ಕೃಷ್ಣ..ಕೃಷ್ಣ..ಕೃಷ್ಣ.. - ಕೃಷ್ಣ - ಗಣೇಶ
ಕೃಷ್ಣ ಸಹ ನಗುತ್ತ ಹೇಳಿದ
"ಬಹುಷಃ ಹಾಗೆ ಹಾಗಿದೆ ಗಣಪ, ಇಲ್ಲಿ ಪ್ರತಿ ಕ್ಷಣ ಮನುಷ್ಯ ನಡೆಯುತ್ತಿರುವ ರೀತಿಯನ್ನು ಗಮನಿಸಿದರೆ , ದುಃಖವೆನಿಸುತ್ತೆ. ಅಧಿಕಾರ ಹಣ ಹೆಣ್ಣು ಕುಡಿತ ಲೋಕವನ್ನೆಲ್ಲ ವ್ಯಾಪಿಸಿದೆ. ಅರ್ಥವಿಲ್ಲದ ದ್ವೇಷ ದೇಶವನ್ನೆಲ್ಲ ಆವರಿಸಿದೆ. ಒಬ್ಬರು ಮತ್ತೊಬ್ಬರನ್ನು ನಂಬುವದಿಲ್ಲ ಜಾತಿ ಜಾತಿಯ ನಡುವೆ , ಮತಗಳ ನಡುವೆ ಅನುದಿನ ಹೊಡೆದಾಟ. ಎಲ್ಲಿ ಅಂದರೆ ಅಲ್ಲಿ ಸ್ಪೋಟಿಸುವ ಬಾಂಬ್ ಗಳು ಮತ್ತೆ ಮರುದಿನ ಏನು ಆಗಲಿಲ್ಲ ಎನ್ನುವಂತೆ ಓಡಾಡುವ ಜನ. ಮತ್ತೆ ರಾಕ್ಷಸ ರಾಜ್ಯ ತಲೆ ಎತ್ತಿದೆಯ ಅನ್ನುವ ಸಂದೇಹ ಕಾಡುತ್ತದೆ. ನೀನಾದರೆ ವರುಷಕ್ಕೊಂದು ದಿನ ಇಲ್ಲಿ ಬಂದು ಹೋದರೆ ಮುಗಿಯಿತು , ಅವರು ಕೊಡುವ ಪ್ರಸಾದ ಸ್ವೀಕರಿಸಿ , ಆಶೀರ್ವಾದ ಮಾಡಿ ಹೊರಟರೆ ಆಯಿತು , ಒಂದು ತರಕ್ಕೆ ಸುಖ " ಎಂದ ಕೃಷ್ಣ ಗಣಪನನ್ನು ರೇಗಿಸುತ್ತ
ಗಣಪ :
‘ಅಯ್ಯೊ ಕೃಷ್ಣ ನಿನಗೆ ತಿಳಿಯದು ಅವರು ನೈವೇಧ್ಯ ಎಂದು ಇಟ್ಟಿರುವದೆಲ್ಲ ನಿಜವಲ್ಲ, ಎಲ್ಲವು ಕೃತಕ ಹೂ, ಪ್ಲಾಸ್ಟಿಕ್ಕಿನ ಹಣ್ಣು ಗಳು, ಹೋಗಲಿ ಎಂದರೆ ಕುಳಿತುಕೊಳ್ಳಲು ಒಂದು ಸರಿಯಾದ ಸ್ಥಳ ಸಹ ಸಿಗುವದಿಲ್ಲ. ಎಲ್ಲೊ ಚರಂಡಿ ಮೇಲೊ ರಸ್ತೆಯ ಮಧ್ಯದಲ್ಲೊ ಒಂದು ಜಾಗ ಮಾಡಿರುತ್ತಾರೆ. ಕಿವಿಗೆ ಹಿಂಸೆಯಾಗುವಂತೆ ಚಿತ್ರ ವಿಚಿತ್ರ ಹಾಡುಗಳನ್ನು ಹಾಕಿ ’ಚೀನಿ ಮಾದರಿ’ ಯಲ್ಲಿ ಚಿತ್ರಹಿಂಸೆ ಕೊಡುತ್ತಾರೆ, ಕಡೆಗೆ ನನ್ನನ್ನು ನೀರಿಗೆ ಬಿಡುವ ನೆಪದಲ್ಲಿ ರಸ್ತೆ ಮಧ್ಯ ಗುಂಪುಗಳ ಘರ್ಷಣೆ ಮಾಡಿ ಹಲವರ ಪ್ರಾಣ ಹೋಗಲು ಕಾರಣರಾಗುತ್ತಾರೆ, ನಾನು ಚೌತಿಗೆ ಭೂಮಿಗೆ ಬರುವುದು ಬಿಟ್ಟು ತುಂಬಾ ಕಾಲವಾಯಿತಪ್ಪ." ಎಂದ
