ಪ್ರಶ್ನೆಗಳು ಎಂದಿಗೂ ಪ್ರಶ್ನೆಗಳೆ
ಪ್ರಶ್ನೆಗಳು ಎಂದಿಗೂ ಪ್ರಶ್ನೆಗಳೆ
ಪುಟ್ಟ ಮಗುವೊಂದು ಅಮ್ಮನ
ಮಡಿಲಲ್ಲಿ ಕುಳಿತು ಕೇಳುವ ಪ್ರಶ್ನೆ
ಜೊತೆ ಜೊತೆಗೆ ಅದಮ್ಯ ಕುತೂಹಲ
ಅರಿಯಲಾರದ ಕೌತುಕ
ಶಾಲೆ ಸೇರಿ ಗೆಳೆಯರ ಕೂಡಿ
ಮೆಚ್ಚುವ ಗುರುಗಳನ್ನು ಕೇಳುವ ಪ್ರಶ್ನೆ
ಅರ್ಥವಾಗದ ಅನುಮಾನ
ಅದೆಂತದೊ ಅರಿಯುವ ಛಲ
ಅರಿತು ಬೆಳೆದು ಮನದಿ ಮಥಿಸಿ
ಚಿಂತಿಸಿ ತನ್ನೊಳಗೆ ಹುಟ್ಟುವ ಪ್ರಶ್ನೆ ನೂರು
ಹುಡುಕಿ ಅರಿಯುವ ಸಾದಕನ ತಪ
ತನ್ನೊಳಗೆ ತಾನು ಬೆಳೆಯುವ ಜಪ
ಅರಿತು ಬೆಳೆದು ನಂತರವು
ಅನ್ಯರ ನೋಡಿ ಪ್ರಶ್ನಿಸುವ ಚಪಲ
ಪರರ ಅಳೆದು ಆಳ ಅಳೆಯುವ
ಅನ್ಯರ ಕೆದಕುವ ಮನಸಿನ ಕುತೂಹಲ
ವಾದಕ್ಕೆ ಕರೆದು ನೂರು ಪ್ರಶ್ನೆಗಳೆಸೆದು
ಸೋಲು ನೋಡುವ ತವಕ
ತಾನು ಬೆಳೆದು ಸುತ್ತ ಬೆಳೆಯುವ
ಸಸಿಗಳ ತುಳಿದು ಧಮನ ಮಾಡುವ
ಹೆಮ್ಮರದ ವಿಕೃತಿಯ ಕಾಯಕ
ಕಲಿಕೆಯೊ ಕೌತುಕವೊ
ತಪವೊ ಜಪವೊ
ಚಪಲವೊ ವಾದವೊ
ಧಮನ ಮಾಡುವ ವಿಕೃತಿಯೊ
ಭಾವ ಏನಾದರೇನು
ಪ್ರಶ್ನೆ ಎಂದಿಗೂ ಪ್ರಶ್ನೆಯೆ !
Rating
Comments
ಉ: ಪ್ರಶ್ನೆಗಳು ಎಂದಿಗೂ ಪ್ರಶ್ನೆಗಳೆ
ಕವನದ ಕಡೆಯ ಸಾಲನ್ನು "ಪ್ರಶ್ನೆಗಳು ಎಂದಿಗೂ ಪ್ರಶ್ನೆಗಳೆ" ಎಂದು ಓದಿಕೊಳ್ಳಿ
ಉ: ಪ್ರಶ್ನೆಗಳು ಎಂದಿಗೂ ಪ್ರಶ್ನೆಗಳೆ
ದೇವರನ್ನು ಸಂಬೋಧಿಸುವ ಹಲವಾರು ಹೆಸರುಗಳಲ್ಲಿ ಒಂದು ಹೆಸರು - ಸಂಪ್ರಶ್ನ!
ಉ: ಪ್ರಶ್ನೆಗಳು ಎಂದಿಗೂ ಪ್ರಶ್ನೆಗಳೆ
ಪ್ರಶ್ನೋತ್ತರ
____________
ಪ್ರಶ್ನೆಗಳೆ ಸರದಾರ
ಉತ್ತರಗಳ ಅಪಾರ
ಕೇಳುವವರವತಾರ
ಈ ಲೋಕ ವ್ಯಾಪಾರ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು