೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೪೬೯ - ೪೭೪
Vāmadevī वामदेवी (469)
೪೬೯. ವಾಮದೇವೀ
ಶಿವನ ಇನ್ನೊಂದು ರೂಪವಾದ ವಾಮದೇವನ ಹೆಂಡತಿ. ಹಿಂದೂ ಪುರಾಣಗಳ ಪ್ರಕಾರ ಶಿವನಿಗೆ ಐದು ಮುಖಗಳಿವೆ, ಅವೆಂದರೆ ಈಶಾನ, ತತ್ಪುರುಷ, ಅಘೋರ, ವಾಮದೇವ ಮತ್ತು ಸದ್ಯೋಜಾತ. ಈ ಪ್ರತಿಯೊಂದು ಮುಖವೂ ಪಂಚ ಮಹಾಭೂತಗಳಾದ ಆಕಾಶ ಮೊದಲಾದವುಗಳನ್ನು ಪ್ರತಿನಿಧಿಸುತ್ತವೆ. ಪ್ರಾಚೀನ ಶಾಸ್ತ್ರಗಳು ಶಿವನ ಮೂರು ಮುಖಗಳು ಮಾತ್ರವೇ ಕಾಣಿಸುತ್ತವೆ ಎಂದು ಹೇಳುತ್ತವೆ. ನಾಲ್ಕನೆಯದು ಅವನ ಬೆನ್ನಿನ ಹಿಂದಿದ್ದು ಅವನ ಐದನೇ ಮುಖವಾದ ವಾಮದೇವವು ಅವನ ತಲೆಯ ಮೇಲಿರುತ್ತದೆ. ಈ ಮುಖವು ಆಕಾಶವನ್ನು ಪ್ರತಿನಿಧಿಸುತ್ತದೆ. ಲಿಂಗ ಪುರಾಣವು ಶಿವನ ಈ ವಾಮದೇವ ರೂಪವನ್ನು ಈ ವಿಧವಾಗಿ ವಿವರಿಸುತ್ತದೆ, "ಅವನು ಕೆಂಪು ಆಭರಣಗಳಿಂದ ಅಲಂಕೃತಗೊಂಡಿದ್ದ, ಅವನು ಕೆಂಪು ವಸ್ತ್ರಗಳನ್ನು ಮತ್ತು ಮಾಲೆಗಳನ್ನು ಧರಿಸಿದ್ದ. ಅವನ ಕಣ್ಣುಗಳು ಕೆಂಪಗಿದ್ದವು. ಅವನು ಉಗ್ರನಾಗಿದ್ದ". ಶಿವನ ವಾಮದೇವ ಮಂತ್ರವು "ಓಂ ನಮೋ ಬ್ರಹ್ಮಣೇ ವಾಮದೇವಾಯ" - ॐ नमो ब्रह्मणॆ वामदेवाय”. ಯಾರು ಈ ಮಂತ್ರವನ್ನು ದಿನ ನಿತ್ಯ ಪಠಿಸುತ್ತಾರೆಯೋ ಅವರು ತಮ್ಮ ಪಾಪಗಳಿಂದ ವಿಮುಕ್ತರಾಗಿ ಅವರಿಗೆ ಪುನರ್ಜನ್ಮವು ಉಂಟಾಗುವುದಿಲ್ಲವಂತೆ.
ಶಿವ-ಶಕ್ತಿಯರ ಐಕ್ಯರೂಪವನ್ನು ‘ಅರ್ಧನಾರೀಶ್ವರ ರೂಪ’ವೆಂದು ಕರೆಯಲಾಗುತ್ತದೆ. ಈ ರೂಪವನ್ನು ‘ವಾಮದೇವ ರೂಪ’ವೆಂದೂ ಕರೆಯುತ್ತಾರೆ, ಏಕೆಂದರೆ ದೇವಿಯು ಶಿವನ ಎಡ ಪಾರ್ಶ್ವವನ್ನು ಆಕ್ರಮಿಸುತ್ತಾಳೆ. ಶಿವನ ವಾಮದೇವ ರೂಪವು ಏಕೆ ಕೆಂಪಾಗಿದೆ ಎಂದರೆ, ದೇವಿಯು ಶಿವನ ಎಡ ಪಾರ್ಶ್ವವನ್ನು ಆಕ್ರಮಿಸಿರುವುದರಿಂದ ಅವನ ಸ್ಪಟಿಕ ಶ್ವೇತ ವರ್ಣದಲ್ಲಿ ದೇವಿಯ ಕೆಂಪು ಕಾಂತಿಯು ಪ್ರತಿಫಲನ ಹೊಂದುತ್ತದೆ. ಎಡಗಡೆ ಎನ್ನುವುದಕ್ಕೆ ವಾಮ ಎಂದು ಕರೆಯಲಾಗುವುದರಿಂದ ದೇವಿಯು ವಾಮದೇವಿಯಾಗಿದ್ದಾಳೆ. ಎಡಗೈಯಿಂದ ಪೂಜಿಸುವ ಆಚರಣೆಗಳುಳ್ಳ ವಾಮಾಚಾರದ ಮೂಲಕ ದೇವಿಯು ಪೂಜಿಸಲ್ಪಡುತ್ತಾಳೆ. ಇಂದಿಗೂ ಸಹ ಈ ವಿಧವಾದ ಆಚರಣೆಗಳನ್ನು ಬಹುತೇಕರು ಅನುಸರಿಸುತ್ತಾರೆ; ಅದು ವೇದಗಳ ಬೋಧನೆಗಳಿಗೆ ವಿರುದ್ಧವಾಗಿದ್ದರೂ ಸಹ.
Vayo'vasthā-vivarjitā वयोऽवस्था-विवर्जिता (470)
೪೭೦. ವಯೋವಸ್ಥಾ-ವಿವರ್ಜಿತಾ
ದೇವಿಯು ವಯೋಪರಿಣಾಮಗಳಿಗೆ ಅತೀತಳಾಗಿದ್ದಾಳೆ. ಇದು ಬ್ರಹ್ಮದ ಲಕ್ಷಣವಾಗಿದ್ದು ಅದು ಬದಲಾವಣೆಗಳನ್ನು ಹೊಂದುವುದಿಲ್ಲ.
ಕೂದಲಿನ ಬಣ್ಣ ಮಾಸುವುದು, ಬಿಳಿಯಾಗುವುದು ಅಥವಾ ಉದರುವುದು ಮುಪ್ಪಾಗುವಿಕೆಯ ಸಂಕೇತವಾಗಿದೆ. ವಿಶ್ವದ ಸಮಸ್ತ ಶಕ್ತಿಯ ಆಗರವಾಗಿರುವ ಆದಿಪರಾಶಕ್ತಿಯಾದರೋ 'ನಿತ್ಯ ಯೌವನವತಿ'ಯಾಗಿದ್ದು, ಮತ್ತು ಎಲ್ಲಾ ವಿಧವಾದ ವಯೋಸಹಜ ವಿಕಾರಕ್ಕೊಳಗಾಗದವಳು - 'ವಯೋವಸ್ಥಾವಿವರ್ಜಿತಾ', ಅಂದರೆ ವೃದ್ಧತ್ವವಿಲ್ಲದವಳು ಅಥವಾ ಮುಪ್ಪಿಲ್ಲದವಳು. ಈ ವಿಶ್ವದ ಒಟ್ಟು ಶಕ್ತಿಯು ಯಾವಾಗಲೂ ನಿರ್ಧಿಷ್ಟ ಪ್ರಮಾಣದಲ್ಲಿದ್ದು; ಅದು ಯಾವುದೇ ಸಮಯದಲ್ಲಿ ಹೆಚ್ಚಿಗೆಯಾಗುವುದಾಗಲಿ ಕಡಿಮೆಯಾಗುವುದಾಗಲಿ ಆಗುವುದಿಲ್ಲ. (ಇದನ್ನಾಗಲೇ ನಾಮ ೪೩೦ ’ನಿತ್ಯ-ಯೌವನಾ’ದ ವಿವರಣೆಯಲ್ಲಿ ಚರ್ಚಿಸಲಾಗಿದೆ).
Siddheśvarī सिद्धेश्वरी (471)
೪೭೧. ಸಿದ್ಧೇಶ್ವರೀ
ದೇವಿಯು ಸಿದ್ಧರ ಈಶ್ವರೀ ಅಥವಾ ಒಡತಿಯಾಗಿದ್ದಾಳೆ. ಸಿದ್ಧರು ಆಕೆಯನ್ನು ಪೂಜಿಸುತ್ತಾರೆ. ಸಿದ್ದರೆಂದರೆ ಯಾರು ಅಷ್ಟಮ ಸಿದ್ಧಿ ಅಥವಾ ಎಂಟು ವಿಧವಾದ ಅತಿಮಾನುಷ ಶಕ್ತಿಗಳನ್ನು ಪಡೆದುಕೊಂಡಿರುತ್ತಾರೆಯೋ ಅವರು. ಆ ವಿಧವಾದ ಶಕ್ತಿಗಳನ್ನು ಕುಂಡಲಿನೀ ಧ್ಯಾನದ ಮೂಲಕವಷ್ಟೇ ಪಡೆಯಬಹುದು. ಸಿದ್ಧರ ತತ್ವದಂತೆ ಶಿವನು ಕಿರೀಟ ಚಕ್ರವಾದ ಸಹಸ್ರಾರದಲ್ಲಿ ಯಾವುದೇ ವಿಧವಾದ ಚಲನೆಯಿಲ್ಲದೆ ನೆಲಸಿರುತ್ತಾನೆ. ಆದರೆ ಕೇವಲ ಶಕ್ತಿಯೊಬ್ಬಳೇ ಕುಂಡಲಿನೀ ರೂಪದಲ್ಲಿ ಶಿವನೆಡೆಗೆ ಸಾಗುತ್ತಾಳೆ. ದೇವಿಯು ಕುಂಡಲಿನೀ ರೂಪದಲ್ಲಿ ಸಿದ್ಧರೆಂದು ಕರೆಯಲ್ಪಡುವ ಯೋಗಿಗಳಿಂದ ಪೂಜಿಸಲ್ಪಡುತ್ತಾಳೆ, ಆದ್ದರಿಂದ ಆಕೆಯನ್ನು ಸಿದ್ದೇಶ್ವರೀ ಎಂದು ಕರೆಯಲಾಗಿದೆ.
Siddha-vidyā सिद्ध-विद्या (472)
೪೭೨. ಸಿದ್ಧ-ವಿದ್ಯಾ
ನಿತ್ಯವಾದ ಪಂಚದಶೀ ಮಂತ್ರವನ್ನು ಸಿದ್ಧ-ವಿದ್ಯಾ ಎಂದು ಕರೆಯಲಾಗಿದೆ. ಯಾರು ಮಂತ್ರಗಳನ್ನು ಶ್ರದ್ಧಾ-ಭಕ್ತಿಗಳಿಂದ ಪಠಿಸುತ್ತಾರೆಯೋ ಅವರಿಗೆ ಎಲ್ಲಾ ಮಂತ್ರಗಳು ತಮ್ಮಲ್ಲಿ ಸುಪ್ತವಾಗಿರುವ ಕಲ್ಯಾಣವನ್ನು ಉಂಟುಮಾಡುವ ಶಕ್ತಿಯನ್ನು ಕರುಣಿಸುತ್ತವೆ. ಪುರುಷ ದೇವರುಗಳ ಮಂತ್ರವನ್ನು ಮಂತ್ರ ಎಂದು ಕರೆದರೆ ಸ್ತ್ರೀ ದೇವರುಗಳ ಮಂತ್ರವನ್ನು ವಿದ್ಯಾ ಎಂದು ಕರೆಯಲಾಗುತ್ತದೆ. ಯಾರಿಗಾದರೂ ಮಂತ್ರ ದೀಕ್ಷೆಯನ್ನು ಕೊಡುವ ಮೊದಲು ಗುರುವು ಆ ಮಂತ್ರವು ಅವನಿಗೆ ಸೂಕ್ತವಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸುತ್ತಾನೆ. ಒಂದು ವೇಳೆ ಆ ಮಂತ್ರವು ಅವನಿಗೆ ಸೂಕ್ತವಾಗಿಲ್ಲದಿದ್ದರೆ ಅದು ಅವನಿಗೆ ಒಳಿತಿಗಿಂತ ಹೆಚ್ಚಾಗಿ ಕೆಡುಕನ್ನುಂಟು ಮಾಡುತ್ತದೆ. ಆದ್ದರಿಂದ ಜ್ಞಾನಿಯಾದ ಗುರುವು ತನ್ನ ಶಿಷ್ಯನಿಗೆ ಮೊದಲು ಆತ್ಮ-ಬೀಜದ ದೀಕ್ಷೆಯನ್ನು ಕೊಡುತ್ತಾನೆ; ಆ ಆತ್ಮ-ಬೀಜವನ್ನು ಯಾವುದಾದರೂ ಮಂತ್ರಕ್ಕೆ ಪೂರ್ವ-ಪ್ರತ್ಯಯವಾಗಿ ಜೋಡಿಸಿದಾಗ ಅದರ ಮೂಲಕ ಕೇವಲ ಸೌಭಾಗ್ಯದ ಮಳೆಯುಂಟಾಗುತ್ತದೆ. ಶೀಘ್ರ ಫಲಕ್ಕಾಗಿ ಒಂದು ಆತ್ಮಬೀಜವನ್ನು ಪೂರ್ವ-ಪ್ರತ್ಯಯವಾಗಿ ಇಲ್ಲಾ ಉತ್ತರ-ಪ್ರತ್ಯಯವಾಗಿ ಒಂದು ಮಂತ್ರಕ್ಕೆ ಜೋಡಿಸಬಹುದು ಅಥವಾ ಒಂದು ಮಂತ್ರವನ್ನು ಆತ್ಮಬೀಜಗಳ ನಡುವೆ ಕವಚೀಕರಣ ಮಾಡಬಹುದು ಅದನ್ನು ಪೂರ್ವ ಇಲ್ಲಾ ಉತ್ತರ ಪ್ರತ್ಯಯವಾಗಿ ಜೋಡಿಸುವ ಮೂಲಕ. ಆದರೆ ಇಂತಹ ಗಹನವಾದ ಸಂಗತಿಗಳನ್ನು ಒಬ್ಬನ ಗುರುವು ನಿರ್ಧರಿಸಬೇಕು.
ಆದರೆ ಪಂಚದಶೀ ಮಂತ್ರವು ಈ ವಿಧವಾದ ಸೂಕ್ತತೆಯ ಪರೀಕ್ಷೆಯಿಂದ ಮುಕ್ತವಾಗಿದೆ. ಈ ಮಂತ್ರವು ಯಾವುದೇ ಸಂದರ್ಭಗಳಲ್ಲಿ ಯಾವುದೇ ರೀತಿಯಾದ ಹಾನಿಯನ್ನುಂಟು ಮಾಡುವುದಿಲ್ಲ. ಪರಿಚಯ ಭಾಗದಲ್ಲಿ ಪಂಚದಶೀ ಮಂತ್ರವನ್ನು ವಿಶದವಾಗಿ ವಿವರಿಸಲಾಗಿದೆ. ಸಾಮಾನ್ಯವಾಗಿ ಮಂತ್ರಗಳನ್ನು ಶುಭ-ಮುಹೂರ್ತದಲ್ಲಿ ಉಪದೇಶಿಸಲಾಗುತ್ತದೆ. ಆದರೆ ಪಂಚದಶೀ ಮಂತ್ರಕ್ಕೆ ಆ ವಿಧವಾದ ಗ್ರಹ-ನಕ್ಷತ್ರಗಳ ಲೆಕ್ಕಾಚಾರಗಳ ಅವಶ್ಯಕತೆಯಿಲ್ಲ. ಎಲ್ಲಾ ಗ್ರಹಗಳು ದೇವಿಯ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತವೆ ಎನ್ನುವುದು ಇದರ ಹಿನ್ನಲೆಯಾಗಿದೆ.
Siddha-mātā सिद्ध-माता (473)
೪೭೩. ಸಿದ್ಧ-ಮಾತಾ
ಸಿದ್ಧರು ಅಥವಾ ಯೋಗಿಗಳು ದೇವಿಯನ್ನು ತಮ್ಮ ತಾಯಿ ಎಂದು ಪೂಜಿಸುತ್ತಾರೆ. ತಾಯಿಯ ವಿಷಯದಲ್ಲಿ ಸಂನ್ಯಾಸಿಗೂ ಸಹ ವಿನಾಯತಿ ಇದೆ. ಮಾತೃತ್ವದ ಮಹತ್ವವು ಚೆನ್ನಾಗಿ ತಿಳಿದ ವಿಷಯವಾಗಿದೆ. ಸಿದ್ಧರು ಎಲ್ಲವನ್ನೂ ತೊರೆದು ಯಾವಾಗಲೂ ಶಿವ ಮತ್ತು ಶಕ್ತಿಯರೊಂದಿಗೆ ಸಂಭಂದವಿರಿಸಿಕೊಂಡಿರುತ್ತಾರೆ. ಕೆಲವು ಯೋಗಿಗಳಿದ್ದಾರೆ, ಅವರು ವರ್ಷಗಳವರೆಗೆ ಆಹಾರವನ್ನು ಸ್ವೀಕರಿಸದೆ ದೀರ್ಘ ಧ್ಯಾನವನ್ನು ಕೈಗೊಳ್ಳುತ್ತಾರೆ. ಅವರು ಕುಂಡಲಿನೀ ಶಕ್ತಿಯ ಮೂಲಕ ಬದುಕುಳಿಯುತ್ತಾರೆ ಮತ್ತು ಅದರ ಮೂಲಕ ಅವರು ಬ್ರಹ್ಮಾಂಡ ಶಕ್ತಿಯೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಅಂತಹ ಯೋಗಿಗಳು ದೇವಿಯನ್ನು ‘ಮಾ’ ಎಂದು ಕರೆಯುವುದರಿಂದ ಆಕೆಯು ಅವರಿಗೆ ಮಾತೆಯಾಗಿದ್ದಾಳೆ. ಇದುವರೆಗಾಗಲೇ ದೇವಿಯ ಪರಮೋನ್ನತ ಮಾತೃಸ್ವರೂಪದ ಕುರಿತಾಗಿ ನಾಮ ೧ - ಶ್ರೀಮಾತಾ ಮತ್ತು ೪೫೭ನೇ ನಾಮವಾದ ‘ಮಾತಾ’ದಲ್ಲಿ ಚರ್ಚಿಸಲಾಗಿದೆ. ದೇವಿಯು ಅಂತಹ ಭಕ್ತರನ್ನು ತಾಯಿಯಂತೆ ಪೊರೆಯುತ್ತಾಳೆ.
Yaśasvinī यशस्विनी (474)
೪೭೪.ಯಶಸ್ವಿನೀ
ಅತ್ಯಂತ ಹೆಸರುವಾಸಿಯಾದವಳು ಅಥವಾ ಪ್ರಸಿದ್ದಳು; ಆಕೆಗಿರುವ ಬಹುಮುಖವಾದ ಸಾಮರ್ಥ್ಯಗಳಿಂದಾಗಿ. ಶಿವನು ಆಕೆಯನ್ನು ಸೃಷ್ಟಿಸಿದ ನಂತರ ಪ್ರಪಂಚದ ಯಾವುದೇ ವಿಧವಾದ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ. ದೇವಿಯು ಈ ಸಮಸ್ತ ಪ್ರಪಂಚವನ್ನು ಸ್ವತಂತ್ರವಾಗಿ ಪರಿಪಾಲಿಸುತ್ತಾಳೆ. ಮಹಾನಾರಾಯಣ ಉಪನಿಷತ್ತು (೧.೧೦) ಈ ಪ್ರಸಂಗವನ್ನು ಬಹಳ ಸುಂದರವಾಗಿ ವರ್ಣಿಸುತ್ತದೆ. ಅದು ಹೇಳುತ್ತದೆ, "ಯಾವುದೇ ವ್ಯಕ್ತಿಯು ಆ ಪರಮಾತ್ಮನ ಮೇಲಿನ ಪರಿಮಿತಿಯನ್ನು ಅರಿತಿಲ್ಲ ಅಥವಾ ಅದರಾಚೆಯದನ್ನು ಅಥವಾ ಅವನ ಮಧ್ಯ ಭಾಗವನ್ನೂ ಸಹ. ಅವನ ಹೆಸರೇ ’ಮಹಾವೈಭವ’". ದೇವಿಯ ಮಹತ್ವವು ಈ ವಿಧವಾಗಿದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 469 - 474 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ
ಶ್ರೀಧರರೆ, ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ.
ಲಲಿತಾ ಸಹಸ್ರನಾಮ ೪೬೯ - ೪೭೪
___________________________________
೪೬೯. ವಾಮದೇವೀ
ಈಶಾನ ತತ್ಪುರುಷ ಅಘೋರ ವಾಮದೇವ ಸದ್ಯೋಜಾತ
ಪಂಚಮುಖಿ ಶಿವ ಪ್ರತಿನಿಧಿಸುತಲಿಹ ಪಂಚ ಮಹಾಭೂತ
ವಾಮದೇವನ ಸತಿ ವಾಮದೇವೀ ರೂಪದಿ ಲಲಿತೆ ಎಡಕೆ
ವಾಮಾಚಾರ ಪೂಜಿತೆ ಪ್ರತಿಫಲಿಸಿ ಕೆಂಪು ಶಿವನ ಸ್ಪಟಿಕಕೆ!
೪೭೦. ವಯೋವಸ್ಥಾ-ವಿವರ್ಜಿತಾ
ವಿಶ್ವ ಸ್ಥಾಯಿ ಶಕ್ತಿಯ ನಿರ್ದಿಷ್ಟ ಬದಲಾಗದ ಮೊತ್ತ
ಅಂತೆಯೆ ವೃದ್ದತ್ವವಿಲ್ಲದ ವಯೋವಸ್ಥಾ ವಿವರ್ಜಿತಾ
ಸಮಸ್ತ ವಿಶ್ವಶಕ್ತಿಯ ಆಗರ, ಆದಿ ಪರಾಶಕ್ತೀ ಘನತೆ
ವಯೋಪರಿಣಾಮಕತೀತೆ, ಬ್ರಹ್ಮದ ಲಕ್ಷಣಾ ಲಲಿತೆ!
೪೭೧. ಸಿದ್ದೇಶ್ವರೀ
ಆಷ್ಟಮಸಿದ್ದಿ ಅತಿಮಾನುಷ ಶಕ್ತಿ, ಪಡೆದ ಸಿದ್ದರೊಡತಿ ಈಶ್ವರೀ
ಕುಂಡಲಿನೀ ಧ್ಯಾನದಿಂದ ಸಿದ್ದಿ ಪಡೆದ, ಸಿದ್ದಪೂಜಿತೆ ಸಿದ್ದೇಶ್ವರೀ
ಕಿರೀಟಚಕ್ರ ಸಹಸ್ರಾರದೆ ನಿಶ್ಚಲ ಶಿವ, ಕುಂಡಲಿನೀರೂಪದೆ ಶಕ್ತಿ
ಶಿವನೆಡೆ ಸಾಗುವ ಲಲಿತೆ, ಸಿದ್ದಯೋಗಿಗಳಿಂದ ಪೂಜಿತೆ ಸನ್ಮತಿ!
೪೭೨. ಸಿದ್ಧ-ವಿದ್ಯಾ
ಸಿದ್ದ-ವಿದ್ಯಾ ನಿತ್ಯವಾದ ಪಂಚದಶೀ ಮಂತ್ರ, ಶ್ರದ್ದಾ- ಭಕ್ತಿ ಪಠನೆಗೆ
ಸುಪ್ತ ಕಲ್ಯಾಣಶಕ್ತಿ ಧಾರೆಯೆರೆವ ಪುರುಷ-ಮಂತ್ರ ಸ್ತ್ರೀ-ವಿದ್ಯಾ ಬಗೆ
ಅರ್ಹತೆ ಸೂಕ್ತತೆ ಗುರುಜ್ಞಾನ, ಆತ್ಮಬೀಜ ದೀಕ್ಷೆ ಮಂತ್ರಕೆ ಪ್ರತ್ಯಯ
ಪೂರ್ವೋತ್ತರ ಕವಚೀಕರಣ, ಗಹನತೆ ಗುರುವಿಂದೇ ಸಾಧನೆ ಜಯ!
