೧೧೪. ಲಲಿತಾ ಸಹಸ್ರನಾಮ ೪೪೨ರಿಂದ ೪೫೨ನೇ ನಾಮಗಳ ವಿವರಣೆ

೧೧೪. ಲಲಿತಾ ಸಹಸ್ರನಾಮ ೪೪೨ರಿಂದ ೪೫೨ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೪೪೨ - ೪೫೨

Kumāra-gaṇanāthāmbā कुमार-गणनाथाम्बा (442)

೪೪೨. ಕುಮಾರ-ಗಣನಾಥಾಂಬಾ

             ಕಾರ್ತಿಕೇಯ ಅಥವಾ ಸ್ಕಂದ ಮತ್ತು ಗಣೇಶ ಇವರ ಮಾತೆ.

             ಈ ನಾಮಕ್ಕೆ ಇನ್ನೊಂದು ಗೂಡಾರ್ಥವೂ ಇದೆ. ಈ ನಾಮವನ್ನು ಈ ವಿಧವಾಗಿ ಬಿಡಿಸಬಹುದು - ಕು (ನೀಚವಾದ) + ಮಾರಗಣ (ತೀವ್ರವಾದ ಬಯಕೆ ಅಥವಾ ಭಾವೋದ್ವೇಗ) + ನಾಥಾ (ಮೇಲಿನೆರಡು ಗುಣಗಳ ಒಡತಿ) + ಅಂಬಾ (ಬೆಸೆಯುವವಳು). ಇದನ್ನೇ ಈ ವಿಧವಾಗಿ ಅನುವಾದಿಸಬಹುದು, ಅದೇನೆಂದರೆ, "ನೀಚವಾದ ಮತ್ತು ತೀವ್ರವಾದ ಬಯಕೆ ಅಥವಾ ಭಾವೋದ್ವೇಗಗಳ ಒಡತಿಯು ಅವುಗಳ ಮೂಲಕ ಈ ಭೌತಿಕ ಪ್ರಪಂಚಕ್ಕೆ ನಮ್ಮನ್ನು ಕಟ್ಟಿಹಾಕುವವಳು; ಈ ಬಂಧನವೇ ಅಹಂಕಾರವೆಂದು ಕರೆಯಲ್ಪಡುತ್ತದೆ. ಕುಮಾರಸ್ವಾಮಿಯು ಅಹಂಕಾರದ ಒಡೆಯನೆಂದು ಹೇಳಲಾಗುತ್ತದೆ. ವಿಷ್ಣು ಅಥವಾ ಶಿವನನ್ನು ಪುರಷನೆಂದು ಕರೆಯಲಾಗುತ್ತದೆ. ಅವರ ಸಂಗಾತಿಗಳಾದ ಲಕ್ಷ್ಮೀ ಅಥವಾ ಪಾರ್ವತೀ ದೇವಿಯರನ್ನು ಅವ್ಯಕ್ತಾ (ರೂಪಾಂತರ ಹೊಂದದ ಪ್ರಕೃತಿ) ಎಂದು ಕರೆಯಲಾಗುತ್ತದೆ. ಅಹಂಕಾರವು ಪುರುಷ ಮತ್ತು ಅವ್ಯಕ್ತಾ ಇವರುಗಳ ಸಮಾಗಮದಿಂದ ಉತ್ಪನ್ನವಾಗುತ್ತದೆ. ಪುರುಷನು ರಾಜನಾದರೆ, ಅವ್ಯಕ್ತಾವು ರಾಣಿ ಮತ್ತು ಅಹಂಕಾರವು ಸೇನಾಧಿಪತಿಯಾಗಿದೆ.

Tuṣṭiḥ तुष्टिः (443)

೪೪೩. ತುಷ್ಠಿಃ

            ಈ ನಾಮದಿಂದ ಪ್ರಾರಂಭಿಸಿ ಮುಂದಿನ ಏಳು ನಾಮಗಳು ದೇವಿಯ ವಿಶಿಷ್ಠ ಗುಣಗಳನ್ನು ವರ್ಣಿಸುತ್ತವೆ.

            ದೇವಿಯು ಸಂತೋಷದ ರೂಪದಲ್ಲಿದ್ದಾಳೆ. ಈ ಸಂತೋಷವು ತೃಪ್ತಿಯಿಂದ ಉಂಟಾಗಿದೆ. ದೇವಿಯು ಯಾವಾಗಲೂ ಕೊಡುವವಳಾಗಿದ್ದಾಳೆ. ಆಕೆಯು ಕೊಡುವುದರ ಮೂಲಕ ಸಂತೋಷವನ್ನು ಪಡೆಯುತ್ತಾಳೆ.

Puṣṭiḥ पुष्टिः (444)

೪೪೪. ಪುಷ್ಠಿಃ

            ದೇವಿಯು ಪರಿಪೂರ್ಣತೆಯ ರೂಪದಲ್ಲಿದ್ದಾಳೆ; ದೇಹ ಮತ್ತು ಮನಸ್ಸಿನ ಪರಿಪೂರ್ಣತೆ.

