೧೧೩. ಲಲಿತಾ ಸಹಸ್ರನಾಮ ೪೨೯ರಿಂದ ೪೪೧ನೇ ನಾಮಗಳ ವಿವರಣೆ

೧೧೩. ಲಲಿತಾ ಸಹಸ್ರನಾಮ ೪೨೯ರಿಂದ ೪೪೧ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೪೨೯-೪೪೧

Nissīma-mahimnā निस्सीम-महिम्ना (429)

೪೨೯. ನಿಸ್ಸೀಮ-ಮಹಿಮ್ನಾ

             ದೇವಿಯ ಮಹಿಮೆಗಳಿಗೆ ಎಲ್ಲೆ ಇಲ್ಲ; ಏಕೆಂದರೆ ಬ್ರಹ್ಮವು ಸರ್ವವ್ಯಾಪಿಯಾಗಿದೆ. ನಿಃಸೀಮ ಎಂದರೆ ಅಳೆಯಲಾಗದ್ದು.

Nitya-yauvanā नित्य-यौवना (430)

೪೩೦. ನಿತ್ಯ-ಯೌವನಾ

         ದೇವಿಯು ನಿತ್ಯ ಯೌವನವತಿಯಾಗಿದ್ದಾಳೆ; ಏಕೆಂದರೆ ಆಕೆಯು ದೇಶ ಕಾಲಗಳಿಗೆ ಅತೀತಳಾಗಿದ್ದಾಳೆ. *ಕೂದಲಿನ ಬಣ್ಣ ಮಾಸುವುದು/ಬಿಳಿಯಾಗುವುದು ಅಥವಾ ಉದರುವುದು ಮುಪ್ಪಾಗುವಿಕೆಯ ಸಂಕೇತವಾಗಿದೆ. ವಿಶ್ವದ ಸಮಸ್ತ ಶಕ್ತಿಯ ಆಗರವಾಗಿರುವ ಆದಿಪರಾಶಕ್ತಿಯಾದರೋ 'ನಿತ್ಯ ಯೌವನವತಿ'ಯಾಗಿದ್ದು, ಮತ್ತು ಎಲ್ಲಾ ವಿಧವಾದ ವಯೋಸಹಜ ವಿಕಾರಕ್ಕೊಳಗಾಗದವಳು- 'ವಯೋವಸ್ಥಾವಿವರ್ಜಿತಾ', ಅಂದರೆ ವೃದ್ಧತ್ವವಿಲ್ಲದವಳು ಅಥವಾ ಮುಪ್ಪಿಲ್ಲದವಳು. ಈ ವಿಶ್ವದ ಒಟ್ಟು ಶಕ್ತಿಯು ಯಾವಾಗಲೂ ನಿರ್ಧಿಷ್ಟ ಪ್ರಮಾಣದಲ್ಲಿದ್ದು; ಅದು ಯಾವುದೇ ಸಮಯದಲ್ಲಿ ಹೆಚ್ಚಿಗೆಯಾಗುವುದಾಗಲಿ ಕಡಿಮೆಯಾಗುವುದಾಗಲಿ ಆಗುವುದಿಲ್ಲ. 

Mada-śālinī मद-शालिनी (431)

೪೩೧. ಮದ-ಶಾಲಿನೀ

            ದೇವಿಯು ಆನಂದದ ಸ್ಥಿತಿಯಲ್ಲಿರುತ್ತಾಳೆ ಅಥವಾ ಪರಮ ಸಂತೋಷದ ಸ್ಥಿತಿಯಲ್ಲಿರುತ್ತಾಳೆ. ಪರಮಾನಂದದ ಸ್ಥಿತಿ ಎಂದರೆ ಆ ಹಂತದಲ್ಲಿ ಒಬ್ಬರ ಆಲೋಚನೆಗಳು ಸಂಪೂರ್ಣವಾಗಿ ಬ್ರಹ್ಮದೊಂದಿಗೆ ತಾದಾತ್ಮ್ಯ ಹೊಂದಿ ಅದು ಮಾನಸಿಕ ಸಂತೋಷಕ್ಕೆ ಎಡೆ ಮಾಡಿ ಕೊಡುತ್ತದೆ. ಆದರೆ ದೇವಿಯೇ ಸ್ವಯಂ ಬ್ರಹ್ಮವಾಗಿರುವುದರಿಂದ ಆಕೆಯು ಯಾವಾಗಲೂ ತನ್ನ ಆಲೋಚನೆಗಳನ್ನು ಆಕೆಯ ಸಂಗಾತಿ ಮತ್ತು ಸೃಷ್ಟಿಕರ್ತನಾದ ಶಿವನೊಂದಿಗೆ ಸಂಪೂರ್ಣವಾಗಿ ಒಂದಾಗಿಸಿಕೊಂಡು (ತಾದಾತ್ಮ್ಯಗೊಳಿಸಿಕೊಂಡು) ನಿತ್ಯ ಪರಮಾನಂದದ ಸ್ಥಿತಿಯಲ್ಲಿರುತ್ತಾಳೆ. ದೇವಿಯು ಪರಮಾನಂದದ ಸ್ಥಿತಿಯಲ್ಲಿದ್ದರೂ ಸಹ ಆಕೆಯು ತನ್ನ ಕರ್ತವ್ಯಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಕೈಗೊಳ್ಳುತ್ತಾ ಇರುತ್ತಾಳೆ. ಇದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳುವ ಕರ್ಮ ಯೋಗದ ಮಾದರಿಗೆ ಉದಾಹರಣೆಯಾಗಿದೆ.

           ಪರಮಾನಂದದ ಸ್ಥಿತಿಯು ಆಕೆಯ ಮೇಲೆ ಬೀರುವ ಪರಿಣಾಮಗಳನ್ನು ಮುಂದಿನ ಎರಡು ನಾಮಗಳಲ್ಲಿ ವಿವರಿಸಲಾಗಿದೆ.

Mada-ghūrṇita-raktākṣī मद-घूर्णित-रक्ताक्षी (432)

೪೩೨. ಮದ-ಘೂರ್ಣಿತ-ರಕ್ತಾಕ್ಷೀ

           ದೇವಿಯ ಕಣ್ಣುಗಳು ಸಹಜವಾದ ಕೆಂಪು ಎಸಳನ್ನು ಹೊಂದಿವೆ. ಈ ಕೆಂಪು ಎಸಳು ಆಕೆಯೊಂದಿಗೆ ಸಹಯೋಗ ಹೊಂದಿರುವ ಕೆಂಪುತನದ ಪ್ರತಿಫಲನವಾಗಿದೆ. ಈ ನಾಮವು ದೇವಿಯ ಕಣ್ಣುಗಳು ಪರಮಾನಂದದಿಂದ ಕೆಂಪಾಗಿವೆ ಎಂದು ಹೇಳುತ್ತದೆ. ದೀರ್ಘ ಧ್ಯಾನದ ನಂತರ ಒಬ್ಬರ ಕಣ್ಣುಗಳು ಕೆಂಪಾಗುತ್ತವೆ. ಧ್ಯಾನದ ಸಮಯದಲ್ಲಿ ದೇಹದಲ್ಲಿ ಉಷ್ಣವು (ಬಿಸಿಯು) ಉತ್ಪತ್ತಿಯಾಗಿವುದರಿಂದ ಇದು ಸಹಜವಾಗಿ ಆಗುತ್ತದೆ. ಸಾಕಷ್ಟು ನೀರನ್ನು ಕುಡಿಯುವುದು ಮತ್ತು ತಾಜಾ ಹಣ್ಣುಗಳನ್ನು ಸೇವಿಸುವುದರ ಮೂಲಕ ಈ ವಿಧವಾದ ಉಷ್ಣವನ್ನು ನಿಯಂತ್ರಣದಲ್ಲಿಡಬೇಕು. ಈ ಉಷ್ಣವನ್ನು ಶಕ್ತಿಯಾಗಿ ಪರಿವರ್ತಿಸುವುದರ ಮೂಲಕ ಒಬ್ಬರು ಅದನ್ನು ಉಪಶಮನಗೊಳಿಸುವ ಸಾಮರ್ಥ್ಯವನ್ನು ಗಳಿಸಿಕೊಳ್ಳಬಹುದು.  

          *ಈ ನಾಮಕ್ಕೆ ಇನ್ನೊಂದು ವಿಧವಾದ ವಿಶ್ಲೇಷಣೆಯನ್ನೂ ಕೊಡಬಹುದು. ಮದದಿಂದ ಕಣ್ಣುಗಳು ಕೆಂಪಡರಿವೆ ಎನ್ನುವುದು ಬಹಿರ್ಗತವಾಗಿ ದೇವಿಯು ತನ್ನ ಸಂಗಾತಿಯೊಡನೆ ಸಹಸ್ರಾರದಲ್ಲಿ ಸಮಾಗಮಗೊಂಡಾಗ ಉಂಟಾದ ಪರಮಾನಂದವನ್ನು ಸೂಚಿಸುತ್ತದೆ. ಇದು ಕೇವಲ ಸಾಂಕೇತಿಕ ವಿವರಣೆ ಮಾತ್ರ. ಯಾವ ರೀತಿ ಮಧುವನ್ನು ಹೀರಿದವನು (ಹೆಂಡವನ್ನು ಕುಡಿದವನು) ತನ್ನ ಸುತ್ತಲಿನ ಪರಿವೆಯಿಲ್ಲದೆ ವರ್ತಿಸುತ್ತಾನೆಯೋ ಅದೇ ರೀತಿ ದೈವೀ ಉನ್ಮಾದಕ್ಕೆ ಒಳಗಾದ ವ್ಯಕ್ತಿಯು ಭಾವೋದ್ರೇಕಕ್ಕೆ ಒಳಗಾಗುತ್ತಾನೆ. ಯಾವ ರೀತಿ ಕುಡುಕನು ಮಧುಪಾತ್ರೆಯನ್ನು ಹೊಂದಲು ಚಡಪಡಿಸುತ್ತಾನೆಯೋ ಅದೇ ರೀತಿ ಯೋಗಿಯಾದವನು ಬ್ರಹ್ಮಾನಂದವನ್ನು ಪಡೆಯಲು ತವಕಿಸುತ್ತಾನೆ. ಮುಖವು ಮನಸ್ಸಿನ ಕನ್ನಡಿಯಾದರೆ ಮನಸ್ಸನ್ನು ಮುಖಕ್ಕಿಂತ ಚೆನ್ನಾಗಿ ಬಿಂಬಿಸುವುದು ಕಣ್ಣುಗಳು. ಮುಖವು ಗಡಿಯಾರದ ಮುಖಬಿಲ್ಲೆಯನ್ನು ಸೂಚಿಸಿದರೆ ಕಣ್ಣುಗಳು ಅದರ ಮುಳ್ಳುಗಳನ್ನು ಸಂಕೇತಿಸುತ್ತವೆ.

Mada-pāṭala-gaṁḍabhūḥ मद-पाटल-गंडभूः (433)

೪೩೩. ಮದ-ಪಾಟಲ-ಗಂಡಭೂಃ

           ದೇವಿಯ ಪರಮಾನಂದದ ಸ್ಥಿತಿಯಿಂದಾಗಿ ಆಕೆಯ ಕೆನ್ನೆಗಳು ಕೆಂಪಡರುತ್ತವೆ. ಒಬ್ಬ ವ್ಯಕ್ತಿಯು ನಿಯಮಿತವಾಗಿ ಧ್ಯಾನ ಮಾಡುತ್ತಿದ್ದರೆ ಅವನ ದೇಹವು ಬಂಗಾರದ ಮೈಕಾಂತಿಗೆ ತಿರುಗುತ್ತದೆ. ಇದು ಏಕೆಂದರೆ, ದೀರ್ಘ ಧ್ಯಾನದಲ್ಲಿ ಪ್ರಜ್ಞೆಯು ಬಾಹ್ಯ ವಸ್ತುಗಳಿಂದ ಬೇರ್ಪಟ್ಟು ಅದು ಆಂತರಂಗದ ಮೇಲೆ ಕೇಂದ್ರೀಕೃತವಾಗುತ್ತದೆ ಮತ್ತು ಯಾವಾಗ ಪ್ರಜ್ಞೆಯು ಸ್ವಯಂ-ಪ್ರಕಾಶಕ ಬೆಳಕಾದ ಬ್ರಹ್ಮದೆಡೆಗೆ ಸಾಗಲು ಉಪಕ್ರಮಿಸುತ್ತದೆಯೋ  ಆಗ ಅದು ದೇಹಕ್ಕೆ ಕಾಂತಿಯನ್ನುಂಟು ಮಾಡುತ್ತದೆ.

Candana-drava-digdhāṅgī चन्दन-द्रव-दिग्धाङ्गी (434)

೪೩೪. ಚಂದನ-ದ್ರವ-ದಿಗ್ಧಾಂಗೀ

            ದೇವಿಯ ದೇಹವು ತೇಯ್ದ ಗಂಧದಿಂದ ಪೂಯಲ್ಪಟ್ಟಿದೆ. ತೇಯ್ದ ಗಂಧವು ದೇಹದ ಆಂತರಿಕ ಉಷ್ಣತೆಯನ್ನು ಶಮನಗೊಳಿಸುತ್ತದೆ ಎಂದು ಹೇಳಲಾಗುತ್ತದೆ.

Cāmpeya-kusuma-priyā चाम्पेय-कुसुम-प्रिया (435)

೪೩೫. ಚಾಂಪೇಯ-ಕುಸುಮ-ಪ್ರಿಯಾ

             ದೇವಿಯು ಚಂಪಕ ಪುಷ್ಪಗಳನ್ನು (ಸಂಪಿಗೆ ಹೂವುಗಳನ್ನು) ಇಷ್ಟ ಪಡುತ್ತಾಳೆ. ದೇವಿಯ ಈ ಪುಷ್ಪದ ಬಗೆಗಿನ ಪ್ರೀತಿಯನ್ನು ಇದಾಗಲೇ ನಾಮ ೧೩ರ ಚರ್ಚೆಯಲ್ಲಿ ಹೇಳಲಾಗಿದೆ.

Kuśalā कुशला (436)

೪೩೬. ಕುಶಲಾ

            ದೇವಿಯು ಕೌಶಲ್ಯವುಳ್ಳವಳು. ದೇವಿಯು ದೈವದ ಮೂರು ಕ್ರಿಯೆಗಳನ್ನು ಲೀಲಾಜಾಲವಾಗಿ ಕೈಗೊಳ್ಳುವುದರಿಂದ ಆಕೆಯನ್ನು ಕುಶಲಾ ಅಥವಾ ಕೌಶಲ್ಯವುಳ್ಳವಳೆಂದು ಸಂಭೋದಿಸಲಾಗುತ್ತದೆ.

Komalākārā कोमलाकारा (437)

೪೩೭. ಕೋಮಲಾಕಾರ

           ದೇವಿಗೆ ಸುಂದರವಾದ ಮತ್ತು ನಾಜೂಕಾದ (ಸುಕೋಮಲವಾದ) ದೇಹವಿದೆ ಮತ್ತು ಆಕೆಗೆ ಕರುಣಾಪೂರಿತ ರೂಪವಿದೆ.

Kurukullā कुरुकुल्ला (438)

೪೩೮. ಕುರುಕುಲ್ಲಾ

           ಶ್ರೀ ಚಕ್ರದಲ್ಲಿ ಅಹಂಕಾರ ಮತ್ತು ಪ್ರಜ್ಞೆ ಇವುಗಳ ಅಂಚಿನಲ್ಲಿ ನಿವಸಿಸುವ ಒಬ್ಬ ದೇವತೆಯು ಕುರುಕುಲ್ಲಾ ಆಗಿದ್ದಾಳೆ. ಭಾವೋಪನಿಷತ್ತು ವಾರಾಹಿ ದೇವಿಯನ್ನು ತಂದೆಯೆಂದೂ ಮತ್ತು ಕುರುಕುಲ್ಲಾ ದೇವಿಯನ್ನು ತಾಯಿಯೆಂದೂ ಪರಿಗಣಿಸುತ್ತದೆ. ಅದು, "ವಾರಾಹಿ ಪಿತೃರೂಪಾ ಕುರುಕುಲ್ಲಾ ಬಲಿದೇವತಾ ಮಾತಾ - वाराहि पितृरूपा कुरुकुल्ला बलिदेवता माता" ಎಂದು ಹೇಳುತ್ತದೆ. ನಮ್ಮ ದೇಹವು ಗ್ರಹಣೇಂದ್ರಿಯಗಳೊಂದಿಗೆ ಮಾಂಸ ಮತ್ತು ರಕ್ತಗಳಿಂದ ಕೂಡಿದ್ದು ನಮಗೆ ದೈಹಿಕ ಕಾಮನೆಗಳ ಭಾವನೆಯನ್ನು ಉಂಟುಮಾಡುತ್ತದೆ ಎನ್ನುವ ಸಿದ್ಧಾಂತದ ಮೇಲೆ ಇದು ಆಧಾರಿತವಾಗಿದೆ. ಕುರುಕುಲ್ಲಾ ದೇವಿಯ ಭೌತಿಕ ದೇಹದ ವರ್ಣನೆಯು ಭಯಂಕರವಾಗಿದೆ; ಬಹುಶಃ ಒಬ್ಬನ ಆಧ್ಯಾತ್ಮಿಕ ಉನ್ನತಿಗೆ ಕಾಮವು ಕ್ಲಿಷ್ಟವಾದ ತೊಡಕಾಗಿದೆ ಎನ್ನುವುದನ್ನು ಇದು ಸೂಚಿಸಬಹುದು.

Kuleśvarī कुलेश्वरी (439)

೪೩೯. ಕುಲೇಶ್ವರೀ

           ದೇವಿಯು ಕುಲ ತ್ರಿಪುಟಿಯ ಅಧಿಕಾರಿಣಿಯಾಗಿದ್ದಾಳೆ. ಆ ತ್ರಿಪುಟಿಯು ಗ್ರಹಿಸುವವನು, ಗ್ರಹಿಸಲ್ಪಟ್ಟದ್ದು ಮತ್ತು ಗ್ರಹಿಕೆ (ತಿಳುವಳಿಕೆಯ ಮಾನಸಿಕ ಹಂತ) ಇವುಗಳನ್ನು ಒಳಗೊಂಡಿದೆ. ದೇವಿಯು ಆತ್ಮಸಾಕ್ಷಾತ್ಕಾರಕ್ಕೆ ಕರೆದೊಯ್ಯುವ ಈ ತ್ರಿಪುಟಿಯನ್ನು ನಿಯಂತ್ರಿಸುತ್ತಾಳೆ. ಈ ಎಲ್ಲಾ ಮೂರು ವಸ್ತುಗಳು ಒಂದೇ ಆದಾಗ ಆಕೆಯ ಸಾಕ್ಷಾತ್ಕಾರವಾಗುತ್ತದೆ.

Kulakuṇḍālayā कुलकुण्डालया (440)

೪೪೦. ಕುಲಕುಂಡಾಲಯಾ

            ಕುಲಕುಂಡವೆನ್ನುವುದು ಮೂಲಾಧಾರ ಚಕ್ರದಲ್ಲಿರುವ ಒಂದು ಸಣ್ಣ ರಂಧ್ರವಾಗಿದ್ದು ದೇವಿಯು ಅಲ್ಲಿ ವಿರಮಿಸುತ್ತಾಳೆ.

ಸೌಂದರ್ಯ ಲಹರಿಯು (ಸ್ತೋತ್ರ ೧೦) ಸಹ ಹೀಗೆ ಹೇಳುತ್ತದೆ, "ನಿನ್ನ ಸ್ವಂತ ಮೂಲ ಸ್ಥಾನವಾದ ಮೂಲಾಧಾರವನ್ನು ಸೇರಿ, ಅಲ್ಲಿ ನಿನ್ನನ್ನು ನೀನೇ ಮೂರುವರೆ ಸುರಳಿಗಳುಳ್ಳ ಸರ್ಪದಂತೆ ಮರೆಮಾಚಿಕೊಂಡು ನೀನು ಮೂಲಾಧಾರ ಕಮಲದ ಮಧ್ಯದಲ್ಲಿರುವ ಬಿರುಕಿನಲ್ಲಿ ನಿದ್ರಿಸುತ್ತೀಯ".

ಒಬ್ಬ ಆಧ್ಯಾತ್ಮಿಕ ಸಾಧಕನ ಹಾದಿಯು ಕುಲಕುಂಡದಲ್ಲಿ ಪ್ರಾರಂಭವಾಗಿ ಅದು ಮೇಲ್ಮುಖವಾಗಿ ಅಧಿಗಮಿಸಿ ತುರಿಯಾ ಮತ್ತು ತುರ್ಯಾತೀತಾ ಅವಸ್ಥೆಗಳನ್ನು ಹೊಂದಿ ಅಲ್ಲಿ ಪರಮಾನಂದದ ಅಂತಿಮ ಮುಕ್ತಿಯು ಉಂಟಾಗುತ್ತವೆ.

Kaula-mārga-tatpara-sevitā कौल-मार्ग-तत्पर-सेविता (441)

೪೪೧. ಕೌಲ-ಮಾರ್ಗ-ತತ್ಪರ-ಸೇವಿತಾ

           ದೇವಿಯು ಕೌಲ ಪಂಗಡದ ಅನುಯಾಯಿಗಳಿಂದ ಪೂಜಿಸಲ್ಪಡುತ್ತಾಳೆ. ಈ ನಾಮವು ಒಬ್ಬನು ತನ್ನ ಕುಲಕ್ಕೆ ಅನುಗುಣವಾಗಿ ಅವರು ಅನುಸರಿಸುವ ವಿಧಾನಗಳ ಮೂಲಕ ಆರಾಧಿಸಲ್ಪಡುತ್ತಾಳೆ ಎನ್ನುತ್ತದೆ. ಆಚರಣೆಗಳ ಮೇಲೆ ಪೂಜಾ ವಿಧಾನವು ಅವಲಂಭಿಸಿರುತ್ತದೆ. ದೇವಿಯ ಆರಾಧನೆಯಲ್ಲಿ ಮೂರು ಪ್ರಧಾನ ಮಾರ್ಗಗಳಿವೆ, ಅವೆಂದರೆ - ಸಮಯ, ಕೌಲ ಮತ್ತು ಮಿಶ್ರ. ಸಮಯ ಮಾರ್ಗವು ವೇದಗಳ ಬೋಧನೆಗಳ ಮೇಲೆ ಆಧಾರಿತವಾಗಿದೆ. ಕೌಲ ಮಾರ್ಗವು ತಂತ್ರದ ಆಚರಣೆಗಳ ಮೇಲೆ ಅವಲಂಬಿತವಾಗಿದೆ. ಇದನ್ನು ಕೆಳ ಸ್ತರದ ಪೂಜೆಯೆಂದು ಪರಿಗಣಿಸಲಾಗಿದೆ, ಏಕೆಂದರೆ ಇದು ಪಂಚ ’ಮ’ಕಾರಗಳನ್ನು ಅನುಸರಿಸಲು ವಿಧಿಸುತ್ತದೆ. ಪಂಚ ’ಮ’ಕಾರಗಳೆಂದರೆ ಸಂಸ್ಕೃತದ ಮುದ್ರಾ (ಬೆರಳುಗಳ ಜೋಡಣೆಯಿಂದ ಮಾಡುವ ಸಂಕೇತಗಳು), ಮತ್ಸ (ಮೀನು), ಮಾಂಸ, ಮದ್ಯ (ಮದವೇರಿಸುವ ಒಂದು ವಿಧವಾದ ಪಾನೀಯ) ಮತ್ತು ಮೈಥುನ (ಒಂದುಗೂಡುವಿಕೆ). ಕೆಲವೊಂದು ವೇಳೆ ಮುದ್ರೆಯನ್ನು ಮದ್ಯಕ್ಕೆ ಪರ್ಯಾಯವಾಗಿ ಬಳಸಿದರೂ ಸಹ ವೇದ ಪಂಡಿತರು ಈ ವಿಧವಾದ ಪೂಜೆಯನ್ನು ಒಪ್ಪುವುದಿಲ್ಲ. ಈ ವಿಧವಾದ ಪೂಜೆಯೂ ಸಹ ಹಲವಾರು ಕಠಿಣ ನಿಯಮಗಳನ್ನು ಒಳಗೊಂಡಿದೆ. ಮೂರನೆಯದೇ ಮಿಶ್ರ ಅಥವಾ ಎರಡನ್ನೂ ಸಮ್ಮೇಳಿಸಿದ್ದು - ಇದು ವೈದಿಕ ಮತ್ತು ತಾಂತ್ರಿಕ ಆಚರಣೆಗಳೆರಡನ್ನೂ ಒಳಗೊಂಡಿದೆ.

         *ಈ ವಿವರಣೆಗಳನ್ನು ’ತ್ರಿಪುರ ಸುಂದರೀ ಅಷ್ಟಕಮ್" - ಪ್ರಕಟಣೆ(೧೯೮೬): ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮೈಲಾಪುರ್, ಮದ್ರಾಸ್ - ೬೦೦ ೦೦೪, ಮೂಲ ಇಂಗ್ಲೀಷ್ ಕರ್ತೃ - ಶ್ರೀಯುತ ಎಸ್. ಕಾಮೇಶ್ವರ್, ಮುಂಬಯಿ ಇದರ ಪುಟಗಳಿಂದ ಹೆಕ್ಕಿಕೊಳ್ಳಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಸಂಪದದ ಕೆಳಗಿನ ಕೊಂಡಿಯನ್ನು ನೋಡಿ http://sampada.net/b...

 

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 429 - 441 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
No votes yet

Comments

Submitted by nageshamysore Sat, 09/07/2013 - 11:19

ಶ್ರೀಧರರೆ,  ೧೧೩. ಲಲಿತಾ ಸಹಸ್ರನಾಮ ೪೨೯ರಿಂದ ೪೪೧ನೇ ನಾಮಗಳ ವಿವರಣೆಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ:

ಲಲಿತಾ ಸಹಸ್ರನಾಮ ೪೨೯-೪೪೧
_________________________________

೪೨೯. ನಿಸ್ಸೀಮ-ಮಹಿಮ್ನಾ
ಸೀಮೆಯಿಲ್ಲಿದ ಅಸೀಮ, ಅಳೆಯಲಾಗದ ನಿಃಸೀಮ
ಎಲ್ಲೆ ಗಡಿಗಳಿಲ್ಲದ ಪರಮ, ಆವರಿಸಿ ದೇವಿ ಮಹಿಮೆ
ಪ್ರಕಟ ತಂತಾನೆ ಅನಾವರಣ, ಸರ್ವವ್ಯಾಪಕತೆ ಘನ
ಉದ್ದಗಲದಳತೆ ಅಜ್ಞಾನ, ಲಲಿತೆ ನಿಸ್ಸೀಮಮಹಿಮ್ನಾ!

೪೩೦. ನಿತ್ಯ-ಯೌವನಾ
ವಿಶ್ವ ಶಕ್ತಿ ಸಮಷ್ಟಿ ಮೊತ್ತ, ಏರಿಳಿಯದ ಸಮತೋಲನ
ವೃದ್ದಾಪ್ಯ ಮುಪ್ಪಿನ ಗೊಡವೆ, ಭಾಧಿಸದ ನಿತ್ಯಯೌವನಾ
ಸಮಸ್ತ ಶಕ್ತಿಮೂಲ ತಾನಾಗಿ ಲಲಿತೆ, ದೇಶಕಾಲಾತೀತ
ನಿರಾಕಾರನಿರ್ಗುಣನಿರಂತರ, ಸ್ಥೂಲಸೂಕ್ಷ್ಮರೂಪಾದ್ಭುತ!

೪೩೧. ಮದ-ಶಾಲಿನೀ
ಆಲೋಚನೆಗಳ ತಾದಾತ್ಮ್ಯಕತೆ, ಹರ್ಷೋಲ್ಲಾಸಕಿಲ್ಲ ಕೊರತೆ
ಸಂಗಾತಿ ಶಿವನಾಲೋಚನೇ ಲಲಿತೆ, ತ್ರಿಕಾರ್ಯ ಕರ್ಮದಂತೆ
ಪರಮಸಾಂಗತ್ಯ ಮಾನಸಸ್ತರ ಪರಮ ಸಂತಸ ಮದಶಾಲಿನೀ
ಮದವೇರಿಸುವಾಮೋದಪರಮಾನಂದ, ವರ್ಣನಾತೀತಜ್ಞಾನಿ!

೪೩೨. ಮದ-ಘೂರ್ಣಿತ-ರಕ್ತಾಕ್ಷೀ 
ಉನ್ಮಾದ ಭಾವೋದ್ರೇಕ ಸಮಾಗಮಯೋಗದ ಬ್ರಹ್ಮಾನಂದ
ಕಣ್ಕನ್ನಡಿ ಕಾಲಮಾಪನದೋಟ, ಪ್ರತಿಬಿಂಬಿಸಿ ಪರಮಾನಂದ
ಧ್ಯಾನತಪಶಕ್ತಿ ರಕ್ತತಾಪಕೆ, ಮದವೇರಿ ರೋಹಿತೆ ರೋಹಿತಾಕ್ಷಿ
ಕೆಂಪುತನಕೆ ಕೆಂಪೇರಿಸುವಂತೆ, ಲಲಿತೆ ಮದಘೂರ್ಣಿತರಕ್ತಾಕ್ಷೀ!

೪೩೩. ಮದ-ಪಾಟಲ-ಗಂಡಭೂಃ
ದೀರ್ಘಧ್ಯಾನದಿ ಪ್ರಜ್ಞೆ ಬಾಹ್ಯರಂಗದಿಂದಂತರಂಗ ತಲ್ಲೀನ
ಸ್ವಯಂಪ್ರಕಾಶಬ್ರಹ್ಮದೆಡೆ ಸಾಗುತ ತನುವೆ ಕಾಂತಿಪೂರ್ಣ
ರೋಹಿತದಗಣಿತ ಲಲಿತೆ ಕದಪು ಕೆಂಪೇರಿಸೆ ಶಿವ ಸನಿಹ
ಪರಮಾನಂದಕೆಣೆಯೆಲ್ಲಿ ದೇವಿ ಮದ ಪಾಟಲ ಗಂಡಭೂಃ!

೪೩೪. ಚಂದನ-ದ್ರವ-ದಿಗ್ಧಾಂಗೀ
ಜಗದ ಶಕ್ತಿಯೆಲ್ಲವನ್ಹೊತ್ತ ಬ್ರಹ್ಮಾಂಡಶಕ್ತಿ ಮೊತ್ತವೆ ಮಾತೆ
ಶಕ್ತಿಪಾತವಾಗದ ಅನವರತ, ಬಿಸಿ ಕೆಂಪಾಗದೆ ಉಳಿದೀತೆ
ಉಷ್ಣವಹನ ಸುಡದಂತೆ ಸುತ್ತಲು, ತೇಯ್ದಾ ಗಂಧವೆ ಅಂಗಿ
ಪರಿಸರಣ ತಂಪಾಗಿಸುತ ಲಲಿತೆ, ಚಂದನ ದ್ರವ ದಿಗ್ಧಾಂಗೀ!

೪೩೫. ಚಾಂಪೇಯ-ಕುಸುಮ-ಪ್ರಿಯಾ
ನಾಸಿಕವೆ ಸಂಪಿಗೆಯಾದ ಲಲಿತೆ, ಸುಪರಿಮಳ ಆಘ್ರಾಣಿಸುತೆ
ಚಂಪಕದಿಂದೊಸರಿಹಳೆ ತಾನಾಗಿ, ಸುವಾಸನೆಗೆ ಮನ ಸೋತೆ
ಮುಡಿಯೆಲ್ಲಾ ಸಂಪಿಗೆ ನಾಸಿಕ, ತೊಟ್ಟಿನಲಿಟ್ಟು ನತ್ತಿನ ಮಾಯೆ
ನಳನಳಿಸಿ ಪುಷ್ಪವಾಗಿ ಲಲಿತೆ, ಚಾಂಪೇಯ ಕುಸುಮ ಪ್ರಿಯಾ!

೪೩೬. ಕುಶಲಾ
ಕುಶಲತೆಯೆಂಬುದು ಸಾಧನೆ, ತನುಮನ ಶ್ರಮ ವೇದನೆ
ಕೌಶಲ್ಯವೆ ತಾನಾದ ದೇವಿಗೆ, ಗಣನೆಗಿಲ್ಲ ಬರಿ ಪರಿಗಣನೆ
ಸೃಷ್ಟಿ ಸ್ಥಿತಿ ಲಯ ಲೀಲಾಜಾಲದೆ, ಕೈಗೊಳ್ಳುವ ಕುಶಲಾ
ಬೇರಾವ ಕುಶಲತೆ ಲೆಕ್ಕ, ಬ್ರಹ್ಮಾಂಡಕೆ ಲಲಿತೆಯೆ ಸಕಲ!

೪೩೭. ಕೋಮಲಾಕಾರ
ನಿರಾಕಾರವೆ ಸಾಕಾರ, ನಿರ್ಗುಣವಾಗಿ ಮೂಲ ಸ್ವರೂಪ
ಮೂರ್ತಾಮೂರ್ತತೆಗೆಲ್ಲ ಸ್ಥೂಲಸೂಕ್ಷ್ಮತೆಗಳಲೆ ಕಲಾಪ
ಭೌತಿಕ ಜೀವಿಗಳ ಕರುಣಿಸೆ, ಕರುಣಾರೂಪದ ಸಾಕಾರ
ಸುಂದರ ಸುಕೋಮಲ ತನು, ಲಲಿತೆ ಕೋಮಲಾಕಾರ!

೪೩೮. ಕುರುಕುಲ್ಲಾ
ಬಾಹ್ಯರೂಪ ಮುಚ್ಚಿಟ್ಟ ತನು ಗಣಿತ, ರಕ್ತ ಮಾಂಸಾದಿ ಖಚಿತ
ಅಂತರಂಗಿಕ ಕಾವನ ಕುಣಿತ, ದೈಹಿಕ ಕಾಮನೆಗಳ ಸಂಕೇತ
ಭೌತಿಕ ತನು ಭೀಕರ ಭಯಂಕರ, ಕುರುಕುಲ್ಲಾ ಬಲಿದೇವತಾ
ಕಾಮ ತೊಡಕಿಗಗುಳಿಹಾಕುತ, ಆಧ್ಯಾತ್ಮಿಕ ಉನ್ನತಿಗೇರಿಸುತ!

೪೩೯. ಕುಲೇಶ್ವರೀ
ತಿಳುವಳಿಕೆಯ ಮಾನಸಿಕ ಹಂತವೆ ತ್ರಿಪುಟಿ
ಗ್ರಹಿಸುವವ, ಗ್ರಹಿಸಲ್ಪಟ್ಟಾ, ಗ್ರಹಿಕೆ ಸಮಷ್ಟಿ
ತ್ರಿಪುಟಿಗೊಡತಿ ದೇವಿ, ಕುಲೇಶ್ವರೀ ನಿಯಂತ್ರಣ
ತ್ರಿಪುಟಿ ಸಂಗಮಿಸೆ, ಆತ್ಮಸಾಕ್ಷಾತ್ಕಾರದ ಚರಣ!

೪೪೦. ಕುಲಕುಂಡಾಲಯಾ 
ಕುಲಕುಂಡದಿಂದಾರಂಭ, ಆಧ್ಯಾತ್ಮಿಕ ಸಾಧನೆ ಹಾದಿ
ಅಧಿಗಮಿಸಿ ಮೇಲ್ಮುಖ, ತುರ್ಯಾತೀತ ಮುಕ್ತಿ ಸನ್ನಿಧಿ
ಮೂಲಾಧಾರ ಕಿರುರಂಧ್ರದೆ, ವಿರಮಿಸುತ ಕುಲಕುಂಡಾಲಯಾ
ಮೂರುವರೆ ಸುರಳಿ ಸರ್ಪರೂಪಲಿ, ಲಲಿತೆ ನಿದ್ರಿಸುವ ಸಮಯ!

೪೪೧. ಕೌಲ-ಮಾರ್ಗ-ತತ್ಪರ-ಸೇವಿತಾ 
ದೇವಿಯಾರಾಧನೆ ತ್ರಿಮಾರ್ಗ, ಸಮಯ, ಕೌಲಾ, ಮಿಶ್ರ
ಸಮಯಮಾರ್ಗಕೆ-ವೇದ, ಕೌಲ-ತಂತ್ರ, ಮಿಶ್ರ-ಸಮ್ಮಿಶ್ರ
ಪಂಚ'ಮ'ಕಾರ ಕೌಲ ಕೆಳಸ್ತರ, ಮುದ್ರ ಮಾಂಸ ಸಹಿತ
ಮತ್ಸ ಮದ್ಯ ಮೈಥುನ, ಕೌಲ ಮಾರ್ಗ ತತ್ಪರ ಸೇವಿತಾ!

ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು
 

ನಾಗೇಶರೆ,
ಇಲ್ಲಿ ಸೂಚಿಸಿರುವ ಅಲ್ಪ ದೋಷಗಳು ಒಟ್ಟಾರೆಯಾಗಿ ಈ ಕಂತಿನ ಪದ್ಯಗಳ ಆಶಯಕ್ಕೆ ಯಾವುದೇ ವಿಧವಾದ ಭಂಗವನ್ನುಂಟು ಮಾಡಿಲ್ಲ. ಆದರೆ ಅವುಗಳನ್ನು ಸರಿಪಡಿಸಿದಲ್ಲಿ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತವೆ :)
೪೨೯. ನಿಸ್ಸೀಮ-ಮಹಿಮ್ನಾ
ಸೀಮೆಯಿಲ್ಲಿದ ಅಸೀಮ, ಅಳೆಯಲಾಗದ ನಿಃಸೀಮ
ಎಲ್ಲೆ ಗಡಿಗಳಿಲ್ಲದ ಪರಮ, ಆವರಿಸಿ ದೇವಿ ಮಹಿಮೆ
ಪರಮ=ಗರಿಮ, ಹೆಚ್ಚು ಸೂಕ್ತಪದವಾಗಬಹುದು?
:
:
೪೩೧. ಮದ-ಶಾಲಿನೀ
:
;
ಮದವೇರಿಸುವಾಮೋದಪರಮಾನಂದ, ವರ್ಣನಾತೀತಜ್ಞಾನಿ!
ವರ್ಣನಾತೀತಜ್ಞಾನಿ=ವರ್ಣನಾತೀತ ಜ್ಞಾನಿ!

೪೩೨. ಮದ-ಘೂರ್ಣಿತ-ರಕ್ತಾಕ್ಷೀ
:
;
ಕೆಂಪುತನಕೆ ಕೆಂಪೇರಿಸುವಂತೆ, ಲಲಿತೆ ಮದಘೂರ್ಣಿತರಕ್ತಾಕ್ಷೀ!
ಕೆಂಪುತನಕೆ ಕೆಂಪೇರಿಸುವಂತೆ=ಕೆಂಪುತನದ ಕೆಂಪಡರುವಂತೆ

೪೩೪. ಚಂದನ-ದ್ರವ-ದಿಗ್ಧಾಂಗೀ
:
:
ಉಷ್ಣವಹನ ಸುಡದಂತೆ ಸುತ್ತಲು, ತೇಯ್ದಾ ಗಂಧವೆ ಅಂಗಿ
ತೇಯ್ದಾ ಗಂಧವೆ ಅಂಗಿ=ತೇಯ್ದಾಗಂಧವೆ ಅಂಗಿ
ಪರಿಸರಣ ತಂಪಾಗಿಸುತ ಲಲಿತೆ, ಚಂದನ ದ್ರವ ದಿಗ್ಧಾಂಗೀ!
ಪರಿಸರಣ=ಪರಿಸರವ

೪೩೫. ಚಾಂಪೇಯ-ಕುಸುಮ-ಪ್ರಿಯಾ
:
ಚಂಪಕದಿಂದೊಸರಿಹಳೆ ತಾನಾಗಿ, ಸುವಾಸನೆಗೆ ಮನ ಸೋತೆ
ಮುಡಿಯೆಲ್ಲಾ ಸಂಪಿಗೆ ನಾಸಿಕ, ತೊಟ್ಟಿನಲಿಟ್ಟು ನತ್ತಿನ ಮಾಯೆ
=ಮುಡಿಯೆಲ್ಲಾ, ಸಂಪಿಗೆ ನಾಸಿಕ ತೊಟ್ಟಿನಲಿಟ್ಟು ನತ್ತಿನ ಮಾಯೆ? ಈ ಸಾಲು ಸ್ವಲ್ಪ ಗಜಿಬಿಜಿಯೆನಿಸುತ್ತಿದೆ ಸ್ವಲ್ಪ ಬದಲಾಯಿಸಿ.
:
೪೩೬. ಕುಶಲಾ
:
ಕೌಶಲ್ಯವೆ ತಾನಾದ ದೇವಿಗೆ, ಗಣನೆಗಿಲ್ಲ ಬರಿ ಪರಿಗಣನೆ
ಗಣನೆಗಿಲ್ಲ ಬರಿ ಪರಿಗಣನೆ=? ಸ್ವಲ್ಪ ಈ ಪದಗುಚ್ಛವನ್ನು ಮಾರ್ಪಡಿಸಿ
;
;
೪೩೮. ಕುರುಕುಲ್ಲಾ
ಬಾಹ್ಯರೂಪ ಮುಚ್ಚಿಟ್ಟ ತನು ಗಣಿತ, ರಕ್ತ ಮಾಂಸಾದಿ ಖಚಿತ
ಅಂತರಂಗಿಕ ಕಾವನ ಕುಣಿತ, ದೈಹಿಕ ಕಾಮನೆಗಳ ಸಂಕೇತ
ಮೇಲಿನೆರಡು ಸಾಲುಗಳು ಸ್ವಲ್ಪ ಗೋಜಲೆನಿಸುತ್ತವೆ; ಸ್ವಲ್ಪ ಬದಲಾವಣೆ ಮಾಡಲು ಸಾಧ್ಯವೇ ನೋಡಿ. ಉಳಿದೆರಡು ಸಾಲು ಅರ್ಥಗರ್ಭಿತವಾಗಿವೆ.
:

೪೩೯. ಕುಲೇಶ್ವರೀ
ಈ ನಾಮದ ವಿವರಣೆಯಲ್ಲಿ ನನ್ನ ತಪ್ಪು ಅನುವಾದದಿಂದಾಗಿ ಯಡವಟ್ಟಾಗಿದೆ. ಅದೇನೆಂದರೆ, ಗ್ರಹಿಸುವವ, ಗ್ರಹಿಸಲ್ಪಟ್ಟದ್ದು ಮತ್ತು ಗ್ರಹಿಕೆ ಎನ್ನುವಲ್ಲಿ ಗ್ರಹಿಸಲ್ಪಟ್ಟದ್ದು ಪರಮಾತ್ಮ ಅಥವಾ ಪರಬ್ರಹ್ಮವೆನ್ನುವುದನ್ನು ಸ್ವಲ್ಪ ವಿವರಿಸಬೇಕಿತ್ತೇನೋ ಆಗ ಅದರ ಅರ್ಥ ಸ್ಪುಟವಾಗುತ್ತಿತ್ತೇನೋ. ಇರಲಿ, ಈ ಪದ್ಯದ ಎರಡನೇ ಸಾಲಿನಲ್ಲಿ ಸ್ವಲ್ಪ ಬದಲಾವಣೆ ಮಾಡಿ; ಬಹುಶಃ ಅದು ಬೆರಳಚ್ಚಿನ ದೋಷವಿರಬಹುದು.
ತಿಳುವಳಿಕೆಯ ಮಾನಸಿಕ ಹಂತವೆ ತ್ರಿಪುಟಿ
ಗ್ರಹಿಸುವವ, ಗ್ರಹಿಸಲ್ಪಟ್ಟಾ, ಗ್ರಹಿಕೆ ಸಮಷ್ಟಿ
ಗ್ರಹಿಸುವವ, ಗ್ರಹಿಸಲ್ಪಟ್ಟದ್ದು (ಗ್ರಹಿಸಲ್ಪಟ್ಟವನು), ಗ್ರಹಿಕೆ ಸಮಷ್ಟಿ

೪೪೦. ಕುಲಕುಂಡಾಲಯಾ
ಕುಲಕುಂಡದಿಂದಾರಂಭ, ಆಧ್ಯಾತ್ಮಿಕ ಸಾಧನೆ ಹಾದಿ
ಸಾಧನೆ=ಸಾಧನೆಯ
ಅಧಿಗಮಿಸಿ ಮೇಲ್ಮುಖ, ತುರ್ಯಾತೀತ ಮುಕ್ತಿ ಸನ್ನಿಧಿ
ಮುಕ್ತಿ=ಮುಕ್ತಿಗೆ
ಮೂಲಾಧಾರ ಕಿರುರಂಧ್ರದೆ, ವಿರಮಿಸುತ ಕುಲಕುಂಡಾಲಯಾ
ಮೂರುವರೆ ಸುರಳಿ ಸರ್ಪರೂಪಲಿ, ಲಲಿತೆ ನಿದ್ರಿಸುವ ಸಮಯ!
ಲಲಿತೆ ನಿದ್ರಿಸುವ ಸಮಯ=ಲಲಿತೆ ನಿದ್ರಿಸುವ ನಿಲಯಾ!

೪೪೧. ಕೌಲ-ಮಾರ್ಗ-ತತ್ಪರ-ಸೇವಿತಾ
:
ಸಮಯಮಾರ್ಗಕೆ-ವೇದ, ಕೌಲ-ತಂತ್ರ, ಮಿಶ್ರ-ಸಮ್ಮಿಶ್ರ
ಕೌಲ-ತಂತ್ರ, =ಕೌಲಕೆ ತಂತ್ರ, ಮಿಶ್ರ-ಸಮ್ಮಿಶ್ರ=ಮಿಶ್ರಕೆ ಸಮ್ಮಿಶ್ರ ಎಂದು ಅಲ್ಪ ಬದಲಾವಣೆ ಮಾಡಬಹುದೆನಿಸುತ್ತದೆ.
:
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ಈ ಕಂತಿನಲ್ಲಿ ಬಹಳ ತಿದ್ದುಪಡಿ ಮಾಡಿದ್ದೀರ, ಧನ್ಯವಾದಗಳು. ನಾನು ಮನಸಿಟ್ಟು ಬರೆದಿರಲಿಲ್ಲವೆಂದು ತೋರುತ್ತಿದೆ :-)

ನಿಸ್ಸೀಮ-ಮಹಿಮ್ನಾದಲ್ಲಿ 'ಪರಮ / ಗರಿಮಾ' ಬದಲು ಹಿರಿಮೆ ಬಳಸಿದರೆ ಹೇಗೆ? ಅದು ಹೆಚ್ಚು ಸೂಕ್ತವೆನಿಸಿದ್ದರಿಂದ ಸದ್ಯಕ್ಕೆ ಅದನ್ನೆ ಬಳಸಿದ್ದೇನೆ. ಜತೆಗೆ ಉಳಿದವುಗಳ ತಿದ್ದುಪಡಿಯು ಈ ಕೆಳಕಂಡಂತಿದೆ - ಸೂಕ್ತ ಕಾಣುವುದೆ ನೋಡಿ:

೪೨೯. ನಿಸ್ಸೀಮ-ಮಹಿಮ್ನಾ
ಸೀಮೆಯಿಲ್ಲಿದ ಅಸೀಮ, ಅಳೆಯಲಾಗದ ನಿಃಸೀಮ
ಎಲ್ಲೆ ಗಡಿಗಳಿಲ್ಲದ ಹಿರಿಮೆ, ಆವರಿಸಿ ದೇವಿ ಮಹಿಮೆ
ಪ್ರಕಟ ತಂತಾನೆ ಅನಾವರಣ, ಸರ್ವವ್ಯಾಪಕತೆ ಘನ
ಉದ್ದಗಲದಳತೆ ಅಜ್ಞಾನ, ಲಲಿತೆ ನಿಸ್ಸೀಮಮಹಿಮ್ನಾ!

೪೩೧. ಮದ-ಶಾಲಿನೀ
ಆಲೋಚನೆಗಳ ತಾದಾತ್ಮ್ಯಕತೆ, ಹರ್ಷೋಲ್ಲಾಸಕಿಲ್ಲ ಕೊರತೆ
ಸಂಗಾತಿ ಶಿವನಾಲೋಚನೇ ಲಲಿತೆ, ತ್ರಿಕಾರ್ಯ ಕರ್ಮದಂತೆ
ಪರಮಸಾಂಗತ್ಯ ಮಾನಸಸ್ತರ ಪರಮ ಸಂತಸ ಮದಶಾಲಿನೀ
ಮದವೇರಿಸುವಾಮೋದಪರಮಾನಂದ, ವರ್ಣನಾತೀತ ಜ್ಞಾನಿ!

೪೩೨. ಮದ-ಘೂರ್ಣಿತ-ರಕ್ತಾಕ್ಷೀ 
ಉನ್ಮಾದ ಭಾವೋದ್ರೇಕ ಸಮಾಗಮಯೋಗದ ಬ್ರಹ್ಮಾನಂದ
ಕಣ್ಕನ್ನಡಿ ಕಾಲಮಾಪನದೋಟ, ಪ್ರತಿಬಿಂಬಿಸಿ ಪರಮಾನಂದ
ಧ್ಯಾನತಪಶಕ್ತಿ ರಕ್ತತಾಪಕೆ, ಮದವೇರಿ ರೋಹಿತೆ ರೋಹಿತಾಕ್ಷಿ
ಕೆಂಪುತನದ ಕೆಂಪಡರುವಂತೆ, ಲಲಿತೆ ಮದಘೂರ್ಣಿತರಕ್ತಾಕ್ಷೀ!

೪೩೪. ಚಂದನ-ದ್ರವ-ದಿಗ್ಧಾಂಗೀ
ಜಗದ ಶಕ್ತಿಯೆಲ್ಲವನ್ಹೊತ್ತ ಬ್ರಹ್ಮಾಂಡಶಕ್ತಿ ಮೊತ್ತವೆ ಮಾತೆ
ಶಕ್ತಿಪಾತವಾಗದ ಅನವರತ, ಬಿಸಿ ಕೆಂಪಾಗದೆ ಉಳಿದೀತೆ
ಉಷ್ಣವಹನ ಸುಡದಂತೆ ಸುತ್ತಲು, ತೇಯ್ದಾಗಂಧವೆ ಅಂಗಿ
ಪರಿಸರವ ತಂಪಾಗಿಸುತ ಲಲಿತೆ, ಚಂದನ ದ್ರವ ದಿಗ್ಧಾಂಗೀ!

೪೩೫. ಚಾಂಪೇಯ-ಕುಸುಮ-ಪ್ರಿಯಾ
ನಾಸಿಕವೆ ಸಂಪಿಗೆಯಾದ ಲಲಿತೆ, ಸುಪರಿಮಳ ಆಘ್ರಾಣಿಸುತೆ
ಚಂಪಕದಿಂದೊಸರಿಹಳೆ ತಾನಾಗಿ, ಸುವಾಸನೆಗೆ ಮನ ಸೋತೆ
ಮುಡಿಗೆ ಸಂಪಿಗೆ ಮುಡಿದು, ಮುಗುದೆಯ ನಗೆಬೀರುವ ತಾಯ
ನಳನಳಿಸಿ ಪುಷ್ಪವಾಗಿ ಲಲಿತೆ, ಚಾಂಪೇಯ ಕುಸುಮ ಪ್ರಿಯಾ!

೪೩೬. ಕುಶಲಾ
ಕುಶಲತೆಯೆಂಬುದು ಸಾಧನೆ, ತನುಮನ ಶ್ರಮ ವೇದನೆ
ಕೌಶಲ್ಯವೆ ತಾನಾದ ದೇವಿಗೆ, ಕುಶಲತೆ  ಅದಾವ ಗಣನೆ
ಸೃಷ್ಟಿ ಸ್ಥಿತಿ ಲಯ ಲೀಲಾಜಾಲದೆ, ಕೈಗೊಳ್ಳುವ ಕುಶಲಾ
ಬೇರಾವ ಕುಶಲತೆ ಲೆಕ್ಕ, ಬ್ರಹ್ಮಾಂಡಕೆ ಲಲಿತೆಯೆ ಸಕಲ!

೪೩೮. ಕುರುಕುಲ್ಲಾ
ಶ್ರೀ ಚಕ್ರ ಆಹಂಕಾರ ಪ್ರಜ್ಞೆಯ ಅಂಚಲಿ ನಿವಸಿಸುವ ದೇವತೆ
ವಾರಾಹಿ ದೇವಿಯ ಜತೆ ಮಾತಾಪಿತ ರೂಪದಲಿ ಪರಿಗಣಿತೆ
ಭೌತಿಕ ತನು ಭೀಕರ ಭಯಂಕರ, ಕುರುಕುಲ್ಲಾ ಬಲಿದೇವತಾ
ಕಾಮ ತೊಡಕಿಗಗುಳಿಹಾಕುತ, ಆಧ್ಯಾತ್ಮಿಕ ಉನ್ನತಿಗೇರಿಸುತ!

೪೩೯. ಕುಲೇಶ್ವರೀ
ತಿಳುವಳಿಕೆಯ ಮಾನಸಿಕ ಹಂತವೆ ತ್ರಿಪುಟಿ
ಗ್ರಹಿಸುವವ, ಗ್ರಹಿಸಲ್ಪಟ್ಟದ್ದು, ಗ್ರಹಿಕೆ ಸಮಷ್ಟಿ
ತ್ರಿಪುಟಿಗೊಡತಿ ದೇವಿ, ಕುಲೇಶ್ವರೀ ನಿಯಂತ್ರಣ
ತ್ರಿಪುಟಿ ಸಂಗಮಿಸೆ, ಆತ್ಮಸಾಕ್ಷಾತ್ಕಾರದ ಚರಣ!

೪೪೦. ಕುಲಕುಂಡಾಲಯಾ 
ಕುಲಕುಂಡದಿಂದಾರಂಭ, ಆಧ್ಯಾತ್ಮಿಕ ಸಾಧನೆಯ ಹಾದಿ
ಅಧಿಗಮಿಸಿ ಮೇಲ್ಮುಖ, ತುರ್ಯಾತೀತ ಮುಕ್ತಿಗೆ ಸನ್ನಿಧಿ
ಮೂಲಾಧಾರ ಕಿರುರಂಧ್ರದೆ, ವಿರಮಿಸುತ ಕುಲಕುಂಡಾಲಯಾ
ಮೂರುವರೆ ಸುರಳಿ ಸರ್ಪರೂಪಲಿ, ಲಲಿತೆ ನಿದ್ರಿಸುವ ನಿಲಯಾ!

೪೪೧. ಕೌಲ-ಮಾರ್ಗ-ತತ್ಪರ-ಸೇವಿತಾ 
ದೇವಿಯಾರಾಧನೆ ತ್ರಿಮಾರ್ಗ, ಸಮಯ, ಕೌಲಾ, ಮಿಶ್ರ
ಸಮಯಮಾರ್ಗಕೆ ವೇದ, ಕೌಲಕೆ ತಂತ್ರ, ಮಿಶ್ರಕೆ ಸಮ್ಮಿಶ್ರ
ಪಂಚ'ಮ'ಕಾರ ಕೌಲ ಕೆಳಸ್ತರ, ಮುದ್ರ ಮಾಂಸ ಸಹಿತ
ಮತ್ಸ ಮದ್ಯ ಮೈಥುನ, ಕೌಲ ಮಾರ್ಗ ತತ್ಪರ ಸೇವಿತಾ!
 
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
 

ನಾಗೇಶರೆ,
ಈಗ ಗರಿಮ ಬದಲು ಹಿರಮೆ ಬಳಸಿದ್ದು ಸೂಕ್ತವಾಗಿಯೇ ಇದೆ. ಅದೇ ವಿಧವಾಗಿ ಕುರುಕುಲ್ಲಾ ಕೂಡಾ ಬಹಳ ಸೊಗಸಾಗಿ ಮೂಡಿ ಬಂದಿದೆ. ಹಾಗಾಗಿ ಈ ಕಂತನ್ನು ಅಂತಿಮಗೊಳಿಸಬಹುದು. ಆದರೂ ಒಂದು ಸಣ್ಣ ಗೊಂದಲ ಏರ್ಪಟ್ಟಿದೆ. ಅದೇನೆಂದರೆ, ಕುಲೇಶ್ವರೀ ಪದ್ಯ ಸಾರಯುಕ್ತವಾಗಿದ್ದರೂ ಅದೇಕೋ ಪದಗಳ ಲಾಲಿತ್ಯ ಮನಸ್ಸಿಗೆ ಹಿಡಿಸಲಿಲ್ಲ. ಅದನ್ನು ಪುನರ‍್ರಚಿಸಲು ಸಾಧ್ಯವೇ ನೋಡಿ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ಕುಲೇಶ್ವರೀಯ ಮತ್ತೊಂದು ಆವೃತ್ತಿ ಪ್ರಯತ್ನಿಸಿದ್ದೇನೆ. ಸೂಕ್ತ ಕಾಣುವುದೆ ನೋಡಿ.

೪೩೯. ಕುಲೇಶ್ವರೀ
ಕುಲ ತ್ರಿಪುಟಿಯ ಅಧಿಕಾರಿಣಿಯಾಗಿ ಲಲಿತಾ ಪರಬ್ರಹ್ಮ
ಗ್ರಹಿಸುವವ ಜೀವಾತ್ಮನಿರೆ, ಗ್ರಹಿಸಲ್ಪಟ್ಟದ್ದಾಗಿ ಪರಮಾತ್ಮ
ತಿಳುವಳಿಕೆಯ ಮಾನಸಿಕಹಂತ ಗ್ರಹಿಕೆ, ಸಮಷ್ಟಿ ತ್ರಿಪುಟಿ
ಸಂಗಮಿಸೆ ಬ್ರಹ್ಮಸಾಕ್ಷಾತ್ಕಾರಕೊಯ್ಯುತ, ದೇವಿಯ್ಹತೋಟಿ!

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
 

ನಾಗೇಶರೆ,
ಈಗ ಹೆಚ್ಚು ಸಮಂಜಸವಾಗಿದೆ, ಕಡೆಯ ಸಾಲಿನ ದೇವಿಯ್ಹತೋಟಿ ಬದಲು ಬೇರೆ ಯಾವುದಾದರೂ ಪ್ರಾಸಬದ್ಧ ಪದ ಬಳಸಲು ಸಾಧ್ಯವೇ ನೋಡಿ. ಉಳಿದಂತೆ ಎಲ್ಲಾ ಚೆನ್ನಾಗಿವೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಈ ಮಾರ್ಪಾಡು ಕೊನೆಯ ಸಾಲಿಗೆ ಸಯಿಕಾಣುತ್ತಿದೆಯೆ?

೪೩೯. ಕುಲೇಶ್ವರೀ
ಕುಲ ತ್ರಿಪುಟಿಯ ಅಧಿಕಾರಿಣಿಯಾಗಿ ಲಲಿತಾ ಪರಬ್ರಹ್ಮ
ಗ್ರಹಿಸುವವ ಜೀವಾತ್ಮನಿರೆ, ಗ್ರಹಿಸಲ್ಪಟ್ಟದ್ದಾಗಿ ಪರಮಾತ್ಮ
ತಿಳುವಳಿಕೆಯ ಮಾನಸಿಕಹಂತ ಗ್ರಹಿಕೆ, ಸಮಷ್ಟಿ ತ್ರಿಪುಟಿ
ಸಂಗಮಿಸೆ ಬ್ರಹ್ಮಸಾಕ್ಷಾತ್ಕಾರಕೆ, ದೇವಿ ಲಲಿತೆ ಕೃಪಾದೃಷ್ಟಿ!

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ನಾಗೇಶರೆ,
ಈಗ ಸಂಪೂರ್ಣ ಅರ್ಥಬದ್ಧ ಪದ್ಯ ಹೊರಹೊಮ್ಮಿ ಬಂತು ನೋಡಿ. ನಿಮ್ಮ ಆಸಕ್ತಿ ಮತ್ತು ಶ್ರಮಕ್ಕೆ ನನ್ನ ನಮನಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ನಿಮ್ಮ ಸಹನಾಪೂರ್ಣ ಮಾರ್ಗದರ್ಶನಕ್ಕೆ ಅಷ್ಟೇ ನಮನಗಳು. ಈಗ ಈ ಕಂತನ್ನು ಅಂತಿಮಗೊಳಿಸಿ ಹಾಕಿದ್ದೇನೆ :-)
ಧನ್ಯವಾದಗಳೊಂದಿಗೆ,
-ನಾಗೇಶ ಮೈಸೂರು