ್ಛಾರಸ್ವರ ವಾಂಛಿತ ಫಲಿತಕೆ ಮೌಖಿಕದೆ ಅವತರಣಿ
ಪುರಾತನ ಋಷಿಮುನಿಗಳರಿತು ಸಂತತಿಯಿಂಸಂತತಿ ಜ್ಞಾನಪ್ರಸಾರ
ಮುಂಡಕ ಬೃಹದಾರಣ್ಯಕ ಪುರುಷಸೂಕ್ತ ವ್ಯಾಖ್ಯೆ ಪರಬ್ರಹ್ಮವೆ ಆಕರ!
ಆಕರ=Reference? ಎನ್ನುವ ಅರ್ಥದಲ್ಲಿ ಉಪಯೋಗಿಸಿರುವಿರಾ? ಸ್ವಲ್ಪ ಸ್ಪಷ್ಟಪಡಿಸಿ.
೩೩೯. ವಿಷ್ಣು-ಮಾಯಾ
:
:
:
ಶಿವಶಕ್ತಿಗಿತ್ತ ಸ್ವಾತಂತ್ರ್ಯ, ಮಾಯೆ ತೆರೆವಾತ್ಮಸಾಕ್ಷಾತ್ಕಾರದಾಯಿನಿ!
ತೆರೆ=ಸರಿಸೆ ಮಾಡಿ; ಏಕೆಂದರೆ ತೆರೆ=ಮುಸುಗು ಆಗುತ್ತದೆ ಮತ್ತು ಬಿಚ್ಚು, ಹೊರಗೆಡಹು ಎನ್ನುವ ಅರ್ಥಗಳೂ ಬರುತ್ತವಲ್ಲವೇ?

೩೪೦. ವಿಲಾಸಿನೀ - ಈ ಪಂಕ್ತಿ ಈ ಕಂತಿನ ಹೈಲೈಟ್!
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಆಕರವನ್ನು ಮೂಲ ಅಥವಾ ಆಧಾರ ಅನ್ನುವ ಅರ್ಥದಲ್ಲಿ ಬಳಸಿದ್ದೇನೆ (=ಮುಂಡಕ ಬೃಹದಾರಣ್ಯಕ ಪುರುಷಸೂಕ್ತ ವ್ಯಾಖ್ಯೆಯಲ್ಲೂ ವೇದದ ಮೂಲ ಪರಬ್ರಹ್ಮವೆ ಎಂದು ಹೇಳಿದೆ) . ಜತೆಗೆ ಇನ್ನೆರಡು ಸಾಧ್ಯತೆಯನ್ನು (ಕಡೆ ಸಾಲಿಗೆ) ಸೇರಿಸಿದ್ದೇನೆ - ಯಾವುದಾದರೊಂದು ಸೂಕ್ತವಾದೀತ ಅಥವ ಹೊಸದಾಗಿ ಹೊಸೆಯಬೇಕ ನೋಡಿ. 

೩೩೮. ವೇದ-ಜನನೀ
ಶಬ್ದಬ್ರಹ್ಮಮುಖೇನ ಉದ್ಭವ ವೇದ, ಕಾರಣೀಭೂತಳು ವೇದ ಜನನೀ
ಸ್ವಚ್ಛ ಮಂತ್ರೋಚ್ಛಾರಸ್ವರ ವಾಂಛಿತ ಫಲಿತಕೆ ಮೌಖಿಕದೆ ಅವತರಣಿ
ಪುರಾತನ ಋಷಿಮುನಿಗಳರಿತು ಸಂತತಿಯಿಂಸಂತತಿ ಜ್ಞಾನಪ್ರಸಾರ
ಮುಂಡಕ ಬೃಹದಾರಣ್ಯಕ ಪುರುಷಸೂಕ್ತಕು ವೇದದುಗಮ ಬ್ರಹ್ಮಶಿರ!

ಮತ್ತೊಂದು ಸಾಧ್ಯತೆ
-----------------------
2)-----
-----
----
ಮುಂಡಕ ಬೃಹದಾರಣ್ಯಕ ಪುರುಷಸೂಕ್ತಕು ವೇದ ಪರಬ್ರಹ್ಮದ ವರ!

೩೩೯. ವಿಷ್ಣು-ಮಾಯಾ -  ಪಂಕ್ತಿಯ ಕಡೆ ಸಾಲನ್ನು ಬದಲಿಸಿದ್ದೇನೆ. ಈಗ ಸೂಕ್ತ ಕಾಣುವುದೆ?

ಸಾತ್ವಿಕ ರಾಜಸಿಕ ತಾಮಸಿಕ ತ್ರಿಗುಣ ಸಂಕೀರ್ಣವಾಗಿಹ ಮಾಯೆ
ಸೃಷ್ಟಿಯನಾವರಣದಿ ಶರಣಾಗತನಷ್ಟೆ ಅಧಿಗಮಿಸಿ ಮುಕ್ತನಾಗಿಹೆ
ಸ್ಥಿತಿಕಾರಕ ಪರಬ್ರಹ್ಮ ಸ್ಥಿತಿ ವಿಷ್ಣುಮಾಯಾ ಸರ್ವಾಂತರ್ಯಾಮಿನಿ
ಶಿವಶಕ್ತಿಗಿತ್ತ ಸ್ವಾತಂತ್ರ್ಯ, ಮಾಯೆ ಸರಿಸಾತ್ಮಸಾಕ್ಷಾತ್ಕಾರದಾಯಿನಿ!

ಧನ್ಯವಾದಗಳೊಂದಿಗೆ, 
ನಾಗೇಶ ಮೈಸೂರು
 

ನಾಗೇಶರೆ,
೩೩೭. ವೇದ-ಜನನೀ ಕಡೆಯ ಸಾಲಿನ ಕುರಿತು. ನಿಮ್ಮ ಎರಡೂ ಸಾಧ್ಯತೆಗಳು ಪದ್ಯದ ರೀತ್ಯಾ ಸೊಗಸಾಗಿಯೇ ಇವೆ. ಆದರೆ ಮೂಲ ವಿವರಣೆಯ ಉದ್ದೇಶ ಅದಲ್ಲ!
ಮುಂಡಕ, ಬೃಹದಾರಣ್ಯಕ ಮತ್ತು ಪುರುಷಸೂಕ್ತಗಳು ವೇದಗಳು ನಮಗೆ ಬ್ರಹ್ಮವನ್ನು ತೋರಿಸುವ ಸಾಧನಗಳಾಗಿವೆ ಎನ್ನುವದನ್ನು ಹೇಳುತ್ತವೆ. ಮುಂಡಕವು ವೇದಗಳನ್ನೇ ಅಪರಾ ವಿದ್ಯೆ (ಲೌಕಿಕ ವಿದ್ಯೆ) ಎಂದು ಕರೆದರೆ; ಬೃಹದಾರಣ್ಯಕವು ವೇದೋಪನಿಷತ್ತುಗಳು, ಶಾಸ್ತ್ರ, ಪುರಾಣೇತಿಹಾಸಗಳೂ ಸಹ ಪರಾ ವಿದ್ಯೆ ಅಂದರೆ ಬ್ರಹ್ಮನನ್ನು ಅರಿಯುವ ಸಾಧನಗಳೆನ್ನುತ್ತದೆ. ಪುರುಷಸೂಕ್ತವಾದರೋ ವೇದಗಳ ಉಗಮ ಸರ್ವಾಹುತ ಯಜ್ಞದ ಯಜ್ಞಪುರಷನ ಮೂಲಕ ಆಯಿತು ಎಂದು ಹೇಳುತ್ತದಷ್ಟೆ. ಮೂರು ಕೃತಿಗಳು ಒಪ್ಪಿಕೊಳ್ಳುವ ಸಾಮಾನ್ಯವಾದ ವಿಷಯವೇನೆಂದರೆ, ವೇದಗಳು ಶಬ್ದ ಬ್ರಹ್ಮನಿಂದ ಉಗಮವಾದವು ಎನ್ನುವುದನ್ನು ಮಾತ್ರ. ಈ ಹಿನ್ನಲೆಯಲ್ಲಿ ಮೊದಲನೇ ಕವನ - ೩೩೮ರ ವೇದ-ಜನನೀ ಕವನ ಸ್ವಲ್ಪ ಮಾರ್ಪಡಿಸ ಬೇಕಾಗುತ್ತದೆ. ಇಲ್ಲಿ ನಿರೂಪಿಸಿರುವ ವಿಷಯಗಳಿಂದ ಗೊಂದಲವೇರ್ಪಟ್ಟಿದೆ ಎನ್ನುವುದು ಅರ್ಥವಾಯಿತು. ಒಂದು ನಾಮಕ್ಕೆ ಸಂಭಂದಿಸಿದಂತೆ ಎಲ್ಲಾ ವಿಷಯಗಳನ್ನೂ ವಿವರಣೆಯಲ್ಲಿ ಮೂಲ ಲೇಖಕರಾದ ರವಿಯವರು ಅಡಕ ಮಾಡಬಯಸುವುದರಿಂದ ಹಲವಾರು ಬಾರಿ ಅವರು ಯಾವುದನ್ನು ನಿಖರವಾಗಿ ಹೇಳುತ್ತಿದ್ದಾರೆನ್ನುವುದನ್ನು ತಿಳಿದುಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಅವುಗಳನ್ನು ಒಂದು ಬಾರಿಗಿಂತ ಹೆಚ್ಚು ಸಾರಿ ಓದಿದಾಗ ವಿಷಯ ಸ್ಪಷ್ಟವಾಗುತ್ತಿರುತ್ತದೆ. ಈ ಹಿನ್ನಲೆಯಲ್ಲಿ ಕಡೆಯ ಸಾಲನ್ನು ಸೂಕ್ತವಾಗಿ ಬದಲಾವಣೆ ಮಾಡಿ.

ಇನ್ನು ೩೩೯. ವಿಷ್ಣು-ಮಾಯಾ -
:
:
ಶಿವಶಕ್ತಿಗಿತ್ತ ಸ್ವಾತಂತ್ರ್ಯ, ಮಾಯೆ ಸರಿಸಾತ್ಮಸಾಕ್ಷಾತ್ಕಾರದಾಯಿನಿ!

ಈಗ ಪಂಕ್ತಿಯ ವಿಷಯಕ್ಕೆ ಬರೋಣ. ಮಾಯೆಯ ಮುಸುಕನ್ನು ಸರಿಸಬಲ್ಲವಳು ದೇವಿ ಮಾತ್ರಳೇ. ಆಕೆ ಹಾಗೆ ಮಾಡಿದಾಗಲಷ್ಟೇ ನಮಗೆ ಶಿವನ ಸಾಕ್ಷಾತ್ಕಾರವಾಗುವುದು. ಆದ್ದರಿಂದ ಆ ಮುಸುಗನ್ನು ದೇವಿ ಮನಸ್ಸು ಮಾಡಿದರಷ್ಟೇ ಮತ್ತು ಸ್ವತಃ ತಾನೇ ಮಾಯೆಯ ಮುಸುಕನ್ನು ಇಲ್ಲವಾಗಿಸಬಲ್ಲಳು. ಈ ಹಿನ್ನಲೆಯಲ್ಲಿ ಕಡೆಯ ಸಾಲನ್ನು ಸ್ವಲ್ಪ ಬದಲಾವಣೆ ಮಾಡುವುದು ಸೂಕ್ತವೆನಿಸುತ್ತದೆ. ಸರಿಸಿ ಎಂದು ಮಾಡಿದಾಗ್ಯೂ ಏಕೋ ಒಂದು ವಿಧವಾದ ಅಸ್ಪಷ್ಟತೆ ಕಂಡು ಬರುತ್ತಿದೆ ಮತ್ತು ಇಲ್ಲಿ ಶಿವಶಕ್ತಿಗಿತ್ತ ಸ್ವಾತಂತ್ರ‍್ಯ ಪದದ ಬಳಕೆ ಅನಾವಶ್ಯಕ ಎನಿಸುತ್ತದೆ? ಅಥವಾ ತನ್ನ ಸ್ವತಂತ್ರ ಶಕ್ತಿಯಿಂದ ಮಾಯೆಯಾಗಿರುವ ದೇವಿಯು ಮತ್ತೆ ತಾನೇ ಮಾಯೆಯ ಮುಸುಗನ್ನು ಸರಿಸಿ ಆತ್ಮಸಾಕ್ಷಾತ್ಕಾರ ಮಾಡಿಸುತ್ತಾಳೆ ಎನ್ನುವುದು ಬಹುಶಃ ನಿಮ್ಮ ಇಂಗಿತವಾಗಿರಬಹುದು. ಇದರಂತೆ ಮಾರ್ಪಡಿಸಿದರೂ ಸಹ ಕಡೆಯ ಸಾಲು ಅರ್ಥಗರ್ಭಿತವಾಗಿರುತ್ತದೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ಎರಡಕೂ ಪಂಕ್ತಿಯ ಕಡೆ ಸಾಲನ್ನು ಬದಲಿಸಿದ್ದೇನೆ. ಈಗ ಸೂಕ್ತ ಕಾಣುವುದೆ ನೋಡೋಣ :-)

೩೩೮. ವೇದ-ಜನನೀ
ಶಬ್ದಬ್ರಹ್ಮಮುಖೇನ ಉದ್ಭವ ವೇದ, ಕಾರಣೀಭೂತಳು ವೇದ ಜನನೀ
ಸ್ವಚ್ಛ ಮಂತ್ರೋಚ್ಛಾರಸ್ವರ ವಾಂಛಿತ ಫಲಿತಕೆ ಮೌಖಿಕದೆ ಅವತರಣಿ
ಪುರಾತನ ಋಷಿಮುನಿಗಳರಿತು ಸಂತತಿಯಿಂಸಂತತಿ ಜ್ಞಾನಪ್ರಸಾರ
ಉಪನಿಷತ್ಸೂಕ್ತ ಶಾಸ್ತ್ರ ಪುರಾಣ ಸಾಧನ, ಬ್ರಹ್ಮವತೋರೊ ಸಹಚರ!

೩೩೯. ವಿಷ್ಣು-ಮಾಯಾ
ಸಾತ್ವಿಕ ರಾಜಸಿಕ ತಾಮಸಿಕ ತ್ರಿಗುಣ ಸಂಕೀರ್ಣವಾಗಿಹ ಮಾಯೆ
ಸೃಷ್ಟಿಯನಾವರಣದಿ ಶರಣಾಗತನಷ್ಟೆ ಅಧಿಗಮಿಸಿ ಮುಕ್ತನಾಗಿಹೆ
ಸ್ಥಿತಿಕಾರಕ ಪರಬ್ರಹ್ಮ ಸ್ಥಿತಿ ವಿಷ್ಣುಮಾಯಾ ಸರ್ವಾಂತರ್ಯಾಮಿನಿ
ತಾನೆ ಮಾಯೆ, ಬಿಡಿಸಿ ತನ್ನಾ ಮಾಯೆ ಆತ್ಮಸಾಕ್ಷಾತ್ಕಾರದಾಯಿನಿ!

ಎರಡೂ ಕವನಗಳು ಈಗ ಹೆಚ್ಚು ಸೂಕ್ತವಾಗಿವೆ, ನಾಗೇಶರೆ. ಇವೆರಡನ್ನೂ ಅಂತಿಮಗೊಳಿಸಿ.

ಶ್ರೀಧರರೆ , ಈ ಕಂತನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಿದ್ದೇನೆ