ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
ಪೀಠಿಕೆ: ಇಂದು ನಾಗರ ಪಂಚಮಿಯ ದಿನ. ಅಂತೆಯೆ ಇದು ಗರುಡ ಪಂಚಮಿಯೂ ಹೌದು. ಈ ನಾಗ ಗರುಡರ ರೋಚಕ ಕಥನ ಸಾಮಾಗ್ರಿ, ನಮ್ಮ ಪುರಾಣ, ಪುರಾತನ ಕಥಾನಕದಲ್ಲಿ ಹೇರಳವಾಗಿವೆಯಾದರೂ, ವಿನತೆ ಕದ್ರುಗಳ ಮೂಲ ಕಥೆಯಿಂದಾರಂಭಿಸಿ ಸಮಗ್ರ ಕಥಾನಕವನ್ನು ಒಂದು ಕಾವ್ಯರೂಪಕವಾಗಿ ಮಾಡಬೇಕೆಂದು ಪ್ರಯತಿನಿಸಿದ್ದರ ಫಲವೆ ಈ ಸರಳಗನ್ನಡ ನೀಳ್ಗಾವ್ಯ. ಬರೆದು ತುಸು ದಿನಗಳಾಗಿದ್ದರೂ ಪ್ರಕಟಿಸಿರಲಿಲ್ಲ. ಈ ದಿನದ ನಾಗರ ಗರುಡ ಪಂಚಮಿಯ ಸಂಧರ್ಭ ಸೂಕ್ತ ದಿನ ಸಮಯ ಬಂದಿದೆಯಾಗಿ - ಇದೊ ತಮಗಿಲ್ಲಿ ಗರುಡ-ನಾಗ ಕಾವ್ಯ ಸಮಯ. ಉದ್ದನೆಯ ಕಾವ್ಯವಾದರೂ ಸಂಪೂರ್ಣ ಕಥಾನಕದ ದೃಷ್ಟಿಯಿಂದ ಕ್ಷಮಾರ್ಹವೆಂಬ ಅನಿಸಿಕೆಯಲ್ಲಿ ಹಾಕುತ್ತಿದ್ದೇನೆ. ನಾನು ಬಾಲ್ಯದಿಂದ ಕೇಳಿದ್ದ, ಓದಿದ್ದರ ಸಂಕಲಿತ ರೂಪದಲ್ಲಿ ಈ ಕಾವ್ಯ ಬಂದಿರುವ ಕಾರಣ, ಗ್ರಹಿಕೆಯಲ್ಲಿ ತಪ್ಪು, ದೋಷಗಳೇನಾದರೂ ಕಾಣಿಸಿದ್ದರೆ ದಯವಿಟ್ಟು ಮನ್ನಿಸಿ :-)
ಸಾಧಾರಣ ಬ್ಲಾಗಿನ್ಹೆಸರಲಿ ಗದ್ಯವನೆ ಬರೆಯುತಿದ್ದವನಿಗೆ, ಇಂದೊಂದು ಪದ್ಯದ ರೂಪದಲಿ ಬರೆವ ಪ್ರೆರೇಪಣೆ ಏಕಾಯ್ತೊ ನಾಕಾಣೆ. ಕದ್ರು, ವಿನತೆ, ಗರುಡ ನಾಗಗಳ ವಸ್ತುವೇಕೆ ಮನಸಿಗೆ ಬಂತೊ ಎಂಬುದನೂ ಅರಿಯೆ. ಆದರೆ, ಬಂದ ಲಹರಿಯನು ಬಿಡದೆ ಹಾಗೆ ಹರಿಯಬಿಟ್ಟಿದ್ದರ ಪರಿಣಾಮ - ಈ ಮುವ್ವತ್ತು ಪಂಕ್ತಿಗಳ ಪದ್ಯ ಕಥನ. ಪೂರ್ಣ ಕಥೆಯ ಮುಖ್ಯಾಂಶಗಳಾವೂ ಕಾವ್ಯಸಂಭ್ರಮದಲ್ಲಿ ಕಳುವಾಗದಿರಲೆಂದು, ಸಾಕಷ್ಟು ಗಮನ ಕೇಂದ್ರೀಕರಿಸಿ ಒಟ್ಟಾರೆ ಕಥನದ ಮೂಲ ಲಯ , ಆಶಯಕ್ಕೆ ಧಕ್ಕೆ ಬಾರದ ಹಾಗೆ ಹಿಡಿದಿಡಲು ಯತ್ನಿಸಿದ್ದೇನೆ; ಆ ಯತ್ನ ಕಿಂಚಿತ್ತಾದರೂ ಸಫಲವಾಗಿದ್ದರೆ, ಈ ಕಿರು ಪ್ರಯತ್ನ ಸಾರ್ಥಕ.
ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
________________________
(ಕದ್ರು ವಿನತೆಯರ ಪಂಥ)
ಕಶ್ಯಪ ಬ್ರಹ್ಮನಿಗಷ್ಟೊಂದು ಪತ್ನಿಯರು
ಹದಿಮೂರರಲಿಬ್ಬರಾ ವಿನತೇ ಕದ್ರು
ಸಂತಾನವನ್ಹಡೆಯಲವರಾಕಾಂಕ್ಷಿತರೆ
ಬೇಡಿರಲೆ ಪತಿಗೆ ವರ ಕೊಡೋ ದೊರೆ! (01)
ಕಶ್ಯಪ ಪ್ರಸನ್ನ ಚಿತ್ತ ಮುದ್ದಿನ್ಹೆಂಡಿರತ್ತ
ನಸುನಗೆ ಕೇಳಿತ್ತ ವರವೇನು ಬೇಕಿತ್ತ
ಕದ್ರುವೆಂದಳು ಸಹಸ್ರ ನಾಗರಹುತ್ತ
ವಿನತೆಗೆರಡಂತೆ ಮೀರಿಸೆ ಸಂಯುಕ್ತ! (02)
ತಥಾಸ್ತುವೆಂದನಾ ಋಷಿವರ ಭರದಿ
ಕದ್ರುವ್ಹಡೆದಿಟ್ಟಳಾ ಮೊಟ್ಟೆ ಸಾವಿರದಿ
ವಿನತೆಗೆರಡು ಕಲಸಿಟ್ಟ ಘೃತಭಾಂಡ
ಕಾಯ್ದಿಟ್ಟ ತೀರ್ಪಿಗೆ ಕಾದಾಡಿದವಂಡ! (03)
ನಾಗಸರ್ಪಗಳಾಗ ನಳನಳಿಸಿ ಹುಟ್ಟೆ
ಸಾವಿರ ಮೊಟ್ಟೆಗಳೊಡೆದ ಒಳಗುಟ್ಟೆ
ಹಿರಿಯವನಾದಿಶೇಷ ಹರಿಗ್ಹಾಸಿ ತಲ್ಪ
ವಾಸುಕಿಯೇ ಸಮುದ್ರಮಥನ ಸರ್ಪ! (04)
ಮೂರನೆಯವ ತಕ್ಷಕ ನಾಗಗಳ ನಾಗ
ಹೀಗೆ ಸಾವಿರ ನಾಗ ಜನಿಸಿದವೆ ಬೇಗ
ವಿನತೆಗೆ ಆತಂಕ ಬಿಚ್ಚದೇಕೋ ಮೊಟ್ಟೆ
ಕಾಯದೆ ಒಡೆದಳೆ ಹೆಳವನ್ಹೆತ್ತ ಹೊಟ್ಟೆ! (05)
ರೋಧಿಸಿದ ಶಿಶು ನೀ ಕಾಲೇಕಮ್ಮ ಕಿತ್ತೆ
ಸಹನೆಯಿಂದಿರದೇ ಹೆಳವನ ಮಾಡಿಟ್ಟೆ
ಈ ಪಾಪಕನುಭವಿಸು ದಾಸಿಯ ಪಾಡೆ
ವಿಮೋಚನೆ ಅಣುಗದಮ್ಮನೆ ಕಾಪಾಡೆ! (06)
ಶಪಿಸಿದೀ ಮಗನೆ ಅರುಣನಾಗ್ಹೊರಟನೆ
ಸೂರ್ಯರಥದಾ ಸಾರಥಿಯಾಗುರಿದನೆ
ಕಾದಳೆ ಜತನದಲಿ ಕಿರಿಮಗನಾ ಅಂಡ
ತಾಳ್ಮೆಫಲಸಿಹಿ ಹುಟ್ಟೆ ಗರುಡ ಪ್ರಚಂಡ! (07)
ಅಂಥಹ ಸಮಯದಲೆ ಸಮುದ್ರಮಥನ
ಹುಟ್ಟಿತೇ ಅಮೃತ ಕಲ್ಪವೃಕ್ಷ ಕಾಮಧೇನ
ಉಚ್ಚೈಶ್ರವಸ್ಸೆಂಬ ಶ್ರೇಷ್ಟಾತಿಶ್ರೇಷ್ಟಶ್ವೇತಾಶ್ವ
ಹಾಲಾಹಲದೊಡನೆಯೆ ಜನಿಸೀ ಸರ್ವಸ್ವ! (08)
ಶ್ವೇತಾಶ್ವ ಆಕಾಶಗಮನದಲಿ ಮನೋಹರಿ
ಬೆಕ್ಕಸ ಬೆರಗಾಗಿ ನೋಡುವರೆಲ್ಲರ ಲಹರಿ
ಸಖೇದಾಶ್ಚರ್ಯ ಅತಿಶಯಾ ಸೌಂದರ್ಯಾ
ಮುಟ್ಟಿ ನೋಡಲೆ ಬಹಳ ಭಾಗ್ಯವೇ ವಿರಳ! (09)
ಸತಿ ಸವತಿಯರಿಬ್ಬರು ಬಾಯ್ಬಿಟ್ಟ ನೋಟ
ರೂಪ ಲಾವಣ್ಯ ಒನಪೊಯ್ಯಾರ ಮುಕುಟ
ಹಾರಿಹೋಗೆ ಕದ್ರು ಬಾಲವಿದೆಯೆನೆ ಕಪ್ಪು
ವಿನತೆಯೆಂದಳು ತಪ್ಪು ಎಲ್ಲವು ಬಿಳುಪು! (10)
ಮೋಜಿನಲ್ಹೆಂಗಳೆಯರಾಡುತ ಪಂಥದಾಟ
ವಾಗ್ವಾದಕಿಳಿದರೆ ವಾಗ್ಯುದ್ದವಾಯ್ತೆ ಖಚಿತ
ಆಗಸದಲ್ಹಾರಿಹೋದ ದೇವಾಶ್ವ ಅಪರಿಚಿತ
ಸೋಲಿಸಿ ದಾಸಿಯೆನಿಸೆ ಗುದ್ದಾಟದಿ ನಿರತ! (11)
ನಿಶ್ಚಯಿಸಿ ಮೇಯಲೆ ಬಯಲಿಗಿಳಿದ ಗಳಿಗೆ
ಪರೀಕ್ಷಿಸಿದ್ದೇ ಸರಿಯೆಂದಾ ವನಿತಾ ಮಳಿಗೆ
ಕದ್ರುವೆಂದಳು ಸುತರೆ ಸುತ್ತಿಬಿಡಿ ಬಾಲಾಶ್ವ
ಕಪ್ಪಿಟ್ಟರೆ ಬಾಲ ದಾಸಿ ಗರುಡಜತೆ ಸಾಂಗತ್ಯ! (12)
ತಳಮಳಿಸಿದವು ಮೋಸ ವಂಚನೆ ಕೇಡಿಗೆ
ಬೇಡಮ್ಮ ಗೆಲುವು ನೀತಿ ನಿಯಮಾ ಕಡೆಗೆ
ಸಿಟ್ಟುರಿದು ಕದ್ರು ಶಪಿಸೆ ಮಾತೃ ದ್ರೋಹಕೆ
ಬಲಿಯಾಗೆಂದಳೆ ಜನಮೇಜಯನ ಯಜ್ಞಕೆ! (13)
ನಡುಗಿ ಥರಥರ ಕೆಳ ಮಡುಗಿದಾ ನಾಗಶಿರ
ಕ್ಷಮಿಸು ಮಾತಾ ನಿನ್ನಾಣತಿಯನೇ ಹೊತ್ತಿರ
ಬೆಳಗಲಿ ಬಯಲಲ್ಹತ್ತಿ ಸುತ್ತುವವನಾ ಬಾಲ
ಕಾಲ ಮಿಂಚುವ ಮುನ್ನ ತೋರಿಬಿಡೆ ತೊಗಲ! (14)
ಗರ್ವದಲಿ ಕದ್ರು ಕರೆದೊಯ್ದಳೆ ವಿನತೆ ಜತೆ
ಏನದ್ಭುತದಚ್ಚರಿ ಚಂದ್ರಮನಲು ಕರಿಯಚುಕ್ಕೆ
ಗೋಳಾಡಿದಳೆ ಸೋದರಿ ದಕ್ಷಬ್ರಹ್ಮನ ಕುವರಿ
ದಾಸಿಯಾಗೊ ಗತಿ ದೌರ್ಭಾಗ್ಯಕೆ ತನು ಬೆವರಿ! (15)
ಬಸವನ್ಹಿಂದೆ ಬಾಲ ತಾಯಿ ಸೆರಗಲಿ ಗರುಡ
ದಾಸಿಯಾದವಳ ಜತೆ ದಾಸ್ಯದಿ ನರಳಿ ಬಿಡ
ಬೆಳೆದಂತೆ ಬಾಲಕನಿಗೆ ಏರಿತೇರಿತೇ ದುಗುಡ
ಕದ್ರುವನೆ ಕೇಳಿದ ಬಿಡುಗಡೆ ದಾರಿ ಹೇಳಿಬಿಡ! (16)
ವರ್ಷಗಟ್ಟಲೆ ದಾಸ್ಯ ಹೇಗೂ ಕಳೆದಾಯ್ತು ಸಹ್ಯ
ವೀರತ್ವಕೆ ಗರುಡಗೆ ಸಮನಿಲ್ಲ ಬಲನಾಗ ಅವಶ್ಯ
ತಂದುಕೊಡೊ ಸುರಲೋಕದಾ ಅಮೃತ ಭಾಂಡ
ನಿನ್ನಮ್ಮಗೆ ಮುಕ್ತಿ ದಾಸ್ಯದ ಸಂಕೋಲೆ ನೋಡಾ! (17)
ದಾರಿ ಕಾಣೇ ಗರುಡ ಉಕ್ಕಿದಾ ಹರ್ಷದ ಕೊಡ
ವಚನವಿತ್ತನಮ್ಮಗೆ ತಂದಿಡುವೆ ಅಮೃತಭಾಂಡ
ಕೊಡಿಸಿಬಿಡುವೆನೆ ಮುಕ್ತಿ ದಾಸ್ಯದಿಂದಾ ವಿಮುಕ್ತಿ
ನೀ ಕಾಲ ಕಾಲಕು ಪಟ್ಟ ಕಷ್ಟಕೆ ಕೊನೆಗೂ ಶಾಸ್ತಿ! (18)
ಹಾರಿದನೆ ಗರುಡ ದೇವಲೋಕ ತತ್ತರಿಸಿ ಗಾಢ
ಯುವಕನ ಶಕ್ತಿ ಸಾಮರ್ಥ್ಯಕೆ ಸಮವಿರದೆ ಕಾಡ
ಎದ್ಧು ಬಿದ್ದೋಡಿದರು ಕಾದಿದವರು ಸೋತಕುರು
ಇಂದ್ರನ್ವೊಜ್ರಾಯುಧಕೆ ದಿಗಿಲು ಕಾಯುವರಾರು! (19)
ಓಡಿದನಾ ಇಂದ್ರ ಶರಣು ಬೀಳುತೆ ಹರಿಚರಣಕೆ
ಕಾಪಾಡಯ್ಯಾ ಅಜನೆ ಸಂಚಕಾರಾ ಮತ್ತಮೃತಕೆ
ಧೂಳಿಪಟ ಮಾಡಿ ಸ್ವರ್ಗವೆ ಸವರಿಬಿಟ್ಟನೆ ಗರುಡ
ಕಂಡವರ ಪಾಲಾದರೆ ಅಮೃತ ನಂಬಾಳೆ ಬರಡ! (20)
ಹರಿ ಚಿಂತನೆ ಚಣ ದುಡುಕೆ ಅಕಾಲ ಮಹೇಂದ್ರ
ಸಂಭಾಳಿಸುವೆ ನಾನವನನ್ನು ನಿರಾಳದೆ ಚದುರ
ಅಮೃತವೆಂದು ದೇವಗಣಗಳಿಗಿತ್ತ ವರದಸೊತ್ತು
ಹೇಗಾದರು ಗರುಡನೊಲಿಸೆ ನಯದೆ ಸ್ತುತಿಸಿತ್ತು! (21)
ವಿಷ್ಣುವಿನ ಮುಖಸ್ತುತಿಗೆ ನಾಚಿ ನೀರಾದ ಗರುಡ
ತನ್ನ ವಾಹನವಾಗೆಂದ ಹರಿಗೆ ಕಾಲಿಗೆರಗಿದ್ದೆ ತಡ
ವರವಿತ್ತು ಕರುಣಿಸುತ ಶ್ರೀಮನ್ನಾರಾಯಣ ನೀತಿ
ನಾಗರ ಪಾಲಾಗದಂತೆ ಅಮೃತ ಕಾಪಾಡಲಣತಿ! (22)
ಮಾತಿತ್ತಿರುವೆ ಮಾತೆಗೆ ಮಾಡಲೇನ ದಾಸ್ಯದತಿ
ಕೊಟ್ಟ ಮಾತಿಗೆ ಕೊಂಡೊಯ್ಯಲೆ ಬೇಕಯ್ಯ ನೀತಿ
ವಚನ ಭ್ರಷ್ಟನಾದರೆ ಮಾತೆಯ ನಿಟ್ಟುಸಿರೆ ಶಾಪ
ಕ್ಷಮಿಸಿಬಿಡು ಹರಿ, ಇಂದ್ರಯ್ಯ ನಾನಸಹಾಯಕ! (23)
ತಟ್ಟನ್ಹೊಳೆಯಿತುಪಾಯ ದೇವರಾಜ ಯೋಜನೆ
ಕೊಂಡೊಯ್ಯಲೀ ಗರುಡ ಅಮೃತ ಪಾತ್ರೆ ಜತನೆ
ಬಿಡಿಸಲಿ ದಾಸ್ಯವ ಮಾತೆಗೆ ಎಚ್ಚರವಿರಲಿ ಮತ್ತೆ
ಮತ್ತೆ ತಂದಿಟ್ಟಿಡಲಿ ಹನಿಯೊಂದು ಸೋರದಂತೆ! (24)
ಗರುಡನೊಪ್ಪಿ ಹಾರಿ ಅಮೃತದ ಜತೆ ಊರದಾರಿ
ಕೊಡವನಿತ್ತ ಕದ್ರುವಿನ ಮಕ್ಕಳಿಗೆ ಸಿಕ್ಕ ರಹದಾರಿ
ಮಾತಂತೆ ತಾಯನು ಮುಕ್ತಿಗೊಳಿಸಿದಳಾ ನಾಗಿಣಿ
ಸ್ವಾತ್ಯಂತ್ರದಾ ಹಸಿರು ಗಾಳಿ ವಿನತೆಗೆ ಅಸ್ವಾದಿನಿ! (25)
ಧರ್ಭೆಯ ಹುಲ್ಹಾಸಿನ ಮೇಲಿಟ್ಟ ಅಮೃತ ಭಾಂಡ
ಮಡಿ ಶುಚಿರ್ಭೂತರಾಗಿ ಬಂದು ಸೇವಿಸೊ ಕಾಂಡ
ಎಂದಟ್ಟಿದ ನಾಗರನೆಲ್ಲಾ ಸರಸರ ನದಿ ನೀರಿನತ್ತ
ಹಿಂಬರುವ ಮುನ್ನವೆ ಮಂಗಮಾಯ ಬರಿ ಹುಲ್ಲಿತ್ತ! (26)
ಒಂದು ಹನಿಯೂ ಚೆಲ್ಲದೆ ಸೇರಿತೆ ದೇವಲೋಕಕೆ
ಕಾದಿತ್ತೆ ನಿರಾಶೆ ನಾಗರ ಕಾತರಾತರ ಸಂತತಿಗೆ
ಆತುರದಲಿ ನೆಕ್ಕೆ ಧರ್ಭೆಗೆ ಚೆಲ್ಲಿದ್ದರೆಂಬ ದುರಾಸೆ
ತೀಕ್ಷತೆ ಕುಯ್ದಿತೆ ನಾಗನಾಲಿಗೆಗೆರಡಾಗಿ ಕತ್ತರಿಸೆ! (27)
ಅಂದಿನಿಂದಾಯ್ತು ಎರಡು ನಾಲಿಗೆಯ ನಾಗರ
ಲಭ್ಯವಿಲ್ಲದಾ ಪ್ರಾಪ್ತಿ ಸಿಕ್ಕೂ ಕೈಜಾರೋ ಪ್ರವರ
ಭಗವಂತನ ಪಾದ ಸೇವೆಯ ಭಾಗ್ಯದಲಿ ಗರುಡ
ಹೊತ್ತು ಹರಿಯನ್ಹಾರಿದ್ದೇ ಹಾರಿದ್ದು ತಾನೆಡಬಿಡ! (28)
ತಾಯ ಶಾಪ ಫಲಿಸಿತೆ ಬಿಡದೆ ಸರ್ಪಯಾಗದಿ
ಹಾವುಗಳೆಲ್ಲಾ ಆಹುತಿಯಾಗೆ ಯಜ್ಞ ಕುಂಡದಿ
ಮಾತೃಪ್ರೇಮವುರುಳಾಗಿ ಕಾಡಿದ ವಿಪರ್ಯಾಸ
ಆ ಮಕ್ಕಳಿಗಾಗಿ ತಾನೆ ಕದ್ರೂ ಪಟ್ಟ ವನವಾಸ! (29)
ನಿಜ ಸತ್ವಕೆ ಗೆಲುವೆಂದು ಸಾರಿ ಗರುಡಾಭರಣ
ವಿನತೆಯಾದರ್ಶದ ರೂಪದಿ ಗುರಿಸೇರಿದ ಚಣ
ನಮ್ಮೊಳಗಿನಾ ಕದ್ರು ನಾಗರಗಳ ವಿಶ್ವರೂಪಕೆ
ಕಟ್ಟು ಹಾಕೆ ಕ್ಷೇಮವೆ ಸೀಳದ ನಾಲಿಗೆ ಬಯಕೆ! (30)
ಧನ್ಯವಾದಗಳೊಂದಿಗೆ,
-ನಾಗೇಶ ಮೈಸೂರು
Comments
ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
In reply to ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....! by makara
ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
In reply to ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....! by nageshamysore
ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
In reply to ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....! by makara
ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
In reply to ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....! by nageshamysore
ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
In reply to ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....! by hamsanandi
ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
In reply to ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....! by H A Patil
ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!
In reply to ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....! by partha1059
ಉ: ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ....!