Matiḥ मतिः (445)

೪೪೫. ಮತಿಃ

         ದೇವಿಯು ಬುದ್ಧಿವಂತಿಕೆಯ ರೂಪದಲ್ಲಿದ್ದಾಳೆ. ಪುರುಷ ಅಥವಾ ಜೀವಿಯು ವಿಕಸನ ಹೊಂದಿದಾಗ ಬುದ್ಧಿವಂತಿಕೆಯು ಅನುಭವದ ಮೂಲಕ ಗಳಿಸಲ್ಪಡುತ್ತದೆ. ದೇವಿಯು ಈ ವಿಧವಾದ ಬುದ್ಧಿಯ ರೂಪದಲ್ಲಿದ್ದಾಳೆ. ಶಿವನನ್ನು ಮತಿ ಎಂದು ಕರೆಯುತ್ತಾರೆ, ಏಕೆಂದರೆ ಅವನಿಗೆ ವೇದಗಳ ಕುರಿತಾದ ಜ್ಞಾನವಿರುವುದರಿಂದ.

Dhṛtiḥ धृतिः (446)

೪೪೬. ಧೃತಿಃ

            ದೇವಿಯು ಧೈರ್ಯ ಮತ್ತು ಛಲದ ರೂಪದಲ್ಲಿದ್ದಾಳೆ;  ಪ್ರಪಂಚವನ್ನಾಳಲು ಈ ಗುಣಗಳು ಅವಶ್ಯವಾಗಿವೆ.

Śāntiḥ शान्तिः (447)

೪೪೭. ಶಾಂತಿಃ

           ದೇವಿಯು ಶಾಂತತೆಗೆ ಹೆಸರಾಗಿದ್ದಾಳೆ. ಶಾಂತಿ ಎಂದರೆ ಇಂದ್ರಿಯ ನಿಗ್ರಹದ ಮೂಲಕ ನಿರಂತರವಾಗಿ ವಿಚಲಿತಗೊಳ್ಳದ ಮನಸ್ಸನ್ನು ಹೊಂದಿರುವುದು. ಮೂಗಿನ ತುದಿಯಿಂದ ಹದಿನೈದು ಅಂಗುಲಗಳ ದೂರದಲ್ಲಿ ಆತ್ಮವು ಪರಿಶುದ್ಧವಾಗುತ್ತದೆ (ಬಹುಶಃ ಇದು ಇಂಗಾಲದ ಡೈಆಕ್ಸೈಡನ್ನು ಹೊರಹಾಕಿ ಆಮ್ಲಜನಕವನ್ನು ಒಳಗೆಳೆದುಕೊಳ್ಳುವುದನ್ನು ಸೂಚಿಸಬಹುದು). ಇದನ್ನೇ ಹದಿನಾರನೇ ಕಲಾ ಎಂದು ಕರೆಯಲಾಗುತ್ತದೆ ಮತ್ತು ಈ ಕಲಾಕ್ಕೆ ಶಾಂತಿ ಎಂದು ಹೆಸರು. ದೇವಿಯು ಶಾಂತಿಯ ಸ್ವರೂಪದಲ್ಲಿದ್ದಾಳೆ; ಆತ್ಮಗಳನ್ನು ಅವರ ಕರ್ಮಗಳಿಗನುಸಾರವಾಗಿ ಶುದ್ಧಮಾಡುತ್ತಾ.

Svastimatī स्वस्तिमती (448)

೪೪೮. ಸ್ವಸ್ತಿಮತಿಃ

            ಸ್ವಸ್ತಿಮತಿ ಎಂದರೆ ಅಂತಿಮ ಸತ್ಯ. ಅಂತಿಮವಾದ ಸತ್ಯವು ಪ್ರಯೋಗಾತ್ಮಕ (ಪ್ರಯೋಗಗಳಿಂದ ಸಿದ್ಧಪಡಿಸಬಹುದಾದ) ಸತ್ಯ ಮತ್ತು ಅದರ ರೂಪಾಂತರಗಳಿಗೆ ಅತೀತವಾಗಿದೆ. ಬೃಹದಾರಣ್ಯಕ ಉಪನಿಷತ್ತು (೨.೧.೨೦) ಈ ರೀತಿಯಾದ ಸಂದರ್ಭವನ್ನು ಈ ವಿಧವಾಗಿ ಉಲ್ಲೇಖಿಸುತ್ತದೆ, "ಸತ್ಯದ ಸತ್ಯ (ಅಂತಿಮ ಅಥವಾ ಪರಿಪೂರ್ಣ ಸತ್ಯ), ಇದಕ್ಕೆ ಅಧಿಗಮಿಸುವ ಗುಣವಿದ್ದು ಇದನ್ನು ಅರಿಯುವುದು ಕಷ್ಟತರವಾದುದು"

Kāntiḥ कान्तिः (449)

೪೪೯. ಕಾಂತಿಃ

          ಈ ನಾಮವು ಸ್ವಯಂಪ್ರಕಾಶವಾಗಿರುವ ಬ್ರಹ್ಮದ ಲಕ್ಷಣವನ್ನು ಕುರಿತು ಹೇಳುತ್ತದೆ. ಇದು ಬ್ರಹ್ಮವು ಅಸ್ತಿತ್ವದಲ್ಲಿರಬೇಕೆನ್ನುವುದರ ಇಚ್ಛೆಯಾಗಿದೆ. ಈ ವಿಧವಾದ ಪ್ರಕಾಶದಿಂದ ಸೂರ್ಯನು ಬೆಳಗುತ್ತಾನೆ ಮತ್ತು ಈ ಪ್ರಪಂಚವು ಅಸ್ತಿತ್ವದಲ್ಲಿರುತ್ತದೆ.

          ಈ ನಾಮದೊಂದಿಗೆ ದೇವಿಯನ್ನು ವರ್ಣಿಸುವ ಏಳು ಲಕ್ಷಣಗಳು ಕೊನೆಗೊಳ್ಳುತ್ತವೆ.

Nandinī नन्दिनी (450)

೪೫೦. ನಂದಿನೀ

             ನಂದಿನೀ ಎನ್ನುವುದು ಕಾಮಧೇನುವಿನಂತೆ ಬೇಡಿದ್ದನ್ನು ನೀಡುವ ಒಂದು ಪವಿತ್ರವಾದ ಆಕಳು. ನಂದಿನೀ ಎಂದರೆ ಗಂಗಾನದಿ ಎನ್ನುವ ಅರ್ಥವೂ ಇದೆ. ತನ್ನ ಶುದ್ಧೀಕರಣಗೊಳಿಸುವ ಕಾರ್ಯಕ್ಕೆ ಹೆಸರುವಾಸಿಯಾಗಿರುವ ಗಂಗಾನದಿಯ ರೂಪದಲ್ಲಿ ದೇವಿಯು ಇರುತ್ತಾಳೆ.

             ನಂದಿನೀ ಎಂದರೆ ಪ್ರಕಾಶಿಸುವವಳು ಎಂದೂ ಅರ್ಥೈಸಬಹುದು. ಇದು ಹಿಂದಿನ ನಾಮದ ಮುಂದುವರಿಕೆಯಾಗಿದೆ.  

Vighnanāśinī विघ्ननाशिनी (451)

೪೫೧. ವಿಘ್ನನಾಶಿನೀ

             ದೇವಿಯು ಅಡಚಣೆಗಳನ್ನು ನಾಶಮಾಡುವವಳಾಗಿದ್ದಾಳೆ. ಆಕೆಯು ಬ್ರಹ್ಮದ ಜ್ಞಾನವನ್ನು ಪಡೆಯುವಾಗ ಎದುರಾಗುವ ಎಲ್ಲಾ ವಿಧವಾದ ಅಡ್ಡಿ ಆತಂಕಗಳನ್ನು ನಿವಾರಿಸುತ್ತಾಳೆ.

Tejovatī तेजोवती (452)

೪೫೨. ತೇಜೋವತೀ

             ದೇವಿಯು ಕಿರಣಗಳನ್ನು ಹೊರಸೂಸುತ್ತಾಳೆ. ಈ ನಾಮವು ಸ್ವಲ್ಪ ಹೆಚ್ಚೂ ಕಡಿಮೆ ೪೪೯ ನಾಮವಾದ ಕಾಂತಿಯಂತೆಯೇ ಇದೆ. ಆದರೆ ಇವರೆಡರಲ್ಲೂ ಒಂದು ಸೂಕ್ಷ್ಮವಾದ ವ್ಯತ್ಯಾಸವಿದೆ. ಮೊದಲಿನ ನಾಮವು ಬ್ರಹ್ಮದ ಇಚ್ಛೆಯಾಗಿದ್ದರೆ ಈ ನಾಮವು ಬ್ರಹ್ಮದ ಸೃಜನಾತ್ಮಕ ಅಂಶವನ್ನು ಕುರಿತು ಹೇಳುತ್ತದೆ. ಸೃಷ್ಟಿ ಮತ್ತು ಸ್ಥಿತಿ ಎರಡಕ್ಕೂ ಬೆಳಕಿನ ಅವಶ್ಯಕತೆ ಇದೆ. ಈ ನಾಮವು ದೇವಿಯ ಪ್ರಕಾಶಕ ಸ್ವಭಾವದ ಕುರಿತಾಗಿ ಹೇಳುತ್ತದೆ; ಇದರಿಂದ ಇತರೇ ಪ್ರಕಾಶ ವಸ್ತುಗಳೂ ತಮ್ಮ ಬೆಳಕನ್ನು ಪಡೆಯುತ್ತವೆ. ಈ ನಾಮವು ಬ್ರಹ್ಮವು ಸ್ವಯಂಪ್ರಕಾಶವೆನ್ನುವುದನ್ನು ಮತ್ತೊಮ್ಮೆ ದೃಢಪಡಿಸುತ್ತದೆ.

            ಬೃಹದಾರಣ್ಯಕ ಉಪನಿಷತ್ತು (೩.೮.೯) ಹೇಳುತ್ತದೆ, "ಸೂರ್ಯ ಮತ್ತು ಚಂದ್ರರು ತಮ್ಮ ಸ್ಥಾನಗಳಲ್ಲಿ ಆ ಪ್ರಬಲವಾದ ರೂಪಾಂತರ ಹೊಂದದ್ದರ ನಿಯಂತ್ರಣದಲ್ಲಿದ್ದಾರೆ".

*******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 442 - 452 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
Average: 5 (1 vote)

Comments

ಧನ್ಯವಾದಗಳು ಪಾರ್ಥರೆ, ನಿಮಗೂ ಸಹ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sun, 09/08/2013 - 15:09

ಶ್ರೀಧರರೆ, ೧೧೪. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ, ಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೪೪೨ - ೪೫೨
__________________________________

೪೪೨. ಕುಮಾರ-ಗಣನಾಥಾಂಬಾ
ಭಂಡಾಸುರ ಮೂಷಿಕರ ದಣಿಸೆ, ಗಣೇಶನ ಸೃಜಿಸಿದ ಶಕ್ತಿ
ತಾರಕನ ಮರ್ದನಕೆ ಸ್ಥಂದ, ಕಾರ್ತಿಕೇಯನಾದ ನಿಯುಕ್ತಿ
ನೀಚ ಕಾಮನೆ ಭಾವೋದ್ವೇಗದಿಂದ ಕಟ್ಟಿ ಇಹಕೆ ಜಗದಂಬ
ಅಹಂ ಬಂಧದೆ ಆಳುತ ಲಲಿತೆ ಕುಮಾರ-ಗಣನಾಥಾಂಬಾ!

೪೪೩. ತುಷ್ಠಿಃ 
ನೀಡುವ ಸಂತೋಷವೆ ತೃಪ್ತಿ, ಅವಿರತ ನೀಡುತಿರೆ ಸಂತೃಪ್ತಿ
ಸಂತೋಷ ರೂಪದಲಿ ಸರ್ವದಾ ನೀಡಿಹಳು ಲಲಿತಾ ತುಷ್ಠಿಃ
ಮೊಗೆಮೊಗೆದು ಕೊಡಲೆಂದೆ ತುಂಬಿಸಿ ಒಡಲಲಿ ಸಂತೋಷ
ಭಕ್ತ ಗಣಕೆಲ್ಲವ ಹಂಚುತ, ಪಡೆವ ಸಂತುಷ್ಟಿಗೆ ದೇವಿಗೆ ಹರ್ಷ!

೪೪೪. ಪುಷ್ಠಿಃ
ತುಷ್ಠಿಗಿರಬೇಕು ಪುಷ್ಠಿ, ಪುಷ್ಠಿ ಜತೆಯಿರೆ ಸಂತುಷ್ಠಿ
ಸಮೃದ್ಧಿ ಪರಿಪೂರ್ಣತೆ ರೂಪದಿ, ಲಲಿತಾ ಪುಷ್ಠಿಃ
ಪರಿಪೂರ್ಣ ದೇಹ ಬಿಂಬಿಸಿ ಪರಿಪೂರ್ಣ ಮನಸು
ಪರಿಪೂರ್ಣತೆಯತ್ತ ತನುಮನ, ಭಕ್ತಿಮನಹರಿಸು!

೪೪೫. ಮತಿಃ 
ವೇದ ಕುರಿತಾದ ಜ್ಞಾನ, ಮತಿಯನಾಗಿಸಿ ಶಿವಸಮಾನ
ಜೀವಿ ವಿಕಸನದೆ ಬುದ್ದಿವಂತಿಕೆ, ಅನುಭವದ ಮುಖೇನ
ಪರಿಪಕ್ವ ಬುದ್ದಿವಂತಿಕೆಯ ರೂಪಿನಲಿಹ ಲಲಿತಾ ಮತಿಃ
ಜ್ಞಾನದಿಂದರಿವ ಬುದ್ಧಿಗೆ, ಪ್ರೇರೇಪಿಸುತೆಲ್ಲರ ಅಲ್ಪಮತಿ!

೪೪೬. ಧೃತಿಃ
ಧೃತಿಗೆಟ್ಟರೆ ಅಲ್ಪಮತಿ, ಬಾಳಲುಂಟೇ ಲೌಕಿಕ ಪ್ರಪಂಚದಿ
ಬ್ರಹ್ಮಾಂಡವನಾಳುವ ಹೊಣೆ, ಹೆಗಲಲ್ಹೊತ್ತ ಲಲಿತೆ ಧೃತಿಃ
ಧೈರ್ಯಛಲದಿ ಮುನ್ನಡೆಸುತ ಜಗ, ತೋರಿ ಬದುಕ ಹಾದಿ
ಜೀವನ ರಣ ಗೆಲ್ಲುವ ಗುಣ, ಸ್ವರೂಪದಲಿ ತಾನಾಗಿಹ ಸಿದ್ದಿ!

೪೪೭. ಶಾಂತಿಃ 
ಷೋಡಷ ಕಲಾ ಶಾಂತಿ, ಕರ್ಮಾನುಸಾರ ಅತ್ಮಶುದ್ಧಿಗಣತಿ
ಶಾಂತಾ ಸ್ವರೂಪದಲಿ ದೇವಿ, ಶುದ್ಧಿ ಮಾಡಿಹಳಾಗಿ ಶಾಂತಿಃ
ನಿರಂತರ ಅವಿಚಲಿತ ಮನ, ಇಂದ್ರಿಯ ನಿಗ್ರಹದೆ ಸಾಧನ
ಶಾಂತಿ ಪರಿಪೂರ್ಣತೆ ಹೃನ್ಮನ, ಪ್ರಕಟ ಲಲಿತೆಯಾಗಿ ಘನ!

