ಹೀಗೊಂದು ಕತೆ
ಹೀಗೊಂದು ಕತೆ
===========
'ಈ ಕಾರು ಯಾರದು?"
ಶೃತಿ ಕೇಳಿದಾಗ, ಕಿಟಕಿಯಿಂದ ಬೀಸುತ್ತಿದ್ದ ಗಾಳಿಗೆ ಹಾರುತ್ತಿದ್ದ ಅವಳ ಮುಂಗುರುಳು ದಿಟ್ಟಿಸುತ್ತ ನುಡಿದ ಕಿರಣ
"ಇದಾ ನಮ್ಮದೆ , ತೆಗೆದುಕೊಂಡು ಆರು ತಿಂಗಳಾಯಿತು, ನನಗೆ ಅಂತಾನೆ ಅಪ್ಪ ತೆಗೆದುಕೊಂಡರು"
ವಾಕ್ಯದ ಕಡೆಯಲ್ಲೊಂದು ಸುಳ್ಳು ಸೇರಿತು. ಅದು ಅವಳನ್ನು ಮರಳು ಮಾಡಲು ಆಡಿದ ಸುಳ್ಳು.
ಶೃತಿಯ ಮನ ಅವಳ ಮುಂಗುರುಳಿನಂತೆ ಪಟ ಪಟ ಹಾರುತ್ತಿತ್ತು. ಪಕ್ಕದಲ್ಲಿ ಕುಳಿತ ಕಿರಣ ಅವಳಿಗೆ ಸರ್ವಸ್ವವಾಗಿ ಕಂಡ. ಏನೇನೊ ಕಲ್ಪನೆಗಳು ಮನದಲ್ಲಿ ಸಾಗಿಹೋದವು, ಅವನನ್ನು ಮದುವೆಯಾಗಿ , ಅವನ ಹೆಂಡತಿಯಾಗಿ ಇದೆ ಕಾರಿನಲ್ಲಿ ಅವನ ಪಕ್ಕದಲ್ಲಿ ಕುಳಿತುಹೋಗುವ ಕಲ್ಪನೆ ಅವಳಿಗೆ ಖುಷಿ ಕೊಟ್ಟಿತ್ತು.
ಅವರಿಬ್ಬರು ಒಂದೆ ಕಾಲೇಜಿನಲ್ಲಿ ಬಿ.ಕಾಂ. ನ ಕಡೆಯ ವರ್ಷದ ವಿಧ್ಯಾರ್ಥಿಗಳು. ಚೆನ್ನಾಗಿ ಓದುವರೆ ಇಬ್ಬರು ದಡ್ಡರೇನಲ್ಲ. ಈಗ ಒಂದು ವರ್ಷದಿಂದ ಪ್ರೇಮದಲ್ಲಿ ಬಿದ್ದವರು. ಅವಳ ಮನ ಯೋಚಿಸುತ್ತ ಇತ್ತು. ಇದೊಂದು ವರ್ಷ ಅಷ್ಟೆ ಬಿ.ಕಾಂ ಮುಗಿಯುತ್ತೆ, ನಂತರ ಜೀವನದ ಹೋರಾಟ. ನಮ್ಮಿಬ್ಬರ ಪ್ರೇಮದ ವಿಷಯವನ್ನು ಪರೀಕ್ಷೆ ಮುಗಿದ ನಂತರ ಹೇಳಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದಾರೆ ಇಬ್ಬರು ಆದರೆ ಹೇಳುವಷ್ಟು ದೈರ್ಯವಿನ್ನು ಒಟ್ಟುಗೂಡಿಲ್ಲ. ಹಾಗೆ ಕದ್ದು ಮುಚ್ಚಿ ಎಂದು ಪ್ರೇಮ ಮುಂದುವರೆದಿದೆ. ಕಾಲೇಜಿನ ಕೆಲ ಸ್ನೇಹಿತರಿಗೆ ಇವರಿಬ್ಬರ ಜೊತೆ ತಿರುಗಾಟ ಗೊತ್ತು.
ಅಂದು ಕಿರಣನ ಅಪ್ಪ ಮಂಗಳೂರಿಗೆ ಎಂದು ಹೋಗಿದ್ದರು. ಕಿರಣ ಅವರ ಅಮ್ಮನಿಗೆ ದುಂಬಾಲು ಬಿದ್ದ. ಇವತ್ತೊಂದು ದಿನ ಕಾರನ್ನು ಕಾಲೇಜಿಗೆ ಕೊಂಡೋಯ್ಯುವೆ ಎಂದು.
'ನಿನಗೆ ಇನ್ನು ಲೈಸನ್ಸ್ ಸಿಕ್ಕಿಲ್ಲವಲ್ಲೊ, ನಿಮ್ಮ ಅಪ್ಪನಿಗೆ ತಿಳಿದರೆ ದೊಡ್ಡ ರಂಪವಾಗುತ್ತೆ ಅಷ್ಟೆ, ಅದೆಲ್ಲ ಬೇಡ ಗಂಭೀರವಾಗಿ ದಿನನಿತ್ಯದಂತೆ ಕಾಲೇಜಿನ ಬಸ್ಸಿನಲ್ಲಿ ಹೋಗು"
"ನೀನು ಅಪ್ಪನಿಗೆ ಹೇಳಿದರೆ ತಾನೆ ಅವರಿಗೆ ತಿಳಿಯೋದು, ನಾನು ಇವತ್ತೊಂದು ದಿನ ಅಷ್ಟೆ, ಹುಷಾರಾಗಿ ಹೋಗಿ, ಬೇಗ ಮೊದಲಿನಂತೆ ತಂದಿಡುತ್ತೇನೆ ಅಮ್ಮ, ಅಪ್ಪನಿಗೆ ತಿಳಿಯಲ್ಲ"
ಆಕೆ ಮಗನನ್ನು ಹೆಚ್ಚು ತಡೆಯಲಾರಳು, ಕಡೆಗೊಮ್ಮೆ 'ಆಯಿತು, ಎಚ್ಚರ' ಅಂದಳು. ತಕ್ಷಣ ರೂಮಿಗೆ ಹೋಗಿ, ಶೃತಿಗೆ ಮೊಬೈಲ್ ಮಾಡಿದ
"ಈ ದಿನ ಕಾಲೇಜಿನ ಬಸ್ ಹತ್ತದೆ, ಸ್ವಲ್ಪ ಹಿಂದೆ ಬಂದು ಅಲ್ಲಿರುವ ಬ್ಯಾಂಕ್ ಮುಂದೆ ನಿಂತಿರು" ಎಂದು.
ಅವಳು, ಯಾಕೋ, ಎಂದರೆ, ನಿನಗೊಂದು ಸರ್ಪ್ರೈಸ್, ಎಂದ. ಅದರಂತೆ ಅವಳು ಕಾಯುತ್ತಿರುವಂತೆ ಅವನು ಕಾರಿನಲ್ಲಿ ಬಂದು 'ಹಾಯ್' ಎಂದಾಗ
ಅವಳಿಗೆ ಅಚ್ಚರಿ,
"ಒಳಗೆ ಬಾ ಹತ್ತು, ಕಾರಿನಲ್ಲಿ ಇವತ್ತು ಕಾಲೇಜಿಗೆ ಹೋಗೋಣ ನಾವಿಬ್ಬರೆ" ಎಂದಾಗ ಅವಳಿಗೆ ಸ್ವರ್ಗ ಮೂರೆ ಗೇಣು.
.
ಅದು ಸ್ವಲ್ಪ ಊರ ಹೊರಗಿದ್ದ ಕಾಲೇಜು, ಹೆದ್ದಾರಿಯಲ್ಲಿ ಕಾರು ಸಾಗುತ್ತಿತ್ತು, ತನ್ನತ್ತಲೆ ನೋಡುತ್ತಿದ್ದ ಅವನನ್ನು ಕುರಿತು ಹೇಳಿದಳು
"ಸ್ವಲ್ಪ ರಸ್ತೆ ನೋಡಿಕೊಂಡು ಓಡಿಸಪ್ಪ, ಮೊದಲೆ ಹೈವೇ, ಇನ್ನು ಯಾರಿಗಾದರು ಇಟ್ಟುಬಿಟ್ಟಿಯ, ಲೈಸನ್ಸ್ ಇದೆ ತಾನೆ" ಎಂದಳು, ಚೇಷ್ಟೆ ಮಾಡುತ್ತ
"ರಸ್ತೆ ನೋಡುತ್ತಿದ್ದರು ನಿನ್ನ ಮುಖವೆ ಕಾಣುತ್ತೆ ಬಿಡು, ಲೈಸನ್ಸ್ ಇನ್ನು ಸಿಕ್ಕಿಲ್ಲವಲ್ಲ" ಎಂದು ಅವಳನ್ನು ನೋಡಿ ತುಂಟ ನಗೆ ನಗುತ್ತ
"ಛೀ , ಹೋಗೊ, ನಿನ್ನದು ಬರಿ ತರಲೆ, ನಾನು ಕೇಳಿದ್ದು ಕಾರಿನ ಡ್ರೈವಿಂಗ್ ಲೈಸೆನ್ಸ್ " ಎಂದಳು ಅವಳು ನಾಚುತ್ತ
ಅವನು ಏನು ಹೇಳುತ್ತಿದ್ದನೊ, ಅವನ ಬಲಬಾಗದಲ್ಲಿ ದೊಡ್ಡ ಲಾರಿಯೊಂದು ಹಾದು ಹೋಯಿತು ಹೋಗುವಾಗ, ಅವನು ಹಾರ್ನ್ ಮಾಡಿದ, ಅಭ್ಯಾಸವಿಲ್ಲದ ಕಿರಣ ತಕ್ಷಣ ಅನ್ನುವಂತೆ ಸ್ಟೇರಿಂಗ ಎಡಗಡೆಗೆ ಸ್ವಲ್ಪ ತಿರುಗಿಸಿದ, ಎಡಬಾಗದಲ್ಲಿ ಎಂತದೋ ದಡ್ ಎಂಬ ದೊಡ್ಡ ಶಬ್ದವಾಯಿತು. ಶೃತಿ ಸಹ ಬೆಚ್ಚಿಬಿದ್ದಳು. ಏನಾಯಿತು ಎಂದು ಎಡಗಡೆ ನೋಡುವಾಗಲೆ ತಿಳಿಯಿತು, ಎಡಗಡೆ ಸ್ಕೂಟರಿನಲ್ಲಿ ಬರುತ್ತಿದ್ದ ಯಾರಿಗೊ ಕಾರು ತಗಲಿ, ಅವರು ಗಾಡಿಯಿಂದ ಉರುಳಿ ಬಿದ್ದಿದ್ದರು, ಶೃತಿಯ ತೀಕ್ಷ್ಣ ದೃಷ್ಟಿ ಹಿಂದಕ್ಕೆ ನೋಡುತ್ತಿತ್ತು, ಹಾಗೆ ಕನ್ನಡಿಯಲ್ಲಿ ನೋಡುತ್ತಿದ್ದ ಕಿರಣ ಸ್ವಲ್ಪ ಗಾಭರಿಯಾದ ಸ್ವಲ್ಪ ಮುಂದೆ ಬಂದವನು ಕಾರನ್ನು ಎಡಕ್ಕೆ ತೆಗೆದು ನಿಲ್ಲಿಸಿದ, ಅದು ಹೆದ್ದಾರಿ, ಬೆಳಗ್ಗೆ ಅಷ್ಟೊಂದು ವಾಹನ ಸಂಚಾರವಿರಲಿಲ್ಲ. ಅದು ಸ್ವಲ್ಪ ಊರಹೊರಗಿನ ಜಾಗ, ಕಾಲೇಜು ಇನ್ನು ಒಂದು ಕಿ.ಮೀ ಇತ್ತು ನಡುವೆ ಈ ಅಪತ್ತು.
ಶೃತಿ ಕಿಟಕಿಯಿಂದಲೆ ಹಿಂದಕ್ಕೆ ತಿರುಗಿ ನೋಡಿದಳು, ಅವಳ ಸೂಕ್ಷ್ಮವಾದ ದೃಷ್ಟಿ ಅಷ್ಟು ದೂರದಿಂದಲು ಸ್ಕೂಟರ್ ಹಾಗು ಸವಾರನನ್ನು ಗುರುತಿಸಿತು. ಅವಳ ಹೃದಯ ಬಾಯಿಗೆ ಬಂದಂತೆ ಆಗಿತ್ತು. ಹೌದು, ಕಿರಣ ತಗುಲಿಸಿ ಕೆಡವಿದ ಸ್ಕೂಟರ್, ತಮ್ಮದೆ , ಬಿದ್ದವರು ತನ್ನ ಅಪ್ಪ. ಅವಳ ಮನ ನೆನೆಯಿತು, ಅಪ್ಪನು ಹೆಚ್ಚು ಕಡಿಮೆ ಇದೆ ರಸ್ತೆಯನ್ನು ಬಳಸುತ್ತಾರೆ ಅವರ ಫ್ಯಾಕ್ಟರಿಗೆ ಹೋಗಲು. ಈಗ ಅವರಿಗೆ ಏನಾಯಿತೊ ಎಂಬ ಆತಂಕ. ಅದಕ್ಕಿಂತ ಹೆಚ್ಚಾಗಿ, ಒಂದು ವೇಳೆ ಅವರು ಕಾರಿನ ಹತ್ತಿರ ಬಂದರೆ ನಾನು ಕಣ್ಣಿಗೆ ಬೀಳುವೆ, ಅಲ್ಲಿಗೆ ತನ್ನ ಗತಿ ಮುಗಿಯಿತು,ಮೊದಲೆ ಅಪ್ಪನಿಗೆ ಕೋಪ ಜಾಸ್ತಿ. ಅವಳಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಹಾಗೆ ನೋಡುತ್ತಿರುವಾಗ, ಹಿಂದಿನಿಂದ ಬಂದ ಯಾರೊ ಮತ್ತೊಬ್ಬರು ಬೈಕ್ ನಿಲ್ಲಿಸಿ ಇಳಿದು ಬಂದು, ಅವಳ ಅಪ್ಪನ ಹತ್ತಿರ ಹೋಗಿ ಸಹಾಯ ಮಾಡುತ್ತಿರುವುದು ಗಮನಿಸಿದಳು. ಅವಳ ಅಪ್ಪ ಎದ್ದು ನಿಂತರು, ಬಂದವರು ಅವರ ಸ್ಕೂಟರನ್ನು ಎತ್ತುತ್ತಿದ್ದರು. ಅವಳ ಅಪ್ಪ ನಿಂತಿದ್ದನ್ನು ಕಾಣುವಾಗಲೆ ಅವಳಿಗೆ ದೈರ್ಯವಾಯಿತು. ಸದ್ಯ ಏನು ಆಗಿಲ್ಲ ಅನ್ನಿಸುತ್ತೆ. ಸ್ವಲ್ಪ ಏಟಾಗಿರಬಹುದು ಅಷ್ಟೆ ಅನ್ನಿಸಿತು
ಅವಳು ತಕ್ಷಣ ನಿರ್ಧರಿಸಿದಳು, ಅಲ್ಲಿ ನಿಂತರೆ ಸಾಕಷ್ಟು ಅಪಾಯ. ಮೊದಲೆ ಇವನಿಗೆ ಲೈಸನ್ಸ್ ಇದ್ದಹಾಗಿಲ್ಲ, ಆಕ್ಸಿಡೆಂಟ್ ಮಾಡಿದ್ದಾನೆ, ಅದು ಹೋಗಲಿ ಎಂದರೆ , ತನ್ನ ಅಪ್ಪನ ಸ್ಕೂಟರಿಗೆ ಗುದ್ದಿಸಿದ್ದಾನೆ, ಅಪ್ಪ ಈಗ ಬಂದರೆ ತನ್ನ ಚರ್ಮ ಸುಲಿಯುತ್ತಾರೆ ಅಷ್ಟೆ, ತಕ್ಷಣ ಕಿರಣನಿಗೆ ಹೇಳಿದಳು
"ಕಾರ್ ಸ್ಟಾರ್ಟ್ ಮಾಡು, ಮೊದಲು ಇಲ್ಲಿಂದ ಹೊರಡು" ಎಂದಳು,
ಅದಕ್ಕೆ ಕಿರಣ
"ಅಲ್ಲವೆ ಪಾಪ ಅವರಿಗೆ ಏನಾಯಿತೊ ಏನೊ, ಹೋಗಿ ವಿಚಾರಿಸೋಣ, " ಎಂದ
"ಅಲ್ಲವೊ ನಿನಗೆ ಬುದ್ದಿ ಇಲ್ಲ, ಮೊದಲೆ ನಿನಗೆ ಲೈಸನ್ಸ್ ಇಲ್ಲ ಅನ್ನುತ್ತಿ, ಈಗ ಅಲ್ಲಿ ಹೋದರೆ ಅಪಾಯವಷ್ಟೆ, ನಿನ್ನನ್ನು ಅವರೇನು ನೋಡಿಲ್ಲ, ಮೊದಲು ಇಲ್ಲಿಂದ ಹೊರಡು, ಅಲ್ಲದೆ ನಾನು ನೀನು ಜೊತೆಗಿದ್ದೇವೆ, ಈಗ ಗಲಾಟೆ ಎಲ್ಲ ಸರಿ ಹೋಗಲ್ಲ" ಎಂದಳು
ಅವನಿಗೂ ಸರಿ ಅನ್ನಿಸಿತು, ತಕ್ಷಣ ಕಾರು ಸ್ಟಾರ್ಟ್ ಮಾಡಿ ವೇಗವಾಗಿ ಹೊರಟ, ಸ್ವಲ್ಪ ದೂರಕ್ಕೆ ಬಲಕ್ಕೆ ತಿರುಗಿಸಿ, ಹೆದ್ದಾರಿಯಿಂದ ಹೊರಬಂದು, ಪಕ್ಕದ ರಸ್ತೆಯ ಮೂಲಕ ಹೇಗೊ ಕಾಲೇಜು ಸೇರಿ ಪಾರ್ಕ್ ಮಾಡಿ. ಇಬ್ಬರು ಕ್ಲಾಸ್ ಹತ್ತಿರ ಬರುವಾಗ, ಆಗಿನ್ನು ಪ್ರಾಧ್ಯಾಪಕರು ಕ್ಲಾಸ್ ರೂಮಿನ ಒಳಗೆ ಪ್ರವೇಶಿಸುತ್ತಿದ್ದರು.
.
.
.
ಆ ದಿನ ಶೃತಿಗೇಕೊ ಕ್ಲಾಸಿನಲ್ಲಿ ಪ್ರಾಧ್ಯಾಪಕರು ಮಾಡುತ್ತಿದ್ದ ಪಾಠಗಳ ಕಡೆ ಗಮನವಿಲ್ಲ. ಅವಳ ಮನ ಚಿಂತೆ ಮಾಡುತ್ತಿದ್ದು, ಅಪ್ಪನಿಗೆ ತುಂಬಾ ಪೆಟ್ಟಾಯಿತ ಎಂದು. ಎಲ್ಲೊ ಸಣ್ಣದೊಂದು ಅನುಮಾನ ಕಾರಿನ ಪಕ್ಕ ಬರುವಾಗ ಅಪ್ಪ ಏನಾದರು ನನ್ನನ್ನು ನೋಡಿದರಾ?. ಹೀಗೆ ಏನೇನೊ.
ಒಮ್ಮೆ ಮನೆಗೆ ಫೋನ್ ಮಾಡಲ ಅಂದುಕೊಂಡಳು. ಬೇಡ ಆಗ ಮನೆಯವರಿಗೆ ಅನುಮಾನ ಬರಬಹುದು. ಎಂದು ಇಲ್ಲದೆ ಹಾಗೆ ಮಾಡಿದರೆ, ಅಪ್ಪನಿಗೆ ಅಪಘಾತವಾದ ಸುದ್ದಿ ಇವಳಿಗೆ ಹೇಗೆ ತಿಳಿಯಿತು ಎಂದು ಯೋಚಿಸಬಹುದು. ಬದಲಾಗಿ ಅವರೆ ಮನೆಯಿಂದ ಮೊಬೈಲಿಗೆ ಕರೆ ಮಾಡಿದರೆ ಸರಿ ಆಗ ಸುದ್ದಿ ತಿಳಿಯುತ್ತದಲ್ಲ ಎಂದು ಕಾದಳು.
ಊಟದ ಸಮಯವಾಯಿತು. ಹೊರಗೆ ಸಿಕ್ಕ ಕಿರಣನಿಗೆ ಸಂಜೆ ತಾನು ಅವನ ಜೊತೆ ಬರುವದಿಲ್ಲವೆಂದು ತಿಳಿಸಿ ತಾನು ಬಸ್ಸಿನಲ್ಲಿಯೆ ಹೋಗುವದಾಗಿ ಹೇಳಿದಳು, ಅದೇಕೊ ಕಿರಣ ಸಹ ಅವಳನ್ನು ಬಲವಂತ ಮಾಡಲಿಲ್ಲ.ಅಲ್ಲದೆ ಅವನಿಗೆ ಬೇರೆ ಚಿಂತೆ ತಲೆ ತಿನ್ನುತ್ತಿತ್ತು. ತಾನು ಅಪ್ಪ ಊರಲ್ಲಿ ಇಲ್ಲದಾಗ ಕಾರು ತಂದಿರುವೆ, ಅದರೆ ತನ್ನ ಗ್ರಹಚಾರ ಯಾವುದೋ ಸ್ಕೂಟರಿಗೆ ತಗಲಿತು, ಅವನು ಬಿದ್ದದ್ದು ಹೋಗಲಿ, ಕಾಲೇಜಿನಲ್ಲಿ ಕಾರು ನಿಲ್ಲಿಸಿದಾಗ ನೋಡಿದರೆ ಕಾರಿನ ಎಡಬಾಗ ಹಿಂದಿನ ಬಾಗಿಲು ಪೂರ್ತಿಯಾಗಿ ಉಜ್ಜಿತ್ತು, ಬಾಗಿಲ ಹಿಡಿಕೆ ಹತ್ತಿರ ಕಿತ್ತು ಬಂದಿತ್ತು, ಬಹುಷಃ ಸ್ಕೂಟರಿನ ಹ್ಯಾಂಡಲ್ ಬಡಿದು ಹಾಗಾಗಿರಬಹುದು, ಈಗ ಮನೆಯಲ್ಲಿ ಅಮ್ಮನಿಗೆ ಏನು ಹೇಳಲಿ,ಅಪ್ಪ ಬಂದ ನಂತರ ಹೇಗೆ ಎದುರಿಸಲಿ.
ಅಪ್ಪ ಬರಲು ಇನ್ನು ಮೂರು ದಿನಗಳಿವೆ, ಸಂಜೆ ಹೇಗೊ ಅಮ್ಮನಿಗೆ ಕಾಣದಂತೆ ಕಾರನ್ನು ಗ್ಯಾರೇಜ್ ಸೇರಿಸಿದರೆ ಆಯ್ತು. ಅಪ್ಪ ಬಂದ ನಂತರ ಏನಾದರು ದಬಾಯಿಸಬಹುದು ಅನ್ನಿಸಿತು. ಈ ಚಿಂತೆಯ ನಡುವೆ ಅವನಿಗೆ ಶೃತಿ ಅವನ ಜೊತೆ ಬರುವದಿಲ್ಲ ಅಂದಿದ್ದು ಗಹನವಾಗಿ ಕಾಣಲಿಲ್ಲ
ಮಧ್ಯಾನ್ಹದ ತರಗತಿಗಳು ಪ್ರಾರಂಭವಾದಂತೆ, ಸ್ವಲ್ಪ ಹೊತ್ತಿನಲ್ಲಿ ಆಫೀಸಿನ ಅಟೆಂಡರ್ ಒಂದು ಚೀಟಿ ತಂದ. ಪ್ರಾಧ್ಯಾಪಕರು ಅದನ್ನು ಓದಿ, ಶೃತಿಯತ್ತ ತಿರುಗಿ
"ಶೃತಿ ನಿನಗಾಗಿ ಯಾರೊ ಕಾಯುತ್ತಿದ್ದಾರೆ, ಹೋಗು " ಎಂದರು
ಶೃತಿ ತನ್ನ ಬ್ಯಾಗ್, ಪುಸ್ತಕ ಎಲ್ಲವನ್ನು ಎತ್ತಿಕೊಂಡು ಹೊರಬಂದಳು. ನೋಡಿದರೆ ಆಫೀಸಿನ ಮುಂದೆ ಅವಳ ಅಣ್ಣ ಗುರುರಾಜ ನಿಂತಿದ್ದ. ಅವಳು ಹತ್ತಿರ ಹೋದವಳೆ ಆತಂಕದಿಂದ
"ಏನಣ್ಣ ಏಕೆ ಬಂದೆ " ಎಂದಳು.
ಅದಕ್ಕವನು
"ಏನಿಲ್ಲ, ಬಾ ಮನೆಗೆ ಹೋಗೋಣ, ಅಪ್ಪನಿಗೆ ಸ್ಕೂಟರಿಂದ ಬಿದ್ದು ಸ್ವಲ್ಪ ಅಪಾಯವಾಗಿದೆ, ನನ್ನ ಬೈಕ್ ತಂದಿರುವೆ ಬಾ" ಎಂದು ಹೊರಟನು.
ಅವಳಿಗೆ ಭಯವಾಯಿತು. ಅಲ್ಲದೆ ಅವಳಿಗೆ ತಾನು ಕುಳಿತ್ತಿದ್ದ ಕಾರೆ ಅವರಿಗೆ ಗುದ್ದಿರುವುದು ತಿಳಿದಿತ್ತು, ಕೆಳಗೆ ಬಿದ್ದು ಮತ್ತೆ ಎದ್ದು ನಿಂತರು. ಏನಾಗಿದೆಯೊ, ಕೈ ಅಥವ ಕಾಲಿನ ಮೂಳೆ ಏನಾದರು ಮುರಿಯಿತಾ, ದೇವರೆ ಹಾಗೆ ಆಗದಿರಲಪ್ಪ ಎಂದು ಬೇಡುತ್ತ , ಬೈಕ್ ಏರಿ ಕುಳಿತು ಅಣ್ಣನನ್ನು ಪ್ರಶ್ನಿಸಿದಳು
"ಏಕೊ ಏನಾಯಿತು ಸರಿಯಾಗಿ ಹೇಳು " ಎಂದು
ಅದಕ್ಕವನು, ವಿವರ ತಿಳಿಸಿದ, ಬೆಳಗ್ಗೆ ಫ್ಯಾಕ್ಟರಿಗೆ ಹೋಗುವಾಗ ಹಿಂದಿನಿಂದ ಬಂದ ಕಾರೊಂದು ಅವರಿಗೆ ಗುದ್ದಿತಂತೆ, ಅವರು ಕೆಳಗೆ ಬಿದ್ದಿದ್ದರೆ, ಹಿಂದೆ ಬರುತ್ತಿದ್ದ ಬೈಕ್ ನವರು ನಿಲ್ಲಿಸಿ ಸಹಾಯ ಮಾಡಿದರಂತೆ. ಹೇಗೋ ಮನೆಗೆ ಫೋನ್ ಮಾಡಿ ತಿಳಿಸಿದರು, ನಾನು ಅಲ್ಲಿಗೆ ಹೋಗುವಾಗ, ಅವರು ಹೆದ್ದಾರಿಯ ಪಕ್ಕದಲ್ಲಿಯೆ ಇದ್ದ ನರ್ಸಿಂಗ್ ಹೋಂ ಒಂದಕ್ಕೆ ಹೋಗಿದ್ದಾರೆ, ಆದರೆ ಅಲ್ಲಿಯ ಡಾಕ್ಟರ್ ಗಳು ಪರೀಕ್ಷಿಸಿ, ತಲೆಗೆ ಬಲವಾದ ಏಟು ಬಿದ್ದಿದ್ದೆ, ಮೆದುಳಿನಲ್ಲಿ ಸಣ್ಣ ಚಿಕ್ಕೆಯಷ್ಟು ರಕ್ತ ಬ್ಲಾಕ್ ಆದ ಹಾಗಿದೆ, ತಕ್ಷಣವೆ ಮಣಿಪಾಲ್ ಅಥವ ನಿಮಾನ್ಸ್ ಗೆ ಹೋಗುವುದು ಒಳ್ಳೆಯದು, ರಕ್ತ ಹೆಪ್ಪು ಜಾಸಿಯಾಗುತ್ತ ಹೋದರೆ ಯಾವಾಗ ಏನಾಗಬಹುದು ಹೇಳಲಾಗಲ್ಲ ಎಂದರಂತೆ.
" ನಾನು ಅಲ್ಲಿ ತಲುಪುವಾಗ ಸ್ವಲ್ಪ ತಡವೆ ಆಯಿತು, ತಕ್ಷಣ ಅಲ್ಲಿಂದ ಮಣಿಪಾಲ್ ಗೆ ಕರೆದೊಯ್ಯುವುದು ಒಳ್ಳೆಯದು ಎಂದು ಡಾಕ್ಟರ್ ತಿಳಿಸಿದರು, ನಾನು ಚಿಕ್ಕಪ್ಪ ಹಾಗು ರಾಜುಆಣ್ಣನಿಗೆ ಸಹಾಯಕ್ಕೆ ಫೋನ್ ಮಾಡಿ ಅಲ್ಲಿಂದ ಆಂಬ್ಯುಲೆನ್ಸ್ ಒಂದನ್ನು ಮಾಡಿ, ಚಿಕ್ಕಪ್ಪನಿಗೆ ಸೀದಾ ಮಣಿಪಾಲ್ ಗೆ ಬರುವಂತೆ ತಿಳಿಸಿ, ಅಂಬ್ಯುಲೆನ್ಸ್ ನಲ್ಲಿ ಹೊರಟೆ, ಆಂಬ್ಯೂಲೆನ್ಸ್ ಮಣಿಪಾಲ್ ತಲುಪುವ ಹೊತ್ತಿಗೆ ಅಪ್ಪನಿಗೆ ಪ್ರಜ್ಞೆ ತಪ್ಪಿ ಹೋಯ್ತು.
ಮಣಿಪಾಲಿಗೆ ಚಿಕ್ಕಪ್ಪ, ಹಾಗು ರಾಜು ಅಣ್ಣ ಸಹ ಬಂದಿದ್ದರು. ಅಲ್ಲಿ ಅಡ್ಮಿಟ್ ಮಾಡಿದೆವು. ನಾನು ಅಪ್ಪನನ್ನು ನೋಡಿದಾಗ ಸ್ವಲ್ಪ ಎಚ್ಚರವಾಗಿ ಇದ್ದರು, ಆದರೆ ಮಣಿಪಾಲ ತಲುಪುವಾಗ ನೆನಪು ತಪ್ಪಿ ಹೋಗಿತ್ತು" ಎಂದು ನಿಲ್ಲಿಸಿದ.
ಶೃತಿ ಗಮನಿಸಿದಳು, ಅವರ ಬೈಕ್ ಮನೆಯತ್ತ ಹೋಗುತ್ತಿತ್ತು,
ಅವಳು ಕೇಳಿದಳು
"ಅಲ್ಲವೋ ಈಗ ಅಪ್ಪ ಎಲ್ಲಿದ್ದಾರೆ, ನೀನು ಮನೆಗೆ ಏಕೆ ಹೋಗುತ್ತಿದ್ದೀಯ?"
"ಇಲ್ಲವೆ ಅಪ್ಪನನ್ನು ಈಗ ಮನೆಗೆ ಕರೆತಂದಿದ್ದೇವೆ"
ಅವಳು ಅರ್ಥವಾಗದೆ ಮತ್ತೆ ಕೇಳಿದಳು
"ಅಲ್ಲ ಮತ್ತೆ ಅವರಿಗೆ ಪ್ರಜ್ಞೆ ತಪ್ಪಿತು ಎಂದೆ, ಇಷ್ಟು ಬೇಗ ಮನೆಗೆ ಕಳಿಸಿದರ? ಸರಿಯಾಗಿ ಹೇಳು" ಅಂದಳು
ಮನೆಯ ತುದಿಯ ರಸ್ತೆಯಲ್ಲಿ ಗಾಡಿ ನಿಲ್ಲಿಸುತ್ತ ಹೇಳಿದ
"ಶೃತಿ ಗಾಭರಿ ಪಡಬೇಡ, ಸ್ವಲ್ಪ ಧೈರ್ಯ ತಂದುಕೊಳ್ಳಬೇಕು ನೀನು ಹಾಗು ನಾನು ಎಲ್ಲರು, ದೈರ್ಯವಾಗಿರು" ಎಂದ
ಅವಳಿಗೆ ಗಾಭರಿ ಜಾಸ್ತಿಯಾಗಿತ್ತು, ಕೂಗಿದಂತೆ ಕೇಳಿದಳು,ಕೆಳಗಿಳಿದು
"ಸರಿಯಾಗಿ ಹೇಳೋ, ದೈರ್ಯ ಎಂದರೆ ಏನು, ಮಣಿಪಾಲದಿಂದ ಇಷ್ಟು ಬೇಗ ಮನೆಗೆ ಬಂದಿದ್ದು ಯಾಕೆ" ಎಂದಳು
ಅವನು "ಇಲ್ಲವೆ, ಮಣಿಪಾಲದಲ್ಲಿ ಅವರನ್ನು ಅಡ್ಮಿಟ್ ಮಾಡಿದೆವು ಆದರೆ ಹತ್ತು ಹದಿನೈದು ನಿಮಿಷ ಅಷ್ಟೆ, ಆದರೆ ಡಾಕ್ಟರುಗಳು ಯಾವುದೆ ಚಿಕಿತ್ಸೆ ಕೊಡುವ ಮುಂಚೆಯೆ, ಅಪ್ಪ ನಮ್ಮನ್ನು ಬಿಟ್ಟು ಹೊರಟುಹೋದರು, ಅಲ್ಲಿ ಅವರಿಗೆ ಯಾವುದೆ ಪರೀಕ್ಷೆ , ಅಥವ ಔಷದಿ ಮಾತ್ರೆ ಏನನ್ನು ಕೊಡಲೇ ಇಲ್ಲ. ತಲೆಗೆ ಬಿದ್ದ ಏಟು ಅಷ್ಟು ಬೇಗ ಪರಿಣಾಮ ಬೀರಿತ್ತು, ಡಾಕ್ಟರ್ ಗಳು, ಇಲ್ಲ ಮೆದುಳಿಗೆ ನೇರ ಏಟು ಬಿದ್ದಿದ್ದೆ, ಮೆದುಳು ಜಜ್ಜಿದಂತೆ ಆಗಿಹೋಗಿದೆ, ಏನು ಮಾಡಲು ಸಾದ್ಯವಿಲ್ಲ, ಅಂದುಬಿಟ್ಟರು, ಅವರು ಏನುಮಾಡುವ ಮುಂಚೆಯೆ ಅಪ್ಪನ ಪ್ರಾಣ ಹೋಗಿ ಆಗಿತ್ತು, ನೀನು ಸ್ವಲ್ಪ ಧೈರ್ಯವಾಗಿರು, ನಮಗೆ ಅಮ್ಮನನ್ನೆ ಹಿಡಿಯಲು ಆಗುತ್ತಿಲ್ಲ" ಎಂದ, ಕಣ್ಣಲ್ಲಿ ನೀರು ಸುರಿಸುತ್ತ.
"ನಡಿ ಮನೆಗೆ ಹೋಗೋಣ, ಅಪ್ಪನ ದೇಹ ಮನೆಗೆ ತಂದಾಗಿದೆ" ಎಂದ
ಶೃತಿಯ ಕಾಲುಗಳಲ್ಲಿದ್ದ ಪೂರ್ಣ ಶಕ್ತಿ ಹೋದಂತಾಗಿ, ನೆಲಕ್ಕೆ ಕುಸಿದಳು.
======================================
http://narvangala.blogspot.in/2013/08/blog-post_25.html
Comments
ಉ: ಹೀಗೊಂದು ಕತೆ
ಒಮ್ಮೊಮ್ಮೊ ಹಿರಿಯರ ಮಾತು ಕೇಳದಿದ್ದರೆ ಎಂತಹ ಅನಾಹುತವಾಗಬಹುದು ಎನ್ನುವುದನ್ನು ಮಾರ್ಮಿಕವಾಗಿ ಚಿತ್ರಿಸಿದ್ದೀರ, ಅಭಿನಂದನೆಗಳು ಪಾರ್ಥ ಸರ್.
In reply to ಉ: ಹೀಗೊಂದು ಕತೆ by makara
ಉ: ಹೀಗೊಂದು ಕತೆ
+ 1
In reply to ಉ: ಹೀಗೊಂದು ಕತೆ by nageshamysore
ಉ: ಹೀಗೊಂದು ಕತೆ
ಶ್ರೀದರ್ ಹಾಗು ನಾಗೇಶಮೈಸೂರುರವರಿಗೆ ನಿಮ್ಮ ಪ್ರತಿಕ್ರಿಯೆಗೆ ನನ್ನ ವಂದನೆಗಳು
ಉ: ಹೀಗೊಂದು ಕತೆ
ಆಕ್ಸಿಡೆಂಟ್ ನಂತರದ ಪ್ರತೀ ಕ್ಷಣವೂ ಅಮೂಲ್ಯ. ಇದನ್ನು ವಿವರಿಸುವ ಉತ್ತಮ ಕತೆ ಪಾರ್ಥರ ಬತ್ತಳಿಕೆಯಿಂದ..
In reply to ಉ: ಹೀಗೊಂದು ಕತೆ by ಗಣೇಶ
ಉ: ಹೀಗೊಂದು ಕತೆ
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. ಹಾಗೆ ಪ್ರೀತಿಯ ಸುಳಿಯಲ್ಲಿ ಸಿಕ್ಕು ಹೆತ್ತ ತಂದೆ ಅಪಘಾತಕೊಳಗಾದಗಲು ಸಹಾಯಕ್ಕೆ ಬರದೆ ಹೆದರಿ ಓಡಿ ಹೋದ ಮಗಳ ಪ್ರೀತಿಯೆ ನನಗೆ ಅರಗಿಸಿಕೊಳ್ಳಲಾರದ ವಸ್ತು, ಅಪ್ಪ ಬೈದರು ಪರ್ವಾಗಿಲ್ಲ ಎಂದು ಬಂದು ತಂದೆಯನ್ನು ನರ್ಸಿಂಗ್ ಹೋಂ ಗೆ ಸೇರಿಸಿ ಮನೆಗೆ ಕಾಲ್ ಮಾಡಬಹುದಿತ್ತು, ಆದರೆ ನಡುರಸ್ತೆಯಲ್ಲಿ ತಂದೆಯನ್ನು ಬಿಟ್ಟು ಹೋದಾಗ ಅನ್ನಿಸಿದ್ದು, ಪ್ರೀತಿ ಹಾಗು ತಂದೆ ಇದರಲ್ಲಿ ಆಕೆ ತಂದೆಯನ್ನು ಬಿಟ್ಟು ಹೊರಟು ಹೋದಳು ಎಂದು :-(
ಉ: ಹೀಗೊಂದು ಕತೆ
ಪಾರ್ಥರೇ, ಅಯ್ಯೋ ಅನ್ನಿಸುವಂತೆ ಮಾಡಿಸುವ ಕಥೆಯನ್ನು ಸೃಷ್ಟಿಸಿದ್ದೀರಿ. ಒಳ್ಳೆಯ ಕಥೆಗಾರಿಕೆಯ ಕಲೆ ನಿಮಗೆ ಸಿದ್ಧಿಸಿದೆ. ಅಭಿನಂದನೆಗಳು.