೯೫. ಲಲಿತಾ ಸಹಸ್ರನಾಮ ೩೫೨ರಿಂದ ೩೫೪ನೇ ನಾಮಗಳ ವಿವರಣೆ

೯೫. ಲಲಿತಾ ಸಹಸ್ರನಾಮ ೩೫೨ರಿಂದ ೩೫೪ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೫೨ - ೩೫೪

Vahni-maṇḍala-vāsinī वह्नि-मण्डल-वासिनी (352)

೩೫೨. ವಹ್ನಿ-ಮಂಡಲ-ವಾಸಿನೀ

          ದೇವಿಯು ಬೆಂಕಿಯ ಗೋಳದ ಮಧ್ಯದಲ್ಲಿ ವಾಸಿಸುತ್ತಾಳೆ. ವಹ್ನಿ ಎಂದರೆ ಅಗ್ನಿ ಅಥವಾ ಬೆಂಕಿ. ಬೆಂಕಿಯ ಗೋಳವು ಮೂಲಧಾರ ಚಕ್ರದಲ್ಲಿದೆ ಎಂದು  ಹೇಳಲಾಗುತ್ತದೆ ಮತ್ತು ಈ ಬೆಂಕಿಯ ಗೋಳವು ಆಕಾಶದಲ್ಲಿಯೂ ಇರುತ್ತದೆ. ಇದಾಗಲೇ ಮೂಲಾಧಾರಿಕ ನಿಲಯಾ ಎನ್ನುವ ೯೯ನೇ ನಾಮದಲ್ಲಿ ದೇವಿಯು ಮೂಲಾಧಾರ ಚಕ್ರದಲ್ಲಿ ನಿವಸಿಸುತ್ತಾಳೆ ಎಂದು ಹೇಳಲಾಗಿದೆ. ಇನ್ನೊಂದು ವಿಶ್ಲೇಷಣೆಯಂತೆ ದೇವಿಯು ಆಕಾಶದಲ್ಲಿ ನಿವಸಿಸುತ್ತಾಳೆ ಮತ್ತು ಆಕಾಶದೊಳಗೆ ಬೆಂಕಿಯೂ ಇರುತ್ತದೆ ಎನ್ನುವುದಾಗಿದೆ. ವಹ್ನಿ ಎಂದರೆ ಸಂಖ್ಯೆ ಮೂರು ಎನ್ನುವ ಅರ್ಥವೂ ಇದೆ. ಈ ಮೂರು ಎನ್ನುವ ಸಂಖ್ಯೆಯು ಚಂದ್ರ, ಸೂರ್ಯ ಮತ್ತು ಅಗ್ನಿಯನ್ನು ಪ್ರತಿಬಿಂಬಿಸುತ್ತದೆ ಮತ್ತವು ಬೆನ್ನು ಹುರಿಯ ಭಾಗದಲ್ಲಿ ಒಂದರ ಕೆಳಗೆ ಒಂದರಂತೆ ಇರುತ್ತವೆ. ಚಂದ್ರನು ಸಹಸ್ರಾರದಲ್ಲಿದ್ದರೆ, ಅನಾಹತ ಚಕ್ರದಲ್ಲಿ ಸೂರ್ಯ ಮತ್ತು ಮೂಲಾಧಾರ ಚಕ್ರದಲ್ಲಿ ಅಗ್ನಿಯಿರುತ್ತದೆ. ದೇವಿಯು ಈ ಎಲ್ಲಾ ಮೂರರ ರೂಪಗಳಲ್ಲಿರುತ್ತಾಳೆ. ಪಂಚದಶೀ ಮಂತ್ರವು ಮೂರು ಕೂಟಗಳನ್ನು ಒಳಗೊಂಡಿದ್ದು ಈ ನಾಮವು ದೇವಿಯು ಆ ಮಂತ್ರದಲ್ಲಿ ನಿವಸಿಸುತ್ತಾಳೆ ಎನ್ನುವುದೂ ಆಗಿರಬಹುದು. ಬಹುಶಃ ಈ ಕಾರಣದಿಂದಾಗಿ ಪಂಚದಶೀ ಮಂತ್ರವು ಪರಮ ಶ್ರೇಷ್ಠವಾದದ್ದೆಂದು ಪರಿಗಣಿತವಾಗಿದೆ.  

Bhaktimat-kalpa-latikā भक्तिमत्-कल्प-लतिका (353)

೩೫೩. ಭಕ್ತಿಮತ್-ಕಲ್ಪ-ಲತಿಕಾ

         ಕಲ್ಪ ಲತಿಕಾ ಎನ್ನುವುದು ದಿವ್ಯವಾದ ಬಳ್ಳಿಯಾಗಿದ್ದು ಕಲ್ಪವೃಕ್ಷದಂತೆ ಅದು ಬೇಡಿದ ವರಗಳನ್ನು ಕೊಡುತ್ತದೆ. ಅದೇ ವಿಧವಾಗಿ ದೇವಿಯು ತನ್ನ ಭಕ್ತರಿಗೆ ವರಗಳನ್ನು ದಯಪಾಲಿಸುತ್ತಾಳೆ. ಲತಿಕಾ ಎಂದರೆ ಎಲ್ಲೆಡೆ ವ್ಯಾಪಿಸು ಎಂದರ್ಥ. ಹಾಗಾಗಿ ದೇವಿಯು ಬಳ್ಳಿಯಂತೆ ಭೂಮಂಡದಲ್ಲೆಲ್ಲಾ ಹಬ್ಬಿಕೊಂಡು ತನ್ನ ಭಕ್ತರ ಬಯಕೆಗಳನ್ನು ಈಡೇರಿಸುತ್ತಾಳೆಂದು ಅರ್ಥೈಸಬಹುದು. ಕಲ್ಪ ಎಂದರೆ ಅಪರಿಪೂರ್ಣತೆ ಎನ್ನುವ ಅರ್ಥವೂ ಇದೆ. ಯಾರು ಆಕೆಯನ್ನು ಭಕ್ತಿಯಿಂದ ಪೂಜಿಸುತ್ತಾರೆಯೋ ಅವರುಗಳು ಹಲವಾರು ಜನ್ಮಗಳಲ್ಲಿ ಪರಿಪೂರ್ಣವಾದ ಭಕ್ತಿಯನ್ನು ಹೊಂದುವಂತೆ ಮಾಡಿ ದೇವಿಯು ಅವರಿಗೆ ಅಂತಿಮ ಮುಕ್ತಿಯನ್ನು ಕರುಣಿಸುತ್ತಾಳೆ. ಅಂತಿಮ ಮುಕ್ತಿಗೆ ಮತ್ತು ಸ್ವರ್ಗಕ್ಕೇರಿ ಹೊಂದುವ ಮೋಕ್ಷಕ್ಕೂ ವ್ಯತ್ಯಾಸವಿದೆ. ಅಂತಿಮ ಮುಕ್ತಿ ಎಂದರೆ ಪುನರ್ಜನ್ಮವಿಲ್ಲದಿರುವಿಕೆ ಮತ್ತು ಮೋಕ್ಷವೆಂದರೆ ತನ್ನೆಲ್ಲಾ ಕರ್ಮಗಳ ಪುಣ್ಯ ಫಲವು ಬರಿದಾಗುವವರೆಗೆ ಸ್ವರ್ಗದಲ್ಲಿರುವುದು (ಸ್ವರ್ಗವೆನ್ನುವುದನ್ನು ಕೆಲವೊಂದು ಆತ್ಮಗಳು ಸ್ವಲ್ಪ ಕಾಲದವರೆಗೆ ವಿಶ್ರಾಂತಿಯನ್ನು ಪಡೆಯುವ ಸ್ಥಳವಾಗಿದೆ ಎಂದು ವಿವರಿಸಬಹುದು). ಇತರ ಆತ್ಮಗಳು ತಾವು ಶರೀರವನ್ನು ಬಿಟ್ಟ ಕೂಡಲೇ ಪುನರ್ಜನ್ಮ ಹೊಂದುತ್ತವೆ. ಸ್ವರ್ಗವನ್ನು ಸೇರಿದ ಆತ್ಮವು ಮುಕ್ತಿಯನ್ನು ಪಡೆಯಲು ಅರ್ಹತೆಯನ್ನು ಸಂಪಾದಿಸುವುದಿಲ್ಲ. ಅಂತಿಮ ಮುಕ್ತಿಯು ಕೇವಲ ದೇವಿಯ ಕೃಪೆಯಿಂದ ಮಾತ್ರವೇ ಸಾಧ್ಯ, ಇದೇ ಈ ನಾಮದ ಅಂತರಾರ್ಥವಾಗಿದೆ.

