ಮೈಸೂರಿನ ಮರೆಯಲಾಗದ ಮಹಾನುಭಾವ

ಮೈಸೂರಿನ ಮರೆಯಲಾಗದ ಮಹಾನುಭಾವ

ಅವರೊಬ್ಬ ಖ್ಯಾತ ವಕೀಲರು...ಕಚ್ಚೆಪಂಚೆ-ಹಣೆಯ ಮೇಲೆ ತಿರುನಾಮ...ಮೇಲೊಂದು ಕಪ್ಪು ಕೋಟು..ಇಷ್ಟೇ ಇವರ ವೇಷ ಭೂಷಣ.. ಮನೆಯಲ್ಲಿ ಬೆಳಿಗ್ಗೆ 4-30 ಗೆ ಅವರ ದಿನಚರಿ ಪ್ರಾರಂಭ. ಹಸುಗಳನ್ನು ಹೊರಗೆ ಕಟ್ಟಿ, ಹಾಲು ಕರೆದು, ಕೊಟ್ಟಿಗೆ ಶುಚಿ ಮಾಡಿ ನಂತರ ಸ್ನಾನ ಮಾಡಿ ಹೊರಗೆ ಕಾಂಪೌಂಡ್ ಮೇಲೆ ಅನ್ನವನ್ನು ಮೊಸರಿನಲ್ಲಿ ಕಲೆಸಿ ಮೂರ್ನಾಲ್ಕು ಎಲೆಯ ಮೇಲೆ ಹಾಕುತ್ತಿದ್ದರು. ಕೂಡಲೇ ಮಂಗಗಳು ಅದನ್ನು ತಿನ್ನುತ್ತಿದ್ದವು. ನಂತರ  ಈ ವಕೀಲರು  ಸ್ನಾನ ಮಾಡಿ ಕೋರ್ಟ್ ಗೆ ಹೋಗುತಿದ್ದರು. ಇದು ಅವರ ಕಾಯಕ.

ಆ ವಕೀಲರಿಗೆ ಒಂದು ಪದ್ದತಿಯಿತ್ತು. ಪ್ರತೀ ವರ್ಷ ತುಲಾ ಮಾಸದಲ್ಲಿ ಅನ್ನದಾನ ಮಾಡುವುದು ಅವರ ಪದ್ದತಿ. ಪಶ್ಚಿಮವಾಹಿನಿಯಲ್ಲಿ ಬೆಳಗ್ಗೆ ಅಡುಗೆ ಮಾಡಲು ಆರಂಭಿಸಿದರೆ ಮದ್ಯಾನ್ಹ ಜಾತಿ-ಬೇದವಿಲ್ಲದೆ ಊಟ ಬಡಿಸುವುದು ಅವರ ಕೆಲಸ. ಆ ಒಂದು ತಿಂಗಳಲ್ಲಿ ಊಟಮಾಡುತ್ತಿದ್ದವರು ನೂರಾರು ಜನ! ಇದು ಪ್ರತೀ ವರ್ಷದ ಕಾರ್ಯಕ್ರಮ. ಇದು ಮೈಸೂರು ಮಹಾರಾಜರಾದ ನಾಲ್ವಡಿಯವರ ಗಮನಕ್ಕೆ ಬರುತ್ತದೆ. ದಿವಾನ್ ಸರ್.ಮಿರ್ಜಾ ಇಸ್ಮಾಯಿಲ್ ಅವರನ್ನು "ನನ್ನ ರಾಜ್ಯದಲ್ಲಿ ಈ ರೀತಿಯ ಮಹಾ ದಾನಿ ಇರುವುದೇ ಹೆಮ್ಮೆ-ಅವರನ್ನು ಕರೆತನ್ನಿ "ಎಂದು ಕಳುಹಿಸುತ್ತಾರೆ. ಆದರೆ ಆ ವಕೀಲರು "ರಾಜ ಪ್ರತ್ಯಕ್ಷ ದೇವತಾ"- ನಾನು ಅವರನ್ನು ನೋಡಲು ಅರಮನೆಗೆ ಬರಲಾರೆ ಎನ್ನುತ್ತಾರೆ. ಮಹಾರಾಜರು ಅವರಿಗೆ ನೀಡಬಯಸಿದ ಸಹಾಯವನ್ನೂ ವಕೀಲರು ನಯವಾಗಿಯೇ ನಿರಾಕರಿಸುತ್ತಾರೆ. ಮುಂದೆಂದೋ ಮಹಾರಾಜರು ಕಾವೇರಿ ತೀರದಲ್ಲಿ ಅವರನ್ನು ಭೇಟಿಯಾಗುತ್ತಾರೆ.

ಇಂತಹ ವಕೀಲರ ಮನೆಯೆಂದರೆ ಅದೊಂದು ಧರ್ಮಛತ್ರ. ಮನೆ ತುಂಬಾ ವಾರಾನ್ನದ ಮಕ್ಕಳು. ಸ್ವತ: ವಕೀಲರಿಗೆ 6 ಮಕ್ಕಳು. ವಕೀಲಿ ವೃತ್ತಿಯಲ್ಲಿ ಬಂದ ಹಣವೇ ಜೀವನಾಧಾರವಾಗಿತ್ತು. ಕ್ರಮೇಣ ಮೈಸೂರಿನ  ಒಂಟಿಕೊಪ್ಪಲಿನಲ್ಲೊಂದು ಮನೆ ನಿರ್ಮಿಸಿದ ವಕೀಲರ ಮನೆಯಲ್ಲಿ ಗೃಹಪ್ರವೇಶಕ್ಕೆಂದು ಬಳಗವೆಲ್ಲಾ ಸೇರಿದ ಸಮಯದಲ್ಲಿ  ರಾಮಕೃಷ್ಣಾಶ್ರಮದ ಪ್ರತಿನಿಧಿಗಳು ಬರುತ್ತಾರೆ. ವಿದ್ಯಾರ್ಥಿನಿಲಯ ನಿರ್ಮಿಸಲು ಹಣ ಸಹಾಯ ಬೇಡಲು ಬಂದಿದ್ದರು ಅವರು. ಈ ವಕೀಲರು ಒಳಹೋಗಿ ಹೊಸ ಮನೆಯ ಪತ್ರವನ್ನೇ ಅವರಿಗಿತ್ತು "ಈ ಮನೆಯಲ್ಲೇ ವಿದ್ಯಾರ್ಥಿ ನಿಲಯ ಆರಂಭಿಸಿ ಎಂದು ಕೈ ಮುಗಿದರು!

ಅಂದೊಮ್ಮೆ ಕೋರ್ಟ್ ಮುಗಿಸಿ ಮನೆಗೆ ಬಂದ ವಕೀಲರು ಮನೆಯಲ್ಲಿ ಸಂಜೆ ಪೂಜೆ ಮುಗಿದ ನಂತರ ಅಲ್ಲಿದ್ದ ಡಾ.ಸುಭದ್ರಾ ಅವರನ್ನು "ಜೀವನದ ಬೈಲಾ ಏನು ಹೇಳುತ್ತದೆ" ಎಂದು ಕೇಳಿದರು. ಅವರು "ಬರುವಾಗ ಬೆತ್ತಲೆ-ಹೋಗುವಾಗ ಬೆತ್ತಲೆ" ಎಂದರು. ಕೂಡಲೇ ವಕೀಲರು ತಾನುಟ್ಟ ಬಟ್ಟೆಯನ್ನು ತೆಗೆದೆಸೆದು ಗತಪ್ರಾಣರಾದರು. ಪ್ರಾಣಪಕ್ಷಿ ಹಾರಿಹೋಗಿತ್ತು! ಇಚ್ಛಾಮರಣ ಅವರದು!

ಅವರ ಪಾರ್ಥಿವ ಶರೀರದ ದರ್ಶನಕ್ಕೆ ಹುಜೂರ್ ಸಕ್ರೆಟರಿ ತಂಬುಚೆಟ್ಟಿ ಆಗಮಿಸಿದ್ದರು. ಮುಖ್ಯನ್ಯಾಯಮೂರ್ತಿಗಳಾದ ಶ್ರೀಮಾನ್ ಹೊಂಬೇಗೌಡರೂ ಬಂದಿದ್ದರು ಎಂದು ಕೇಳಿದ್ದೇನೆ.

ಇಂತಹ ಮಹಾನು ಭಾವ ಮೈಸೂರಿನ ಖ್ಯಾತ ವಕೀಲರಾಗಿದ್ದ ಶ್ರೀಮಾನ್ ಎಂ.ಎಸ್.ರಂಗಾಚಾರ್ಯ ಅವರು. ಅವರು ವಿದ್ಯಾರ್ಥಿ ನಿಲಯಕ್ಕೆ ಕೊಟ್ಟ ಮನೆಯಿನ್ನೂ ಅಲ್ಲಿದೆ. ಅಲ್ಲಿ ಖ್ಯಾತ ನಾಮರು ವಾಸ್ತವ್ಯವಿದ್ದರು. ಇಂದಿಗೂ ಮೈಸೂರಿನ ಹಿರಿಯರ ಮನದಲ್ಲಿ ರಂಗಾಚಾರ್ಯರ ನೆನಪಿದೆ.

 

 

 

Comments

Submitted by makara Sun, 08/25/2013 - 17:13

ಶ್ರೀಮಾನ್ ಎಂ.ಎಸ್.ರಂಗಾಚಾರ್ಯ, ಇವರ ಬಗೆಗೆ ಚಿಕ್ಕದಾಗಿದ್ದರೂ ಚೊಕ್ಕವಾದ ಬರಹ. ಇವರು ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ ಗೃಹಕ್ಕೆ ತಮ್ಮ ಮನೆಯನ್ನೇ ಬಿಟ್ಟುಕೊಟ್ಟರೆಂದು ತಿಳಿಸಿದ್ದೀರ. ಸ್ವತಃ ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ಓದಿರುವ ನನಗೇ ಈ ವಿಷಯ ತಿಳಿದಿರಲಿಲ್ಲ. ಇಂತಹ ಪ್ರಾತಃ ಸ್ಮರಣೀಯರ ಬಗೆಗೆ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಅವರ ದಾನವಾಗಿ ಕೊಟ್ಟ ಮನೆ ಇನ್ನೂ ಮೈಸೂರಿನಲ್ಲಿ ಇದೆ ಎಂದು ಹೇಳಿದ್ದೀರ; ಅದು ಸದ್ಯ ಆಶ್ರಮವಿರುವ ಜಾಗದಲ್ಲಿದೆಯೋ ಅಥವಾ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಆವರಣದಲ್ಲಿದೆಯೋ ತಿಳಿಸಿ. ವಿದ್ಯಾಶಾಲೆ ಇರುವುದು ಯಾದವಗಿರಿಯಲ್ಲಿ ಹಾಗಾಗಿ ಅದು ಆಶ್ರಮದ ಬಳಿಯೇ ಇರಬಹುದೆನಿಸುತ್ತದೆ. ಸಾಧ್ಯವಾದರೆ ಆ ಮನೆಯ ಫೋಟೋ ಹಾಕಲು ಸಾಧ್ಯವೇ? ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by BALU Thu, 08/29/2013 - 21:52

In reply to by makara

ಬಂಡ್ರಿಯವರೇ ರಂಗಾಚಾರ್ಯರು ಕೊಟ್ಟ ಮನೆ ಈಗಲೂ ಅದೇ ರೂಪದಲ್ಲಿ ಮೈಸೂರಿನ ಒಂಟಿಕೊಪ್ಪಲ್ ನಲ್ಲಿದೆ. ರಂಗಾಚಾರ್ಯರ ಪತ್ನಿ ಮಹಾಲಕ್ಷ್ಮಮ್ಮ 3 ವರ್ಷಗಳ ಹಿಂದೆ ನಿಧನರಾದರು. ಅವರ ಮಗ ಎಂ.ಆರ್.ಪ್ರಸನ್ನ ತಂದೆಯಂತೆಯೇ ಪ್ರಖ್ಯಾತ ಲಾಯರ್, ಬೆಂಗಳೂರಿನಲ್ಲಿದ್ದಾರೆ. ರಂಗಾಚಾರ್ಯರ ಬಗ್ಗೆ ನಾನು ಬರೆದ ಲೇಖನದ ಬಗ್ಗೆ ಹಿರೇಮಗಳೂರು ಕಣ್ಣನ್ ಅವರು ತಮ್ಮ "ಬಾಳಿಗೊಂದು ಬೆಳಗು" ಕಾರ್ಯಕ್ರಮದಲ್ಲಿ ಉದಯ ವಾಹಿನಿಯಲ್ಲಿ ಮಾತನಾಡಿದ್ದಾರೆ, ಖ್ಯಾತ ಕವಿ ಕುವೆಂಪು, ಪ್ರಭುಶಂಕರ ಮುಂತಾದವರು ಆ ವಿದ್ಯಾರ್ಥಿ ನಿಲಯದಲ್ಲಿದ್ದರಂತೆ!