ನಡೆದಿದ್ದಾದರೂ ಎಲ್ಲಿಗೆ ?

ನಡೆದಿದ್ದಾದರೂ ಎಲ್ಲಿಗೆ ?

ಕವನ

ನಡೆಯಲು ಬಾರದ‌ ಹೊತ್ತಿನಲ್ಲಿ

ನಡಿಗೆ ಕಲಿಸಿಕೊಟ್ಟರು

ನಡೆದಾಡಲು ಪ್ರಾರಂಭಿಸಿದಾಗ‌

ಅದೆಷ್ಟು ನಡೆದಾಡಿದ್ದು

 

ನಡೆಯುವಾಗ‌ ಗೊತ್ತಾಗುವುದಿಲ್ಲಾ

ಯಾವಾಗ‌ ಹೆಜ್ಜೆ ತಪ್ಪುವುದೆಂದು

ಬಿದ್ದಾಗಲೇ ತಿಳಿಯುವುದು

ಪೆಟ್ಟಿನ‌ ನೋವು,ತಪ್ಪಿನ‌ ಅರಿವು

 

ದೇಹ‌ ದಣಿದಿದ್ದೇ ಗೊತ್ತಾಗುವುದಿಲ್ಲ

ನಡೆದ‌ ದಣಿವೂ ಅರಿವಾಗುವುದಿಲ್ಲ‌

ಕೆಲವರು ನನಗಿಂತ‌ ಮುಂದೆ

ಹಲವರು ನನ್ನ‌ ಹಿಂದೆ

 

ನಡೆದದ್ದೇ ದಾರಿ ಎಂದಡಿಯಿಡುತ್ತ

ಮೈಲುಗಲ್ಲುಗಳ‌ ದಾಟಿ ನಿಲ್ಲದೆಯೇ

ಲಗುಬಗೆಯ‌ ನಡಿಗೆಯಲ್ಲಿ ಎಡವಿದಾಗಲೂ

ಎದ್ದು ಮುಂದಡಿಯಿಡುವ‌ ಧಾವಂತ‌

 

ನಡಿಗೆ ನಿಲ್ಲುವ‌ ತನಕ‌

ಎಡ‌ತಾಕಿದ‌ ಜೀವಕ್ಕೆ

ಕೊನೆಯ‌ ಘಳಿಗೆಯಲ್ಲೂ ಆಗದೇ

ಪ್ರತಿಯೊಂದು ನಡೆಯ‌ ಪರಾಮರ್ಶೆ

 

ಏಳುಬೀಳುಗಳ‌ ಜೊತೆಜೊತೆಗೆ

ನಡೆದದ್ದಾದರೂ ಎಲ್ಲಿಗೆ ?

ಎಡವಿದ್ದಾದರೂ ಏತಕ್ಕೆ ?

ಎಂದರಿವಾದರೆ ಅದೇ ನಡಿಗೆಯ‌ ವಿಮರ್ಶೆ.

Comments

Submitted by shejwadkar Mon, 08/19/2013 - 07:28

" ಬಿದ್ದವರು ಏದ್ದು ನಡೆಯಬಹುದು' ಏದ್ದವರು ಬೀಳಲೂ ಬಹುದು"

ಆದರೆ ಬಿದ್ದಾಗ ಮಾತ್ರ ನಡೆಯಲು ಕಲಿಸಿದವರ ನೆನಪಾಗುವದು

ಏಳು ಬೀಳುಗಳ ಹಾದಿಯಲ್ಲಿ ಗುರಿಮುಟ್ಟಿದರೂ ಮುಟ್ಟದಿದ್ದರೂ  ಅಂತ್ಯ ಒಂದೇ ನಡಿಗೆಯ ಪರಾಮರ್ಶೆ

ಚನಾಗಿದೆ ಶಶಿಕಾಂತ್ ರವರೆ ಇಸ್ತವಾಯ್ತು