ಗುರು ದೇವೋಭವ ....... !

ಗುರು ದೇವೋಭವ ....... !

ನಾವು ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ಒಬ್ರು ಕನ್ನಡ ಮೇಷ್ಟ್ರು ಇದ್ರು.  ಅವರ ಹೆಸರು ಪಿ. ಹುಚ್ಚುಸ್ವಾಮಿ ಅಂತ, ಪಿ. ಎಚ್.ಎಸ್.  ಅನ್ನೋದು ಶಾರ್ಟ್ ನೇಮ್.  ಅವರಿಗೋ ಸಾಲಾಗಿ ಒಂಭತ್ತು ಜನ ಹೆಣ್ಣು ಮಕ್ಕಳು!  ವಂಶೋದ್ಧಾರಕನನ್ನು ಪಡೆಯಲೇ ಬೇಕೆಂಬ ಹಠದಲ್ಲಿ ಸಾಲಾಗಿ ವಂಶೋದ್ಧಾರಕಿಯರನ್ನೇ ಪಡೆದಿದ್ದರು, ಸಂಸಾರ ತಾಪತ್ರಯಗಳು ಸಾಕಷ್ಟಿದ್ದವು ಅನ್ಸುತ್ತೆ!  ಪಾಪ, ಶಾಲೆಗೆ  ಬಂದರೆ ಸಾಕು, ಅವರ ಹೆಂಡತಿ ಹಾಗೂ ನವರತ್ನಗಳಂಥ ಹೆಣ್ಣುಮಕ್ಕಳ ಮೇಲಿನ ಸಿಟ್ಟನ್ನೆಲ್ಲಾ  ನಮ್ಮ ಮೇಲೆ ಕಕ್ಕಿ ಬಿಡುತ್ತಿದ್ದರು.  ಕ್ಲಾಸ್ ಲೀಡರ್ ಆಗಿದ್ದ ನನಗಂತೂ ವಾಚಾಮಗೋಚರ ಬೈಗುಳ ತಪ್ಪಿದ್ದಲ್ಲ, 

 

ಅವರು ಬರುವಷ್ಟರಲ್ಲಿ ಅವರ ಹೋಮ್ ವರ್ಕ್ ಪುಸ್ತಕಗಳನ್ನು ಅವರ ಟೇಬಲ್ಲಿನ ಮೇಲೆ ಜೋಡಿಸಿಟ್ಟಿರಬೇಕಿತ್ತು, ಹೋಮ್ ವರ್ಕ್ ಮಾಡದಿರುವವರ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆದು, ಅವರನ್ನೆಲ್ಲಾ ಬೇರೆಯಾಗಿ ನಿಲ್ಲಿಸಬೇಕಿತ್ತು!  ಜೊತೆಗೆ ಉದ್ಧದ ಕೋಲೊಂದನ್ನೂ ಸಿದ್ಧವಾಗಿಡಬೇಕಿತ್ತು!   ಕ್ಲಾಸಿಗೆ ಬಂದವರು ಹೋಮ್ ವರ್ಕ್ ಮಾಡದವರ ಉದ್ಧದ ಪಟ್ಟಿ ನೋಡುತ್ತಲೇ ವ್ಯಗ್ರರಾಗಿ ಉಗ್ರರೂಪ ತಾಳಿ ಬಿಡುತ್ತಿದ್ದರು.  ಲೇ ಮಂಜಾ, ಬೋ..ಮಗನೆ, ಯಾಕೋ ಇಷ್ಟೊಂದು ಜನ ಹೋಮ್ ವರ್ಕ್ ಮಾಡಿಲ್ಲ ಅಂತ ಮೊದಲ ಏಟು ನನಗೆ ಬೀಳುತ್ತಿತ್ತು, ನಂತರದ್ದೆಲ್ಲಾ ೭ ೦  ಎಮ್ಮೆಮ್ ಸಿನಿಮಾಸ್ಕೋಪ್ ಸಿನಿಮಾನೇ!   ಕೆಲವರಿಗೆ ಜುಟ್ಟು ಹಿಡಿದು ಬಗ್ಗಿಸಿ ಬೆನ್ನ ಮೇಲೆ ಗುದ್ದುತ್ತಿದ್ದರು, ಇನ್ನು ಕೆಲವರಿಗೆ ಗೋಡೆಗೆ ತಲೆ ಗುದ್ದಿಸುತ್ತಿದ್ದರು, ಹಲವರನ್ನು ನೆಲದ ಮೇಲೆ ಕೆಡವಿ, ಕಾಲಿನಿಂದ ಒದೆಯುತ್ತಿದ್ದರು, ಕೋಲು ಕೈಗೆ ಸಿಕ್ಕಿದರೆ ಬೆನ್ನ ಮೇಲೆ, ತೊಡೆಗಳ ಮೇಲೆ ಬಾಸುಂಡೆ ಬರುವಂತೆ ಬಾರಿಸುತ್ತಿದ್ದರು.  ಮಧ್ಯೆ ಯಾರಾದರೂ ಕಮಕ್ ಕಿಮಕ್ ಅಂದರೆ ಮುಗಿದೇ ಹೋಯಿತು, ಅಲ್ಲಿ ಅವರ ಮಾರಣಹೋಮ!  ನಮಗೆಲ್ಲಾ ಅವರು ಒಂದು ರೀತಿಯ ಭಯೋತ್ಪಾದಕರಂತೆ ಕಾಣುತ್ತಿದ್ದರು.  ತಮಗೆ ಗಂಡು ಮಕ್ಕಳಾಗದ ಕೋಪವನ್ನು ಹೀಗೆ ತೀರಿಸಿಕೊಳ್ಳಲೆಂದೇ ಅವರು ಶಾಲೆಗೆ  ಬರುತ್ತಿದರೇನೋ ಎನ್ನುವ ಅನುಮಾನ ನಮಗೆಲ್ಲ ಕಾಡುತ್ತಿತ್ತು !

 

ಅಮ್ಮನ ಜೊತೆಯಲ್ಲಿ ಪ್ರತಿ ಗುರುವಾರ ಸಂಜೆ ನಾನು ಕೋಟೆಯಲ್ಲಿದ್ದ ರಾಘವೇಂದ್ರಸ್ವಾಮಿಗಳ ಮಠಕ್ಕೆ ಹೋಗುತ್ತಿದ್ದೆ.   ಅಲ್ಲಿಯೇ ಅವರ ಮನೆ, ಅಪ್ಪಿ ತಪ್ಪಿ ಅವರೇನಾದರೂ ಎದುರಿಗೆ ಬಂದರೆ ಅವರಿಗೆ ಕಾಣದಂತಿರಲು ಪ್ರಯತ್ನ ಪಡುತ್ತಿದ್ದೆ.  ಆದರೂ ಒಮ್ಮೆ ಅವರ ಹದ್ದಿನಕಣ್ಣಿಗೆ ಸಿಕ್ಕಿಯೇ ಬಿಟ್ಟೆ!  ಆರ್ಭಟಿಸಿದ್ರು ನೋಡಿ, ಲೇ ಮಂಜಾ, ಹಲ್ಕಾ ನನ್ಮಗನೇ, ಮನೇಲಿ ಕೂತು ಹೋಮ್ ವರ್ಕ್ ಮಾಡೋದು ಬಿಟ್ಟು ಪೋಲಿ ತಿರುಗೊಕ್ಕೆ ಬಂದಿದೀಯಾ ಅಂತ ಜುಟ್ಟಿಗೆ ಕೈ ಹಾಕಲು ಮುಂದಾಗಿದ್ದರು. ಇಲ್ಲ  ಸಾರ್, ಅಮ್ಮನ ಜೊತೆ ಮಠಕ್ಕೆ ಬಂದಿದ್ದೆ ಅಂದ್ರೆ ನಿನ್ನ ಮೂತಿಗೆ ಮಠ ಬೇರೆ ಕೇಡು, ಹೋಗೋ ಮನೆಗೆ ಅಂತ ಬೈದಿದ್ರು! 

 

ತಿಪಟೂರಿನ ಪುರಸಭಾ ಚೌಕದಲ್ಲಿರುವ ಪೈ ಹೋಟೆಲ್ ತುಂಬಾ ಪ್ರಸಿದ್ಧ.  ಅವರಿಂದ ಒದೆ ತಿಂದ ಹುಡುಗರೆಲ್ಲ ಸೇರಿ ಅವರ ಶಾರ್ಟ್ ನೇಮ್ ಪಿ. .ಎಸ್. ಅನ್ನುವುದನ್ನು "ಪೈ ಹೋಟೆಲ್ ಸಪ್ಲೈಯರ್" ಎಂದು ಬದಲಾಯಿಸಿ ಇಡೀ ತಿಪಟೂರಿನಲ್ಲಿ ಅವರು ಎಲ್ಲೇ ಕಂಡರೂ ಸರಿ ," ಓಯ್  ಪೈ ಹೋಟ್ಲು ಸಪ್ಲೈಯರ್ರೂ" ಅಂತ ಜೋರಾಗಿ ಕೂಗಿ ಮರೆಯಾಗಿ ಬಿಡುತ್ತಿದ್ದರು.  ಕೆಲ  ದಿನಗಳು ಇದು ಅವರಿಗೆ ಅರ್ಥವಾಗಿರಲಿಲ್ಲ, ಆದರೆ ಕ್ರಮೇಣ ಅರ್ಥವಾಗತೊಡಗಿದಂತೆ ಕ್ಲಾಸಿನಲ್ಲಿ ಬೀಳುವ ಒದೆಗಳು ಇನ್ನೂ ಹೆಚ್ಚಾದವು.   ಈ ಹುಚ್ಚು ಯಾವ ಮಟ್ಟಕ್ಕೆ ಹೋಯಿತೆಂದರೆ ಶಾಲೆಯ ಬೆಲ್ ಹೊಡೆದ ನಂತರ ಎಲ್ಲರೂ ಪ್ರಾರ್ಥನೆಗೆಂದು ಸಾಲಾಗಿ ನಿಲ್ಲುತ್ತಿರುವಾಗ ಇವರು ಗೇಟಿನ ಬಳಿ ಹೋಗಿ ನಿಲ್ಲುತ್ತಿದ್ದರು, ಲೇಟಾಗಿ ಬಂದ "ಬಾಲಕ"ರನ್ನೆಲ್ಲ  ಗೋಡೆಯ ಪಕ್ಕಕ್ಕೆ ಕರೆದುಕೊಂಡು ಹೋಗಿ ಅಲ್ಲೇ ಬಾರಿಸಲು ಶುರು ಹಚ್ಚಿಕೊಂಡು ತಮ್ಮ ಸೇಡನ್ನು ತೀರಿಸಿಕೊಳ್ಳುತ್ತಿದ್ದರು .   ಕೊನೆಗೆ "ಬಾಲಕ"ನೊಬ್ಬ ಇವರ ಹೊಡೆತಗಳನ್ನು ತಡೆದುಕೊಳ್ಳಲಾಗದೆ ಚಡ್ಡಿಯಲ್ಲೇ ಮಲ-ಮೂತ್ರಗಳನ್ನೆಲ್ಲ ಮಾಡಿಕೊಂಡಾಗ , ಎಲ್ಲ ಪೋಷಕರು ಸೇರಿ ಇವರ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕೆಂದು ಪಟ್ಟು ಹಿಡಿದಾಗಲೇ ಯಾವರ ಆರ್ಭಟ ಕಡಿಮೆಯಾಗಿದ್ದು.  

 

ಹಲವರು ಅತ್ಯುತ್ತಮ ಗುರುಗಳ ಶಿಷ್ಯನಾಗುವ ಯೋಗ ನನಗೆ ಸಿಕ್ಕಿದೆ, ಅದೇಕೋ ಈ ಶಿಕ್ಷಕರ ದಿನಾಚರಣೆಯಂದು ಅವರೆಲ್ಲರನ್ನೂ ಬಿಟ್ಟು ಇವರೇ ಹೆಚ್ಚಾಗಿ ನೆನಪಾದರು.   

Rating
No votes yet

Comments

Submitted by ಗಣೇಶ Sat, 09/07/2013 - 00:14

ಮಂಜಣ್ಣ, ಪಾಠಕ್ಕಿಂತ ಏಟು ನೆನಪಲ್ಲಿ ಉಳಿಯುವುದು ಜಾಸ್ತಿ. "ಶಿಕ್ರಾಕ್ಷಸರ ದಿನ" ಅಂತ ಒಂದು ದಿನ ಇಂತಹ ಶಿಕ್ಷಕರನ್ನು ನೆನಪಿಸಲು ಇಟ್ಟರೆ ಒಳ್ಳೆಯದು. ಬಹಳ ಲೇಖನಗಳು ಬರಬಹುದು.

Submitted by manju787 Sat, 09/07/2013 - 18:41

In reply to by ಗಣೇಶ

ಅವರು ಕೊಡುತ್ತಿದ್ದ ಏಟುಗಳನ್ನು ಬಹುಶಃ ಸಪ್ತಸಮುದ್ರಗಳನ್ನು ದಾಟಿ ಹೋದರೂ ಮರೆಯಲಸಾಧ್ಯ ! "ಶಿಕ್ರಾಕ್ಷಸ " ಹೊಸ ನಾಮಕರಣ ಚೆನ್ನಾಗಿದೆ ಗಣೇ'ಸಣ್ಣ' ! :‍)

Submitted by bhalle Sat, 09/07/2013 - 19:50

ಮನೆಯ ತಾಪತ್ರಯಗಳನ್ನು ಶಾಲೆಗೆ ತರುವ ’ಗುರ್’ಗಳು ನಮ್ಮಲ್ಲೂ ಇದ್ರು ಮಂಜಣ್ಣ ... ಮಕ್ಕಳನ್ನು ಕತ್ತಲೆ ರೂಮಿನಲ್ಲಿ ಕೂಡಿ ಹಾಕುವ, ಬಿಸಿಲಲ್ಲಿ ನಿಲ್ಲಿಸುವ, ಬೆಂಚ್ ಮೇಲೆ ನಿಲ್ಲಿಸುವಿಕೆ ಇತ್ಯಾದಿ ಇತ್ಯಾದಿ ನೆನಪಿಗೆ ಬರುತ್ತಿವೆ ... ವಿದ್ಯಾರ್ಥಿಗಳು ತಮ್ಮನ್ನು ಕಂಡು ಹೆದರಿದರೆ ತಾವು ಶ್ರೇಷ್ಟ ಶಿಕ್ಷಕರು ಎಂದೇಕೆ ಅಂದುಕೊಳ್ಳುತ್ತಾರೋ ಗೊತ್ತಿಲ್ಲ :-(

Submitted by manju787 Sun, 09/08/2013 - 21:03

In reply to by bhalle

ನಮ್ಮ ಕಾಲದಲ್ಲಿ ಇಂಥ ವಿಕ್ಷಿಪ್ತ ಮನಸ್ಸಿನ ಶಿಕ್ಷಕರಿದ್ದರು, ಆದರೆ ಈಗಿನ ಮಕ್ಕಳ ದೌರ್ಭಾಗ್ಯ ನೋಡಿ, ಕುಡುಕರು, ರೌಡಿಗಳು ಕೂಡಾ ಶಿಕ್ಷಕರಾಗಿಬಿಟ್ಟಿದ್ದಾರೆ!

Submitted by kavinagaraj Mon, 09/09/2013 - 13:22

ಶಾಲೆಗೇ ಹೋಗದೆ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದವರೊಬ್ಬರು ಹೊಳೆನರಸಿಪುರದಲ್ಲಿದ್ದರು. 32 ವರ್ಷದ ಹಿಂದೆ ಈ ಪ್ರಶಸ್ತಿ ಪಡೆದವರು ಯಾರೆಂದು ನೀವು ಊಹಿಸಬಹುದು!