೧೨೦. ಲಲಿತಾ ಸಹಸ್ರನಾಮ ೪೭೫ರಿಂದ ೪೮೪ನೇ ನಾಮಗಳ ವಿವರಣೆ

೧೨೦. ಲಲಿತಾ ಸಹಸ್ರನಾಮ ೪೭೫ರಿಂದ ೪೮೪ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೪೭೫-೪೮೪

Viśuddhi-cakra-nilayā विशुद्धि-चक्र-निलया (475)

೪೭೫. ವಿಶುದ್ಧಿ-ಚಕ್ರ-ನಿಲಯಾ

         ನಾವು ಮುಂದಿನ ೬೦ನಾಮಗಳನ್ನು ತಿಳಿದುಕೊಳ್ಳುವ ಮೊದಲು ಆ ನಾಮಗಳು ಲಲಿತಾಂಬಿಕೆಗೆ ಸಂಭಂದಿಸಿಲ್ಲ ಆದರೆ ಅವುಗಳು ಆಕೆಯ ಪ್ರಮುಖ ಸಹಾಯಕಿರಾದ ಯೋಗಿನಿಯರಿಗೆ ಸಂಭಂದಿಸಿದ್ದಾಗಿವೆ ಎನ್ನುವುದನ್ನು ಗಮನಿಸಬೇಕು. ಆ ನಾಮಗಳು ಕುಂಡಲಿನೀ ಚಕ್ರದಲ್ಲಿ ಆಸೀನರಾಗಿರುವ ದೇವತೆಗಳನ್ನು ಮಾತ್ರವೇ ಉಲ್ಲೇಖಿಸುತ್ತವೆ; ಇವುಗಳ ಮೂಲಕ ಸಾಗುವ ಶಕ್ತಿಯು ಮುಂದೆ ಕಿರೀಟ ಚಕ್ರದಲ್ಲಿರುವ ಶಿವನನ್ನು ಸೇರುತ್ತಾಳೆ. ಮೆದುಳ ಬಳ್ಳಿಯಲ್ಲಿ ಸೂಕ್ಷ್ಮಗುಣದ ಆರು ಚಕ್ರಗಳಿದ್ದು ಅವು ಮೂಲಾಧಾರ ಚಕ್ರದಿಂದ ಪ್ರಾರಂಭವಾಗಿ ಮೂರನೆಯ ಕಣ್ಣಾದ ಆಜ್ಞಾ ಚಕ್ರದಲ್ಲಿ ಕೊನೆಗೊಳ್ಳುತ್ತವೆ. ಸಹಸ್ರಾರವನ್ನು ಚಕ್ರವೆಂದು ಕರೆಯುವುದಿಲ್ಲ. ವಾಕ್-ದೇವಿಯರು ಈ ಚಕ್ರಗಳನ್ನು ವಿವರಿಸುವುದರ ಮೂಲಕ ತಮ್ಮ ವರ್ಣನೆಯನ್ನು ಪ್ರಾರಂಭಿಸುತ್ತಾರೆ.

           ವಿಶುದ್ದಿ ಚಕ್ರವನ್ನು ಕಂಠ ಚಕ್ರವೆಂದೂ ಕರೆಯಲಾಗುತ್ತದೆ. ವಿಶುದ್ಧ ಚಕ್ರವು ಊದಾ ರಂಗು (smoky purple) ಉಳ್ಳದ್ದಾಗಿದೆ. ಅದು ಹದಿನಾರು ದಳದ ಪದ್ಮದಂತಿದ್ದು ಪ್ರತಿಯೊಂದೂ ದಳದ ಮೇಲೂ ಬಿಂದುಗಳುಳ್ಳ (ಚುಕ್ಕೆಗಳುಳ್ಳ) ೧೬ ಸಂಸ್ಕೃತದ ಅಕ್ಷರಗಳು ಪಡಮೂಡಿರುತ್ತವೆ. ಪ್ರತಿಯೊಂದು ಚಕ್ರಕ್ಕೂ ಒಂದು ಪ್ರಧಾನವಾದ ಬೀಜಾಕ್ಷರವಿದ್ದು; ವಿಶುದ್ಧಿ ಚಕ್ರದ ಬೀಜವು ’ಹಂ’ ಆಗಿದೆ. ಈ ಬೀಜವು ಶ್ವೇತ ವರ್ಣದ್ದಾಗಿದ್ದು ಆಕಾಶ ತತ್ವದಿಂದ ಆವರಿಸಲ್ಪಟ್ಟು ಶ್ವೇತ ವರ್ಣದ ಗಜದ ಮೇಲೆ ಆಸೀನವಾಗಿರುತ್ತದೆ. ವಾಕ್ ದೇವಿಗಳು ವಿಶುದ್ಧಿ ಚಕ್ರದಿಂದ ವರ್ಣನೆಯನ್ನು ಪ್ರಾರಂಭಿಸುತ್ತಾರೆ; ಈ ಚಕ್ರದ ಮೂಲಕ ಮಾತು ವೈಖರೀ (ನಾಮ ೩೭೧) ರೂಪದಲ್ಲಿ ಹೊರಹೊಮ್ಮುತ್ತದೆ. ಚಕ್ರಗಳ ವಿವರಣೆಗಳು ಒಂದು ಚಕ್ರದ ಹೆಸರಿನೊಂದಿಗೆ ಪ್ರಾರಂಭವಾಗಿ ಆ ಚಕ್ರದ ಅಧಿದೇವತೆಯಾದ ಯೋಗಿನಿಯ ಹೆಸರಿನೊಂದಿಗೆ ಕೊನೆಗೊಳ್ಳುತ್ತವೆ. ಉದಾಹರಣೆಗೆ ಈ ನಾಮವು ವಿಶುದ್ದಿ-ಚಕ್ರ-ನಿಲಯ ಎಂದು ಹೇಳುತ್ತದೆ ಇದರರ್ಥ ಆಕೆಯು ವಿಶುದ್ದಿ ಚಕ್ರದಲ್ಲಿ ನಿವಸಿಸುತ್ತಾಳೆ. ಆದರೆ ಈ ಚಕ್ರದಲ್ಲಿ ಯಾರು ವಾಸಿಸುತ್ತಾರೆ ಎನ್ನುವುದನ್ನು ೪೮೪ನೇ ನಾಮದಲ್ಲಷ್ಟೇ - ಡಾಕಿನೀಶ್ವರೀ ಎಂದು ಹೆಸರಿಸಲಾಗಿದೆ, ಅದು ಆ ಚಕ್ರವನ್ನು ನಿಯಂತ್ರಿಸುವ ಯೋಗಿನಿಯ ಹೆಸರಾಗಿದೆ. ಎಲ್ಲಾ ನಾಮಗಳನ್ನು (ಒಂದೊಂದು ಚಕ್ರಕ್ಕೆ ಏಳರಿಂದ ಹತ್ತು ನಾಮಗಳು) ಅಭ್ಯಸಿಸದಿದ್ದರೆ ಆ ಒಂದು ಚಕ್ರದ ತಿಳುವಳಿಕೆಯು ಅಪೂರ್ಣವಾಗಿ ಉಳಿಯುತ್ತದೆ.

Araktavarṇā अरक्तवर्णा (476)

೪೭೬. ಅರಕ್ತವರ್ಣಾ

            ಯೋಗಿನಿಯ (ಡಾಕಿನಿಯ)  ಮೈಬಣ್ಣವು ತಿಳಿ ಕೆಂಪು ಬಣ್ಣವಾಗಿದೆ.

Trilocanā त्रिलोचना (477)

೪೭೭. ತ್ರಿಲೋಚನಾ

            ಡಾಕಿನಿಯು ಮೂರು ಕಣ್ಣುಗಳನ್ನು ಉಳ್ಳವಳಾಗಿದ್ದಾಳೆ.

Khaṭvāṃgādi-praharaṇā खट्वांगादि-प्रहरणा (478)

೪೭೮. ಖಟ್ವಾಂಗಾದಿ-ಪ್ರಹರಣಾ

           ಖಟ್ವಾಂಗವೆಂದರೆ ಮಾನವ ತಲೆ ಬುರುಡೆಯನ್ನು ಹೊಂದಿದ ದೊಣ್ಣೆಯಾಗಿದೆ. ಅದನ್ನು ಆಯುಧವಾಗಿ ಡಾಕಿನೀಶ್ವರಿಯು ಹಿಡಿದಿರುತ್ತಾಳೆ.

Vadanaika-samanvitā वदनैक-समन्विता (479)

೪೭೯. ವದನೈಕ-ಸಮನ್ವಿತಾ

           ಡಾಕಿನಿಗೆ ಒಂದೇ ಒಂದು ಮುಖವಿದೆ. ಪ್ರತಿಯೊಂದು ಯೋಗಿನಿಗೆ ಅವರರಿಗಿರುವ ಮುಖಗಳ ಸಂಖ್ಯೆಯ ಆಧಾರದ ಮೇಲೆ ಪ್ರಾಮುಖ್ಯತೆಯು ದೊರೆಯುತ್ತದೆ. ಡಾಕಿನಿಯು ಏಕ ಮುಖವನ್ನು ಹೊಂದಿದ್ದು ಆಕೆಯು ಆಕಾಶ ತತ್ವವನ್ನು ಪ್ರತಿನಿಧಿಸುತ್ತಾಳೆ.

Pāyasānna-priyā पायसान्न-प्रिया (480)

೪೮೦. ಪಾಯಸಾನ್ನ-ಪ್ರಿಯಾ

            ಪಾಯಸವೆಂದರೆ ಒಂದು ವಿಧವಾದ ಅರೆ-ಘನರೂಪದ ಸಿಹಿ ತಿನಿಸಾಗಿದ್ದು ಇದನ್ನು ದೇವರುಗಳಿಗೆ ಹಬ್ಬ-ಹರಿದಿನಗಳಲ್ಲಿ ಅರ್ಪಿಸಲಾಗುತ್ತದೆ. ಪಾಯಸವನ್ನು ಅಕ್ಕಿ ಅಥವಾ ಇತರೇ ಧಾನ್ಯಗಳನ್ನು ಹಾಲು ಮತ್ತು ಸಕ್ಕರೆಯೊಂದಿಗೆ ಕುದಿಸುವ ಮೂಲಕ ತಯಾರಿಸಲಾಗುತ್ತದೆ. ಈ ನಾಮವು ವಿಶುದ್ಧಿ ಚಕ್ರದ ಯೋಗಿನಿಯಾದ ಡಾಕಿನಿಯು ಪಾಯಸವನ್ನು ಇಷ್ಟ ಪಡುತ್ತಾಳೆ ಎಂದು ಹೇಳುತ್ತದೆ.

Tvaksthā (tvak-sthā) त्वक्स्था (त्वक्-स्था) (481)

೪೮೧. ತ್ವಕ್ಸ್ಥಾ  (ತ್ವಕ್-ಸ್ಥಾ)

            ಡಾಕಿನೀ ದೇವಿಯು ಚರ್ಮದ ಮೇಲೆ ನಿವಸಿಸಿ ಆಕೆಯು ಸ್ಪರ್ಶದ ನಿಯಂತ್ರಕಳಾಗಿದ್ದಾಳೆ. ಚರ್ಮವು ಮಾನವ ಶರೀರದ ಅತ್ಯಂತ ಹೊರಗಿನ ಹೊದಿಕೆಯಾಗಿದ್ದು ಇದು ವಾಕ್ ದೇವಿಗಳು ಚಕ್ರಗಳ ನಿರೂಪಣೆಯನ್ನು ವಿಶುದ್ಧಿ ಚಕ್ರದಿಂದ ಪ್ರಾರಂಭಿಸಲು ಮತ್ತೊಂದು ಕಾರಣವಾಗಿದೆ.

Paśulōka-bhayaṁkarī पशुलोक-भयंकरी (482)

೪೮೨. ಪಶುಲೋಕ-ಭಯಂಕರೀ

           ಪಶು ಎಂದರೆ ಯಾರು ಅಜ್ಞಾನಿಗಳೋ ಅವರು. ಇಲ್ಲಿ ಅಜ್ಞಾನವೆಂದರೆ ಬ್ರಹ್ಮದ ಕುರಿತಾದ ಜ್ಞಾನವಿಲ್ಲದೇ ಇರುವುದು ಅಥವಾ ಯಾರು ದ್ವಂದ್ವತೆಯಿಂದ ಬಾಧೆಗೊಳಗಾಗಿರುತ್ತಾರೆಯೋ ಅವರು. ಡಾಕಿನೀಶ್ವರಿಯು ಯಾರು ಅಜ್ಞಾನಿಗಳೋ ಅವರಿಗೆ ಭಯವನ್ನುಂಟು ಮಾಡುವವಳಾಗಿದ್ದಾಳೆ. ಈ ವಿಧವಾದ ಅಜ್ಞಾನವನ್ನು ಬೃಹದಾರಣ್ಯಕ ಉಪನಿಷತ್ತಿನಲ್ಲಿ (೧.೪.೧೦) ವಿವರಿಸಲಾಗಿದೆ, "ದೇವರುಗಳೂ ಸಹ ಅವನನ್ನು ಎದುರಿಸಿ ನಿಲ್ಲಲಾರರು, ಏಕೆಂದರೆ ಅವನು ಅವರ ಆತ್ಮವಾಗುತ್ತಾನೆ. ಯಾರು ಇನ್ನೊಬ್ಬ ದೇವರನ್ನು ’ಅವನು ಬೇರೆ ಮತ್ತು ನಾನು ಬೇರೆ ಎಂದು’ ಪೂಜಿಸುತ್ತಾನೆಯೋ, ಅವನು ಅಜ್ಞಾನಿ (ತಿಳುವಳಿಕೆಯಿಲ್ಲದವನು). ಅವನು ದೇವರುಗಳಿಗೆ ಪಶು ಸಮಾನನಾಗಿದ್ದಾನೆ".

         ಅದೇ ಉಪನಿಷತ್ತು (೧.೪.೨), ಅಜ್ಞಾನದಿಂದ ಉಂಟಾಗುವ ಭಯದ ಕುರಿತು ವಿವರಿಸುತ್ತದೆ, "ಅವನು ಭಯಗ್ರಸ್ಥನಾಗಿದ್ದ. ಆದ್ದರಿಂದ ಜನರು ಒಬ್ಬರೇ ಇರಲು ಭಯಪಡುತ್ತಾರೆ. ಅವನು ಆಲೋಚಿಸಿದ, ’ನನ್ನ ಹೊರತಾಗಿ ಮತ್ತೇನೂ ಇಲ್ಲವೆಂದ ಮೇಲೆ ನಾನು ಭಯಪಡುವುದಾದರೂ ಯಾವುದಕ್ಕೆ?’ ಇದರಿಂದಲೇ ಅವನ ಭಯವು ಹೋಗಲಾಡಿಸಲ್ಪಟ್ಟಿತು, ಏಕೆಂದರೆ ಭಯ ಪಡಿಸಲು ಅಲ್ಲಿ ಇದ್ದುದಾದರೂ ಏನು? ಯಾವಾಗಲೂ ಎರಡನೇ ವಸ್ತುವಿನಿಂದ ಮಾತ್ರವೇ ಭಯವು ಹುಟ್ಟುತ್ತದೆ".

          ತೈತ್ತರೀಯ ಉಪನಿಷತ್ತೂ (೨.೭) ಸಹ ಈ ಭಯವನ್ನು ವಿವರಿಸುತ್ತದೆ. “ಯಾವಾಗ ಒಬ್ಬ ವ್ಯಕ್ತಿಯು ಬ್ರಹ್ಮದಲ್ಲಿ ಆತ್ಮ ಭಾವವನ್ನು ಹೊಂದುತ್ತಾನೆಯೋ ಆಗ ಅವನು ಅಭಯವನ್ನು ಪಡೆದವನಾಗುತ್ತಾನೆ, ಅವನು ಬೇರೆ ಯಾವುದಕ್ಕೂ ಭಯ ಪಡುವುದಿಲ್ಲ. ಎಲ್ಲಿಯವರೆಗೆ ಅವನು ತನಗೂ ಮತ್ತು ಆ ವಿಶ್ವದ ಆತ್ಮಕ್ಕೂ ಅತ್ಯಂತ ಕನಿಷ್ಠ ಭೇದವನ್ನು ಕಾಣುತ್ತಾನೆಯೋ ಅಲ್ಲಿಯವರೆಗೆ ಅವನು ಭಯದಿಂದ ಸಂಪೂರ್ಣ ಮುಕ್ತನಾಗುವುದಿಲ್ಲ. ಒಬ್ಬ ವ್ಯಕ್ತಿಯು ವಿದ್ಯಾವಂತನಿರಬಹುದು, ಆದರೂ ಸಹ ಅವನು ನಾನು ಬ್ರಹ್ಮಕ್ಕಿಂತ ಪ್ರತ್ಯೇಕವಾದವನೆಂದು ಆಲೋಚಿಸಿದರೆ, ಅವನಿಗೆ ಬ್ರಹ್ಮವೇ ಭಯದ ಮೂಲವಾಗುತ್ತದೆ."

           ವಿಶುದ್ಧಿ ಚಕ್ರದ ಅಧಿದೇವತೆಯಾದ ಡಾಕಿನೀಶ್ವರಿಯು ಅವಿದ್ಯೆಯಿಂದ ಉತ್ಪನ್ನವಾಗುವ ಈ ವಿಧವಾದ ಭಯವನ್ನು ಉಂಟುಮಾಡುತ್ತಾಳೆ. ಅಂತರಂಗದಲ್ಲಿರುವ ಬ್ರಹ್ಮವನ್ನು ಅರಿಯಲು ಸರಿಯಾದ ಕ್ರಮಗಳನ್ನು ಅನುಸರಿಸಿದರೆ, ಈ ವಿಧವಾದ ಭಯವನ್ನು ಅಧಿಗಮಿಸಬಹುದು ಇಲ್ಲದಿದ್ದರೆ ಅದು ಆಧ್ಯಾತ್ಮದ ಮಾರ್ಗವನ್ನು ಅನುಸರಿಸುವಲ್ಲಿ ದೊಡ್ಡದಾದ ತೊಡಕಾಗಿ ಉಳಿಯುತ್ತದೆ. ನಾಮ ೩೫೪ – ‘ಪಶು-ಪಾಶ-ವಿಮೋಚಿನೀ’ ಎನ್ನುವುದು ಲಲಿತಾಂಬಿಕೆಯನ್ನು ಉಲ್ಲೇಖಿಸಿದರೆ ಈ ನಾಮವು ಡಾಕಿನೇಶ್ವರೀ ದೇವಿಯನ್ನು ಕುರಿತದ್ದಾಗಿದೆ. ಈ ಎರಡೂ ನಾಮಗಳಲ್ಲಿ ವ್ಯತ್ಯಾಸವಿದೆ. ೩೫೪ನೇ ನಾಮದಲ್ಲಿ ಲಲಿತಾಂಬಿಕೆಯ ಅಜ್ಞಾನವನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಕುರಿತಾಗಿ ಹೇಳಲಾಗಿದ್ದರೆ, ಈ ನಾಮದಲ್ಲಿ ಡಾಕಿನೀಶ್ವರಿಯು ಅಜ್ಞಾನಿಗಳಲ್ಲಿ ಒಂದು ವಿಧವಾದ ಭಯವನ್ನು ಹುಟ್ಟುಹಾಕುತ್ತಾಳೆ ಎಂದಷ್ಟೇ ಹೇಳಲಾಗಿದೆ. ಈ ವ್ಯತ್ಯಾಸವು ಒಬ್ಬ ಸಾಮಾನ್ಯ ಯೋಗಿನಿಗೂ ಪರಬ್ರಹ್ಮಕ್ಕೂ ಇರುವ ಗುಣಗಳನ್ನು ಸೂಚಿಸುತ್ತದೆ.

Amṛtādi-mahā-śakti-saṃvṛtā अमृतादि-महा-शक्ति-संवृता (483)

೪೮೩. ಅಮೃತಾದಿ-ಮಹಾ-ಶಕ್ತಿ-ಸಂವೃತಾ

          ಡಾಕಿನೀಶ್ವರಿಯು ಹದಿನಾರು ವಿಧವಾದ ಶಕ್ತಿಗಳಿಂದ ಆವರಿಸಲ್ಪಟ್ಟಿದ್ದಾಳೆ. ಈ ಹದಿನಾರು ಶಕ್ತಿಗಳೊಬ್ಬಬ್ಬರೂ ಹದಿನಾರು ದಳಗಳೊಂದೊಂದರಲ್ಲಿ ಆಸೀನರಾಗಿದ್ದಾರೆ. ಪ್ರತಿಯೊಂದು ಅಕ್ಷರವೂ ಒಂದೊಂದು ಶಕ್ತಿಯನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಶಕ್ತಿಯ ಹೆಸರೂ ಸಹ ಆಯಾ ಅಕ್ಷರಗಳಿಂದಲೇ ಪ್ರಾರಂಭವಾಗುತ್ತವೆ. ಉದಾಹರಣೆಗೆ, ಅಕ್ಷರ  ’ಅ’ದಲ್ಲಿ ಅಮೃತ ಶಕ್ತಿಯು ನಿವಸಿಸಿದರೆ, ಮುಂದಿನ ಅಕ್ಷರವಾದ ’ಆ’ದಲ್ಲಿ ಆಕರ್ಷಣೀ ಹೀಗೆ ಸಾಗುತ್ತದೆ. ಶಕ್ತಿಗಳೆಂದರೆ ಈ ಸಂದರ್ಭದಲ್ಲಿ ಕೆಳಸ್ತರದ ದೇವತೆಗಳಾಗಿದ್ದು ಅವುಗಳನ್ನು ಡಾಕಿನೀಶ್ವರಿಯು ನಿಯಂತ್ರಿಸುತ್ತಾಳೆ. ಈ ನಾಮವು ಈ ಶಕ್ತಿಗಳು ಬಹಳ ಶಕ್ತಿಯುತವಾದವುಗಳೆಂದು ತಿಳಿಸಲು ಮಹಾ ಪ್ರತ್ಯಯವನ್ನು ಒಳಗೊಂಡಿದೆ.

Ḍākinīśvarī डाकिनीश्वरी (484)

೪೮೪. ಡಾಕಿನೀಶ್ವರೀ

           ೪೭೫ನೇ ನಾಮದಿಂದ ೪೮೪ನೇ ನಾಮಗಳವರೆಗೆ ವಿವರಿಸಲಾದ ಯೋಗಿನಿಯ ಹೆಸರು ಈ ಡಾಕಿನೀಶ್ವರೀ; ಇದು ವಿಶುದ್ದಿ ಚಕ್ರದಲ್ಲಿ ನಿವಸಿಸುವ ದೇವತೆಯಾಗಿದೆ.

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 475 - 484 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
Average: 5 (1 vote)

Comments

Submitted by nageshamysore Sun, 09/15/2013 - 18:37

ಶ್ರೀಧರರೆ, ೧೨೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯ ಸಾರ ಪರಿಷ್ಕರಣೆಗೆ ಸಿದ್ದ :-)

ಲಲಿತಾ ಸಹಸ್ರನಾಮ ೪೭೫-೪೮೪
__________________________________________

೪೭೫. ವಿಶುದ್ಧಿ-ಚಕ್ರ-ನಿಲಯ 
ಷೋಡಶ ದಳ ಪದ್ಮದ, ನೇರಳೆ ಚುಕ್ಕಿ ಮೈಯಿನ ವಿಶುದ್ಧಿ-ಕಂಠ ಚಕ್ರ
ಶ್ವೇತವರ್ಣ ಆಕಾಶ ತತ್ವಾವರಣ ಗಜಾಸೀನ ಬೀಜ, 'ಹಂ' ಬೀಜಾಕ್ಷರ
ಮಾತು ವೈಖರೀಯಾಗೊ ಚಕ್ರದ್ಹೆಸರಿನಿಂದಾರಂಭ, ಕೊನೆ ಯೋಗಿನಿ
ಅಧಿದೇವತೆಗಳನರಿಯೆ ನಾಮಗಣ ಅಧ್ಯಯನ, ಪೂರ್ಣತೆಗೆ ಸರಣಿ ||

೪೭೬. ಅರಕ್ತವರ್ಣಾ
ಮೆದುಳುಬಳ್ಳಿಯ ಸೂಕ್ಷ್ಮ ಷಟ್ಚಕ್ರಕೊಂದೊಂದು ಹೆಸರು
ಲಲಿತಾಂಬೆಯ ಸಹಾಯಕಿಹ ಯೋಗಿನಿಯರ ತವರು
ವಿಶುದ್ಧಿ ಚಕ್ರದಧಿದೇವತೆಯಾಗಿಹಳಿ ಯೋಗಿನಿ ಡಾಕಿನಿ
ರಕ್ತ ತಿಳಿಗೆಂಪಿನ ಮೈ ಬಣ್ಣದಲಿ, ಕಂಠ ಚಕ್ರಾ ನಿವಾಸಿನಿ ||

೪೭೭. ತ್ರಿಲೋಚನಾ
ದೃಷ್ಟಿ ಆಲೋಚನೆಗಿಹ ಲೋಚನ ಲಲಿತಾ ಪಥ ಕಾದು ಜತನ
ಕುಂಡಲಿನೀ ಹಾದಿಯಲಿ, ಮೊದಲ ಯೋಗಿನಿ ತ್ರಿಲೋಚನಾ
ಮೂರು ಕಣ್ಣಿನ ಡಾಕಿನಿಯನು, ವರ್ಣಿಸಿಹ ವಾಕ್ ದೇವಿಯರು
ವಿಶುದ್ಧಿ ಚಕ್ರದೊಡತಿಯ ತ್ರಿನೇತ್ರ ಅರಕ್ತವರ್ಣ ಆರಂಭ ತೇರು ||

೪೭೮. ಖಟ್ವಾಂಗಾದಿ-ಪ್ರಹರಣಾ
ತಲೆಬುರುಡೆಯ ತುದಿಯುಳ್ಳ ಶಿವನ ಗದೆಯೆ ಖಟ್ವಾಂಗ
ದೊಣ್ಣೆಯಂತೆ ಕೈಯಲಿ ಹಿಡಿದು, ಕೂತಂತಿಹ ಪಟ್ಟಾಂಗ
ಆಯುಧವಾಗಿ ಹಿಡಿದವಳ, ಅಂಗರಕ್ಷಕಿಯಂತಿಹ ರೂಪ
ಲಲಿತೆಯಡೆತಡೆಯ ಖಟ್ವಾಂಗಾದಿಪ್ರಹರಣಾ ನಿವಾರಿಪ ||

೪೭೯. ವದನೈಕ-ಸಮನ್ವಿತಾ
ಮುಖ ಸಂಖ್ಯೆಗೆ ತಕ್ಕಂತೆ ದೊರಕುವ ಪ್ರಾಮುಖ್ಯತೆ
ಡಾಕಿನಿ ಯೋಗಿನಿ ತಾ ಏಕ ಮುಖವಾಗಿಹ ಘನತೆ
ಆಕಾಶ ತತ್ವ ಪ್ರತಿನಿಧಿಸುತ, ವದನೈಕ-ಸಮನ್ವಿತಾ
ಲಲಿತಾ ಪರಿಚಾರಿಕೆಯ ಗೌರವಕಾರ್ಯದೆ ಅವಿರತ ||

೪೮೦. ಪಾಯಸಾನ್ನ-ಪ್ರಿಯಾ
ಲಲಿತೆಯನೊಲಿಸುವ ಮಾರ್ಗದೆ ಯೋಗಿನಿಗಳಿಗು ಪಾಲು
ವಿಶುದ್ಧಿ ಚಕ್ರದೊಡತಿ ಡಾಕಿನಿ ಪ್ರಿಯಾಹಾರ ನೈವೇದ್ಯಗಳು
ಕುದಿಸಿ ಹಾಲು ಸಕ್ಕರೆ ಅಕ್ಕಿ ಧಾನ್ಯದೆ ಪಾಯಸಾನ್ನಪ್ರಿಯಾ
ಮೆಚ್ಚುವಂತೆ ಹಬ್ಬಹರಿದಿನ, ರುಚಿ ತಲುಪಿದಂತೆ ಲಲಿತೆಯ ||

೪೮೧. ತ್ವಕ್ಸ್ಥಾ (ತ್ವಕ್-ಸ್ಥಾ)
ಕುಂಡಲಿನೀ ಆರಂಭಮಾರ್ಗದ ಹೊರ ಹೊದಿಕೆ ವಿಶುದ್ಧಿ ಚಕ್ರ
ಒಳಮುಟ್ಟಲು ಸತ್ಯದರ್ಶನಕೆ, ತೆರೆದು ತೊಗಲ ಬೀಗ ಸೂತ್ರ
ಚರ್ಮದ ಮೇಲೆ ಡಾಕಿನೀ ವಾಸ, ನಿಯಂತ್ರಿಸಿರೆ ಸ್ಪರ್ಶ ತ್ವಕ್ಸ್ಥಾ
ಸಂವೇದನೆ ಮೊದಲರಿವುದರ ಬಣ್ಣನೆ, ವಾಕ್ದೇವಿತರ್ಕಸಮರ್ಥ ||

೪೮೨. ಪಶುಲೋಕ-ಭಯಂಕರೀ
ದ್ವಂದ್ವತೆ ಭಾದಿತ ಅಜ್ಞಾನದೊಡೆಯ ಪಶು, ಬಿಡುವಳೆ ಡಾಕಿನಿ ಮಾತೆ
ಭೀತಿಗೊಳಿಸಿ ಚಿಂತನೆಗ್ಹಚ್ಚುತ, ಬೇರೆ ವಸ್ತುವೆಲ್ಲಿದೇ ಇಲ್ಲಿ ತನ್ನ ಹೊರತೆ
ಬ್ರಹ್ಮದಿಂ ಪ್ರತ್ಯೇಕಿಸೆ ಬ್ರಹ್ಮವೆ ಮೂಲವಾಗಿ ಭೀತಿ, ಡಾಕಿನಿಯ ಸವಾರಿ
ಪಶುಪಾಶವಿಮೋಚನಿ ಲಲಿತೆ, ಡಾಕಿನಿಯಾಗಿ ಪಶುಲೋಕಭಯಂಕರೀ ||

೪೮೩. ಅಮೃತಾದಿ-ಮಹಾ-ಶಕ್ತಿ-ಸಂವೃತಾ 
ಹದಿನಾರು ದಳಗಳಲೊಂದೊಂದು , ಆಸೀನರಾಗಿಹ ಶಕ್ತಿ
ಪ್ರತಿ ಅಕ್ಷರ ಪ್ರತಿನಿಧಿಸುತ ಶಕ್ತಿ, ಅದರದೆ ಪ್ರಾರಂಭೋಕ್ತಿ
'ಅ' ಅಮೃತ, 'ಆ' ಆಕರ್ಷಣೀ ಯಾದಿ ಕೆಳ ಸ್ತರ ದೇವತೆ
ಶಕ್ತಿಯುತರೆಲ್ಲರಿಂ ಸುತ್ತುವರೆದೆ, ಡಾಕಿನೀ ನಿಯಂತ್ರಿಸುತ ||

೪೮೪. ಡಾಕಿನೀಶ್ವರೀ
ವಿಶುದ್ಧಿ ಚಕ್ರ ನಿವಸಿತೆ ಯೋಗಿನಿಯೆ ಡಾಕಿನೀಶ್ವರೀ
ಮಹಾಷೋಡಶಶಕ್ತಿಸಮೇತ ಲಲಿತಾಸೇವೆಯೈಸಿರಿ
ಕಪಾಲಶಿರ ಕೋದಂಡ ಹಿಡಿದು ಕಾಯುತಿಹ ನೆರಳ
ಅರಕ್ತವರ್ಣ ಭೀತಿಯ್ಹುಟ್ಟಿಸುತ ಅಜ್ಞಾನಕಾಗಿ ಗರಳ ||
 
ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು