ಕಾಳಿಂಗ ಮರ್ದನ ಕೃಷ್ಣ

ಕಾಳಿಂಗ ಮರ್ದನ ಕೃಷ್ಣ

 ಕೃಷ್ಣ..ಕೃಷ್ಣ..ಕೃಷ್ಣ..     -   ಕಾಳಿಂಗ ಮರ್ದನ ಕೃಷ್ಣ

 

 

ಇಲ್ಲಿಯವರೆಗೂ.....

ಕೃಷ್ಣ  ಹೇಳಿದ

"ನಾನು ನುಣುಚಿಕೊಳ್ಳುತ್ತಿಲ್ಲ ಗಣೇಶ , ನನ್ನ ಮನಸಿನ ಸಾಕ್ಷಿಯಂತೆ ಉತ್ತರಿಸುತ್ತಿದ್ದೇನೆ.  ನೀನು ಯೋಚಿಸಿದರೆ ಸರಿಯಾದ ಉತ್ತರವೆ ಹೊಳೆಯುತ್ತದೆ. ಈಗ ನೋಡು ಕಾಳಿಂಗನ ಪ್ರಸಂಗ ಎತ್ತಿದೆ. ಅದು ಸಾಕಷ್ಟು ದೊಡ್ಡದಿದೆ ಕೇಳುವೆಯ ?"

ಗಣೇಶ ನುಡಿದ

"ನಿನ್ನ ಎಲ್ಲ ಪ್ರಸಂಗವನ್ನು ಕೇಳಲೆಂದೆ ನಾನು ಇಲ್ಲಿ ನಿನ್ನ ಜೊತೆ ಕುಳಿತಿದ್ದೇನೆ ಹೇಳು ಕೃಷ್ಣ . ವಿವರವಾಗಿಯೆ ಹೇಳು”

ಕೃಷ್ಣ ಹಳೆಯದೆಲ್ಲ ನೆನಪಿಸಿಕೊಳ್ಳುತ್ತಿರುವನಂತೆ ಸ್ವಲ್ಪ ಕಾಲ ಕಣ್ಣು ಮುಚ್ಚಿದ್ದ. ಗಣಪತಿ ಕುತೂಹಲದಿಂದ ಅವನತ್ತಲೆ ನೋಡುತ್ತಿರುವಂತೆ ಕೃಷ್ಣ ಪ್ರಾರಂಬಿಸಿದ.

ಮುಂದೆ ಓದಿ...

 “ ಗಣೇಶ , ನಾವು ದಿನವು ದನಗಳನ್ನು ಮೇಯಿಸಲು ಹಳ್ಳಿಯ ಹೊರವಲಯಕ್ಕೆ ಹೋಗುತ್ತಿದ್ದೆವು ಎಂದು ಗೊತ್ತಿದೆಯಲ್ಲ,  ನಾವು ಒಂದು ಕಡೆ ಕುಳಿತು   ಕಾಲ ಕಳೆಯುತ್ತಿರಲಿಲ್ಲ. ಸುತ್ತಮುತ್ತಲ ಗುಡ್ಡಗಳು, ನದಿ , ನೀರಿನ ಕೊಳಗಳು, ಹಣ್ಣಿನ ತೋಪುಗಳು ಎಲ್ಲವು ನಮಗೆ ಪರಿಚಿತ. ಅಲ್ಲೆಲ್ಲ ನಮ್ಮ ಅಲೆದಾಟವಿದ್ದೆ ಇತ್ತು. ಆದರೆ ಊರ ಹೊರಗಿದ್ದ ಒಂದು ನೀರಿನ ಕೊಳಕ್ಕೆ ಯಾರು ಕಾಲಿಡುತ್ತಿರಲಿಲ್ಲ. ಅದು ಎಷ್ಟು ವರ್ಷಗಳ ಪದ್ದತಿ ಎನ್ನುವಂತೆ ನಮ್ಮ ದನಗಳು ಸಹಿತ ಮರೆತು ಆ ಕಡೆ ತಲೆ ಹಾಕುತ್ತಿರಲಿಲ್ಲ. ಇದು ನನಗೆ ಮೊದಲಲ್ಲಿ ಕುತೂಹಲ ಕೆರಳಿಸಿತು ನಂತರ ಹಿರಿಯರ ಹತ್ತಿರ ಗೆಳೆಯರ ಹತ್ತಿರ ವಿಚಾರಿಸಲು, ಅದಕ್ಕೆ ಕಾರಣ ಆ ಕೊಳದ ಕಲ್ಲಿನ ಪೊಟರೆಗಳಲ್ಲಿ ವಾಸವಾಗಿರುವ ಭೀಕರ ಸರ್ಪ ಹಾಗು   ಗುಂಪಿನ ಇತರೆ ಸರ್ಪಗಳು. ಅದನ್ನು ಕಾಳಿಂಗ ಎಂದು ಎಲ್ಲರು ಕರೆಯುತ್ತಿದ್ದರು.  ಮೊದಲೆಲ್ಲ ಎಷ್ಟೊ ದನಗಳು, ದನಗಾಹಿಗಳು ಅದರ ಕಡಿತದಿಂದ ಮೃತಪಟ್ಟಿದ್ದರು. ಸರ್ಪದ ಭಯದಿಂದ ಆ ಕೊಳದ ನೀರನ್ನು ವರುಷಗಟ್ಟಲೆ ಉಪಯೋಗಿಸದೆ ಬಿಟ್ಟ ಕಾರಣಕ್ಕೆ ಅದು ಪಾಚಿಕಟ್ಟಿ ದಟ್ಟ ಹಸಿರುವರ್ಣಕ್ಕೆ ಕಾಣಿಸುತ್ತಿತ್ತು.

 ಆ ನೀರಿನ ಕೊಳವು ನಾವು ದನಗಳನ್ನು ಮೇವಿಗೆ ಬಿಡುತ್ತಿದ್ದ ಸ್ಥಳಕ್ಕೆ ಅತಿ ಸಮೀಪವಿದ್ದು, ನಾವು ನೀರಿಗಾಗಿ , ದನಗಳಿಗೆ ನೀರು ಕುಡಿಸುವುದಕ್ಕಾಗಿ ಬಹಳ ದೂರ ಹೋಗುತ್ತಿದ್ದೆವು. ನನಗೆ ಒಮ್ಮೆ ಈ ಸರ್ಪದ ಭಯ ತಪ್ಪಿದರೆ, ಎಲ್ಲರಿಗು ನೀರಿನ ಅನುಕೂಲವಾಗುವದೆಂದು ಅನ್ನಿಸಿತು. ದನಗಳಿಗೆ ಕುಡಿಯಲು ನೀರು ಅಲ್ಲದೆ ಸುತ್ತಲು ಮರಗಳು ಬೆಳೆದಿರುವದರಿಂದ ತಂಪು ಎಲ್ಲವು ಸಿಗುತ್ತಿತ್ತು.

ನಾನು ಆ ಬಗ್ಗೆ ಗೆಳೆಯರ ಜೊತೆ ಚರ್ಚಿಸಿದೆ ಆದರೆ ಎಲ್ಲರು ಒಂದೆ ಮಾತಿನಲ್ಲಿ ನನ್ನ ಮಾತನ್ನು ತಿರಸ್ಕರಿಸಿದರು. ಆ ಸರ್ಪದ ತಂಟೆಗೆ ಹೋಗದಿರುವುದು ಒಳ್ಳೆಯದೆಂದು ಅದು ಬಹಳ ಹಳೆಯ ಸರ್ಪವಾಗಿದ್ದು. ಜೊತೆ ಜೊತೆಯಲ್ಲಿ ಕಲ್ಲಿನ ಪೊಟರೆಗಳಲ್ಲಿ ಹತ್ತು ಹಲವು ಹಾವುಗಳಿದ್ದು ನೀರಿನ ಹತ್ತಿರ ಹೋಗಲು ಸಾದ್ಯವೆ ಇಲ್ಲವೆಂದು ತಿಳಿಸಿದರು.

ನಾನು ನಿನಗೆ ಮತ್ತೊಂದು ವಿಷಯ ತಿಳಿಸಬೇಕು.  ನಾನು ದನ ಕಾಯಲು ಹೋಗುವಾಗ  ಮತ್ತೆ ಕೆಲವು ಸಮಯದಲ್ಲಿ  ಊರ ಹೊರಗೆ ವಾಸವಿದ್ದ ಹಾವಡಿಗರ ಹಾಡಿಗಳಿಗೆ ಒಮ್ಮೊಮ್ಮೆ ಹೋಗುತ್ತಿದೆ. ಅಲ್ಲಿ ವಯಸ್ಸಾದ, ಯುವಕರಾದ , ಹಾವಾಡಿಗರ ಕುಟುಂಬ ಬಹಳವಿದ್ದವು. ಅವರೆಲ್ಲರ ಕುಲಕಸುಬು ಹಾವುಗಳನ್ನು ಹಿಡಿದು ಆಡಿಸುವುದು ಅದನ್ನು ಜನರಿಗೆ ತೋರಿಸಿ ಅವರು ಕೊಡುವ ಧಾನ್ಯ ಧನ ಇವುಗಳಿಂದಲೆ ಅವರ ಜೀವನ. ನಾನು ಪದೆ ಪದೆ ಹೋಗುತ್ತ ಅವರೆಲ್ಲ ನನಗೆ ಪರಿಚಿತರಾಗಿದ್ದರು. ಅವರಿಂದ ಹಾವುಗಳ ಬಗ್ಗೆ ಅವುಗಳ ಸ್ವಭಾವದ ಬಗ್ಗೆ ಬಹಳ ವಿಷಯ ಅರ್ಥಮಾಡಿಕೊಂಡಿದ್ದೆ. ಹಾವುಗಳ ಬಹಳ ಮುಖ್ಯವಾದ ಸ್ವಭಾವ ಎಂದರೆ ಜನರ ಸಹವಾಸದಿಂದ ಅವು ದೂರ ಇರುತ್ತವೆ. ಆದಷ್ಟು ಜನರ ದಾರಿಯಿಂದ ಅವು ದೂರ ಸರಿಯಲು ಪ್ರಯತ್ನಿಸುತ್ತವೆ. ನಾವಾಗೆ ಅದರ ತಂಟೆಗೆ ಹೋಗದ ಹೊರತಾಗಿ ಅದು ನಮ್ಮ  ಮೇಲೆ ಆಕ್ರಮಣ ನಡೆಸಲು ಬರುವ ಸಂಭವ ಕಡಿಮೆ. ಇದೆಲ್ಲ ಹಾವಾಡಿಗರೆ ನನಗೆ ತಿಳಿಸಿದ್ದ ವಿಷಯಗಳು

ನಾನು ಹಾವಿನ ಈ ಸ್ವಭಾವ ಬಳಸಿಕೊಳ್ಳಲು ಪ್ರಯತ್ನಿಸಿದೆ. ಕೆಲವು ಧೈರ್ಯವಂತ ಗೆಳೆಯರನ್ನು ಒಟ್ಟಿಗೆ ಹಾಕಿಕೊಂಡು, ಕಾಳಿಂಗ ವಾಸವಾಗಿದ್ದ ಕೊಳದ ಹತ್ತಿರ ಹೋಗಿ ಅಲ್ಲಿಯ ವಿಷಯವನ್ನೆಲ್ಲ ಗಮನಿಸಿದೆ. ಅಂದಿನಿಂದ ದಿನವು ದನಮೇಯಿಸಲು ಹೋಗುವಾಗ ಹಾವುಗಳು ವಾಸವಾಗಿದ್ದ ಕೊಳಕ್ಕೆ ಕಲ್ಲು ಎಸೆಯುವುದು, ಅವುಗಳನ್ನು ಕೆಣಕುವುದು ಮಾಡುತ್ತಿದ್ದೆವು. ಕೆಲವೊಮ್ಮೆ ಪೊಟರೆಯಿಂದ ಹೊರಬಂದ ಹಾವುಗಳು ಬುಸುಗುಟ್ಟುತ್ತಿದ್ದವು. ನಮ್ಮತ್ತ ಹೆಡೆ ಬೀಸುತ್ತಿದ್ದವು ಆದರೆ ನಾವುಗಳು ಸಾಕಷ್ಟು ದೂರದಲ್ಲಿದ್ದು ಸುರಕ್ಷಿತವಾಗಿದ್ದೆವು.

ಬರುಬರುತ್ತ ನಮಗೂ ಧೈರ್ಯ ಜಾಸ್ತಿಯಾಯಿತು. ಹತ್ತಿರವೆ ಹೋಗುತ್ತಿದ್ದೆವು ದಿನವೂ ಅವುಗಳನ್ನು ಕೆಣಕುತ್ತಿದ್ದೆವು. ಸುಮಾರು ಇಪ್ಪತ್ತು ದಿನ ಹೀಗೆ ಮುಂದುವರೆದಿತ್ತು ನಮ್ಮ ಸಾಹಸ. ಆದರೆ ಯಾರೊಬ್ಬರು ಊರಿನ ಹಿರಿಯರಿಗೆ ಈ ವಿಷಯ ಮುಟ್ಟಿಸಲು ಹೋಗಿರಲಿಲ್ಲ.

ಹೀಗೆ ಒಮ್ಮೆ ನಮ್ಮ ಕಾಟ ಸಹಿಸಲಾರದೆ ಕಾಳಿಂಗ ಸರ್ಪವೆಂದೆ ಹೆಸರಾಗಿದ್ದ ದೊಡ್ಡ ಸರ್ಪವೆ ಎದುರಿಗೆ ಬಂದಿತು. ಜನರು ಹೇಳುತ್ತಿದ್ದ ವಿಷಯ ನಿಜವಾಗಿತ್ತು. ಅದು ಸುಮಾರು ಇಪ್ಪತ್ತು ಅಡಿಗಿಂತ ದೊಡ್ಡದಿದ್ದು. ನೋಡುವಾಗ ಎದೆಯಲ್ಲಿ ನಡುಕ ಹುಟ್ಟುವಂತಿತ್ತು. ಅದು ಹೆಡೆ ಅಗಲಿಸಿ ಬುಸುಗುಟ್ಟಿದ್ದರೆ ಎಲ್ಲರು ದೂರ ಓಡುತ್ತಿದ್ದರು. ಕೆಲವು ದಿನಗಳಲ್ಲೆ ನಾನು ಗಮನಿಸಿದೆ ಕಾಳಿಂಗ ಸರ್ಪದ    ಚಲನವಲನಗಳು ಸಹ ಅತಿ ನಿಧಾನವಾಗಿದ್ದವು. ನಾವು ಇಬ್ಬರು ಮೂವರು ಒಟ್ಟಿಗೆ ಇದ್ದರೆ ಅದು ಪ್ರತಿಕ್ರಿಯಸಲು ನಿಧಾನ ಮಾಡುತ್ತಿತ್ತು.

ನಮಗೆ ಕಾಳಿಂಗನ ಹತ್ತಿರ ಹೋಗುವಷ್ಟು ಧೈರ್ಯ ಬಂದಿತ್ತು. ನನಗೆ ಕೊಳಲು ನುಡಿಸುವ ಹುಡುಗಾಟ ಬೇರೆ. ಕೊಳಲನ್ನು ಬಾಯಲ್ಲಿ ಇಟ್ಟು ಅತ್ತ ಇತ್ತ ಓಡಾಡುತ್ತಿದ್ದರೆ ಅದು ತನ್ನ ಹೆಡೆಯನ್ನು ಅಗಲಿಸಿ ನಾನು ಹೋದತ್ತಲೆ ಚಲಿಸುತ್ತಿತ್ತು. ಜೊತೆಯ ಹುಡುಗರಿಗೆ ಅದೇನೊ ಖುಷಿ. ನನಗೆ ಹುಮ್ಮಸ್ಸು ಜಾಸ್ತಿಯಾಗುತ್ತ, ಅದರಿಂದ ಸುರಕ್ಷಿತ ದೂರದಲ್ಲಿ ಅದರ ಸುತ್ತಲು ನರ್ತಿಸುತ್ತಿದ್ದೆ.

ಅದರತ್ತ ಕಾಲು ಸಹ ಬೀಸುತ್ತಿದ್ದೆ, ಅದು ಹೆಡೆ ಅಪ್ಪಳಿಸುವದರಲ್ಲಿ ನನ್ನ ಕಾಲು ತಪ್ಪಿಸುವಷ್ಟು ಚುರುಕು ನಾನು. ಕಾಳಿಂಗನಂತು ತನ್ನ ಸಹನೆ ಕಳೆದುಕೊಂಡಿತ್ತು ಅನ್ನಿಸುತ್ತೆ.

ಕ್ರಮೇಣ ಈ ವಿಷಯಗಳೆಲ್ಲ ಅದು ಹೇಗೊ ಊರಿನ ಹಿರಿಯರಿಗೆ ತಲುಪಿತ್ತು ಆದರೆ ಅಮ್ಮ ಅಪ್ಪನ ಗಮನಕ್ಕೆ ಬಂದಿರಲಿಲ್ಲ.  ದಿನಕಳೆದಂತೆ ಅಲ್ಲಿ ವಾಸವಾಗಿದ್ದ ಸರ್ಪ ಹಾವುಗಳಿಗೆ  ನೆಮ್ಮದಿ ತಪ್ಪಿತ್ತು. ನಾವು ಹುಡುಗರೆಲ್ಲ ದಿನದಿನವು ಅವುಗಳನ್ನು ಕಾಡುತ್ತಿದ್ದು ಅವುಗಳಿಗೆ ಆ ಸ್ಥಳದ ಆಕರ್ಷಣೆ ಕಡಿಮೆಯಾಯಿತು ಅನಿಸುತ್ತೆ. ಅವುಗಳೆಲ್ಲ ಅಲ್ಲಿಂದ ತಮ್ಮ ವಾಸಸ್ಥಳವನ್ನು ಬದಲಿಸಿಲು ಪ್ರಾರಂಭಿಸಿದವು.  ಬರುಬರುತ್ತ ನಾವು ಹಗಲಿನಲ್ಲಿ ಅಲ್ಲಿ ಹೋದರೆ ಹಾವುಗಳು ಹೊರಗೆ ಬರುತ್ತಲೆ ಇರುತ್ತಿರಲಿಲ್ಲ.  ಎಷ್ಟೊ ದಿನಗಳ ನಂತರ ನಮಗೆ ಅರ್ಥವಾಗಿತ್ತು ಹಾವುಗಳು ಅಲ್ಲಿಂದ ತಮ್ಮ ವಾಸದ ಜಾಗ ಬದಲಿಸಿ , ಮೇಲೆ ಕಾಡಿನತ್ತ ಸರಿದು ಹೋಗಿವೆ ಎಂದು.

ಸುಮಾರು ದಿನಗಳು ಅಲ್ಲೆಲ್ಲೆ ಹೋಗಿ ಪರಿಶೀಲಿಸಿ ನಂತರ ಊರಿನಲ್ಲಿ ವಿಷಯ ತಿಳಿಸಿದೆವು. ಹಳ್ಳಿಯ ಹಿರಿಯರು ಎಲ್ಲರು ಬಂದು ನೋಡಿದರು. ಅವರಿಗೆ ನಂಬಿಕೆಯೆ ಇಲ್ಲ. ಕೊಳದ ಸುತ್ತ ಮುತ್ತ ಸುತ್ತಾಡಿದರು   ಹಾವಿನ ದರ್ಶನವಿಲ್ಲ. ಕೆಲವರು ನೀರಿನಲ್ಲಿ ಇಳಿದು ಪರೀಕ್ಷಿಸಿದರು. ಹಾವಿಲ್ಲ ಎಂದು ನಿರ್ಧಾರವಾದ ಮೇಲೆ ಕೊಳವನ್ನು ಸ್ವಚ್ಚ ಗೊಳಿಸಲಾಯಿತು. ಅಂದಿನಿಂದ ದನಗಳಿಗೆ ಹತ್ತಿರದಲ್ಲಿಯೆ ಕುಡಿಯುವ ನೀರು. ಮಲಗಲು ತಂಪು ನೆರಳು. ನಮಗೆಲ್ಲ ಈಜಲು ಉತ್ತಮ ಸ್ಥಳ ದೊರೆಯಿತು

ಊರಿನ ಹಿರಿಯರೆಲ್ಲರಿಗೆ ನನ್ನ ಸಾಹಸದ ಬಗ್ಗೆ ಅಚ್ಚರಿ. ಹಾವಾಡಿಗರಿಗೆ ಸುದ್ದಿ ಮುಟ್ಟಿ ಬಂದು ನೋಡಿದರು, ಕಾಳಿಂಗ ಅಲ್ಲಿಂದ ಕದಲಿರುವುದು ತಿಳಿದು ಅವರು  ಆಶ್ಚರ್ಯಪಡುತ್ತ,  ನಾವು ಎಷ್ಟೊ ದೊಡ್ಡ ಹಾವನ್ನು ಹಿಡಿದು ಆಡಿಸಿರುವೆವು, ಆದರೆ ಕಾಳಿಂಗನಂತ ಸರ್ಪದ ತಂಟೆಗೆ ಹೋಗಲಿಲ್ಲ. ಈ ಹುಡುಗ ಅದನ್ನು ಸಾಧಿಸಿದ ಎಂದು ನನ್ನ ಬೆನ್ನು ತಟ್ಟಿದರು

ಗಣೇಶ ಮತ್ತೆ ಕೇಳಿದ

“ನಿನ್ನ ಅಮ್ಮನಾಗಲಿ ಅಪ್ಪನಾಗಲಿ ಏನು ಅನ್ನಲಿಲ್ಲವೆ ?”

“ಅನ್ನದೆ ಏನು ಅಪ್ಪ ನನ್ನನ್ನು  

‘ಏಕಪ್ಪ ಇಂತ ಸಾಹಸಕ್ಕೆಲ್ಲ ಕೈಹಾಕಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿ, ನನಗೆ ಅರ್ಥವಾಗಲ್ಲ’ ಎಂದು ಬೇಸರ ಪಟ್ಟರು.

ಅಮ್ಮ ಮಾತ್ರ ಬೈದಳು, ನಿನಗೆ ಏನಾದರು ಆಗಿದ್ದಲ್ಲಿ ನನ್ನ ಗತಿ ಏನು ಎಂದು ಕಣ್ಣೀರು ಸುರಿಸಿದಳು. ಮತ್ತೆ ಇಂತಹ ಸಾಹಸಗಳಿಗೆ

ಕೈಹಾಕಲ್ಲ ಎಂದು ನನ್ನಿಂದ ಪ್ರಮಾಣ ಮಾಡಿಸಿದಳು”

ಗಣೇಶ

“ಇದೆಲ್ಲ ನಡೆದಾಗ ನಿನ್ನ ವಯಸ್ಸು ಎಷ್ಟಿರಬಹುದು ಕೃಷ್ಣ “ ಎಂದ

ಕೃಷ್ಣ

“ಸುಮಾರು  ಹದಿನೈದು ಇರಬಹುದೇನೊ ಗಣೇಶ, ಆಗೆಲ್ಲ ನನಗೆ ಅದೇನೊ ಬಂಡ ದೈರ್ಯ ಜಾಸ್ತಿ ಇತ್ತು” ಎನ್ನುತ್ತ ನಕ್ಕ.

ಗಣೇಶನ ಮುಖದಲ್ಲಿ ಮಾತ್ರ ಅದೇನೊ ನಿರಾಸೆ

“ನೀನು ಇಷ್ಟು ಸರಳವಾಗಿ ಮುಗಿಸಿಬಿಟ್ಟೆಯಲ್ಲ ಕೃಷ್ಣ ಕತೆಯನ್ನ. ಈ ಪ್ರಸಂಗದ ಬಗ್ಗೆ ಎಷ್ಟು ಕಲ್ಪನೆಗಳಿವೆ, ಎಷ್ಟು ಹಾಡುಗಳಿವೆ, ಭಾಗವತರು ಹಾಡಿ ಹೊಗಳಿದ್ದಾರೆ ‘  ಎಂದ

ಕೃಷ್ಣ

“ಹೌದು ಗಣೇಶ ಕತೆಯ ರೂಪದಲ್ಲಿ ಕೇಳುವಾಗ ಎಲ್ಲವು ಅದ್ಭುತ ಅನ್ನಿಸುತ್ತೆ. ಆದರೆ ಅನುಭವ ಹೇಳುವಾಗ ಎಲ್ಲರಿಗು ಸಾಧಾರಣ ಘಟನೆ ಎಂದೆ ಅನ್ನಿಸುತ್ತೆ. ಇಂತವೆಲ್ಲ ಬಾಯಿಂದ ಬಾಯಿಗೆ ಹರಡುವಾಗ ಹಲವು ಕಲ್ಪನೆಗಳು ಸೇರಿಕೊಳ್ಳುತ್ತವೆ. ಭಾಗವತದಲ್ಲಿ ಈ ಪ್ರಸಂಗ ಅತ್ಯಂತ ರೋಚಕವಾಗಿದೆ. ಭಾಗವತರು ಇದನ್ನೆಲ್ಲ ಭಕ್ತಿಯಿಂದ ಹೊಗಳಿ ಹಾಡಿದರು. ಮುಗ್ದ ಜನರು ಅಚ್ಚರಿಯಿಂದ ಕೇಳಿದರು” ಎನ್ನುತ್ತ ನಿಲ್ಲಿಸಿದ.

ಗಣೇಶ ಮತ್ತೆ ಕೇಳಿದ

“ಕೃಷ್ಣ  ಕಾಳಿಂಗನ ಘಟನೆ  ಹೇಳಿದೆ , ಆದರೆ ಗೋವರ್ಧನ ಗಿರಿಧಾರಿ ಎನ್ನುವರಲ್ಲ ನಿನ್ನನ್ನು , ಗೋವರ್ಧನ ಬೆಟ್ಟವನ್ನು ಸಾಮಾನ್ಯರು ಎತ್ತಲು ಅಸಾದ್ಯವೆ ಸರಿ. ಆದರೆ ನಿನ್ನಂತಹ ಪವಾಡಪುರುಷನಿಗೆ ಎಲ್ಲವು ಸಾದ್ಯ ಎನ್ನುವರು. ಆ ಗೋವರ್ಧನ ಪರ್ವತವನ್ನು ನೀನು ಎತ್ತಿ ಹಿಡಿದೆ ಅನ್ನುವುದು ಆ ಇಂದ್ರನಿಗೆ   ಅಹಂಕಾರವನ್ನು ಮುರಿದೆ ಅನ್ನುವ ಪ್ರಸಂಗವನ್ನು ವರ್ಣಿಸುವೆಯ?”

 

ಮುಂದುವರೆಯುವುದು……….

 

ಕಾಳಿಂಗ ಮರ್ದನ ಚಿತ್ರ ಕೃಪೆ : http://www.lahari.com/sculptures/s4.jpg

 

Rating
No votes yet

Comments

Submitted by partha1059 Mon, 09/23/2013 - 19:23

ಶ್ರೀ ಹರಿಪ್ರಸಾದ್ ನಾಡಿಗ್ ರವರಿಗೆ ವಂದನೆಗಳು
ನಾನು ಬರಹವನ್ನು ಮೊದಲು ಗೂಗಲ್ ಡ್ರೈವ್ ನಲ್ಲಿ save ಮಾಡಿರುತ್ತೇನೆ ಅಲ್ಲಿಂದ ಇಲ್ಲಿ ಹಾಕಿದಾಗ format ಕೆಡುತ್ತಿದೆ. ತಾಂತ್ರಿಕ ತೊಂದರೆ ಏನೆಂದು ನನಗೆ ಅರ್ಥವಾಗುತ್ತಿಲ್ಲ. ಅದಾಗ್ಯು ಈ ಸಾರಿ ಸಂಪದದಲ್ಲಿ ಹಾಕಿದ ನಂತರ ಇಲ್ಲಿಯು edit ಮಾಡಿರುವೆ. ನಿಮ್ಮ ಸಲಹೆಯಂತೆ title ಮಾದರಿ ಸಹ ಬದಲಿಸಿರುವೆ. ಬಹುಶಃ ನನ್ನ ಕೈಲಿ ಮಾಡಲಾಗುವುದು ಇಷ್ಟೆ ಅನ್ನಿಸುತ್ತೆ.
ತಮ್ಮ ಸಲಹೆಗೆ ವಂದನೆಗಳು
ಪಾರ್ಥಸಾರಥಿ

Submitted by partha1059 Mon, 09/23/2013 - 19:34

In reply to by partha1059

ಶ್ರೀ ಹರಿಪ್ರಸಾದ್ ನಾಡಿಗ್ ರವರಿಗೆ
ಸಾರಿ, ಮುಂದಿನ ಸಾರಿ ಹಾಕುವಾಗ left center ಬದಲಿಗೆ justify format ನಲ್ಲಿ ಪ್ರಯತ್ನಿಸುವೆ ಬಹುಶಃ ಇನ್ನು ಉತ್ತಮವಾಗಿ ಕಾಣಬಹುದು
-ಪಾರ್ಥಸಾರಥಿ

Submitted by ಗಣೇಶ Mon, 09/23/2013 - 23:40

ಪಾರ್ಥಸಾರಥಿಯವರೆ, ಕಾಳಿಂಗ ಮರ್ದನದ ಈ ಭಾಷ್ಯ ನನಗೆ ಬಹಳ ಇಷ್ಟವಾಯಿತು. ಕಾಲಕ್ಕೆ ತಕ್ಕಂತೆ ಕತೆಗಳಲ್ಲಿ ಹೀಗೆ ಸ್ವಲ್ಪ ಮಾರ್ಪಾಟು ಮಾಡುತ್ತಾ ಬಂದಿದ್ದರೆ ಚೆನ್ನಾಗಿರುತ್ತಿತ್ತು. ನದಿಯಲ್ಲಿದ್ದ ಕಾಳಿಂಗವನ್ನು ಕೆಣಕುತ್ತಾ ದಡದಲ್ಲಿ ಕೊಳಲು ಬಾರಿಸುತ್ತಾ ನರ್ತಿಸುತ್ತಿದ್ದ ಕೃಷ್ಣನನ್ನು.. ದೂರದಿಂದ ನೋಡುತ್ತಿದ್ದ ಗೋಪಬಾಲರಿಗೆ ಕಾಳಿಂಗನ ಮೇಲೆ ನರ್ತಿಸಿದಂತೆ ಕಂಡಿರಬಹುದು. ಗೋವರ್ಧನಗಿರಿಯ ಬಗ್ಗೆ ಯಾವ ಕತೆಯಿರಬಹುದು ಎಂದು ಈ ಗಣೇಶನಿಗೆ ತುಂಬಾ ಕುತೂಹಲ..

Submitted by partha1059 Tue, 09/24/2013 - 07:24

In reply to by ಗಣೇಶ

ಗಣೇಶರೆ ನಮಸ್ಕಾರ
ಕತೆಯನ್ನು ನಾನು ಸ್ವಲ್ಪ ನನ್ನ ದೃಷ್ಟಿಯಲ್ಲಿ ನೋಡುತ್ತ ಕೃಷ್ಣನ ಬಾಯಲ್ಲಿ ಹೇಳಿಸುತ್ತ ಇರುವೆ. ನೀವು ಹೇಳಿದಂತೆ ಮುನಿಷಿಯವರ ಕೃಷ್ಣಾವತಾರ ಓದಿದ್ದು ನಿಜ. ಅದಲ್ಲದೆ ಬೇರೆ ಕತೆಗಳನ್ನು ಓದುತ್ತಿದ್ದೆ. ಆದರೆ ಇಲ್ಲಿರುವುದು ಕೇವಲ ನನ್ನ ಕಲ್ಪನೆ. ಮುನಿಷಿಯವರ ಕತೆಯ ರೀತಿ ನನಗೇನು ಅಷ್ಟು ಇಷ್ಟವಾಗಿರಲಿಲ್ಲ. ಅಲ್ಲಿ ಅರಗಿಸಿಕೊಳ್ಲಲಾರದ ವಿಷ್ಲೇಷಣೆ ಇದೆ. ಕೆಲವಡೆ 'ದ್ರಾವಿಡ' ಎನ್ನುವ ಜನಾಂಗವನ್ನು ಹತ್ತಿರ ಹತ್ತಿರ ನರಮಾಂಸ ಭಕ್ಷಕರು ಅನ್ನುವಂತೆ ತೋರಿರುವರು. ಭಾರತದಲ್ಲಿ ನರಮಾಂಸ ಭಕ್ಷಣೆ ಸಾಮಾನ್ಯವೊ ಎನಿಸುವುದು. ಕೆಲವು ಬಾಗವಂತು ನನಗೆ 'ಹ್ಯಾರಿ ಪಾಟರ್ ' ಕತೆ ನೆನಪಿಸಿತು. ನನಗೆ ಆ ಕತೆ ಸಹಾಯಕ್ಕೆ ಬಂದಿದ್ದು, ಪಾತ್ರದ ಹೆಸರುಗಳನ್ನು ನೆನಪಿಸಿಕೊಳ್ಳಲು ಕೆಲವು ಸಂಭಂದಗಳು ಅಂದರೆ ದೇವಕಿ , ಕಂಸನಿಗೆ ಸ್ವಂತ ತಂಗಿಯಲ್ಲ ! ಅನ್ನುವ ವಿಷಯ, ಶಿಶಿಪಾಲನ ತಾಯಿ ಸಹ ಕೃಷ್ಣನಿಗೆ ಕುಂತಿಯ ರೀತಿಯೆ ಸೋದರತ್ತೆ ಎನ್ನುವ ವಿಷಯ. ಈ ರೀತಿಯದು.
ನನ್ನ ಕತೆಯನ್ನು ನಾಲಕ್ಕು ಬಾಗಗಳಲ್ಲಿ ಬರೆದಿರುವೆ, ಮೊದಲನೆಯದು ಈಗನ ಸಂದರ್ಬದ ವಿಷ್ಲೇಷಣೆ ಹಾಗು ವೈಚಾರಿಕತೆಯ ಸ್ಪರ್ಶ, ಎರಡನೆಯದರಲ್ಲಿ ಕೃಷ್ಣನ ಜೀವನದ ಕೆಲವು ಘಟನೆಗಳನ್ನು ಅವನ ಬಾಯಿಯಲ್ಲಿಯೆ ನಿರೂಪಿಸಿವುದು, ಎಲ್ಲವೂ ಅಲ್ಲ. ಹಾಗೆ ಮೂರನೆಯದು ರಾಧೆ ಹಾಗು ಕೃಷ್ಣನ ಜೀವನದಲ್ಲಿ ಬರುವ ಹೆಣ್ಣುಗಳು. ನಾಲ್ಕನೆ ಬಾಗದಲ್ಲಿ ಕೃಷ್ಣನ ಜೀವನದ ವಿಷ್ಲೇಷಣೆ ಹಾಗು ಅವನ ದೃಷ್ಟಿಯಲ್ಲಿ ಅವನ ಜೀವನದ ಸರಿ ತಪ್ಪುಗಳ ಚಿಂತನೆ.
ನಾನಂತು ಸಾಕಷ್ಟು ಶ್ರಮವಹಿಸಿ ಬರೆದೆ. ಕೃಷ್ಣನ ಹೆಸರಷ್ಟೆ ಇಲ್ಲಿಯ ಕೆಲವು ಆಗುಹೋಗುಗಳಿಗೆ ಕಾರಣವಾಯಿತು.
ನೀವು ಓದಿ ಸರಿಯಾದ ವಿಮರ್ಷೆ ಕೊಟ್ಟಿದ್ದು ನನಗೆ ಖುಷಿಯಾಯಿತು
-ವಿಶ್ವಾಸಗಳೊಡನೆ
ಪಾರ್ಥಸಾರಥಿ

Submitted by nageshamysore Tue, 09/24/2013 - 17:04

ಶ್ರೀ ಕೃಷ್ಣನ ಪವಾಡಗಳನ್ನು ವಿಭಿನ್ನ ಮತ್ತು ಸಾಮಾನ್ಯಜ್ಞಾನದ ದೃಷ್ಟಿಯಿಂದ ನೋಡುವ ಕುತೂಹಲಕಾರಿ ವಿಧಾನ ಚೆನ್ನಾಗಿ ಮೂಡಿದೆ. ನನಗೂ ಈಗ ಗೋವರ್ಧನದ ವಿವರಣೆಯ ಕುತೂಹಲ :-)

Submitted by partha1059 Tue, 09/24/2013 - 18:28

In reply to by nageshamysore

ವಂದನೆಗಳು ನಾಗೇಶ್ ರವರೆ ನಾನು ನನ್ನ ಲೇಖದನದಲ್ಲಿ ಎಲ್ಲಿಯೂ ಪವಾಡಗಳನ್ನು ಪ್ರತಿಪಾದಿಸುವದಿಲ್ಲ. ಹಾಗು ಅದೆಲ್ಲ ಯಾವ ಕಾಲಕ್ಕು ನಿಜವಲ್ಲ. ಓದುತ್ತ ಹೋದ ಹಾಗೆ ನಿಮಗೆ ಲೇಖನದ ದೃಷ್ಟಿ ತಿಳಿಯುವುದು
ವಂದನೆಗಳೊಡನೆ
ಪಾರ್ಥಸಾರಥಿ

Submitted by makara Tue, 09/24/2013 - 20:17

ಪಾರ್ಥ ಸರ್,
ನಮಸ್ಕಾರಗಳು. ನೆಟ್-ಕನೆಕ್ಷನ್ನಿನ ಅನಿವಾರ್ಯ ತೊಂದರೆಗಳಿಂದಾಗಿ ಸ್ವಲ್ಪ ದಿವಸಗಳ ಮಟ್ಟಿಗೆ ಸಂಪದದಿಂದ ದೂರವುಳಿಯುವಂತಾಯಿತು. ನಿಮ್ಮ ಅನೇಕ ಲೇಖನಗಳನ್ನು ನೋಡುವುದು ನನಗೆ ಇದರಿಂದ ಸಾಧ್ಯವಾಗಲಿಲ್ಲ. ಈಗ ಈ ಸರಣಿಯ ಎಲ್ಲಾ ಲೇಖನಗಳನ್ನು ಓದಿ ಮುಗಿಸಿದೆ. ನಿಮ್ಮ ವಾದಸರಣಿಯನ್ನು ನೋಡುತ್ತಿದ್ದರೆ, ಹಿಂದೆ ಭೈರಪ್ಪನವರು ಬರೆದ ಪರ್ವದ ನೆನಪಾಗುತ್ತದೆ. ನೀವು ಪವಾಡಗಳನ್ನು ನಂಬುವವರಲ್ಲ ಎನ್ನುವುದು ನಿಮ್ಮ ಲೇಖನದಿಂದ ಸಾಬೀತಾಗುತ್ತದೆ. ಇಲ್ಲಿ ನೀವು ಪ್ರಸ್ತಾಪಿಸಿರುವ ವಿಷಯಗಳನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ ಹಾಗೆಂದು ನಿಮ್ಮ ದೃಷ್ಟಿಕೋನ ಸರಿಯಿಲ್ಲವೆಂದು ಹೇಳಲಾರೆ, ಏಕೆಂದರೆ ಅದು ನಿಮ್ಮ ಅಭಿಪ್ರಾಯವಷ್ಟೆ. ಈಗಿನ ಕಾಲಕ್ಕೆ ತಕ್ಕಂತೆ ಆ ಪವಾಡಗಳನ್ನು ನೀವು ಅನ್ವಯಿಸಿಕೊಂಡು ವ್ಯಾಖ್ಯಾನಿಸುತ್ತಿರುವುದರಿಂದ ನಿಮಗೆ ಹಾಗೆನಿಸುತ್ತಿರಬಹುದು. ಇರಲಿ ಬಿಡಿ ಅದರಿಂದ ಕೃಷ್ಣನ ವ್ಯಕ್ತಿತ್ವಕ್ಕೇನೂ ಕುಂದು ಬಾರದು. ನಿಮ್ಮ ಈ ಲೇಖನ ಸರಣಿ ಚೆನ್ನಾಗಿದೆ ಮುಂದುವರೆಸಿ. ನನಗೂ ಸಹ ನೀವು ಗೋವರ್ಧನ ಗಿರಿಯ ಪ್ರಸಂಗವನ್ನು ಹೇಗೆ ನಿರೂಪಿಸುತ್ತೀರ ಎನ್ನುವ ಕುತೂಹಲವಿದೆ. ಬಹುಶಃ ಗೋವರ್ಧನ ಗಿರಿಯ ಶ್ರೇಷ್ಠತೆಯನ್ನು ಕೃಷ್ಣನು ಎತ್ತಿ ಹಿಡಿದಿದ್ದರಿಂದ ಅವನು ಅದನ್ನು ಕಿರುಬೆರಳಿನಲ್ಲಿ ಎತ್ತಿ ಹಿಡಿದ ಎಂದು ನೀವು ವ್ಯಾಖ್ಯಾನಿಸುತ್ತೀರೇನೋ ಎನ್ನುವ ಅಭಿಪ್ರಾಯ ಮೂಡುತ್ತಿದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by partha1059 Tue, 09/24/2013 - 20:41

In reply to by makara

ಶ್ರೀಧರ ಬಂಡ್ರಿಯವರೆ , ನಾನು ಪವಾಡಗಳನ್ನು ನಂಬುವದಿಲ್ಲ ಅನ್ನುವ ಕಾರಣಕ್ಕೆ ಕೃಷ್ಣನ ವ್ಯಕ್ತಿತ್ವಕ್ಕೆ ಕುಂದುಬರುವಂತೆ ಎಲ್ಲಿಯೂ ಬರೆದಿಲ್ಲ ಬರೆಯುವದಿಲ್ಲ. ನಾನು ಇದನ್ನು ಮೊದಲೆ ಹೇಳಿದ್ದೆ, ನಾಸ್ತಿಕರು ಹೇಗೆ ವಿರೋದಿಸುವರೊ ಹಾಗೆ ಆಸ್ತಿಕರು ಬೇಸರ ಪಡಬಹುದೆ ಅನ್ನುವ ಅನುಮಾನ ನನ್ನನ್ನು ಕಾಡಿತ್ತು.
ನನ್ನ ಅಭಿಪ್ರಾಯ ಇದು, ರಾಮನೆ ಆಗಲಿ ಕೃಷ್ಣನೆ ಆಗಲಿ ಎಂದಿಗೂ ಪವಾಡ ಪುರುಷರಂತೆ ತಮ್ಮ ವ್ಯಕ್ತಿತ್ವವನ್ನು ತೋರಿಲ್ಲ. ಆದರೆ ಕಾಲನಂತರದಲ್ಲಿ ಕಾವ್ಯಗಳನ್ನು ರಚಿಸುವಾಗ ಅಥವ ಜನಮನಗಳ ಮಾತಿನಲ್ಲಿ ಅವರ ಸಾಧನೆಯೆಲ್ಲ ಪವಾಡಗಳಂತೆ ವರ್ಣಿಸಲಾಗಿದೆ.
ನನ್ನ ಒಂದು ಮಾತಿಗಿ ಉತ್ತರಿಸಿ ಶ್ರೀಧರ್ ಬಂಡ್ರಿ ಸಾರ್, ರಾಮ ಪವಾಡ ಮಾಡುವ ಇಚ್ಚೆ ಉಳ್ಳವನಾಗಿದ್ದಲ್ಲಿ, ಸೀತೆಯನ್ನು ಹುಡುಕಲು ಅಷ್ಟು ಕಷ್ಟ ಪಟ್ಟು, ಹನುಮನನ್ನು ಕಳಿಸಿ, ನಂತರ ಸಮುದ್ರಕ್ಕೆ ಸೇತುವೆ ನಿರ್ಮಿಸಿ, ಯುದ್ದ ಮಾಡಿ ಎಲ್ಲ ಬೇಕಿತ್ತೆ, ದೇವ ದೇವನಾದ ಅವನು ಸೀತೆ ಮರೆಯಾದೊಡನೆ ಅಲ್ಲಿಂದಲೆ ಒಂದು ರಾಮ ಬಾಣ ಬಿಟ್ಟಿದ್ದರೆ, ರಾವಣ ಭೂಮಿಯ ಯಾವುದೆ ಮೂಲೆಯಲ್ಲಿದ್ದರು ಅವನನ್ನು ಶಿಕ್ಷಿಸಿ ಸೀತೆಯನ್ನು ತರಬಹುದಾಗಿತ್ತು ಅಲ್ಲವೆ ಆದರೆ ರಾಮ , ಮನುಜ ಹೇಗೆ ಬಾಳ ಬೇಕೆಂದು ಪ್ರತಿಪಾದಿಸಿದ್ದಾನೆ,
ಹಾಗೆ ಕೃಷ್ಣ ಸಹ, ಅವನು ಎಲ್ಲಿಯೂ ಪವಾಡ ಮಾಡಲು ಹೋಗಿಲ್ಲ,. ಅಂತಹ ಇಚ್ಚೆ ಅವನಿಗಿದ್ದರೆ, ಕಂಸನನ್ನು ಕೊಲ್ಲುವ ಶ್ರಮವಾಗಲಿ, ಜರಾಸಂದನಿಗೆ ಹೆದರಿ ಮಧುರೆಯನ್ನು ಬಿಟ್ಟು ಓಡುವದಾಗಲಿ, ಹದಿನೆಂಟು ದಿನದ ಯುದ್ದವಾಗಲಿ, ಕಡೆಗೆ ಯಾದವ ಕಲಹವಾಗಲಿ ಆಗಲು ಬಿಡುತ್ತಿದ್ದನೆ, ಅವನ ಚಕ್ರವೊಂದೆ ಸಾಕಲ್ಲವೆ. ಅವರೆಲ್ಲ ಮನುಷ್ಯನ ಬದುಕನ್ನು ಪ್ರತಿಪಾದಿಸಿದ್ದಾರೆ, ಪವಾಡ ಎನ್ನುವುದು ನಮ್ಮ ಮನಸಿನ ಅತೀತವಾದ ಕಲ್ಪನೆ, ಪವಾಡ ಎನ್ನುವುದು ಪ್ರಕೃತಿಗೆ ವಿರುದ್ದ, ತಾನೆ ಸೃಷ್ಟಿಸಿದ ಪ್ರಕೃತಿಯ ನಿಯಮವನ್ನು ಧೈವವಾದ ಅವನು ತಾನೆ ಏಕೆ ಮುರಿಯುವನು ಅಲ್ಲವೆ. ಪ್ರಕೃತಿಯ ಜೊತೆ ಹೊಂದಿಕೊಳ್ಳುತ್ತ ಹೇಗೆ ಬದುಕಬೇಕೆಂದು ತೋರಿಸಿದವರು ಅವರೆಲ್ಲ.
ನನ್ನ ಮನಸು ನಿಮಗೆ ಪೂರ್ತಿ ಅರ್ಥಮಾಡಿಸುವುದು ಕಷ್ಟವೆ ಆಗಲಿ, ಸರಣಿಯನ್ನು ಪೂರ್ತಿಯಾಗಿ ಓದಿನೋಡಿ ನಂತರ ನಿರ್ಧರಿಸಿ.
ಬೈರಪ್ಪನವರ ಪರ್ವವಾಗಲಿ, ಮುನಿಷಿಯವರ ಕೃಷ್ಣಾವತಾರವನ್ನಾಗಲಿ ನಾನು ಆದಾರವಾಗಿಟ್ಟು ಬರೆಯುತ್ತಿಲ್ಲ, ನಾನು ನನಗೆ ತೋಚಿದಂತೆ ಕಲ್ಪನೆ ಮಾಡಿ ಬರೆಯುತ್ತಿರುವೆ. ಮೇಲೆ ಗಣೇಶರಿಗೆ ಬರೆದಿರುವ ಪ್ರತಿಕ್ರಿಯೆಯನ್ನು ಓದಿ

ಇಂತಿ ವಿಶ್ವಾಸಗಳೊಡನೆ
ಪಾರ್ಥಸಾರಥಿ

Submitted by partha1059 Tue, 09/24/2013 - 20:52

In reply to by partha1059

ಬಂಡ್ರಿಯವರೆ ಮತ್ತು ಒಂದು ವಿಷಯ
ರಾಮ ಆಗಲಿ ಅಥವ ಕೃಷ್ಣ ಆಗಲಿ ಮನುಷ್ಯರಾಗಿ ಜನ್ಮತಾಳಿದವರೆ ಅಲ್ಲವೆ ಏಕೆ ?
ರಾವಣನನ್ನು ಕೊಲ್ಲಲ್ಲು ವಿಷ್ಣು ನೇರವಾಗಿಯೆ ಏಕೆ ಬರಲಿಲ್ಲ, ಕೇವಲ ಸಂಕಲ್ಪ ಮಾತ್ರದಿಂದ ರಾವಣ ನಿರ್ನಾಮ ಆಗುತ್ತಿದ್ದ, ಆದರೆ ಹಾಗೆ ಆಗದೆ ರಾಮಾವತಾರವಾಯಿತು ಅನ್ನುವಾಗ ಹಿಂದಿನ ಸಂದೇಶ ಅರ್ಥಮಾಡಿಕೊಳ್ಳಿ. ಪವಾಡದ ಕೃತ್ಯ ದೇವರ ಇಷ್ಟವಲ್ಲ.
ಹಾಗೆ ಕೃಷ್ಣವತಾರ ಸಹ :-)

Submitted by makara Wed, 09/25/2013 - 09:53

In reply to by partha1059

ಪಾರ್ಥ ಸರ್,
ನಿಮ್ಮ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಮಾತು ನಿಜ, ರಾಮನ ಜೀವನ ನಮಗೆ ಒಬ್ಬನು ಆದರ್ಶದಿಂದ ಬಾಳಿದರೆ ಏನೆಲ್ಲಾ ಕಷ್ಟ ಅನುಭವಿಸಬೇಕಾಗಬಹುದು ಎನ್ನುವುದನ್ನು ತಿಳಿಸುತ್ತದೆ. ಅದೇ ವಿಧವಾಗಿ ಕೃಷ್ಣನ ಜೀವನ ಬಾಳಿನಲ್ಲಿ ಬರುವ ಕಷ್ಟಗಳನ್ನು ಹೇಗೆ ಚಾತುರ್ಯದಿಂದ ಎದುರಿಸಬೇಕೆಂದು ಕಲಿಸುತ್ತದೆ. ಇಬ್ಬರ ಉದ್ದೇಶವೂ ಸಹಮಾನವರಿಗೆ ಜೀವನದ ರೀತಿಯನ್ನು ತಿಳಿಸುವುದೇ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿ ನೇರವಾಗಿ ವಿಷ್ಣುವೇ ರಾವಣನನ್ನು ಕೊಲ್ಲಲಿಲ್ಲ ಅಥವಾ ಕಂಸನನ್ನು ಕೊಲ್ಲಲಿಲ್ಲ ಎಂದು ವಿಮರ್ಶಿಸಬಹುದು.
ಇರಲಿ ಬಿಡಿ, ನನ್ನ ಆಕ್ಷೇಪಣೆ ಏನಿದ್ದರೂ ಕೃಷ್ಣನ ಜೀವನದಲ್ಲಿ ಕಂಡು ಬರುವ ಅಸಾಮಾನ್ಯ ಘಟನೆಗಳನ್ನು ಜನರು ತಿಳುವಳಿಕೆಯಿಲ್ಲದೇ ಪವಾಡಗಳೆಂದು ಕರೆದಿದ್ದಾರೆ ಅವು ಸಾಮಾನ್ಯ ಘಟನೆಗಳು ಅವುಗಳಿಗೆ ಕವಿಗಳು ರೆಕ್ಕೆ ಪುಕ್ಕ ಕಟ್ಟಿ ಬೃಹತ್ತಾಗಿಸಿದ್ದಾರೆ ಎನ್ನುವುದು. ನಮ್ಮ ಮಟ್ಟದಲ್ಲಿ ಇವು ಸಾಮಾನ್ಯ ಘಟನೆಗಳೇ ಸರಿ; ಆದರೆ ಯೋಗಿಗಳಿಗೆ ಇವು ಸಹಜ ಘಟನೆಗಳು; ಆದ್ದರಿಂದ ನಮಗೆ ಪವಾಡವೆಂದು ಕಂಡುಬರುವ ವಿಷಯಗಳು ಅವರಿಗೆ ಸಹಜವಾದವುಗಳು. "Miracles are not an exception to nature but the things is we have not understood the natural phenomenon behind the miracles" ಎನ್ನುವುದು ನನ್ನ ಅಭಿಪ್ರಾಯ. ಇದು ಕೇವಲ ಅಭಿಪ್ರಾಯ ಭೇದವಷ್ಟೆ, ಉಳಿದಂತೆ ಅಂದಿನ ಕತೆಯನ್ನು ಇಂದಿನ ಸಂದರ್ಭಗಳ ಹಿನ್ನಲೆಯಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