ಯಾರ ಗೆಲುವು? – ( ‘ಛಿಧ್ರವೋ, ಸಮಗ್ರವೋ?' )

ಯಾರ ಗೆಲುವು? – ( ‘ಛಿಧ್ರವೋ, ಸಮಗ್ರವೋ?' )

ಈ ತಾಂತ್ರಿಕ, ಮಾಹಿತಿ ಯುಗದ ತುರುಸಿನಲ್ಲಿ ವೇಗವೆ ಪ್ರಮುಖ ಅಸ್ತ್ರ. ಹೀಗಾಗಿ ನಡೆದಿರುವುದೆಲ್ಲ ಸರಿಯಾಗಿ ಆಗುತ್ತಿದೆಯೆ ಇಲ್ಲವೆ ಎಂದು ನೋಡಲು ಯಾರಿಗೂ ವ್ಯವಧಾನವಿಲ್ಲ. ಮಾಡಿದ್ದು ಸರಿಯೊ ತಪ್ಪೊ ತಕ್ಷಣಕ್ಕೆ ತಿಳಿಯಲೂ ಸಾಧ್ಯವಿಲ್ಲ - ಭವಿತಕ್ಕೆ ಕಾಯಬೇಕು. ಆದರೆ ಕಾಯುತ್ತ ಕೂತರೆ ವೇಗಕ್ಕೆ ಹೊಡೆತ. ಸರಿ ಏನು ಮಾಡುವುದು? ಬಹುಶಃ ಈ ಹಿನ್ನಲೆಯಲ್ಲೆ ಹಲವಾರು ಸಿದ್ದಾಂತಗಳು ಹುಟ್ಟಿಕೊಂಡು ಎಲ್ಲ ಅವರವರ ತತ್ವವನ್ನೆ ನಂಬಿಕೊಂಡು ಓಡುವ ಹವಣಿಕೆ ಎದ್ದು ಕಾಣುವ ಅಂಶ. ಇದರಲ್ಲಿ ಈಚಿನ ವರ್ಷಗಳಲ್ಲಿ ಪ್ರಮುಖವಾಗಿ ತೋರುವ ಎರಡು ಮುಖ್ಯ ಕವಲುಗಳೆಂದರೆ - ಛಿದ್ರತೆಯ ಹಾದಿ (ಮೈಕ್ರೊಸಾಫ್ಟಿನ ಬಿಲ್ಗೇಟ್ ತರದವರು ಹಿಡಿದ ಹಾದಿ - ಯಾವುದನ್ನೂ ಸಮಗ್ರತೆಯ ದೃಷ್ಟಿಯಲ್ಲಿ ನೋಡದೆ ಪ್ರತಿ ಪ್ರಶ್ನೆಗೂ ಅದರದೆ ಆದ ಉತ್ತರ ಹುಡುಕುವ ಹಾದಿ, ನೂರು ಪ್ರಶ್ನೆಯಿದ್ದರೆ ನೂರು ಬೇರೆ ಅದರದೆ ಉತ್ತರ (ಅರ್ಥಾತ್ ತಂತ್ರಾಂಶ ಪರಿಹಾರ ಎಂದು ಓದಿಕೊಂಡರೆ, ಸುಲಭದಲ್ಲಿ ಅರ್ಥವಾದೀತು); ಹಾರ್ಡ್ವೇರಾಗಲಿ ಮತ್ತಾವುದೆ ಅಂಶವಾಗಲಿ ಸಮಗ್ರತೆಯ ದೃಷ್ಟಿಯಿಂದ ಇಲ್ಲಿ ಪರಿಗಣಿತವಾಗುವುದಿಲ್ಲ. ಇನ್ನು ಎರಡನೆಯ ಹಾದಿಯೆಂದರೆ - ಸ್ಟೀವ್ ಜಾಬ್ಸಿನಂತಹವರು ಹಿಡಿದ ಸಮಗ್ರತೆಯ ಹಾದಿ; ಇಲ್ಲಿ ಉಪಕರಣ, ತಂತ್ರಾಂಶ, ಉಪಯುಕ್ತತೆಯೆಲ್ಲವನ್ನು ಒಂದು ಸಮಗ್ರ ಚೌಕಟ್ಟಿನಲ್ಲಿ ಬಂಧಿಸಿ, ಬಳಕೆದಾರನಿಗೆ 'ಸುಲಿದ ಬಾಳೆಯ ಹಣ್ಣಿನ' ರೂಪದಲ್ಲಿ ಕಟ್ಟಿಕೊಡುವ ಯತ್ನ. ಈ ಎರಡು ಸಿದ್ದಾಂತಗಳ ಸಮರವನ್ನು ಬಿಲ್ಗೇಟ್ - ಜಾಬ್ಸಿನ ನಡುವಣ ಸಮರದಂತೆ ಪರಿಗಣಿಸಿದವರೂ ಉಂಟು. ಅದೇನೆ ಇದ್ದರೂ, ಈ ಕದನದ ದೆಸೆಯಿಂದ ಐವತ್ತು ವರ್ಷಗಳಲ್ಲಾಗಬಹುದಿದ್ದ ತಾಂತ್ರಿಕ ಪ್ರಗತಿ ಐದೆ ವರ್ಷಗಳಲ್ಲಿ ಆಗಿಹೋಗಿದ್ದು ಅಷ್ಟೆ ನಿಜ. ಈ ಎರಡು ಸಿದ್ದಾಂತ ತತ್ವಗಳ ನಡುವಿನ ತಿಕ್ಕಾಟವನ್ನು ಬಿಂಬಿಸುವ ಯತ್ನವೆ ಈ ಕವನ. ಈಗ ಜಾಬ್ಸ್ ಬದುಕಿರದಿದ್ದರೂ, ಅವನ ಸಿದ್ದಾಂತದ ಮೂಲ ರೂಪು- ರೇಷೆಗಳು ಬೇರೆ ಕಡೆಯೂ ನಿಧಾನವಾಗಿ ಅಂತರ್ಗತವಾಗುತ್ತಿರುವುದನ್ನು ನೋಡಿದರೆ ಬಹುಶಃ ಇದು ಅವನ ಸಮಗ್ರತೆಯ ತತ್ವಕ್ಕೆ ಸಿಗುತ್ತಿರುವ ಬೆಂಬಲವೆಂದೆ ಹೇಳಬಹುದು. ಇತ್ತೀಚೆಗೆ ಮನೆಯಲ್ಲಿ ಹೊಸ ತೋಷೀಬಾ ಕಂಪ್ಯೂಟರ್ - ವಿಂಡೊಸ್ 8 ಜತೆ - ಖರೀದಿಸಿ ತಂದೆ. ಅದನ್ನು ಬಳಸಲು ಆರಂಭಿಸಿದಾಗ ಮುಖದ ಮೇಲಿನ ಮುಗುಳ್ನಗೆಯನ್ನು ಹಿಡಿದಿಡಲಾಗಲಿಲ್ಲ - ಅಲ್ಲಿರುವ 'ಆಪ್ಸ್' ಗಳ ಐಡಿಯಾ ನೋಡಿದಾಗ (ನಾನಿದನ್ನು ಮೊದಲ ಬಾರಿ ನೋಡಿದ್ದು ಐ ಫೋನಿನಲ್ಲಿ).

ಅಂತಿಮ ಫಲಿತಾಂಶ, ತೀರ್ಪು ಏನೆ ಇದ್ದರೂ ಈ ಕವನದ ಉದ್ದೇಶ ಎರಡನ್ನು ಕಾಲಘಟ್ಟದ ಮಾಪನದಲ್ಲಿ ಎತ್ತಿ ತೋರಿಸಲಷ್ಟೆ.

ಯಾರ ಗೆಲುವು? – ( ‘ಛಿಧ್ರವೋ, ಸಮಗ್ರವೋ?' )
_______________________________

ಸುವರ್ಣ ಯುಗ ಕ್ರಾಂತಿ
ಎಲ್ಲರ ಕನಸಿನ ಸರತಿ
ತಮ್ಮ ಪಾಲಿನ ‘ಪೈ’ಗೆ
ಅವರವರದೇ ಭ್ರಾಂತಿ
ಸರಿ, ತಪ್ಪು ಯಾರ ಮತಿ
ತೋರುವರವರವರಾ ಪ್ರಗತಿ
ದಾರಿ ನೂರಾರು ಗಣತಿ
ಗಂಟಾಕುವರದೇ ಕೊರತಿ;
ದೊಡ್ಡವರ ದೊಡ್ಡತರ
ಸಣ್ಣವರ ಅಳುಕು ಸ್ವರ
ನಿರೋಳಗಿನೆಣ್ಹೇಯಂತೆ
ಮಾಡಿಟ್ಟಿದೆ ಕಿಚಡಿ..
ಯಾರ ಗೆಲುವೋ ಕೊನೆಗೆ
ಗೆದ್ದವನೇ ದಳಪತಿ !

ಸ್ಟೀವ್ ಜಾಬ್ಸ್ ಶುಭ್ರತೆ,
ಸಮಗ್ರತೆ
ಬಿಲ್ ಗೇಟ್ಸ್ ನ ಛಿದ್ರತೆ,
ಗುರಿ ಭದ್ರತೆ ;
ಗೂಗಲ್ಲುಗಳಿನ ರೌದ್ರವತೆ ..
ಫೇಸ್ ಬುಕ್ಕುಗಳ ವಿಶಾಲತೆ..
ಟ್ವಿಟ್ಟರಿನ ಚುಟುಕತೆ..
ಡೆಲ್ಲೊಳಗಿನ ಹರಿಕತೆ..
ಅವರವರ ಕೋಟೆ ಭದ್ರತೆ,
ಅವರವರ ನೀತಿ ಬದ್ದತೆ.
ಪರಿಸ್ಥಿತಿಯ ಕ್ಷುದ್ರತೆ
ಕಲಸು
ಮೆಲೋಗರದಾ ಕತೆ..
ಇಷ್ಟೆಲ್ಲದರ ನಡುವೆಯೂ
ಮೆರೆದ ನಮ್ಮ ಭವ್ಯತೆ;
ಪ್ರೇಮಜಿ, ನಾರಾಯಣಮೂರ್ತಿ
ನೀಲಕೇಣಿಗಳ
ಸರಿಸಮ ಗಮ ಸರ್ವತೆ..
ನಮ್ಮೆದೆಯುಬ್ಬಿಸೋ ಗರ್ವತೆ!

ಅಂತು
ರಕ್ತ ಬೀಜಾಸುರ,
ಈಗ ಐಟಿ ತೋಟ
ಆಟ, ಪಾಠ, ನೋಟ
ರಸದೂಟ ಬೊಂಬಾಟ;
ಎರಲೆತ್ತರ ಏಣಿ
ದೇಶ ಪ್ರಗತಿಗೆ ದೋಣಿ
ಹುಚ್ಚಿ ಮದುವೆಯಲೂಟ
ಉಂಡಂತೆ ನಾಣಿ ;
ತಪ್ಪು ಸರಿಗಳ ಗೊಡವೆ
ಸಧ್ಯ ಸರಿಸಿಟ್ಟು ಕಡೆ
ಹೆಗಳುಗೊಡುವನಿವಾರ್ಯ
ಗಮ್ಯದೆಡೆಗೆ ..
ಯಾರು ಗೆಲ್ಲುವ ಕುದುರೆ ?
ಯಾರು ಬಲ್ಲರು ಭವಿತ ?
ಸದ್ಯಕೆ ಗುಂಪಿಲಿ ಖೋತಾ -
‘ಛಿಧ್ರವೋ – ಸಮಗ್ರವೋ
ಎರಡಲ್ಲದ ನಡು ಮಧ್ಯವೋ’?
ಎಲ್ಲರೊಳಗೊಂದಾಗಿ
ಮುಂದೆ
ನಡೆದಿರುವೆ
ಸರಿದಾರಿ ಅಡಗಿಹುದೆಲ್ಲೋ
ಬಿಡದೆ
ಹುಡುಕಿರುವೆ !
__________________________________________________________________________

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
__________________________________________________________________________
ಭೂನಾರದ ಉವಾಚ: ಈ ಸ್ಮಾರ್ಟ್ಫೋನ್ ಭರಾಟೆ ನೋಡಿದ್ರೆ ಕೊನೆಗೆ ಸಮಗ್ರತೆಗೆ ಗೆಲುವೇನೊ ಅಂತ ಕಾಣುತ್ತೆ...
ಕಲಹಪ್ರಿಯ ಉವಾಚ : ಹಾಗೇನಾದರು ಆದರೂ ಸಹ, ಅಷ್ಟೊತ್ತಿಗೆ ಛಿದ್ರದವರೂ ಕ್ಯಾಂಪ್ ಬದಲಿಸಿ ಸಮಗ್ರಕ್ಕೆ ಹಾರಿಬಿಟ್ಟಿರುತ್ತಾರೆ ಬಿಡಿ !

Comments

Submitted by nageshamysore Sun, 09/22/2013 - 10:44

In reply to by partha1059

ಹೌದು ಪಾರ್ಥಾ ಸಾರ್, ಇಬ್ಬರೂ ಒಬ್ಬರೆ - ಅದರ ತುಸು ವಿಭಿನ್ನ ಕೊಂಕಿನ ಅರ್ಥದಲ್ಲಿ ಬಳಸುತ್ತಿದ್ದೇನೆ. 1) ಭೂನಾರದ - ಲೋಕ ಕಲ್ಯಾಣಾರ್ಥಿ, ಭೂಲೋಕವಾಸಿಗಳ ಪರವಾದ ತುಸು ಮೃದು ವ್ಯಕ್ತಿತ್ವದ ಮುಖ 2) ಕಲಹ ಪ್ರಿಯ - ಹೆಸರೆ ಹೇಳುವಂತೆ ತಂದಿಟ್ಟು ತಮಾಷೆ ನೋಡುವ ಹುನ್ನಾರದ ಮುಖ - ಆದರೆ ಅಂತಿಮ ಗುರಿ ತ್ರಿಲೋಕ ಕಲ್ಯಾಣವೆ ಆದಕಾರಣ ಇಬ್ಬರೂ ಒಂದೆ ಗಮ್ಯಕ್ಕೆ ಹೊರಟವರೆಂದೆ ಹೇಳಬೇಕು. ಸ್ವಲ್ಪ ನಮ್ಮ ತಾಂತ್ರಿಕ ಚೌಕಟ್ಟಿಗೆ ಅಳವಡಿಸಿಕೊಳ್ಳಬೇಕೆಂದರೆ - ಒಬ್ಬರನ್ನು ಬಿಲ್ಗೇಟಿಗೂ, ಇನ್ನೊಬ್ಬರನ್ನು ಸ್ಟೀವ್ ಜಾಬ್ಸಿಗೂ ಹೋಲಿಸಿಕೊಳ್ಳೋಣವೆ? ಯಾರು ಕಲಹ ಪ್ರಿಯ, ಯಾರು ಭೂನಾರದ ಅನ್ನುವುದು ಮುಂದಿನ ಪ್ರಶ್ನೆ! (ಹಿಂದೊಮ್ಮೆ ಕವಿತಾ ಲಂಕೇಶರ ಚಿತ್ರವೊಂದರ ಜಾಹೀರಾತಿನಲ್ಲಿ ರಾಧಿಕಾನ, ರಮ್ಯಾನ ಅಂತೇನೊ ಒಂದು ಪೋಟಿ ಏರ್ಪಾಡಾಗಿತ್ತಲ್ಲ ಹಾಗೆ :-)
Submitted by nageshamysore Sun, 09/22/2013 - 11:00

ಮತ್ತೆ ಕಣ್ತಪ್ಪಿನಿಂದಾಗಿ ಹನ್ನೊಂದನೆ ಸಾಲು ತಪ್ಪಾಗಿಹೋಗಿದೆ 'ನಿರೋಳಗಿನೆಣ್ಹೇಯಂತೆ' ಎಂದಿರುವುದನ್ನು 'ನೀರೊಳಗಿನೆಣ್ಣೆಯಂತೆ' ಎಂದು ಓದಿಕೊಳ್ಳಿ - ತಪ್ಪಿಗೆ ಕ್ಷಮೆಯಿರಲಿ.