ಗಜಾನನ ಗಜ-ಮೂಷಿಕಾಸುರ ಕಥೆ

ಗಜಾನನ ಗಜ-ಮೂಷಿಕಾಸುರ ಕಥೆ

ಮತ್ತೆ ಈ ಬಾರಿಯ ಗಣೇಶ ಗೌರಿ ಕಾಲಿಡುತ್ತಿರುವ ಹೊತ್ತಲ್ಲಿ, ವಾರದ ಕೊನೆಯೂ ಸೇರಿಕೊಂಡ ಕಾರಣ ಬಹುತೇಕ ನಿರಾಳವಾಗಿ ಹಬ್ಬವನ್ನಾಚರಿಸುವ ಆವಕಾಶ. ನಮಗಿಲ್ಲಿ ರಜೆಯಿಲ್ಲದ ಮಾಮೂಲಿನ ದಿನವಾದರೂ, 'ಲಿಟಲ್ ಇಂಡಿಯಾ' ದಲ್ಲಿ ತುಸು ಸಂಭ್ರಮ ಕಣ್ಣಿಗೆ ಬಿಳುತ್ತದೆ : ಗಣೇಶನ ಮೂರ್ತಿಯಿಂದ ಹಿಡಿದು ಹಬ್ಬದ ಸಾಮಾನು ಸಲಕರಣೆ ಮಾರುವ / ಕೊಳ್ಳುವ ಜನಗಳಿಂದಾಗಿ. 

ಆ ಹಿನ್ನಲೆಯಲ್ಲೆ ತುಸು ಭಿನ್ನ ಹಿನ್ನಲೆಯ ಗಜಾಸುರನಿಗೆ ಸಂಬಂಧಿಸಿದ ಗೌರಿ ಗಣೇಶರ ಕಥೆ ಈ ಕೆಳಗಿದೆ. ಪೌರಾಣಿಕ ಹಿನ್ನಲೆಯಾಗಿ ಗಣೇಶ ಗಜಮುಖನಾದ ಕಥೆ ಚಿರಪರಿಚಿತವಾದರೂ, ಅವನ ಹುಟ್ಟಿಗೆ ಮತ್ತು ಗಜಾಸುರನ ಸಾವಿಗಿರುವ ಸಂಬಂಧ, ಮೂಷಿಕಾಸುರ ಗರ್ವಭಂಗದಷ್ಟು ಪ್ರಸಿದ್ದವಲ್ಲ. ಆ ಹುಟ್ಟಿನ ಹಿನ್ನಲೆಯಾದ ಮೂಷಿಕಾಸುರ ವರಗರ್ವ, ಸತ್ತು ಅಸ್ವಾಭಾವಿಕ ಮರುಹುಟ್ಟು ಪಡೆದು ಗಜಾಸುರನ ಶಿರದೊಡನೆ ಗಜಾನನ ಜನ್ಮ ತಳೆದ ಪ್ರವರ ಮತ್ತು ಅಂತಿಮವಾಗಿ ಮೂಷಿಕನ ಗರ್ವಭಂಗ - ಈ ಮೂರನ್ನು ಸಮಗ್ರ ರೂಪದಲ್ಲಿ, ಮೂರು ಕವನ ಭಾಗಗಳಾಗಿ ತರುವ ಯತ್ನ, ಈ ಕವನ ಕುಂಜ. 

ಈ ಸಂಧರ್ಭದಲ್ಲಿ ಸಂಪದಿಗರೆಲ್ಲರಿಗೂ ಗೌರಿ ಗಣೇಶನ ಹಬ್ಬದ ಶುಭಾಶಯಗಳು.

01. ಮೂಷಿಕಾಸುರ ಗರ್ವ  
__________________________________

ಮೂಷಿಕಾಸುರನೆಂಬ ಅಸುರ ದೊರೆ ಮದ ಮದೋನ್ಮತ್ತ  
ಬ್ರಹ್ಮದೇವನ ಕುರಿತು ಘೋರ ತಪಗೈದ ದಾನವ ಸತತ  
ಜಿಗುಟಿಗೆ ಪ್ರಸನ್ನಿಸಿ ಮೆಚ್ಚಿ ಕಡೆಗು ಪ್ರತ್ಯಕ್ಷನಾ ಅಂಚೆದೇರ 
ಫಲಿಸಿತು ತಪನೆ ವ್ಯಾಪಾರ ವರವ ಪಡೆದ ರಾಕ್ಷಸವೀರ!

ಬರಬಾರಾದಂತೆ ಮರಣ ಭೀತಿ ಮೂಲೋಕಗತಿ ವಿಪ್ಪತ್ತು 
ಅಸಹಜ ಜನನ ಸತ್ತು ಮರು ಸೃಷ್ಟಿಯಾದರಷ್ಟೆ ಆಪತ್ತು  
ವರ ಪಡೆದ ದಾನವ ಮದ ಗರ್ವ ನಡೆಸಿ ಸ್ವರ್ಗಾಕ್ರಮಣ  
ಅಂಕೆಗು ಮಿತಿಮೀರಿದ ದೈತ್ಯ ದುರುಳನ ದುರಾಕ್ರಮಣ!

ಪತ್ನಿ ಪ್ರಿಯಂವದೆ ಸುನೀತೆ, ಶಿವೆಗೆ ಪರಮ ಈಶ್ವರಿ ಭಕ್ತೆ
ಪತಿಯಟ್ಟಹಾಸವನು ಮನದೊಳೊಪ್ಪದ ಸುಶೀಲಿನಿ ಶಕ್ತೆ 
ಮನವೊಲಿಸುತ ಬೇಡಿದಳು ಪತಿಯ ಬಿಟ್ಟುಬಿಡೊರಾಯ 
ಹಾಳು ದೇವತೆ ಸಹವಾಸ ನಂಬೆ ತ್ರಿಮೂರ್ತಿಗಳಪಾಯ!

ಒಪ್ಪುವನೆ ಮೂಢ ಮೂಷಿಕ ವಿಧಿ ಬರೆಸಿದ ಕಹಿ ಜಾತಕ 
ಅವಿರತ ಮುಂದುವರೆಯಿತು ಸತತ ನಿರಾತಂಕ ಅಂತಕ 
ತೀರದ ಗೋಳಿಗೆ ಓಡಿದ ದೇವತೆಗಳ್ಹಿಡಿದು ಬ್ರಹ್ಮನಕಾಲು 
ಮೊರೆಯಿಟ್ಟರು ಅಜ್ಜನಲಿ ತಾತಾ, ಕಾಪಾಡು ನಮ್ಹೆಗಳು! 

ಏನ್ರಯ್ಯ ಈ ಗೋಳು, ಮೊದಲು ವರ ಕೊಡಿಸೆ ಯಾಚನೆ 
ಕೊಟ್ಟಾದ ಮೇಲಾರಂಭ ದಮನ, ವರ ನಿವಾರಣೆ ಪೀಡನೆ
ಸರಿ ಬನ್ನಿ ಆಲೋಚಿಸೋಣ ಅಜನೊಡನೆ ಪರಿ ಸಂಭಾಷಣೆ 
ಹುಡುಕಿಸುತ ದಾರಿ ಮೂಷಿಕನ್ಹುಟ್ಟಡಗಿಸುವ ಯೋಜನೆ! 
(ಸಶೇಷ - ೦೧)

02. ಗಜಾಸುರ ಗಜಾನನನ ಶಿರ
_____________________________________

ಬ್ರಹ್ಮ,ವಿಷ್ಣು ಚಿಂತನೆ ನಡೆಸೆ ವರ ಸೆರೆಯ್ಹೇಗೆ ಮುರಿವ ಬಗೆ
ಬೇಕಾದ ಗಳಿಗೆಯಲೆ ಪರಶಿವ ಲೀನ ಗಜಾಸುರ ಗರ್ಭದಲೆ
ವರಕೊಟ್ಟ ತಪ್ಪಿಗೆ ಶಿವನ ತನ್ನೊಳಗಿರಲು ಬೇಡೆ ಗಜಾಸುರ
ಮಾಡಬೇಕುಪಾಯ ಹೇಗೋ ಹೊರ ಬರಿಸೆ ಶಿವಲಿಂಗೇಶ್ವರ!

ನಡೆದರು ಹುಡುಕುತ ಉಮೆ ಒಳದಾರಿ ಆಯೋಜಿಸಲು 
ಕೋರುತ ಶಿವೆಯ ಸೃಷ್ಟಿಸೆ ಮಾನಸಪುತ್ರನ ಶಕ್ತಿಯೊಳು
ಮಂಗಳದ್ರವ್ಯ ಮೈದಾಳಿ ಜನಿಸೆ ಉಮಾಪುತ್ರ ಶಕ್ತಿಮಾನ 
ತುಂಬಿ ಈಶ್ವರಿ ಜೀವ, ನುಡಿದು ಹೇಗೋ ಕರೆತನ್ನೀ ಶಿವನ!

ಮಗನ ಕಾವಲಿಗಿಟ್ಟು ನಡೆದಳೆ ಶಿವೆ ಗೌರಿ ಸ್ನಾನದ ಮನೆಗೆ 
ಹರಿ ಬ್ರಹ್ಮರು ನಡೆದರು ಶಿವನನಿಳಿಸಲು ಗಜಾಸುರನೆಡೆಗೆ 
ಗಾನ,ನಾಟ್ಯ,ಸಂಗಿತದಿ ಮೆಚ್ಚಿಸೆ ಗಜಾಸುರವರ-ವಚನವಿತ್ತ 
ಕಳಿಸ್ಹೊರಗೆ ಹರನ ತನುವಿಂದ ಎನಲು ನಗುತ ವರವನಿತ್ತ!

ಬೇಡಿದ ಗಜಾಸುರ ಹರನ ಪೂರೈಸೆ ಹರಿಬ್ರಹ್ಮ ಕೋರಿಕೆ
ಒಪ್ಪಿದ ಸರ್ವೇಶ್ವರ ಹೊಟ್ಟೆ ಬಗೆಯುತ ಲಿಂಗದ ತೋರಿಕೆ
ಮೆಚ್ಚಿದ ಭಕ್ತಿಯ ಆಳಕೆ ಹರಸಿ ಸಾವಿನಮಡಿಲಲೆ ಹೆರಿಗೆ
ಒಪ್ಪುತವನಾ ಕೋರಿಕೆ ಮರಣ ನಂತರವು ಶಿವನ ಬಳಿಗೆ!

ಮಾರಾಂತಕ ಬಿಡುಗಡೆ ಪೂರ, ಹಿಡಿಯೆ ಮನೆಕಡೆ ದ್ವಾರ 
ತಡೆಯಲು ಬಾಲನ ಕಪಟ, ಮೂಗೇರಿಸಿ ಕೋಪದ ಖಾರ 
ತರಿದ ಶಿವ ತಲೆಪಕ್ಕ ತ್ರಿಶೂಲದೆ ಗೋಣ್ಮುರಿದೆಸೆದ ಪೂರ  
ಪಾರ್ವತಿ ಆಘಾತಕೆ ಅಳಲು ಹರ ಅಸಹಾಯಕತೆ ಶಿಖರ! 

ಹರಿ,ಬ್ರಹ್ಮರ ಆಗಮನ ಸಂತೈಸುತ ಗೌರಿಯ ಪರಿಹರಣ
ನೆನೆದರು ಗಜಾಸುರ ಮರಣ, ಸತ್ತುಳಿದ ಆನೆ ತಲೆ ಮಣ
ಹೇಗೂ ಹರ ವರವಿತ್ತ ಪ್ರಕರಣ, ಸೇರಿಸೆ ಗಜನ ಶಿವಚರಣ 
ಹೊರಟಿತು ಶಿವನಾ ಆಜ್ಞೆ, ಗಜನ ತಲೆ ತರಲು ಸಂಪೂರ್ಣ!

ಬದುಕಿದ ಬಾಲಕ ಪುತ್ರ ಹೊತ್ತು ಗಜಾಸುರ ಶಿರ ಭೂಶಿರ  
ಹೆಸರಾಯಿತು ಗಜಾನನ ಸುಪುತ್ರ ದೇವಬಲವೆಲ್ಲ ಮಿತ್ರ  
ಹೀಗೆ ಅಸಹಜ ಸೃಷ್ಟಿ, ಸತ್ತು ಮರುಹುಟ್ಟಿದ ಗಣ ಪ್ರಣತಿ 
ವೇದಿಕೆ ಸಿದ್ದ ಭೂಪತಿ ಮೂಷಿಕನಿಗೆ ಸರಿ ಕಾಣಿಸೆ ಸದ್ಗತಿ! 
(ಸಶೇಷ - ೦೨) 

03. ಮೂಷಿಕ ಗರ್ವಭಂಗ
______________________________________

ಕಥೆ ಕೇಳಿದ ಮೂಷಿಕ ಸಿಡಿದು ಉರಿದೆದ್ದ ನಖ ಶಿಖಾಂತ 
ಮಾಡುವನೇನ ಬಾಲನೆನುತ ಹೂಡೇ ಬಿಟ್ಟ ಯುದ ್ಧಸ್ವತಃ 
ವೀರದಿ,ಶೌರ್ಯದಿ,ಧೈರ್ಯದಿ ಗಣ ಮೂಷಿಕ ಕಾದಿರಲು
ವರ ನಿವಾರಣೆ ಮರ್ದನ ಗಣಪ ಗೆಲ್ಮೆ ಕೈಮೇಲಾಗಿರಲು!

ಕುಗ್ಗಿತು ಅಸುರಶಕ್ತಿ, ಗಜಾನನ ಮುರಿದ ದಂತದಾ ಯುಕ್ತಿ 
ಓಡಿದ ಮೂಷಿಕ ಭಯದಿ, ಜೀವ ಬೆನ್ನಟ್ಟುವ ದಂತದ ಶಕ್ತಿ  
ಕಂಡಳು ಸತಿಪ್ರಿಯಂವದೆ ಪೂಜೆಕುಳಿತ ಹೋಮಕುಂಡದೆ
ಮೊರೆಯಿಟ್ಟಳು ಈಶ್ವರಿಗೆ ತಪ್ಪಿಸಲು ಪತಿ ಮೂಷಿಕ ವಧೆ!

ಶಂಕರಿ ಕೃಪಾಕರಿ,ಕರುಣಾಕರಿ ಆರ್ಯಸತಿ ಮೊರೆಗೆ ತಾಳಿ
ಉಪಸಂಹರಿಸಿ ದಂತ ಬಿಲದ ಮೂಷಿಕ ಬುದ್ಧಿ ಬಂತಾ ಕೇಳಿ 
ಕ್ಷಮಿಸುತಾಯೆ ಜಗನ್ಮಾಯೆ ಕಲಿತಾಯ್ತು ನಾನೆ ಪಾಠಕೊನೆ 
ತಪ್ಪು ಶಿಕ್ಷೆ ಉಚಿತ, ಗಜಾನನ ವಾಹನ ಜೀವನವೆಲ್ಲ ನಾನೇ!  

ಹೀಗಾಯ್ತು ಗಜಾನನ ಜನನ ಸಂಭಾಳಿಸಲಿಕ್ಕೆ ಮೂಷಿಕನ
ಗಣಪ ಮೆಟ್ಟಿದ ಅಸುರನ ಒಣ ಅಹಂಕಾರದ ಧೂರ್ತತನ 
ಪಳಗಿಸಿ ಕೊನೆಯಲಿ ಅವನನೆ ವಾಹನವಾಗಿಸಿದ ನರ್ತನ 
ಪ್ರಿಯಂವದೆ ಜತೆಗಿರುವಂತ ಬೇಡಿಕೆಗೂ ಒಪ್ಪಿದ ಗಜಾನನ!

ಗಣಪ ಚೌತಿಗೆ ಸಂಭ್ರಮ ಆಚರಣೆ ಎಲ್ಲ ಪೂಜೆ ಸಲಕರಣೆ 
ಗಜಾನನ ಬರುವ ಭುವಿಗೆ ಮೂಷಿಕನೊಡನೆ ಸರಿಸಂಚರಣೆ 
ಕೈಕಾಯಿ ಕಡುಬ ಕಂತೆ, ಕಟ್ಟಿ ಹೊಟ್ಟೆ ಹಾವಿನ ಸುಮಲತೆ
ಹೊರಲಾರದೆ ಹೊತ್ತ ಮೂಷಿಕತೆ ಪಾಠ ನಮಗೇ ಗಣಪತೆ!

ಶರಣೆನ್ನಿರಿ ಹಬ್ಬದದಿನ ಇರಬೇಕು ಗೌರಿ,ಗಣೇಶ ಎಲ್ಲಮನ
ಸ್ಮರಣೆಗೆ ಸಾಕು ಭಕುತಿ ಬೇಕಿಲ್ಲ ಗುಡಿ,ಗೋಪುರ,ಜನ,ಗಣ
ಮೂಷಿಕನೂ ಸಾಂಕೇತಿಕ ಒಳಾರ್ಥ ತುಂಬಾ ನಿಗೂಢ ಧನ 
ಕಟ್ಟಿರಿಸಿ ಇಪ್ಪತ್ತೊಂದು ನಮನ ಪಡೆ ಗಣಪನಾಶೀರ್ವಚನ!

(ಮುಕ್ತಾಯ)

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

Comments

Submitted by nageshamysore Mon, 09/09/2013 - 11:07

ಸಂಪದಿಗರೆ, ಎಡಿಟರಿನ ವರ್ಗಾವಣೆಯ ಗಡಿಬಿಡಿಯಲ್ಲಾದ ಕೆಲವು ತಪ್ಪುಗಳ ತಿದ್ದುಪಡಿ ಈ ಕೆಳಗೆ ತೋರಿಸಿದಂತಿದೆ. ಮೊದಲ ಪದ್ಯದ ನಾಲ್ಕನೆ ಪಂಕ್ತಿ (ಹೆಗಳು ತಪ್ಪು , ಹೆಗಲು = ಸರಿ) - ಮೂರನೆ ಪದ್ಯದ ಮೊದಲ ಪಂಕ್ತಿ ಸಾಲಕ್ಷರ ಸರಿಯಾಗಿ ಪ್ರಕಟವಾಗಿಲ್ಲ . ಇವೆರಡು ತಿದ್ದಿದ ರೂಪ ಈ ಕೆಳಕಂಡಂತಿದೆ: ಒಪ್ಪುವನೆ ಮೂಢ ಮೂಷಿಕ ವಿಧಿ ಬರೆಸಿದ ಕಹಿ ಜಾತಕ ಅವಿರತ ಮುಂದುವರೆಯಿತು ಸತತ ನಿರಾತಂಕ ಅಂತಕ ತೀರದ ಗೋಳಿಗೆ ಓಡಿದ ದೇವತೆಗಳ್ಹಿಡಿದು ಬ್ರಹ್ಮನಕಾಲು ಮೊರೆಯಿಟ್ಟರು ಅಜ್ಜನಲಿ ತಾತಾ, ಕಾಪಾಡು ನಮ್ಹೆಗಲು! ಕಥೆ ಕೇಳಿದ ಮೂಷಿಕ ಸಿಡಿದು ಉರಿದೆದ್ದ ನಖ ಶಿಖಾಂತ ಮಾಡುವನೇನ ಬಾಲನೆನುತ ಹೂಡೇ ಬಿಟ್ಟ ಯುದ್ಧ ಸ್ವತಃ ವೀರದಿ,ಶೌರ್ಯದಿ,ಧೈರ್ಯದಿ ಗಣ ಮೂಷಿಕ ಕಾದಿರಲು ವರ ನಿವಾರಣೆ ಮರ್ದನ ಗಣಪ ಗೆಲ್ಮೆ ಕೈಮೇಲಾಗಿರಲು! ಧನ್ಯವಾದಗಳೊಂದಿಗೆ, -ನಾಗೇಶ ಮೈಸೂರು