ಯಾರು..? (ಚಿಣ್ಣರ ಹಾಡು)

ಯಾರು..? (ಚಿಣ್ಣರ ಹಾಡು)

ಚಿಣ್ಣರ ಲೋಕದ ಕುತೂಹಲಕೆ ಎಲ್ಲವೂ ವಿಸ್ಮಯಕಾರಕವೆ. ಒಂದೆಡೆ ಕುತೂಹಲವಾದರೆ ಮತ್ತೊಂದೆಡೆ ಅಚ್ಚರಿ, ವಿಸ್ಮಯಗಳ ಸಹಜ ಸಂಗಮ - ಇವೆಲ್ಲಾ ಪ್ರಶ್ನೆಗಳಾಗಿ ಮಗುವಿನ ಬಾಯಿಂದ ಹೊರಬಿದ್ದ ಬಗೆಯೆ 'ಯಾರು?' ಪದ್ಯ. ಇದು ೧೨.ಜೂನ್. ೧೯೯೨ ರಲ್ಲಿ ಬರೆದ ಪದ್ಯ. ಸಪ್ತಗಿರಿ ಮತ್ತು ಗಣೇಶರ ಕೋರಿಕೆಯಂತೆ ಹಳೆಯ ಬರಹಗಳನ್ನು ಪ್ರಕಟಿಸಲು ಹುಡುಕುತಿದ್ದಾಗ ಸಿಕ್ಕವು ಒಟ್ಟು ಮೂರು ಮಕ್ಕಳ ಪದ್ಯಗಳು - ಇದು ಮೂರನೆಯದು (ಉಳಿದೆರಡು ಈಗಾಗಲೆ ಸಂಪದದಲ್ಲಿ ಪ್ರಕಟಿಸಿದೆ). ಆ ದಿನಗಳಲ್ಲಿ ಬರೆದ ಕವನಗಳನ್ನು 'ಹದಿ ಹರೆಯದ ಕನಸುಗಳು' ಎಂಬ ಹೆಸರಡಿ ಒಟ್ಟು ಹಾಕಿದ್ದೆ. ಇವು ಅದೆ ಗುಂಪಾದರೂ, ಹದಿ ಹರೆಯಕ್ಕಿಂತ ಇಲ್ಲಿ ಪುಟಾಣಿ ಪ್ರಪಂಚದ ವಿಸ್ಮಯ, ಬವಣೆಗಳೆ ವಸ್ತುವಾದದ್ದು ಹರೆಯದ ಚೋದ್ಯ!  

(ಉಳಿದಿದ್ದೆಲ್ಲ ಬರಿ ಹರೆಯ ಬಿಂಬಿಸಿದ ವಸ್ತುಗಳೆ ಬಿಡಿ ಅನ್ನುತ್ತಿದೆ, ಭೂನಾರದ ಉವಾಚ ; ಅವುಗಳಲ್ಲಿರುವ ಹರೆಯದ 'ತುಂಟು' ಕವನಗಳನ್ನು ಪ್ರಕಟಿಸುವ ತಾಕತ್ತಿದೆಯಾ ಎಂದು ಅಣಕಿಸಿದೆ ಕಲಹ ಪ್ರಿಯ ಉವಾಚ...)

ಯಾರು..? (ಚಿಣ್ಣರ ಹಾಡು)
__________________

ನವಿಲಿನ್ ಚಿತ್ರ ಬರೆಯೋಕ್ ಹೊರಟೆ
ಮೈ - ಕೈಯೆಲ್ಲಾ ಬಣ್ಣಾ..
ನವಿಲಿನ್ ಮೈಗೆ ಕಣ್ಣು - ಬಣ್ಣ
ಬಳ್ದೋರು ಯಾರೋ ಅಣ್ಣಾ..?

ಗೇಟುನ್ ಮುಂದೆ ಒಣಗೋ ಗಿಡಕ್
ಹಾಕ್ಬೇಕ್ ದಿನಾನೂ ನೀರು
ಕಾಡ್ನಲ್ಲಿರೋ ಗಿಡ್ ಮರಗಳಿಗೆ
ತೊಗೊಂಡೋರ್ಯಾರೋ ಕೇರು ?

ಆಕಾಶದಲ್ಲಿ ಏರೋಪ್ಲೇನ್ಗೂ
ತುಂಬುಸ್ಬೇಕು ಪುಲ್ಲು
ರೆಕ್ಕೆ ಬಿಚ್ಕೊಂಡ್ ಹಾರೋ ಹಕ್ಕೀಗ್
ಎಲ್ಲೀದಪ್ಪ ಪ್ಯುಯೆಲ್ಲೂ...?

ಗಢಗಢ ಅಂತ ಓಡುತ್ತಲ್ಲ
ಅಷ್ಟೊಂದ್ ಭಾರದ್ ಟ್ರೇನು
ಯಾವನಪ್ಪ ಕಂಡು ಹಿಡ್ದೋನು
ಯೋಚಿಸ್ತೀನಿ ನಾನು ...?

ಯಾವಂದಪ್ಪ ಈ ಕೈವಾಡ
ಕೂತೋನಂತೆ ಅವಿತು
ಸಿಗಬೇಕಂತೆ ಕೈಗೊಂದ್ಸಾರಿ
ಕೇಳೋದೇ ಒಂದ್ ಮಾತು...! 

--------------------------------------------------------------------------------------------------------------------------------- 
ನಾಗೇಶ ಮೈಸೂರು, ದಿನಾಂಕ : ೧೨.ಜೂನ್. ೧೯೯೨, ಬೆಂಗಳೂರು
---------------------------------------------------------------------------------------------------------------------------------

Comments

Submitted by sathishnasa Thu, 09/19/2013 - 21:06

"ಯಾವಂದಪ್ಪ ಈ ಕೈವಾಡ ಕೂತೋನಂತೆ ಅವಿತು ಸಿಗಬೇಕಂತೆ ಕೈಗೊಂದ್ಸಾರಿ ಕೇಳೋದೇ ಒಂದ್ ಮಾತು...! " ಈ ಪ್ರಶ್ನೆ ಕೇಳ್ತೀವಿ ಅಂತಾನೆ ಅವನು ನಮ್ಮ ಕೈಗೆ ಸಿಗೋಲ್ಲ ನಾಗೇಶ್ ರವರೇ ಒಳ್ಳೆಯ ಕವನ .....ಸತೀಶ್
Submitted by nageshamysore Fri, 09/20/2013 - 18:52

In reply to by sathishnasa

ಧನ್ಯವಾದಗಳು ಸತೀಶ್..ಕೈಗೆ ಸಿಗಿದಿದ್ದೆ ಇಷ್ಟೊಂದು ಕಿತಾಪತಿ ಮಾಡ್ತಾರೆ ಕೆಲವು ಜನ.. ಇನ್ನು ಸಿಕ್ಕಿದ್ರೆ ಅವನೆ 'ದೇವರೆ ಗತಿ' ಅಂತ ಓಡಿಹೋಗ್ತಿದ್ನೊ ಏನೊ :-)   ಧನ್ಯವಾದಗಳೊಂದಿಗೆ ನಾಗೇಶ ಮೈಸೂರು  
Submitted by nageshamysore Fri, 09/20/2013 - 18:55

In reply to by ಗಣೇಶ

ಗಣೇಶ್ ಜೀ, ಸಂಪದದಲ್ಲಿ ಇದುವರೆಗೂ ಬಂದಿರೊ ಶಿಶುಗೀತೆಯೆಲ್ಲ ಸೋಸಿ , ಕೆಲವನ್ನ ಆಯ್ದು ಒಂದು ಕಡೆ ಸಂಗ್ರಹಿಸಿ ಕಿರು ಪುಸ್ತಕ ಮಾಡಿದರೆ, ಒಂದು ಪುಟಾಣಿಗಳ 'ಪಾಠದ ಪುಸ್ತಕವೆ' ಆಗುತ್ತೇನೊ..   ಧನ್ಯವಾದಗಳೊಂದಿಗೆ ನಾಗೇಶ ಮೈಸೂರು