" ನಮ್ಮ ನೆತ್ತಿಯ ಮೇಲೆ ಯುದ್ಧ ಭೀತಿಯ ತುಗುಗತ್ತಿ "

" ನಮ್ಮ ನೆತ್ತಿಯ ಮೇಲೆ ಯುದ್ಧ ಭೀತಿಯ ತುಗುಗತ್ತಿ "

 

 

                     

 

 

        ಮೊನ್ನೆ ಮುಂಜಾವಿನ ಸಮಯ ಎಂದಿನಂತೆ ಟಿವಿ ಆನ್ ಮಾಡಿದೆ. ಬೃಹದಾಕಾರದ ವಿಮಾನವೊಂದು ಹಿಮಾ ವೃತ ಪರ್ವತ ಶ್ರೇಣಿಗಳ ಮಧ್ಯದ ಲಡಾಕಿನ ಗಡಿಯಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿತ್ತು. ಟೆಲಿವಿಜನ್ ಸುದ್ದಿ ವಾಹಿನಿಯ ನಿರೂಪಕಿ ಕೊನೆಗೂ ಭಾರತ ಯುದ್ಧ ದಾಹಿಗಳಿಗೆ ತಕ್ಕ ಉತ್ತರ ಕೊಟ್ಟಿತು ಎಂದು ಹೆಮ್ಮೆಯಿಂದ ಬೀಗುತ್ತ ನುಡಿಯುತ್ತಿದ್ದಳು. ಆ ದಿನದ ಎಲ್ಲ ಪ್ರಿಂಟ್ ಮತ್ತು ಇಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಅದೇ ಪ್ರಮುಖ ಸುದ್ದಿ. ಪೇಟೆಯ ರಸ್ತೆ ಬದಿಯಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ಹೋಟೆಲ್ ಗಳಲ್ಲಿ ಮತ್ತು ಕ್ಯಾಂಟಿನ್ಗಳಲ್ಲಿ ಬೈಟೂ ಟೀ ಕುಡಿಯುತ್ತ ಅನೇಕರು ಈ ವಿಷಯವನ್ನು ಚರ್ಚಿಸುತ್ತಿದ್ದರು. ಆದರೆ ಅವರ ಮಾತುಕತೆಯಲ್ಲಿ ಅಗಸ್ಟ್ 5 ರಂದು ಪಾಕಿಸ್ಥಾನ ಅಕ್ರಮವಾಗಿ ಮರಾಮೋಸದಂದ ಗಡಿ ದಾಟಿ ಬಂದು ಗಡಿ ಕಾವಲು ಪಡೆಯ ಐವರು ಯೋಧರನ್ನು ಅಮಾನುಷವಾಗಿ ಹತ್ಯೆ ಗೈದ ವಿಷಯ ಒಂದು ಗಂಭೀರ ವಿಷಯವೆ ಆಗಿರಲಿಲ್ಲ. ಅವರು ಬಿಡಿ ಜನ ಸಾಮಾನ್ಯರು ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಆಯ್ಕೆಯಾಗಿ ಹೋದ ಜನ ಪ್ರತಿನಿಧಿ ಜನ ನಾಯಕ ಅಲ್ಲದೆ ಮಂತ್ರಿ ಈ ಐವರ ಸಾವನ್ನು ತೀರ ಲಘುವಾಗಿ ಪರಿಗಣಿಸಿ ಬೇಜವಬ್ದಾರಿಯಿಂದ ಮಾತನಾಡುವುದು ಕೊನೆಗೆ ಕ್ಷಮೆ ಕೇಳುವುದು ಸರ್ಕಾರದಲ್ಲಿರುವ ಜನ ಈ ಯುದ್ಧ ಸಂಭವನೀಯ ಘಟನೆಗಳನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವದಕ್ಕೆ ಒಂದು ಸ್ಪಷ್ಟ ಉದಾಹರಣೆ.

 

   

      ಈ ಸಂಧರ್ಭದಲ್ಲಿ ನಮಗೆ 1967ರಲ್ಲಿ ಸಂಭವಿಸಿದ ಭಾರತ ಪಾಕ ಕದನದ ಚಿತ್ರವನ್ನು ತಂದು ನಿಲ್ಲಿಸುತ್ತದೆ. ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಯವರು ಘೋಷಿಸಿದ 'ಜೈ ಜವಾನ್ ಜೈ ಕಿಸಾನ್' ಎಂಬ ಘೋಷಣೆ ಎಷ್ಟು ಜನಪ್ರಿಯವಾಗುತ್ತದೆ ಎಂದರೆ ತೀರ ಗ್ರಾಮಾಂತರ ಪ್ರದೇಶಗಳಲ್ಲೂ ಈ ಘೋಷಣೆ ಮಾರ್ದನಿಸುತ್ತದೆ. ಇದು ಜನ ನಾಯಕರ ಮೇಲೆ ನಂಬಿಕೆಯಿಟ್ಟು ಮಾನಸಿಕವಾಗಿ ಯುದ್ಧವನ್ನು ಎದುರಿಸಲು ಬರಿ ಮಿಲಿಟರಿಯಷ್ಟೆ ಅಲ್ಲ ಜನ ಸಾಮಾನ್ಯರೂ ಸಿದ್ಧರಾಗುತ್ತಾರೆ ನಾಯಕತ್ವವೆಂದರೆ ಅದು. ಯೋಧರ ಬಲಿದಾನವನ್ನು ಒಂದು ಯಕಶ್ಚಿತ್ತ ಒಂದು ಮಾಮೂಲಿ ಸಾವಿನಂತೆ ಪರಿಗಣಿಸಿ ಅವರು ಸಾಯುವುದಕ್ಕೆ ಹುಟ್ಟಿದವರು ಅದು ಅವರ ಕರ್ತವ್ಯವೆಂದು ಉಡಾಫೆ ಯಿಂದ ಮಾತನಾಡುವ ಈಗಿನ ಜನ ನಾಯಕರು ಅವರ ಅಮಾನವೀಯತೆ ಜೊತೆಗೆ ದೂರದರ್ಶಿತ್ವದ ಕೊರತೆಯನ್ನು ಸೂಚಿಸುತ್ತದೆ. ಇಲ್ಲಿ ವಿಷಯದ ಗಂಭೀರ ಗ್ರಹಿಕೆಯ ಕೊರತೆ ಎದ್ದು ಕಾಣುತ್ತದೆ. ಇಲ್ಲಿ ಎಲ್ಲರಿಗೂ ಅವರ ಜೀವವೆಂದರೆ ಪ್ರೀತಿಯೆ ಆತ ಜವಾನನಿರಲಿ ದಿವಾನನಿರಲಿ ಇಲ್ಲ ಜನ ಸಾಮಾನ್ಯನಿರಲಿ. ಒಬ್ಬ ಯುವಕ ಯೋಧನಾಗಲು ಮಿಲಿಟರಿ ಸೇರುತ್ತಾನೆ ಎಂದರೆ ಅದು ಆತನ ದೇಶ ಪ್ರೇಮವನ್ನು ಸಾರುತ್ತದೆ. ಹೊಟ್ಟೆಪಾಡಿಗೆ ಆತ ಸೇರಿದ್ದಾನೆ ಎಂದು ಪರಿಭಾವಿಸಿದರೂ ತರಬೇತಿ ಮತ್ತು ಯುದ್ಧರಂಗ ಆತನಲ್ಲಿ ದೇಶಪ್ರೇಮವನ್ನು ಬಿತ್ತಿ ಬೆಳೆಸಿ ಆತನನ್ನು ಒಬ್ಬ ವೀರ ಯೋಧ ಮತ್ತು ದೇಶಪ್ರೇಮಿಯನ್ನಾಗಿ ಮಾರ್ಪಡಿಸುತ್ತದೆ. 

 

   

       ದೇಶಪ್ರೇಮ ಎಂದರೇನು ಯುದ್ಧ ಎಂದರೇನು ಒಬ್ಬ ಯೋಧನ ಮಹತ್ವ ಎಂತಹುದೆಂಬುದನ್ನು ಚೈನಾದ ಜೊತೆಗೆ ನಡೆದ ಯುದ್ಧದಲ್ಲಿ ಭಾಗವಹಿಸಿ ಯುದ್ಧ ಕೈದಿಯಾಗಿ ಚೈನಾದ ಕಾರಾಗೃಹದಲ್ಲಿ ಕಳೆದು ಬಂದ ವೀರ ಯೋದ ಜಾನ್ ಪಿ ದಳವಿ ತಮ್ಮ 'ಹಿಮಾಲಯನ್ ಬ್ಲಂಡರ್' ಕೃತಿಯಲ್ಲಿ ಎಷ್ಟು ನಿಭರ್ಾವುಕರಾಗಿ ಎಳ್ಳಷ್ಟೂ ವೈಭವೀಕರಣವಿಲ್ಲದೆ ದಾಖಲಿಸಿದ್ದಾರೆ ಎಂಬುದನ್ನು ಅದನ್ನು ಓದಿಯೆ ತಿಳಿಯಬೇಕು. ಅದೊಂದು ಭಾರತೀಯ ಮಿಲಿಟರಿಗೆ ಸೇರುವವರಿಗೆ ಮಾರ್ಗ ದರ್ಶನ ಮಾಡುವಂತಹುದು. ಅದು ಭಾರತೀಯ ಮಿಲಿಟರಿಯ ಭಗವದ್ಗೀತೆ ಕುರಾನ್ ಮತ್ತು ಬೈಬಲ್ ಎಂದು ನಿಸ್ಸಂಶಯವಾಗಿ ಹೇಳಬಹುದು, ಆದರೆ ನೆಹರೂ ಸರ್ಕಾರ ಆಗಲೆ ಅದನ್ನು ಬ್ಯಾನ ಮಾಡಿದೆ.

 

   

 ದೇಶ ಪ್ರೇಮದ ಪ್ರಜ್ಞೆ ಒಬ್ಬ ಜನನಾಯಕನಿಗಿಲ್ಲದಾದಾಗ ಮೇಲ್ಕಾಣಿಸಿದಂತಹ ಅಪ್ರಬುದ್ಧ ಹೇಳಿಕೆಗಳು ಆತನಿಂದ ಬರುತ್ತವೆ. ಯುದ್ಧದ ಭೀತಿ ಅಂದರೇನು ? ಮಿಲಿಟರಿಯ ಮಹತ್ವವೇನು ಎಂಬುದನ್ನು ನಮ್ಮ ದೇಶದ ಗಡಿ ರಾಜ್ಯಗಳಾದ ಗುಜರಾತ, ರಾಜಸ್ಥಾನ ಮತ್ತು ಪಂಜಾಬ ಮುಂತಾದ ರಾಜ್ಯಗಳ ಜನತೆಯನ್ನ ಎನ್ನ ನೋಡಿದರೆ ನಮಗೆ ಯುದ್ಧ ಅಂದರೇನು ಅದು ತರುವ ತಲ್ಲಣಗಳೇನು ಎಂಬುದರ ಅರ್ಥವಾಗುತ್ತದೆ. ಅದನ್ನು ಶಾಸ್ತ್ರೀ ಅರಿತಿದ್ದರು, ಇಂದಿರಾಗಾಂಧಿ ಅರಿತಿದ್ದರು ಮತ್ತು ವಾಜಪೇಯಿ ಅರಿತಿದ್ದರು. ಯುದ್ದವನ್ನು ಸಮರ್ಥವಾಗಿ ಎದುರಿಸಲು ಮಿಲಿಟರಿಯಷ್ಟೆ ಅಲ್ಲ ಇಡಿ ದೇಶವನ್ನು ಮಾನಸಿಕವಾಗಿ ಅಣಿಗೊಳಿಸಿದ್ದರು. ಆದರೆ ಈಗ ಅಂತಹ ಸಮರ್ಥ ನಾಯಕತ್ವದ ಕೊರತೆ ಇರುವುದ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ವಿಷಯ ಹೀಗಿರುವಾಗ ಸಂಭವನೀಯ ಯುದ್ಧದ  ತೀವ್ರತೆಯ ಅರಿವು ಅವರಾರಿಗೂ ಇಲ್ಲವೆಂಬುದು ಅವರ ಮಾತುಕತೆಯ ಧೋರಣೆ ಗಳಿಂದ ತಿಳಿದು ಬರುತ್ತಿತ್ತು. ಇದೊಂದು ಬೀದಿ ಜಗಳದ ತರಹ ಎನ್ನುದು ಬಹುತೇಕರ ಗ್ರಹಿಕೆ ಯಾಗಿರಬಹುದೆ? ಸಂಭವಿಸಬಹುದಾದ ಯುದ್ಧ ಅದು ತರಬಹುದಾದ ತಲ್ಲಣ ಮತ್ತು ಆತಂಕಗಳ ಕುರಿತ ಯೋಚನೆ ಅವರಾರಿಗೂ ಇದ್ದಂತಿರಲಿಲ್ಲ. ಅವರವರದೆ ಯೋಚನಾ ಲಹರಿ ಅಭಿಪ್ರಾಯಗಳು ಯುದ್ಧದ ತೀವ್ರತೆಯ ಅರಿವು ಇವರಿಗೆ ಒಂದು ಕ್ಷಣ ಹೊಳೆಯಲಿಲ್ಲವೆ  ಎನ್ನುವ ಸಂಶಯ ಕಾಡ ತೊಡಗಿತು. ಇದು ಯಾಕೋ ಸುಲಭದಲ್ಲಿ ಬಗೆ ಹರಿಯುವ ಸಮಸ್ಯೆಯಲ್ಲ ಇದರ ಕೊನೆ ಹೇಗೆ ಎನ್ನುವ ಪ್ರಶ್ನೆ ಮನದಲ್ಲಿ ಮೂಡಿ ಕಾಡ ತೊಡಗಿತು. 

 

   

 ಕಾರ್ಗಿಲ್ ಯುದ್ದದ ವಿಜಯೋತ್ಸವ ದಿನದ ಆಚರಣೆ ಅದರ ವೈಭವೀಕರಣದ ರಂಜಿತ ಟೆಲಿವಿಜನ್ ವರದಿ ಮತ್ತು ಸುದ್ದಿ ತುಣುಕುಗಳು ಜೊತೆಗೆ ಅಗಸ್ಟ್ 15 ರ ಸ್ವಾತಂತ್ರ ದಿನಾಚರಣೆಗೆ ಭಯೋತ್ಪಾದಕರು ಒಡ್ಡಿದ್ದ ಭೀತಿ ಕಾರ್ಗಿಲ್ ಗಡಿಯಲ್ಲಿ ಪಾಕಿಸ್ತಾನ ತೆಗೆದಿದ್ದ ಕ್ಯಾತೆ ಪದೆ ಪದೆ ನಡೆಸುತ್ತಿದ್ದ ಅಪ್ರಚೋದಿತ ದಾಳಿಗಳು, ಐವರು ಭಾರತೀಯ ಯೋಧರ ಶಿರಚ್ಛೇದನ ಉಗ್ರವಾದಿಗಳನ್ನು ಗಡಿ ದಾಟಿಸಿ ಭಾರತದೊಳಕ್ಕೆ ನುಗ್ಗಿಸಲು ನಿರತವಾದ ಪಾಕ್ ಮಿಲಿಟರಿ ಇಂದಿಗೂ ನಿಲ್ಲದ ಗಡಿ ಉಲ್ಲಂಘಿಸುವ ಪ್ರಯತ್ನ ಒಂದು ಮಗ್ಗಲು ಮುಳ್ಳಾಗಿ ಕಾಡುತ್ತಿರುವುದು ಸುಳ್ಳಲ್ಲ. ಮೂರು ಯುದ್ಧಗಳಲ್ಲಿ ಮರ್ಮಘಾತಕ ಪೆಟ್ಟು ತಿಂದರೂ ಇನ್ನೂ ಬುದ್ಧಿ ಕಲಿಯದ ಪಾಕ್ನ ಈ ದಾಳಿಗಳ ಉದ್ದೇಶ ವೇನು? ಹಿನ್ನೆಲೆಗೆ ಯಾರಿದ್ದಾರೆ? ಇದಕ್ಕೆ ಉತ್ತರ ಆ ದಿನ ಸಾಯಂಕಾಲದ ನ್ಯೂಜ್ ಚಾನಲ್ಗಳು ನೀಡಿದವು. ಅರುಣಾಚಲ ಗಡಿಯಲ್ಲಿ ಚೀನದ ಸೈನ್ಯದ ಜಮಾವಣೆ ಜೊತೆಗೆ ಚೀನಿಯರು ಅರುಣಾಚಲದ ಗಡಿ ಉಲ್ಲಂಘಿಸಿದ್ದಾರೆ ಎಂಬ ಈ ಸುದ್ದಿಯಿಂದ ಪಾಕಿಸ್ಥಾನದ ಬೆನ್ನಿಗಿರುವವರು ಯಾರು ಎನ್ನುವುದು ಖಚಿತವಾದಂತಾಯಿತು. ಈ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಲು ಯಾರು ಕಾರಣ ಭಾರತವೆ, ಪಾಕಿಸ್ಥಾನವೆ ಇಲ್ಲ ಚೀನಾವೆ ?

 

   

       ಪಾಕಿಸ್ಥಾನ ಮತ್ತು ಚೀನಾಗಳ ನೆಲದ ದಾಹ ಜಗಜಾಹೀರಾಗಿರುವಂತಹುದು. ಕಾಶ್ಮೀರವನ್ನು ಕಬಳಿಸಲು ಪಾಕಿಸ್ಥಾನ ಅರುಣಾಚಲ ಪ್ರದೇಶ ತನ್ನದೆನ್ನುವ ಚೈನಾ ಮಗ್ಗಲು ಮುಳ್ಳುಗಳಾಗಿ ಕಾಡುತ್ತ ಬಂದಿರುವಂತಹವು. ಎಷ್ಟಂತ ಈ ದುರಾಕ್ರಮಣ ಕೀಟಲೆ ಗಳನ್ನು ಸಹಿಸುವುದು? ಈಗಾಗಲೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜಾಗ ಕರ್ನಾಟಕದ ಭೂಕ್ಷೇತ್ರಕ್ಕೂ ಮಿಗಿಲು. ಈ ಸಮಸ್ಯೆಯನ್ನು ವಿಶ್ವ ಸಂಸ್ಥೆಗೆ ಒಯ್ದವರು ಅಂದಿನ ನಮ್ಮ ದೇಶದ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಇಂದಿಗೂ ಆ ಸಮಸ್ಯೆ ಬಗೆ ಹರಿದಿಲ್ಲ. ಮ್ಯಾಕ್ ಮೋಹನ ಗಡಿ ರೇಖೆ ಭಾರತ ಮತ್ತೂ ಚೈನಾಗಳ ಗಡಿ. ಇಲ್ಲಿಯೂ ಸಹ ಭಾರತಕ್ಕೆ ಅನ್ಯಾಯವಾಗಿದೆ. ವಿಧಿಯಿಲ್ಲದೆ ನೆರೆಹೊರೆ ಚೆನ್ನಾಗಿರಲಿ ಎನ್ನುವ ಉದ್ದೇಶದಿಂದ ಭಾರತ ಮ್ಯಾಕ್ ಮೋಹನ್ ರೇಖೆಯನ್ನೆ ತನ್ನ ಗಡಿಯಾಗಿ ಒಪ್ಪಿ ಕೊಂಡರೂ ಚೀನಾದ ಉದ್ಧಟತನ ನಿಂತಿಲ್ಲ. ಪದೆ ಪದೆ ಗಡಿ ಉಲ್ಲಂಘನೆಗೆ ಪ್ರಯತ್ನಿಸುತ್ತಿರುವ ಪಾಕಿಸ್ಥಾನದ ಪ್ರಯತ್ನದ ಹಿಂದೆ ಪಾಕಿಸ್ಥಾನದ ಕುಮ್ಮಕ್ಕು ಇದೆ ಎನ್ನುವುದು ಅಕ್ಷರಶಃ ನಿಜ. . 

 

 

      ಚೀನಾದ ಈ ಭಾರತ ದ್ವೇಷಕ್ಕೆ ಕಾರಣವೇನು ಎಂದು ಯೋಚಿಸಿದಾಗ ಅನೇಕ ಕಾರಣಗಳು ಸುಳಿದು ಹೋಗುತ್ತವೆ. ಪ್ರಮುಖವಾದುದು ನೆಹರೂ ಕಾಲದಲ್ಲಿ ದಲಾಯಿಲಾಮ ಮತ್ತು ಟಿಬೇಟಿ ಯನ್ನರಿಗೆ ನಮ್ಮ ದೇಶದಲ್ಲಿ ರಕ್ಷಣೆ ನೀಡಿರುವುದು, ಟಿಬೇಟ್ ಚೀನಾದ ಭಾಗವೆಂದು ಒಪ್ಪದಿರುವುದು. ಸುಮ್ಮನೆ ಚೈನಾದ ಕೆಲವು ನಡೆಗಳನ್ನು ನಾವು ಗಮನಿಸುತ್ತ ಹೋಗೋಣ ಬೀಜಿಂಗ್ನಲ್ಲಿ ನಡೆದ ಓಲಂಪಿಕ್ಸ್ ಕ್ರೀಡಾ ಕೂಟದ ಸಂಧರ್ಭದಲ್ಲಿ ಓಲಂಪಿಕ್ ಜ್ಯೋತಿ ಭಾರತಕ್ಕೆ ಬಂದಾಗ ಅದರ ಭದ್ರತೆಗೆ ತಮ್ಮ ಕೆಂಪು ಸೇನೆಯನ್ನು ನಿಯಮಿಸ ಕೊಳ್ಳಲು ಕೇಳಿದ್ದರು. ಒಂದು ಓಲಂಪಿಕ್ ಜ್ಯೋತಿ ಸರಾಗವಾಗಿ ಸಾಗಿ ಹೋಗಲು ಭದ್ರತೆ ಕೊಡಲಾರದಷ್ಟು ನಮ್ಮ ರಕ್ಷಣಾ ವ್ಯವಸ್ಥೆ ದುರ್ಬಲವಾಗಿದೆಯೆ? ಉಳಿದ ಎಲ್ಲ ದೇಶಗಳಲ್ಲೂ ಓಲಂಪಿಕ್ ಜ್ಯೋತಿ ಸಾಗಿ ಬಂದಿದ್ದರೂ ಅದರ ಭದ್ರತೆಗೆ ತಮ್ಮ ಸೇನೆಯನ್ನು ನಿಯೋಜಿಸಲು ಚೀನಾ ಅನುಮತಿ ಕೇಳಿರಲಿಲ್ಲ. ಆದರೆ ಭಾರತದಲ್ಲಿ ಮಾತ್ರ ಕೇಳುತ್ತದೆಯೆಂದರೆ ಇದು ಚೀನಾದ ಕುಚೋದ್ಯವಲ್ಲದೆ ಬೇರೇನೂ ಅಲ್ಲ.  ಇನ್ನೊಂದು ನಮ್ಮ ರಕ್ಷಣಾ ಮಂತ್ರಿಗಳು ಅರುಣಾಚಲ ಪ್ರದೇಶಕ್ಕೆ ನೀಡಿದ ಭೇಟಿಗೆ ಚೀನಾ ಅಸಮಾಧಾನ ವ್ಯಕ್ತ ಪಡಿಸಿತ್ತು. ನಮ್ಮ ದೇಶದ ಅವಿಭಾಜ್ಯ ಅಂಗವಾಗಿರುವ ಪ್ರದೇಶಕ್ಕೆ ನಮ್ಮ ರಕ್ಷಣಾ ಸಚಿವರ ಭೇಟಿಯನ್ನು ಆಕ್ಷೇಪಸಿಲು ಚೀನಾಕ್ಕೆ ಏನು ಹಕ್ಕಿದೆ? ಭಾರತದ ಆಕ್ಷೇಪವನ್ನು ಕಡೆಗಣಿಸಿ ಅರುಣಾಚಲ ಗಡಿ ಪ್ರದೇಶದಲ್ಲಿ ಬ್ರ್ರಹ್ಮಪುತ್ರಾ ನದಿಗೆ ಬೃಹತ್ತಾದ ಆಣೆಕಟ್ಟು ನಿರ್ಮಿಸಲು ಅದು ಹೊರಟಿರುವುದು. ತನ್ನ ನಕಾಶೆಯಲ್ಲಿ ಅರುಣಾಚಲ ಪ್ರದೇಶವನ್ನು ತನ್ನ ಭೂ ಭಾಗವೆಂದು ತೋರಿಸಿಕೊಂಡಿರುವುದು. ಇದಕ್ಕೂ ಮಿಗಿಲಾದ ಇನ್ನೊಂದು ಕಾರಣ ತಾನು ಏಶಿಯಾದ ಪ್ರಬಲ ರಾಷ್ಟ್ರವೆಂದು ತೋರಿಸಿ ಕೊಳ್ಳುವ ಮಹತ್ವಾಕಾಂಕ್ಷೆಗೆ ಭಾರತ ಅಡ್ಡಿ ಎಂಬ ಅಸಹನೆಯೂ ಇರಬಹುದೆ? ಹೀಗೆ ಪಟ್ಟಿ ಮಾಡುತ್ತ ಹೋಗಬಹುದಾದರೆ ಅನೇಕ ಕಾರಣಗಳು ದೊರೆಯು ತ್ತವೆ.

 

     

     ಭಾರತದ ತನ್ನದೇ ಆದ ಅಂತರಿಕ ಸಮಸ್ಯೆಗಳಿಂದ ಬಳಲುತ್ತಿದೆ. ಜೊತೆಗೆ ಉದಾರಿಕರಣದ ಕಾರಣದಿಂದ ಉಂಟಾಗಿರುವ ದೇಶದ ಆರ್ಥಿಕ ಹಿಂಜರಿತ ದಾಖಲೆಯ ಮಟ್ಟದಲ್ಲಿ ಕುಸಿಯುತ್ತಿರುವ ನಮ್ಮ ರೂಪಾಯಿಯ ಮೌಲ್ಯ, ದೇಶದಲ್ಲಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ಪ್ರಾದೇಶಿಕ ಭಾಷೆ ಕಲೆ ಸಂಸ್ಕೃತಿಗಳ ಕಡೆಗಣನೆ, ಜೊತೆಗೆ ನಮ್ಮ ದೇಶದ ಗ್ರಾಮೀಣ ಪ್ರದೇಶದಿಂದ ಹಿಡಿದು ರಾಷ್ಟ್ರಮಟ್ಟದ ವರೆಗೂ ಪಕ್ಷಬೇಧವಿಲ್ಲದೆ ಹಬ್ಬಿ ಹರಡಿರುವ ಸ್ವಚ್ಛಂದ ಭ್ರಷ್ಟಾಚಾರ. ಅಲ್ಲದೆ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳಲ್ಲಿ ಉಂಟಾಗಿರುವ ಮೌಲ್ಯಗಳ ಕುಸಿತ ಅಧಿಕಾರದ ಗದ್ದುಗೆ ಏರಬೇಕು ಹಣ ಮಾಡಬೇಕು ಎನ್ನುವ ಹಪಾಹಪಿತನ ಹೀಗೆಯೆ ಪಟ್ಟಿ ಮಾಡುತ್ತ ಅನೇಕ ವಿಷಯಗಳನ್ನು ದಾಖಲಿಸುತ್ತ ಹೋದರೆ ಹನುಮಂತನ ಬಾಲದ ಹಾಗೆ ಬೆಳೆಯುತ್ತಲೆ ಹೋಗುವ ನಮ್ಮ ದೇಶದ ಸಮಸ್ಯೆಗಳು, ಇಂತಹ ಸೂಕ್ಷ್ಮ ಸ್ಥಿತಿಯಲ್ಲಿ ಪಾಕ್ ಮತ್ತು ಚೈನಾಗಳು ಒಡ್ಡಿರುವ ಯುದ್ಧ ಬೆದರಿಕೆ. ಇವುಗಳಿಗೂ ಮಿಗಿಲಾಗಿ ಜನಗಳಿಗೆ ಭರವಸೆ ಕೊಡದ ನಮ್ಮ ದೇಶದ ನಾಯಕತ್ವ. ಬಹುಶಃ ನಮ್ಮ ಅಧಿನಾಯಕಿಗೆ ಭಿನ್ನ ಭಿನ್ನ ನಂಬಿಕೆ ಆಚಾರ ಮತ್ತು ವಿವಿಧ ಜನ ಜಾತಿ ಸಮೂಹಗಳ ಸಂಕೀರ್ಣ ದೇಶವೊಂದರ ನಾಯಕತ್ವದ ಕಷ್ಟ ಏನು ಎನ್ನುವುದರ ಅರಿವು ಈಗ ಆಗಿರಬಹುದು. ಯಾಕೋ ಈ ಸಂಧರ್ಭದಲ್ಲಿ ಲಾಲ್ಬಹದ್ದೂರ್ ಶಾಸ್ತ್ರೀ, ಇಂದಿರಾ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ನೆನಪಿಗೆ ಬರುತ್ತಾರೆ. 

 

     

      1967 ರಲ್ಲಿ ಪಾಕ್ ರಾಜಸ್ಥಾನ ಗುಜರಾತ ಗಡಿಗಳಲ್ಲಿ ಆಕ್ರಮಣ ಮಾಡಿದಾಗ ಸಹ ಭಾರತಕ್ಕೆ ಅನೇಕ ಸಮಸ್ಯೆ ಗಳಿದ್ದವು. ನಮ್ಮ ದೇಶ ಆಹಾರದ ಉತ್ಪಾದನೆಯಲ್ಲಿ ಹಿಂದೆ ಬಿದ್ದಿತ್ತು. ಚೈನಾ ದಾಳಿಯಿಂದಾಗಿ ತನ್ನ ಸೈನ್ಯವನ್ನು ಬಲ ಪಡಿಸಿ ಕೊಳ್ಳುವ ನಿಟ್ಟಿನಲ್ಲಿತ್ತು. ಅದರ ಪ್ರತಿಫಲವೆ ನಮ್ಮ ದೇಶೀಯ ನಿರ್ಮಿತ ವೈಜಯಂತ ಪ್ಯಾಟನ್ ಟ್ಯಾಂಕ್ ಸಮರ್ಥವಾಗಿ ಕಾರ್ಯ ನಿರ್ವಹಿಸಿ ಆ ಯುದ್ಧ ಗೆಲ್ಲುವಲ್ಲಿ ಸಹಕಾರಿಯಾಗಿತ್ತು. ಆ ಸಂಧರ್ಭದಲ್ಲಿ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರೀ ಯವರು ಮಾಡಿದ ಭಾಷಣ ರೋಮಾಂಚಕಾರಿಯಾಗಿತ್ತು. ದೇಶದ ಜನತೆ ಒಗ್ಗಟ್ಟಾಗಿ ಯುದ್ಧದ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿತ್ತು. ಆಹಾರ ಕೊರತೆ ನೀಗಿಸಲು ಪ್ರತಿ ಸೋಮ ವಾರ ಒಂದು ಹೊತ್ತು ಊಟ ಬಿಡುವಂತೆ ಕರೆ ನೀಡಿದಾಗ ಗ್ರಾಮಾಂತರ ಪ್ರದೇಶಗಳ ಅನೇಕ ಜನ ಅದನ್ನು ಪಾಲಿಸಿದ್ದರು. ಅವರ 'ಜೈ ಜವಾನ್ ಜೈ ಕಿಸಾನ್' ಸ್ಲೋಗನ್ ಬಹಳ ಪರಿಣಾಮಕಾರಿಯಾಗಿತ್ತು. ಅವರೂ ಸಹ ಸರಳರಾಗಿದ್ದರು ಜೊತೆಗೆ ಸೌಮ್ಯ ಸ್ವಭಾವ ದವರಾಗಿದ್ದರು. ಆದರೂ ಯುದ್ಧ ಸಂಧರ್ಭದಲ್ಲಿ ಅವರು ತೆಗೆದುಕೊಂಡ ನಿಲುವು ದೇಶವನ್ನು ಒಗ್ಗೂಡಿಸಿದ ರೀತಿ ಅಭೂತಪೂರ್ವ, ಅದು ಒಬ್ಬ ದೇಶದ ನಾಯಕನ ಲಕ್ಷಣ. 

 

   

         ಅದೇ ರೀತಿ 1971 ರಲ್ಲಿ ಪಾಕಿಸ್ಥಾನದ ಕಾಶ್ಮೀರ ಆಕ್ರಮಣ ಸಂಧರ್ಭದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂದಿ ತೆಗೆದು ಕೊಂಡ ನಿಲುವು ಯುದ್ಧ ಜಯಿಸಿದ ಪರಿ ಶ್ಲಾಘನೀಯ. ಆ ಸಂಧರ್ಭದಲ್ಲಿ ಆಕೆ ಮಾಡಿದ ವಿದೇಶ ಪ್ರವಾಸ ಪಾಕಿಸ್ಥಾನದ ಆಕ್ರಮಣ ನೀತಿಯ ಪರಿಚಯ ನೀಡಿ ಸಂಭವನೀಯ ಯುದ್ಧ ತಪ್ಪಿಸಲು ಅವರುಗಳ ಸಹಾಯ ಕೋರಿದ್ದು. ಅಮೇರಿಕಾದ ಸಪ್ತಮ ನೌಕಾಪಡೆಯನ್ನು ಪಾಕಿಸ್ಥಾನದ ಸಹಾಯಕ್ಕೆ ಹಿಂದೂ ಮಹಾ ಸಾಗರಕ್ಕೆ ಕಳುಹಿಸುವರೆಂಬ ಗುಮಾನಿಯಿದ್ದ ಸಂಧರ್ಭದಲ್ಲಿ ಅದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ರಶಿಯಾ ಅಮೇರಿಕಾ ತನ್ನ ನೌಕಾಪಡೆಯನ್ನು ರವಾನಿಸಿದರೆ ತಾನೂ ತನ್ನ ನೌಕಾಪಡೆ ಯನ್ನು ಭಾರತದ ರಕ್ಷಣೆಗೆ ಕಳುಹಿಸುವುದಾಗಿ ಘೋಷಿಸಿದಾಗ ಅಮೇರಿಕಾ ತನ್ನ ನಿಲುವನ್ನು ಬದಲಿಸಿ ಸಂಭವನೀಯ ಅಂತರ್ರಾಷ್ಟ್ರೀಯ ಹಸ್ತಕ್ಷೇಪವನ್ನು ತಪ್ಪಿಸಿತ್ತು. ಸಮರ್ಥ ನಾಯಕಿಯ ಗುಣಗಳು ಆಕೆಯಲ್ಲಿದ್ದವು, ಹೀಗಾಗಿ ಆಕೆ ಹದಿನಾಲ್ಕು ಬ್ಯಾಂಕುಗಳ ರಾಷ್ಟ್ರೀಕರಣ ಮಾಢಿದಳು, ಹಿಂದುಳಿದ ವರ್ಗಗಳನ್ನು ರಾಜಕೀಯದಲ್ಲಿ ಮುಂಚೂಣಿಗೆ ತಂದಳು, ಯುದ್ಧವನ್ನು ಸಮರ್ಥವಾಗಿ ಎದುರಿಸಿ ಜಯ ಸಾಧಿಸಿದಳು. 

 

       

      1997 ರಲ್ಲಿ ಮತ್ತೆ ಕಾರ್ಗಿಲ್ನಲ್ಲಿ ಪಾಕಿಸ್ಥಾನ ಆಕ್ರಮಣ ಮಾಡಿದಾಗ ಆಗಿನ ಎನ್ಡಿಎ ಒಕ್ಕೂಟದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಹ ಸಮರ್ಥವಾಗಿ ಆಗಿನ ತ್ವೇಷಮಯ ಪರಿಸ್ಥಿತಿಯನ್ನು ಎದುರಿಸಿ ಯುದ್ಧ ಗೆದ್ದರು.  ಆಗಲೂ ಸಹ ರಶಿಯಾದ ನೈತಿಕ ಬೆಂಬಲ ಭಾರತಕ್ಕಿತ್ತು. ಯುದ್ಧದ ಚದುರಂಗದಾಟ ಭಾರತದ ಗಡಿಯಲ್ಲಿ ಪ್ರಾರಂಭವಾಗಿದೆ. ಎಲ್ಲರೂ ರಕ್ಷಣಾತ್ಮಕವಾಗಿ ತಮ್ಮ ಪಾನ್ಗಳನ್ನು ನಡೆಸುತ್ತಿದ್ದಾರೆ. ಸೋಲು ಯಾರದು ಗೆಲುವು ಯಾರದು, ಗೆದ್ದು ಸೋಲುವವರು ಯಾರು ಸೋತು ಗೆಲ್ಲುವವರಾರು? ಕಾಲವೆ ನಿರ್ಧರಿಸಲಿದೆ. 

 

           

      ಪಾಕ್ ಮತ್ತು ಚೈನಾಗಳು ಮತ್ತೆ ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿರುವ ಇಂದಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಜನರಿಗೆ ಅಭಯ ಕೊಡಬೇಕಾದ ಪ್ರಧಾನಿ ಮೌನಕ್ಕೆ ಶರಣಾಗಿದ್ದಾರೆ. ಸಂಭವನೀಯ ಯುದ್ಧದ ಭೀತಿ ಜನ ಸಾಮಾನ್ಯರನ್ನು ಆವರಿಸಿ ಕೊಂಡಿದೆ. ಯುದ್ಧ ಸಂಭವಿಸುವುದು ಬೇಡ ಪರಿಸ್ಥಿತಿ ತಿಳಿಗೊಳ್ಳಲಿ. ಆದರೂ ಜನರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬ ಬೇಕಾದ ಪ್ರಧಾನಿ ಹಾಗೂ ಅಧಿನಾಯಕಿ ದುರ್ಬಲರಾಗಿ ಕಾಣುತ್ತಿದ್ದಾರೆ. ಭಾರತ ಸಮರ್ಥ ನಾಯಕತ್ವಕ್ಕಾಗಿ ಕಾಯುತ್ತಿದೆ. ಯಾರಾಗ ಬಹುದು ಆ ನಾಯಕ? ರಾಹುಲ ಗಾಂಧಿ, ನರೇಂದ್ರ ಮೋದಿ, ಲಾಲ್ಕೃಷ್ಣ ಅಡ್ವಾನಿ ಅಥವಾ ಮುಲಾಯಂ ಸಿಂಗ್ ಯಾದವ್ ಇಲ್ಲ ಇವರೆಲ್ಲರನ್ನು ಹಿಂದೆ ಸರಿಸಿ ಡಾರ್ಕ ಹಾರ್ಸ ಆಗಿ ಬೇರೋಬ್ಬರು ಬಂದು ದೆಹಲಿ ಸಿಂಹಾಸನವನ್ನು ಏರುವರೆ ? ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ, ಯಾರಾದರೂ ಬರಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸುವವರು ಬರಲಿ ಎನ್ನುವ ಆಶಯ ಪ್ರತಿಯೊಬ್ಬ ಭಾರತೀಯನದು. ಈ ಆಶಯ ತಪ್ಪಲ್ಲ ಅಲ್ಲವೆ?

 

                                                                                                             ***

 

Rating
No votes yet

Comments

Submitted by H A Patil Fri, 08/23/2013 - 20:38

ಮಾನ್ಯ ಸಂಪದಿಗರಲ್ಲಿ ವಿನಂತಿ

ಈ ಲೇಖನದ ತಲೆ ಬರಹದಲ್ಲಿ ತೂಗುಗತ್ತಿ ಎಂದು ಬರೆದುದು ತುಗುಗತ್ತಿ ಎಂದಾಗಿದೆ ದಯವಿಟ್ಟು ತಿದ್ದಿಕೊಂಡು ಓದುವುದು.
ಸಂಪದ ಬ್ಲಾಗ್‍ನಲ್ಲಿ ನೇರವಾಗಿ ಲೇಖನ ಬರೆಯುವುದಕ್ಕೆ ತುಂಬಾ ಸಮಯ ತೆಗೆದು ಕೊಳ್ಳುತ್ದೆ. ಅಂತರ್ಜಾಲದಲ್ಲಿ ತೊಂದರೆ ಉಂಟಾದಲ್ಲಿ ಲೇಖನವನ್ನು ಮರು ಬೆರಳಚ್ಚು ಮಾಡಬೇಕಾಗುತ್ತದೆ. ಇದು ತುಂಬಾ ಸಮಯ ಹಿಡಿಯುತ್ತದೆ. ಈ ಮೊದಲು ಇದ್ದಂತೆ ಮೈಕ್ರೋ ಸಾಫ್ಟ್ ವರ್ಡ ನಿಂದ ಲೇಖನವನ್ನು ಕಾಪಿ ಪೇಸ್ಟ್ ಮಾಡುವ ಸೌಲಭ್ಯ ಮುಂದುವರಿಸಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಈ ಸಲವೂ ಸಹ ನಾನು ಈ ಲೇಖನವನ್ನು ಕಾಪಿ ಪೇಸ್ಟ್ ಮಾಡಿದಾಗೆ ಪ್ಯಾರಾಗಳಲ್ಲಿ ವಿಂಗಡಣೆಯಾಗದೆ ಲೇಖನ ಪ್ರಕಟವಾಗಿದೆ, ಕಾರಣ ಗೊತ್ತಾಗುತ್ತಿಲ್ಲ. ದಯವಿಟ್ಟು ಈ ತೊಂದರೆ ನಿವಾರಿಸಿ ಕೊಳ್ಳುವುದು ಹೇಗೆಂದು ನಿರ್ದೇಶಿಸಿ.

Submitted by swara kamath Sun, 08/25/2013 - 19:33

ಪಾಟೀಲರಿಗೆ ನಮಸ್ಕಾರ
ಇಂದು ನಮ್ಮ ದೇಶ ಎದುರಿತ್ತಿರುವ ಜ್ವಲಂತ ಸಮಸ್ಯೆಯ ಕುರಿತು ಸವಿವರವಾಗಿ ತಿಳಿಸಿದ್ದೀರಿ.ಆದರೆ ನಮ್ಮ ಸರ್ಕಾರ ಒಂದು ನಿರ್ದಿಷ್ಟ ಹಜ್ಜೆ ಇಡುವ ಮುನ್ನ ತುಂಬಾ ಯೋಚಿಸುತ್ತಿರುವ ಹಾಗಿದೆ.ದೇಶದ ಆರ್ಥಿಕ ಪರಿಸ್ಥಿತಿ ಒಂದೆಡೆಯಾದರೆ,ರಕ್ಷಣಾ ಇಲಾಖೆಗೆ ಬೇಕಾಗಿರುವ ಆಧುನಿಕ
ಯುದ್ಧ ಸಾಮಗ್ರಿಗಳು,ಅಮೇರಿಕ ಹೇಳೀದ ಹಾಗೆ ಕೇಳಬೇಕಿರುವ ಅನಿವಾರ್ಯತೆ,ದೇಶದ ಅನೇಕ ನೆರೆ ರಾಷ್ಟ್ರಗಳೊಂದಿಗೆ ಸರಿಯಾಗಿರದ ಸಂಬಂಧ, ಹೀಗೆ ಪಟ್ಟಿಮಾಡುತ್ತಾ ಹೋದರೆ ಇನ್ನೂ ಬಹಳಷ್ಟಿವೆ.
ಆದರೂ ನಮ್ಮ ದೇಶದ ಗಡಿಯ ಭದ್ರತೆ ಕುರಿತು ನಾವು ಕಣ್ಣು ಮುಚ್ಚಿ ಕುಳಿತು ಕೊಳ್ಳದೆ ಸಮಯ ಬಂದಾಗ ಕಠಿಣ ಕ್ರಮ ಕೈಗೊಳ್ಳುವ ಛಾತಿ ಸರ್ಕಾರಕ್ಕೆ ಬೇಕೆಬೇಕು . ವಂದನೆಗಳು

Submitted by ಗಣೇಶ Sun, 08/25/2013 - 23:52

ಯುದ್ಧಕ್ಕೆ ಚೀನಾನೂ ತಯಾರಿಲ್ಲ, ಪಾಕೂ ಹೆದುರುಪುಕ್ಕ.. ವಿಶ್ವಸಂಸ್ಥೆ ಲೆಕ್ಕಕ್ಕೇ ಇಲ್ಲ. ನಾವು ಯಾಕೆ ನ್ಯಾಯ ಮಾರ್ಗದಲ್ಲಿರಬೇಕು ಅಂತ ಗೊತ್ತಾಗುತ್ತಿಲ್ಲ. ಯುದ್ಧ ಮಾಡುವುದು ಬೇಡ. ಅವರು ೫ ಮಂದಿಯನ್ನು ಕೊಂದ ಕೂಡಲೇ ೫೦ ಮಂದಿ ಆಕಡೆಯಿಂದ ಹೋಗುವಂತೆ ಬಾಂಬು ಹಾಕಬೇಕು. ಮತ್ತೆ ಹಿಂದೂ ಭಯೋತ್ಪಾದಕರ ಮೇಲೆ ಗೂಬೆ ಕೂರಿಸಿ, ಮಾತುಕತೆಗೆ ಪಾಕ್‌ನ ಕರೆಯಬೇಕು. ಇದು ಈ ಸರಕಾರದಿಂದ ಆಗುವ ಮಾತಲ್ಲ. ಬಿಜೆಪಿ ಆಡಳಿತಕ್ಕೆ ಬಂದರೆ ಈ ಸರಕಾರಕ್ಕಿಂತಲೂ ಕಡೆ..ಇನ್ನೇನು ದಾರಿ?:(

Submitted by anand33 Mon, 08/26/2013 - 17:24

ಯುದ್ಧ ಮಾಡಿ ಸಾಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಯುದ್ಧ ಎಂಬುದು ಅನಾಗರಿಕರ, ಯೋಚನೆ ಮಾಡಲಾರದ, ಕಾಡು ಮನುಷ್ಯರ ಮನೋಭಾವ. ಈ ಮನೋಭಾವವನ್ನು ಬದಲಾಯಿಸಲು ನಾವು ಪ್ರಯತ್ನಿಸಬೇಕು. ಚೀನವು 1962ರ ಯುದ್ಧದ ನಂತರ ಕಳೆದ ಐವತ್ತು ವರ್ಷಗಳಿಂದ ಯುದ್ಧಕ್ಕೆ ಬಂದಿಲ್ಲ. ಈಗ ಭಾರತದ ಬಳಿಯೂ ಅಣ್ವಸ್ತ್ರಗಳು ಇವೆ, ಪಾಕಿಸ್ತಾನದ ಬಳಿಯೂ ಇವೆ, ಚೀನಾದ ಬಳಿಯೂ ಇವೆ. ಹೀಗಾಗಿ ಚೀನಾ ಹಾಗೂ ಪಾಕಿಸ್ತಾನಗಳು ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ. ದೊಡ್ಡ ಮಟ್ಟಿನ ಯುದ್ಧ, ಆಕ್ರಮಣ ಇವೆಲ್ಲ ಇಂದು ಸಾಧ್ಯವಿಲ್ಲ ಏಕೆಂದರೆ ಪ್ರಪಂಚದಲ್ಲಿ ಮೊದಲಿನಂತೆ, ಮೊದಲಿನ ಪ್ರಮಾಣದಲ್ಲಿ ಯುದ್ಧಗಳು ನಡೆಯುತ್ತಿಲ್ಲ. ಪಾಕಿಸ್ತಾನವು ಕೂಡ ಭಾರತದೊಂದಿಗೆ ಯುದ್ಧಕ್ಕೆ ಬರುವ ಧೈರ್ಯ ಹೊಂದಿಲ್ಲ ಏಕೆಂದರೆ ಅದು ಭಾರತದೊಂದಿಗಿನ ಎಲ್ಲ ಯುದ್ಧಗಳಲ್ಲೂ ಸೋತಿದೆ. ಹೀಗಾಗಿ ನೇರವಾಗಿ ಯುದ್ಧಕ್ಕೆ ಬರುವ ಸಾಮರ್ಥ್ಯ ಅದಕ್ಕೆ ಇಲ್ಲ. ಅದರ ಕೈಯಿಂದ ಮಾಡಲು ಸಾಧ್ಯವಿರುವುದು ಭಯೋತ್ಪಾದನೆ ಮಾತ್ರ. ಇದನ್ನು ಪಾಕಿಸ್ತಾನ ಬಿಡುವ ಸಾಧ್ಯತೆ ಇಲ್ಲ. ಭಯೋತ್ಪಾದನೆಯನ್ನು ಬಿಟ್ಟು ಪಾಕಿಸ್ತಾನ ನಾಗರೀಕ ದೇಶವಾಗಬೇಕಾದರೆ ಅಲ್ಲಿ ಮೂಲಭೂತವಾದಿಗಳನ್ನು ಜನ ಹಿಮ್ಮೆಟ್ಟಿಸಬೇಕು. ಭಾರತದ ಜೊತೆಗಿನ ನಿರಂತರ ಸಂಘರ್ಷಕ್ಕೆ ಪಾಕಿಸ್ತಾನದ ಸೇನೆಯು ಮೂಲಭೂತವಾದಿಗಳ ಹಿಡಿತದಲ್ಲಿ ಇರುವುದು ಪ್ರಧಾನ ಕಾರಣ. ಪಾಕಿಸ್ತಾನದ ಸೇನೆ ಎಲ್ಲಿಯವರೆಗೆ ಮೂಲಭೂತವಾದಿಗಳ ಹಿಡಿತದಲ್ಲಿ ಇರುತ್ತದೋ ಅಲ್ಲಿಯವರೆಗೆ ಭಯೋತ್ಪಾದನೆ ನಿರಂತರ. ಹೀಗಾಗಿ ಇದನ್ನು ಯುದ್ಧದ ಮೂಲಕ ಬಗೆಹರಿಸಲು ಸಾಧ್ಯವೇ ಇಲ್ಲ. ನರೇಂದ್ರ ಮೋದಿ ಬಂದರೂ ಅಷ್ಟೇ ಅಥವಾ ಇನ್ಯಾರು ಬಂದರೂ ಅಷ್ಟೇ. ಪಾಕಿಸ್ತಾನದ ಸೇನೆಯನ್ನು ಯುದ್ಧದಲ್ಲಿ ಸೋಲಿಸಿ ಭಾರತದ ಜೊತೆ ಪಾಕಿಸ್ತಾನವನ್ನು ವಿಲೀನ ಮಾಡಿಕೊಂಡರೂ ಭಯೋತ್ಪಾದನೆಯ ಸಮಸ್ಯೆ ನಿಲ್ಲಲಾರದು ಏಕೆಂದರೆ ಭಯೋತ್ಪಾದನೆಗೆ ಮೂಲ ಕಾರಣ ಮೂಲಭೂತವಾದವೇ ಹೊರತು ಬೇರೆ ಕಾರಣಗಳು ಇಲ್ಲ. ಪಾಕಿಸ್ತಾನದ ಮೂಲಭೂತವಾದಕ್ಕೆ ಭಾರತದಲ್ಲಿ ಹಿಂದೂ ಮೂಲಭೂತವಾದವನ್ನು ಬೆಳೆಸುವುದು ಸೂಕ್ತವಲ್ಲ. ಭಾರತದಲ್ಲಿ ಹಿಂದೂ ಮೂಲಭೂತವಾದ ಬೆಳೆದರೆ ಪಾಕಿಸ್ತಾನದಂತೆ ಇಲ್ಲಿಯೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬರುವುದು ಖಚಿತ. ಹೀಗಾಗಿ ವಿದ್ಯಾವಂತರು, ಯೋಚನಾಶೀಲರು, ಬುದ್ಧಿಜೀವಿಗಳು, ವಿಜ್ಞಾನಿಗಳು ನಮ್ಮ ದೇಶದಲ್ಲಿ ಮೂಲಭೂತವಾದ ಬೆಳೆಯದಂತೆ ಕಟ್ಟೆಚ್ಚರ ವಹಿಸಬೇಕಾದ ಅಗತ್ಯ ಇದೆ. ದೇವರು, ಧರ್ಮ, ದನ ಇವುಗಳ ಹೆಸರಿನಲ್ಲಿ ರಾಜಕೀಯ ಮಾಡುವವರನ್ನು ದೇಶದಲ್ಲಿ ಬೆಳೆಸದೆ ಪ್ರಜಾಪ್ರಭುತ್ವ ಎತ್ತಿ ಹಿಡಿಯುವಂಥ ಜನರನ್ನು ಬೆಳೆಸಬೇಕಾದ ಅಗತ್ಯ ಇದೆ. ಪಾಕಿಸ್ತಾನವು ಭಯೋತ್ಪಾದನೆ ಮಾಡುತ್ತದೆ ಎಂದು ನಾವು ಅವರ ಮೇಲೆ ದಂಡೆತ್ತಿ ಹೋದರೆ ವಿಶೇಷ ಪ್ರಯೋಜನವೇನೂ ಇಲ್ಲ. ಹೀಗಾಗಿಯೇ ನಮ್ಮ ದೇಶವು ಬಹಳ ಯೋಚನೆ ಮಾಡಿಯೇ ಹೆಜ್ಜೆಗಳನ್ನು ಇಡುತ್ತಿದೆ. ಇದನ್ನು ತಪ್ಪು ಎಂದು ಹೇಳಲಾಗದು. ಈಗ ಪಾಕಿಸ್ತಾನ ಐದು ಸೈನಿಕರನ್ನು ಕೊಂದಿದೆ. ಹಾಗೆಂದು ಯುದ್ಧಕ್ಕೆ ಇಳಿದರೆ ನೂರಾರು ಸೈನಿಕರನ್ನು ಬಲಿಕೊಡಬೇಕಾಗುತ್ತದೆ. ಅಷ್ಟೆಲ್ಲ ಬಲಿ ಕೊಟ್ಟರೂ ಭಯೋತ್ಪಾದನೆ ನಿಲ್ಲುವ ಸಂಭವ ಇಲ್ಲ. ಹೀಗಾಗಿ ನಮ್ಮ ಸೈನಿಕರನ್ನು ಬಲಿ ಕೊಡುವುದು ಸಮಂಜಸವಲ್ಲ.

ಪಾಕಿಸ್ತಾನದ ಸಮಸ್ಯೆ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಗಿಂಥ ಅಲ್ಲಿ ಮೂಲಭೂತವಾದವೇ ಪ್ರಬಲವಾಗಿರುವುದು. ಅಲ್ಲಿ ಚುನಾಯಿತ ಸರ್ಕಾರದ ಮಾತನ್ನು ಸೈನ್ಯ ಕೇಳುವುದಿಲ್ಲ. ಚುನಾಯಿತ ಸರ್ಕಾರದ ಅಧೀನದಲ್ಲಿ ಸೈನ್ಯ ಅಲ್ಲಿ ಯಾವಾಗಲೂ ಇರುವುದಿಲ್ಲ. ಇದುವೇ ಸಮಸ್ಯೆಯ ಮೂಲ. ಇದನ್ನು ಬದಲಾಯಿಸಿ ಚುನಾಯಿತ ಸರ್ಕಾರದ ಅಧೀನದಲ್ಲಿ ಸೈನ್ಯ ಬರುವಂತೆ ಮಾಡುವುದೇ ಇದಕ್ಕೆ ಪರಿಹಾರ. ಅಲ್ಲಿಯವರೆಗೂ ಈ ಸಮಸ್ಯೆಗೆ ಪರಿಹಾರ ಇಲ್ಲ. ಭಾರತದ ವಿರುದ್ಧ ದ್ವೇಷ ಬೆಳೆಸಿ ಪಾಕಿಸ್ತಾನದ ರಾಜಕಾರಣಿಗಳು ಅಧಿಕಾರದ ಗದ್ದುಗೆ ಏರಿದರೆ ಇಲ್ಲಿ ಭಾರತದಲ್ಲಿಯೂ ಪಾಕಿಸ್ತಾನದ ವಿರುದ್ಧ ದ್ವೇಷ ಬೆಳೆಸಿ ಕೆಲವು ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ನೋಡುತ್ತಿವೆ. ಇಂಥ ಪ್ರವೃತ್ತಿ ಅಪಾಯಕಾರಿ, ಉನ್ಮದಕಾರಿ, ವಿನಾಶಕಾರಿಯೇ ಹೊರತು ಇದರಿಂದ ಯಾವ ಪ್ರಯೋಜನವೂ ಇಲ್ಲ.

Submitted by H A Patil Thu, 09/19/2013 - 20:38

ಶ್ರೀಯುತರುಗಳಾದ ರಮೇಶ್ ಕಾಮತ್, ಗಣೇಶ ಮತ್ತು ಆನಂದ ರವರಿಗೆ ವಂದನೆಗಳು
ತಾವುಗಳು ಈ ಲೇಖನಕ್ಕೆ ಬರೆದ ಪ್ರತಿಕ್ರಿಯೆಗಳನ್ನು ಈ ದಿನ ಓದಿದೆ, ಕಾರಣಾಂತರಗಳಿಂದ ಸಂಪದಕ್ಕೆ ಬರಲಾಗಿರಲಿಲ್ಲ.ನನ್ನ ಲೇಖನದ ಅಭಿಪ್ರಾಯ ಯುದ್ಧ ಅನಿವಾರ್ಯ ಅಂತಲ್ಲ ಎಷ್ಟು ದಿನಗಳೂ ಅಂತ ಈ ದೌರ್ಜನ್ಯವನ್ನು ಸಹಿಸುವುದು ಅಂತ, ಇತ್ತೀಚೆಗೆ ಬರ್ಮಾ ಸಹ ನಮ್ಮ ಗಡಿಯನ್ನು ಹತ್ತು ಕಿ.ಮೀ.ನಷ್ಟು ಅಕ್ರಮಣ ಮಾಡಿದೆ ಎಂಬ ಸುದ್ದಿಯನ್ನು ಪ್ರಿಂಟ್‍ ಮೀಡಿಯಾಗಳಲ್ಲಿ ಬಂದಿದೆ, ಇವೆಕ್ಕೆಲ್ಲ ಏನು ಪರಿಹಾರ, ಎಲ್ಲ ನಮ್ಮ ಗಡಿಯ ಭಾಗದ ದೇಶಗಳು ನಮ್ಮ ನೆಲವನ್ನು ಆಕ್ರಮಿಸಿ ಕೊಳ್ಳುತ್ತ ಹೊರಟರೆ ಮುಂದೇನು ಎನ್ನುವುದು ವರ್ತಮಾನದ ಯೋಚನೆ? ಹೀಗಾಗಿ ಈ ಲೇಖನ ಬರೆದೆ, ತಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.