ಕೆಂಪೇಗೌಡರ ಪ್ರವಾಸ ಪ್ರಸಂಗ
ಬೆಡಗಿನ ನಗರವ ನೋಡುವ ತವಕದ
ಮಾಗಡಿ ಗೌಡರ ಬೇಡಿಕೆ ಮನ್ನಿಸಿ
ಒಪ್ಪಿಗೆ ನೀಡುವ ಕಡತಕೆ ಸಹಿಯನು
ಟಿಪ್ಪಣಿ ಸಹಿತವೆ ಜಡಿದನು ಮಹೇಶ
ಈರೇಳು ದಿನದಿ ಪ್ರವಾಸ ಪೂರೈಸಿ
ಮರುದಿನ ತಪ್ಪದೆ ಹಿಂದುರಿಗಿ ಬರುವ
ಕಟ್ಟಳೆ ಮೇರೆಗೆ ಪತ್ರವ ಮುದ್ರಿಸಿ
ಕೊಟ್ಟನು ನಂದಿಯು ಗೌಡರ ಕೈಯಲಿ
ನಿಮ್ಮಯ ಪ್ರವಾಸ ಸುಖಕರ ವಾಗಲಿ
ಕ್ಷೇಮದಿ ಸೇರಿರಿ ನಿಮ್ಮಯ ಊರನು
ನಗರದ ವಿವರವ ಮರೆಯದೆ ತಿಳಿಯಿರಿ
ನಾರದ ಮುನಿಗಳ ಬಳಿಯಲಿ ಬಿಡದೇ
ಇಲ್ಕದೆ ಹೋದರೆ ತೊಂದರೆ ಬಹಳವೆ
ಹುಳುವನು ಬಿಟ್ಟನು ಗೌಡರ ಕಿವಿಯೊಳು
ಹುಡುಕುತ ಹೊರಟರು ಹುರುಪಲಿ ಗೌಡರು
ಮಿಡುಕುತ ಮನದಲಿ ನಾರದ ಮುನಿಗಳ
ಮಾಯಾ ನಗರಿಯ ವಿವರವ ತಿಳಿಯುವ
ಮೋಹಕೆ ಬಿದ್ದರು ಕೆಂಪೇಗೌಡರು
ಬೆಂದಕಾಳೂರಿನ ನಮ್ಮಯ ಗೌಡರು
ನೆನೆದರು ಮನದಲಿ ನಾರದ ಮುನಿಗಳ
ಮುನಿಗಳು ಬಂದರು ಗೌಡರ ಮುಂದೆಯೆ
ನನ್ನಯ ಊರಿನ ಸದ್ಯದ ಪ್ರವರವ
ಬೇಗನೆ ಹೇಳಿರಿ ಮುನಿ ಮಹನೀಯರೆ
ಈಗಲೆ ಹೊರಡುವೆ ಹುಟ್ಟೂರ ನೋಡಲು
ಬೀಗುತ ತೋರಲು ಒಪ್ಪಿಗೆ ಪತ್ರವ
ಪಡದಿರಿ ಅವಸರ ಕೆಂಪೇಗೌಡರೆ
ಕೊಡುವೆನು ವಿವರವ ಗಮನದಿ ಕೇಳಿರಿ
ಮಾಹಿತಿ ತಂತ್ರದ ಯಾಂತ್ರಿಕ ನಗರಿಯು
ಮಹಡಿಯ ಮಹಲಿನ ಗಾರೆಯ ಕಾಡದು
ಬಿಡುವೇ ದೊರೆಯದ ದುಗುಡಿನ ಮನುಜರು
ಬಡಬಡ ಓಡುವ ಇರುವೆಯ ತರದಲಿ
ಯಾಂತ್ರಿಕ ಶಕಟವನೇರುವ ಪರಿಯದು
ಮಾಂತ್ರಿಕ ನಗರಿಯ ನಿತ್ಯದ ಗೋಳಿದು
ತ್ರಿಚಕ್ರ ಶಕಟದ ಕಾಟದ ಕಿರಿಕಿರಿ
ದ್ವಿಚಕ್ರ ವಾಹನ ಓಟದ ಪಿರಿಪಿರಿ
ಪಾದಾಚಾರಿಯು ನಿತ್ಯವು ಶಪಿಸುವ
ಶುದ್ಧದ ಗಾಳಿಯ ಸುಳಿವೇ ಇಲ್ಲದ
ವಿಚಿತ್ರ ಭಾಷೆಯ ಮಾಯಾ ನಗರಿಯು
ಖಚಿತತೆಯಿಲ್ಲದ ಜೀವನ ಸಮರದಿ
ಸೋಲನು ಒಪ್ಪದೆ ಗೆಲ್ಲುವ ಚಪಲದಿ
ಕನಲುವರೆಲ್ಲಾ ದಿನವಿಡಿ ತವಕದಿ
ಬಣ್ಣದ ಬುರುಡೆಯ ಮಂದದ ಬೆಳಕಲಿ
ಸೊರ್ರನೆ ಹೀರುತ ಬುರುಗಿನ ಮದಿರೆಯ
ಹರಟೆಯ ಹೊಡೆಯುವ ಪಡ್ಡೆಯ ಹುಡುಗರು
ದಾರಿಯ ಬದಿಯಲಿ ಕೊಳಕಿನ ರಾಶಿಯ
ಪೇರಿಸಿ ಮೆರೆಯುವ ಮಹ ಮೇಧಾವಿಗಳು
ನೀರಿನ ಕೆರೆಗಳ ಹಸಿರಿನ ಹೊಲಗಳ
ಮೌನದಿ ನುಂಗುವ ರಕ್ಕಸ ಹಸಿವಿನ
ಮಾಂತ್ರಿಕ ಮನುಜರ ಮಾಯಾ ನಗರಿಯ
ವಿವರವ ಕೇಳಿದ ಗೌಡರು ಬೆವರಲು
ನೀವೇ ಕಟ್ಟಿದ ನಿಮ್ಮೂರ ಪರಿಯಿದು
ನಡೆಯಿರಿ ನೋಡಲು ಬೆಂದಕಾಳೂರ
ಶುಭವನು ಕೋರಿದ ನಾರದ ಮುನಿಗಳ
ಪಾದವ ಹಿಡಿದರು ಗೌಡರು ಬಿಡದೆ
ಮನ್ನಸಿ ಮುನಿಗಳೆ ಮೋಹದಿ ಕೆಟ್ಟೆನು
ಇನ್ನೆಂದಿಗು ಇಂತಹ ಸಾಹಸ ಮಾಡೆನು
ಬಸವನಗುಡಿಯ ಅನುಭವ ನೆನೆಯುತ
ನಂದಿಯು ನಕ್ಕನು ಗೌಡರ ನೋಡಿ
ಕೆಂಪೇಗೌಡರ ಪ್ರವಾಸ ವಿವರದ
ಮಾಯಾನಗರಿಯ ರಂಜಿತ ಪ್ರವರದ
ಜಯಪ್ರಕಾಶಿತ ಕವನ ಪ್ರಸಂಗ
Comments
ಉ: ಕೆಂಪೇಗೌಡರ ಪ್ರವಾಸ ಪ್ರಸಂಗ
ನಾರದರು ಹೇಳಿದ ಮಾತಿಗೇ ಬೆದರಿದ ಕೆಂಪೇಗೌಡರು ಈಗಿನ ಬೆಂಗಳೂರು ನೋಡಿರುತ್ತಿದ್ದರೆ! ಕವನ ಚೆನ್ನಾಗಿದೆ.
In reply to ಉ: ಕೆಂಪೇಗೌಡರ ಪ್ರವಾಸ ಪ್ರಸಂಗ by ಗಣೇಶ
ಉ: ಕೆಂಪೇಗೌಡರ ಪ್ರವಾಸ ಪ್ರಸಂಗ
ತುಂಬಾ ದುಃಖಪಡುತ್ತಿದ್ದರು, ಗಣೇಶರವರೆ ಮೆಚ್ಚಿಕೆಗೆ ಧನ್ಯವಾದಗಳು.
ಉ: ಕೆಂಪೇಗೌಡರ ಪ್ರವಾಸ ಪ್ರಸಂಗ
ಬೆಂಗಳೂರಿನ ಇಂದಿನ ಬವಣೆಯನ್ನು ನೋಡಿದ್ದರೆ ಕೆಂಪುಗೌಡರು ನಿಜಕ್ಕೂ ಬೆಂದಕಾಳಿನಂತಾಗುತ್ತಿದ್ದರು, ಎನ್ನುವ ಅಭಿಪ್ರಾಯದ ಗಣೇಶರ ಮಾತಿಗೆ ನನ್ನ ಸಹಮತವಿದೆ. ಜಯಪ್ರಕಾಶರೆ, ಕವನದ ರಚನೆ ಮತ್ತು ಅದರ ಆಶಯ ಎರಡೂ ಚೆನ್ನಾಗಿವೆ.
In reply to ಉ: ಕೆಂಪೇಗೌಡರ ಪ್ರವಾಸ ಪ್ರಸಂಗ by makara
ಉ: ಕೆಂಪೇಗೌಡರ ಪ್ರವಾಸ ಪ್ರಸಂಗ
ಶ್ರೀಧರ ಬಂಡ್ರಿಯವರೆ ಧನ್ಯವಾದ