೧೧೬. ಲಲಿತಾ ಸಹಸ್ರನಾಮ ೪೫೬ರಿಂದ ೪೬೩ನೇ ನಾಮಗಳ ವಿವರಣೆ

೧೧೬. ಲಲಿತಾ ಸಹಸ್ರನಾಮ ೪೫೬ರಿಂದ ೪೬೩ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೪೫೬ - ೪೬೩

Haṁsinī हंसिनी (456)

೪೫೬. ಹಂಸಿನೀ

           ಹಂಸ ಮಂತ್ರದ ಸ್ವರೂಪದಲ್ಲಿ ಇರುವವಳು. ಹಂಸ ಮಂತ್ರವನ್ನು ಅಜಪ ಮಂತ್ರವೆಂದೂ ಕರೆಯುತ್ತಾರೆ ಈ ವಿಧಾನದಲ್ಲಿ ಸೂರ್ಯೋದಯದಿಂದ ಸೂರ್ಯೋದಯದವರೆಗೆ ಮಾನಸಿಕ ಚಕ್ರಗಳ ಮೇಲೆ ಗಮನವನ್ನು ಕೇಂದ್ರೀಕರಿಸಿ ಮಂತ್ರೋಚ್ಛಾರಣೆಯನ್ನು ಮಾಡಲಾಗುತ್ತದೆ. ಅಜಪ ಜಪವು ಉಚ್ಛಾಸ ನಿಶ್ವಾಸಗಳನ್ನೂ ಅವಲಂಬಿಸುತ್ತದೆ.

            ಹಂಸಗಳು ತಮ್ಮ ವೈಯ್ಯಾರದ ನಡಿಗೆಗೆ ಹೆಸರಾಗಿವೆ. ಕಾವ್ಯಾತ್ಮಕವಾಗಿ ಸೌಂದರ್ಯ ಲಹರಿಯು ಇದನ್ನು ಉಪಮೆಯಾಗಿ ಹೀಗೆ ವಿವರಿಸುತ್ತದೆ, "ಪರಶಿವನ ಮನೆಯಲ್ಲಿ ಸಾಕಲ್ಪಟ್ಟ ಹಂಸಗಳು ನಿನ್ನ ವೈಯ್ಯಾರದ ನಡಿಗೆಯನ್ನು ಅನುಕರಿಸುತ್ತವೆ".

Mātā माता (457)

೪೫೭. ಮಾತಾ

            ಲಲಿತಾ ಸಹಸ್ರನಾಮದ ಮೊದಲನೇ ನಾಮವು ಶ್ರೀ ಮಾತಾ ಎಂದರೆ ಜಗನ್ಮಾತೆ ಆಗಿದೆ. ಲಲಿತಾ ಸಹಸ್ರನಾಮವೊಂದೇ ಯಾವುದೇ ನಾಮದ ಪುನರುಚ್ಛಾರಣೆಯು ಎರಡು ಬಾರಿ ಇಲ್ಲದೇ ಇರುವ ಸಹಸ್ರನಾಮವಾಗಿದೆ. ಈ ನಾಮದಲ್ಲಿ ಮೊದಲನೇ ನಾಮದಲ್ಲಿ ಇದ್ದ ಪೂರ್ವ ಪ್ರತ್ಯಯವಾದ ‘ಶ್ರೀ’ಯನ್ನು ಬಳಸಲಾಗಿಲ್ಲ. ಇದೇ ವಿಧವಾದ ಮತ್ತೊಂದು ಉದಾಹರಣೆ ಎಂದರೆ ನಾಮ ೫೩ ’ಶಿವಾ’ ಆಗಿದ್ದರೆ ೯೯೮ ನಾಮವು ’ಶ್ರೀ ಶಿವಾ’ ಆಗಿದೆ. ಸಾಂದರ್ಭಿಕ ಉಲ್ಲೇಖದ ದೃಷ್ಟಿಯಿಂದ ನೋಡಿದಾಗ ಅಂದರೆ ಈ ಸಹಸ್ರನಾಮದ ಹಿಂದಿನ (೪೫೩, ೪೫೫ ಮತ್ತು ೪೫೬ನೇ) ನಾಮಗಳನ್ನು ನೋಡಿದಾಗ ಈ ನಾಮವನ್ನು ’ಆಕೆಯು ಮಂತ್ರಗಳ ಮಾತೆಯಾಗಿದ್ದಾಳೆ’ ಎಂದು ವ್ಯಾಖ್ಯಾನಿಸಬಹುದು. ದೇವಿಯನ್ನು ಮಾತೃಕಾ ಎಂದು ಕರೆದಿದ್ದಾರೆ ಇದರರ್ಥ ಅಕ್ಷರಗಳ ತಾಯಿ.