೪೪೮. ಸ್ವಸ್ತಿಮತಿಃ
ಪ್ರಯೋಗ ಸಿದ್ದ ರೂಪಾಂತರಗಳಿಗೆ, ಅತೀತವೀ ಅಂತಿಮಸತ್ಯ
ಸ್ವಸ್ತಿಮತಿಃ ಲಲಿತಾ ರೂಪಿಣಿ, ಸಾರುತಲಿ ಅಂತಿಮಜ್ಞಾನ ನಿತ್ಯ
ಅಧಿಗಮಿಸುತೆಲ್ಲವನತಿಕ್ರಮಿಸುವ, ಸತ್ಯದ ಸತ್ಯವೆ ಪರಿಪೂರ್ಣ
ಅರಿಯೆ ದುರ್ಗಮ ಅಂತಿಮ ಸತ್ಯ, ಮಾಯೆಯಬಲೆ ಸಂಕೀರ್ಣ!

೪೪೯. ಕಾಂತಿಃ
ಏಳನೆ ಸಪ್ತ ಲಕ್ಷಣವೆ ಕಾಂತಿಃ, ಲಲಿತೆಯಾಗಿಹ ಸ್ವಯಂಪ್ರಕಾಶ
ಅಸ್ತಿತ್ವದಿಚ್ಛೆಯಾಗುತ ಪ್ರಕಟ, ಬ್ರಹ್ಮ-ಬ್ರಹ್ಮಾಂಡಗಳ ಸಮಾವೇಶ
ಪರಬ್ರಹ್ಮದಿಚ್ಛೆಯತನಕ ಬೆಳಗುತ, ಅಸ್ತಿತ್ವದಲಿ ಪ್ರಾಪಂಚಿಕಗಾನ
ಸೂರ್ಯಪ್ರಕಾಶದಂತೆ ಅವಿರತ, ಲೋಕ ವ್ಯಾಪಾರದಲಿಡೆ ಗಮನ!

೪೫೦. ನಂದಿನೀ
ಕಾಂತಿ ಪ್ರವಹಿಸಿದಾ ರೂಪ, ಗಂಗೆಯಾಗ್ಹರಿದು ತೊಳೆವಂತೆ ಪಾಪ
ಗಂಗಾಕಾಂತಿ ಪ್ರಕಾಶಾ, ಪ್ರಕಟವಾಗುತ ಲಲಿತಾ ನಂದಿನೀ ರೂಪ
ಬೇಡಿದ್ದೆಲ್ಲವ ಕೊಡುವ ನಂದಿನೀ ಧೇನು, ಪವಿತ್ರ ಕ್ಷೀರದಂತೆ ಸದಾ
ಬಯಸಿದ್ದೆಲ್ಲ ಕರುಣಿಸಿ ದೇವಿ, ನಂದಿನಿಯಂತೆ ಪೂರೈಸಿ ಸರ್ವದಾ!

೪೫೧. ವಿಘ್ನನಾಶಿನೀ
ಮಾಯೆಯಡಿ ಸಿಲುಕಿದ ಜೀವ, ಅಜ್ಞಾನದೆ ಸಿಲುಕೆ ಲೌಕಿಕ ನೋವ
ಅರಿತರಿಯಬಿಡ ಮಾಯೆ, ತಂದೊಡ್ಡುವ ವಿಘ್ನ ಅಡ್ಡಿ ಆತಂಕ ಭಾವ
ನಿವಾರಿಸಿ ಅಡೆತಡೆ, ಹಾದಿ ಸುಗಮವಾಗಿಸಿ ವಿಘ್ನನಾಶಿನೀ ಲಲಿತಾ
ಬ್ರಹ್ಮಜ್ಞಾನವರಸ್ಹೊರಟವರ ಕರುಣೆಗೆ, ವಿಘ್ನೇಶ್ವರ ರೂಪದೆ ನಿಯುಕ್ತ!

೪೫೨. ತೇಜೋವತೀ
ಕಾಂತಿ ಸೂಸುತ ಬ್ರಹ್ಮದ ಇಚ್ಛೆ, ಪಸರಿಸಲು ತೇಜೋವತೀ ಲಲಿತೆ
ಬೆಳಕಿನ ಕಿರಣಗಳ್ಹೊರಸೂಸುತಾ ದೇವಿ, ಸೃಷ್ಟಿಸ್ಥಿತಿಗಳ ಸಲಹುತೆ
ಬೆಳಕಿರದ ಚರಾಚರ ಜಗಕೆಲ್ಲಿದೆ ಜೀವ, ಎರವಲು ಪಡೆದಾ ಪರುಷ
ಸೂರ್ಯ ಚಂದ್ರರು ಬ್ರಹ್ಮ ನಿಯಂತ್ರಿತ, ಪರಬ್ರಹ್ಮ ಸ್ವಯಂ ಪ್ರಕಾಶ!
 
ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು
 

ಲಲಿತಾ ಸಹಸ್ರನಾಮ ೪೪೨ - ೪೫೨
ನಾಗೇಶರೆ,
ಈ ಕಂತಿನ ಪದ್ಯಗಳನ್ನು ಬೆಳ್ಳಂಬೆಳಿಗ್ಗೆ ಓದುತ್ತಿದ್ದಂತೆಯೇ ಮನಸ್ಸು ಪ್ರಫುಲ್ಲಗೊಂಡು ಆನಂದಹೊಂದಿದ್ದು ಸುಳ್ಳಲ್ಲ. ನಿನ್ನೆಯ ದಿವಸ ಮಳೆಯ ಪ್ರಭಾವದಿಂದಾಗಿ ನೆಟ್-ಕನೆಟ್ಕ್ ಆಗಿರಲಿಲ್ಲ. ನನ್ನದು ಕೇಬಲ್ ನೆಟ್; ಮಳೆ ಬಂದಿತೆಂದರೆ ಸಿಗ್ನಲ್ ಸಮಸ್ಯೆಯಾಗುತ್ತಿದೆ :( ಇರಲಿ ಬಿಡಿ ಒಟ್ಟಾರೆಯಾಗಿ ಸುಂದರ ಕವನಗಳನ್ನು ಓದಿ ಸಂತೋಷವಾಯಿತು. ಕೆಲವೊಂದು ತಪ್ಪುಗಳನ್ನು ಸರಿಪಡಿಸಿದರೆ ಈ ಕಂತು ಇನ್ನೂ ಉತ್ತಮಗೊಳ್ಳುವುದರಲ್ಲಿ ಎರಡು ಮಾತಿಲ್ಲ.
೪೪೨. ಕುಮಾರ-ಗಣನಾಥಾಂಬಾ
:
ತಾರಕನ ಮರ್ದನಕೆ ಸ್ಥಂದ, ಕಾರ್ತಿಕೇಯನಾದ ನಿಯುಕ್ತಿ
=ತಾರಕನ ಮರ್ದನಕೆ ಸ್ಕಂದ ಕಾರ್ತಿಕೇಯನ ನಿಯುಕ್ತಿ
ನೀಚ ಕಾಮನೆ ಭಾವೋದ್ವೇಗದಿಂದ ಕಟ್ಟಿ ಇಹಕೆ ಜಗದಂಬ
ಜಗದಂಬ=ಜಗದಂಬಾ ಪ್ರಯೋಗವೂ ಸಾಧುವೇ
.....................................................-ಗಣನಾಥಾಂಬಾ!

೪೪೩. ತುಷ್ಠಿಃ , ೪೪೪. ಪುಷ್ಠಿಃ, ೪೪೫. ಮತಿಃ, ೪೪೬. ಧೃತಿಃ = ಇವೆಲ್ಲವೂ ಸರಿಯಾಗಿವೆ.

೪೪೭. ಶಾಂತಿಃ
ಷೋಡಷ ಕಲಾ ಶಾಂತಿ, ಕರ್ಮಾನುಸಾರ ಅತ್ಮಶುದ್ಧಿಗಣತಿ
ಷೋಡಷ=ಷೋಡಶ
೪೪೮. ಸ್ವಸ್ತಿಮತಿಃ
ಪ್ರಯೋಗ ಸಿದ್ದ ರೂಪಾಂತರಗಳಿಗೆ, ಅತೀತವೀ ಅಂತಿಮಸತ್ಯ
ಸಿದ್ದ=ಸಿದ್ಧ

೪೪೯. ಕಾಂತಿಃ
ಏಳನೆ ಸಪ್ತ ಲಕ್ಷಣವೆ ಕಾಂತಿಃ, ಲಲಿತೆಯಾಗಿಹ ಸ್ವಯಂಪ್ರಕಾಶ
ಸಹಸ್ರನಾಮದ ೪೪೩-೪೪೯ನೇ ನಾಮಗಳ ಗುಚ್ಛದಲ್ಲಿ ಕಾಂತಿಯೆನ್ನುವುದು ಏಳನೆಯ ಲಕ್ಷಣವಾಗಿದೆ. ಆದ್ದರಿಂದ ಏಳನೆ ಸಪ್ತ ಲಕ್ಷಣವೆ ಕಾಂತಿಃ ಎನ್ನುವ ಪ್ರಯೋಗ ಅಷ್ಟು ಸಮಂಜಸವೆನಿಸದು. ಆದ್ದರಿಂದ ಈ ಸಾಲನ್ನು ಸ್ವಲ್ಪ ಮಾರ್ಪಡಿಸಲು ಸಾಧ್ಯವೇ ನೋಡಿ.
ಅಸ್ತಿತ್ವದಿಚ್ಛೆಯಾಗುತ ...
......
.................................ಗಮನ!
ಮೇಲಿನ ಮೂರು ಸಾಲುಗಳನ್ನು ಮರುಪರಿಶೀಲಿಸಿ ಮೂಲ ಆಶಯದ ಅರ್ಥಕ್ಕೆ ಸ್ವಲ್ಪ ದಕ್ಕೆ ಬರುವಂತಿದೆ.

೪೫೦. ನಂದಿನೀ, ೪೫೧. ವಿಘ್ನನಾಶಿನೀ -ಇವೆರಡೂ ಸರಿಯಾಗಿವೆ.

೪೫೨. ತೇಜೋವತೀ
ಕಾಂತಿ ಸೂಸುತ ಬ್ರಹ್ಮದ ಇಚ್ಛೆ, ಪಸರಿಸಲು ತೇಜೋವತೀ ಲಲಿತೆ
ಬೆಳಕಿನ ಕಿರಣಗಳ್ಹೊರಸೂಸುತಾ ದೇವಿ, ಸೃಷ್ಟಿಸ್ಥಿತಿಗಳ ಸಲಹುತೆ
ಸೃಷ್ಟಿಸ್ಥಿತಿಗಳ ಸಲಹುತೆ=ಸೃಷ್ಟಜೀವಿಗಳ ಸಲಹುತೆ
ಬೆಳಕಿರದ ಚರಾಚರ ಜಗಕೆಲ್ಲಿದೆ ಜೀವ, ಎರವಲು ಪಡೆದಾ ಪರುಷ
ಎರವಲು ಪಡೆದಾ ಪರುಷ- ಇದಕ್ಕೆ ಸ್ವಲ್ಪ ವಿವರಣೆ ಕೊಡಿ.
ಸೂರ್ಯ ಚಂದ್ರರು ಬ್ರಹ್ಮ ನಿಯಂತ್ರಿತ, ಪರಬ್ರಹ್ಮ ಸ್ವಯಂ ಪ್ರಕಾಶ!
ಸೂರ್ಯ ಚಂದ್ರರೂ ಸಹ ಪರಬ್ರಹ್ಮದಿಂದ ಬೆಳಕನ್ನು ಪಡೆಯುತ್ತಾರೆ ಎನ್ನುವ ಅರ್ಥ ಹೊಂದಿದರೆ ಸಮಂಜಸವೆನಿಸುತ್ತದೆ.

ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ ಮತ್ತು ಸಮಸ್ತ ಸಂಪದಿಗರಿಗೆ ಗೌರಿ-ಗಣೇಶದ ಶುಭಾಶಯಗಳು,
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ತಮ್ಮ ಶುಭಾಶಯಕ್ಕೆ ಧನ್ಯವಾದಗಳು. ಹಾಗೆಯೆ, ನಿಮಗೂ, ನಿಮ್ಮ ಕುಟುಂಬಕ್ಕೂ ಮತ್ತು ಸಮಸ್ತ ಸಂಪದಿಗರಿಗೂ ಗೌರಿ ಗಣೇಶದ ಹಾರ್ದಿಕ ಶುಭಾಶಯಗಳು. ಇಂಟರ್ನೆಟ್ಟಿನ ವಿಘ್ನಗಳ ಸಮೇತ ಸಕಲ ವಿಘ್ನಗಳನ್ನು ಪರಿಹರಿಸುತ್ತ ಆ ವಿಘ್ನೇಶ್ವರನೂ ಸನ್ಮಂಗಳವನ್ನುಂಟು ಮಾಡಲಿ.

ಶ್ರೀಧರರೆ, ತಿದ್ದುಪಡಿಸಿದ ರೂಪ ಇಲ್ಲಿದೆ. ಈಗ ಸೂಕ್ತ ಕಾಣುವುದೆ ನೋಡಿ. ಪರುಷದ ಸಾಲು ನನಗೂ ಸಂಕೀರ್ಣವಾಗಬಹುದೆನಿಸಿತು, ಅದನ್ನು ಬದಲಾಯಿಸಿಬಿಟ್ಟೆ.

೪೪೨. ಕುಮಾರ-ಗಣನಾಥಾಂಬಾ
ಭಂಡಾಸುರ ಮೂಷಿಕರ ದಣಿಸೆ, ಗಣೇಶನ ಸೃಜಿಸಿದ ಶಕ್ತಿ
ತಾರಕನ ಮರ್ದನಕಾಗಿ ಸ್ಕಂದ ಕಾರ್ತಿಕೇಯನ ನಿಯುಕ್ತಿ
ನೀಚ ಕಾಮನೆ ಭಾವೋದ್ವೇಗದಿಂ ಕಟ್ಟಿ ಇಹಕೆ ಜಗದಂಬಾ
ಅಹಂ ಬಂಧದೆ ಆಳುತ ಲಲಿತೆ ಕುಮಾರ-ಗಣನಾಥಾಂಬಾ!

೪೪೭. ಶಾಂತಿಃ 
ಷೋಡಶ ಕಲಾ ಶಾಂತಿ, ಕರ್ಮಾನುಸಾರ ಅತ್ಮಶುದ್ಧಿಗಣತಿ
ಶಾಂತಾ ಸ್ವರೂಪದಲಿ ದೇವಿ, ಶುದ್ಧಿ ಮಾಡಿಹಳಾಗಿ ಶಾಂತಿಃ
ನಿರಂತರ ಅವಿಚಲಿತ ಮನ, ಇಂದ್ರಿಯ ನಿಗ್ರಹದೆ ಸಾಧನ
ಶಾಂತಿ ಪರಿಪೂರ್ಣತೆ ಹೃನ್ಮನ, ಪ್ರಕಟ ಲಲಿತೆಯಾಗಿ ಘನ!

೪೪೮. ಸ್ವಸ್ತಿಮತಿಃ
ಪ್ರಯೋಗ ಸಿದ್ಧ ರೂಪಾಂತರಗಳಿಗೆ, ಅತೀತವೀ ಅಂತಿಮಸತ್ಯ
ಸ್ವಸ್ತಿಮತಿಃ ಲಲಿತಾ ರೂಪಿಣಿ, ಸಾರುತಲಿ ಅಂತಿಮಜ್ಞಾನ ನಿತ್ಯ
ಅಧಿಗಮಿಸುತೆಲ್ಲವನತಿಕ್ರಮಿಸುವ, ಸತ್ಯದ ಸತ್ಯವೆ ಪರಿಪೂರ್ಣ
ಅರಿಯೆ ದುರ್ಗಮ ಅಂತಿಮ ಸತ್ಯ, ಮಾಯೆಯಬಲೆ ಸಂಕೀರ್ಣ!

೪೪೯. ಕಾಂತಿಃ
ಪರಬ್ರಹ್ಮದ ಲಕ್ಷಣವೀ ಕಾಂತಿಃ, ಲಲಿತೆಯಾಗಿಹ ಸ್ವಯಂಪ್ರಕಾಶ
ಬ್ರಹ್ಮಾಂಡದಸ್ತಿತ್ವದ ಇಚ್ಛೆ ಪ್ರಕಟಿಸೊ, ಬ್ರಹ್ಮ ಕಾಂತಿಯ ಪರಿವೇಷ
ಬೆಳಗುವ ದಿನಮಣಿ ಸತತ, ಬೆಳಕಲೆ ನಿಭಾಯಿಸುತ ಜಗದಸ್ತಿತ್ವ
ಪರಬ್ರಹ್ಮದ ಇಚ್ಛೆಯನು, ಕಾರ್ಯಗತಗೊಳಿಸುವ ರವಿಕಾಂತಿತತ್ವ!

೪೫೨. ತೇಜೋವತೀ
ಕಾಂತಿ ಸೂಸುತ ಬ್ರಹ್ಮದ ಇಚ್ಛೆ, ಪಸರಿಸಲು ತೇಜೋವತೀ ಲಲಿತೆ
ಬೆಳಕಿನ ಕಿರಣಗಳ್ಹೊರಸೂಸುತಾ ದೇವಿ, ಸೃಷ್ಟಿಜೀವಿಗಳ ಸಲಹುತೆ
ಬೆಳಕಿರದೆ ಚರಾಚರ ಜಗಕೆಲ್ಲಿದೆ ಜೀವ, ಕತ್ತಲೆಯಿರೆ ಅಜ್ಞಾನ ಸ್ಪರ್ಷ
ಸೂರ್ಯ ಚಂದ್ರ ಪ್ರತಿಫಲಿತ ತೇಜ, ಬ್ರಹ್ಮ ಮೂಲದ ಕಿರಣ ಪ್ರಕಾಶ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

ನಾಗೇಶರೆ,
ಈಗ ಹೆಚ್ಚು ಸಮಂಜಸವಾಗಿ ಮತ್ತು ಅತ್ಯುತ್ತಮವಾಗಿ ಮೂಡಿ ಬಂದಿವೆ. (ಇಂಟರ್ನೆಟ್ಟಿನ ವಿಘ್ನವನ್ನು ಗಣನಾಥನು ಬಗೆಹರಿಸಿದ್ದಾನೋ ಇಲ್ಲವೋ ಎನ್ನುವುದು ನಾಳೆ ಗೊತ್ತಾಗುತ್ತದೆ. ಏಕೆಂದರೆ ಈ ದಿನ ಬೆಳಿಗ್ಗೆಯಿಂದ ನಾನು ಪ್ರವಾಸದಲ್ಲಿದ್ದೆ, ಸಾಯಂಕಾಲವಷ್ಟೇ ಹಿಂದಿರುಗಿದೆ:) )

ಶ್ರೀಧರರೆ, ಹಾಗಾದರೆ ಕಂತು 114ರ ಈ ರೂಪವನ್ನು ಅಂತಿಮಗೊಳಿಸಿ ಹಾಕಿಬಿಡುತ್ತೇನೆ. ನಾನೂ ನಿನ್ನೆ ಮತ್ತು ಇಂದು 'ವಿಸಿಟರ್'ಗಳಿದ್ದ ಕಾರಣ ತುಸು ಬಿಡುವಿಲ್ಲದೆ, 115 ನೆ ಕಂತು ಇನ್ನು ಬಾಕಿ ಇದೆ (ನೀವಾಗಲೆ 116 ಬೇರೆ ಸೇರಿಸಿಬಿಟ್ಟಿದ್ದೀರಾ) - ಇಂದು ನಾಳೆ, ನಾನು ಓಡಬೇಕು!

ವಿಘ್ನಕ್ಕೊಂದು ಯಾವುದಾದರೂ ದಾರಿ ತೋರಿಸಿರುತ್ತಾನೆ ಬಿಡಿ :-)