ಆಹಾರ ಭದ್ರತೆ – ಬಡವರ ತುತ್ತು

ಆಹಾರ ಭದ್ರತೆ – ಬಡವರ ತುತ್ತು

ಳೆದೊಂದು ವರುಷದಿಂದ ಸುದ್ದಿಯಲ್ಲಿದ್ದ “ಆಹಾರ ಭದ್ರತಾ ಕಾಯಿದೆ”ಗೆ ಸಂಸತ್ತಿನ ಒಪ್ಪಿಗೆ  ಹಾಗೂ ರಾಷ್ಟ್ರಪತಿಗಳ ಅಂಕಿತ ಪಡೆದು, ಅದನ್ನು ಜ್ಯಾರಿ ಮಾಡಿದೆ, ಕೇಂದ್ರ ಸರಕಾರ.

ಏನದು ಮಸೂದೆ? ಗ್ರಾಮೀಣ ಕುಟುಂಬಗಳಿಗೆ ಇದರಿಂದ ಏನು ಅನುಕೂಲ? ಬಿಪಿಎಲ್ (ಅತಿ ಬಡತನದ) ಹಾಗೂ ಇತರ ಬಡ ಕುಟುಂಬಗಳಿಗೆ ರಿಯಾಯಿತಿ ಬೆಲೆಯಲ್ಲಿ ಆಹಾರಧಾನ್ಯ ಒದಗಿಸುವುದೇ ಆಹಾರ ಭದ್ರತೆ ಮಸೂದೆಯ ಉದ್ದೇಶ. ಅಂದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಕುಟುಂಬಗಳನ್ನು ಗುರುತಿಸಿ, ಆಹಾರಧಾನ್ಯದ ರೂಪದಲ್ಲಿ ಅವುಗಳಿಗೆ ಸಹಾಯಧನ (ಸಬ್ಸಿಡಿ) ಕೊಡಬೇಕು.

ಶೇಕಡಾ ೭೫ ಗ್ರಾಮೀಣ ಜನರಿಗೂ, ಶೇಕಡಾ ೫೦ ಪಟ್ಟಣ ಜನರಿಗೂ ರಿಯಾಯಿತಿ ಬೆಲೆಯ ಆಹಾರಧಾನ್ಯ ಒದಗಿಸುವುದು (ಗುರುತಿಸಲಾದ ವ್ಯಕ್ತಿಗಳಿಗೆ ತಿಂಗಳಿಗೆ ತಲಾ ೫ ಕಿಲೋಗ್ರಾಂ ಪ್ರಮಾಣದಲ್ಲಿ). ಅಕ್ಕಿ ಕಿಲೋಗೆ ರೂ.೩, ಗೋಧಿ ಕಿಲೋಗೆ ರೂ.೨ ಮತ್ತು ಸಿರಿಧಾನ್ಯಗಳು ಕಿಲೋಗೆ ರೂ.೧ ದರದಲ್ಲಿ ನೀಡುವುದು. ಅದಲ್ಲದೆ ಗರ್ಭಿಣಿ ಹಾಗೂ ಹಾಲೂಡಿಸುವ ಮಹಿಳೆಯರಿಗೆ ಆರು ತಿಂಗಳ ಅವಧಿ ತಿಂಗಳಿಗೆ ತಲಾ ರೂ.೧,೦೦೦ ಪಾವತಿ. ಜೊತೆಗೆ ೬ರಿಂದ ೧೪ ವರುಷ ವಯಸ್ಸಿನ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ – ಇವಿಷ್ಟು ಮಸೂದೆಯ ಮುಖ್ಯಾಂಶಗಳು.

ಈ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ತಗಲುವ ಅಂದಾಜು ವೆಚ್ಚ ವರುಷಕ್ಕೆ ರೂ.೧,೨೫,೦೦೦ ಕೋಟಿ.  ಇಂತಹ ಬೃಹತ್ ಮೊತ್ತದ ವೆಚ್ಚ ಮಾಡಿದರೂ, ರಿಯಾಯಿತಿ ಬೆಲೆಯ ಆಹಾರಧಾನ್ಯ ಸಿಗಬೇಕಾದ ಎಲ್ಲರಿಗೂ ಸಿಗುತ್ತದೆಯೇ? ಈ ಬಗ್ಗೆ ಯೋಜನಾ ಆಯೋಗದ ಒಂದು ವರದಿ ಹೀಗೆನ್ನುತ್ತದೆ: ಕೇಂದ್ರ ಸರಕಾರ ಒದಗಿಸುವ ರಿಯಾಯಿತಿ ಬೆಲೆಯ ಆಹಾರಧಾನ್ಯದ ಶೇಕಡಾ ೫೮ ಭಾಗ ಬಿಪಿಎಲ್ ಕುಟುಂಬಗಳ ಕೈಸೇರುವುದಿಲ್ಲ. ಇದಕ್ಕೆ ಕಾರಣಗಳು: ಆ ಕುಟುಂಬಗಳನ್ನು ಗುರುತಿಸುವಾಗಿನ ತಪ್ಪುಗಳು ಮತ್ತು ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್)ಯ ಅಪ್ರಾಮಾಣಿಕ ದೋಷಗಳು.

ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಮತ್ತು ಗೋಧಿ ಮಾತ್ರ ಕೊಡುವುದರಿಂದ ಕೃಷಿಯ ಮೇಲೆ ಆಗಬಹುದಾದ ಪರಿಣಾಮಗಳೇನು? ಸರಕಾರ ಖರೀದಿಸುತ್ತದೆ ಎಂಬ ಕಾರಣಕ್ಕಾಗಿ ಕೃಷಿಕರು ಇವೆರಡು ಧಾನ್ಯಗಳನ್ನೇ ಪ್ರಧಾನವಾಗಿ ಬೆಳೆಯುತ್ತಾರೆ; ಇದರಿಂದಾಗಿ ಇತರ ಧಾನ್ಯಗಳ ಉತ್ಪಾದನೆಯಲ್ಲಿ ಏರಿಳಿತವಾಗುತ್ತದೆ.

ಗಮನಿಸಿ: ಸರಕಾರವು ತಾನೇ ಏರಿಸಿದ ಬೆಲೆಯಲ್ಲಿ ಆಹಾರಧಾನ್ಯ ಖರೀದಿಸಿ, ತಾನೇ ಇಳಿಸಿದ ಬೆಲೆಯಲ್ಲಿ ಮಾರುತ್ತದೆ. ಹಾಗಾಗಿ, ಅಕ್ಕಿ, ಗೋಧಿ ಮತ್ತು ಸಿರಿಧಾನ್ಯಗಳ ಮಾರುಕಟ್ಟೆ ಅಸ್ಥಿರವಾಗುತ್ತದೆ. ಯಾಕೆಂದರೆ, ಸರಕಾರವು ಇವನ್ನು ಯಾವ ಪ್ರದೇಶದಲ್ಲಿ ಖರೀದಿಸುವುದಿಲ್ಲವೋ ಅಲ್ಲಿ ಬೆಲೆಗಳು ಕುಸಿಯಬಹುದು. ಅದಲ್ಲದೆ, ಕೆಲವೇ ಆಹಾರಧಾನ್ಯ ಬೆಳೆಸಿದರೆ, ಹತ್ತಾರು ವರುಷಗಳಲ್ಲಿ ಬೆಳೆಗಳ ವೈವಿಧ್ಯ ನಾಶವಾಗಲಿದೆ.

ಕಳೆದ ದಶಕಗಳ ಅಧ್ಯಯನಗಳು ದಾಖಲಿಸಿರುವ ಒಂದು ಮುಖ್ಯ ಸತ್ಯಾಂಶ: ಹಲವಾರು ಬಿಪಿಎಲ್ ಕುಟುಂಬಗಳು ತಮ್ಮ ಪಾಲಿನ ಅಕ್ಕಿ ಅಥವಾ ಗೋಧಿಯನ್ನು ಮಾರಿ, ಕೈಗೆ ಬಂದ ಹಣದಿಂದ ತಮಗೆ ಬೇಕಾದ್ದನ್ನು ಖರೀದಿಸುತ್ತವೆ. ಆಹಾರ ಭದ್ರತೆ ಮಸೂದೆಯು ಕಾಯಿದೆಯಾಗಿ ಜ್ಯಾರಿಯಾದಾಗಲೂ ಈ ಅಭ್ಯಾಸ ಹಾಗೆಯೇ ಮುಂದುವರಿಯುತ್ತದೆ.

“ಆಹಾರ ಭದ್ರತೆ” ಎಂದು ಘೋಷಣೆ ಮಾಡುತ್ತಾ, ಬಡವರಿಗೆ ಅಕ್ಕಿ ಮತ್ತು ಗೋಧಿ ಮಾತ್ರ ಕೊಟ್ಟರೆ ಸಾಕೇ? ಅವರಿಗೆ ಪೌಷ್ಠಿಕ ಭದ್ರತೆ ಬೇಡವೇ? ಜೊತೆಗೆ, ದ್ವಿದಳ ಧಾನ್ಯಗಳು, ಎಣ್ಣೆ, ಸಕ್ಕರೆ, ಹಾಲು, ಮೊಸರು, ಬೆಣ್ಣೆ, ತುಪ್ಪ, ಹಣ್ಣು, ತರಕಾರಿಗಳು ಬೇಡವೇ? ಶುದ್ಧ ಕುಡಿಯುವ ನೀರು, ಶುಭ್ರ ಶೌಚಾಲಯ, ಉತ್ತಮ ಪ್ರಾಥಮಿಕ ಆರೋಗ್ಯ ಸೇವೆ – ಇವೆಲ್ಲ ಬೇಡವೇ? ಇವನ್ನೆಲ್ಲ ಒದಗಿಸದಿದ್ದರೆ, ಬಡವರ ಹಸಿವಿಗೆ ಆಹಾರ ಸಿಕ್ಕೀತು ವಿನಃ ಆರೋಗ್ಯಮಟ್ಟ ಸುಧಾರಿಸಲಿಕ್ಕಿಲ್ಲ.

ಭ್ರಷ್ಟಾಚಾರದಲ್ಲಿ ಮುಳುಗಿರುವ ಭಾರತದ ಆಹಾರ ನಿಗಮವು ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನೇ ಅದಕ್ಷತೆಯ ಆಗರವಾಗಿಸಿದೆ. ಜೊತೆಗೆ, ಆಹಾರಧಾನ್ಯ ಶೇಖರಣೆಗೆ ಸೂಕ್ತ ಗೋದಾಮುಗಳು ಇಲ್ಲದ ಕಾರಣ, ಕೋಟಿಗಟ್ಟಲೆ ಟನ್ ಆಹಾರಧಾನ್ಯ ಹಾಳಾಗುತ್ತಿದೆ. ಇವೆರಡೂ ಸಮಸ್ಯೆಗಳಿಗೆ ಒಂದೇ ಪರಿಹಾರ: ಪ್ರತಿಯೊಂದು ಬಡಕುಟುಂಬಕ್ಕೆ ಸಲ್ಲಬೇಕಾದ ಸಹಾಯಧನವನ್ನು ಅದರ ಬ್ಯಾಂಕ್ ಖಾತೆಗೆ ಜಮೆ ಮಾಡುವುದು. ಇಂಡೋನೇಷ್ಯಾ, ಮೆಕ್ಸಿಕೋ ಮತ್ತು ಬ್ರೆಜಿಲ್ ದೇಶಗಳು ಹೀಗೆ ಮಾಡುತ್ತಿವೆ.

ಪೋಷಕಾಂಶ ಕೊರತೆಯಿಂದ ಬಳಲುವ ಜಗತ್ತಿನ ಪ್ರತೀ ಮೂರು ಮಕ್ಕಳಲ್ಲಿ ಒಂದು ಮಗು ಭಾರತದಲ್ಲಿದೆ. ನಮ್ಮಲ್ಲಿ ಶೇಕಡಾ ೮೦ರಷ್ಟು ೬ರಿಂದ ೩೫ ತಿಂಗಳಿನ ಮಕ್ಕಳು ರಕ್ತಹೀನವಾಗಿವೆ. ಮಾತ್ರವಲ್ಲ, ನಮ್ಮ ದೇಶದ ಶೇಕಡಾ ೫೦ ಮಕ್ಕಳ ಮರಣಕ್ಕೆ ಪೋಷಕಾಂಶಗಳ ಕೊರತೆಯೇ ಕಾರಣ. ಇನ್ನಾದರೂ ಆಹಾರ ಭದ್ರತಾ ಕಾಯಿದೆಯಲ್ಲಿ ಸೂಕ್ತ ಬದಲಾವಣೆ ಮಾಡಿ, ಬಡವರಿಗೆ ಪೌಷ್ಠಿಕ ಭದ್ರತೆ ಒದಗಿಸಲು ಕೇಂದ್ರ ಸರಕಾರ ತಯಾರಾಗಲಿ.

ಚಿತ್ರ ಕೃಪೆ: lawisgreek.com

Comments

Submitted by Shreekar Tue, 09/17/2013 - 16:24

ಸಮಯೋಚಿತವಾದ ಚಿಂತನೆಗೆ ಹಚ್ಚುವ ಬರಹಕ್ಕಾಗಿ ಧನ್ಯವಾದಗಳು. ಸರಕಾರೀ ಯೋಜನೆಗಳೆಂದ ಮೇಲೆ ಸೋರಿಕೆ, ಕಳಪೆ ಗುಣಮಟ್ಟ ಇತ್ಯಾದಿ ದೋಷಗಳು ದೊಡ್ಡ ಪ್ರಮಾಣದಲ್ಲಿ ಇದ್ದೇ ಇರುತ್ತವೆ. ವಿಪರೀತ ಬೆಲೆ ಏರಿಕೆ, runaway inflation ಗಳಿಗೆ ಸರಕಾರದ ಇಂಥಹ ಯೋಜನೆಗಳೇ ಕಾರಣ ಎಂದು ಅರ್ಥಶಾಸ್ತ್ರದ ಪಂಡಿತರು ಹೇಳಿದ್ದು ಓದಿದ್ದೇನೆ. ಸರಕಾರವು ಈಗ ಮಾಡಹೊರಟಿರುವದನ್ನು ನಮ್ಮ ಧರ್ಮಸ್ಥಳ, ತಿರುಮಲ ಇತ್ಯಾದಿ ದೇವಾಲಯಗಳು ತುಂಬ ಹಿಂದಿನಿಂದಲೇ ವ್ಯವಸ್ಥಿತವಾಗಿ ಮಾಡುತ್ತ ಬಂದಿವೆ, ISKCON ಶಾಲಾ ಮಕ್ಕಳಿಗೆ ಅಕ್ಷಯಪಾತ್ರೆ ಯೋಜನೆಯನ್ನು ಬ್ರಹತ್ ಪ್ರಮಾಣದಲ್ಲಿ ಮಾಡುತ್ತಲಿದೆ. (ಕೃಷ್ಣದ್ವೇಷಿಗಳು ಇದನ್ನು ಗಮನಿಸಬಹುದು. :--))))