Malayācala vāsinī मलयाचल वासिनी (458)

೪೫೮. ಮಲಯಾಚಲ ವಾಸಿನೀ

          ಭಾರತದ, ಕೇರಳ ರಾಜ್ಯದಲ್ಲಿ ದೇವಿಯನ್ನು ಭಗವತೀ ಎಂದು ಪೂಜಿಸುತ್ತಾರೆ. ಕೇರಳವನ್ನು ಮಲಯಾಚಲವೆಂದೂ ಕರೆಯುತ್ತಾರೆ. ಅವರು ಮಾತನಾಡುವ ಭಾಷೆಯು ಮಲಯಾಳಮ್. ಮಲಯಾಚಲ ಪರ್ವತಗಳಲ್ಲಿ ಶ್ರೀಗಂಧದ ಮರಗಳು ಸಮೃದ್ಧಿಯಾಗಿವೆ ಹಾಗಾಗಿ ಸಹಜವಾಗಿಯೇ ಅಲ್ಲಿ ಪ್ರಕೃತಿದತ್ತವಾದ ಸುವಾಸನೆಯು ಇದೆ. ಈ ಸ್ಥಳವನ್ನು ದೇವತೆಗಳ ಮುಖ್ಯಸ್ಥನಾದ ಇಂದ್ರನ ಬನವೆಂದೂ (ತೋಟವೆಂದೂ) ಕರೆಯುತ್ತಾರೆ. ಈ ನಾಮದ ಸೂಕ್ಷ್ಮಾರ್ಥವೇನೆಂದರೆ ಮಂತ್ರಗಳ ಪ್ರಭಾವದಿಂದಾಗಿ ದೇವಿಯು ಸಹಜವಾದ ಸುವಾಸನೆಯನ್ನು ಸೂಸುವವಳಾಗಿದ್ದಾಳೆ ಎನ್ನುವುದು. ಇಲ್ಲಿ ಸಹಜವಾದ ಸುವಾಸನೆಯ ಉಪಮೆಯ ಮೂಲಕ ಮಂತ್ರದ ಶಕ್ತಿಯನ್ನು ಬಿಂಬಿಸಲಾಗಿದೆ.

Sumukhī सुमुखी (459)

೪೫೯. ಸುಮುಖೀ

         ದೇವಿಗೆ ಸುಂದರವಾದ ಮುಖವಿದೆ. ಮುಖವು ವಿವೇಕದ ಪ್ರತಿರೂಪವಾಗಿದೆ. ಛಾಂದೋಗ್ಯ ಉಪನಿಷತ್ತು (೪.೧೪.೨), "ನಿನ್ನ ಮುಖವು ಬ್ರಹ್ಮವನ್ನು ಅರಿತವರಂತೆ ಹೊಳೆಯುತ್ತಿದೆ. ನಿನಗೆ ಯಾರು ಉಪದೇಶಿಸಿದರು?" ಎಂದು ಹೇಳುತ್ತದೆ. (ಆ ಉಪನಿಷತ್ತು ಮುಂದುವರೆಯುತ್ತಾ ಹೇಳುವುದೇನೆಂದರೆ, ಯಾರು ಬ್ರಹ್ಮವನ್ನು ಅರಿತಿದ್ದಾರೆಯೋ ಅವರು ಪರಿಶುದ್ಧವಾಗಿದ್ದು ಅವರಿಗೆ ಯಾವುದೇ ವಿಧವಾದ ಕಳಂಕಗಳು ಅಂಟಿಕೊಳ್ಳುವುದಿಲ್ಲ. ಅವನು ಯಾವುದೇ ವಿಧವಾದ ತಪ್ಪುಗಳನ್ನು ಮಾಡಲು ಅರ್ಹನಾಗಿರುವುದಿಲ್ಲ). ಒಬ್ಬನು ಆಧ್ಯಾತ್ಮಿಕವಾಗಿ ಮುನ್ನಡೆಯನ್ನು ಸಾಧಿಸಿದರೆ, ಅವನ ಮುಖವು ಕಾಂತಿಯಿಂದ ಹೊಳೆಯುತ್ತದೆ. ಶ್ವೇತಾಶ್ವತರ ಉಪನಿಷತ್ತು (೬.೧೫) ಸಹ ಹೇಳುತ್ತದೆ, "ನಾನು, ಮುಕ್ತಿಯನ್ನು ಬಯಸುವ ಒಬ್ಬನು, ಆ ಪ್ರಕಾಶಮಾನವಾದ ದೇವನಲ್ಲಿ ಶರಣಾಗತಿಯನ್ನು ಕೋರುತ್ತೇನೆ, ಯಾರು ಆತ್ಮಜ್ಞಾನವು ಮನಸ್ಸಿನಲ್ಲಿ ವ್ಯಕ್ತವಾಗುವಂತೆ ಮಾಡುತ್ತಾನೋ". ಆತ್ಮವನ್ನು ಕೇವಲ ಪ್ರಕಾಶವೊಂದರಿಂದಲೇ ಗುರುತಿಸಬಹುದು. ವಿಷ್ಣು ಸಹಸ್ರನಾಮದ ೪೫೬ನೇ ನಾಮವು ಸುಮುಖಃ ಆಗಿದ್ದು ಅದೂ ಸಹ ಇದೇ ಅರ್ಥವನ್ನು ಕೊಡುತ್ತದೆ.

          ಮಂತ್ರ ದೀಕ್ಷೆಯನ್ನು ಸಹ ಆ ವಿಧವಾದ ಗುರುಮುಖೇನ ಪಡೆಯಬೇಕೇ ಹೊರತು ಯಾರು ಕೇವಲ ಆಚರಣೆಗಳೊಂದಿಗೆ ಸಂಭಂದ ಹೊಂದಿದ್ದಾರೋ ಅವರಿಂದಲ್ಲ. ಆಗ ಮಾತ್ರವೇ ದೀಕ್ಷೆಯ ಉದ್ದೇಶವು ಈಡೇರುತ್ತದೆ.

Nalinī नलिनी (460)

೪೬೦. ನಳಿನೀ

            ದೇವಿಯ ಅಂಗಗಳನ್ನು ಕಮಲದ ಹೂವಿಗೆ ಹೋಲಿಸಲಾಗಿದೆ. ನಾಮ ೨೭೮ ದೇವಿಯು ಕಮಲದ ಆಸನದಲ್ಲಿ ಆರೂಢಳಾಗಿದ್ದಾಳೆ ಎಂದು ಹೇಳುತ್ತದೆ. ಆದರೆ ಈ ನಾಮವು ಸ್ವಯಂ ದೇವಿಯೇ ಕಮಲದ ಹೂವಿನಂತೆ ಕಂಗೊಳಿಸುತ್ತಾಳೆ ಎಂದು ಹೇಳುತ್ತದೆ. ದೇವಿಯ ಶಿಲ್ಪದಂತಿರುವ ಮೈಮಾಟವನ್ನು ಇಲ್ಲಿ ಸೂಕ್ಷ್ಮವಾಗಿ ಕಮಲದ ಹೂವಿಗೆ ಹೋಲಿಸಲಾಗಿದೆ.

            ಗಂಗಾ ನದಿಗೂ ಸಹ ನಳಿನೀ ಎನ್ನುವ ಹೆಸರಿದೆ. ಸ್ವರ್ಗದಲ್ಲಿಯೂ ಸಹ ಗಂಗಾ ಎನ್ನುವ ನದಿಯಿದ್ದು ಅದನ್ನೂ ಸಹ ನಳಿನೀ ಎಂದು ಕರೆಯಲಾಗುತ್ತದೆ.

Subhrūḥ सुभ्रूः (461)

೪೬೧. ಸುಭ್ರುಃ

            ದೇವಿಗೆ ಸುಂದರವಾದ ಕಣ್ಣುಹುಬ್ಬುಗಳಿವೆ. ಅದಾಗಲೇ ನಾಮ ೧೭ರಲ್ಲಿ ದೇವಿಯ ಹುಬ್ಬುಗಳನ್ನು ಹೂವಿನ ತೋರಣಕ್ಕೆ ಹೋಲಿಸಿ ವರ್ಣಿಸಲಾಗಿದೆ.

         ಸೌಂದರ್ಯ ಲಹರಿಯು (ಸ್ತೋತ್ರ ೪೭) ದೇವಿಯ ಕಣ್ಣುಗಳನ್ನು ಬಹು ಸುಂದರವಾಗಿ ವರ್ಣಿಸುತ್ತದೆ, "ಓಹ್ಞ್, ಉಮೆ! ಯಾವಾಗಲೂ ಪ್ರಪಂಚದ ಭಯಗಳನ್ನು ಹೋಗಲಾಡಿಸುವುದಕ್ಕೆ ಬಾಗಿರುವವಳೇ! ಅತೀ ಹತ್ತಿರ ಬೆಸೆಯಲ್ಪಟ್ಟಿರುವ ನಿನ್ನ ಹುಬ್ಬುಗಳನ್ನು ನಾನು ರತಿಯ ಸಂಗಾತಿಯ ಬಿಲ್ಲೆಂದು ಭ್ರಮಿಸುತ್ತೇನೆ". ಆ ಸ್ತುತಿಯು ಮುಂದುವರೆಯುತ್ತಾ ಆಕೆಯ ಕಣ್ಣಿನ ಹುಬ್ಬುಗಳು ಬಿಲ್ಲಿನಂತೆ ಬಾಗಿವೆ ಮತ್ತು ಕೆಳಗಡೆ ಜೇನು ಹುಳುಗಳಂತೆ ಅವಳ ಎರಡು ಕಣ್ಣುಗಳು ಹೊಳೆಯುತ್ತವೆ. ಶ್ರೀ ಶಂಕರರು ಬಿಲ್ಲಿನ ಹೆದೆಯನ್ನು ಬೆಸೆಯುವ ಒಂದು ಸೂತ್ರ (ದಾರ)ವನ್ನು ಆರೋಪಿಸಿ ಆ ದಾರದಿಂದ ಕೂಡಿದ ಆಕೆಯ ಕಣ್ಣಿನ ಹುಬ್ಬುಗಳ ಬಿಲ್ಲಿನಿಂದ ದೇವಿಯು ತನ್ನ ಭಕ್ತರ ಭಯಗಳನ್ನು ವಿನಾಶ ಮಾಡುತ್ತಾಳೆ, ಎಂದು ವರ್ಣಿಸಿದ್ದಾರೆ. ಕೋಪದಂತೆ ಭಯವೂ ಸಹ ಮನುಜನ ಅತ್ಯಂತ ಕೆಟ್ಟ ಶತ್ರುವಾಗಿದೆ.

Śobhanā शोभना (462)

೪೬೨. ಶೋಭನಾ

            ದೇವಿಯ ಅನುಪಮ ಸೌಂದರ್ಯವು ಇಲ್ಲಿ ಹೇಳಲ್ಪಟ್ಟಿದೆ. ವಾಕ್ ದೇವಿಗಳು ಮಾನವ ಸಂಭಂದಿತ ವಸ್ತುಗಳಿಗೆ ದೇವಿಯ ಸೌಂದರ್ಯವನ್ನು ಹೋಲಿಸಿ ಅದನ್ನು ವರ್ಣಿಸುವ ಅವರ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಅವರಿಗೆ ದೇವಿಯ ಸೌಂದರ್ಯವನ್ನು ಸೂಕ್ತವಾಗಿ ವರ್ಣಿಸಲು ಸಾಧ್ಯವಾಗದ್ದರಿಂದ ಅವರು ಈ ನಾಮದೊಂದಿಗೆ ಅದನ್ನು ಮುಗಿಸಿ ಆಕೆಯ ಸೌಂದರ್ಯದಿಂದ ದೂರವುಳಿದಿದ್ದಾರೆ. ಶೋಭನಾ ಎಂದರೆ  ಶುಭಪ್ರದತೆಯಿಂದ ಕೂಡಿದ ಸೌಂದರ್ಯದ ಮೂರ್ತ ರೂಪ. ಇದನ್ನೇ ದೈವೀ ಸೌಂದರ್ಯವೆನ್ನುವುದು. ಶೋಭಾ ಎನ್ನುವ ಶಬ್ದವು ದೈವೀಕ, ಯಾವುದೇ ವಿಧವಾದ ಸಮೃದ್ಧಿಯುಂಟು ಮಾಡುವ, ಮಂಗಳಕರವಾದ, ಒಳಿತು, ಅಭಿವೃದ್ಧಿ, ಕ್ಷೇಮವಾಗಿರುವಿಕೆ, ಒಳ್ಳೆಯ ಬುದ್ಧಿ, ಗುಣ ಮೊದಲಾದ ಅರ್ಥಗಳನ್ನು ಕೊಡುತ್ತದೆ.

Suranāyikā सुरनायिका (463)

೪೬೩. ಸುರನಾಯಿಕಾ

            ದೇವಿಯು ಎಲ್ಲಾ ದೇವರುಗಳ ಅಧಿನಾಯಕಿ. ದೇವರುಗಳೆಂದರೆ ಬ್ರಹ್ಮ, ವಿಷ್ಣು, ರುದ್ರ, ಸರಸ್ವತೀ, ಲಕ್ಷ್ಮೀ ಮೊದಲಾದ ಎಲ್ಲಾ ದೇವ-ದೇವಿಯರು. ದೇವರುಗಳಿಗೂ ಮತ್ತು ದೇವತೆಗಳಿಗೂ ಇರುವ ಪ್ರಮುಖ ವ್ಯತ್ಯಾಸವೇನೆಂದರೆ ದೇವರುಗಳು ಪರಬ್ರಹ್ಮದ ಮೂರು ಮುಖ್ಯ ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳಲ್ಲಿ ನೇರವಾಗಿ ಭಾಗಿಯಾಗುತ್ತಾರೆ ಆದರೆ ದೇವತೆಗಳಿಗೆ ಆ ಶಕ್ತಿ ಇಲ್ಲ. ಉನ್ನತ ಅಧಿಕಾರ ಹೊಂದಿರುವ ಅಧಿಕಾರಿ ಮತ್ತು ಕೆಳ ಹಂತದಲ್ಲಿರುವ ಅಧಿಕಾರಿಯನ್ನು ಉದಾಹರಣಾಪೂರ್ವಕವಾಗಿ ಹೇಳಬಹುದು.

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 456 - 463 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Wed, 09/11/2013 - 21:52

ಶ್ರೀಧರರೆ,  ೧೧೬. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೪೫೬ - ೪೬೩
___________________________________

೪೫೬. ಹಂಸಿನೀ
ವಯ್ಯಾರದ ನಡಿಗೆಯನುಕರಣೆಗೆ ಸ್ಪೂರ್ತಿ ಲಲಿತಾ ಹಂಸಿನೀ
ದೇವಿ ನಡಿಗೆಯ ನಾಟ್ಯ ಲಾವಣ್ಯ ಕದ್ದ ಗತ್ತಲಿಹ ಹಂಸ ರಾಣಿ
ಹಂಸಮಂತ್ರ ಅಜಪ ರೂಪದಿ ದೇವಿ, ಗಮನ ಮಾನಸಿಕ ಚಕ್ರ
ದಿನಮಣಿಯಿಂದಿನಮಣಿ ಉಚ್ವಾಸ ನಿಶ್ವಾಸದಿ ಅಜಪ ಮಂತ್ರ!

೪೫೭. ಮಾತಾ
ಶ್ರೀ ಮಾತೆಯಾ ರೂಪದಲಿ ಲಲಿತೆಯಾಗಿಹಳು ಜಗನ್ಮಾತೆ
ಮಾತೆಯ ರೂಪದಲಿ ಸಕಲ ಮಂತ್ರಗಳೊಡೆತನ ಸಾರುತೆ
ಮಂತ್ರಗಳಿಗಾದಂತೆ ಮಾತೆ, ಮಂತ್ರಾಕ್ಷರಕವಳೆ ಮಾತೃಕೆ
ಸಕಲಾಕ್ಷರಗಳ ಜನ್ಮದಾತೆ, ಶಬ್ದ ಬ್ರಹ್ಮದ ಸೃಷ್ಟಿಯ ಅಂಕೆ!
         
೪೫೮. ಮಲಯಾಚಲ ವಾಸಿನೀ 
ಭಗವತಿಯ ನಾಡು ಮಲಯಾಚಲ ಗಂಧದ ಸೊಗಡು
ಪಸರಿಸಿ ಚಂದನ ಪರಿಮಳ ಸುವಾಸನಾಭರಿತ ಕಾಡು
ಮಂತ್ರಪ್ರಭಾವ ಪ್ರೇರಿತ, ಸಹಜ ಸುಗಂಧಲೇಪ ಜನನಿ
ಇಂದ್ರಬನ ಕೈಂಕರ್ಯಸೇವಿತ ಮಲಯಾಚಲವಾಸಿನೀ!

೪೫೯. ಸುಮುಖೀ
ಬ್ರಹ್ಮವರಿತ ಪರಿಶುದ್ಧತೆ ಪ್ರತಿಫಲನ ಪ್ರಫುಲ್ಲವಿಹ ದೇವಿ ವದನ
ಯಾರುಪದೇಶದ ಕಾಂತಿಯೊ ಸುಮುಖಿಯಾಗಿಹ ಲಲಿತಾನನ
ಅರಿತವನರಿವೆ ಪರಿಶುದ್ಧತೆ ಕಳಂಕರಹಿತವಾಗಿಹ ಕಾಂತಿ ತೇಜ
ಆತ್ಮಜ್ಞಾನಪ್ರಕಾಶಕೆ ಗುರು ಸುಮುಖೀ, ಲಲಿತಾ ಜ್ಞಾನದಕಣಜ!

೪೬೦. ನಳಿನೀ
ಕಮಲಾಸನದಲಾಸೀನ ಕಮಲಾಂಗಿನಿ ಲಲಿತೆ ನಳಿನೀ
ಕಮಲತೆ ಶಿಲ್ಪ ಮೈಮಾಟ, ಪರಿಶುದ್ಧತೆ ಗಂಗೆಯ ತನಿ
ನಳಿನ ಮೀರಿಸಿದ ನವಿರುಂಟೆ, ಕೋಮಲತೆಯೆ ಲಲಿತೆ
ನಳಿನಗಂಗಾರೂಪದೆ ಭುವಿಸ್ವರ್ಗಗಳೆರಡರಲು ನಿವಸಿತೆ!

೪೬೧. ಸುಭ್ರುಃ
ಹೂವ್ವಿನ ತೋರಣವೆ ಕಾಮನಬಿಲ್ಲಾದ ಕಣ್ಣ ಹುಬ್ಬು
ಬಾಗಿದ ಬಿಲ್ಲೊಳಗಿನ ಜೇನುಗಣ್ಣಲೆ ಸೊಬಗಿನ ಕಬ್ಬು
ಹೊಳೆಯುವ ಕಣ್ಣ ಸೂತ್ರ ಹೆದೆಯೇರಿಸುತಾ ಲಲಿತೆ
ಶರದಿಂ ನಿವಾರಿಸಿ ಭೀತಿ, ಒಳಶತ್ರುನಾಶವಾಗಿಸುತೆ!

೪೬೨. ಶೋಭನಾ
ಶುಭಪ್ರದ ಸೌಂದರ್ಯದ ಮೂರ್ತ ರೂಪವೆ ಶೋಭನಾ ಲಲಿತಾ
ದೈವೀ ಸೌಂದರ್ಯ ಮಂಗಳಕರ ಸಮೃದ್ದಿ ಸದ್ಗುಣಗಳ ಸಂಕೇತ
ದೇವಿಯನುಪಮ ಸೌಂದರ್ಯದ ವರ್ಣನೆ ಉಪಮೆಗೂ ತೊಡಕು
ವರ್ಣಿಸಲಸದಳ ಅತೀತಕೆ, ಶೋಭಾ ದೈವೀಕ ಹೆಸರನ್ಹುಡುಕು!

೪೬೩. ಸುರನಾಯಿಕಾ
ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯ ಪರಬ್ರಹ್ಮದ ಕ್ರಿಯೆ
ಭಾಗಿಯಾಗೆ ಶಕ್ತ ದೇವರುಗಳಾಗಿ ನಡೆಸಿ ಪ್ರಕ್ರಿಯೆ 
ತ್ರಿಮೂರ್ತಿಯಾದಿ ದೇವದೇವಿಯರ ಅಧಿನಾಯಕಿ
ಸುರನಾಯಿಕಾ ಲಲಿತ ನಡೆಸಿಹಳು ಸೃಷ್ಟಿ ಬೆಳಗಿ?

೪೬೩. ಸುರನಾಯಿಕಾ
ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯ ಪರಬ್ರಹ್ಮದ ಕ್ರಿಯೆ
ಭಾಗಿಯಾಗಿ ಶಕ್ತ ದೇವರುಗಳ ಸಹಕಾರ ಪ್ರಕ್ರಿಯೆ 
ತ್ರಿಮೂರ್ತಿಯಾದಿ ದೇವದೇವಿಗಳಿಗೆ ಅಧಿನಾಯಕಿ
ಆಗಿ ನಡೆಸುತಾ ಬ್ರಹ್ಮಾಂಡ,ಲಲಿತ ಸುರನಾಯಿಕಾ!

ಧನ್ಯವಾದಗಳೊಂದಿಗೆ 
- ನಾಗೇಶ ಮೈಸೂರು

ಶ್ರೀಧರರೆ, ಸುರನಾಯಿಕ ತಪ್ಪಾಗಿ ಎರಡು ಬಾರಿ ಸೇರಿಸಿಬಿಟ್ಟಿದ್ದೇನೆ. ಮೊದಲ ಆವೃತ್ತಿ ಹಾಗೆಯೆ ಉಳಿದುಬಿಟ್ಟಿದೆ. ಅದನ್ನು ನಿರ್ಲಕ್ಷಿಸಿ ಎರಡನೆ ಆವೃತ್ತಿ ಪರಿಗಣಿಸಿ.( ಈ ಕೆಳಗೆ ಕೂಡ ಪುನರಾವರ್ತಿಸಿದ್ದೇನೆ)

೪೬೩. ಸುರನಾಯಿಕಾ
ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯ ಪರಬ್ರಹ್ಮದ ಕ್ರಿಯೆ
ಭಾಗಿಯಾಗಿ ಶಕ್ತ ದೇವರುಗಳ ಸಹಕಾರ ಪ್ರಕ್ರಿಯೆ 
ತ್ರಿಮೂರ್ತಿಯಾದಿ ದೇವದೇವಿಗಳಿಗೆ ಅಧಿನಾಯಕಿ
ಆಗಿ ನಡೆಸುತಾ ಬ್ರಹ್ಮಾಂಡ,ಲಲಿತ ಸುರನಾಯಿಕಾ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

ನಾಗೇಶರೆ,
ಈ ಕಂತಿನ ಪದ್ಯಗಳು ಹೊಸ ಹೊಸ ಪದಗಳಿಂದ ಹೊಸತನವನ್ನು ಬಿಂಬಿಸುತ್ತಿವೆ. ನಿನ್ನೆ ದಿನಮಣಿ ಎಂದು ಓದಿದಾಗ ಅರ್ಥವಾಗಲಿಲ್ಲ; ಈಗ ನಿಧಾನವಾಗಿ ಓದಿದಾಗ ಸೂರ್ಯೋದಯವನ್ನು ನೀವು ಸೂಚಿಸಲು ಆ ಪದವನ್ನು ಬಳಸಿದ್ದೀರೆಂದು ಅರ್ಥವಾಯಿತು. ಒಟ್ಟಾರೆಯಾಗಿ ನಿಮ್ಮ ನವೀನ ಪದಗಳ ಪ್ರಯೋಗ ಚೆನ್ನಾಗಿದೆ. ಒಂದೇ ಒಂದು ಪದ್ಯದಲ್ಲಿ ಸ್ವಲ್ಪ ಗೊಂದಲವೆನಿಸುತ್ತಿದೆ, ಅದನ್ನು ಸರಿಪಡಿಸಿದರೆ ಉಳಿದಂತೆ ಎಲ್ಲಾ ಚೆನ್ನಾಗಿವೆ.

೪೬೦. ನಳಿನೀ
ಕಮಲಾಸನದಲಾಸೀನ ಕಮಲಾಂಗಿನಿ ಲಲಿತೆ ನಳಿನೀ
ಕಮಲತೆ ಶಿಲ್ಪ ಮೈಮಾಟ, ಪರಿಶುದ್ಧತೆ ಗಂಗೆಯ ತನಿ
ಎರಡನೇ ಸಾಲಿನ ಕಮಲತೆ ಶಿಲ್ಪ ಮೈಮಾಟ ಸ್ವಲ್ಪ ಬದಲಾಯಿಸಿ.

ಸುರನಾಯಿಕಾ ಎರಡನೇ ಆವೃತ್ತಿಯೇ ಚೆನ್ನಾಗಿದೆ.
ಇನ್ನೂ ಅನೇಕ ಕಂತುಗಳ ಕವನಗಳನ್ನು ನೋಡಬೇಕಾಗಿದೆ. ಆದಷ್ಟು ಬೇಗನೆ ಅವನ್ನೂ ನೋಡುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ನಳಿನೀ ತಿದ್ದುಪಡಿಗೆ ಈ ಬದಲಾವಣೆ ಸೂಕ್ತ ಕಾಣುವುದೆ ನೋಡಿ.

೪೬೦. ನಳಿನೀ
ಕಮಲಾಸನದಲಾಸೀನ ಕಮಲಾಂಗಿನಿ ಲಲಿತೆ ನಳಿನೀ
ಶಿಲ್ಪಸಾದೃಶ್ಯ ಕಮಲ ಸೂಕ್ಷ್ಮ ಪರಿಶುದ್ಧತೆ ಗಂಗೆಯ ತನಿ
ನಳಿನ ಮೀರಿಸಿದ ನವಿರುಂಟೆ, ಕೋಮಲತೆಯೆ  ಲಲಿತೆ
ನಳಿನಗಂಗಾ ರೂಪದೆ ಭುವಿಸ್ವರ್ಗಗಳೆರಡರಲು ನಿವಸಿತೆ!

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು

ಓಕೆ ನಾಗೇಶರೆ,
ಇದನ್ನು ಅಂತಿಮಗೊಳಿಸಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಈ ಕಂತನ್ನು ಅಂತಿಮಗೊಳಿಸಿ ಹಾಕಿದ್ದೇನೆ

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು