೧೦೬. ಲಲಿತಾ ಸಹಸ್ರನಾಮ ೩೯೮ರಿಂದ ೪೦೨ನೇ ನಾಮಗಳ ವಿವರಣೆ

೧೦೬. ಲಲಿತಾ ಸಹಸ್ರನಾಮ ೩೯೮ರಿಂದ ೪೦೨ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೩೯೮-೪೦೨

Avyaktā अव्यक्ता (398)

೩೯೮. ಅವ್ಯಕ್ತಾ

          ಇದನ್ನು ಹಿಂದಿನ ನಾಮದ ಮುಂದುವರಿಕೆ ಎನ್ನಬಹುದು. ಅವ್ಯಕ್ತಾ ಎನ್ನುವುದು ಪ್ರಕೃತಿಯ ಅಮೂರ್ತ ರೂಪವಾಗಿದ್ದು ಅದರಲ್ಲಿ ತ್ರಿಗುಣಗಳು ಸಮ ಪ್ರಮಾಣದಲ್ಲಿರುತ್ತವೆ. ಅವ್ಯಕ್ತವು ಪರಬ್ರಹ್ಮದ ಪ್ರಥಮ ಹಂತವಾಗಿದ್ದು ಅದನ್ನು ವಿವರಿಸಲಾಗದು, ಏಕೆಂದರೆ ಅದು ಪರಬ್ರಹ್ಮದ ಪರಿಶುದ್ಧವಾದ ಹಂತವಾಗಿದ್ದು ಅದಕ್ಕೆ ಯಾವುದೇ ವಿಧವಾದ ‘ಪೂರ್ವಜ್ಞತೆ’ಯಿಲ್ಲ. ಇದನ್ನೇ ತುರಿಯಾ ಅಥವಾ ಪ್ರಜ್ಞೆಯ ನಾಲ್ಕನೆಯ ಹಂತವೆಂದೂ ಕರೆಯಲಾಗುತ್ತದೆ ಉಳಿದ ಮೂರು ಜಾಗೃತ್, ಸ್ವಪ್ನ ಮತ್ತು ಸುಷುಪ್ತಿಯಾಗಿವೆ. ಇದು ಅದ್ವೈತದ ಸ್ಥಿತಿಯಲ್ಲಿದ್ದು ಇಲ್ಲಿ ಬ್ರಹ್ಮದ ಅದ್ವಿತೀಯ ಸ್ಥಿತಿಯ ಅರಿವಾಗುತ್ತದೆ.

         ಈ ಹಂತವನ್ನು ಬ್ರಹ್ಮಸೂತ್ರವು (೩.೨.೨೩) ವಿವರಿಸುತ್ತದೆ, ಅದು ತದವ್ಯಕ್ತಮಾಹ ಹಿ तदव्यक्तमाह हि ಎಂದು ಹೇಳುತ್ತದೆ. ಇದರ ಅರ್ಥವೇನೆಂದರೆ, "ಆ ಬ್ರಹ್ಮವು ರೂಪಾಂತರ ಹೊಂದದೇ ಇದೆ". ಇದರ ವಿವರಣೆಯನ್ನು ಮುಂದುವರೆಸುತ್ತಾ, "ಅದನ್ನು ಕಣ್ಣುಗಳಿಂದ ಅಥವಾ ಮಾತುಗಳಿಂದ ಅಥವಾ ಇತರ ಇಂದ್ರಿಯಗಳಿಂದ ವಿವರಿಸಲಾಗದ್ದು, ಅದನ್ನು ವ್ರತನಿಯಮಗಳ ಮೂಲಕ ಅಥವಾ ಕರ್ಮದಿಂದ ಪಡೆಯಲಾಗದು. ಅದು ಗ್ರಾಹ್ಯವಲ್ಲದ್ದು, ಏಕೆಂದರೆ ಅದನ್ನು ಯಾವಾಗಲೂ ಗ್ರಹಿಸಲಾಗದು" ಎಂದು ಹೇಳುತ್ತದೆ.

         ಯಾವಾಗ ನಿರ್ಗುಣ ಬ್ರಹ್ಮವು ಸೃಷ್ಟಿಸಲು ಬಯಸುತ್ತದೆಯೋ, ಆಗ ಮಾಯೆಯು ರೂಪಾಂತರಗೊಳ್ಳುತ್ತದೆ ಮತ್ತು ಹೀಗೆ ರೂಪಾಂತರ ಹೊಂದಿದ ಮಾಯೆಯ ಸ್ಥಿತಿಯೇ ಅವ್ಯಕ್ತಾ.

Vyaktāvyakta-svarūpiṇī व्यक्ताव्यक्त-स्वरूपिणी (399)

೩೯೯. ವ್ಯಕ್ತಾವ್ಯಕ್ತ-ಸ್ವರೂಪಿಣೀ

           ಅದು ವ್ಯಕ್ತಾ+ಅವ್ಯಕ್ತಾ=ವ್ಯಕ್ತಾವ್ಯಕ್ತಾ ಸ್ವರೂಪಿಣೀ ಆಗಿದೆ. ಆಕೆಯು ವ್ಯಕ್ತ ಅಥವಾ ಕಾಣಬರುವ ಮತ್ತು ಕಾಣಬರದೇ ಇರುವ ಅವ್ಯಕ್ತಾ ಎರಡರ ಸ್ವರೂಪವೂ ಹೌದು. ರೂಪಾಂತರ ಹೊಂದಿದ ಮೊದಲ ರೂಪವು ಇದಾಗಿರುದರಿಂದ ಇದನ್ನು ಮಹತ್ ಅಥವಾ ಮಹತ್ತರವಾದದು ಎಂದು ಕರೆಯುತ್ತಾರೆ. ಇದು ತೋರಿಕೆಯ ವಿಶ್ವದ ಮೂಲಭೂತ ಉಪಕರಣವಾಗಿದೆ. ಈ ಮಹತ್ ಎನ್ನುವುದು ಪರಮೋನ್ನತ ಜ್ಞಾನದಿಂದ ಕೂಡಿರುತ್ತದೆ. ಭೇದ ರಹಿತ ಪ್ರಕೃತಿಯೇ ಮಹತ್. ಮಹತ್‌ನಿಂದಲೇ ಮುಂದಿನ ವಿಕಾಸವು ಪ್ರಾರಂಭವಾಗುತ್ತದೆ. ವ್ಯಕ್ತ ಎಂದರೆ ನಾಶ ಹೊಂದಲ್ಪಡುವುದು ಮತ್ತು ಅವ್ಯಕ್ತ ಎಂದರೆ ನಾಶವಿಲ್ಲದ್ದು. ಇಲ್ಲಿ ಆತ್ಮ ಮತ್ತು ಪರಮಾತ್ಮದ ಸಂಭಂದವನ್ನು ಉಲ್ಲೇಖಿಸಲಾಗಿದೆ. ಒಟ್ಟಾರೆಯಾಗಿ ಈ ಹಂತವು ಸಂತೋಷ ಮತ್ತು ಅಂತಿಮ ಮುಕ್ತಿಯನ್ನು ಉಂಟುಮಾಡುತ್ತದೆ. ಈ ನಾಮವು ಸೃಷ್ಟಿಯ ಮೊದಲ ಸಂಕೇತ ಹಾಗೂ ಅಂತಿಮ ಮುಕ್ತಿಯ ಸಂಕೇತ ಎರಡೂ ಲಲಿತಾಂಬಿಕೆಯಿಂದಲೇ ಉಂಟಾಗುತ್ತವೆ ಎನ್ನುವ ಅರ್ಥವನ್ನು ಸೂಚಿಸುತ್ತದೆ.

Vyāpinī व्यापिनी (400)

೪೦೦. ವ್ಯಾಪಿನೀ

           ದೇವಿಯು ಸರ್ವವ್ಯಾಪಿಯಾಗಿದ್ದಾಳೆ. ಆಕೆಯು ಮೂಲಪ್ರಕೃತಿ ಮತ್ತು ಅವ್ಯಕ್ತಾ ಆಗಿರುವುದರಿಂದ ಅವಳು ಸರ್ವವ್ಯಾಪಿಯಾಗಿದ್ದಾಳೆ. ಅವಳನ್ನು ಬೇರೆಡೆ ‘ಏಕ’ ಎಂದು ಉಲ್ಲೇಖಿಸಲಾಗಿದೆ, ಏಕೆಂದರೆ ಆಕೆಯು ಎಲ್ಲೆಡೆ ವ್ಯಾಪಿಸಿರುವುದರಿಂದ ಅಥವಾ ಬ್ರಹ್ಮದ ಗುಣವಾಗಿರುವ ಸರ್ವಾಂತರಯಾಮಿಯಾಗಿರುವುದರಿಂದ.

Vividhākārā विविधाकारा (401)

೪೦೧. ವಿವಿಧಾಕಾರಾ

          ದೇವಿಗೆ ಅನೇಕ ರೂಪಗಳಿಗೆ. ಈ ಎಲ್ಲಾ ರೂಪಗಳು ಅವಳ ಮೂಲ ಪ್ರಕೃತಿಃ (೩೯೭ನೇ ನಾಮ) ರೂಪದಿಂದ ಉದ್ಭವವಾಗಿವೆ. ದೇವಿಯು ವಿಭಿನ್ನವಾದ ಕ್ರಿಯೆಗಳನ್ನು ಕೈಗೊಳ್ಳುವಾಗಿ ವಿಭಿನ್ನ ರೂಪಗಳನ್ನು ತಾಳುತ್ತಾಳೆ. ಸೃಷ್ಟಿಕರ್ತೆಯಾಗಿ ಆಕೆಯು ಪರಮ ಮಾತೆ ಅಥವಾ ಬ್ರಹ್ಮರೂಪಾ (ನಾಮ ೨೬೫) ಆಗಿದ್ದಾಳೆ. ಬ್ರಹ್ಮಾಂಡವನ್ನು ಸುಸ್ಥಿತಿಯಲ್ಲಿಡುವವಳಾಗಿ ಆಕೆಯು ವಿಷ್ಣು ರೂಪಿಣೀ (ನಾಮ ೮೯೩) ಆಗಿದ್ದಾಳೆ. ಅದೇ ವಿಧವಾಗಿ ಆಕೆಯು ರುದ್ರ ರೂಪಾ (ನಾಮ ೨೬೯) ಆಗಿದ್ದಾಳೆ. ಸಂಪೂರ್ಣ ಲಯಕ್ಕೆ ಸಾಕ್ಷಿಯಾಗಿ ದೇವಿಯು ಮಹಾ ಪ್ರಳಯ ಸಾಕ್ಷಿಣೀ (ನಾಮ ೫೭೧) ಆಗಿದ್ದಾಳೆ.

          ಈ ನಾಮವು ದೇವಿಯ ಎಲ್ಲಾ ರೂಪಗಳನ್ನು ಒಳಗೊಂಡಿದೆ. ಮೇಲೆ ತಿಳಿಸಿರುವಂತೆ ದೇವಿಯ ಪ್ರತಿಯೊಂದು ಕ್ರಿಯೆಯನ್ನೂ ಆಕೆಯ ಒಂದು ರೂಪವು ಪ್ರತಿನಿಧಿಸುತ್ತದೆ. ದೇವಿಯನ್ನು ೮೨೪ನೇ ನಾಮದಲ್ಲಿ ಬಹು ರೂಪಾ ಎಂದೂ ಸಂಭೋದಿಸಲಾಗಿದೆ.

Vidyāvidyā svarūpinī विद्याविद्या स्वरूपिनी (402)

೪೦೨. ವಿದ್ಯಾವಿದ್ಯಾ ಸ್ವರೂಪಿಣೀ

           ದೇವಿಯು ಜ್ಞಾನ ಮತ್ತು ಅಜ್ಞಾನಗಳೆರಡರ ರೂಪದಲ್ಲೂ ಇರುತ್ತಾಳೆ. ವಿದ್ಯಾ ಎಂದರೆ ಕೇವಲ ಜ್ಞಾನವಲ್ಲ, ಅದು ಆತ್ಮಸಾಕ್ಷಾತ್ಕರಕ್ಕೆ ಕೊಂಡೊಯ್ಯುವ ಪರಮೋನ್ನತ ಜ್ಞಾನವಾಗಿದೆ. ಅವಿದ್ಯಾ ಎನ್ನುವುದು ವಿದ್ಯಾ ಎನ್ನುವುದರ ವಿರುದ್ಧ ಪದ. ಈಶ ಉಪನಿಷತ್ತು (ಶ್ಲೋಕ ೧೧) ವಿದ್ಯಾ ಮತ್ತು ಅವಿದ್ಯಾ ಎನ್ನುವುದನ್ನು ಹೀಗೆ ವಿವರಿಸುತ್ತದೆ,

         ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ l

         ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ ll

         "ಯಾವನು ವಿದ್ಯೆ ಮತ್ತು ಅವಿದ್ಯೆ - ಇವೆರಡನ್ನೂ ಒಟ್ಟುಗೂಡಿಸಿ ಅರಿಯುತ್ತಾನೆಯೋ (ಅವನು) ಅವಿದ್ಯೆಯ ದ್ವಾರಾ ಮೃತ್ಯುವನ್ನು ದಾಟಿ, ವಿದ್ಯೆಯ ದ್ವಾರಾ ಅಮೃತವನ್ನು ಪಡೆಯುತ್ತಾನೆ"

        ವಿದ್ಯಾ ಎನ್ನುವುದು ಪರಮಾತ್ಮ ಅಥವಾ ಬ್ರಹ್ಮನೆಡೆಗೆ ನಮ್ಮನ್ನು ಕರೆದೊಯ್ಯುವ ಪರಿಶುದ್ಧ ಜ್ಞಾನವಾಗಿದೆ. ಅವಿದ್ಯಾ ಎನ್ನುವುದು ಪರಬ್ರಹ್ಮದ ಕುರಿತಾಗಿ ಇರುವ ಅಜ್ಞಾನ. ಅವಿದ್ಯೆಯ ಹಂತದಲ್ಲಿ ಒಬ್ಬನು ಯಜ್ಞ-ಯಾಗಾದಿಗಳನ್ನು, ಮತ್ತು ಬಾಹ್ಯ ಪೂಜೆಗಳನ್ನು ಮಾಡುತ್ತಾ ಇರುತ್ತಾನೆ. ಆದರೆ ಯಾವಾಗ ಈ ಎರಡೂ (ಮೊದಲನೆಯದು ಪರಬ್ರಹ್ಮದ ಕುರಿತಾದ ಜ್ಞಾನೋಪಾಸನೆ ಮತ್ತು ಎರಡನೆಯದು ಯಜ್ಞ-ಯಾಗಾದಿಗಳನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವುದು) ಸಮ್ಮಿಳತವಾಗುತ್ತವೆಯೋ, ಅಂದರೆ ಯಜ್ಞ-ಯಾಗಾದಿಗಳನ್ನು ಯಾವುದೇ ವಿಧವಾದ ಸ್ವಾರ್ಥ ಸಾಧನೆಗೆ ಕೈಗೊಳ್ಳುವುದಾಗಲಿ ಅಥವಾ ಯಾವುದೇ ವಿಧವಾದ ಫಲಗಳ ಬಗ್ಗೆ ಅಪೇಕ್ಷೆ ಇಟ್ಟುಕೊಳ್ಳದೇ ಇರುವುದು ಹಾಗು ಅಂತರಂಗ ಧ್ಯಾನದ ಮೂಲಕ ಆತ್ಮ-ಶೋಧನೆ ಮತ್ತು ಆತ್ಮಾವಲೋಕನ  ಮಾಡಿಕೊಳ್ಳುತ್ತಾ ಇರುತ್ತಾನೆಯೋ ಅವನು ಎರಡರಿಂದಲೂ ಲಾಭ ಪಡೆಯುತ್ತಾನೆ ಮತ್ತದರಿಂದ ಪರಮಾನಂದವನ್ನು ಪಡೆಯುತ್ತಾನೆ. ಆದರೆ ಯಾವಾಗ ಅವಿದ್ಯೆಯು ವಿದ್ಯೆಯೊಳಗೆ ಲಯವಾಗುತ್ತದೆಯೋ ಆಗ ಮಾತ್ರ ಅಂತಿಮ ಮುಕ್ತಿಯು ಹೊಂದಲ್ಪಡುತ್ತದೆ. ಮೊದಲೇ ಹೇಳಿದಂತೆ ದೇವಿಯು ಜ್ಞಾನ ಮತ್ತು ಅಜ್ಞಾನಗಳೆರಡರ ಸ್ವರೂಪವಾಗಿದ್ದಾಳೆ. ದೇವಿಯು ಜ್ಞಾನವನ್ನು ಕರುಣಿಸುವವಳು (ಆಧ್ಯಾತ್ಮ ಮಾರ್ಗವನ್ನು ತೋರುವವಳು) ಮತ್ತು ಅಜ್ಞಾನವನ್ನೂ ಸಹ. ಪರಬ್ರಹ್ಮದ ಬಗೆಗಿನ ಅಜ್ಞಾನವು ಮಾಯೆಯಿಂದ ಉಂಟಾಗುತ್ತದೆ.

         ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (ಅಧ್ಯಾಯ ೫.೧೨), "ಕರ್ಮ ಫಲವನ್ನು ಭಗವಂತನಿಗೆ ಅರ್ಪಿಸುವ ಮೂಲಕ ಕರ್ಮಯೋಗಿಯು ನಿರಂತರವಾದ ಶಾಂತಿಯನ್ನು ದೈವ-ಸಾಕ್ಷಾತ್ಕಾರದ ರೂಪದಲ್ಲಿ ಪಡೆಯುತ್ತಾನೆ; ಆದರೆ ಯಾರು ಸ್ವಾರ್ಥ ಧ್ಯೇಯೋದ್ದೇಶಗಳಿಂದ ಕರ್ಮ ಮಾಡುತ್ತಾನೆಯೋ ಅಥವಾ ಕರ್ಮ ಫಲಗಳ ಆಸೆಯಿಂದ ಕೆಲಸ ಮಾಡುತ್ತಾನೆಯೋ ಅವನು ಬಂಧಿಸಲ್ಪಡುತ್ತಾನೆ" ಎಂದು ಹೇಳುತ್ತಾನೆ.

******

       ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 398-402 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

 

 

Rating
Average: 4.5 (2 votes)

Comments

Submitted by nageshamysore Sat, 08/31/2013 - 18:02

ಶ್ರೀಧರರೆ, ೧೦೬. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯರೂಪ ಪರಿಷ್ಕರಣೆಗೆ.
ಹಾಗೆಯೆ ನಾನೂರನೆ ನಾಮಾವಳಿಯನ್ನು ಸುಲಲಿತವಾಗಿ ದಾಟಿದ / ದಾಟಿಸಿದ ಲಾರಾ ದಾಖಲೆಗೆ ಅಭಿನಂದನೆಗಳು :-)

ಲಲಿತಾ ಸಹಸ್ರನಾಮ ೩೯೮-೪೦೨
________________________

೩೯೮. ಅವ್ಯಕ್ತಾ
ವ್ಯಕ್ತವಾಗದ ಅಮೂರ್ತವೆ ಅವ್ಯಕ್ತ, ತ್ರಿಗುಣ ಜಡ ಸಮತೋಲಿತ
ಪರಬ್ರಹ್ಮದ ಪರಿಶುದ್ಧ ಪ್ರಥಮ್ಹಾಂತ, ವಿವರವಿಲ್ಲದ ಪೂರ್ವಜ್ಞತ
ತುರಿಯಾವಸ್ಥೆಯದ್ವೈತ ಸ್ಥಿತಿ, ಗ್ರಾಹ್ಯಾತೀತಾ ಅದ್ವಿತೀಯ ಬ್ರಹ್ಮ
ಅವ್ಯಕ್ತಾ ರೂಪದಿ ಲಲಿತೆ ವ್ಯಕ್ತ, ಸೃಷ್ಟಿಸ ಬಯಸೆ ನಿರ್ಗುಣ ಬ್ರಹ್ಮ!

೩೯೯. ವ್ಯಕ್ತಾವ್ಯಕ್ತ-ಸ್ವರೂಪಿಣೀ
ವ್ಯಕ್ತಾ ಜೀವಾತ್ಮ ವಿನಾಶಿ, ಅವ್ಯಕ್ತಾ ಪರಮಾತ್ಮ ಅವಿನಾಶಿ ಸಂಬಂಧಿತ
ಸೃಷ್ಟಿ - ಅಂತಿಮಮುಕ್ತಿ ಸಂಕೇತಿಸುತ, ವ್ಯಕ್ತಾವ್ಯಕ್ತ ಸ್ವರೂಪಿಣೀ ಲಲಿತ
ಕಾಣುವ ಕಾಣದ ಸ್ವರೂಪ, ರೂಪಾಂತರದ ಮೊದಲ ರೂಪ ಮಹತ್ತರ
ವಿಶ್ವವಿಕಾಸ ಮುನ್ನುಡಿ, ಪರಮೋನ್ನತಜ್ಞಾನ ಭೇದರಹಿತಪ್ರಕೃತಿ ಸಾರ!

೪೦೦. ವ್ಯಾಪಿನೀ
ಬ್ರಹ್ಮದ ಗುಣ ಸರ್ವಾಂತರ್ಯಾಮಿ, ಸರ್ವ ವ್ಯಾಪಿನೀ ಲಲಿತೆ
ಮೂಲಪ್ರಕೃತಿ ಅವ್ಯಕ್ತಾ ಸ್ವರೂಪಿಣಿ, ಅಸ್ಥಿತ್ವವೆ ವ್ಯಾಪಿಸಿದಂತೆ
ಎಲ್ಲದರೊಳಗಿಹಳವಳು ಏಕ, ತಾನೆ ತಾನಾದ ರೂಪವನೇಕ
ಚಲನಶೀಲತೆ ಪ್ರಕೃತಿಗುಣ, ವೃದ್ಧಿಸಿ ಶೂನ್ಯದಿಂದನನ್ಯತೆ ಲೆಕ್ಕ!

೪೦೧. ವಿವಿಧಾಕಾರ
ಚಲನಶೀಲ ಪ್ರಕೃತಿ ಸಹಜ ಗುಣ, ವಿವಿಧಾಕಾರದೆ ಪ್ರಸರಣ
ಪರಿಸರಕನುಗುಣವಾಗಿ ವಿಕಸನ, ವಿಕಾಸಾ ಕಾರ್ಯ ಕಾರಣ
ಮಹಾಪ್ರಳಯಸಾಕ್ಷಿಣಿ ಬ್ರಹ್ಮರೂಪಾ ವಿಷ್ಣುರೂಪಿಣಿಯಾಗುತೆ
ರುದ್ರರೂಪಾ ಪರಮಮಾತೆ ಸೃಷ್ಟಿಕರ್ತೆ ವಿವಿಧಾಕಾರ ಲಲಿತೆ!

೪೦೨. ವಿದ್ಯಾವಿದ್ಯಾ ಸ್ವರೂಪಿಣೀ 
ಅಜ್ಞಾನದ ನೋವ ಮಾಯೆಯಿಂದೊರೆಸುವ ಭಾವ, ಜ್ಞಾನಕಾಧ್ಯಾತ್ಮ
ಸಮೀಕರಿಸಲರಿತವ ಗೆಲಲವಿದ್ಯೆಯಿಂ ಮೃತ್ಯು, ವಿದ್ಯೆಗಮೃತಧಾಮ
ಯಜ್ಞ ಯಾಗ ಪೂಜೆ ಸಮ್ಮಿಲನವಾಗೆ ಪರಿಶುದ್ಧಬ್ರಹ್ಮಜ್ಞಾನ - ಪಕ್ವತೆ
ಧ್ಯಾನದಲಿ ಅವಿದ್ಯೆ ಕ್ಷಯಿಸೆ ವಿದ್ಯೆ, ವಿದ್ಯಾವಿದ್ಯಾ ಸ್ವರೂಪಿಣೀ ಲಲಿತೆ!
         

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು

ನಾಗೇಶರೆ,
ಈ ಕಂತಿನ ಎಲ್ಲಾ ಕವನಗಳು ಚೆನ್ನಾಗಿ ಮೂಡಿ ಬಂದಿವೆ. ಸ್ವಲ್ಪ ಅರ್ಥವ್ಯತ್ಯಯವುಂಟಾಗಿರುವುದು ಬಹುಶಃ ಮೊದಲನೇ ಪಂಕ್ತಿಯ ಎರಡನೇ ಸಾಲಿನಲ್ಲಿ. ಅದನ್ನು ಸ್ವಲ್ಪ ಸರಿಪಡಿಸಿದರೆ ಉಳಿದಂತೆ ಎಲ್ಲಾ ಸರಿಯಾಗಿದೆ. ಪೂರ್ವಜ್ಞತೆ ಇಲ್ಲ ಎಂದರೆ ಇದರ ಹಿನ್ನಲೆ ತಿಳಿಯದು. ತಂದೆ-ತಾಯಿ ಇದ್ದರೆ ಅದರ ಹಿನ್ನಲೆ ತಿಳಿಯುತ್ತದೆ ಅಥವಾ ಪೂರ್ವಾಪರಗಳು ತಿಳಿಯುತ್ತವೆ. ವಿವರಗಳು ಅಲಭ್ಯ ಎಂದಾಗ ವಿವರಗಳು ಇವೆ ಆದರೆ ಅವು ದೊರೆತಿಲ್ಲ ಎಂದಾಗುತ್ತದೆ ಆದ್ದರಿಂದ ಈ ಪದವನ್ನು ಸೂಕ್ತವಾಗಿ ಮಾರ್ಪಡಿಸಿದರೆ ಚೆನ್ನಾಗಿರುತ್ತದೆ.
೩೯೮. ಅವ್ಯಕ್ತಾ
:
ಪರಬ್ರಹ್ಮದ ಪರಿಶುದ್ಧ ಪ್ರಥಮ್ಹಾಂತ, ವಿವರವಿಲ್ಲದ ಪೂರ್ವಜ್ಞತ
ವಿವರವಿಲ್ಲದ ಪೂರ್ವಜ್ಞತ - ಸೂಕ್ತ ಪದ ಬಳಸಿ.

ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಪೂರ್ವಜ್ಞತೆಯ ವಿವರಣೆಗೆ ಧನ್ಯವಾದಗಳು. ಈ ಕೆಳಗಿನ ರೂಪಗಳಲ್ಲಿ ಯಾವುದಾದರೊಂದು ಸೂಕ್ತವಾಗಿ ಹೊಂದುವುದೆ?

೩೯೮. ಅವ್ಯಕ್ತಾ

1. ಅವ್ಯಕ್ತಾ
ವ್ಯಕ್ತವಾಗದ ಅಮೂರ್ತವೆ ಅವ್ಯಕ್ತ, ತ್ರಿಗುಣ ಜಡ ಸಮತೋಲಿತ
ಪರಬ್ರಹ್ಮದ ಪರಿಶುದ್ಧ ಪ್ರಥಮ್ಹಾಂತ, ಅರಿಯಲ್ಹೇಗೆ ಪೂರ್ವಜ್ಞತ

2. ಅವ್ಯಕ್ತಾ
ವ್ಯಕ್ತವಾಗದ ಅಮೂರ್ತವೆ ಅವ್ಯಕ್ತ, ತ್ರಿಗುಣ ಜಡ ಸಮತೋಲಿತ
ಪರಬ್ರಹ್ಮದ ಪರಿಶುದ್ಧ ಪ್ರಥಮ್ಹಾಂತ, ಸ್ವಯಂಭುಗೆಲ್ಲಿ ಪೂರ್ವಜ್ಞತ

3. ಅವ್ಯಕ್ತಾ
ವ್ಯಕ್ತವಾಗದ ಅಮೂರ್ತವೆ ಅವ್ಯಕ್ತ, ತ್ರಿಗುಣ ಜಡ ಸಮತೋಲಿತ
ಪರಬ್ರಹ್ಮದ ಪರಿಶುದ್ಧ ಪ್ರಥಮ್ಹಾಂತ, ಪೂರ್ವಾಪರಕೆ ಆದಿರೂಪ
 
ಕೊಸರು: ಅಂದಹಾಗೆ ಲಾರ ಒಂದೆ ಇನಿಂಗ್ಸಿನಲ್ಲಿ ದಾಟಿದ ನಾನೂರರ ಹೋಲಿಕೆಯದು. ನೀವಂದಂತೆ ಅಂತಿಮ ಗುರಿ - ಸಚಿನ್ನರ ಶತಕಗಳೆ ಶತಕವೆ :-)

ಧನ್ಯವಾದಗಳೊಂದಿಗೆ
-ನಾಗೇಶ ಮೈಸೂರು

ನಾಗೇಶರೆ,
೨ನೇ ಆವೃತ್ತಿ ಚೆನ್ನಾಗಿದೆ. ಅದನ್ನೇ ಅಂತಿಮಗೊಳಿಸಿ.

2. ಅವ್ಯಕ್ತಾ
ವ್ಯಕ್ತವಾಗದ ಅಮೂರ್ತವೆ ಅವ್ಯಕ್ತ, ತ್ರಿಗುಣ ಜಡ ಸಮತೋಲಿತ
ಪರಬ್ರಹ್ಮದ ಪರಿಶುದ್ಧ ಪ್ರಥಮ್ಹಾಂತ, ಸ್ವಯಂಭುಗೆಲ್ಲಿ ಪೂರ್ವಜ್ಞತ

ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ,

ಅವ್ಯಕ್ತಾ ತಿದ್ದಿದ ರೂಪದೊಂದಿಗೆ ಈ ಕಂತನ್ನು ಅಂತಿಮಗೊಳಿಸಿ ಹಾಕಿದ್ದೇನೆ.

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
 

Submitted by makara Sun, 09/01/2013 - 10:13

Ref: ಹಾಗೆಯೆ ನಾನೂರನೆ ನಾಮಾವಳಿಯನ್ನು ಸುಲಲಿತವಾಗಿ ದಾಟಿದ / ದಾಟಿಸಿದ ಲಾರಾ ದಾಖಲೆಗೆ ಅಭಿನಂದನೆಗಳು :-)
ನಾಗೇಶರೆ,
ನಿಮ್ಮ ಅಭಿನಂದನೆಗಳಿಗೆ ನಾನು ಚಿರಋಣಿ. ಈ ದಾಖಲೆಯ ಓಟ ಸಾಧ್ಯವಾಗಿರುವುದು ನಿಮ್ಮಿಂದ ಎಂದು ಮತ್ತೊಮ್ಮೆ ಜ್ಞಾಪಿಸಿಕೊಳ್ಳುತ್ತೇನೆ. ನಿಮ್ಮ ನಿರಂತರ ಕಾವ್ಯರೂಪದ ಪ್ರೋತ್ಸಾಹವಿಲ್ಲದಿದ್ದರೆ ಹೀಗೆ ಇದು ಮುಂದುವರೆಯುವುದು ಸುಲಭ ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ನಿರಂತರ ಪ್ರೋತ್ಸಾಹವನ್ನು ಕೊಡುತ್ತಿರುವ ಗಣೇಶ್.ಜಿ, ಪಾರ್ಥಸಾರಥಿಯಂತಹ ಅನೇಕ ಸಂಪದಿಗರನ್ನೂ ಸಹ ನಾನು ಈ ಸಂದರ್ಭದಲ್ಲಿ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇನೆ.
ಕೊನೆ ಹನಿ: ಇಲ್ಲಿ ಲಾರಾ ದಾಖಲೆ ಎಂದು ಬರೆದಿದ್ದೀರಾ; ಸಚಿನ್‌ರ ಶತಕಗಳ ಶತಕ ನಮ್ಮ ಗುರಿಯಾಗಲಿ :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