ಮಹಾನದಿ ಪಥ - ಮರಳಿ ನೀರಿಗೆ
ಕಾವೇರಿ ಅಂದರೇನು ? ಬರೀ ನೀರೆ? ಈ ಪ್ರಶ್ನೆ ನಮ್ಮ ಊರಿನ ಜನರನ್ನು ಕೇಳಿದಾಗ ಹಲವರಿಂದ ಉತ್ತರ ಬಂದದ್ದು, ಅದು ನಲ್ಲಿಯ ನೀರು ಎಂದು. ಆದರೆ ಕಾವೇರಿ ಬರಿ ನೀರಲ್ಲ. ನಮ್ಮ ನಾಡಿನ ಮತ್ತು ತಮಿಳು ನಾಡಿನ ಜನ ಜೀವನದ ಜೀವಾಳ. ಕಾವೇರಿ ಇಲ್ಲದಿದ್ದರೆ ದಕ್ಷಿಣ ಭಾರತದಲ್ಲಿ ನಾಗರೀಕತೆಯೆ ಇರುತಿರಲಿಲ್ಲಾ. ಆಕೆಯ ಉಗಮ ಮಡಿಕೇರಿಯ ತಳಕಾವೇರಿಯಲ್ಲಿ. ಕೊಡಗು ಜಿಲ್ಲೆಯಲ್ಲಿ ಹಾರಂಗಿ ಮತ್ತು ಇತರೆ ಸಣ್ಣ ಜಲಧಾರೆಗಳನ್ನು ಸೆಳೆದುಕೊಂಡು ಕೃಷ್ಣರಾಜ ಸಾಗರ ಜಿಲ್ಲೆಯಲ್ಲಿ ಹೇಮಾವತಿ, ಲಕ್ಷ್ಮಣ ತೀರ್ಥ ವನ್ನು ಸೇರಿ, ಮಂಡ್ಯಾದಲ್ಲಿ ಸಕ್ಕರೆಯ ಸಿಹಿ ಹಂಚಿ, ಶಿವನ ಸಮುದ್ರದಲ್ಲಿ 'ಧುಮ್' ಎಂದು ಧುಮುಕಲು ಹೊರಡುತ್ತಾಳೆ. ಶಿಂಷಾ , ಅರ್ಕಾವತಿ, ಕಪಿಲೆಯನ್ನು ಕೂಡಿಕೊಂಡು ತಮಿಳು ನಾಡಿನಲ್ಲಿ ಹೊಗೆನೆಕಲ್ ಮೂಲಕವಾಗಿ ಮೆಟ್ಟುರು ಜಲಾಶಯವನ್ನು ಸೇರುತ್ತಾಳೆ. ಅಲ್ಲಿಂದ ಮುಂದೆ ಕಾವೇರಿಯ ಕತೆ ಏನು ? ಮೆಟ್ಟುರಿನಿಂದ ಅರವತ್ತು ಕಿಮಿ ದೂರದಲ್ಲಿ ಭವಾನಿ ನದಿಯೊಡನೆ ಭವಾನಿಯಲ್ಲಿ ಸಂಗಮವಾಗುತ್ತದೆ. ನಂತರ ಕರೂರಿನ ಬಳಿ ನೋಯಲ್ ಮತ್ತು ಅಮರಾವತಿ ನದಿಗಳ ಸೇರಿಕೊಂಡು ಶ್ರೀರಂಗಂ ಧಾಟಿಕೊಂಡು ಕಾವೇರಿಪಟ್ಟಣದಲ್ಲಿ ಸಾಗರವನ್ನು ಸೇರಿ ಸುಮಾರು 600 ಕಿಮಿ ಯಾತ್ರೆಯನ್ನು ಮುಗಿಸುತ್ತಾಳೆ.
ಇದರ ನಕ್ಷೆಯನ್ನು ಕೆಳಗೆ ಕೊಟ್ಟಿದೆ. ಕಾವೇರಿಯ ಕನ್ನಡನಾಡಿನ ಉಪನದಿಗಳಾದ - ಹೇಮಾವತಿ, ಹಾರಂಗಿ, ಕಬಿನಿ , ಲಕ್ಷ್ಮಣ ತೀರ್ಥ , ಶಿಂಷಾ , ಅರ್ಕಾವತಿ ಮತ್ತು ತಮಿಳು ನಾಡಿನ ಉಪನದಿಗಳಾದ ಭವಾನಿ, ನೋಯಲ್ ಮತ್ತು ಅಮರಾವತಿ ಕೂಡ ನಕ್ಷೆಯಲ್ಲಿ ಕಾಣಬಹುದು.
ಈ ಉಪನದಿಗಳಲ್ಲಿ ಅತಿ ಸುಂದರವಾದ ನದಿಯೆಂದರೆ ಭವಾನಿ. ಈ ನದಿಯ ಕೆಲವು ಚಿತ್ರಗಳನ್ನು ಕೆಳಗೆ ಕೊಟ್ಟಿರುವೆ.
ಅದೆಷ್ಟೋ ಕನ್ನಡ ನಾಡಿನ ಜನರಿಗೆ ಭವಾನಿ ನದಿಯ ಬಗ್ಗೆ ತಿಳಿವೆ ಇಲ್ಲ. ಈ ಭಾವಾನಿ ನದಿ ಕಾವೇರಿ ನದಿಯ ಬಹುಮುಖ್ಯವಾದ ಉಪನದಿ. ಕೇರಳದ 'ಸೈಲೆಂಟ್ ವ್ಯಾಲಿ' ಮತ್ತು 'ಅಟ್ಟಪಡಿ' ಗಿರಿ ಶ್ರೇಣಿಗಳ ಮಧ್ಯೆ ಹರಿದು ನೀಲಗಿರಿಯತ್ತ ಹರಿಯುತ್ತಾಳೆ. ತಮಿಳು ನಾಡು ಮತ್ತು ಕರ್ನಾಟಕ ಸ್ವಾತಂತ್ರ್ಯದ ಪೂರ್ವದಲ್ಲಿ ಮತ್ತು ತದ ನಂತರ ಚೆಲುವೆ ಕಾವೇರಿ ಗೊಂದಲ,
ಗಲಭೆ ಮತ್ತು ವಿವಾದದ ಚಿಲುಮೆಯಾಗಿದ್ದಾಳೆ. ಕಾವೇರಿ ವಿವಾದದಿಂದ ಎರಡು ರಾಜ್ಯದ ರಾಜಕಾರಣಿಗಳಿಗೆ ಕಾವೇರಿ ಒಂದು ರಾಜಕೀಯ ದಾಳವಾಗಿ ಹೋಗಿದ್ದಾಳೆ. ಈ ವಿವಾದ ಎರಡೂ ನಾಡಿನ ಜನರನ್ನು ಬೇರೆಗೊಳಿಸಿ ಸಂಬಂಧದಲ್ಲಿ ಬಿರುಕು ಮೂಡಿಸಿದೆ. ಅದರಿಂದ ತಮಿಳು ನಾಡಿನ ಜನರಿಗೆ ಕಾವೇರಿಯ ಬಗ್ಗೆ ತಿಳಿದಿಲ್ಲಾ, ಕನ್ನಡ ನಾಡಿನ ಜನರಿಗೆ ತಮಿಳು ಮತ್ತು ಕೇರಳದ ಜನ ಜೀವನದ ಪರಿಚಯವೇ ಇಲ್ಲಾ. ಹೀಗೆ ಕಾವೇರಿಯ ಮಕ್ಕಳಾದ ನಾವೆಲ್ಲ - 'ತಮಿಳರು', 'ಕನ್ನಡಿಗರು', 'ಮಳಯಾಳಿಗಳು' ಎನ್ನುವ ಹಣೆಪಟ್ಟಿ ಕಟ್ಟಿಕೊಂಡ ನಂತರ, ಎಲ್ಲರು ಒಂದೊಂದು ಬಾವಿಯನ್ನು ತೋಡಿಕೊಂಡು ಅದರಲ್ಲಿ ಸುರಕ್ಷಿತವಾಗಿರುವ ಯೋಜನೆಯನ್ನು ಹೂಡುತ್ತಿದ್ದಾರೆ. ಈ ಐದಡಿ ಬಾವಿಯ ನೀರು ಕೂಡ ಜಲಪಾತವಾಗಿ 'ಧುಮ್ ಧುಮ್' ಎಂದು ಮಹಾನದಿಯಾಗಿ ಹೊರಗೆ ಹರಿಯುತ್ತಿರುವುದು ಎನ್ನುವ ಅರಿವು ಮೂಡಿದರೆ ಬಾವಿಗಳಿಂದ ಎದ್ದು ಜನರೆಲ್ಲ ನದಿಯ ಭಾಗವಾಗಿ ಬಿಡುತ್ತಾರೆ. ಆಗ ಜೀವನ ನದಿಯಾಗುವ ಸಾಧ್ಯತೆ ಇದೆ. ಈಗಂತು ನಾಡಿನ ಜನ ಜೀವನವೆಲ್ಲ ಒಂದು ಕಟ್ಟೆಯಾಗಿ ಕೆಟ್ಟಿದೆ .
ಕೇರಳದಲ್ಲಿ ಭವಾನಿ ನದಿಯ ಉಗಮವನ್ನು ಹುಡುಕಿಕೊಂಡು ಹೋದಾಗ ಮತ್ತೊಂದು ನದಿಯ ಪರಿಚಯವಾಯಿತು. ಆ ನದಿಯ ಹೆಸರು "ಭರತ ನದಿ". ಆ ನದಿಯ ತೀರದಲ್ಲಿ ಮಳಯಾಳಂ ಭಾಷೆಯ ಉಗಮವಾಗಿದ ಕತೆ ಕೇಳಿದಾಗ ಮೈ ರೋಮಾಂಚನವಾಯಿತು. ಆಗ 'ಥಟ್' ಎಂದು ಹೊಳೆದ ಐಡಿಯಾ - ಮಹಾನದಿ ಪಥ. ಯಾಕೆ ನಮ್ಮ ದೇಶದ ನದಿಗಳನ್ನು
ಮತ್ತು ಅವುಗಳ ಸುತ್ತ ಮುತ್ತ ಇರುವ ಪ್ರಕೃತಿ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸುವ ಪ್ರಯತ್ನ ಮಾಡಬಾರದು ಎನ್ನುವ ಚಿಂತನೆ 'ಮಹಾನದಿ ಪಥ' ಎನ್ನುವ ಯೋಜನೆಯನ್ನು ಮಾಡುವ ಪ್ರೇರಣೆ ನೀಡಿತು.
ನದಿಯನ್ನು ಕಾಣದೆ ಅಥವಾ ನದಿಯ ಸುತ್ತ ಇರುವ ಬದುಕನ್ನು ಅರ್ಥೈಸಿ ಕೊಳ್ಳದೆ, ರಾಜಕೀಯ ಅಥವಾ ನ್ಯಾಯಾಂಗದ ಹಸ್ತಕ್ಷೇಪದಿಂದ ಮಾತ್ರ ವಿವಾದ ಪರಿಹಾರವಾಗುತ್ತದೆ ಎನ್ನುವುದುಅಪಕ್ವ ಚಿಂತನೆ. ಅದಷ್ಟೆ ಅಲ್ಲದೆ, ನೀರಿನ ಜಲಾನಯನ ಪ್ರದೇಶದ ವಿಸ್ತಾರ ಬದಲಾಗಿಲ್ಲ, ಆದರೆ ನದಿಯ ದಂಡೆಯ ಮೇಲಿನ ಜನ ಸಂಖ್ಯೆ ವಿಪರೀತ ಹೆಚ್ಚಿದೆ. ಇದರಿಂದ ಕಾವೇರಿಯ ಮೇಲೆ ನೀರು ಪೂರೈಕೆಯ ಒತ್ತಡ ಹೆಚ್ಚಿದೆ.
ಈವತ್ತು ಕಾವೇರಿ ನದಿಯ ಬಗ್ಗೆ ಅರಿವು ಮತ್ತು ಪ್ರೀತಿ ಮೂಡಿಸುವ ಆವಶ್ಯಕವಾಗಿದೆ. ಈ ಯಾತ್ರೆ ನಮ್ಮ ಪ್ರಜ್ಞೆಯಲ್ಲಿ ಕಾವೇರಿಯ ಬಗ್ಗೆ ನಾವು ಮಾಡುವ ಚಿಂತನೆಯ ಹರಿವನ್ನು ಬದಲಾಯಿಸುವುದೆಂಬ ಘಾಡವಾದ ನಂಬಿಕೆ ನಮಗಿದೆ.
ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನದಿಯ ಸಮೀಕ್ಷೆಯನ್ನು ಸೈಕಲ್ ಏರಿ ಮಾಡುವ ಉದ್ದೇಶವನ್ನು ಹೊಂದಿದ್ದೇವೆ.
ಕಾವೇರಿ ನದಿ ಮತ್ತು ಅದರ ಸುತ್ತ ಇರುವ ಉಪನದಿಗಳಿಗೆ ಸೈಕಲ್ ಯಾತ್ರೆಯನ್ನು ಆಯೋಜಿಸುವ ಉದ್ದೇಶ :
೧. ಕಾವೇರಿ ಜಲಾನಯನ ಪ್ರದೇಶದ ಪರಿಚಯ.
ಕಾವೇರಿ ಜಲಾನಯನ ಪ್ರದೇಶ ಕರ್ನಾಟಕದಲ್ಲಿ ಕೊಡಗು-ಹಾಸನ-ತುಮಕೂರು-ಮಂಡ್ಯಾ-ಮೈಸೂರು-ಬೆಂಗಳೂರು-ಚಾಮರಾಜನಗರದಿಂದ ತಮಿಳು ನಾಡಿನ ಈರೋಡು - ಕರೂರು- ತಿರುಚಿರಾಪಳ್ಳಿ -ತಾಂಜಾವೂರು-ನಾಗಪಟ್ಟನಂ - ಚಿದಂಬರಂ ಜಿಲ್ಲೆವರೆಗೂ ವಿಸ್ತಾರವನ್ನು ಹೊಂದಿದೆ.
೨. ಭಾವನಿ ಹುಟ್ಟುವ ನೀಲಗಿರಿ ಪರಿಸರದ ದರ್ಶನ.
ನೀಲಗಿರಿ ಜೀವ ವೈವಿಧ್ಯ ತಾಣ ದೇಶದಲ್ಲಿ ಅತೀ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಇಲ್ಲಿಯ ನೀಲಗಿರಿ ತಾರ್, ನೀಲಗಿರಿ ಚಿಟ್ಟೆ, ನೀಲಗಿರಿ ಲಂಗೂರ್ ವಿಶಿಷ್ಟ ಪ್ರಬೇಧಗಳು.
೩. ಕಾವೇರಿ ನದಿಯ ಬಗ್ಗೆ ಜ್ಞಾನ ಪ್ರಚಾರ.
ಕಾವೇರಿಯ ಉಪನದಿಗಳಾವುವು ? ಉತ್ತರವನ್ನು ಅರಸಿ ಬರುವವರಿಗೆ ಗುಬ್ಬಿ ಲ್ಯಾಬ್ಸ್ ತಂಡ ಕಾವೇರಿಯ ಮುಖ್ಯ ಉಪನದಿಯಾದ ಭವಾನಿ ನದಿಯ ಯಾತ್ರೆಯನ್ನು ಆಯೋಜಿಸಿದೆ.
ಉತ್ತರವನ್ನು ತಿಳಿಯಲು ಕಾವೇರಿಯ ಬೆನ್ನೇರಿ ಸೈಕಲ್ ಯಾತ್ರೆಯನ್ನು ಮಾಡಿ . ಬೆಂಗಳೂರಿನಿಂದ ಊಟಿಯ ವರೆಗೆ ಬಸ್ಸ್ ನಲ್ಲಿ ಪ್ರಯಾಣದ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿಂದ ಎರಡು ದಿನ ನೀಲಗಿರಿ ಬೆಟ್ಟದ ಟೀ ಎಸ್ಟೇಟ್ ಮಧ್ಯದಲ್ಲಿ ಭವಾನಿಯ ದರ್ಶನ.
ದಿನಾಂಕ : 14-September-2013.
ಮೊದಲನೇ ದಿನ ಕೂನೂರಿನಿಂದ ಭವಾನಿ ಡ್ಯಾಮ್, ಅವಲಾಂಚ್ ಅಣೇಕಟ್ಟು, ಎಮರಲ್ಡ್ ಅಣೇಕಟ್ಟು ಭೇಟಿ ಮಾಡುವ ಯೋಜನೆ ಇದೆ.
ದಿನಾಂಕ :15-September-2013.
ಎರಡನೇ ದಿನ ಕೂನೂರಿಂದ ಪೈಕಾರ, ಗ್ಲೆನ್ ಮೋರ್ಗಲ್ ಅಣೇಕಟ್ಟು, ಪಾರ್ಸನ್ ವ್ಯಾಲಿಯನ್ನು ಭೇಟಿ ಮಾಡುವ ಯೋಜನೆ ಇದೆ. ದಿನಕ್ಕೆ ಸರಾಸರಿ ಎಂಬತ್ತು ಕಿ.ಮಿ ಸೈಕಲ್ ತುಳಿಯ ಬೇಕು. ಸೈಕಲ್ ಶ್ರಮವಿಲ್ಲದೆ, ಆರಾಮಾಗಿ ತುಳಿಯುವ ಮಾರ್ಗವನ್ನೇ ಹುಡುಕಿದ್ದೇವೆ. ಸೈಕಲ್ ಇಲ್ಲದವರು ಮುಂಚಿತವಾಗಿ ತಿಳಿಸಿದರೆ ಬಾಡಿಗೆಗೆ ಸೈಕಲ್ ವ್ಯವಸ್ಥೆ ಮಾಡಲಾಗುತ್ತದೆ.
- Day 1 - Sept 14,2013: Coonoor to Upper Bhavani Reservoir
ಯಾತ್ರೆಯ ಮಾರ್ಗ ಸೂಚಿ ಕೆಳಕಂಡಂತಿದೆ.
ಸಂಪರ್ಕಿಸಿ:
ಶಂಕರ್ - 99162 52247
ಮುರಳಿ - murali@gubbilabs.in
Comments
ಉ: ಮಹಾನದಿ ಪಥ - ಮರಳಿ ನೀರಿಗೆ
ಉ: ಮಹಾನದಿ ಪಥ - ಮರಳಿ ನೀರಿಗೆ
ಉ: ಮಹಾನದಿ ಪಥ - ಮರಳಿ ನೀರಿಗೆ