ಕೃಷ್ಣ ಮತ್ತೆ ಕೇಳಿದ
“ಗಣೇಶ ಈಗ ಗಮನಿಸಿರುವೆಯ , ಮತ್ತೆ ನಿನ್ನ ಬಗ್ಗೆ ಸಹ ವಿವಾದ ಎಬ್ಬಿಸಿದ್ದಾರೆ, ಒಂದು ಪುಸ್ತಕವನ್ನೆ ಬರೆದಿದ್ದಾರೆ ನೋಡು ನಿನ್ನ ಬಗ್ಗೆ , ಆದರೂ ನಿನ್ನದೆ ಉತ್ತಮ ನೋಡು ಗಣಪ. ನನ್ನ ಬಗ್ಗೆ ಯಾರು ಏನೆ ಅಂದರೂ ಯಾವಗಲು ವಿರೋಧವೆ ಇಲ್ಲ ,ಇರಲಿಲ್ಲ ಅನ್ನುವಂತಿತ್ತು, ನಿನ್ನ ಬಗ್ಗೆ ಒಂದು ಪುಸ್ತಕ ಬರೆದಿದ್ದಕ್ಕೆ ಬರೆದ ವ್ಯಕ್ತಿಯನ್ನು ಸೆರೆಮನೆಗೆ ಅಟ್ಟಿದ್ದಾರೆ ಆ ಪುಸ್ತಕವನ್ನು ಯಾರು ಓದಬಾರದೆಂದು ಹೇಳಿದ್ದಾರೆ, ಜನರು ಪಕ್ಷಪಾತಿಗಳು ಬಿಡು, ನಿನಗೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟವರು, ನನ್ನ ಬಗ್ಗೆ ಒಂದು ಸಣ್ಣ ಅನುಕಂಪವೂ ಇಲ್ಲ’
ಗಣೇಶ ನಗುತ್ತಿದ್ದ
‘ಅದಕ್ಕೆ ನೀನೆ ಕಾರಣವಲ್ಲವೆ ಕೃಷ್ಣ. ನಿನ್ನ ಕತೆಯಲ್ಲೊಮ್ಮೆ ಬರುವದಿಲ್ಲವೆ ಶಿಶುಪಾಲನ ಪ್ರಸಂಗದಲ್ಲಿ , ನೀನು ನಿನ್ನ ಸೋದರತ್ತೆಗೆ ಮಾತು ಕೊಟ್ಟಿದ್ದೆಯಂತೆ ಅವನ ನೂರು ತಪ್ಪುಗಳನ್ನು ಕ್ಷಮಿಸುವೆ ಎಂದು , ನೂರ ಒಂದನೆ ತಪ್ಪಿಗೆ ತಾನೆ ನೀನು ನಿನ್ನ ಚಕ್ರ ತೆಗೆದಿದ್ದು. ಹಾಗೆ ಅಂತ ಭಾವಿಸಿ ಜನರು ನಿನ್ನ ಬಗ್ಗೆ ನೂರು ತಪ್ಪು ಮಾಡುತ್ತಲೆ ಇದ್ದಾರೆ, ಮತ್ತೆ ವಿರೋಧವೂ ಇಲ್ಲ“
ಕೃಷ್ಣ ಹೇಳಿದ
“ ಗಣೇಶ ತಮಾಷಿಗಾದರೂ ಸತ್ಯವನ್ನೆ ಹೇಳಿದೆ, ನಾನು ನೂರು ತಪ್ಪು ಎಣಿಸುತ್ತ ಕುಳಿತೆ, ನೀನು ನೋಡು ಚಂದ್ರ ನೋಡಿ ನಕ್ಕನೆಂಬ ಮೊದಲನೆ ಕಾರಣಕ್ಕೆ ಅವನನ್ನು ಶಪಿಸಿದೆ, ನಿನ್ನ ಬಗ್ಗೆ ಎಂತ ಭಯ ಹುಟ್ಟಿತ್ತು ಎಲ್ಲರಲ್ಲಿ, ನಿನ್ನ ತಂದೆಯನ್ನೆ ಎದುರಿಸಿದವನು ನೀನು ಹುಟ್ಟುವಾಗಲೆ. ಅದಕ್ಕೆ ನೋಡು ನಿನ್ನ ಬಗ್ಗೆ ಮೊದಲ ವಿವಾದದ ಪುಸ್ತಕ ಬರೆದವನನ್ನು ಸೆರೆಗೆ ತಳ್ಳಿ ಆ ಪುಸ್ತಕವನ್ನೆ ನಿಷೇದಿಸಿದರು ಅಲ್ಲವೆ, ನೀನು ನನ್ನ ಹಾಗಲ್ಲ ಬಿಡು “
ಎಂದು ಜೋರಾಗಿ ನಗುತ್ತಿದ್ದ
ಗಣೇಶ ಸಹ ನಗುತ್ತ ಹೇಳಿದ
“ನೀನು ಹೇಳಿದ್ದು ನಿಜವೂ ಇರಬಹುದೇನೊ, ನೀನು ನನ್ನ ಹಾಗೆ ಇದ್ದಲ್ಲಿ ನಿನಗೆ ಈ ಪರಿಸ್ಥಿತಿ ಬರುತ್ತಿರಲ್ಲಿಲ್ಲವೇನೊ”
ಕೃಷ್ಣ :
’ ಹೌದೆ, ಹೋಗಲಿ ಬಿಡು ನಿನ್ನದೆ ಒಂದು ರೀತಿ ಸರಿಯಾಯಿತು, ನಾನು ನೋಡು ಉಡುಪಿಯ ದೇಗುಲದ ಒಳಗೆ ನಿಂತಿದ್ದರು ನೆಮ್ಮದಿಯಾಗಿ ಇರಲು ಬಿಡುವದಿಲ್ಲ. ಏನಾದರು ಒಂದು ವಿವಾದ ಇದ್ದೆ ಇರುತ್ತದೆ. ಈಗ ದೈವಭಕ್ತಿಯಾಗಲಿ, ಪಾಪಭೀತಿಯಾಗಲಿ ಯಾರಲ್ಲು ಇಲ್ಲ ಬಿಡು, ಯಾವುದನ್ನು ನಂಬದ ಜನಾಂಗ"
ಗಣಪ
" ಅದು ಸರಿ ಕೃಷ್ಣ, ಈಗ ಲೋಕದ ಪಾಪದ ಕೊಡ ತುಂಬಿದೆ, ಅಂದ ಹಾಗೆ ನೀನೆ ಹೇಳುತ್ತಿದ್ದೆಯಲ್ಲ, ಯಾವಾಗ ಪಾಪ ಮಿತಿಮೀರುವುದೊ, ಸಜ್ಜನರು ಸಂಕಟದಲ್ಲಿರುವರೊ, ದುರ್ಜನರ ಅಟ್ಟಹಾಸ ಮಿತಿಮೀರಿ ಧರ್ಮಕ್ಕೆ ಚುತಿ ಬರುವುದೊ ಆಗ ನಾನು ಅವತಾರ ಎತ್ತುವೆನೆಂದು, ಈಗ ನೀನು ಪುನಃ ಅವತಾರ ಎತ್ತಲು ಸರಿಯಾದ ಕಾಲವಲ್ಲವೆ ?. ಇನ್ನೊಮ್ಮೆ ನೀನು ಏಕೆ ಭೂಮಿಯಲ್ಲಿ ಅವತಾರವೆತ್ತಿ ಬರಬಾರದು"
ಕೃಷ್ಣ
" ಇದೆ ನೋಡು ಗಣಪ ನನ್ನ ತಾಪತ್ರಯ, ಎಲ್ಲರು ತಮ್ಮ ಮಾತುಗಳನ್ನು ನನ್ನ ಬಾಯಲ್ಲಿ ತುರುಕಿದರು, ನಾನು ಎಲ್ಲವನ್ನು ಮೌನವಾಗಿ ಸಹಿಸಬೇಕಾಯಿತು. ಪ್ರಪಂಚದಲ್ಲಿ ಯಾರಿಗು ತಾವು ಕಷ್ಟಪಡುವುದು ಬೇಡ. ಯಾವ ಅನ್ಯಾಯ ಎದುರಿಸುವುದು ಬೇಡ, ಯಾರೊ ಒಬ್ಬ ಬಂದು ನಮ್ಮನ್ನೆಲ್ಲ ಕಾಪಾಡುತ್ತಾನೆ ಎನ್ನುವ ಮನೋಭಾವ " ಎಂದ ತುಸು ಬೇಸರದಲ್ಲಿ.
ಗಣಪನಿಗೆ ಆಶ್ಚರ್ಯ,
"ಅಂದರೆ ನಿನ್ನ ಮಾತು ಏನು ಕೃಷ್ಣ , ಅವತಾರ ಧರ್ಮರಕ್ಷಣೆ ಎನ್ನುವ ಎಲ್ಲ ಮಾತುಗಳು ಸುಳ್ಳೆ. ನಿನ್ನ ದಶಾವತಾರದ ವಿಚಾರ ಸುಳ್ಳೆ?"
"ಸುಳ್ಳು ಎಂದು ಹೇಗೆ ಹೇಳಲಿ ಗಣಪ, ಸಮಾಜದಲ್ಲಿ ಅನ್ಯಾಯಗಳಾದಾಗ ಅದನ್ನು ಎದುರಿಸುವುದು ಧರ್ಮ. ಅದು ಪ್ರತಿಯೊಬ್ಬರ ಕರ್ತವ್ಯ ಅದನ್ನು ನಾನು ಮಾಡಿದ್ದೇನೆ. ಅಂದ ಮಾತ್ರಕ್ಕೆ ಇವನು ಮಾಡುತ್ತಾನೆ ಎಂದು ಎಲ್ಲರು ಸುಮ್ಮನಿರುವುದು ಅಧರ್ಮವಲ್ಲವೆ. ಇನ್ನು ದಶಾವತಾರದ ವಿಷಯ , ಅದು ಯಾರ ಕಲ್ಪನೆಯೊ ಹೀಗೆ ಬೆಳೆದಿದೆ . ನನ್ನನ್ನು ಎಂಟನೆಯ ಅವತಾರವೆಂದರು. ವೈದಿಕರ ನಂಬಿಕೆಗಳನ್ನು ವಿರೋಧಿಸುವ ಬುದ್ದನನ್ನು ಒಂಬತ್ತನೆ ಅವತಾರ ಎಂದರು. ಇನ್ನು ಆಗದೆ ಇರುವ ಅವತಾರವನ್ನು ಲೆಕ್ಕ ಹಾಕಿ ಕಲ್ಕಿಯ ಅವತಾರವನ್ನು ಹತ್ತನೆ ಅವತಾರವೆಂದರು. ಭಾಗವತರು ಭಕ್ತಿಯಿಂದ ಹೇಳಿದ್ದನ್ನು ಸಾಮಾನ್ಯ ಮುಗ್ದರು ನಂಬಿದರು"
ಎಂದ ಕೃಷ್ಣ
"ಅಲ್ಲಿಗೆ ಏನು ಕೃಷ್ಣ, ಈ ಅವತಾರಗಳೆಲ್ಲ ಸುಳ್ಳು ಅನ್ನುವೆಯ, ನಿನ್ನನ್ನು ವಿಷ್ಣುವಿನ , ದೇವರ ಅಂಶವೆನ್ನುವರಲ್ಲ ಅದೆಲ್ಲ ಸುಳ್ಳು ಎಂದು ಹೇಳುವೆಯ? ನೀನು ದೇವರು ಎನ್ನುವ ವಾದವೆ ಸುಳ್ಳೆ"
೧೪-೦೯-೧೩
ಚಿತ್ರ ಮೂಲ : krishna ganesha
ಮುಂದುವರೆಯುವುದು …..
Comments
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಕೃಷ್ಣ - ಗಣೇಶ
ಕೃಷ್ಣನಿಗೂ ಗಣೇಶನಿಗೂ ಪ್ರತಿ ಕಂತಿನ ಲಿಂಕನ್ನು ಮಿಂಚಂಚೆಯಲ್ಲಿ ಕಳಿಸಿಬಿಟ್ಟರೆ ಚೆನ್ನಾಗಿರುತ್ತದೆ - ಅವರೂ ನೇರ ಪ್ರತಿಕ್ರಿಯೆಯನ್ನು ಕೊಡಬಹುದು (ಸುಮ್ಮನೆ ಹಾಸ್ಯಕ್ಕೆ ಹೇಳುತ್ತಿದ್ದೇನೆ) :-)
ಇಬ್ಬರ ಸಂಭಾಷಣೆ ಚೆನ್ನಾಗಿ ಆರಂಭವಾಗಿದೆ.
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
In reply to ಉ: ಕೃಷ್ಣ..ಕೃಷ್ಣ..ಕೃಷ್ಣ.. - ಕೃಷ್ಣ - ಗಣೇಶ by nageshamysore
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಕೃಷ್ಣ - ಗಣೇಶ
ಈಗೇನೊ ಚೆನ್ನಾಗಿದೆ.... ಆಮೇಲೆ ಮುಂದಿನ ಕಂತುಗಳನ್ನು ಓದುತ್ತ ಇಬ್ಬರೂ ನನ್ನನ್ನು ಓಡಿಸಿಕೊಂಡು ಬಂದರೆ ಕಷ್ಟ ....!!
In reply to ಉ: ಕೃಷ್ಣ..ಕೃಷ್ಣ..ಕೃಷ್ಣ.. - ಕೃಷ್ಣ - ಗಣೇಶ by partha1059
ಉ: ಕೃಷ್ಣ..ಕೃಷ್ಣ..ಕೃಷ್ಣ.. - ಕೃಷ್ಣ - ಗಣೇಶ
ಪಾರ್ಥ ಸರ್,
ಪುರಂದರ ದಾಸರ ಹಾಡನ್ನು ಕೇಳಿಲ್ಲವೇ? ದೇವರ ಮೆಚ್ಚಿಸುವುದು ಸುಲಭವಾದ ಕೆಲಸ, ಆದರೆ ಜನರ ಮೆಚ್ಚಿಸುವುದು ಬಲು ಕಷ್ಟ ಎಂದು. ಈ ಜನರನ್ನು ಮೆಚ್ಚಿಸಲಿಕ್ಕಾಗದೇ ದೇವರುಗಳೇ ಈ ಯುಗದಲ್ಲಿ ಎಲ್ಲೋ ಅಡಗಿ ಕುಳಿತಿದ್ದಾರೆ, ಇನ್ನು ಅವರು ಬಂದು ನಿಮ್ಮನ್ನು ಓಡಿಸಿಕೊಂಡು ಬರುತ್ತಾರೆನ್ನುವ ಭಯ ಬೇಡ ಬಿಡಿ :))
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