ಪಂಚದಶೀ ಮಂತ್ರವಷ್ಟೆ ಸೂಕ್ತತೆಯ ಪರೀಕ್ಷಾ ಮುಕ್ತ
ಹಾನಿಕಾರಕವಲ್ಲದ ಮಂತ್ರ ಸರ್ವ ಸಂಧರ್ಭ ಸೂಕ್ತ
ಗ್ರಹ ನಕ್ಷತ್ರ ಲೆಕ್ಕಾಚಾರ ಬೇಡದು ಪಂಚದಶೀ ದೀಕ್ಷೆ
ಗ್ರಹದಂಕೆ ಲಲಿತೆ ಹಸ್ತ, ಸದಾ ಶುಭಮಹೂರ್ತ ರಕ್ಷೆ!
೪೭೩. ಸಿದ್ಧ-ಮಾತಾ
ಪರಮೋನ್ನತ ಮಾತೃಸ್ವರೂಪ, ಸಿದ್ಧ ಯೋಗಿಗಳಿಗು ಮಾತಾ
ಆ ಭಕ್ತರ ತಾಯಂತೆ ಪೊರೆವ, ಲಲಿತೆ ಕರುಣಿಸಿ ಸಿದ್ಧಮಾತಾ
ಸರ್ವಸಂಗ ಪರಿತ್ಯಾಗಿ ಸಿದ್ಧರು, ಶಿವಶಕ್ತಿಯೊಡನಿಹ ಸಂಬಂಧ
ಉಪವಾಸದಲೆ ವರ್ಷಾಂತರ ಧ್ಯಾನ, ಕುಂಡಲಿನೀಶಕ್ತಿ ಬ್ರಹ್ಮದ!
೪೭೪.ಯಶಸ್ವಿನೀ
ಶಿವನಾಗುತ ಸ್ಥಗಿತ, ಶಕ್ತಿಯ ಸೃಷ್ಟಿಸಿದ ತರುವಾಯ ತಟಸ್ಥ
ಲಲಿತೆ ಬಹುಮುಖ ಸಾಮರ್ಥ್ಯ, ಸ್ವತಂತ್ರದೆ ಪರಿಪಾಲಿಸುತ
ಆದಿ ಅಂತ್ಯ ಮಧ್ಯವೆಲ್ಲ ಅರಿಯದ ಪರಿಮಿತಿ ಮಹಾವೈಭವ
ಯಶಸ್ವಿನೀ ಪ್ರಸಿದ್ಧಳು ಲಲಿತೆ, ತಾ ಪ್ರಪಂಚ ಪರಿಪಾಲಿಸುವ!
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
In reply to ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ by nageshamysore
ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ
ನಾಗೇಶರೆ,
ಅದ್ಯಾವುದೋ ಮಾಯದಲ್ಲಿ ಈ ಕಂತಿಗೂ ಕವನಗಳನ್ನು ಸೇರಿಸಿ ಬಿಟ್ಟಿದ್ದೀರ. ನಿಮ್ಮ Spontaneity ನಿಜಕ್ಕೂ ಆಶ್ಚರ್ಯಕರವಾದದ್ದು. ಇದೇ ಅಭಿಪ್ರಾಯವನ್ನು ನಿನ್ನೆ ದೂರವಾಣಿಯ ಮೂಲಕ ಮಾತನಾಡಿದ ಪಾರ್ಥಸಾರಥಿಗಳು ವ್ಯಕ್ತಪಡಿಸಿದ್ದು. ಒಟ್ಟಾರೆಯಾಗಿ ಎಲ್ಲಾ ಪದ್ಯಗಳೂ ಚೆನ್ನಾಗಿ ಮೂಡಿ ಬಂದಿವೆ. ಸಿದ್ಧ-ಮಾತಾದ ಎರಡನೇ ಪದ್ಯ ಈ ಕಂತಿನ ಹೈಲೈಟ್. ಉಳಿದಂತೆ ಈ ಕಂತಿನಲ್ಲಿ ಕೆಲವು ಸಣ್ಣ-ಪುಟ್ಟ ದೋಷಗಳನ್ನು ಪಟ್ಟಿ ಮಾಡಿದ್ದೇನೆ :)
೪೬೯. ವಾಮದೇವೀ
:
ವಾಮಾಚಾರ ಪೂಜಿತೆ ಪ್ರತಿಫಲಿಸಿ ಕೆಂಪು ಶಿವನ ಸ್ಪಟಿಕಕೆ!
ಪ್ರತಿಫಲಿಸಿ ಕೆಂಪು ಶಿವನ ಸ್ಪಟಿಕಕೆ= ಇಲ್ಲಿ ಸ್ವಲ್ಪ ಅರ್ಥ ವ್ಯತ್ಯಯ ಉಂಟಾಗುತ್ತದೆ, ಆದ್ದರಿಂದ ಸೂಕ್ತ ಬದಲಾವಣೆ ಮಾಡಿ.
೪೭೦. ವಯೋವಸ್ಥಾ-ವಿವರ್ಜಿತಾ
ವಿಶ್ವ ಸ್ಥಾಯಿ ಶಕ್ತಿಯ ನಿರ್ದಿಷ್ಟ ಬದಲಾಗದ ಮೊತ್ತ
=ವಿಶ್ವ ಶಕ್ತಿಯ ಸ್ಥಾಯಿ ನಿರ್ದಿಷ್ಟ, ಬದಲಾಗದ ಮೊತ್ತ -ಹೀಗೆ ಸ್ವಲ್ಪ ಬದಲಾವಣೆ ಮಾಡಬಹುದೇ?
:
೪೭೧. ಸಿದ್ದೇಶ್ವರೀ
:
ಶಿವನೆಡೆ ಸಾಗುವ ಲಲಿತೆ, ಸಿದ್ದಯೋಗಿಗಳಿಂದ ಪೂಜಿತೆ ಸನ್ಮತಿ!
=ಸಿದ್ದಯೋಗಿಗಳಿಂದ ಪೂಜಿತೆ ಸನ್ಮತಿ - ಇಲ್ಲಿ ಸಿದ್ಧಯೋಗಿಗಳಿಂದ ಪೂಜಿತೆ ಪುನರುಚ್ಛಾರವಾಗುತ್ತದೆ ಆದ್ದರಿಂದ ಈ ಸಾಲನ್ನು ಸ್ವಲ್ಪ ಬದಲಾಯಿಸಬಹುದೇನೋ ನೋಡಿ.
೪೭೨. ಸಿದ್ಧ-ವಿದ್ಯಾ
:
:
ಅರ್ಹತೆ ಸೂಕ್ತತೆ ಗುರುಜ್ಞಾನ, ಆತ್ಮಬೀಜ ದೀಕ್ಷೆ ಮಂತ್ರಕೆ ಪ್ರತ್ಯಯ
ಪೂರ್ವೋತ್ತರ ಕವಚೀಕರಣ, ಗಹನತೆ ಗುರುವಿಂದೇ ಸಾಧನೆ ಜಯ!
ಗಹನತೆ ಗುರುವಿಂದೇ ಸಾಧನೆ ಜಯ! - ಈ ಪದಗಳಿಂದಾಗಿ ಮೂಲ ವಿವರಣೆಯ ಅರ್ಥ ಸ್ವಲ್ಪ ಬದಲಾಗುತ್ತದೆ. ಏಕೆಂದರೆ ಸೂಕ್ತವಾದ ಮಂತ್ರಗಳನ್ನು ನಿರ್ಧರಿಸುವ ಗಹನವಾದ ವಿಚಾರ ಗುರುವಿಗೆ ಬಿಟ್ಟದ್ದು. ಈ ಅರ್ಥ ಬರುವಂತೆ ಸ್ವಲ್ಪ ಬದಲಾವಣೆ ಮಾಡಿ.
ಪಂಚದಶೀ ......
:
:
...............................ರಕ್ಷೆ! - ಈ ಪಂಕ್ತಿ ಬಹಳ ಚೆನ್ನಾಗಿ ಮೂಡಿ ಬಂದಿದೆ.
೪೭೩. ಸಿದ್ಧ-ಮಾತಾ
ಪರಮೋನ್ನತ ಮಾತೃಸ್ವರೂಪ, ಸಿದ್ಧ ಯೋಗಿಗಳಿಗು ಮಾತಾ
ಸಿದ್ಧ ಯೋಗಿಗಳಿಗು=ಸಿದ್ಧ ಯೋಗಿಗಳಿಗೂ
ಆ ಭಕ್ತರ ತಾಯಂತೆ ಪೊರೆವ, ಲಲಿತೆ ಕರುಣಿಸಿ ಸಿದ್ಧಮಾತಾ
ಸರ್ವಸಂಗ ಪರಿತ್ಯಾಗಿ ಸಿದ್ಧರು, ಶಿವಶಕ್ತಿಯೊಡನಿಹ ಸಂಬಂಧ
ಉಪವಾಸದಲೆ ವರ್ಷಾಂತರ ಧ್ಯಾನ, ಕುಂಡಲಿನೀಶಕ್ತಿ ಬ್ರಹ್ಮದ!
ಕಡೆಯ ಸಾಲಿನಲ್ಲಿ ಸ್ವಲ್ಪ ಅರ್ಥ ವ್ಯತ್ಯಯವುಂಟಾಗುತ್ತದೆ. ಏಕೆಂದರೆ ಸಿದ್ಧರು ಕುಂಡಲಿನೀ ಶಕ್ತಿಯಿಂದಾಗಿ ವರ್ಷಾಂತರಗಳವರೆಗೆ ಉಪವಾಸವಿದ್ದು ಧ್ಯಾನವನ್ನು ಕೈಗೊಂಡು ತನ್ಮೂಲಕ ಪರಬ್ರಹ್ಮದೊಂದಿಗೆ ಸಂವಹನ ಏರ್ಪಡಿಸಿಕೊಳ್ಳುತ್ತಾರೆ.
೪೭೪.ಯಶಸ್ವಿನೀ-ಇದು ಸರಿಯಾಗಿದೆ.
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
In reply to ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ by makara
ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ
ಶ್ರೀಧರರೆ, ಈ ತಿದ್ದುಪಡಿ ಸೂಕ್ತವಾಗಿದೆಯೆ ನೋಡಿ. ಸಿದ್ದೇಶ್ವರೀ ಕಡೆಯ ಸಾಲಿಗೆ ಎರಡು ಸಾಧ್ಯತೆ ಸೇರಿಸಿದ್ದೇನೆ - ಸೂಕ್ತವಾದ ಒಂದನ್ನು ಉಳಿಸಿಕೊಳ್ಳೋಣ.
ಸ್ಪಾಂಟೇನಿಟಿಯ ಕುರಿತು ನಿಮ್ಮ ಮತ್ತು ಪಾರ್ಥರ ಅನಿಸಿಕೆಗೆ ಧನ್ಯವಾದಗಳು. ನನ್ನ ಪ್ರಕಾರ ಅದಕ್ಕೆ ಮೂಲಕಾರಣ ನೀವೆಲ್ಲಾ ಮತ್ತು ಇನ್ನೂ ಹಲವಾರು ಸಂಪದಿಗರು ನೀಡುತ್ತಿರುವ ಸತತ ಬೆಂಬಲ, ಉತ್ತೇಜನ ಹಾಗೂ ಪ್ರೋತ್ಸಾಹ (ಸದ್ಯಕ್ಕೆ 'ಏನು ಕಳಪೆಯಾಗಿ ಬರಿತಾನಪ್ಪ' - ಅಂತ ಪುಣ್ಯವಶಾತ್ ಇನ್ನೂ ಯಾರು ಬೈಯ್ಕೊಳ್ಳೊಕೆ ಆರಂಭಿಸಿಲ್ಲ ಅಂದುಕೊಂಡಿದ್ದೀನಿ! ).
ಆದರೂ ತಿದ್ದುವಿಕೆ ಕಡಿಮೆಯಾಗುವಂತೆ ಬರೆಯಲು ಇನ್ನು ಸಾಧ್ಯವಾಗುತ್ತಿಲ್ಲ, ನೋಡಿ (ಸಮಯಾಭಾವದಿಂದ) :-)
೪೬೯. ವಾಮದೇವೀ
ಈಶಾನ ತತ್ಪುರುಷ ಅಘೋರ ವಾಮದೇವ ಸದ್ಯೋಜಾತ
ಪಂಚಮುಖಿ ಶಿವ ಪ್ರತಿನಿಧಿಸುತಲಿಹ ಪಂಚ ಮಹಾಭೂತ
ವಾಮದೇವನ ಸತಿ ವಾಮದೇವೀ ರೂಪದಿ ಲಲಿತೆ ಎಡಕೆ
ಕೆಂಪಲವನ ಬಿಂಬಿಸುತೆ, ವಾಮಾಚಾರ ಪೂಜೆಗೊಲಿವಾಕೆ!
೪೭೦. ವಯೋವಸ್ಥಾ-ವಿವರ್ಜಿತಾ
ವಿಶ್ವ ಶಕ್ತಿಯ ಸ್ಥಾಯಿ ನಿರ್ದಿಷ್ಟ, ಬದಲಾಗದ ಮೊತ್ತ
ವೃದ್ದತ್ವವಿಲ್ಲದಾ ಲಲಿತೆ, ವಯೋವಸ್ಥಾ ವಿವರ್ಜಿತಾ
ಸಮಸ್ತ ವಿಶ್ವ ಶಕ್ತಿಯ ಆಗರ, ಆದಿ ಪರಾಶಕ್ತೀ ಘನತೆ
ವಯೋಪರಿಣಾಮಕತೀತೆ, ಬ್ರಹ್ಮದ ಲಕ್ಷಣಾ ಲಲಿತೆ!
೪೭೧. ಸಿದ್ದೇಶ್ವರೀ
ಆಷ್ಟಮಸಿದ್ದಿ ಅತಿಮಾನುಷ ಶಕ್ತಿ, ಪಡೆದ ಸಿದ್ದರೊಡತಿ ಈಶ್ವರೀ
ಕುಂಡಲಿನೀ ಧ್ಯಾನದಿ ಸಿದ್ದಿ ಪಡೆದ, ಸಿದ್ದರಿಂ ಪೂಜಿತೆ ಸಿದ್ದೇಶ್ವರೀ
ಕಿರೀಟಚಕ್ರ ಸಹಸ್ರಾರದೆ ನಿಶ್ಚಲ ಶಿವ, ಕುಂಡಲಿನೀ ರೂಪದೆ ಶಕ್ತಿ
ಶಿವನತ್ತ ತಾನೊಬ್ಬಳೆ ಸಾಗಿ ಲಲಿತೆ, ಕಾಮಕಲಾ ರೂಪ ನಿಯುಕ್ತಿ!
೪೭೧. ಸಿದ್ದೇಶ್ವರೀ
----
-----
--------
ಶಿವನತ್ತ ತಾನೊಬ್ಬಳೆ ಸಾಗಿ ಲಲಿತೆ, ಕಾಮಕಲಾ ರೂಪದೆ ಮುಕ್ತಿ!
೪೭೨. ಸಿದ್ಧ-ವಿದ್ಯಾ
ಸಿದ್ದ-ವಿದ್ಯಾ ನಿತ್ಯವಾದ ಪಂಚದಶೀ ಮಂತ್ರ, ಶ್ರದ್ದಾ - ಭಕ್ತಿ ಪಠನೆಗೆ
ಸುಪ್ತ ಕಲ್ಯಾಣಶಕ್ತಿ ಧಾರೆಯೆರೆವ ಪುರುಷ-ಮಂತ್ರ ಸ್ತ್ರೀ-ವಿದ್ಯಾ ಬಗೆ
ಅರ್ಹತೆ ಸೂಕ್ತತೆ ಗುರುಜ್ಞಾನ, ಆತ್ಮಬೀಜ ದೀಕ್ಷೆ ಮಂತ್ರಕೆ ಪ್ರತ್ಯಯ
ಪೂರ್ವೋತ್ತರ ಕವಚೀಕರಣ, ಗುರು ವಿವೇಚನೆಯ ಮಂತ್ರ ವಿಷಯ!
೪೭೩. ಸಿದ್ಧ-ಮಾತಾ
ಪರಮೋನ್ನತ ಮಾತೃಸ್ವರೂಪ, ಸಿದ್ಧ ಯೋಗಿಗಳಿಗೂ ಮಾತಾ
ಆ ಭಕ್ತರ ತಾಯಂತೆ ಪೊರೆವ, ಲಲಿತೆ ಕರುಣಿಸಿ ಸಿದ್ಧ-ಮಾತಾ
ಸರ್ವಸಂಗ ಪರಿತ್ಯಾಗಿ ಸಿದ್ಧರು, ಶಿವಶಕ್ತಿಯೊಡನಿಹ ಸಂಬಂಧ
ಕುಂಡಲಿನೀಶಕ್ತಿ ನಿರಾಹಾರ ಧ್ಯಾನ, ಬ್ರಹ್ಮ ಸಂವಹನದೆ ಸದಾ!
ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು
In reply to ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ by nageshamysore
ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ
ನಾಗೇಶರೆ,
ಈಗ ಪದ್ಯಗಳು ಹೆಚ್ಚು ಅರ್ಥಸ್ಪಷ್ಟತೆಯಿಂದ ಮೂಡಿ ಬಂದಿವೆ. ಸಿದ್ದೇಶ್ವರೀ ಪದ್ಯದಲ್ಲಿ ಮೊದಲನೇ ಪಂಕ್ತಿಯೇ ನಾಮದ ವಿವರಣೆಗೆ ಹೆಚ್ಚು ಸೂಕ್ತವಾಗಿರುವುದರಿಂದ ಅದನ್ನೇ ಉಳಿಸಿಕೊಳ್ಳೋಣ. ಸಿದ್ಧ ಮಾತಾದ ಕಡೆಯ ಸಾಲು ಪುನಃ ಸ್ವಲ್ಪ ಪರಿಷ್ಕರಣೆ ಮಾಡಬೇಕಾಗಬಹುದು.
ಕುಂಡಲಿನೀಶಕ್ತಿ ನಿರಾಹಾರ ಧ್ಯಾನ, ಬ್ರಹ್ಮ ಸಂವಹನದೆ ಸದಾ!
ಸಿದ್ಧರು ಕುಂಡಲಿನೀ ಶಕ್ತಿಯ ಪ್ರಭಾವದಿಂದ ನಿರಂತರ ಧ್ಯಾನದಲ್ಲಿರಲು ಸಾಧ್ಯವಾಗುತ್ತದೆ; ಏಕೆಂದರೆ ಅವರಿಗೆ ತಿನ್ನುವ ಕುಡಿಯುವ ಜಂಜಡವಿರುವಿದಿಲ್ಲ. ಏಕೆಂದರೆ ಅವರ ದೇಹಕ್ಕೆ ಅವಶ್ಯವಿರುವ ಶಕ್ತಿಯು ಅವರಿಗೆ ಅದರ ಕುಂಡಲಿನೀ ಶಕ್ತಿಯ ಮೂಲಕ ದೊರೆಯುತ್ತದೆ. ಹೀಗೆ ಅದು ನಿರಂತರ ಶಕ್ತಿಯನ್ನು ಒದಗಿಸುವುದರಿಂದ ಅವರು ಬ್ರಹ್ಮದೊಂದಿಗೆ ಸಂವಹನೆ ಏರ್ಪಡಿಸಿಕೊಳ್ಳು ಸಾಧ್ಯವಾಗುತ್ತದೆ. ಹಾಗಾಗಿ ಇಲ್ಲಿ ಸ್ವಲ್ಪ ಅರ್ಥ ಪಲ್ಲಟವಾದಂತೆನಿಸುತ್ತದೆ. ಈ ಅರ್ಥ ಹೊರಹೊಮ್ಮುವಂತೆ ಸೂಕ್ತ ಬದಲಾವಣೆ ಮಾಡಲು ಸಾಧ್ಯವೇ ನೋಡಿ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
ಇದಕ್ಕೂ ನೀವು ಸ್ಪಾಂಟೇನಿಯಸ್ಸಾಗಿ ಉತ್ತರಿಸುವಿರೆಂದು ಗೊತ್ತು :)
In reply to ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ by makara
ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ
ಶ್ರೀಧರರೆ, ಇಕೊ ತೆಗೆದುಕೊಳ್ಳಿ ಸ್ಪಾಂಟೇನಿಯಸ್ ಉತ್ತರ :-)
೪೭೩. ಸಿದ್ಧ-ಮಾತಾ
ಪರಮೋನ್ನತ ಮಾತೃಸ್ವರೂಪ, ಸಿದ್ಧ ಯೋಗಿಗಳಿಗೂ ಮಾತಾ
ಆ ಭಕ್ತರ ತಾಯಂತೆ ಪೊರೆವ, ಲಲಿತೆ ಕರುಣಿಸಿ ಸಿದ್ಧ-ಮಾತಾ
ಸರ್ವಸಂಗ ಪರಿತ್ಯಾಗಿ ಸಿದ್ಧರು, ಶಿವ-ಶಕ್ತಿಯೊಡನಿಹ ಸಂಬಂಧ
ನಿರಂತರ ಕುಂಡಲಿನೀಶಕ್ತಿ, ಧ್ಯಾನದಾಸಕ್ತಿ ಬ್ರಹ್ಮಸಂವಹನ ಕದ!
೪೭೧. ಸಿದ್ದೇಶ್ವರೀ
ಆಷ್ಟಮಸಿದ್ದಿ ಅತಿಮಾನುಷ ಶಕ್ತಿ, ಪಡೆದ ಸಿದ್ದರೊಡತಿ ಈಶ್ವರೀ
ಕುಂಡಲಿನೀ ಧ್ಯಾನದಿ ಸಿದ್ದಿ ಪಡೆದ, ಸಿದ್ದರಿಂ ಪೂಜಿತೆ ಸಿದ್ದೇಶ್ವರೀ
ಕಿರೀಟಚಕ್ರ ಸಹಸ್ರಾರದೆ ನಿಶ್ಚಲ ಶಿವ, ಕುಂಡಲಿನೀ ರೂಪದೆ ಶಕ್ತಿ
ಶಿವನತ್ತ ತಾನೊಬ್ಬಳೆ ಸಾಗಿ ಲಲಿತೆ, ಕಾಮಕಲಾ ರೂಪ ನಿಯುಕ್ತಿ!
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
In reply to ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ by nageshamysore
ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ
ನಾಗೇಶರೆ,
ಬೇರೆ ಕಾರ್ಯದಲ್ಲಿ ನಿರತನಾಗಿದ್ದರಿಂದ ಇದನ್ನು ನಾನೇ ಸ್ಪಾಂಟೇನಿಯಸ್ ಆಗಿ ನೋಡಲಾಗಲಿಲ್ಲ :) ಈಗ ಈ ಕಂತನ್ನು ಅಂತಿಮಗೊಳಿಸಬಹುದೆನಿಸುತ್ತದೆ.
ಶುಭ ರವಿವಾರ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ by makara
ಉ: ೧೧೮. ಲಲಿತಾ ಸಹಸ್ರನಾಮ ೪೬೯ರಿಂದ ೪೭೪ನೇ ನಾಮಗಳ ವಿವರಣೆ
ಶ್ರೀಧರರೆ, ನಿಮ್ಮ ಸ್ಪಾಂಟೇನಿಟಿ 120ನೆ ಕಂತಿನ ಸಿದ್ದತೆಯಲ್ಲಿ ತಲ್ಲೀನವಾಗಿತ್ತೇಂದು ಕಾಣುತ್ತದೆ :-)
ಈ 118ನೆ ಕಂತನ್ನು ಅಂತಿಮಗೊಳಿಸಿ ಹಾಕಿದ್ದೇನೆ.
ತಮಗೂ ಶುಭ ರವಿವಾರ :-)
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು