೧೧೯. ಲಲಿತಾ ಸಹಸ್ರನಾಮ - ಯೋಗಿನಿಯರ ಪರಿಚಯ

೧೧೯. ಲಲಿತಾ ಸಹಸ್ರನಾಮ - ಯೋಗಿನಿಯರ ಪರಿಚಯ

ಲಲಿತಾ ಸಹಸ್ರನಾಮ - ಯೋಗಿನಿಯರ ಪರಿಚಯ

              ೪೭೫ನೇ ನಾಮದಿಂದ ೫೩೪ನೇ ನಾಮದವರೆಗೆ (೬೦ ನಾಮಗಳು) ಕುಂಡಲಿನೀ ಶಕ್ತಿಯ ಆರು ಚಕ್ರಗಳು ಅಥವಾ ಮನೋ ಕೇಂದ್ರಗಳ ಹಾಗೂ ಸಹಸ್ರಾರದ ಕುರಿತಾಗಿ ವಿಶದವಾಗಿ ಚರ್ಚಿಸುತ್ತವೆ.ಪ್ರತಿಯೊಂದು ಚಕ್ರ ಅಥವಾ ಮನೋ ಕೇಂದ್ರದಲ್ಲಿ ಒಬ್ಬೊಬ್ಬ ದೇವತೆಯು ಸ್ಥಿತಳಾಗಿರುತ್ತಾಳೆ ಅವರನ್ನು ಯೋಗಿನಿಯರೆಂದು ಕರೆಯಲಾಗುತ್ತದೆ ಮತ್ತು ಅಂತಹ ಏಳು ಜನ ಯೋಗಿನಿಯರು ಇದ್ದಾರೆ. ದೇಹದಲ್ಲಿರುವ ಏಳು ಚಕ್ರಗಳು (ಸುಲಭವಾಗಿ ಅರ್ಥ ಮಾಡಿಕೊಳ್ಳಲೋಸುಗ ಸಹಸ್ರಾರವನ್ನು ಸಹ ಒಂದು ಚಕ್ರವೆಂದು ಪರಿಗಣಿಸಲಾಗಿದೆ) ದೇಹದ ಒಂದೊಂದು ಧಾತುಗಳನ್ನು ಪ್ರತ್ಯೇಕವಾಗಿ ಪ್ರತಿನಿಧಿಸುತ್ತವೆ; ಅವೆಂದರೆ ಚರ್ಮ, ರಕ್ತ, ಮಾಂಸ ಖಂಡ, ಕೊಬ್ಬು, ಮೂಳೆ, ಮಜ್ಜೆ ಮತ್ತು ವೀರ್ಯ ಅಥವಾ ಅಂಡಾಣು. ಪ್ರತಿಯೊಂದು ಯೋಗಿನಿಯನ್ನೂ ಸಹ ೧೦, ೯ ಅಥವಾ ೭ ನಾಮಗಳಲ್ಲಿ ವರ್ಣಿಸಲಾಗಿದೆ. ಈ ನಾಮಗಳು ನೇರವಾಗಿ ಲಲಿತಾಂಬಿಕೆಯನ್ನು ಉಲ್ಲೇಖಿಸುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಲಲಿತಾಂಬಿಕೆಯು ಕುಂಡಲಿನೀ ಶಕ್ತಿಯ ರೂಪದಲ್ಲಿರುವುದರಿಂದ ಮತ್ತು ಆಕೆಯು ಸಹಸ್ರಾರವನ್ನು ಸೇರಬೇಕಾದರೆ ಈ ಎಲ್ಲಾ ಚಕ್ರಗಳ ಮೂಲಕ ಹಾದು ಹೋಗಬೇಕಾಗಿರುವುದರಿಂದ ಅಲ್ಲಿ ಸ್ಥಿತರಾಗಿರುವ ಯೋಗಿನಿಯರನ್ನು ಪೂಜಿಸುವ ಕಾರ್ಯವನ್ನು ವಾಕ್-ದೇವತೆಗಳು ಮಾಡಿದ್ದಾರೆ. ವಿಶೇಷವೇನೆಂದರೆ, ಪೂಜಾ ಕ್ರಮವು ಮೂಲ ಚಕ್ರದಿಂದ ಪ್ರಾರಂಭವಾಗಿ ಸಹಸ್ರಾರವೆಂದು ಕರೆಯಲ್ಪಡುವ ಕಿರೀಟ ಚಕ್ರದವರೆಗೆ ಸಾಗುವುದಿಲ್ಲ ಅಥವಾ ಕಿರೀಟ ಚಕ್ರದಿಂದ ಪ್ರಾರಂಭವಾಗಿ ಮೂಲಾಧಾರ ಚಕ್ರದವರೆಗೆ ಸಾಗುವುದಿಲ್ಲ. ಪೂಜೆಯು ಮೊದಲು ವಿಶುದ್ಧಿ ಚಕ್ರದಿಂದ ಪ್ರಾರಂಭವಾಗಿ, ಕೆಳಗಿನ ಚಕ್ರಗಳೆಡೆಗೆ ಸಾಗಿ ಆಮೇಲೆ ಆಜ್ಞಾ ಚಕ್ರಕ್ಕೆ ಸಾಗಿ ಅಂತಿಮವಾಗಿ ಸಹಸ್ರಾರದಲ್ಲಿ ಪರ್ಯಸನವಾಗುತ್ತದೆ. ಇಲ್ಲಿರುವ ಪ್ರತಿಯೊಂದು ಯೋಗಿನಿಗೂ ತನ್ನದೇ ಆದ ಧ್ಯಾನ ಶ್ಲೋಕ, ಜಪ ಮಂತ್ರ ಮೊದಲಾದವುಗಳಿವೆ. ಮತ್ತು ಪ್ರತಿಯೊಬ್ಬ ಯೋಗಿನಿಗೂ ತನ್ನದೇ ಆದ ಪರಿಚಾರಿಕೆಯರಿದ್ದು ಅವುಗಳಲ್ಲಿ ಪ್ರಮುಖರಾದವರನ್ನು ಯೋಗಿನಿಯರ ಜೊತೆಯಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬ ಯೋಗಿನಿಯ ಮೈಕಾಂತಿ, ಅವರ ಆಯುಧಗಳು, ಗುಣ ಲಕ್ಷಣಗಳು, ಅವರು ಇಷ್ಟ ಪಡುವ ಆಹಾರಗಳು ಮೊದಲಾದವುಗಳು ಸಹ ವಿವರಿಸಲ್ಪಟ್ಟಿವೆ. ಸಂಸ್ಕೃತ ವರ್ಣಮಾಲೆಯಲ್ಲಿ ಐವತ್ತು ಅಕ್ಷರಗಳಿವೆ; ಈ ಎಲ್ಲಾ ಅಕ್ಷರಗಳನ್ನು ಈ ಆರು ಚಕ್ರಗಳಲ್ಲಿ ಇರಿಸಲಾಗಿದೆ. ಹಲವಾರು ಸಂಸ್ಕೃತ ಅಕ್ಷರಗಳ ಕುರಿತಾದ ದೀರ್ಘವಾದ ವ್ಯಾಖ್ಯಾನವನ್ನು ನಾಮ ೮೩೩ರ ಚರ್ಚೆಯು ಒಳಗೊಂಡಿದೆ. ಆ ಅಕ್ಷರಗಳನ್ನು ಈ ಸಹಸ್ರನಾಮದಲ್ಲಿ ಉಲ್ಲೇಖಿಸಬೇಕಾದರೆ ಎರಡು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆ.

           ಪ್ರತಿಯೊಂದು ಯೋಗಿನಿಗೂ ಅನೇಕ ಮುಖಗಳಿವೆ. ವಿಶುದ್ಧಿ ಚಕ್ರದಲ್ಲಿ ಆಸೀನಳಾಗಿರುವ ಯೋಗಿನಿಯು ಒಂದು ಮುಖವನ್ನು ಹೊಂದಿದ್ದರೆ ಸಹಸ್ರಾರದಲ್ಲಿ ಆಸೀನಳಾಗಿರುವ ಯೋಗಿನಿಗೆ ಅನೇಕ ಮುಖಗಳಿವೆ. ಬಹುಶಃ ವಾಕ್-ದೇವಿಗಳು ಈ ಯೋಗಿನಿಯರ ಸ್ಥಾನವನ್ನು ಅವರು ಹೊಂದಿರುವ ಮುಖಗಳ ಆಧಾರದ ಮೇಲೆ ನಿಗದಿ ಪಡಿಸಿರಬಹುದು. ಪರ್ಯಾಯವಾಗಿ ವಾಕ್-ದೇವಿಗಳು ಈ ಯೋಗಿನಿಯರು ಪ್ರತಿನಿಧಿಸುವ ದೇಹದ ವಿವಧ ಧಾತುಗಳ ಮೇಲೆ ಅವರ ಕ್ರಮಸಂಖ್ಯೆಯನ್ನು ನಿರ್ಧರಿಸಬಹುದು. ಮೊದಲನೆಯದಾಗಿ ನಮಗೆ ಚರ್ಮವು ದೊರೆಯುತ್ತದೆ ಅದನ್ನು ರಕ್ತ, ಮಾಂಸ ಮತ್ತು ಇತರೇ ಧಾತುಗಳು ಒಂದರ ಕೆಳಗೊಂದರಂತೆ ಹಿಂಬಾಲಿಸುತ್ತವೆ. ನಾವು ಸೇವಿಸುವ ಆಹಾರವನ್ನು ನಿಜವಾದ ಅರ್ಥದಲ್ಲಿ ನಮ್ಮ ಉದರದೊಳಗೆ ಹುದುಗಿರುವ ಜಠರಾಗ್ನಿಯು ಬೇಯಿಸುತ್ತದೆ. ಹೀಗೆ ಬೇಯಿಸಲ್ಪಟ್ಟ ಆಹಾರವು ಸೂಕ್ತವಾದ ಬದಲಾವಣೆಗಳನ್ನು ಹೊಂದುವುದಲ್ಲದೇ ಅನೇಕ ವಿಧವಾದ ರಾಸಾಯನಿಕ ಕ್ರಿಯೆಗಳಿಗೆ  ಹಾಗೂ ಪರಿವರ್ತನೆಗೆ ಒಳಗಾಗಿ ದೇಹದ ಪ್ರತ್ಯೇಕ ಅಂಗಾಂಶ/ಧಾತುಗಳಲ್ಲಿ ಸೇರಿಸಲ್ಪಡುತ್ತವೆ ಮತ್ತು ಇವುಗಳಲ್ಲಿ ಉತ್ಕೃಷ್ಟವಾದ ಸಾರವು ವೀರ್ಯ ಮತ್ತು ಅಂಡಾಣುಗಳಾಗಿ (ಇದನ್ನು ಕೆಲವೊಮ್ಮೆ ತಪ್ಪಾಗಿ ಓಜಸ್ ಶಕ್ತಿಯೆಂದು ವ್ಯಾಖ್ಯಾನಿಸಲಾಗುತ್ತದೆ) ಪರಿವರ್ತಿತವಾಗುತ್ತವೆ ಮತ್ತು ಇವು ಪುನರುತ್ಪತ್ತಿಯ ಸಾಮರ್ಥ್ಯವನ್ನು ಹೊಂದಿವೆ. ಭಾವನೋಪನಿಷತ್ತಿನ ನಾಲ್ಕನೆಯ ಶ್ಲೋಕವು ಈ ಎಲ್ಲಾ ಧಾತುಗಳ ಜನಕನಾಗಿರುವುದು ವಾರಾಹಿ ದೇವಿ (ನಾಮ ೭೦) ಮತ್ತು ಜನನಿಯಾಗಿರುವುದು ಕುರುಕುಲ್ಲಾ ದೇವಿ (ನಾಮ ೪೩೮) ಎಂದು ಹೇಳುತ್ತದೆ.

         ಸಂಸ್ಕೃತದಲ್ಲಿ ಐವತ್ತು ಅಕ್ಷರಗಳಿದ್ದು ಅವುಗಳನ್ನು ಹದಿನಾರು ಸ್ವರಗಳಿರುವ ಜೀವಾಕ್ಷರಗಳಾಗಿ ಮತ್ತು ಉಳಿದ ಅಕ್ಷರಗಳನ್ನು ವ್ಯಂಜನಾಕ್ಷರಗಳು (ದೇಹಾಕ್ಷರಗಳು?) ಎಂದು ಎರಡು ವಿಧವಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಚಕ್ರಕ್ಕೂ ನಿರ್ಧಿಷ್ಠ ಸಂಖ್ಯೆಯ ಕಮಲದ ದಳಗಳಿದ್ದು ಮತ್ತು ಪ್ರತಿಯೊಂದು ದಳವೂ ಒಂದು ಪ್ರತ್ಯೇಕವಾದ ಸಂಸ್ಕೃತ ಅಕ್ಷರವನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ, ಕಂಠ ಚಕ್ರ ಅಥವಾ ವಿಶುದ್ಧಿ ಚಕ್ರವು ಹದಿನಾರು ಕಮಲ ದಳಗಳನ್ನು ಹೊಂದಿದ್ದು ಅವು ಹದಿನಾರು ಸ್ವರಾಕ್ಷರಗಳನ್ನು ಪ್ರತಿನಿಧಿಸುತ್ತವೆ. ಇಲ್ಲಿ ಕೊಟ್ಟಿರುವ ವಿವರಣೆಗೂ ಕುಂಡಲಿನೀ ಧ್ಯಾನಕ್ಕೂ ಯಾವುದೇ ವಿಧವಾದ ಸಂಬಂಧವಿಲ್ಲ. ಇಲ್ಲಿ ನಾವು ಮಾಡುತ್ತಿರುವುದೇನೆಂದರೆ ನಾವು ಪ್ರತಿಯೊಂದು ಚಕ್ರದಲ್ಲಿ ಆಸೀನವಾಗಿರುವ ದೇವತೆಯನ್ನು ಹಾಗು ಅದಕ್ಕೆ ಸಂಭಂದಿಸಿದ ಹೇಳಿಕೆಗಳನ್ನು ಚರ್ಚಿಸುತ್ತಿದ್ದೇವಷ್ಟೆ. ಈ ಒಂದು ಚಿಕ್ಕ ಪರಿಚಯದೊಂದಿಗೆ ನಾವು ಆ ಏಳು ಚಕ್ರಗಳಲ್ಲಿ (ಸಹಸ್ರಾರವನ್ನು ಸೇರಿಸಿ) ಆಸೀನರಾಗಿರುವ ಯೋಗಿನಿಯರನ್ನು ಕುರಿತು ಮುಂದಿನ ಅರವತ್ತು ನಾಮಗಳಲ್ಲಿ ಚರ್ಚಿಸಲು ಮುಂದಡಿಯಿಡೋಣ.

         ನಾವು ಮುಂದಿನ ೬೦ನಾಮಗಳಿಗೆ ಅಡಿಯಿಡುವ ಮುನ್ನ ಒಂದು ವಿಷಯವನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕು; ಅದೇನೆಂದರೆ ಈ ನಾಮಗಳು ಲಲಿತಾಂಬಿಕೆಯನ್ನು ಉಲ್ಲೇಖಿಸುವುದಿಲ್ಲ ಆದರೆ ಅವಳ ಪ್ರಮುಖ ಪರಿಚಾರಿಕೆಯರಾಗಿರುವ ಯೋಗಿನಿಯರನ್ನು ಕುರಿತು ಉಲ್ಲೇಖಿಸುತ್ತವೆ. ೪೭೫ನೇ ನಾಮದಿಂದ ೫೩೪ನೇ  ನಾಮಗಳು ಕೇವಲ ಮಾನಸಿಕ ಚಕ್ರಗಳಲ್ಲಿ ಆಸೀನರಾಗಿರುವ ಯೋಗಿನಿಯರ ಕುರಿತು ಚರ್ಚಿಸುತ್ತವೆಯಷ್ಟೇ; ಇವುಗಳ ಮೂಲಕ ಶಕ್ತಿ ದೇವಿಯು ಹಾಯ್ದು ಹೋಗಿ ಶಿವನನ್ನು ಸಹಸ್ರಾರ ಅಥವಾ ಕಿರೀಟ ಚಕ್ರದಲ್ಲಿ ಸೇರುತ್ತಾಳೆ. ಬೆನ್ನಹುರಿಯಲ್ಲಿ ಆರು ಸೂಕ್ಷ್ಮವಾದ ಚಕ್ರಗಳಿದ್ದು ಅವು ಬುನಾದಿ ಅಥವಾ ಮೂಲಾಧಾರ ಚಕ್ರದಿಂದ ಪ್ರಾರಂಭವಾಗಿ ಆಜ್ಞಾ ಚಕ್ರ ಅಥವಾ ಮೂರನೆಯ ಕಣ್ಣಿನಲ್ಲಿ ಪರ್ಯವಸಾನವಾಗುತ್ತವೆ. ವಾಸ್ತವವಾಗಿ ಸಹಸ್ರಾರವನ್ನು ಚಕ್ರವೆಂದು ಕರೆಯುವುದಿಲ್ಲ. ಈಗ ವಾಕ್-ದೇವಿಗಳು ಈ ಚಕ್ರಗಳ ಕುರಿತಾದ ವಿಸ್ತೃತವಾದ ವಿವರಣೆಯನ್ನು ಪ್ರಾರಂಭಿಸುತ್ತಾರೆ.

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM - INTRODUCTION TO YOGINIS http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
No votes yet

Comments

Submitted by nageshamysore Sat, 09/14/2013 - 20:41

ಶ್ರೀಧರರೆ, ೧೧೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ :-)

ಲಲಿತಾ ಸಹಸ್ರನಾಮ - ಯೋಗಿನಿಯರ ಪರಿಚಯ
______________________________________________

ಲಲಿತಾ ಯೋಗಿನಿಯರು ಏಳು, ಕುರಿತ ಅರವತ್ತು ನಾಮಗಳು
ಕುಂಡಲಿನೀ ಸೇರೀ ಏಳು ಚಕ್ರದುಪಸ್ಥಿತ ಧಾತುವೀ ದೇವತೆಗಳು
ಚರ್ಮ, ರಕ್ತ, ಮಾಂಸ-ಖಂಡ, ಕೊಬ್ಬು, ಮೂಳೆ, ಮಜ್ಜೆ, ಅಂಡಾಣು-ವೀರ್ಯ
ಪರಿಚಾರಿಕೆಯೊಡಗೂಡಿ ಯೋಗಿನಿಯರು ಸಹಸ್ರಾರದ ಹಾದಿಯ ಕಾರ್ಯ ||

ಕುಂಡಲಿನೀ ಶಕ್ತಿ ರೂಪ ಲಲಿತೆ, ಸಹಸ್ರಾರದ ಹಾದಿ ಯೋಗಿನಿ ದಾಟೆ
ವಿಶುದ್ಧಿಯಿಂದ ಕೆಳ ಚಕ್ರಕೆ, ಆಜ್ಞಾಚಕ್ರ ಮುಖೇನ ಸಹಸ್ರಾರಕೆ ತ್ರಿಪುಟೆ
ದೇವಿಯ ಪಥ ಪೂಜೆ, ಯೋಗಿನಿ ಪರಿಚಾರಿಕೆಗಳ ಪೂಜೆಯಾಗುತಲಿರೆ
ಅಕ್ಷರ ಚಕ್ರದ ಜತೆ ಮೈಕಾಂತಿ ಆಯುಧ ಗುಣಲಕ್ಷಣ ಆಹಾರ ವರ್ಣನೆ ||

ಧಾತುಗಳೆಲ್ಲದರ ಜನಕ ವಾರಾಹಿ, ಜನನಿಯಾಗಿಹ ಕುರುಕುಲ್ಲಾ ದೇವಿ
ದೇಹಧಾತುಗಳಂತೆ ಕ್ರಮಬದ್ಧಸ್ಥಾನ, ಪ್ರತಿ ಯೋಗಿನಿ ಮುಖಕು ಪದವಿ
ಜಠರಾಗ್ನಿ ಜೀರ್ಣ ತಲುಪಿಸಿ ಧಾತು, ಉತ್ಕೃಷ್ಟಸಾರವೆ ಅಂಡಾಣು ವೀರ್ಯ
ಪ್ರತಿಚಕ್ರ ನಿರ್ದಿಷ್ಠ ದಳ, ಪ್ರತಿನಿಧಿಸಿ ಸ್ವರ ಜೀವಾಕ್ಷರ, ತನುವ್ಯಂಜನಾಕ್ಷರ!

ಯೋಗಿನಿಯರನಷ್ಟೆ ಉಲ್ಲೇಖಿಸೊ ನಾಮ ಬರಿಹಾದಿ, ಲಲಿತಾಂಬಿಕೆಯಲ್ಲ
ಮಾನಸಿಕ ಚಕ್ರದಲಾಸಿನ ಯೋಗಿನಿಯರ, ಕುರಿತಷ್ಟೆ ಚರ್ಚಿಸುವಾ ಸಕಲ
ಬೆನ್ನುಹುರಿಯಾರು ಸೂಕ್ಷ್ಮಚಕ್ರ, ಮೂಲಾಧಾರದಿಂ ಆಜ್ಞಾಚಕ್ರಕೆ ಪರ್ಯಟನ
ಸಹಸ್ರಾರ ತಲುಪೆ ಲಲಿತಾ ಸರದಿ, ಕಿರೀಟ ಚಕ್ರದಿ ಸನ್ನಿಧಿ ಸೇರುತ ಶಿವನ||

ಧನ್ಯವಾದಗಳೊಂದಿಗೆ, 
ನಾಗೇಶ ಮೈಸೂರು