        ಭಗವದ್ಗೀತೆಯ ೧೫ನೇ ಅಧ್ಯಾಯದ ೧೧ನೇ ಶ್ಲೋಕದಲ್ಲಿ ಶ್ರೀ ಕೃಷ್ಣನು, "ಮುಕ್ತಿಯನ್ನು ಹೊಂದ ಬಯಸುವ ಯೋಗಿಗಳು ಅವನು (ಪರಬ್ರಹ್ಮವು) ತಮ್ಮೊಳಗೇ ಇರುವುದನ್ನು ಕಂಡುಕೊಳ್ಳುತ್ತಾರೆ; ಆದರೆ ಯಾರು ಪರಿಶುದ್ಧರಾಗಿಲ್ಲವೋ ಮತ್ತು ನಿಯಮಬದ್ಧರಾಗಿಲ್ಲವೋ ಅಂತಹವರು ಅವನನ್ನು ಕಾಣಲು ಸಾಧ್ಯವಾಗುವುದಿಲ್ಲ ಅವರು ಅದಕ್ಕಾಗಿ ಪ್ರಯತ್ನ ಮಾಡಿದರೂ ಸಹ" ಎನ್ನುತ್ತಾನೆ.

Paśu-pāśa-vimocanī पशु-पाश-विमोचनी (354)

೩೫೪. ಪಶು-ಪಾಶ-ವಿಮೋಚನೀ

         ಆತ್ಮ ಸಾಕ್ಷಾತ್ಕಾರದ ವಿವರಣೆಯನ್ನು ಬೃಹದಾರಣ್ಯಕ ಉಪನಿಷತ್ತು (೧.೪.೧೦) ಅತ್ಯಂತ ಸಮಂಜಸವಾಗಿ ವಿವರಿಸುತ್ತದೆ. ಅದು ಹೇಳುತ್ತದೆ, " ಈ ಆತ್ಮವು ಪ್ರಾರಂಭದಲ್ಲಿ ಬ್ರಹ್ಮವೇ ಆಗಿತ್ತು. ಅದಕ್ಕೆ ಕೇವಲ ’ನಾನು ಬ್ರಹ್ಮ’ ಎನ್ನುವುದಷ್ಟೇ ತಿಳಿದಿತ್ತು. ಆದ್ದರಿಂದ ಅದು ಎಲ್ಲವೂ ಆಯಿತು. ಮತ್ತು ದೇವತೆಗಳಲ್ಲಿ ಯಾರ‍್ಯಾರಿಗೆ ಅದು ತಿಳಿದಿತ್ತೋ ಅವರೆಲ್ಲರೂ ಅದೇ ಆದರು; ಮತ್ತು ಇದು ಋಷಿಗಳಿಗಲ್ಲಿ ಮತ್ತು ಮನುಜರಲ್ಲಿ ಸಹ ಪುನರಾವರ್ತನೆಯಾಯಿತು". ಯಾವಾಗ ಒಬ್ಬನಿಗೆ ಬ್ರಹ್ಮಸಾಕ್ಷಾತ್ಕಾರವುಂಟಾಗುತ್ತದೆಯೋ ಆವಾಗ ಅವನು ಎಲ್ಲವೂ ಆಗುತ್ತಾನೆ. ಯಾರಿಗೆ ಬ್ರಹ್ಮತ್ವವನ್ನು ಪಡೆಯಲು ಇಂಗಿತ ಜ್ಞಾನವು ಇರುವುದಿಲ್ಲವೋ ಅವರು ಪಶುಗಳೆನಿಸಿಕೊಳ್ಳುತ್ತಾರೆ. ಪಶು ಎಂದರೆ ಸಾಮಾನ್ಯವಾಗಿ ದನಗಳು; ಆದರೆ ಈ ಸಂದರ್ಭದಲ್ಲಿ ಅದನ್ನು ಬ್ರಹ್ಮಾಂಡದ ಆತ್ಮಕ್ಕಿಂತ ಭಿನ್ನವಾಗಿರುವ ವ್ಯಕ್ತಿಗತ ಆತ್ಮವೆಂದು ವಿವರಿಸಬಹುದು. ಇದನ್ನೇ ಬೇರೆ ವಿಧವಾಗಿ ಹೇಳಬೇಕೆಂದರೆ, ಯಾರಿಗೆ ಬ್ರಹ್ಮದ ಕುರಿತಾದ ಜ್ಞಾನವಿರುವುದಿಲ್ಲವೋ ಅವರು ಪಶುಗಳು. ಪಶುಗಳು ಆಹಾರವನ್ನು ಹೊರತುಪಡಿಸಿ ಮತ್ತ್ಯಾವುದರ ಬಗ್ಗೆಯೂ ಆಲೋಚಿಸವುದಿಲ್ಲ ಏಕೆಂದರೆ ಅವುಗಳಿಗೆ ಬೇರೆಯದನ್ನು ಕುರಿತು ಆಲೋಚಿಸುವ ಸಾಮರ್ಥ್ಯವು ಇರುವುದಿಲ್ಲ. ಆದ್ದರಿಂದ ಯಾರಿಗೆ ಬ್ರಹ್ಮದ ಕುರಿತಾಗಿ ಆಲೋಚಿಸುವ ತಿಳುವಳಿಕೆ ಇರುವುದಿಲ್ಲವೋ ಅವರನ್ನು ಪಶುಗಳೆಂದು ಕರೆಯಲಾಗುತ್ತದೆ.

