೧೧೦. ಲಲಿತಾ ಸಹಸ್ರನಾಮ ೪೧೮ರಿಂದ ೪೨೧ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೪೧೮ - ೪೨೧
Jaḍa-śaktiḥ जड-शक्तिः (418)
೪೧೮. ಜಡ-ಶಕ್ತಿಃ
ದೇವಿಯು ಎಲ್ಲಾ ಅಚರವಾದ (ಜೀವವಿಲ್ಲದ/ಜಡ) ಶಕ್ತಿಗಳ ಶಕ್ತಿಯಾಗಿದ್ದಾಳೆ. ಸಾಮಾನ್ಯವಾಗಿ ಸೃಷ್ಟಿ ಕ್ರಿಯೆಯಲ್ಲಿ ಎರಡು ವಿಧವಾದ ಶಕ್ತಿಗಳನ್ನು ಉಲ್ಲೇಖಿಸಲಾಗುತ್ತದೆ. ಒಂದು ಸ್ಪಂದನ ರಹಿತವಾಗಿದ್ದು (ಜೀವವಿಲ್ಲದ್ದು) ಮತ್ತೊಂದು ಚರ (ಚಲನೆಯುಳ್ಳದ್ದು) ಅಥವಾ ಸ್ಪಂದನೆಯುಳ್ಳದ್ದು. ಇವೆರಡೂ ಸೃಜನಾತ್ಮಕ ಶಕ್ತಿಗಳು. ಚರ ಶಕ್ತಿಯನ್ನು ಪರಬ್ರಹ್ಮದ ಕ್ರಿಯಾಶೀಲ ಶಕ್ತಿಯೆಂದೂ ಕರೆಯಲಾಗುತ್ತದೆ. ಈ ನಾಮವು ಸ್ಪಂದನರಹಿತ ಸೃಷ್ಟಿಯ ಲಕ್ಷಣವನ್ನು ಕುರಿತಾಗಿ ಚರ್ಚಿಸುತ್ತದೆ. ಸ್ಪಂದನರಹಿತ ಶಕ್ತಿ ಅಥವಾ ಅಪರಾ-ಪ್ರಕೃತಿಯು ಪರಾ ಪ್ರಕೃತಿ ಅಥವಾ ಪರಿಶುದ್ಧ ಶಕ್ತಿಗೆ (ನಾಮ ೩೬೬ ’ಪರಾ’ ಆಗಿದೆ) ಹೋಲಿಸಿದಲ್ಲಿ ಕೆಳಗಿನ ಸ್ತರದ್ದಾಗಿದೆ. ಪ್ರಕೃತಿಯ ಈ ಎರಡು ರೂಪಾಂತರಗಳು ಮಾಯೆಯ ವಿಭಿನ್ನ ರೂಪಗಳಾಗಿದ್ದು ಅವು ಬ್ರಹ್ಮದ ಭಾಗವಾಗಿವೆ. ಮಾಯೆಯಿಲ್ಲದಿದ್ದರೆ ಬ್ರಹ್ಮವು ಸ್ವತಃ ಕಾರ್ಯನಿರ್ವಹಿಸಲಾರದು. ೪೧೬ನೇ ನಾಮದಲ್ಲಿ ದೇವಿಯನ್ನು ಚಿಚ್ಛಕ್ತಿಃ ಎಂದು ಸಂಭೋದಿಸಲಾಗಿತ್ತು. ಈ ನಾಮವು ಚಿಚ್ಛಕ್ತಿಯ ನೇರ ವಿರುದ್ಧ ಶಬ್ದವಾಗಿದೆ. ಆದರೆ ಚಿಚ್ಛಕ್ತಿ ಮತ್ತು ಜಡಶಕ್ತಿಗಳ ಸಂಯೋಗವಿಲ್ಲದಿದ್ದರೆ ಸೃಷ್ಟಿ ಕ್ರಿಯೆಯು ಎಂದಿಗೂ ಸಾಧ್ಯವಿಲ್ಲ.
ಕೃಷ್ಣನು ಭಗವದ್ಗೀತೆಯಲ್ಲಿ (೭.೪ ಮತ್ತು ೭.೫), "ನನ್ನ ರೂಪಾಂತರ ಹೊಂದಿದ ಪ್ರಕೃತಿಯು ಎಂಟು ವಿಧವಾದ ವೈವಿಧ್ಯತೆಗಳಿಂದ ಕೂಡಿದೆ - ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ (ಮೂಲ ವಸ್ತು) ಮತ್ತು ಅವುಗಳೊಂದಿಗೆ ಮನಸ್ಸು, ಬುದ್ದಿ ಹಾಗೂ ಅಹಂಕಾರಗಳೂ ಇವೆ (ಅಂತಃಕರಣದ ನಾಲ್ಕರಲ್ಲಿ ಮೂರು ವಸ್ತುಗಳು). ಇದು ನನ್ನ ಕೆಳಸ್ತರದ ಪ್ರಕೃತಿ (ಅಪರಾ-ಪ್ರಕೃತಿ). ಆದರೆ ನನ್ನ ವಿಭಿನ್ನವಾದ ಮತ್ತು ಉನ್ನತವಾದ ಪ್ರಕೃತಿಯು (ಪರಾ-ಪ್ರಕೃತಿ) ’ಜೀವ’ವಾಗಿದ್ದು, ಆತ್ಮಪ್ರಜ್ಞೆ ಮತ್ತು ಜೀವ ತತ್ವಗಳಿಂದ ಕೂಡಿದ ಅದು ಬ್ರಹ್ಮಾಂಡವನ್ನು ಸುಸ್ಥಿತಿಯಲ್ಲಿಡುತ್ತದೆ ಎನ್ನುವುದನ್ನು ಅರಿತುಕೋ", ಎಂದು ಹೇಳಿದ್ದಾನೆ. ಜಡ ಶಕ್ತಿಯು ಸಗುಣ ಬ್ರಹ್ಮದ ಭಾಗವಾಗಿದೆ. ಈ ಸಗುಣ ಬ್ರಹ್ಮವು ಚರ ಮತ್ತು ಅಚರ ಶಕ್ತಿಗಳೆರಡನ್ನೂ ಸೃಷ್ಟಿಕ್ರಿಯೆಗಾಗಿ ಬಳಸುತ್ತದೆ. ಮೂರನೆಯ ವಸ್ತುವೊಂದನ್ನು ಸೃಷ್ಟಿಸಬೇಕಾದರೆ ಅದಕ್ಕೆ ಎರಡು ವಸ್ತುಗಳು ಇರಬೇಕು ಎನ್ನುವ ತತ್ವದ ಆಧಾರದ ಮೇಲೆ ಇದು ಅವಲಂಬಿತವಾಗಿದೆ. ಜಡಶಕ್ತಿಯು ಈ ವಸ್ತು/ಭೌತಿಕ ಪ್ರಪಂಚದ (ಪ್ರಜ್ಞೆಯುಳ್ಳ ಮನಸ್ಸು ವಸ್ತು ಪ್ರಪಂಚದ ಗುಣವನ್ನು ಹೊಂದಿದೆ) ಸೃಷ್ಟಿಗೆ ಕಾರಣವಾಗಿದೆ; ಇದನ್ನು ಮುಂದಿನ ನಾಮದಲ್ಲಿ ವಿವರಿಸಲಾಗಿದೆ.
Jaḍātmikā जडात्मिका (419)
೪೧೯. ಜಡಾತ್ಮಿಕಾ
ಹಿಂದಿನ ನಾಮದಲ್ಲಿ ಚರ್ಚಿಸಿದಂತೆ, ಮಾಯೆಯ ಈ ಭೌತಿಕ ಪ್ರಪಂಚದಲ್ಲಿ ದೇವಿಯು ಅಸ್ತಿತ್ವದಲ್ಲಿರುತ್ತಾಳೆ. ಬ್ರಹ್ಮವೊಂದನ್ನು ಹೊರತು ಪಡಿಸಿ ಮಿಕ್ಕೆಲ್ಲವೂ ಮಾಯೆ ಎನಿಸಿಕೊಳ್ಳುತ್ತದೆ. ಯಾವಾಗ ಬ್ರಹ್ಮಾಂಡವನ್ನು ವಸ್ತುವೆಂದು ಕರೆಯಲಾಗುತ್ತದೆಯೋ ಆಗ ಪರಬ್ರಹ್ಮವನ್ನು ಅರಿಯುವುದನ್ನು ವಿಷಯವೆಂದು ಕರೆಯಬಹುದು.
ವಿಷಯ ಮತ್ತು ವಸ್ತುಗಳ ಕುರಿತು ಹೆಚ್ಚಿನ ವಿವರಣೆಗಳು:
ಈಗ ನಾವು ಬ್ರಹ್ಮದ ವಿಷಯ ಮತ್ತು ವಸ್ತುಗಳ ತತ್ವವನ್ನು ತಿಳಿಯಲು ಪ್ರಯತ್ನಿಸೋಣ. ನಾವು ಏನನ್ನು ನೋಡಲು ಸಾಧ್ಯವಿಲ್ಲವೋ ಅದು ವಸ್ತುವಲ್ಲ. ಒಂದು ವೇಳೆ ಬ್ರಹ್ಮವು ವಸ್ತುವಾದರೆ ನಾವು ಅದನ್ನು ತಿಳಿದುಕೊಳ್ಳಲು ಮೊದಲು ಅದನ್ನು ನೋಡಿರಬೇಕು. ನಾವು ಬ್ರಹ್ಮವನ್ನು ನೋಡಲು ಸಾಧ್ಯವಾಗದು. ಶಾಸ್ತ್ರಗಳೂ ಸಹ ಬ್ರಹ್ಮಕ್ಕೆ ಯಾವುದೇ ವಿಧವಾದ ರೂಪವನ್ನು ಕೊಟ್ಟಿಲ್ಲ. ಎರಡನೆಯದಾಗಿ, ನಮ್ಮನ್ನು ಹೊರತು ಪಡಿಸಿ ಯಾವುದು ಬೇಕಾದರೂ ವಸ್ತುವಾಗಬಹುದು. ಏಕೆ, ’ನಾನು’ ಎನ್ನುವುದನ್ನು ವಸ್ತುವೆಂದು ಕರೆಯಲಾಗುವುದಿಲ್ಲವೆಂದರೆ ನಾವು ನಮ್ಮ ಜ್ಞಾನವನ್ನು ಬ್ರಹ್ಮವನ್ನು ಅರಿಯಲು ಉಪಯೋಗಿಸುತ್ತಿದ್ದೇವೆ. ನಾವು ಜ್ಞಾನವನ್ನು ಹೇಗೆ ಪಡೆಯುತ್ತೇವೆ? ನಾವು ನಮ್ಮ ಸುತ್ತಲಿನ ವಸ್ತುಗಳಿಂದ ಜ್ಞಾನವನ್ನು ಪಡೆಯುತ್ತೇವೆ. ಮರವು (ವೃಕ್ಷವು) ಒಂದು ವಸ್ತುವಾಗಿದ್ದು ನಾವು ಅದನ್ನು ನೋಡುವುದರ ಮೂಲಕ ಅದರ ಬಗೆಗಿನ ಜ್ಞಾನವನ್ನು ಪಡೆಯುತ್ತೇವೆ. ನಾವು ನಮ್ಮ ಪಂಚೇಂದ್ರಿಯಗಳನ್ನು ಜ್ಞಾನವನ್ನು ಸಂಪಾದಿಸಲು ಉಪಯೋಗಿಸುತ್ತೇವೆ. ಜ್ಞಾನವು ನಮಗೆ ವಸ್ತುಗಳ ಮೂಲಕವೇ ಲಭ್ಯವಾಗುತ್ತದೆ. ಎಲ್ಲಾ ವಸ್ತುಗಳು ಭೌತಿಕವಾಗಿ ಅಸ್ತಿತ್ವದಲ್ಲಿರುವುದರಿಂದ ಅವೆಲ್ಲವೂ ಒಂದು ದಿನ ನಶಿಸುತ್ತವೆ. ಅದೇ ವಿಧವಾಗಿ ನೀವು ಬ್ರಹ್ಮವನ್ನು ಒಂದು ವಸ್ತುವಾಗಿ ನೋಡಿದರೆ ಅವನು ಭೌತಿಕವಾಗಿ ಅಸ್ತಿತ್ವದಲ್ಲಿರಬೇಕಾಗುತ್ತದೆ. ಅವನು ಒಂದು ವೇಳೆ ಭೌತಿಕವಾಗಿ ಅಸ್ತಿತ್ವದಲ್ಲಿದ್ದರೆ ಅವನೂ ಸಹ ಒಂದು ದಿವಸ ನಾಶಹೊಂದಬೇಕು. ಬ್ರಹ್ಮವು ನಮಗೆ ಕಾಣಿಸುವುದಿಲ್ಲ ಅಥವಾ ಅದು ಇತರೆಲ್ಲಾ ವಸ್ತುಗಳಂತೆ ನಶಿಸುವುದಿಲ್ಲ. ಇದು ಬ್ರಹ್ಮವು ವಸ್ತುವಲ್ಲ ಎನ್ನುವುದನ್ನು ದೃಢಪಡಿಸುವ ಮತ್ತೊಂದು ಪುರಾವೆಯಾಗಿದೆ. ನಮ್ಮ ಅನುಕೂಲಕ್ಕೋಸ್ಕರ ನಾವು ಅವನನ್ನು ವಸ್ತುವಾಗಿಸಿ ಅವನಿಗೆ ಅನೇಕ ರೂಪಗಳನ್ನು ಆರೋಪಿಸುತ್ತೇವೆ. ಆದರೆ ಈ ರೂಪಗಳು ವಿಶೇಷವಾದ ಮಹತ್ವವನ್ನು ಹೊಂದಿಲ್ಲವೆಂದಲ್ಲ, ಅವುಗಳನ್ನು ಮುಂದೆ ಚರ್ಚಿಸೋಣ. ಮುಂದುವರೆಸುವ ದೃಷ್ಟಿಯಿಂದ ಸಧ್ಯಕ್ಕೆ ಬ್ರಹ್ಮವು ಒಂದು ವಸ್ತುವಲ್ಲ ಎಂದು ನಿರ್ಧರಿಸೋಣ. ಅವನು ವಸ್ತುವಲ್ಲವೆಂದಾದರೆ, ಅವನು ವಿಷಯವೇ? ಅದನ್ನು ಹುಡುಕಲು ಪ್ರಯತ್ನಿಸೋಣ.
ವಿಷಯವೆನ್ನುವುದನ್ನು ಯಾವುದು ಚರ್ಚೆಯ ವಸ್ತುವಾಗಿದೆಯೋ ಮತ್ತು ಅನುಭವಕ್ಕೆ ಕಾರಣವಾಗುತ್ತದೆಯೋ ಅದು ಎಂದು ನಿರ್ವಚಿಲಾಗಿದೆ. ಇಲ್ಲಿ ಬ್ರಹ್ಮವು ಚರ್ಚಿಸಲು ಕೈಗೆತ್ತಿಕೊಂಡ ವಿಷಯವಾಗಿದ್ದು ಮತ್ತು ನಾವಿಲ್ಲಿ ಬ್ರಹ್ಮವನ್ನು ಅನುಭವಿಸಲು ಕಾಯುತ್ತಿದ್ದೇವೆ. ಆದ್ದರಿಂದ ಬ್ರಹ್ಮವು ವಿಷಯವಾಗಬಹುದು. ಆದರೆ ನಮಗೆ ಇದನ್ನು ದೃಢ ಪಡಿಸಲು ನಮಗೆ ಹೆಚ್ಚಿನ ಪುರಾವೆಯ ಅವಶ್ಯಕತೆಯಿದೆ. ನೀವು ವೃಕ್ಷವನ್ನು ಒಂದು ವಸ್ತುವೆಂದು ಕರೆಯುತ್ತೀರಿ. ಅದು ಒಂದು ವಸ್ತುವೆಂದು ನಿಮಗೆ ಹೇಗೆ ಗೊತ್ತಾಗುತ್ತದೆ? ನೀವು ಮರವನ್ನು ನೋಡಲು ಸಾಧ್ಯವಿದೆ, ಆ ವಸ್ತುವನ್ನು ನಿಮ್ಮ ಕಣ್ಣುಗಳಿಂದ ನೋಡುತ್ತೀರಿ. ಇಲ್ಲಿ ಮರದ ದೃಶ್ಯವನ್ನು ಅನುಭವಿಸುತ್ತಿರುವವರು ಯಾರು? ಅದು ನೀವೇ, ನಿಮ್ಮ ಗ್ರಹಣೇಂದ್ರಿಯವಾದ ಕಣ್ಣು ಮರದ ದೃಶ್ಯವನ್ನು ಅನುಭವಿಸುತ್ತಿದೆ. ಆದ್ದರಿಂದ ಅನುಭವಿಸುತ್ತಿರುವುದು ನೀವೇ ಆಗಿದ್ದೀರಿ. ಹಾಗಾದರೆ ನೀವು ವಿಷಯವೆಂದು ಇದರ ಅರ್ಥವೇ? ಬಹುಶಃ ಸರಿ, ನೀವು ವಿಷಯವಾಗಿರಬಹುದು. ಒಂದು ವೇಳೆ ನೀವು ವಿಷಯವಾಗಿದ್ದರೆ ಬ್ರಹ್ಮದ ಸ್ಥಾನವೇನು? ನಾವು ಬ್ರಹ್ಮವನ್ನು ವಿಷಯವೆಂದು ಇದುವರೆಗೆ ಉಲ್ಲೇಖಿಸುತ್ತಿದ್ದೇವೆ. ಯಾವಾಗ ಬ್ರಹ್ಮವಾದ ಪರಮಾತ್ಮನು ವಿಷಯವಸ್ತುವಾಗುತ್ತಾನೆಯೋ, ಆಗ ನೀವೂ ಸಹ ವಿಷಯವಾಗಲು ಅದು ಹೇಗೆ ಸಾಧ್ಯ? ವ್ಯಕ್ತಿಗತವಾಗಿ ನೀವು ಮತ್ತು ಪರಬ್ರಹ್ಮವು ಒಂದೇ ಮತ್ತು ಸಮಾನವಾದದ್ದು ಎಂದು ಇದರ ಹಿಂದಿರುವ ಅರ್ಥವೇ? ತಿಳಿದುಕೊಳ್ಳುವವನು ಮತ್ತು ತಿಳಿದವನು ಎರಡೂ ಒಂದೇ ಎನ್ನುವುದು ಇದರ ಅರ್ಥವೇ? ತಿಳಿದುಕೊಳ್ಳುವವನು ಯಾರು? ತಿಳಿದುಕೊಳ್ಳುವವನು ನೀವೇ. ತಿಳಿದವನು ಯಾರು? ಬ್ರಹ್ಮವು ತಿಳಿದವನು. ಹಾಗಾದರೆ ಬ್ರಹ್ಮವನ್ನು ತಿಳಿದವನೆಂದು ಹೇಗೆ ಹೇಳಬಹುದು? ಈ ಹಂತದಲ್ಲಿ ನಾವು ಬ್ರಹ್ಮವನ್ನು ತಿಳಿದವನೆಂದು ಹೇಳಲಾರೆವು. ಅವನನ್ನು ನಿಜವಾಗಿ ಅರಿತ ನಂತರವಷ್ಟೇ ನಾವು ಅವನನ್ನು ತಿಳಿದವನೆಂದು ಹೇಳಬಹುದು. ಆದ್ದರಿಂದ, ಬ್ರಹ್ಮದ ಕುರಿತಾದ ಚರ್ಚೆಯಿಂದ ನಿಮಗೆ ಅವನ ಬಗ್ಗೆ ತಿಳಿದಿದೆ ಎಂದು ಹೇಳಲಾಗದು. ನಾವು ಈ ಚರ್ಚೆಗಳಿಂದ ಬ್ರಹ್ಮದ ಸಾರ್ವತ್ರಿಕ ಇರುವಿಕೆಯನ್ನು (ಸರ್ವ ವ್ಯಾಪಕತ್ವವನ್ನು) ತಿಳಿಯಲು ಪ್ರಯತ್ನಿಸುತ್ತಿದ್ದೇವಷ್ಟೇ. ನನ್ನಲ್ಲಿರುವ ಅಥವಾ ನಿಮ್ಮಲ್ಲಿರುವ ಅಥವಾ ಆ ಮರದಲ್ಲಿರುವ ಪರಬ್ರಹ್ಮವು ಒಂದೇ ಆಗಿದೆ ಏಕೆಂದರೆ ಅವನು ಪರಮಾಣುವಿಗಿಂತ ಚಿಕ್ಕದಾಗಿ ಅವೆಲ್ಲವುಗಳಲ್ಲಿ ಅಸ್ತಿತ್ವದಲ್ಲಿರುತ್ತಾನೆ.
Gāyatrī गायत्री (420)
೪೨೦. ಗಾಯತ್ರೀ
ದೇವಿಯು ಗಾಯತ್ರೀ ದೇವಿ ಅಥವಾ ಗಾಯತ್ರೀ ಮಂತ್ರದ ರೂಪದಲ್ಲದ್ದಾಳೆ. ಛಾಂದೋಗ್ಯ ಉಪನಿಷತ್ತು (೩.೧೨.೧) ಹೇಳುತ್ತದೆ, " ಈ ಬ್ರಹ್ಮಾಂಡಲ್ಲಿರುವುದೆಲ್ಲಾ, ಅದು ಏನೇನು ಇದೆಯೋ ಅದೆಲ್ಲವೂ ಗಾಯತ್ರಿಯೇ ಆಗಿದೆ. ಆ ಶಬ್ದವೇ (ವಾಕ್ಕೇ) ಗಾಯತ್ರೀ ಆಗಿದೆ, ಏಕೆಂದರೆ ಆ ಶಬ್ದವು ಎಲ್ಲಾ ವಸ್ತುಗಳಿಗೆ ಹೆಸರುಗಳನ್ನು ಕೊಡುತ್ತದೆ ಮತ್ತು ಎಲ್ಲರಿಗೂ ಹೆದರಬೇಡಿರೆಂದು ಹೇಳುತ್ತದೆ." ಯಾರು ಗಾಯತ್ರೀ ಮಂತ್ರವನ್ನು ಜಪಿಸುತ್ತಾರೆಯೋ ಅವರನ್ನು ಆ ಮಂತ್ರವು ರಕ್ಷಿಸುತ್ತದೆ ಎಂದೂ ಆ ಉಪನಿಷತ್ತು ಹೇಳುತ್ತದೆ.
ಪದ್ಮಪುರಾಣದಲ್ಲಿ ಗಾಯತ್ರಿಯನ್ನು ಕುರಿತಾದ ಒಂದು ಕಥೆಯಿದೆ, ಅದು ಹೀಗೆ ಸಾಗುತ್ತದೆ. ಒಮ್ಮೆ, ಬ್ರಹ್ಮದೇವನು ಯಾಗವೊಂದನ್ನು ಮಾಡಲು ಉದ್ಯುಕ್ತನಾದಾಗ ತನ್ನ ಹೆಂಡತಿಯನ್ನು ಸಾವಿತ್ರೀ ಎಂದು ಕರೆದನು. ಆಗ ಅವಳು ತಾನು ಲಕ್ಷ್ಮೀ ಹಾಗೂ ಇತರ ದೇವಿಯರೊಂದಿಗೆ ನಂತರ ಬರುತ್ತೇನೆಂದು ಹೇಳಿದಳಂತೆ. ಆಗ ಬ್ರಹ್ಮನು ವ್ಯಗ್ರನಾಗಿ ತನ್ನ ಹೆಂಡತಿಗೆ ಪರ್ಯಾಯವಾಗಿ ಕೃಷ್ಣನ ವಂಶಕ್ಕೆ ಸೇರಿದ ಗೋಪಕನ್ಯೆ ಎನ್ನುವ ಹೆಸರಿನ ಗೊಲ್ಲರ ಹುಡುಗಿಯೊಬ್ಬಳನ್ನು ಕರೆತಂದ. ಅವನು ಆಕೆಯನ್ನು ಗಾಯತ್ರೀ ಎಂದು ಹೆಸರಿಸಿದ. ಆಕೆಯಿಂದೊಡಗೂಡಿದ ಬ್ರಹ್ಮನು ಯಜ್ಞವನ್ನು ತ್ವರಿತವಾಗಿ ಮಾಡಿ ಮುಗಿಸಲು ಬಯಸಿದ. ಆಗ ವಿಷ್ಣುವು, ಬ್ರಹ್ಮದೇವನಿಗೆ ಆಕೆಯನ್ನು ಗಾಂಧರ್ವ ರೀತ್ಯಾ ವಿವಾಹವಾಗೆಂದು ಹೇಳಿದಾಗ, ಆ ವಿಧವಾಗಿ ಬ್ರಹ್ಮನು ಗಾಯತ್ರೀಯನ್ನು ವಿವಾಹ ಮಾಡಿಕೊಂಡ. ಗಾಂಧರ್ವ ವಿವಾಹವೆಂದರೆ ಪುರುಷ ಮತ್ತು ಸ್ತ್ರೀಯರಿಬ್ಬರು ಮಾನಸಿಕವಾಗಿ ಒಂದಾಗುವುದು.
ಶ್ರೀಕೃಷ್ಣನು ಗೀತೆಯಲ್ಲಿ (೧೦.೩೫),".....ಛಂದಸ್ಸುಗಳಲ್ಲಿ ನಾನು ಗಾಯತ್ರೀ…" ಎಂದು ಹೇಳಿದ್ದಾನೆ. ಕೃಷ್ಣನು ೧೦ನೇ ಅಧ್ಯಾಯದ ೨೧ರಿಂದ ೪೧ನೇ ಶ್ಲೋಕಗಳಲ್ಲಿ, ಈ ಬ್ರಹ್ಮಾಂಡದ ಉಗಮ, ಪಾಲನೆ ಮತ್ತು ಲಯವಾಗುವಿಕೆಗೆ ಕಾರಣವಾಗಿರುವ ವಸ್ತುಗಳಲ್ಲಿನ ಶಕ್ತಿ ತರಂಗಗಳು ಮತ್ತು ಇತರೇ ವಸ್ತುಗಳು ಹಾಗೂ ಜೀವಿಗಳಲ್ಲಿ ತನ್ನ ಪ್ರಮುಖವಾದ ಅವತಾರಗಳು (ರೂಪಗಳು), ಇವುಗಳ ಕುರಿತಾಗಿ ವಿಶದವಾಗಿ ತಿಳಿಸುತ್ತಾನೆ. ಆದ್ದರಿಂದ ಗಾಯತ್ರೀ ಛಂದಸ್ಸನ್ನು ಇತರೆಲ್ಲಾ ಛಂದಸ್ಸುಗಳಿಗಿಂತ ಶಕ್ತಿಯುತವಾದದ್ದೆಂದು ಪರಿಗಣಿಸಲಾಗಿದೆ. ಲಲಿತಾಂಬಿಕೆಯು ಈ ಗಾಯತ್ರೀ ರೂಪದಲ್ಲಿದ್ದಾಳೆಂದು ಹೇಳಲಾಗುತ್ತದೆ. ಇದರ ಸರಿಯಾದ ವಿಶ್ಲೇಷಣೆ ಏನೆಂದರೆ ಲಲಿತಾಂಬಿಕೆಯ ಅನಂತ ರೂಪಗಳಲ್ಲಿ ಗಾಯತ್ರಿಯೂ ಒಂದು ಎನ್ನುವುದಾಗಿದೆ.
ಗಾಯತ್ರೀ ಮಂತ್ರದ ಕುರಿತಾಗಿ ಇನ್ನಷ್ಟು ವಿವರಣೆಗಳು:
ಗಾಯತ್ರೀ ಮಂತ್ರವನ್ನು ಅತ್ಯಂತ ಪವಿತ್ರವೂ ಶಕ್ತಿಯುತವೂ ಆದ ಮಂತ್ರಗಳಲ್ಲೊಂದೆಂದು ಪರಿಗಣಿಸಲಾಗಿದ್ದು, ಈ ಮಂತ್ರವು ಮೂರು ವೇದಗಳಲ್ಲಿ ಹಾಗೂ ಕೆಲವೊಂದು ಉಪನಿಷತ್ತುಗಳಲ್ಲಿ ಸ್ಥಾನ ಪಡೆದಿದೆ. ವೇದಗಳಿಗೆ ಮತ್ತು ಉಪನಿಷತ್ತುಗಳಿಗಿರುವ ಪ್ರಮುಖವಾದ ವ್ಯತ್ಯಾಸವೇನೆಂದರೆ ವೇದಗಳು ಬ್ರಹ್ಮದ ಕುರಿತಾಗಿ ಮಾತನಾಡಿದರೆ, ಉಪನಿಷತ್ತುಗಳು ವೇದಗಳಲ್ಲಿ ಹೇಳಲಾಗಿರುವ ಬ್ರಹ್ಮಸಾಕ್ಷಾತ್ಕಾರದ ಮಾರ್ಗಗಳು ಮತ್ತು ವಿಧಾನಗಳ ಕುರಿತಾಗಿ ತೋರಿಸಿ ಕೊಡುತ್ತವೆ. ಪ್ರಾಯೋಗಿಕ ಅನುಷ್ಠಾನದಲ್ಲಿ ಉಪನಿಷತ್ತುಗಳು ವೇದಗಳಿಗಿಂತ ಮಹತ್ವದ ಪಾತ್ರವನ್ನು ವಹಿಸುತ್ತವೆ; ಏಕೆಂದರೆ, ವೇದಗಳು ಬಹುತೇಕ ಮಂತ್ರಗಳು ಮತ್ತು ಯಜ್ಞ-ಯಾಗಿದಗಳನ್ನು ಕುರಿತು ಹೇಳುತ್ತವೆ. ಎಲ್ಲಾ ಮಂತ್ರಗಳಲ್ಲಿ ಗಾಯತ್ರೀ ಮಂತ್ರವು ಅತ್ಯಂತ ಶ್ರೇಷ್ಠವಾದದ್ದೆಂದು ಪರಿಗಣಿತವಾಗಿದೆ, ನಾವೀಗ ಅದನ್ನು ತಿಳಿಯಲು ಪ್ರಯತ್ನಿಸೋಣ.
ಪ್ರತಿಯೊಂದು ಮಂತ್ರವೂ ಕೆಲವು ನಿರ್ದಿಷ್ಠ ಸಂಖ್ಯೆಯ ಅಕ್ಷರಗಳಿಂದ ಕೂಡಿರುತ್ತದೆ ಮತ್ತು ಇಪ್ಪತ್ತನಾಲ್ಕು ಅಕ್ಷರಗಳಿಂದ ಕೂಡಿದ ಮಂತ್ರವನ್ನು ಗಾಯತ್ರೀ ಛಂದಸ್ಸು ಎಂದು ಕರೆಯುತ್ತಾರೆ. ಈ ಮಂತ್ರದ ಪ್ರಥಮ ದ್ರಷ್ಠಾರ ಮಹರ್ಷಿ ವಿಶ್ವಾಮಿತ್ರ. ಅವನು ಈ ಮಂತ್ರವನ್ನು ಜಪಿಸುವುದರ ಮೂಲಕ ಎಣೆಯಿಲ್ಲದಷ್ಟು ಸಿದ್ಧಿಗಳನ್ನು ಪಡೆದನು. ಆ ಇಪ್ಪತ್ತನಾಲ್ಕು ಅಕ್ಷರಗಳನ್ನು ಮೂರು ಸಾಲು ಅಥವಾ ಪಾದಗಳಲ್ಲಿ ಜೋಡಿಸಲಾಗಿರುತ್ತದೆ ಮತ್ತು ಪ್ರತಿಯೊಂದು ಪಾದದಲ್ಲೂ ಎಂಟು ಬೀಜಾಕ್ಷರಗಳಿರುತ್ತವೆ. ಗಾಯತ್ರೀ ಮಂತ್ರದ ಮೊದಲು ॐ (ಓಂಕಾರ) ಹಾಗೂ ಮೂರು ವ್ಯಾಹೃತಿಗಳು ಬರುತ್ತವೆ. ವ್ಯಾಹೃತಿಗಳು ಮೂರು ವಿಧವಾದ ಲೋಕಗಳನ್ನು ಪ್ರತಿನಿಧಿಸುತ್ತವೆ. (ಏಳು ವಿಧವಾದ ಲೋಕಗಳ ಹೆಸರುಗಳೆಂದರೆ ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ, ಸತ್ಯಂ. ಮೊದಲ ಮೂರು ಮಹಾನ್ ವ್ಯಾಹೃತಿಗಳೆಂದು ಕರೆಯಲ್ಪಡುತ್ತವೆ ಮತ್ತು ॐ (ಓಂಕಾರದ) ಉಚ್ಛಾರಣೆಯ ನಂತರ ಅನೇಕರು ಈ ವ್ಯಾಹೃತಿಗಳನ್ನು ತಮ್ಮ ಪ್ರಾರ್ಥನೆಗಳನ್ನು ಪ್ರಾರಂಭಿಸುವುದಕ್ಕೆ ಮುಂಚೆ ಹೇಳಿಕೊಳ್ಳುತ್ತಾರೆ; ಈ ವ್ಯಾಹೃತಿಗಳಿಗೆ ಸಾವಿತ್ರಿ ಮತ್ತು ಪೃಷ್ಣಿಯವರ ಪುತ್ರಿಯರೆಂದು ಮೂರ್ತರೂಪಗಳನ್ನು ಕೊಡಲಾಗಿದೆ). ಇದರ ನಂತರ ಮೂಲ ಗಾಯತ್ರೀ ಮಂತ್ರವು ಬರುತ್ತದೆ. ಓಂ (ॐ) ಅಥವಾ ಪ್ರಣವವು ಶಬ್ದ ಬ್ರಹ್ಮದ ಪ್ರಥಮ ರೂಪಾಂತರವಾಗಿದೆ. ॐ ಎನ್ನುವುದು ಅ, ಉ, ಮತ್ತು ಮ ಎಂದು ರೂಪಾಂತರ ಹೊಂದುವುಕ್ಕೆ ಮೊದಲು ಅದು ಬ್ರಹ್ಮಾಂಡದ ಸೃಜನಾತ್ಮಕ ಶಕ್ತಿಯಾದ ’ನಾದ ಬಿಂದು’ವಿನ (ಶಬ್ದದ ಅವ್ಯಕ್ತ ರೂಪ) ರೂಪದಲ್ಲಿತ್ತು. ಎಲ್ಲಾ ಶಬ್ದಗಳು ಶಿವನ ಡಮರುಗದಿಂದ ಉದ್ಭವವಾಗಿವೆ. ಈಗಾಗಲೇ ನಾವು ಶಿವನು ಜಡ-ಶಕ್ತಿಯಾಗಿದ್ದಾನೆಂದು ನೋಡಿದೆವು, ಅವನು ಸ್ವಯಂಭುವಾಗಿದ್ದಾನೆ. ಶಕ್ತಿಯು ಅವನ ಜಡ-ಶಕ್ತಿಯ ಅಸಹಜವಾದ ಸ್ಪಂದನದಿಂದ ಉಂಟಾಯಿತು. ಬಹುಶಃ ಇದೊಂದೇ ಪ್ರಸಂಗದಲ್ಲಿ ಜಡ-ಶಕ್ತಿಯು ಸ್ಪಂದಿಸಿದ್ದು. ಶಿವನ ಸ್ಪಂದನವು ಶಕ್ತಿಯಾಗಿ ರೂಪಾಂತರಗೊಂಡು ತದನಂತರ ಈ ಶಕ್ತಿಯು ಪ್ರಕೃತಿ ಮೊದಲಾದ ಎಲ್ಲಾ ರೂಪಾಂತರಗಳಾಗಿ ಮಾರ್ಪಟ್ಟಿತು. ಪ್ರಕೃತಿಯಿಂದ ಪಂಚ ಮಹಾಭೂತಗಳು ಉದ್ಭವಿಸಿದವು. ಈ ವಿಧವಾಗಿ ಆ ಪರಮ ಶಕ್ತಿ ಅಥವಾ ದೇವಿಯ ವಿಮರ್ಶ ರೂಪದಿಂದ ಸೃಷ್ಟಿಯ ಉಗಮವಾಯಿತು. ನಾದ ಬಿಂದುವಿನಿಂದ (ಶಿವ-ಶಕ್ತಿ ಐಕ್ಯರೂಪದಿಂದ) ವಿವಿಧ ತ್ರಿಪುಟಿಗಳನ್ನು ಪ್ರತಿನಿಧಿಸುವ ಅ, ಉ ಮತ್ತು ಮ ಉದ್ಭವಿಸಿದವು. ಇವು ಬ್ರಹ್ಮ, ವಿಷ್ಣು ಮತ್ತು ರುದ್ರ (ಶಿವನ ಒಂದು ರೂಪವು ರುದ್ರವಾಗಿದ್ದು, ಈ ರುದ್ರ ರೂಪವನ್ನು ಏಕಾದಶ ರುದ್ರರೊಂದಿಗೆ ಗೊಂದಲ ಮಾಡಿಕೊಳ್ಳಬಾರದು); ಸೃಷ್ಟಿ, ಸ್ಥಿತಿ ಮತ್ತು ಲಯ; ಭೂತ, ವರ್ತಮಾನ ಮತ್ತು ಭವಿಷ್ಯತ್; ಇಚ್ಛಾ. ಜ್ಞಾನ ಮತ್ತು ಕ್ರಿಯಾ ಮೊದಲಾದ ತ್ರಿಪುಟಿಗಳಾಗಿವೆ. ಆದ್ದರಿಂದ ಗಾಯತ್ರೀ ಮಂತ್ರವು ಪರಬ್ರಹ್ಮದ ಪ್ರಥಮ ರೂಪಾಂತರ ಹೊಂದಿದ ಮೂಲ ಶಬ್ದವಾದ ಓಂಕಾರದಿಂದ ಪ್ರಾರಂಭವಾಗುತ್ತದೆ.
ಪ್ರಣವದ ನಂತರ ಬರುವ ಮೂರು ವ್ಯಾಹೃತಿಗಳೆಂದರೆ ಭೂಃ, ಭುವಃ ಮತ್ತು ಸ್ವಃ. ಈ ವ್ಯಾಹೃತಿಗಳು ಓಂಕಾರದ ಮುಂದಿನ ಸ್ತರದ ರೂಪಾಂತರವನ್ನು ಪ್ರತಿನಿಧಿಸುತ್ತವೆ ಮತ್ತು ಈ ರೂಪಾಂತರವು ಮಾತಿನ (ವಾಕ್ನ) ಮೂಲವಾಗಿದೆ ಮತ್ತು ಈ ರೂಪಾಂತರಗಳು ಬ್ರಹ್ಮಾಂಡದ ಮೂರು ಲೋಕಗಳನ್ನು ಪ್ರತಿನಿಧಿಸುತ್ತವೆ. ಈ ಮೂರು ಲೋಕಗಳು ಓಂಕಾರದ (ॐ) ಮೂರು ಅಕ್ಷರಗಳಾದ ಅ, ಉ, ಮತ್ತು ಮ ಇವುಗಳಿಂದ ಉಗಮವಾಗಿವೆ. ಈ ವ್ಯಾಹೃತಿಗಳಿಂದ ಗಾಯತ್ರೀ ಮಂತ್ರವನ್ನು ಪಡೆಯಲಾಯಿತು ಮತ್ತು ಈ ಗಾಯತ್ರೀ ಮಂತ್ರವು ತ್ರಿವೇದಗಳಾದ ಋಗ್, ಯಜುರ್ ಮತ್ತು ಸಾಮವೇದಗಳಿಗೆ ಮೂಲವಾಗಿದೆ. ಮೂರು ಲೋಕಗಳು ಅಥವಾ ಪ್ರಪಂಚಗಳೆಂದರೆ ಅವು ಪ್ರಜ್ಞೆಯ ಮೂರು ಅವಸ್ಥೆಗಳನ್ನು ಸೂಚಿಸುತ್ತವೆ. ಭೂರ್ ಎಂದರೆ ಅದು ಕೆಳ ಸ್ತರದ ಪ್ರಜ್ಞೆ ಮತ್ತು ಕೆಳ ಹಂತಗಳಾಗಿದೆ. ಭುವರ್ ಎಂದರೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಸಂಭಂದ ಹೊಂದಿದ ಸಾಮಾನ್ಯ ಅಥವಾ ಸಹಜವಾದ ಪ್ರಜ್ಞೆಯಾಗಿದೆ. ಸ್ವರ್ ಎಂದರೆ ಉಚ್ಛ ಮಟ್ಟದ ಪ್ರಜ್ಞೆಯಾಗಿದೆ. ಹೀಗೆ ಈ ಮೂರು ವ್ಯಾಹೃತಿಗಳೆಂದರೆ ಪ್ರಜ್ಞೆಯ ವಿವಿಧ ರೂಪಾಂತರಗಳ ಹಂತಗಳಾಗಿವೆ. ಮೂರು ಲೋಕಗಳೆಂದರೆ ಸಾಮಾನ್ಯವಾಗಿ, ಸ್ವರ್ಗ, ಭೂಮಿ ಮತ್ತು ವಾತಾವರಣ ಅಥವಾ ಕೆಳಗಿನ ಪ್ರಾಂತಗಳು. ಭೂರ್ ಲೋಕವೆಂದರೆ ಭೂಮಿ; ಭುವರ್ ಲೋಕವೆಂದರೆ ಸೂರ್ಯ ಮತ್ತು ಭೂಮಿಯ ಮಧ್ಯೆ ಇರುವ ಸ್ಥಳವಾಗಿದ್ದು ಇಲ್ಲಿ ಋಷಿ ಮುನಿಗಳು ನಿವಸಿಸುತ್ತಾರೆ. ಸ್ವರ್ ಲೋಕ, ಇಂದ್ರನ ಸ್ವರ್ಗವಾಗಿದ್ದು ಇದು ಸೂರ್ಯ ಮೇಲಿನ ಲೋಕ ಅಥವಾ ಅದರ ಮತ್ತು ಧ್ರುವ ನಕ್ಷತ್ರದ ನಡುವೆ ಇರುವ ಸ್ಥಳ.
ಓಂಕಾರ ಮತ್ತು ಮೂರು ವ್ಯಾಹೃತಿಗಳ ನಂತರ ಇಪ್ಪತ್ನಾಲ್ಕು ಅಕ್ಷರಗಳನ್ನು ಒಳಗೊಂಡಿರುವ ಪ್ರಸಿದ್ಧವಾದ ಗಾಯತ್ರೀ ಮಂತ್ರವನ್ನು ಇರಿಸಲಾಗಿದೆ. ಅದಕ್ಕೆ ಮೂರು ಸಾಲುಗಳು ಅಥವಾ ಪಾದಗಳಿವೆ. ಮೊದಲನೇ ಸಾಲಿನಲ್ಲಿ ಎಂಟು ಬೀಜಾಕ್ಷರಗಳಾದ ತತ್ ಸವಿತುರ್ವರೇಣ್ಯಂ (तत् सवितुर्वरेण्यं) ಇವುಗಳಿವೆ. ತತ್ ಎಂದರೆ ಅದು, ಸವಿತುರ್ ಎಂದರೆ ಸೃಷ್ಟಿಕರ್ತ, ವರೇಣ್ಯಮ್ ಎಂದರೆ ಅತ್ಯುನ್ನತವಾದದ್ದು. ಮೊದಲನೇ ಪಾದದ ಒಟ್ಟಾರೆ ಅರ್ಥವೆಂದರೆ, ’ಆ ಪರಮೋನ್ನತ ಸೃಷ್ಟಿಕರ್ತ’. ಎರಡನೆಯ ಪಾದದ ಎಂಟು ಬೀಜಾಕ್ಷರಗಳೆಂದರೆ ’ಭರ್ಗೋ ದೇವಸ್ಯ ಧೀಮಹಿ’ (भर्गो देवस्य धीमहि); ಇಲ್ಲಿ ಭರ್ಗೋ ಎಂದರೆ ಹೊಳೆಯುವ ರೂಪ, ದೇವಸ್ಯ ಎಂದರೆ ಪರಬ್ರಹ್ಮಕ್ಕೆ ಸೇರಿದ್ದು, ಧೀಮಹಿ ಎಂದರೆ ಧ್ಯಾನಿಸು. ಎರಡನೆಯ ಪಾದದ ಅರ್ಥವೇನೆಂದರೆ, ನಾವು ಪರಬ್ರಹ್ಮದ ಪ್ರಕಾಶಿಸುವ ರೂಪವನ್ನು ಧ್ಯಾನಿಸುತ್ತೇವೆ. ಮೂರನೆಯ ಪಾದದ ಎಂಟು ಬೀಜಾಕ್ಷರಗಳೆಂದರೆ ’ಧೀಯೋ ಯೋ ನಃ ಪ್ರಚೋದಯಾತ್’ (धीयो यो नः प्रचोदयात्); ಧೀಯೋ ಎಂದರೆ ಮನಸ್ಸಿನ ರೂಪಾಂತರಗಳು, ಯೋ ಅಂದರೆ ಆ ಪರಬ್ರಹ್ಮ, ನಃ ಎಂದರೆ ನಮ್ಮ, ಪ್ರಚೋದಯಾತ್ ಎಂದರೆ ಪ್ರಚೋದಿಸುವ. ಮೂರನೆಯ ಸಾಲಿನ ಒಟ್ಟು ಅರ್ಥವೆಂದರೆ, ನಮ್ಮ ಮನಸ್ಸಿನ ಮಾರ್ಪಾಟುಗಳನ್ನು ಆ ಪರಬ್ರಹ್ಮವು ಪ್ರಚೋದಿಸುತ್ತದೆ. ಒಟ್ಟಾರೆಯಾಗಿ ವ್ಯಾಹೃತಿ ಮತ್ತು ಪ್ರಣವಗಳನ್ನು ಹೊರತುಪಡಿಸಿದ ಗಾಯತ್ರೀ ಮಂತ್ರದ ಅರ್ಥವು ಹೀಗಿದೆ, "ನಾವು ಪರಮಸೃಷ್ಟಿಕರ್ತನ ಆ ಪ್ರಕಾಶಕ ರೂಪವನ್ನು ಧ್ಯಾನಿಸುತ್ತೇವೆ; ಯಾರು ನಮ್ಮ ಮನಸ್ಸಿನ ಮಾರ್ಪಟುಗಳನ್ನು (ಮಾನಸಿಕ ರೂಪಾಂತರಗಳನ್ನು) ಪ್ರಚೋದಿಸುತ್ತಾನೆಯೋ". ನಮ್ಮ ಮಾನಸಿಕ ಸ್ತರವು ಪರಬ್ರಹ್ಮದ ಸ್ಥಾಯಿಯಲ್ಲಿಯೇ ಇದ್ದರೆ ಯಾವುದೇ ವಿಧವಾದ ಮಾನಸಿಕ ರೂಪಾಂತರಗಳು ಉಂಟಾಗುವುದಿಲ್ಲ ಎನ್ನುವುದನ್ನು ನಾವು ತಿಳಿಯಬೇಕು. ಮಾನಸಿಕ ರೂಪಾಂತರಗಳು ಕೇವಲ ಕೆಳಗಿನ ಸ್ತರಗಳಲ್ಲಿ ಮಾತ್ರವೇ ಉಂಟಾಗುತ್ತವೆ.
ಗಾಯತ್ರೀ ಛಂದಸ್ಸಿನ ಯಾವುದೇ ಮಂತ್ರವು ಇಪ್ಪತ್ನಾಲ್ಕು ಬೀಜಾಕ್ಷರಗಳನ್ನು ಹೊಂದಿದ್ದು ಈ ಛಂದಸ್ಸು ನಮ್ಮ ಸ್ಥೂಲ ಶರೀರವನ್ನು ಕಾಪಾಡುತ್ತದೆ ಎಂದು ಹೇಳಲಾಗುತ್ತದೆ. ಸ್ಥೂಲ ಶರೀರವು ಜೀವ ಶಕ್ತಿಯಾದ ಪ್ರಾಣದಿಂದ ಪೋಷಿಸಲ್ಪಡುತ್ತದೆ ಮತ್ತು ಗಾಯತ್ರೀ ಮಂತ್ರದ ಮೊದಲನೇ ಪಾದವು ಈ ಪ್ರಾಣ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಎರಡನೆಯ ಪಾದವು ಜ್ಞಾನವನ್ನು ಕೊಡುತ್ತದೆ. ಇಲ್ಲಿ ಜ್ಞಾನವೆಂದರೆ ಪರಬ್ರಹ್ಮದ ಕುರಿತಾದ ಜ್ಞಾನವಾಗಿದೆ. ಈ ಜ್ಞಾನವು ವೇದೋಪನಿಷತ್ತುಗಳಿಂದ ನಮಗೆ ದೊರೆಯುತ್ತದೆ. ಪುರಾತನ ಕಾಲದಲ್ಲಿ, ಶಿಷ್ಯನನ್ನು ಬಹಳ ಎಳೆಯ ವಯಸ್ಸಿನಲ್ಲಿ ಗುರುವಿನ ಬಳಿ ವೇದಾಧ್ಯಯನ ಮಾಡಲು ಕಳುಹಿಸಲಾಗುತ್ತಿತ್ತು. ವೇದಗಳನ್ನು ಕಲಿಯುವ ಪ್ರಥಮ ಹೆಜ್ಜೆಯಾಗಿ ಗಾಯತ್ರೀ ಮಂತ್ರವನ್ನು ಉಪದೇಶಿಸಲಾಗುತ್ತಿತ್ತು. ಗಾಯತ್ರೀ ಮಂತ್ರದ ಮೂರನೇ ಪಾದವು ತುರೀಯಾವಸ್ಥೆಯನ್ನು ಉಲ್ಲೇಖಿಸುತ್ತದೆ; ಈ ಅವಸ್ಥೆಯು ಮೂರು ಹಂತಗಳಾದ ನಿದ್ರಾ, ಸ್ವಪ್ನ ಮತ್ತು ಸುಷುಪ್ತಿ ಇವುಗಳ ಮುಂದಿನ ಹಂತವಾಗಿದೆ. ಬ್ರಹ್ಮಸಾಕ್ಷಾತ್ಕಾರ ಅಥವಾ ಆತ್ಮ ಸಾಕ್ಷಾತ್ಕಾರದ ಪ್ರಕ್ರಿಯೆಯು ಈ ನಾಲ್ಕನೆಯ ಅವಸ್ಥೆಯಾದ ತುರೀಯಾವನ್ನು ಹೊಂದಿದಾಗ ಅಥವಾ ಅದನ್ನು ಅಧಿಗಮಿಸಿದಾಗ ಉಂಟಾಗುತ್ತದೆ. ಯಾವಾಗ ಒಬ್ಬರು ಎಲ್ಲಾ ವಿಧವಾದ ಪ್ರಜ್ಞೆಯ ಹಂತಗಳನ್ನು ಅಧಿಗಮಿಸುತ್ತಾರೆಯೋ ಆಗ ಮಾತ್ರವೇ ಸ್ವಯಂಪ್ರಕಾಶಕನಾದ ಪರಬ್ರಹ್ಮದ ಅರಿವುಂಟಾಗುತ್ತದೆ. ಯಾವಾಗ ಮನಸ್ಸು ಎಲ್ಲಾ ವಿಧವಾದ ಪ್ರಜ್ಞೆಗಳಿಂದ ಸಂಪೂರ್ಣವಾಗಿ ಮುಕ್ತವಾಗಿರುತ್ತದೆಯೋ ಆಗ ಶೂನ್ಯ ಸ್ಥಿತಿಯು ತಲುಪಲ್ಪಡುತ್ತದೆ.
ಗಾಯತ್ರೀ ಮಂತ್ರವು ಸೂರ್ಯನನ್ನು ಪ್ರತಿನಿಧಿಸುತ್ತದೆ ಎಂದು ಅನೇಕ ಬಾರಿ ಹೇಳಲ್ಪಡುತ್ತದೆ. ಇದು ವಾಸ್ತವವಾಗಿ ಬಹುತೇಕ ನಿಜವೂ ಹೌದು. ಸೂರ್ಯನು ಸಂಪೂರ್ಣವಾಗಿ ಪರಬ್ರಹ್ಮದ ವಿವರಣೆಗೆ ಸರಿಹೊಂದುತ್ತಾನೆ. ಸೂರ್ಯನಿಲ್ಲದಿದ್ದರೆ ಪ್ರಪಂಚವು ಕ್ರಿಯಾಶೀಲವಾಗಿರದು. ಏಕೆಂದರೆ ಶಕ್ತಿಯು ಈ ಸೂರ್ಯನಿಂದಲೇ ಹೊಂದಲ್ಪಡುತ್ತದೆ. ಸೂರ್ಯನೂ ಸಹ ಬ್ರಹ್ಮದಂತೆ ಸ್ವಯಂಪ್ರಕಾಶಕ. ಕೇವಲ ಸೂರ್ಯನ ಬೆಳಕು ಮಾತ್ರವೇ ಎಲ್ಲಾ ವಸ್ತುಗಳನ್ನು ಹೊಳೆಯುವಂತೆ ಮಾಡುತ್ತದೆ ಅಥವಾ ಇತರೆಲ್ಲಾ ವಸ್ತುಗಳನ್ನು ಸೂರ್ಯನ ಕಿರಣಗಳಿಂದ ಮಾತ್ರವೇ ತಿಳಿಯಬಹುದು. ಬ್ರಹ್ಮದ ಎಲ್ಲಾ ಗುಣಲಕ್ಷಣಗಳು ಸೂರ್ಯನಿಗೆ ನಿಖರವಾಗಿ ಹೊಂದುವುದರಿಂದ ಅವನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ. ಆದ್ದರಿಂದ ಮೊದಲನೇ ಪಾದದಲ್ಲಿರುವ ಸವಿತುರ್ ಶಬ್ದವು ಸೂರ್ಯನನ್ನು ಸೂಚಿಸುತ್ತದೆ ಎನ್ನಲಾಗಿದೆ. ಆದರೆ ಗಾಯತ್ರೀ ಮಂತ್ರವನ್ನು ಸೂರ್ಯನ ಕುರಿತಾದ ಮಂತ್ರವೆಂದು ಸಮೀಕರಿಸಬಾರದು. ಸೂರ್ಯನು ಶಕ್ತಿಯ ಸೃಷ್ಟಿಗಳಲ್ಲಿ ಒಂದಾಗಿದ್ದು ನಾವು ಚರ್ಚಿಸುತ್ತಿರುವ ಬ್ರಹ್ಮವು ಅದಾಗಿಲ್ಲ. ಬ್ರಹ್ಮದ ಪ್ರಮುಖ ಲಕ್ಷಣಗಳಾದ ಪ್ರಕಾಶತೆ, ಸೃಷ್ಟಿ ಮೊದಲಾದವು ಕೇವಲ ಸೂರ್ಯನ ಬೆಳಕಿನಿಂದಲೇ ಉಂಟಾಗುತ್ತವೆ ಮತ್ತು ನಾವು ಈ ಕ್ರಿಯೆಗಳು ಸೂರ್ಯನ ಶಕ್ತಿಯಿಂದಲೇ ಘಟಿಸುತ್ತವೆ ಎಂದು ಮನಗಾಣುತ್ತೇವೆ. ಆದರೆ ಆಂತರ್ಯದಲ್ಲಿರುವ ಸ್ವಯಂ ಪ್ರಕಾಶಕವು ಸೂರ್ಯನಿಗಿಂತಲೂ ಹಲವಾರು ಪಟ್ಟು ಶಕ್ತಿಯುತವಾಗಿದ್ದು ಯಾವಾಗ ಅದನ್ನು ಅಂತರಾಳದಲ್ಲಿ ಸಾಕ್ಷಾತ್ಕರಿಸಿಕೊಳ್ಳುತ್ತೇವೆಯೋ ಆಗ ಅದನ್ನು ಆತ್ಮವೆನ್ನುತ್ತೇವೆ. ಆದ್ದರಿಂದ ಗಾಯತ್ರೀ ಮಂತ್ರವು ಆ ಪರಬ್ರಹ್ಮದ ಮಂತ್ರವೇ ಆಗಿದೆ. ಆದ್ದರಿಂದ ಆ ಮಂತ್ರವೇ ಧ್ಯಾನ ಎನ್ನುವ ಶಬ್ದವನ್ನು ಬಳಸುತ್ತದೆ. ಕೇವಲ ಧ್ಯಾನದಿಂದಲೇ ಮನಸ್ಸಿನ ರೂಪಾಂತಗಳು ಸಾಧ್ಯವಾಗಿ ಅದು ಅಂತಿಮವಾಗಿ ಮನಸ್ಸನ್ನು ಪ್ರಜ್ಞಾರಹಿತ ಸ್ಥಿತಿಯೆಡೆಗೆ ಕೊಂಡೊಯ್ದು ಸ್ವಯಂ ಪ್ರಕಾಶಿತ ಬ್ರಹ್ಮದ ಸಾಕ್ಷಾತ್ಕಾರಕ್ಕೆ ಎಡೆ ಮಾಡಿ ಕೊಡುತ್ತದೆ.
ಲಲಿತಾಂಬಿಕೆಯ ಪಂಚದಶೀ ಮಂತ್ರವನ್ನು ಒಂದು ಬಾರಿ ಉಚ್ಛರಿಸಿದರೆ ಅದು ಗಾಯತ್ರೀ ಮಂತ್ರದ ಮೂರು ಉಚ್ಛಾರಣೆಗಳಿಗೆ ಸಮನಾದುದು. ಪಂಚದಶೀ ಮಂತ್ರದ ಪ್ರತಿಯೊಂದು ಸಾಲೂ ಗಾಯತ್ರೀ ಮಂತ್ರದ ಒಂದು ಪೂರ್ಣ ಉಚ್ಛಾರಣೆಗೆ ಸಮಾನವಾದದ್ದು. ಗಾಯತ್ರೀ ಮಂತ್ರಕ್ಕೆ ವಿವಿಧ ದೇವರುಗಳು ಮತ್ತು ಮುನಿಗಳಿಂದ ಹಲವಾರು ಶಾಪಗಳಿವೆ. ಸ್ವಯಂ ಮಹರ್ಷಿ ವಿಶ್ವಾಮಿತ್ರನೇ ಆ ಮಂತ್ರಕ್ಕೆ ಶಾಪವನ್ನಿತ್ತಿದ್ದಾನೆ ಮತ್ತು ಕೆಲವೊಂದು ಮಂತ್ರಗಳ ಉಚ್ಛಾರಣೆಯಿಂದ ಈ ವಿಧವಾದ ಶಾಪಗಳಿಂದ ವಿಮೋಚನೆಯನ್ನು ಪಡೆಯಬಹುದು. ಎಲ್ಲಿಯವರೆಗೆ ಈ ವಿಧವಾದ ಶಾಪಗಳ ನಿವಾರಣೆಯಾಗುವುದಿಲ್ಲವೋ ಅಲ್ಲಿಯವರೆಗೆ ಈ ಮಹಾಮಂತ್ರದ ಸಿದ್ಧಿಯು ಹೊಂದಲ್ಪಡುವುದಿಲ್ಲ.
Vyāhṛtiḥ व्याहृतिः (421)
೪೨೧. ವ್ಯಾಹೃತಿಃ
ಹಿಂದಿನ ನಾಮದಲ್ಲಿ ಚರ್ಚಿಸಿದಂತೆ ದೇವಿಯು ಗಾಯತ್ರೀ ಮಂತ್ರದ ವ್ಯಾಹೃತಿಗಳ ರೂಪಲ್ಲಿರುತ್ತಾಳೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 418 - 421 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೧೦. ಲಲಿತಾ ಸಹಸ್ರನಾಮ ೪೧೮ರಿಂದ ೪೨೧ನೇ ನಾಮಗಳ ವಿವರಣೆ
ಶ್ರೀಧರರೆ, ೧೧೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ. ಹೆಚ್ಚುವರಿ ವಿವರಣೆಯನ್ನು ಪ್ರತ್ಞೇಕವಾಗಿ ಪ್ರಯತ್ನಿಸುತ್ತೇನೆ.
ಲಲಿತಾ ಸಹಸ್ರನಾಮ ೪೧೮ - ೪೨೧
________________________________________
೪೧೮. ಜಡ-ಶಕ್ತಿಃ
ಸೃಜನಾತ್ಮಕ ಶಕ್ತಿಗಳೆರಡು - ಸ್ಪಂದನಸಹಿತಾ ರಹಿತ, ಚರಾಚರ
ಪರಬ್ರಹ್ಮದ ಕ್ರಿಯಾಶೀಲಶಕ್ತಿ ಚರ, ಜೀವವಿರದ ಜಡ ಶಕ್ತಿ ಅಚರ
ಜಡ ಸ್ಪಂದನಾರಹಿತ ಶಕ್ತಿಯೆ ಅಪರಾ-ಪ್ರಕೃತಿ, ಚಿಚ್ಛಕ್ತಿ ಪ್ರತ್ಯಾರ್ಥ
ಪರಾ-ಪ್ರಕೃತಿಗೆ ಕೆಳಸ್ತರ, ಚಿಚ್ಛಕ್ತಿ ಜಡಸಂಯೋಗದಲಿ ಸೃಷ್ಟಿಗರ್ಥ!
ಅಪರಾ-ಪ್ರಕೃತಿ ಭೂಮಿ ಜಲ ಅಗ್ನಿ ವಾಯು ಆಕಾಶ -ಮೂಲವಸ್ತು
ಮನಸು ಬುದ್ಧಿ ಅಹಂಕಾರ - ಅಂತಃಕರಣದಷ್ಟ ವೈವಿಧ್ಯ ಸಮಿತ್ತು
ಉನ್ನತಸ್ತರ ಪರಾ-ಪ್ರಕೃತಿ 'ಜೀವ', ಬ್ರಹ್ಮಾಂಡ ಸುಸ್ತಿತಿಯಲಿಡುವ
ಆತ್ಮ ಪ್ರಜ್ಞೆ, ಜೀವ ತತ್ವ ಸೇರಿ ಜಡ ಸಗುಣ ಶಕ್ತಿ ಸೃಷ್ಟಿಸಿ ಭೌತಿಕವ!
೪೧೯. ೪೧೯. ಜಡಾತ್ಮಿಕಾ
ಜಡಶಕ್ತಿಗಳಿಗೆಲ್ಲ ಶಕ್ತಿಯಾಗಿಹ ಲಲಿತ, ಮಾಯೆ ಬ್ರಹ್ಮದ ಚಾಲನೆ
ಭೌತಿಕಪ್ರಪಂಚ ಮಾಯರೂಪದಲಸ್ತಿತ್ವ, ದೇವಿ ಜಡಾತ್ಮಿಕಾ ತಾನೆ
ಬ್ರಹ್ಮದ ಹೊರತು ಮಿಕ್ಕೆಲ್ಲಾ ಮಾಯೆ, ವಸ್ತು ವಿಷಯಾ ಸಾಕಾರತೆ
ಬ್ರಹ್ಮಾಂಡವಾದರೆ ವಸ್ತು, ಪರಬ್ರಹ್ಮದರಿವೆ ವಿಷಯವಾಗಿ ಸಂಹಿತೆ!
೪೨೦. ಗಾಯತ್ರೀ
ಲಲಿತಾಂಬಿಕೆ ಅನಂತ ರೂಪದಲೊಂದು ಗಾಯತ್ರಿ ಛಂಧಸ್ಸು
ಗಾಯತ್ರಿ ಮಂತ್ರ ರೂಪದಿ ಲಲಿತೆ, ಬ್ರಹ್ಮಾಂಡದೆಲ್ಲ ತೇಜಸ್ಸು
ಶಬ್ದಕೆ ಹೆಸರಿಡುವ ಶಬ್ದ, ವ್ಯಗ್ರ ಬ್ರಹ್ಮನ ಯಜ್ಞದ ಗೋಪ ಕನ್ನೆ
ಗಾಂಧರ್ವವಿವಾಹ ಮಾನಸಿಕವಾಗಿ, ಗಾಯತ್ರಿ ಜ್ಞಾನಸಂಪನ್ನೆ!
೪೨೧. ವ್ಯಾಹೃತಿಃ
ಭೂಃ ಭುವಃ ಸುಃ ಮಹಾನ್ ವ್ಯಾಹೃತಿಗಳಾಗಿ ತ್ರೈಲೋಕ
'ಓಂ' ಪ್ರಣವ ರೂಪಾಂತರ ಸ್ತರ, ತ್ರೈ ಪ್ರಜ್ಞಾವಸ್ತೆ ಸೂಚಕ
ಸ್ವರ್ಗ ಭೂಮಿ ವಾತಾವರಣಲೋಕ ನಿರ್ಮಾತೃ ಶ್ರೀಲಲಿತೆ
ಗಾಯತ್ರಿ ಮಂತ್ರ ವ್ಯಾಹೃತಿಃ ರೂಪದಲಿ ಸಾಕಾರವಾಗುತೆ!
ಧನ್ಯವಾದಗಳೊಂದಿಗೆ
-ನಾಗೇಶ ಮೈಸೂರು
In reply to ಉ: ೧೧೦. ಲಲಿತಾ ಸಹಸ್ರನಾಮ ೪೧೮ರಿಂದ ೪೨೧ನೇ ನಾಮಗಳ ವಿವರಣೆ by nageshamysore
ಉ: ೧೧೦. ಲಲಿತಾ ಸಹಸ್ರನಾಮ ೪೧೮ರಿಂದ ೪೨೧ನೇ ನಾಮಗಳ ವಿವರಣೆ
ನಾಗೇಶರೆ,
ಈ ಕಂತಿನ ಪದ್ಯಗಳು ಒಂದಕ್ಕಿಂತ ಒಂದು ಅದ್ಭುತ. ಅದರಲ್ಲೂ ವಿಶೇಷವಾಗಿ ಜಡಾತ್ಮಿಕಾ ಈ ಕಂತಿನ ಹೈಲೈಟ್. ಗಾಯತ್ರೀ ಬಗೆಗೆ ಅದು ಹೇಗೆ ಕವನ ರಚಿಸುತ್ತೀರೋ ಎನ್ನುವ ಸಣ್ಣ ಅಳುಕಿತ್ತು; ಏಕೆಂದರೆ ಅದರ ಕುರಿತು ಒಂದೂವರೆ ಕಂತಿಗಾಗುವಷ್ಟು ವಿಷಯವಿತ್ತು. ಅದನ್ನೂ ಸಹ ಸರಳ, ಸುಂದರವಾಗಿ ಹೊಸೆದಿದ್ದೀರ. ಅಭಿನಂದನೆಗಳು ನಿಮಗೆ. ಉಳಿದಂತೆ ನನ್ನ ಗಮನಕ್ಕೆ ಯಾವುದೇ ಪದ/ಅಚ್ಚು ದೋಷಗಳು ಕಂಡು ಬಂದಿಲ್ಲ ಅದು ಈ ಕಂತಿನಲ್ಲಿ ಮತ್ತೊಂದು ವಿಶೇಷತೆ :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ.
ಉ: ೧೧೦. ಲಲಿತಾ ಸಹಸ್ರನಾಮ ೪೧೮ರಿಂದ ೪೨೧ನೇ ನಾಮಗಳ ವಿವರಣೆ
ಶ್ರೀಧರರೆ, ವಸ್ತು ಮತ್ತು ವಿಷಯದ ಹೆಚ್ಚಿನ ವಿವರಣೆ ಮತ್ತು ಗಾಯತ್ರೀ ಮಂತ್ರದ ಹೆಚ್ಚಿನ ವಿವರಣೆಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ. ಸ್ವಲ್ಪ ಅರ್ಥ ಮಾಡಿಕೊಂಡು ಸಾವಧಾನವಾಗಿ ಬರೆಯಬೇಕಿದ್ದ ಕಾರಣ ತುಸು ತಡವಾಗಿ, ಬೇರೆಯಾಗಿಯೆ ಕೈಗೆತ್ತಿಕೊಂಡೆ :-) ಈಗಾಗಲೆ ಗಾಯತೀ , ವ್ಯಾಹೃತಿಯಡಿಯಲ್ಲಿ ಸೇರಿಸಿದ್ದ ವಿವರಗಳನ್ನು ಇಲ್ಲಿ ಬಹುತೇಕ ಕೈಬಿಟ್ಟಿದ್ದೇನೆ.
ವಿಷಯ ಮತ್ತು ವಸ್ತುವಿನ ಕುರಿತು ಹೆಚ್ಚಿನ ವಿವರಣೆಗಳು:
____________________________________
ಜ್ಞಾನ ಲಭ್ಯತೆ ಗ್ರಹಣ ವಸ್ತುಮುಖೇನ, ಭೌತಿಕ ಅಸ್ತಿತ್ವ ನಶ್ವರ
ವಸ್ತುವಲ್ಲವದು ನೋಡಲಾಗದೆ, ಕಾಣದ ನಾನು ಬ್ರಹ್ಮದ ತರ
ಬ್ರಹ್ಮವಿರೆ ವಸ್ತು ಇಂದ್ರಿಯ ಕಾಣಬೇಕಿತ್ತು, ಭೌತಿಕಾ ನಶಿಸುತ
ನಿರಾಕಾರನಿಗಿತ್ತ ರೂಪ ವಸ್ತುವಿನ ಪೋಷಾಕ, ನಿರಸ್ತಿತ್ವದಸ್ತಿತ್ವ!
ಚರ್ಚಾವಸ್ತು ಅನುಭವಗಮ್ಯ, ಕಣ್ಣೋಟ ವಸ್ತು ಸ್ವಾನುಭವ ವಿಷಯ
ತತ್ವಮಸಿ ಎನ್ನೆ ತಾನು ಬ್ರಹ್ಮನಾಗುತ, ವಿಷಯವಾಗುವ ಸಕಾಯ
ತಿಳಿದುಕೊಳ್ಳುವವ ತಾನು, ಬ್ರಹ್ಮ ತಿಳಿದವನೊ ಅಲ್ಲವೊ ಅರಿಯ
ಸರ್ವವ್ಯಾಪಕ ಪರಮಾಣು, ಬ್ರಹ್ಮದೇಕವ್ಯಾಪ್ತಿಯಸ್ತಿತ್ವವನೆ ಪುರಿವ!
ಗಾಯತ್ರೀ ಮಂತ್ರದ ಕುರಿತಾಗಿ ಇನ್ನಷ್ಟು ವಿವರಗಳು:
__________________________________________
ಪವಿತ್ರ ಶ್ರೇಷ್ಠ ಶಕ್ತ ಗಾಯತ್ರೀಮಂತ್ರ, ನೇರ ವೇದೋಪನಿಷತ್ತಿನಿಂದ
ಬ್ರಹ್ಮಸಾಕ್ಷಾತ್ಕಾರ ಮಾರ್ಗಕುಪನಿಷತ್ತು, ಬ್ರಹ್ಮ ಕುರಿತಾಡಿರೆ ವೇದ
ಮಂತ್ರ ಯಜ್ಞಯಾಗಾದಿ ವೇದದ ಸಾರ, ಗಾಯತ್ರಿಗೆ ಮೂಲಾಧಾರ
ಪ್ರಾಯೋಗಿಕನುಷ್ಟಾನ ಮಾರ್ಗವಿಧಾನ, ಉಪನಿಷತ್ತಿನಲಿ ಸಾಕಾರ!
ಪ್ರಥಮ ದ್ರಷ್ಠಾರ ವಿಶ್ವಾಮಿತ್ರ, ಮೂರು ಸಾಲಿನಾ ಅಷ್ಟ ಬೀಜಾಕ್ಷರ
ಪ್ರಣವಾ ತ್ರೈವ್ಯಾಹೃತಿ ಬೆನ್ನಿಗೆ, ಗಾಯತ್ರೀ ಛಂದಸ್ಸ ಇಪ್ಪತ್ನಾಲ್ಕಕ್ಷರ
ನಾದಬಿಂದು ಶಬ್ದದ ವ್ಯಕ್ತರೂಪ, ಜಡಶಕ್ತಿ ಶಿವಡಮರುಗದಿ ಉದ್ಭವೆ
ಶಬ್ದಬ್ರಹ್ಮ ಪ್ರಥಮ ರೂಪಾಂತರ ಓಂಕಾರ, ಗಾಯತ್ರಿಗೂ ಆರಂಭವೆ!
ಪ್ರಣವಾ ವಾಹೃತಿ ನಂತರದ ಸಾಲಾಗಿ ಗಾಯತ್ರೀ ಮಂತ್ರದ ಮೊದಲ ಪಾದ
'ತತ್ ಸವಿತುರ್ ವರೇಣ್ಯಂ' ಮೊಳಗುತ 'ಆ ಸೃಷ್ಟಿಕರ್ತ ಪರಮೋನ್ನತ' ಎಂದ
'ಭರ್ಗೋ ದೇವಸ್ಯ ಧೀಮಹಿಃ' ಸ್ವಯಂಪ್ರಕಾಶರೂಪಿ ಪರಬ್ರಹ್ಮ ಧ್ಯಾನದೆ ಲೀನ
'ಧೀಯೋಯೋನಃಪ್ರಚೋದಯಾತ್' ಮನ ಮಾರ್ಪಡಿಸೆ ಬ್ರಹ್ಮ ಪ್ರಚೋದನ!
ಮನ ರೂಪಾಂತರ ಪ್ರಚೋದಿಸುವ ಪರಬ್ರಹ್ಮನ ಪ್ರಕಾಶಕ ರೂಪ
ಶ್ರದ್ಧೆಯ ಧ್ಯಾನದ ಉದ್ಗೋಷವೆ ಗಾಯತ್ರೀಮಂತ್ರದರ್ಥ ಸ್ವರೂಪ
ಪರಬ್ರಹ್ಮಸ್ಥಾಯಿಯಲಿಹ ಮಾನಸಿಕಸ್ತರಕೆ ಬೇಕಿಲ್ಲ ರೂಪಾಂತರ
ಕೆಳಸ್ತರಗಳಲಷ್ಟೆ ನಡೆಯುವ ಪ್ರಕ್ರಿಯೆ, ಉನ್ನತಸ್ತರಕೇರುವ ತರ!
ಗಾಯತ್ರಿ ಮಂತ್ರದ ಮೊದಲ ಪಾದ ಪ್ರತಿನಿಧಿಸಿ ಪ್ರಾಣಶಕ್ತಿ
ವೇದೋಪನಿಷತ್ತಿನ ಪರಬ್ರಹ್ಮ ಜ್ಞಾನಕೆ ಎರಡನೆ ಪಾದದಶಕ್ತಿ
ತುರೀಯಾವಸ್ಥೆಗೆ ಮೂರನೆ ಪಾದ, ಅಧಿಗಮಿಸೆ ಸಾಕ್ಷಾತ್ಕಾರ
ಜ್ಞಾನಕೆ ಶೂನ್ಯಕೆ ಗಾಯತ್ರಿ ಛಂಧಸ್ಸು ಕಾಪಾಡಿ ಸ್ಥೂಲಶರೀರ!
ಪರಬ್ರಹ್ಮದಂತೆ ಸೂರ್ಯ, ಜಗದ ಕ್ರಿಯಾಶೀಲ ಶಕ್ತಿ
ಸ್ವಯಂ ಪ್ರಕಾಶಕ ನೀಡಿ ಬೆಳಕ, ಸೃಷ್ಟಿಕರ್ತನ ರೀತಿ
ಬ್ರಹ್ಮವನೇಕ ಸ್ವಪ್ರಕಾಶ ಸೂರ್ಯಗಳಾಂತರ್ಯಾತ್ಮ
ಗಾಯತ್ರೀ ಪರಬ್ರಹ್ಮದ ಮಂತ್ರ, ಸಾಕ್ಷಾತ್ಕಾರಬ್ರಹ್ಮ!
ಪಂಚದಶಿಯನುಚ್ಛರಿಸಲೊಮ್ಮೆ ಗಾಯತ್ರೀ ಮಂತ್ರದ ಮೂರ
ಪಂಚದಶಿ ಪ್ರತಿ ಸಾಲು ಸಮ, ಗಾಯತ್ರಿಯ ಪೂರ್ಣೊಚ್ಛಾರ
ವಿಶ್ವಾಮಿತ್ರಾದಿ ಸಹಿತ ಮಂತ್ರಕೆ ಶಾಪ, ದುರ್ಬಳಕೆಗೆ ಅಂಕೆ
ನಿವಾರಿಸದೆ ದೊರಕದಾ ಸಿದ್ದಿ, ವಿಮೋಚನಾಮಂತ್ರ ಬಳಕೆ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು