ಹುಟ್ಟುಹಬ್ಬದ‌ ಉಡುಗೊರೆ

ಹುಟ್ಟುಹಬ್ಬದ‌ ಉಡುಗೊರೆ

ಗಿರಿ ತನ್ನ ಮುದ್ದು ಮಗಳು ಚಿನ್ನುವಿನ ಹುಟ್ಟುಹಬ್ಬವನ್ನು ಗಡದ್ದಾಗಿ  ಆಚರಿಸಬೇಕೆಂದು ಐಡಿಯಾ ಹಾಕಿಕೊಂಡಿದ್ದ.ಅವಳಿಗೇನು ಬೇಕೆಂದು ಅವಳನ್ನೇ ಕೇಳುವ ಅಂದುಕೊಂಡು "ಚಿನ್ನೂ.....ಬಾ ಇಲ್ಲಿ" ಎಂದು ಕರೆದ‌.

"ಎಂತ‌ ಪಪ್ಪಾ?" ಎನ್ನುತ್ತಾ ಬಂದಳು ಎಂಟು ವರ್ಷದ ಪೋರಿ."ಪುಟ್ಟಾ ಮುಂದಿನ ವಾರ ನಿನ್ನ ಬರ್ತ್ ಡೇ ಗೆ ಏನು ಗಿಫ್ಟ್ ಬೇಕು ಪಪ್ಪನ ಕಡೆಯಿಂದ‌?" 

ಮುಗುಳ್ನಗುತ್ತಾ ಕೇಳಿದ‌.ಅವಳು ಸ್ವಲ್ಪ ಹೊತ್ತು ಯೋಚಿಸಿ ' ನಾನು ಏನು ಕೇಳಿದ್ರೂ ಕೊಡಿಸ್ತೀರಾ?' ಪ್ರಶ್ನಾರ್ಥಕವಾಗಿ ತಂದೆಯ ಮುಖ ನೋಡಿದಳು.

ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಗರ್ವ ಇದ್ದ ಗಿರಿ, "ಆಫ್ ಕೋರ್ಸ್...ನೀನು ಏನು ಕೇಳಿದ್ರೂ ಕೊಡಿಸ್ತೇನೆ" ಎಂದ‌.

"ಪಪ್ಪಾ ನನ್ನ ಫ್ರೆಂಡ್ ಅದಿತಿ ಯಾವಾಗ್ಲೂ ಖುಷಿಯಾಗಿರುತ್ತಾಳೆ.ಚೆನ್ನಾಗಿ ಶ್ಲೋಕ ಹೇಳೋಕೆ ಕಲಿತಿದ್ದಾಳೆ.ಮೊಗ್ಗಿನ ಜಡೆ ಹಾಕ್ಕೊಂಡು ಬರ್ತಾಳೆ.

ತುಂಬಾ ಕತೆಗಳು ಗೊತ್ತು ಅವಳಿಗೆ.ನಂಗೂ ನಮ್ ಮನೆಯಲ್ಲಿ ಅಜ್ಜಿ ಇರ್ಬೇಕು  ಅನಿಸ್ತಿದೆ.ನಂಗೂ ಒಂದು ಅಜ್ಜೀನಾ ತಂದುಕೊಡ್ತೀಯಾ?" ಮುಗ್ಧವಾಗಿ ಕೇಳಿದಳು ಚಿನ್ನು.ಗಿರಿ ಅರೆಕ್ಷಣ ಗರಬಡಿದಂತಾದ‌!! ಹಳ್ಳಿಯಲ್ಲಿ ಒಂಟಿಯಾಗಿ 

ದಿನಕಳೆಯುತಿರುವ ಅಮ್ಮ ನೆನಪಾದಳು.ಪ್ರತಿತಿಂಗಳು ತಪ್ಪದೆ ಹಣ  ಕಳಿಸುವುದನ್ನು ಬಿಟ್ಟರೆ, 

ಮತ್ಯಾವತ್ತೂ ಅಮ್ಮನ ಬಗ್ಗೆ ಯೋಚಿಸುತ್ತಿರಲಿಲ್ಲ.ತುಂಬಾನೇ ಗಿಲ್ಟ್ ಫೀಲ್  ಆಯಿತು ಅವನಿಗೆ.

ಮಗಳಿಂದ ಕಲಿಯುತ್ತಿರುವುದಕ್ಕೆ ನಾಚಿಕೆಯಾಯಿತು.ಒಂದು ಕ್ಸಣ ಕಣ್ಣುಮುಚ್ಚಿಕೊಂಡು

" ಖಂಡಿತಾ ಚಿನ್ನು..ಅಜ್ಜಿಯನ್ನು ಕರೆದುಕೊಂಡು ಬರ್ತೇನೆ..." ಎಂದ‌.

ಅವಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದಳು............

Comments