         ಲಿಂಗ ಪುರಾಣವು, ಪಶುಗಳೆಂದರೆ ವ್ಯಕ್ತಿಗತ ಆತ್ಮಗಳು ಮತ್ತು ಪಾಶವೆಂದರೆ ಬಂಧನ ಮತ್ತು ಈ ವಿಧವಾದ ಬಂಧನವನ್ನು ಎಲ್ಲಾ ಪಶುಗಳ ಅಧಿಪತಿಯಾಗಿರುವ ಪಶುಪತಿಯು (ಶಿವನು) ನಾಶ ಪಡಿಸುತ್ತಾನೆ, ಎಂದು ಹೇಳುತ್ತದೆ.

         ಪಶು ಎನ್ನವದರ ಕುರಿತಾಗಿ ಇನ್ನಷ್ಟು ಹೆಚ್ಚು ವಿವರಗಳನ್ನು ತಿಳಿದುಕೊಳ್ಳುವುದು ಒಳಿತು ಏಕೆಂದರೆ ಈ ಶಬ್ದವು ಉಪನಿಷತ್ತುಗಳಲ್ಲಿ ಪದೇ ಪದೇ ಪ್ರಸ್ತಾವಿಸಲ್ಪಟ್ಟಿದೆ. ಶಿವ ಸೂತ್ರವು (೧.೨) ಹೀಗೆ ಹೇಳುತ್ತದೆ, ’ಜ್ಞಾನಮ್ ಬಂಧಃ’. ಜ್ಞಾನವೆಂದರೆ ಕಲುಷಿತಗೊಂಡ ತಿಳುವಳಿಕೆ ಮತ್ತು ಬಂಧಃ ಎಂದರೆ ಬಂಧನ (ಕಟ್ಟಿ ಹಾಕುವಿಕೆ). ಪರಿಮಿತವಾದ ಜ್ಞಾನವು ಅಜ್ಞಾನವಾಗಿದೆ. ಈ ಅಜ್ಞಾನವು ಬಂಧನಕ್ಕೆ ಕಾರಣವಾಗಿದೆ ಮತ್ತು ಅದು ನಿಜವಾದ ಬ್ರಹ್ಮವನ್ನು ಮರೆಮಾಚುತ್ತದೆ. ಈ ಸಂಗತಿಯನ್ನು ‘ಆಣವ ಮಲ’ ಎಂದು ಕರೆಯಲಾಗುತ್ತದೆ. ಮಲವೆಂದರೆ ಯಾವುದು ಪರಬ್ರಹ್ಮದ ಪೂರ್ಣ ಅನಾವರಣಕ್ಕೆ ಅಡಚಣೆಯುಂಟು ಮಾಡುತ್ತದೆಯೋ ಅದು ಎಂದು ಈ ಮೊದಲೇ ವಿವರಿಸಲಾಗಿದೆ. ಆಣವ ಮಲವೆಂದರೆ ಆತ್ಮದ ಹುಟ್ಟಿನೊಂದಿಗೆ ಬಂದ ಅಜ್ಞಾನವಾಗಿದೆ. ಆಣವ ಎಂದರೆ ಅಣು ಎನ್ನುವ ಮೂಲದಿಂದ ವ್ಯುತ್ಪನ್ನವಾದ ಶಬ್ದ, ಇದು ನೈಜ ಜೀವಿ (ವ್ಯಕ್ತಿ) ಎನ್ನುವ ಅರ್ಥವನ್ನು ಕೊಡುತ್ತದೆ. ಈ ಆಣವ ಮಲವನ್ನು ಎರಡಾಗಿ ಉಪವಿಭಜಿಸಲಾಗಿದೆ. ಮೊದಲನೆಯದು ಜನ್ಮತಃ ವ್ಯಕ್ತಿಯೊಂದಿಗೆ ಇರುವ ಅಜ್ಞಾನವಾಗಿದ್ದರೆ ಮತ್ತೊಂದು ಬುದ್ಧಿಯನ್ನು ಪರಿಮಿತಗೊಳಿಸುವುದರ ಹಿಂದಿರುವ ಅಜ್ಞಾನವಾಗಿದೆ. ಈ ಆಣವ ಮಲವು ಬಂಧನಕ್ಕೆ ಕಾರಣವಾಗಿದೆ. ಯಾರು ಈ ವಿಧವಾದ ಬಂಧನಕ್ಕೆ ಒಳಗಾಗುತ್ತಾರೆಯೋ ಅವರು ಜನನ ಮರಣಗಳ ಚಕ್ರದಲ್ಲಿ ಸಿಲುಕಿಕೊಳ್ಳುತ್ತಾರೆ. ಈ ವಿಧವಾದ ಆಣವ ಮಲವನ್ನು ನಾಶಪಡಿಸುವುದರ ಮೂಲಕ ಅಂತಿಮ ಮುಕ್ತಿಗೆ ಅವಶ್ಯವಾಗಿರುವುದನ್ನು ದೇವಿಯು ಕೊಡಮಾಡುತ್ತಾಳೆ, ಎಂದು ಈ ನಾಮವು ಹೇಳುತ್ತದೆ.

******

       ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 352-354 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Mon, 08/19/2013 - 03:45

ಶ್ರೀಧರರೆ, ೯೫. ಲಲಿತಾ ಸಹಸ್ರನಾಮ ೩೫೨ರಿಂದ ೩೫೪ನೇ ನಾಮಗಳ ವಿವರಣೆಯ ಸಾರ ಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೩೫೨ - ೩೫೪
_____________________________________

೩೫೨. ವಹ್ನಿ-ಮಂಡಲ-ವಾಸಿನೀ 
ಅಗಣಿತ ಸೂರ್ಯತಾರ ನಿಹಾರಿಕೆ ಛವಿಯಗ್ನಿ ಮಂಡಲಾಗಸದಿ
ಸಹಸ್ರಾರ ಚಂದ್ರ, ಅನಾಹತ ಸೂರ್ಯ, ಅಗ್ನಿ ಮೂಲಾಧಾರದಿ
ತ್ರಿರೂಪ ಧಾರಿಣಿ ಪರಮ ಶ್ರೇಷ್ಟ ತ್ರಿಕೂಟ ಪಂಚದಶೀ ನಿವಾಸಿನಿ
ಅಗ್ನಿಗೋಳ ನಡುವಲಿ ವಾಸಿಪ ಲಲಿತೆ ವಹ್ನಿ ಮಂಡಲ ವಾಸಿನೀ!

೩೫೩. ಭಕ್ತಿಮತ್-ಕಲ್ಪ-ಲತಿಕಾ 
ಮೋಕ್ಷವೆಂದರೆ ಸ್ವರ್ಗದ ವಿಶ್ರಾಂತಿಧಾಮದಿ ಪುಣ್ಯಫಲ ಚುಕ್ತಾ
ಮತ್ತೆ ಹೊರಬೇಕು ಪುನರ್ಜನ್ಮ ಅಂತಿಮಮುಕ್ತಿ ಬೇರೆಯ ಅರ್ಥ
ಭಕ್ತ ಸಾಧನೆ ಮೋಕ್ಷದ ಬಳ್ಳಿಯನ್ಹಬ್ಬಿಸಿ ಮುಕ್ತಿಯ ಪೂರ್ಣತೆಗೆ
ಬೇಡಿದ ವರ ಕೊಡುತ ಭಕ್ತಿಮತ್ ಕಲ್ಪ ಲತಿಕಾ ಭುವಿ ಭಕ್ತರಿಗೆ!

೩೫೪. ಪಶು-ಪಾಶ-ವಿಮೋಚನೀ 

ಬ್ರಹ್ಮದ ಕುರಿತ ಅಜ್ಞಾನ ಪಶು ಆಹಾರಾಲೋಚನೆ ಸಮಾನ
ಇರದಿರೆ ಬ್ರಹ್ಮತ್ವದಿಂಗಿತಜ್ಞಾನ ಪಶು ಚಿಂತಿಸ ಆಹಾರ ವಿನಃ
ಬ್ರಹ್ಮಸಾಕ್ಷಾತ್ಕಾರದಿ ತಾನಾಗುತ ಎಲ್ಲ ಅಹಂಬ್ರಹ್ಮದ ಲೀಲ
ದೇವಋಷಿಮನುಜರಲಂತೇ ಪಶು ಪಾಶ ವಿಮೋಚನೀ ಜಾಲ!

ವ್ಯಕ್ತಿಗತಾತ್ಮವೆ ಪಶು, ಪಾಶವೆ ಬಂಧನ ನಾಶಕ ಪಶುಪತಿ ಶಿವ
ಕಲುಷಿತ ತಿಳುವಳಿಕೆ ಬಂಧನ, ಪರಿಮಿತ ಜ್ಞಾನದ ಅಜ್ಞಾನವ
ಪರಿಮಿತಬುದ್ದಿ ಜನ್ಮತಃ - ಎರಡನೂ ಪೋಷಿಸೊ ಅಣವ ಮಲ
ಸಂಸಾರಚಕ್ರಬಂಧಕೆ ಸಿಲುಕಿಸಬಿಡದು ಬ್ರಹ್ಮಜ್ಞಾನದ ಅಮಲ!

ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು
 

ಈ ಕಂತೂ ಸಹ ಚೆನ್ನಾಗಿ ಮೂಡಿ ಬಂದಿದೆ ನಾಗೇಶರೆ, ಕೆಳಗಿನ ನಾಮದ ವಿವರಣೆಯಲ್ಲಿನ ಕೆಲವು ಪರಿಷ್ಕರಣೆಗಳತ್ತ ಗಮನಹರಿಸಿ.
೩೫೪. ಪಶು-ಪಾಶ-ವಿಮೋಚನೀ

ಬ್ರಹ್ಮದ ಕುರಿತ ಅಜ್ಞಾನ ಪಶು ಆಹಾರಾಲೋಚನೆ ಸಮಾನ
ಇರದಿರೆ ಬ್ರಹ್ಮತ್ವದಿಂಗಿತಜ್ಞಾನ ಪಶು ಚಿಂತಿಸ ಆಹಾರ ವಿನಃ
ಬ್ರಹ್ಮಸಾಕ್ಷಾತ್ಕಾರದಿ ತಾನಾಗುತ ಎಲ್ಲ ಅಹಂಬ್ರಹ್ಮದ ಲೀಲ
ದೇವಋಷಿಮನುಜರಲಂತೇ ಪಶು ಪಾಶ ವಿಮೋಚನೀ ಜಾಲ!
ಈ ಪಂಕ್ತಿಯಲ್ಲಿ ಮೊದಲೆರಡು ಸಾಲಿನ ಅರ್ಥಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಮತ್ತು ಇಲ್ಲಿ ಮೊದಲನೇ ಸಾಲನ್ನು ತೆಗೆದು ಹಾಕಿ ಎರಡನೇ ಸಾಲನ್ನಷ್ಟೇ ಉಳಿಸಿಕೊಂಡರೆ ಸಾಕು. ಎರಡನೇ ಸಾಲಿನಲ್ಲಿ ನಮ್ಮನ್ನು ಪ್ರಪಂಚಕ್ಕೆ ಕಟ್ಟಿ ಹಾಕುವ ಮೋಹ ಬಂಧನವೇ ಪಾಶ ಎನ್ನುವ ವಿವರಣೆಯಿದ್ದರೆ ಪದ್ಯದ ನಾಲ್ಕೂ ಸಾಲುಗಳು ಪೂರ್ಣವಾಗುತ್ತವೆ. ಮೂರನೇ ಹಾಗು ನಾಲ್ಕನೇ ಸಾಲನ್ನೂ ಸಹ ಬದಲಾಯಿಸಿ ಸ್ವಲ್ಪ ಗೋಜಲೆನಿಸುತ್ತದೆ.

ವ್ಯಕ್ತಿಗತಾತ್ಮವೆ ಪಶು, ಪಾಶವೆ ಬಂಧನ ನಾಶಕ ಪಶುಪತಿ ಶಿವ
ಕಲುಷಿತ ತಿಳುವಳಿಕೆ ಬಂಧನ, ಪರಿಮಿತ ಜ್ಞಾನದ ಅಜ್ಞಾನವ
ಪರಿಮಿತಬುದ್ದಿ ಜನ್ಮತಃ - ಎರಡನೂ ಪೋಷಿಸೊ ಅಣವ ಮಲ
ಸಂಸಾರಚಕ್ರಬಂಧಕೆ ಸಿಲುಕಿಸಬಿಡದು ಬ್ರಹ್ಮಜ್ಞಾನದ ಅಮಲ!
ಸಿಲುಕಿಸಬಿಡದು=ಸಿಲುಕಿಸದು ಎಂದು ಸರಳವಾಗಿ ಮಾಡಬಹುದೆನಿಸುತ್ತದೆ. ಉಳಿದಂತೆ ಈ ಪಂಕ್ತಿ ಬಹಳ ಸೊಗಸಾಗಿದೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ತಿದ್ದುಪಡಿಸಿದ ಆವೃತ್ತಿ ಈ ಕೆಳಕಂಡಂತೆ. ಈಗ ವಿವರಣೆಗೆ ಸೂಕ್ತ ಹೊಂದಿಕೆಯಾಗುವುದೆ?

೩೫೪. ಪಶು-ಪಾಶ-ವಿಮೋಚನೀ

ಇರದಿರೆ ಬ್ರಹ್ಮತ್ವದಿಂಗಿತಜ್ಞಾನ ಪಶು ಚಿಂತಿಸ ಆಹಾರ ವಿನಃ
ಲೌಕಿಕ ಮೋಹ ಬಂಧನವೇ ಪಾಶ ವ್ಯಕ್ತಿಗತ ಆತ್ಮದ ಸನ್ನಾಹ
ಬಿಡಿಸಲಾ ಕಬಂಧಬಾಹು ಪಶು ಪಾಶ ವಿಮೋಚನೀ ಕಟಾಕ್ಷಾ
ಆತ್ಮಸಾಕ್ಷಾತ್ಕಾರದೆ ಸಾಧಕನನಾಗಿಸುತ ಅಹಂಬ್ರಹ್ಮಾದೀಕ್ಷಾ!

ವ್ಯಕ್ತಿಗತಾತ್ಮವೆ ಪಶು, ಪಾಶವೆ ಬಂಧನ ನಾಶಕ ಪಶುಪತಿ ಶಿವ
ಕಲುಷಿತ ತಿಳುವಳಿಕೆ ಬಂಧನ, ಪರಿಮಿತ ಜ್ಞಾನದ ಅಜ್ಞಾನವ
ಪರಿಮಿತ ಬುದ್ದಿ ಜನ್ಮತಃ - ಎರಡನೂ ಪೋಷಿಸೊ ಅಣವಮಲ
ಸಂಸಾರ ಚಕ್ರ ಬಂಧನಕೆ ಸಿಲುಕಿಸದು ಬ್ರಹ್ಮಜ್ಞಾನದ ಅಮಲ!
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

ನಾಗೇಶರೆ,
ಈಗ ವಿವರಣೆಯ ಆಶಯಕ್ಕೆ ಧಕ್ಕೆ ಬಾರದಂತೆ ಕವನಗಳು ಬಹಳ ಸೊಗಸಾಗಿವೆ. ಸ್ವಲ್ಪ ಒಳ್ಳೇ ಮೂಡಿನಿಂದ ಈ ದಿನ ಪದ್ಯರಚನೆಯನ್ನು ಕೈಗೆತ್ತಿಕೊಂಡಿರುವಂತಿದೆ! :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಹಾಗಿದ್ದರೆ ಎಲ್ಲಾ ಕಾವ್ಯಗಳನ್ನು ಇದೊಂದೆ ದಿನ ಹೊಸೆಯಲಾಗುವಂತಿದ್ದರೆ ಚೆನ್ನಾಗಿರುತ್ತಿತ್ತೆಂದು ಕಾಣುತ್ತದೆ :-)

ಈ ಕಂತನ್ನು ಅಂತಿಮಗೊಳಿಸಿ ವೆಬ್ಸೈಟಿನಲ್ಲಿ ಹಾಕಿದ್ದೇನೆ.
 
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು