ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ..

ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ..

ಹೊರನಾಡುಗಳಲ್ಲಿ ನೆಲೆಸಿದ ಮನಸುಗಳಿಗೆ ತಾಯ್ನಾಡಿನ ತುಡಿತ ಸಹಜವಾಗಿ ಕಾಡುವ ಪ್ರಕ್ರಿಯೆ. ಅಂತೆಯೆ ತಾಯ್ನಾಡಿನಲಿ ಇರುವವರಿಗೆ ಸ್ಥಳೀಯ ಭ್ರಮ ನಿರಸನ, ಸಿನಿಕತೆಯಿಂದ ಹೇಗಾದರೂ ಬಿಡುಗಡೆಯಾಗುವ ಹಂಬಲಿಕೆ. ಹೀಗಾಗಿ ಎರಡೂ ಕಡೆಯಲ್ಲೂ, ಪಕ್ಕದವನ ಮನೆಯ ತೋಟ ಹಸಿರಾಗಿ ಕಾಣುವ ವಿಪರ್ಯಾಸ. ಒಟ್ಟಾರೆ, ಯಾವ ರೀತಿಯಲ್ಲೊ ಸಿಗದುದರ ಹುಡುಕಾಟವಂತೂ ತಪ್ಪಿದ್ದಲ್ಲಾ. ಆದರೆ ಆ ಹುಡುಕಾಟದ ಹವಣಿಕೆಯೆ ಸೃಜನಶೀಲತೆಯ, ಕ್ರಿಯಾಶೀಲತೆಯ ಮೂಲ ಸರಕಾಗಿ ಹೊಸ ಆಯಾಮಗಳತ್ತ ಚಿಮ್ಮಿಸಿದರೆ ಅಚ್ಚರಿಯೇನೂ ಇಲ್ಲ; ಮತ್ತೆ ಕೆಲವೆಡೆ ಹತಾಶೆಯ ಪಾತಾಳಕ್ಕಿಳಿಸಿದರೂ ಸೋಜಿಗವೇನಲ್ಲ. ಈ ಬದಿಯ ತಾಕಲಾಟದ ಕೆಲ ತುಣುಕನ್ನು ಹಿಡಿದಿಡುವ ಸರಳ ಯತ್ನ - ಈ ಕಾವ್ಯ ಬರಹ.

ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ...
_________________________________

ಬೇಕು ಸಿಂಗಪುರದಲೊಂದು ಚಾಮುಂಡಿ ಬೆಟ್ಟ
ಜತೆಗೆ ಸೆಗಣಿ ಸಾರಿಸಿದ ನೆಲ ಏಣಿಯಾ ಅಟ್ಟ
ಹಾಗೆ ಖಾಲಿ ನೆಲದ ಸೈಟು ಸ್ವಂತಕ್ಕೆ ಸಗಟು
ಒಳಗೊಂದು ಬಂಗಲೆ ಕೈತೋಟ ಮರ ಸೊಟ್ಟುII

ಕಾರಂಜಿ ಕುಕ್ಕರಹಳ್ಳಿ ಕೆರೆಗಳ ಕೊಚ್ಚೆ ಜತೆಗಿಟ್ಟು
ಅಗ್ರಹಾರದಾ ಜಟಕಾ ಬಂಡಿಯೊಂದನು ಕಟ್ಟು
ಸಾವಿರ ಮೆಟ್ಟಿಲ ಪಾದದ ಅಷ್ಟಿಷ್ಟಾದರು ಇಟ್ಟು
ಚಬುಕು ಟಕಟಕನೆನಿಸಿರೆ ನಡೆಸುತ ಸಾರೋಟುII

ಪುರಮ್ಮುಗಳ ಬೀದಿಯಲೊದ್ದಾಡುವ ಮಲ್ಲಿಗೆ ಬಳ್ಳಿ
ಪೀಪಿ ಕೇಸರಿ ಹೂವ್ವ ಬಿರಿದ ಮನೆ ಮೂಲೆಯ ಕಳ್ಳಿ
ಖಾಲಿ ಸೈಟ ಪಾರ್ಥೇನಿಯಂ ಸಡ್ಡು ಹೊಡೆದು ಎಕ್ಕ
ನೀಲಿ ಬಿಳಿ ಸ್ಪಟಿಕದೆಸಳು ಆರಿಸೊ ಬುಟ್ಟಿಯ ಪಕ್ಕII

ಗಲ್ಲಿಗಲ್ಲಿಲ್ಲೊಂದು ಕಾಕಾ ಸೇಟು ಡೈಮಂಡ್ ಟೀ ಕಿಕ್ಕ
ರಸ್ಕು ಬಿಸ್ಕತ್ತುಗಳ ಅದ್ದಿ ಸಿಗರೇಟಿಗರ ಸೇದೊ ಲೆಕ್ಕ
ನಂಜುಮಾಳಿಗೆ ವೃತ್ತ ಲೋಕಾಭಿರಾಮದಲಿ ಮಾತು
ಬರಿ ಕಾಡು ಹರಟೆ ಖಾಲಿ ಮಾತಲೆ ಕಳೆದ ಹೊತ್ತುII

ಅಶ್ವತ್ಥಕಟ್ಟೆಯಡಿ ಕೂತು ದೇವರಿಗೊಪ್ಪಿಸಿದ ವರದಿ
ಅರ್ಧಕರ್ಧವದರಲಿ ಬರಿ ಸಿನೆಮ ನೋಡಿದ ಸುದ್ಧಿ
ಆ ಹುಡುಗಿ ಈ ಹುಡುಗ ಅವರಿವರದೇ ಮಾತುಕಥೆ
ಯಾಕೊ ಕಾಣೆಯಾಗಿವೆ, ಹೋಯ್ತೆಲ್ಲಿ ನಿಮಗೆ ಗೊತ್ತೆ?

ಹತ್ತೆ ನಿಮಿಷದ ದೂರ, ಅರಮನೆಯಾ ಸಪರಿವಾರ
ಇದ್ದರು ಸಾಕು ಭಾಗ, ನಾವೆ ಹಚ್ಚೊ ದೀಪಾಲಂಕಾರ
ಟಿಕೆಟ್ಟಿಲ್ಲದೆ ಕೂತು ನೋಡುವಾ ಪ್ರಾಂಗಣ ದರ್ಬಾರು
ಮುಳುಗೇಳುವ ಜೋಲೆ ರವಿರಥದ ಆರಾಮ ಛೇರುII

ಚಿಕ್ಕ ದೊಡ್ಡ ಮಾರ್ಕೆಟ್ಟು, ಸರ್ಕಲ್ಲಿನಲೆ ಹಣ್ಣು,ಹೂಕಟ್ಟು
ಗುರುಗಳೊ ಪ್ರಭುಗಳೊ ಮೈಸೂರು ಪಾಕಿನ ಪ್ಯಾಕೆಟ್ಟು
ಪುಟ್ಟಿ ಬುಟ್ಟಿ ಬಿದಿರ ತಟ್ಟೆಯಲಿಟ್ಟು ಮಾರುವವರ ದೃಶ್ಯ
ಚೌಕಾಸಿ ಮಾಡುತಲೆ ಸೊಗವನನುಭವಿಸೊ ಸಂತೋಷII

ಹೀಗಿದೆ ನೋಡಿ ವಿಪರ್ಯಾಸದ ಅಸಂಗತಗಳ ತುಡಿತ
ಅಲ್ಲಿರುವವರಿಗೆ ನಮ್ಮೂರ ಸಿಂಗಪುರಿಸುವ  ಕೈ ಕಡಿತ
ಇಲ್ಲಿರುವ ನಮಗೊ ನಮ್ಮೂರುಗಳದೆ ಸರಿ ಹುಡುಕಾಟ
ಸಿಕ್ಕಿದ ಹೋಲಿಕೆ ಸಾಮ್ಯತೆಯೆಲ್ಲಾ ನಮ್ಮ ತಕ್ಷಣ ನೆಂಟII

ಯಾವುದೊ ಬೇರ ತವರು, ಹೊಟ್ಟೆಪಾಡಿಗೆಷ್ಟು ತರದ ಸೂರು
ಇಲ್ಲಿದ್ದಾಗಲ್ಲಿನ ತುಂತುರು, ಅಲ್ಲಿದ್ದಾಗಿಲ್ಲಿಗೋಡಿಸೊ ಕೊಸರು
ತುಡಿತಗಳೆ ಹೀಗೆ ಮೊದಲು ಹೊಟ್ಟೆಗೆ ಗೇಣು ಬಟ್ಟೆಗೆ ಯುದ್ಧ
ತುಂಬುತಲೆ ಹೊಟ್ಟೆ ಬಟ್ಟೆ, ಬೌದ್ದಿಕ ಭಾವುಕ ತೆವಲ ಸಮೃದ್ಧII

ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು

Comments

Submitted by nageshamysore Sat, 09/14/2013 - 18:41

In reply to by partha1059

ಪಾರ್ಥಾ ಸಾರ್, ಕಳೆದ ಬಾರಿ ಊರಿಗೆ ಬಂದಾಗ ನಮ್ಮ ಹಳ್ಳಿಯ ಮನೆಗಳಲ್ಲಾದರೂ ಸೆಗಣಿ ನೆಲ ಕಾಣಿಸುತ್ತೇನೊ ಅಂದುಕೊಂಡು ಹೋದರೆ - ಎಲ್ಲಿವೆ? ಎಲ್ಲಾ ನಾಪತ್ತೆ! ಹಳೆಯದನ್ನೆಲ್ಲ ಒಡೆದು ಅಲ್ಲೂ ತಾರಸಿ ಮನೆಗಳನ್ನು ಮಾಡಿಬಿಟ್ಟಿದ್ದಾರೆ. ಕೆಲವು ಮನೆ ಮುಂದೆ ಅಂಗಳದಲ್ಲಿ ಸಾರಿಸಿದ ಸೆಗಣಿ ನೆಲ ಬಿಟ್ಟರೆ ಇನ್ನೆಲ್ಲೂ ಅದರ ಸುಳಿವೆ ಕಾಣಲಿಲ್ಲ. ಮನೆಯೊಳಗಿನ ಏಣಿಯೂ ಅಷ್ಟೆ. ತುರ್ತು ಬಳಕೆಗೆ ಎಂದು ಮನೆ ಹಿಂದೆ ಒರಗಿಸಿಟ್ಟ ಏಣಿಗಳು ಒಂದೆರಡು ಕಣ್ಣಿಗೆ ಬಿತ್ತಷ್ಟೆ. ಆ ಏಣಿಯನ್ನು ಮಾಡುವ ಮೇದರ ಕೇರಿಯತ್ತ (ಮೈಸೂರಿನಲ್ಲಿ) ಹೋಗಿದ್ದೆ  - ಅಲ್ಲಿ ಮಾತ್ರ ಇನ್ನು ಮಾಡುವ ಕೆಲಸ ಮುಂದುವರೆದಿದೆ. ಗಿರಾಕಿ ಯಾರಿದ್ದಾರೊ ಗೊತ್ತಿಲ್ಲ. ಬಹುಶಃ ಸುಣ್ಣ ಬಣ್ಣ ಹೊಡೆಯುವವರಷ್ಟೆ ಕೊಳ್ಳುತ್ತಾರೆಂದು ಕಾಣುತ್ತದೆ, ಮುಖ್ಯವಾಗಿ :-)   ಧನ್ಯವಾದಗಳೊಂದಿಗೆ - ನಾಗೇಶ ಮೈಸೂರು  
Submitted by Vasant Kulkarni Sun, 09/15/2013 - 14:58

ನಾಗೇಶ್ ಅವರೆ, ತುಂಬಾ ಸುಂದರವಾದ ಕವನ. ಇಲ್ಲಿರೋ ನಮ್ಮ ಮನಸ್ಸಿನ ತುಮುಲಗಳನ್ನೆಲ್ಲಾ ಸರಳವಾಗಿ ಸುಂದರವಾಗಿ ವರ್ಣಿಸಿರುವಿರಿ. ಧನ್ಯವಾದಗಳು.
Submitted by nageshamysore Mon, 09/16/2013 - 10:41

In reply to by Vasant Kulkarni

ಧನ್ಯವಾದಗಳು ವಸಂತರೆ, ಬಹುಶಃ ಈ ದ್ವಂದ್ವ, ತುಮುಲ ಹೊರಬಂದು ನೆಲೆಸಿದವರನ್ನೆಲ್ಲಾ ಒಂದಲ್ಲಾ ಒಂದು ರೀತಿ , ಕೆಲವೊಮ್ಮೆಯಾದರೂ ಕಾಡುತ್ತದೆಂದು ಕಾಣುತ್ತದೆ :-)
Submitted by ಗಣೇಶ Tue, 09/17/2013 - 00:31

ಎಲ್ಲರ ಕನಸಿನ ಸಿಂಗಾಪುರದಲ್ಲಿದ್ದೂ ಇಲ್ಲಿನ ಮನೆಯ ಬಗ್ಗೆ ಹಾತೊರೆಯುತ್ತಿರುವಿರಲ್ಲಾ. ಏನೇ ಅನ್ನಿ ನಮ್ಮನೆ ಮೀರಿದ ಬೇರೆ ಅರಮನೆ ಇಲ್ಲ. ಅಲ್ವಾ? ಕವನ ಸೂಪರ್.
Submitted by nageshamysore Thu, 09/19/2013 - 13:32

In reply to by ಗಣೇಶ

ಗಣೇಶ್ ಜಿ,  ಜೀವನಯಾನದಲ್ಲಿ ಎಲ್ಲೆಲ್ಲಾ ಸುತ್ತಿದರೂ, 'ಆ' ನೆಲದ ತುಡಿತ, ಮೋಹ ಬಿಡುವುದಿಲ್ಲ. ಕೊನೆಗೆ ಈ ರೀತಿ ಮಾತು, ಕೃತಿ ಕವನಗಳಲ್ಲಾದರೂ ಜೀವಂತವಾಗಿರಲು ಪ್ರಯತ್ನಿಸುತ್ತದೆ. ಬಹುಶಃ ಅದೆ ಜೀವನದ ವೈವಿಧ್ಯಮಯ ವಿಸ್ಮಯಗಳಲ್ಲೊಂದೇನೊ :-)   ಧನ್ಯವಾದಗಳೊಂದಿಗೆ  ನಾಗೇಶ ಮೈಸೂರು