ರೂಪಾಯಿ ಬೆಲೆ ಕುಸಿತ, ಯಾಕೆ?
ನಮ್ಮ ರೂಪಾಯಿ ಬೆಲೆ ಕುಸಿಯುತ್ತಿದೆ, ಗಮನಿಸಿದ್ದೀರಾ? ಕೇವಲ ಎರಡು ತಿಂಗಳ ಅವಧಿಯಲ್ಲಿ (೨೦೧೩ ಮೇ ಮೊದಲ ವಾರದಿಂದ ಜುಲಾಯಿ ಮೊದಲ ವಾರಕ್ಕೆ) ಶೇಕಡಾ ೧೫ರಷ್ಟು ಕುಸಿತ! ಒಂದು ಡಾಲರಿಗೆ ೫೩ ರೂಪಾಯಿ ಇದ್ದದ್ದು ೬೧ ರೂಪಾಯಿಗೆ ಕುಸಿದಿದೆ. ಕಳೆದ ಎರಡು ದಶಕಗಳಲ್ಲಿ ಇದು ಅಸಾಧಾರಣ ಇಳಿಕೆ.
ರೂಪಾಯಿ ಬೆಲೆ ಕುಸಿದರೆ ನಮಗೇನಂತೆ? ಎಂದು ನಾವು ಸುಮ್ಮನಿರುವಂತಿಲ್ಲ. ಯಾಕೆಂದರೆ, ಈ ಕುಸಿತ ನಮ್ಮೆಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗೆ ಕಾರಣ. ಜೊತೆಗೆ, ಕೆಲವರಿಗೆ ಇದರಿಂದ ಲಾಭ!
೨೦೧೨ರ ವರುಷವಿಡೀ ರೂಪಾಯಿಯ ಬೆಲೆ ಒಂದು ಡಾಲರಿಗೆ ೫೨ರಿಂದ ೫೪ರ ಹಂತದಲ್ಲೇ ಸುಳಿದಾಡುತ್ತಿತ್ತು. ಇದರಿಂದಾಗಿ ವಿದೇಶಿ ವಿನಿಮಯ ವ್ಯವಹಾರದಲ್ಲಿ ತೊಡಗಿದ ಹಲವರಲ್ಲಿ ರೂಪಾಯಿ ಬೆಲೆ ಸುಭದ್ರ ಎಂಬ ಭಾವನೆ ಮೂಡಿತ್ತು. ಆದರೆ, ಆರ್ಥಿಕ ತಜ್ನರು ಎಚ್ಚರಿಸುತ್ತಲೇ ಇದ್ದರು - ರೂಪಾಯಿ ಕುಸಿತ ಕಾದಿದೆ ಎಂದು.
ಅದೀಗ ನಿಜವಾಗಿದೆ. ಯಾಕೆ? ಒಂದು ವಸ್ತುವಿನ ಬೆಲೆಯನ್ನು ನಿರ್ಧರಿಸುವುದು ಅದರ ಬೇಡಿಕೆ ಮತ್ತು ಪೂರೈಕೆ. ಡಾಲರಿನಂತಹ ವಿದೇಶಿ ಹಣಕಾಸಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗಲು ಪ್ರಧಾನ ಕಾರಣ ನಮ್ಮ ದೇಶದ ಆಮದು (ಅಂದರೆ ಆಮದು ಮಾಡಿದ ವಸ್ತುಗಳ ಬೆಲೆಯ ಪಾವತಿಗಾಗಿ). ಹಾಗೆಯೇ, ನಮ್ಮ ರೂಪಾಯಿಗೆ ಬೇಡಿಕೆ ಹೆಚ್ಚಾಗಲು ಕಾರಣ ವಿದೇಶಗಳಿಂದ ಭಾರತೀಯ ವಸ್ತುಗಳ ಖರೀದಿ (ಅಂದರೆ ಭಾರತದಿಂದ ರಫ್ತು). ಹಾಗಿದ್ದರೆ ನಮ್ಮ ದೇಶದ ಸಮಸ್ಯೆ ಏನು? ಪ್ರತಿ ವರುಷವೂ ನಮ್ಮ ದೇಶ ರಫ್ತು ಮಾಡುವ ವಸ್ತುಗಳ ಬೆಲೆಗಿಂತ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಜಾಸ್ತಿ. ಈ ಅಂತರವೇ (ಅಂದರೆ ವಾಣಿಜ್ಯ ಕೊರತೆ) ನಮ್ಮ ವಿದೇಶಿ ವಿನಿಮಯದ ಸಮಸ್ಯೆಗೆ ಮೂಲ ಕಾರಣ.
ಈ ಆರ್ಥಿಕ ವರುಷದ ಎಪ್ರಿಲ್ - ಮೇ ತಿಂಗಳುಗಳಲ್ಲಿ ನಮ್ಮ ವಾಣಿಜ್ಯ ಕೊರತೆ ೩೮ ಬಿಲಿಯನ್ ಡಾಲರ್! ಇಡೀ ಆರ್ಥಿಕ ವರುಷದಲ್ಲಿ ಈ ವಾಣಿಜ್ಯ ಕೊರತೆ ೨೨೦ ಬಿಲಿಯನ್ ಡಾಲರ್ ಆಗಲಿದೆ! ಇಂತಹ ಅಗಾಧ ವಾಣಿಜ್ಯ ಕೊರತೆ ಕಡಿಮೆ ಮಾಡಲು ಮೂರು ಮೂಲಗಳಿವೆ. ಮೊದಲನೆಯದು ನಮ್ಮ ದೇಶದಿಂದ ಕಂಪ್ಯೂಟರ್ ತಂತ್ರಾಶಗಳ ರಫ್ತು. ಇದರಿಂದ ಪ್ರತಿ ವರುಷ ೭೫ ಬಿಲಿಯನ್ ಡಾಲರ್ ಆದಾಯ ಬರುತ್ತಿದೆ. ಎರಡನೆಯ ಮೂಲ, ಅನಿವಾಸಿ ಭಾರತೀಯರು ಭಾರತಕ್ಕೆ ರವಾನಿಸುವ ಹಣ (ಎನ್‍ಆರ್‍ಐ ರೆಮಿಟೆನ್ಸ್). ಇದು ೨೦೧೨ರಲ್ಲಿ ೭೦ ಬಿಲಿಯನ್ ಡಾಲರ್ ಆಗಿತ್ತು. ಮೂರನೆಯ ಮೂಲ, ವಿದೇಶಿ ಭಂಡವಾಳ. ಇದು ಮೂರು ದಾರಿಗಳಲ್ಲಿ ಭಾರತಕ್ಕೆ ಬರುತ್ತದೆ: (೧) ಭಾರತದಲ್ಲಿ ವ್ಯವಹಾರ ಆರಂಭಿಸುವ ವಿದೇಶಿ ಕಂಪೆನಿಗಳ ಮೂಲಕ ಭಾರತಕ್ಕೆ ಬರುವ ಬಂಡವಾಳ (ಫಾರಿನ್ ಡೈರೆಕ್ಟ್ ಇನ್‍ವೆಸ್ಟ್ ಮೆಂಟ್ ಅಥವಾ ಎಫ್‍ಡಿಐ) (೨) ಭಾರತೀಯ ಕಂಪೆನಿಗಳ ಷೇರು ಮತ್ತು ಬಾಂಡ್‍ಗಳನ್ನು ಖರೀದಿಸುವ ವಿದೇಶಿ ಹೂಡಿಕೆದಾರರ ಹೂಡಿಕೆ (ಫಾರಿನ್ ಇನ್‍ಸ್ಟಿಟ್ಯೂಷನಲ್ ಇನ್‍ವೆಸ್ಟ್ ಮೆಂಟ್ ಅಥವಾ ಎಫ್‍ಐಐ) (೩) ಭಾರತದ ಕಂಪೆನಿಗಳು ಅಥವಾ ಸರಕಾರ ವಿದೇಶಗಳಿಂದ ಪಡೆಯುವ ಸಾಲ.
ಇವುಗಳಲ್ಲಿ ಎಫ್‍ಡಿಐ ಹಣ ದೀರ್ಘಾವಧಿ ನಮ್ಮ ದೇಶದಲ್ಲಿ ಉಳಿಯುತ್ತದೆ. ಆದರೆ ಎಫ್‍ಐಐ ಯಾವುದೇ ಕ್ಷಣ ಭಾರತದಿಂದ ಹೊರಕ್ಕೆ ಹೋದೀತು. ಆದರೆ, ಈ ಬಗ್ಗೆ ಇತ್ತೀಚೆಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಯಾಕೆಂದರೆ, ೨೦೧೨ರಲ್ಲಿ ಈ ಮೂಲಕ ಭಾರತಕ್ಕೆ ಬಂದ ಹಣ ೩೧ ಬಿಲಿಯನ್ ಡಾಲರ್. ಈ ವರುಷವೂ ಮೇ ತಿಂಗಳ ಕೊನೆಯ ವರೆಗೆ ೧೯ ಬಿಲಿಯನ್ ಡಾಲರ್ ಹೂಡಿಕೆ ಭಾರತದ ಒಳಕ್ಕೆ ಹರಿದು ಬಂತು. ಆದರೆ, ಜೂನ್ ತಿಂಗಳಿನಲ್ಲಿ ಇದೆಲ್ಲ ತಿರುವುಮುರುವಾಯಿತು. ಆ ಒಂದೇ ತಿಂಗಳಿನಲ್ಲಿ ಏಳು ಬಿಲಿಯನ್ ಡಾಲರ್ ದೇಶದಿಂದ ಹೊರಕ್ಕೆ ಹೋಯಿತು. ಭಾರತದ ಕಂಪೆನೆಗಳ ಷೇರು ಮತ್ತು ಬಾಂಡ್‍ಗಳನ್ನು ಮಾರಿದ ವಿದೇಶಿ ಹೂಡಿಕೆದಾರರು, ಆ ಹಣವನ್ನು ಡಾಲರಿನಲ್ಲಿ ತಮ್ಮ ದೇಶಕ್ಕೆ ರವಾನಿಸುತ್ತಾರೆ. ಅದಕ್ಕಾಗಿ ಅವರು ಡಾಲರುಗಳನ್ನು ಖರೀದಿಸಬೇಕಾಯಿತು. ಡಾಲರ್ ಖರೀದಿಗೆ ಇಂತಹ ಅಧಿಕ ಬೇಡಿಕೆ ಅನಿರೀಕ್ಷಿತ. ಇದು, ನಮ್ಮ ದೇಶದ ಆಯಾತ-ನಿರ್ಯಾತದ ಅಂತರದ ಜೊತೆ ಸೇರಿಕೊಂಡಾಗ, ಡಾಲರಿನ ನೆಲೆಯಲ್ಲಿ ರೂಪಾಯಿಯ ಕುಸಿತ ಆರಂಭವಾಯಿತು.
ಇದೇನು ಹೊಸ ವಿದ್ಯಮಾನವಲ್ಲ. ಕಳೆದ ಶತಮಾನದಲ್ಲಿ ಅಧಿಕ ಆಯಾತ ಮಾಡಿಕೊಳ್ಳುವ ದೇಶಗಳು ಮತ್ತೆಮತ್ತೆ ಇಂತಹ ಸಂಕಟಕ್ಕೆ ಸಿಲುಕಿವೆ. ಇನ್ನು ಮುಂದೆಯೂ ಇಂತಹ ಕುಸಿತ ಆಗಿಯೇ ಆಗುತ್ತದೆ.
ಈಗ ನಮ್ಮ ಮುಂದಿರುವ ಪ್ರಶ್ನೆ: ನಮ್ಮ ದೇಶ ಆಮದು ಮತ್ತು ವಿದೇಶಿ ಭಂಡವಾಳವನ್ನು ಯಾಕೆ ಅವಲಂಬಿಸಿದೆ? ಇದಕ್ಕೆ ನೇರವಾದ ಉತ್ತರ: ಅಸಮರ್ಪಕ ಆರ್ಥಿಕ ನೀತಿ.
ನಾವು ದೇಶಕ್ಕೆ ಭಾರೀ ಪ್ರಮಾಣದಲ್ಲಿ ಆಮದು ಮಾಡುತ್ತಿರುವ ಮೂರು ವಸ್ತುಗಳ ಬಗ್ಗೆ ಪರಿಶೀಲಿಸಿದರೆ ಈ ಉತ್ತರ ಸ್ಪಷ್ಟವಾಗುತ್ತದೆ. ಅವು: ಕಚ್ಚಾತೈಲ, ಕಲ್ಲಿದ್ದಲು ಮತ್ತು ಚಿನ್ನ. ನಮ್ಮ ದೇಶ ಕಚ್ಚಾತೈಲದ ಆಮದಿಗಾಗಿ ಮಾಡುತ್ತಿರುವ ವೆಚ್ಚ ಅಗಾಧ. ಇದನ್ನು ಸರಿದೂಗಿಸಬೇಕಾದರೆ ಡೀಸಿಲಿನ ಮತ್ತು ಸೀಮೆ ಎಣ್ಣೆಯ ಬೆಲೆ ಹೆಚ್ಚಿಸಬೇಕು. ಆದರೆ ನಮ್ಮ ದೇಶದಲ್ಲಿ ರಿಯಾಯ್ತಿ ದರದಲ್ಲಿ ಅವುಗಳ ಮಾರಾಟ! ಕಲ್ಲಿದ್ದಲಿನ ಬಗ್ಗೆ ಹೇಳಬೇಕೆಂದರೆ, ಜಗತ್ತಿನ ಎರಡನೇ ಅತಿ ದೊಡ್ಡ ಕಲ್ಲಿದ್ದಲಿನ ಖಜಾನೆ ನಮ್ಮ ದೇಶದಲ್ಲಿದೆ. ಆದರೆ ನಾವು ಕಲ್ಲಿದ್ದಲನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡುತ್ತಿದ್ದೇವೆ! ಇದರಿಂದಾಗಿ, ಉಷ್ಣ ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ಆದರೆ, ವಿವಿಧ ರಾಜ್ಯಗಳ ವಿದ್ಯುತ್ ಮಂಡಲಿಗಳು ವಿದ್ಯುತ್ ಉತ್ಪಾದನಾ ವೆಚ್ಚವನ್ನೂ ಗ್ರಾಹಕರಿಂದ ವಸೂಲಿ ಮಾಡುತ್ತಿಲ್ಲ. ಬದಲಾಗಿ, ಅವು ಹತ್ತಾರು ವರುಷಗಳಿಂದ ನಷ್ಟದಲ್ಲಿ ಮುಳುಗಿವೆ. ಇನ್ನು ಚಿನ್ನದ ವಿಚಾರ ಎತ್ತದಿರುವುದೇ ಚೆನ್ನ. ಕೆಲವು ಮುಂದಾಳುಗಳು ಚಿನ್ನದಲ್ಲಿ ಹೂಡಿಕೆ ಅನುತ್ಪಾದಕ ಎನ್ನುತ್ತಿದ್ದಾರೆ. ಹಾಗಾದರೆ, ಜನಸಾಮಾನ್ಯರು ತಮ್ಮ ಉಳಿತಾಯದ ಮೌಲ್ಯ ಉಳಿಸಿಕೊಳ್ಳಲು ಏನು ಮಾಡಬೇಕು? ಷೇರುಪೇಟೆಯಲ್ಲಿ ಹಣ ಹೂಡಿದ ಲಕ್ಷಗಟ್ಟಲೆ ಜನರು ಕೈಸುಟ್ಟುಕೊಂಡಿದ್ದಾರೆ. ಬ್ಯಾಂಕುಗಳಲ್ಲಿ ಹೂಡಿದ ಠೇವಣಿ ಹಣದ ಮೌಲ್ಯ ವರುಷದಿಂದ ವರುಷಕ್ಕೆ ಕಡಿಮೆಯಾಗುತ್ತಿದೆ - ಹಣದುಬ್ಬರದ ಏರಿಕೆಯಿಂದಾಗಿ. ಆದ್ದರಿಂದ, ಹೂಡಿಕೆಗೆ ಜನಸಾಮಾನ್ಯರ ಆಯ್ಕೆ - ಚಿನ್ನ ಖರೀದಿ.
ನಮ್ಮ ದೇಶದ ಆಯಾತ-ನಿರ್ಯಾತದ ಅಂತರ ಕಡಿಮೆಯಾಗ ಬೇಕಾದರೆ, ಹತ್ತಾರು ತಿಂಗಳು ತಗಲೀತು. ಅಷ್ಟರಲ್ಲಿ ಡಾಲರಿನ ನೆಲೆಯಲ್ಲಿ ರೂಪಾಯಿ ಇನ್ನಷ್ಟು ಕುಸಿದೀತು. ಈ ಕುಸಿತ ತಡೆಯಲು ಸುಲಭದ ದಾರಿಗಳಿಲ್ಲ ಎಂಬುದಂತೂ ವಾಸ್ತವ.
ಚಿತ್ರ: ದಿನೇಶ್ ಸಿ
Comments
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
In reply to ಉ: ರೂಪಾಯಿ ಬೆಲೆ ಕುಸಿತ, ಯಾಕೆ? by partha1059
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
In reply to ಉ: ರೂಪಾಯಿ ಬೆಲೆ ಕುಸಿತ, ಯಾಕೆ? by ಗಣೇಶ
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
In reply to ಉ: ರೂಪಾಯಿ ಬೆಲೆ ಕುಸಿತ, ಯಾಕೆ? by ಗಣೇಶ
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
In reply to ಉ: ರೂಪಾಯಿ ಬೆಲೆ ಕುಸಿತ, ಯಾಕೆ? by ಗಣೇಶ
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
In reply to ಉ: ರೂಪಾಯಿ ಬೆಲೆ ಕುಸಿತ, ಯಾಕೆ? by Shreekar
ಉ: ರೂಪಾಯಿ ಬೆಲೆ ಕುಸಿತ, ಯಾಕೆ?
In reply to ಉ: ರೂಪಾಯಿ ಬೆಲೆ ಕುಸಿತ, ಯಾಕೆ? by Shreekar
ಉ: ರೂಪಾಯಿ ಬೆಲೆ ಕುಸಿತ, ಯಾಕೆ?