೧೧೫. ಲಲಿತಾ ಸಹಸ್ರನಾಮ ೪೫೩ರಿಂದ ೪೫೫ನೇ ನಾಮಗಳ ವಿವರಣೆ

೧೧೫. ಲಲಿತಾ ಸಹಸ್ರನಾಮ ೪೫೩ರಿಂದ ೪೫೫ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೪೫೩-೪೫೫

Trinayanā त्रिनयना (453)

೪೫೩. ತ್ರಿನಯನಾ

          ತ್ರಿನಯನಾ ಎಂದರೆ ಮೂರು ಕಣ್ಣುಗಳನ್ನು ಉಳ್ಳವಳು. ಆಕೆಯ ಮೂರು ಕಣ್ಣುಗಳೆಂದರೆ ಸೂರ್ಯ, ಚಂದ್ರ ಮತ್ತು ಅಗ್ನಿಯಾಗಿವೆ. ಸೂಕ್ಷ್ಮಾರ್ಥದಲ್ಲಿ ತ್ರಿನಯನಾ ಎನ್ನುವುದು ಆಕೆಯ ಕಾಮಕಲಾ ರೂಪವನ್ನೂ (ನಾಮ ೩೨೨) ಸಹ ಸೂಚಿಸಬಹುದು. ಶಿವನಿಗೆ ವಾಕ್, ನಿರ್ಣಯ ಮತ್ತು ಗಮನಿಸುವಿಕೆ ಇವುಗಳನ್ನು ಪ್ರತಿನಿಧಿಸುವ ಮೂರು ಕಣ್ಣುಗಳಿವೆ. ದೇವಿಯು ಶಿವನಿಂದ ಹೊರತಾದವಳಲ್ಲವಾದ್ದರಿಂದ ಆಕೆಗೂ ಮೂರು ಕಣ್ಣುಗಳಿವೆ. ಈ ವಿಷಯವನ್ನು ಪತಂಜಲಿ ಮಹರ್ಷಿಯು ತನ್ನ ಮೇರು ಕೃತಿಯಾದ ಯೋಗಸೂತ್ರದಲ್ಲಿ (೧.೭)ಕೂಲಂಕುಷವಾಗಿ ವಿವರಿಸಿದ್ದಾನೆ. ಯಾವುದೋ ಒಂದು ವಿಷಯವು ಸರಿಯೆಂದು ತಿಳಿಯಬೇಕಾದರೆ ಒಬ್ಬನು ಮೂರು ಅಂಶಗಳ ಮೇಲೆ ಅವಲಂಬಿಸಬೇಕು; ಅವೆಂದರೆ ಪ್ರತ್ಯಕ್ಷ ಪ್ರಮಾಣ ಅಥವಾ ನೇರವಾದ ಗ್ರಹಿಕೆ, ಅನುಮಾನ ಅಥವಾ ನಿರ್ಣಯ, ಮತ್ತು ಆಗಮ ಅಥವಾ ಆಧ್ಯಾತ್ಮಿಕ ಜ್ಞಾನ (ಆಧ್ಯಾತ್ಮಿಕ ಜ್ಞಾನವನ್ನು ವಿವೇಕವೆಂದೂ ಕರೆಯುತ್ತಾರೆ).

           ಬೃಹದಾರಣ್ಯಕ ಉಪನಿಷತ್ತು (೨.೪.೫) ಅದನ್ನು ಮತ್ತಷ್ಟು ವಿಸ್ತಾರವಾಗಿ ವಿವರಿಸುತ್ತಾ ಹೀಗೆ ಹೇಳುತ್ತದೆ, "ಕೇಳುವುದರ ಮೂಲಕ, ಮನನದ ಮೂಲಕ ಮತ್ತು ಧ್ಯಾನದ ಮೂಲಕ ಆತ್ಮಸಾಕ್ಷಾತ್ಕಾರವನ್ನು ಮಾಡಿಕೊಂಡಾಗ ನಮಗೆ ಇದೆಲ್ಲದರ ತಿಳುವಳಿಕೆಯುಂಟಾಗುತ್ತದೆ". ಶ್ರವಣ, ಮನನ ಮತ್ತು ಧ್ಯಾನ ಇವು ಮೂರೂ ಆಧ್ಯಾತ್ಮಿಕ ಸ್ಪೃಹೆಯನ್ನು ಹೊಂದಿರುವ ಮನುಷ್ಯನ ಮೂರು ಕಣ್ಣುಗಳೆಂದು ಹೇಳಲಾಗುತ್ತದೆ. ತ್ರಿನಯನಾ ಎನ್ನುವುದು ಆಜ್ಞಾ ಚಕ್ರವನ್ನೂ ಸಹ ಸೂಚಿಸಬಹುದು ಅಥವಾ ಈ ಮೂರನೆಯ ಕಣ್ಣಿನಿಂದ ಅತೀಂದ್ರಿಯ ದೃಷ್ಟಿ ಮತ್ತು ಅತೀಂದ್ರಿಯ ಶ್ರವಣದ ಸಾಮರ್ಥ್ಯವನ್ನು ಗಳಿಸಿಕೊಳ್ಳುವ ಸಾಧ್ಯತೆಯಿದೆ.

           ದೇವಿಯನ್ನು ಮೂರು ವಿಧವಾಗಿ ಪೂಜಿಸಬಹುದು ಅವೆಂದರೆ ವಾಮಹಸ್ತದ ಪೂಜೆ, ದಕ್ಷಿಣ ಹಸ್ತದ ಪೂಜೆ ಮತ್ತು ವೈದಿಕ ಪೂಜೆ. ದೇವಿಯು ಈ ಸಾಧಕರನ್ನು ಅವರು ಯಾವುದೇ ಮಾರ್ಗವನ್ನು ಅನುಸರಿಸಿದರೂ ಸಹ ಅವರನ್ನು ಸರಿಯಾದ ದಾರಿಯಲ್ಲಿ ಮುನ್ನೆಡುಸುತ್ತಾಳೆ. ಮಾರ್ಗಗಳು ಭಿನ್ನವಾದರೂ ಸಹ, ಅಂತಿಮವಾದ ಗುರಿಯು ಬ್ರಹ್ಮವೇ ಆಗಿದೆ. ಈ ಮಾರ್ಗಗಳು ಸಾಧಕನ ಮಾನಸಿಕ ಧೋರಣೆಯನ್ನು ಸೂಚಿಸುವ ಉದಾಹರಣೆಗಳಾಗಿವೆ.

Lolākṣī-kāma-rūpinī लोलाक्षी-काम-रूपिनी (454)

೪೫೪. ಲೋಲಾಕ್ಷೀ-ಕಾಮ-ರೂಪಿಣೀ

           ದೇವಿಯು ಸ್ತ್ರೀಯರ ಆಸೆಗಳ ರೂಪದಲ್ಲಿದ್ದಾಳೆ. ಲೋಲಾಕ್ಷೀ ಎಂದರೆ ಸ್ತ್ರೀ ಎಂದು ಅರ್ಥ. ಈ ಆಸೆಯನ್ನು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ (೭.೧೧) ವಿವರಿಸುತ್ತಾನೆ, "ನಾನು ಮನುಷ್ಯರಲ್ಲಿ ಯಾವ ಆಸೆಯು ಅವರನ್ನು ಧರ್ಮ ಮಾರ್ಗದಲ್ಲಿರುವಂತೆ ಮಾಡುತ್ತದೆಯೋ ಅದು". ಇಲ್ಲಿ ಶ್ರೀಕೃಷ್ಣನು ಹೇಳುತ್ತಿರುವುದು ಮುಕ್ತಿಯ ಕುರಿತಾಗಿ. ಬಹುಶಃ ಆಕೆಯ ಆಸೆಯು ಶಿವನಿಗಾಗಿ (ನಾಮ ೩೨೦), ಅದರ ಹೊರತಾಗಿ ಆಕೆಯ ಬಳಿ ಎಲ್ಲವೂ ಇರುವಾಗ ಆಕೆಗೆ ಆಸೆಯ ಅವಶ್ಯಕತೆಯಾದರೂ ಏನಿದೆ? ಇದನ್ನು ಈ ವಿಧವಾಗಿಯೂ ಸಹ ವಿಶ್ಲೇಷಿಸಲಾಗುತ್ತದೆ, ಅದೇನೆಂದರೆ ಆಕೆಯ ಆಸೆಯು ಕೇವಲ ಶಿವನೊಬ್ಬನ ಕುರಿತಾಗಿಯೇ ಅಲ್ಲ ಅದು ಎಲ್ಲರನ್ನೂ ಕುರಿತಾಗಿದೆ. ಎಲ್ಲಾ ಜೀವಿಗಳ ಸ್ವಭಾವವನ್ನು ಸೂಚಿಸುವ ಸಲುವಾಗಿ ಇಲ್ಲಿ ಸ್ತ್ರೀ ಶಬ್ದವನ್ನು ಸೂಚ್ಯವಾಗಿ ಬಳಸಲಾಗಿದೆ. ಬಹುಶಃ ಇದು ಸ್ತ್ರೀಯ ಆಸೆಗಳಿಲ್ಲದಿದ್ದರೆ, ಸಂತಾನೋತ್ಪತ್ತಿಯು ಇರುತ್ತಿರಲಿಲ್ಲ - ಇದರ ಮೂಲಕ ತಾಯ್ತನದ ಪಾವಿತ್ರ್ಯವನ್ನು ಒತ್ತಿಹೇಳಲಾಗುತ್ತಿದೆ.

          ದೇವಿಯು ಆಸೆಯ ಅಧಿದೇವತೆಯಾದ ಯೋಗೇಶ್ವರೀ ದೇವಿಯ ರೂಪದಲ್ಲಿಯೂ ಇರುತ್ತಾಳೆಂದು ಹೇಳಲಾಗುತ್ತದೆ. ಮನುಜ ಸ್ವಭಾವದ ಎಂಟು ಲಕ್ಷಣಗಳನ್ನು ಪ್ರತಿನಿಧಿಸುವ ಅಷ್ಟ ಮಾತೆಯರಿದ್ದಾರೆ. ಅವರೆಂದರೆ, ೧) ಯೋಗೇಶ್ವರೀ, ಆಸೆಯನ್ನು ಪ್ರತಿನಿಧಿಸುವಾಕೆ ೨) ಮಾಹೇಶ್ವರೀ - ಕೋಪವನ್ನು ಪ್ರತಿನಿಧಿಸುವಾಕೆ, ೩) ವೈಷ್ಣವೀ - ದುರಾಸೆಯನ್ನು ಪ್ರತಿನಿಧಿಸುವಾಕೆ, ೪) ಬ್ರಹ್ಮಾಣೀ -ಉತ್ಕಟ ಬಯಕೆಯನ್ನು ಪ್ರತಿನಿಧಿಸುವಾಕೆ, ೫) ಕಲ್ಯಾಣೀ - ಗೊಂದಲಕ್ಕಾಗಿ, ೬)ಇಂದ್ರಜಾ - ಈರ್ಷೆಗಾಗಿ, ೭) ವಾರಾಹೀ - ನಿರ್ಲಕ್ಷ್ಯಕ್ಕೆ ಮತ್ತು ೮) ಯಮದಂಡ - ಮರಣಕ್ಕೆ. ಶ್ರೀ ಚಕ್ರದ ಪೂಜೆಯಲ್ಲಿ ಈ ಮೇಲಿನ ದೇವತೆಗಳ ಹೆಸರುಗಳಲ್ಲಿ ವ್ಯತ್ಯಾಸವಿದೆ. ಅವರನ್ನು ಶ್ರೀ ಚಕ್ರದಲ್ಲಿ ಕೆಳಗಿನ ಅನುಕ್ರಮದಲ್ಲಿ ಪೂಜಿಸಲಾಗುತ್ತದೆ, ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಮಾಹೇಂದ್ರೀ, ಚಾಮುಂಡಾ ಮತ್ತು ಮಹಾಲಕ್ಷ್ಮೀ. ಈ ದೇವಿಯರನ್ನು ಶ್ರೀ ಚಕ್ರದ ಮೊದಲನೇ ಆವರಣದಲ್ಲಿ ಪೂಜಿಸಲಾಗುತ್ತದೆ.

           ’ಅಷ್ಟ ಮಾತೆಯರು’ ಎನ್ನುವುದು ಮಾನವ ಶರೀರದ ಎರಡೂ ಕಡೆ ಇರುವ ನರಗಳನ್ನೂ ಸಹ ಸೂಚಿಸುತ್ತದೆ.

Mālinī मालिनी (455)

೪೫೫. ಮಾಲಿನೀ

          ದೇವಿಯು ಮಾಲೆಯನ್ನು ಧರಿಸಿದ್ದಾಳೆ. ಈ ಮಾಲೆಯು ಸಂಸ್ಕೃತದ ಐವತ್ತೊಂದು ಅಕ್ಷರಗಳಿಂದ ಮಾಡಲ್ಪಟ್ಟಿದೆ. ಆಕೆಯು ಶಬ್ದ ಬ್ರಹ್ಮವಾಗಿರುವುದರಿಂದ ಎಲ್ಲಾ ಅಕ್ಷರಗಳು ಆಕೆಯಿಂದ ಉದ್ಭವವಾಗುತ್ತವೆ ಹಾಗಾಗಿ ತಾರ್ಕಿಕವಾಗಿ ಆಕೆಯು ಈ ಅಕ್ಷರಗಳನ್ನು ಮಾಲೆಯಾಗಿ ಧರಿಸಿದ್ದಾಳೆ (ನಾಮ ೩೬೬ರಿಂದ ೩೭೧ನೇ ನಾಮಗಳ ಚರ್ಚೆಯನ್ನು ಸಹ ನೋಡಿ) ಎನ್ನುವುದು ಸೂಕ್ತವಾಗುತ್ತದೆ. ಮಾಲಿನೀ ದೇವಿಯು ಸಂಸ್ಕೃತದ ಐವತ್ತೊಂದು ಅಕ್ಷರಗಳ ಅಧಿದೇವತೆಯಾಗಿದ್ದಾಳೆ. ಮಾತೃಕಾ ಮಾಲಿನಿಯು ಅನುಕ್ರಮವಾಗಿರುವ (ಕ್ರಮಬದ್ಧವಾಗಿರುವ) ಸಂಸ್ಕೃತ ಅಕ್ಷರಗಳನ್ನು  ಪ್ರತಿನಿಧಿಸುತ್ತಾಳೆ. ಮಾತೃಕಾ ಎಂದರೆ ಪರಿಚಯವಿಲ್ಲದ ಮಾತೆ ಅಥವಾ ದೈವ ಮಾತೆ. ಮಾಲಿನೀ ಎಂದರೆ ಯಾರು ಬ್ರಹ್ಮಾಂಡವನ್ನು ತನ್ನೊಳಗೆ ಇರಿಸಿಕೊಂಡಿದ್ದಾಳೆಯೋ ಆಕೆ. ಮಾತೃಕಾ ಮಾಲಿನಿಗೆ ವಿರುದ್ಧವಾಗಿ (ಪ್ರತಿಕೂಲವಾಗಿ) ಮಾಲಿನೀ ದೇವಿಯು ಅಸಂಬದ್ಧವಾಗಿರುವ (ಅನುಕ್ರಮದಲ್ಲಿ ಇಲ್ಲದೇ ಇರುವ) ೫೧ ಸಂಸ್ಕೃತ ಅಕ್ಷರಗಳನ್ನು ಸೂಚಿಸುತ್ತದೆ. ಇಲ್ಲಿ ಒಂದು ಉದಾಹರಣೆ ಇದೆ - न ऋ ॠ ....द फ.

         ವರಾಹ ಪುರಾಣದಲ್ಲಿ ಒಂದು ಕಥೆಯಿದೆ. ಮಾಲಿನಿಯು ಲಲಿತಾಂಬಿಕೆಯ ಹತ್ತಿರದ ಸ್ನೇಹಿತೆ. ಶಿವನೊಂದಿಗೆ ಲಲಿತಾಂಬಿಕೆಯ ವಿವಾಹದ ಸಮಯದಲ್ಲಿ ಮಾಲಿನಿಯು ಶಿವನ ಪಾದವನ್ನು ಗಟ್ಟಿಯಾಗಿ ಹಿಡಿದುಕೊಂಡು ಅದನ್ನು ಬಿಡಲು ಒಪ್ಪಲಿಲ್ಲ. ತನ್ನ ಕಾಲನ್ನು ಬಿಟ್ಟದ್ದೇ ಆದರೆ ಅವಳು ಬೇಡುವ ಯಾವುದೇ ವರವನ್ನು ಕೊಡಲು ತಾನು ಸಿದ್ಧನಿರುವುದಾಗಿ ಶಿವನು ಮಾಲಿನಿಗೆ ಹೇಳಿದ. ಆಗ ಮಾಲಿನಿಯು ತನ್ನ ಸ್ನೇಹಿತೆಯಾದ ಲಲಿತಾಂಬಿಕೆಗೆ ತಾನು ಶಿವನ ಪಾದವನ್ನು ಬಿಟ್ಟು ಬಿಡುವುದಕ್ಕೆ ಬದಲಾಗಿ ಅವನ ಎಲ್ಲಾ ಸಂಪದಗಳನ್ನು ಲಲಿತಾಂಬಿಕೆಗೆ ಪ್ರಸಾದಿಸಬೇಕೆಂದು ಕೇಳಿಕೊಂಡಳು. ಆಗ ಶಿವನು ಮಾಲಿನಿಗೆ ತಾನು ಈಗಾಗಲೇ ಲಲಿತಾಂಬಿಕೆಗೆ ಎಲ್ಲಾ ವಿಧವಾದ ಸಿರಿ ಸಂಪದಗಳನ್ನು ಕರುಣಿಸಿರುವುದರಿಂದ ಇನ್ನು ಆಕೆಯು ತನ್ನ ಪಾದವನ್ನು ಬಿಡಬಹುದೆಂದು ಹೇಳುತ್ತಾನೆ.

           ಮಾಲಿನೀ ತಂತ್ರ ಎನ್ನುವ ಒಂದು ತಂತ್ರವೂ ಇದೆ. ಮಾಲಿನೀ ಎಂದರೆ ನಾನು ಎನ್ನುವ ಪ್ರಜ್ಞೆಯ ಕ್ರಮಬದ್ಧವಾದ ನಾಶಪಡಿಸುವಿಕೆ.

           ಮಾಲಿನೀ ಶಬ್ದವು ಏಳು ವರ್ಷದ ಬಾಲೆಯನ್ನು ಸಹ ಸೂಚಿಸುತ್ತದೆ.

******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 453 - 455 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.

 

 

Rating
Average: 5 (1 vote)

Comments

Submitted by nageshamysore Wed, 09/11/2013 - 05:29

ಶ್ರೀಧರರೆ,  ಲಲಿತಾ ಸಹಸ್ರನಾಮ ೪೫೩ರಿಂದ ೪೫೫ನೇ ನಾಮಗಳ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ

ಲಲಿತಾ ಸಹಸ್ರನಾಮ ೪೫೩-೪೫೫
_______________________________________________

453. ತ್ರಿನಯನಾ
ಕಾಮಕಲಾರೂಪ ಲಲಿತೆಯೆ ಶಿವ, ಸೂರ್ಯಚಂದ್ರಾಗ್ನಿಗಳಾಗವಳ ತ್ರಿನಯನಾ
ವಾಕ್-ನಿರ್ಣಯ-ಗಮನವೆ ಶಿವನೇತ್ರ, ನೇರಗ್ರಹಿಕೆ-ಅನುಮಾನ-ಆಗಮ ಜ್ಞಾನ
ಶ್ರವಣ-ಮನನ-ಧ್ಯಾನ ಆಧ್ಯಾತ್ಮಿಕದೃಷ್ಟಿ , ಆಜ್ಞಾಚಕ್ರ ಅತೀಂದ್ರಿಯಶಕ್ತಿ ಸವಾರಿ
ಪೂಜಾಮಾರ್ಗ ವಾಮಹಸ್ತ-ದಕ್ಷಿಣಹಸ್ತ-ವೈದಿಕ, ಬ್ರಹ್ಮಸಾಕ್ಷಾತ್ಕಾರವಾಗಿ ಗುರಿ!

೪೫೪. ಲೋಲಾಕ್ಷೀ-ಕಾಮ-ರೂಪಿಣೀ
ಮುಕ್ತಿಕಾಮನೆ ಮನುಜರ ಧರ್ಮಮಾರ್ಗದಲಿಡುವ ಮಾರ್ಗದರ್ಶಿ
ಬಯಕೆ ತಾನೆ ಸ್ತ್ರೀ ಸಹಜ, ಅವರಾಸೆ ರೂಪದಲಿಹ ಲೋಲಾಕ್ಷೀ
ಸಕಲಕೊಡತಿ ಶಿವ ಸಾನಿಧ್ಯದ ಹೊರತು ಬಯಸಳೇನೂ ರಮಣಿ
ತಾಯ್ತನ ಸೃಷ್ಟಿಸಂಕುಲದೊಳಿತಾಶೆ ಲೋಲಾಕ್ಷೀ ಕಾಮ ರೂಪಿಣೀ!

ಆಸೆಗಧಿದೇವತೆ ಯೋಗೇಶ್ವರಿ ಲಲಿತೆ, ನರ-ಮಾನವ ಗುಣದಷ್ಟಮಾತೆ         
ಆಸೆ ಯೋಗೇಶ್ವರೀ, ಕೋಪ ಮಾಹೇಶ್ವರೀ, ವೈಷ್ಣವೀ ದುರಾಸೆಗೆ ಮಾತೆ
ಉತ್ಕಟಬಯಕೆಗೆ ಬ್ರಹ್ಮಾಣಿ, ಗೊಂದಲ ಕಲ್ಯಾಣಿ, ಈರ್ಷೆಗಿಹ ಇಂದ್ರಜಾ
ನಿರ್ಲಕ್ಷ್ಯಕೆ ವಾರಾಹಿ ಮರಣಕೆ ಯಮದಂಡ ಶ್ರೀಚಕ್ರದಾವರಣದೆ ಪೂಜಾ!

೪೫೫. ಮಾಲಿನೀ
ಶಬ್ದದುದ್ಭವ ಶಬ್ದಬ್ರಹ್ಮ ಲಲಿತೆ, ಅಕ್ಷರಮಾಲೆ ತೊಟ್ಟು ಮಾಲಿನೀ
ಬ್ರಹ್ಮಾಂಡವನೆ ತಾ ಧರಿಸಿದ ಬಾಲೆ, ನಾನೆನ್ನುವ ಪ್ರಜ್ಞೆಗೆ ದಮನಿ
ಅನುಕ್ರಮತೆ ಮಾತೃಕಾ-ಮಾಲಿನಿಗೆ, ಕ್ರಮವಸಂಬದ್ದ ಮಾಲಿನಿಗೆ
ಶಿವಪಾದ ಹಿಡಿದೆ ಲಲಿತಾ ಸಂಪದ, ವರವನೆ ಗೆದ್ದ ಗೆಳತಿಯಾಗೆ!
 
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು

ನಾಗೇಶರೆ,
ಈ ಕಂತಿನ ತ್ರಿನಯನಾ ಪದ್ಯವೇ ಮನಸ್ಸಿಗೆ ಮುದ ನೀಡಿತು. ಉಳಿದ ಪದ್ಯಗಳೂ ಚೆನ್ನಾಗಿವೆ. ಮಾಲಿನೀ ಪದ್ಯದಲ್ಲಿ ಒಂದು ಸಣ್ಣ ಬದಲಾವಣೆ ಮಾಡಿ ಈ ಕಂತಿನ ಪದ್ಯಗಳನ್ನು ಅಂತಿಮಗೊಳಿಸಬಹುದು.
೪೫೫. ಮಾಲಿನೀ
:
:
ಅನುಕ್ರಮತೆ ಮಾತೃಕಾ-ಮಾಲಿನಿಗೆ, ಕ್ರಮವಸಂಬದ್ದ ಮಾಲಿನಿಗೆ
ಅನುಕ್ರಮತೆ ಮಾತೃಕಾ-ಮಾಲಿನಿಗೆ=ಅನುಕ್ರಮತೆ ಮಾತೃಕಾ-ದೇವಿಗೆ ಎಂದು ಬದಲಾಯಿಸಿದರೆ ಮೂಲಾರ್ಥಕ್ಕೆ ಧಕ್ಕೆ ಬರಲಾರದು ಎಂದುಕೊಳ್ಳುತ್ತೇನೆ.
:
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಈ ರೂಪ ಸರಿಹೊಂದುವುದೆ ನೋಡಿ.

೪೫೫. ಮಾಲಿನೀ
ಶಬ್ದದುದ್ಭವ ಶಬ್ದಬ್ರಹ್ಮ ಲಲಿತೆ, ಅಕ್ಷರಮಾಲೆ ತೊಟ್ಟು ಮಾಲಿನೀ
ಬ್ರಹ್ಮಾಂಡವನೆ ತಾ ಧರಿಸಿದ ಬಾಲೆ, ನಾನೆನ್ನುವ ಪ್ರಜ್ಞೆಗೆ ದಮನಿ
ಅನುಕ್ರಮತೆ ಮಾತೃಕಾ-ದೇವಿಗೆ, ಕ್ರಮತೆ ಅಸಂಬದ್ದ ಮಾಲಿನಿಗೆ
ಶಿವಪಾದ ಹಿಡಿದೆ ಲಲಿತಾ ಸಂಪದ, ವರವನೆ ಗೆದ್ದ ಗೆಳತಿಯಾಗೆ!

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
 

ನಾಗೇಶರೆ,
ಈಗ ಸರಿಯಾಗಿದೆ, ಇದನ್ನು ಅಂತಿಮಗೊಳಿಸಿ.
ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಈ ಕಂತನ್ನು ಅಂತಿಮಗೊಳಿಸಿ ಹಾಕಿದ್ದೇನೆ

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು