೧೨೨. ಲಲಿತಾ ಸಹಸ್ರನಾಮ ೪೯೫ರಿಂದ ೫೦೩ನೇ ನಾಮಗಳ ವಿವರಣೆ

೧೨೨. ಲಲಿತಾ ಸಹಸ್ರನಾಮ ೪೯೫ರಿಂದ ೫೦೩ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೪೯೫ - ೫೦೩

Maṇipūrābja-nilayā मणिपूराब्ज-निलया (495)

೪೯೫. ಮಣಿಪೂರಾಬ್ಜ-ನಿಲಯಾ

           ಮಣಿಪೂರಕ ಚಕ್ರವೆಂದರೆ ನಾಭಿಯ ಚಕ್ರವಾಗಿದ್ದು ಅಲ್ಲಿ ನಿವಸಿಸುವ ದೇವತೆಯು ಲಾಕಿನೀ ಆಗಿದ್ದಾಳೆ. ಈ ನಾಮದಿಂದ ಪ್ರಾರಂಭಿಸಿ ೫೦೩ನೇ ನಾಮದವರೆಗೆ (ಒಂಭತ್ತು ನಾಮಗಳು) ಈ ಯೋಗಿನಿಯನ್ನು ವರ್ಣಿಸುತ್ತವೆ. ಈ ಚಕ್ರವು ಹತ್ತು ದಳದ ಪದ್ಮವನ್ನು ಒಳಗೊಂಡಿದ್ದು ಪ್ರತಿಯೊಂದು ದಳದ ಮೇಲೂ ಒಂದರಂತೆ ಮತ್ತೆ ಹತ್ತು ವ್ಯಂಜನಾಕ್ಷರಗಳನ್ನು ಬಿಂದುಗಳೊಂದಿಗೆ ಒಡ ಮೂಡಿಸಲಾಗಿದೆ. ಈ ಚಕ್ರದ ಪರಧಿಯು ತಲೆಕೆಳಗಾದ ತ್ರಿಕೋಣಾಕಾರದಲ್ಲಿರುತ್ತದೆ, ಮತ್ತು ಇದು ಕೆಂಪು ಬಣ್ಣದ್ದಾಗಿರುತ್ತದೆ. ಈ ತ್ರಿಕೋಣದ ಪ್ರತಿಯೊಂದು ಪಾರ್ಶ್ವದಲ್ಲೂ ಒಂದೊಂದು ಸ್ವಸ್ತಿಕ ಚಿಹ್ನೆಯು ಇರುತ್ತದೆ. ಈ ಚಕ್ರವು ಅಗ್ನಿ ತತ್ವವನ್ನು ಪ್ರತಿನಿಧಿಸುತ್ತದೆ ಮತ್ತು ಅದರ ಬೀಜಾಕ್ಷರವು ಅಗ್ನಿಯ ಬೀಜಾಕ್ಷರವಾದ ರಂ (रं) ಆಗಿದ್ದು ಇದನ್ನು ತ್ರಿಕೋಣದ ಮಧ್ಯದಲ್ಲಿ ಇರಿಸಲಾಗಿರುತ್ತದೆ. ರಂ ಬೀಜಾಕ್ಷರವು ಅತ್ಯಂತ ಶಕ್ತಿಯುತವಾಗಿದ್ದು ಇದು ಅತೀಂದ್ರಿಯ ಶಕ್ತಿಗಳನ್ನು ಪಡೆದುಕೊಳ್ಳುವಲ್ಲಿ ಸಹಕಾರಿಯಾಗಿದೆ. ಇತರೇ ಬೀಜಗಳೊಂದಿಗೆ ಸಮ್ಮಿಳಿತವಾದಾಗ ಆ ಬೀಜಗಳ ಶಕ್ತಿಯನ್ನಾಧರಿಸಿ ರಂ (रं)  ಬೀಜವು ಸೃಷ್ಟಿ ಮತ್ತು ಲಯಗಳನ್ನುಂಟು ಮಾಡುವ ಸಾಮರ್ಥ್ಯವನ್ನು ಪಡೆಯುತ್ತದೆ.

          ಪ್ರಮುಖವಾದ ಬೀಜಾಕ್ಷರಗಳಾದ ಹ್ರೀಂ, ಶ್ರೀಂ ಮೊದಲಾದವುಗಳು ಸಹ ‘ರಂ’ ಬೀಜಾಕ್ಷರವನ್ನು ಒಳಗೊಂಡಿರುತ್ತವೆ. ಈ ಬೀಜಾಕ್ಷರವು ಹನ್ನೆರಡು ಸೂರ್ಯರ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಬೀಜವು ಆತ್ಮಬೀಜವನ್ನು ರೂಪಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಬಲ್ಲುದು. ಕುಂಡಲಿನೀ ಶಕ್ತಿಯ ಕುರಿತಾಗಿ ಚರ್ಚಿಸುವ ಗ್ರಂಥಗಳೂ ಸಹ ಈ ಚಕ್ರದಲ್ಲಿ ಆಸೀನಳಾಗಿರುವ ದೇವತೆಯ ಹೆಸರನ್ನು ಲಾಕಿನೀ ಎಂದೇ ಉಲ್ಲೇಖಿಸುತ್ತವೆ. ಈ ಚಕ್ರದ ಮೇಲೆ ಧ್ಯಾನವನ್ನು ಕೈಗೊಂಡಾಗ ಅದು ನಮಗೆ ಸೃಷ್ಟಿ ಮತ್ತು ಲಯಗಳೆರಡರ ಶಕ್ತಿಗಳನ್ನೂ ದಯಪಾಲಿಸುತ್ತದೆ. ಕಾಮವನ್ನು ಹುಟ್ಟುಹಾಕುವ ಅಗ್ನಿಯೂ ಸಹ ಈ ಚಕ್ರದಲ್ಲಿಯೇ ಸ್ಥಿತವಾಗಿರುತ್ತದೆ. ಸಾಮಾನ್ಯವಾಗಿ ಪೂರ್ಣವಾಗಿ ಪ್ರಚೋದಿಸಲ್ಪಟ್ಟ ಕುಂಡಲಿನೀ ಶಕ್ತಿಯು ಈ ಚಕ್ರಕ್ಕಿಂತ ಕೆಳಕ್ಕಿಳಿಯುವುದಿಲ್ಲ.

Vadanatraya-saṁyutā वदनत्रय-संयुता (496)

೪೯೬. ವದನತ್ರಯ-ಸಂಯುತಾ

          ಲಾಕಿನೀ ದೇವತೆಗೆ ಮೂರು ಮುಖಗಳಿವೆ; ಆದ್ದರಿಂದ ಈ ಚಕ್ರವನ್ನು ಮೂರನೆಯ ಚಕ್ರವಾಗಿ ಈ ಸಹಸ್ರನಾಮದಲ್ಲಿ ಚರ್ಚಿಸಲಾಗಿದೆ.

Vajrādikāyudhoepetā वज्रादिकायुधोपेता (497)

೪೯೭. ವಜ್ರಾಧಿಕಾಯುಧೋಪೇತಾ

          ಲಾಕಿನೀ ದೇವಿಯು ವಜ್ರಾಯುಧ ಮತ್ತು ಇತರೇ ಆಯುಧಗಳನ್ನು ಹೊಂದಿದ್ದಾಳೆ. ಆಕೆಗೆ ನಾಲ್ಕು ಕೈಗಳಿದ್ದು ಎರಡರಲ್ಲೊಂದು ಕೈಯ್ಯಲ್ಲಿ ವಜ್ರಾಯುಧವನ್ನು ಹಿಡಿದಿದ್ದರೆ ಮತ್ತೊಂದರಲ್ಲಿ ಶಕ್ತ್ಯಾಯುಧವನ್ನು ಹಿಡಿದಿದ್ದಾಳೆ. ಇನ್ನುಳಿದ ಎರಡು ಕೈಗಳಲ್ಲಿ ಅಭಯ ಮತ್ತು ವರದ ಮುದ್ರೆಗಳನ್ನು ಧರಿಸಿದ್ದಾಳೆ. ಬಹುತೇಕ ಎಲ್ಲಾ ದೇವತೆಗಳೂ ಈ ವರದ (ವರವನ್ನು ಕೊಡುವ) ಮತ್ತು ಅಭಯ (ಭಯವನ್ನು ಹೋಗಲಾಡಿಸಿ ರಕ್ಷಣೆ ಕೊಡುವ) ಮುದ್ರೆಗಳನ್ನು ಧರಿಸಿರುತ್ತಾರೆ.  

Ḍāmaryādibhi-rāvṛtā डामर्यादिभि-रावृता (498)

೪೯೮. ಡಾಮರ್ಯಾದಿಭಿ-ರಾವೃತಾ

          ಲಾಕಿನೀ ದೇವಿಯು ಡಾಮರೀ ಮೊದಲಾದ ಹತ್ತು ಅನುಚರರಿಂದ ಸುತ್ತುವರೆಯಲ್ಪಟ್ಟಿರುತ್ತಾಳೆ.

Raktavarnā रक्तवर्ना (499)

೪೯೯. ರಕ್ತವರ್ಣಾ

          ಆಕೆಯ ಮೈಕಾಂತಿಯು ರಕ್ತ ಕೆಂಪು ಬಣ್ಣದ್ದಾಗಿರುತ್ತದೆ.

Māṁsa-niṣṭhā मांस-निष्ठा (500)

೫೦೦. ಮಾಂಸ-ನಿಷ್ಠಾ

           ಲಾಖನೀ ದೇವಿಯು ಮಾಂಸದ ಮೇಲೆ ಸ್ಥಿತಳಾಗಿರುತ್ತಾಳೆ. ಮಾಂಸವು ಚರ್ಮ ಮತ್ತು ರಕ್ತದ ಕೆಳಗಡೆ ಇರುತ್ತದೆ. ವಾಕ್-ದೇವಿಗಳು ಮಣಿಪೂರಕ ಚಕ್ರವನ್ನು ಈ ಸಹಸ್ರನಾಮದಲ್ಲಿ ಮೂರನೆಯ ಚಕ್ರವಾಗಿ ಚರ್ಚಿಸಲು ಇದು ಮತ್ತೊಂದು ಕಾರಣವಾಗಿದೆ.

Guḍānnaprīta-mānasā गुडान्नप्रीत-मानसा (501)

೫೦೧. ಗುಡಾನ್ನಪ್ರೀತ-ಮಾನಸಾ

          ಗುಡಾನ್ನ ಎಂದರೆ ಬೆಲ್ಲದೊಂದಿಗೆ ಕುದಿಸಿದ ಅನ್ನವನ್ನು ಸೂಚಿಸುತ್ತದೆ (ಬೆಲ್ಲವನ್ನು ಕಬ್ಬಿನಿಂದ ತಯಾರಿಸಲ್ಪಟ್ಟ ಅಸಂಸ್ಕರಿತ ಸಕ್ಕರೆ ಎಂದು ಹೇಳಬಹುದು). ಲಾಕಿನೀ ದೇವಿಯು ಈ ಆಹಾರವನ್ನು ಇಷ್ಟಪಡುತ್ತಾಳೆ.

Samasta-bhakta-sukhadā समस्त-भक्त-सुखदा (502)

೫೦೨. ಸಮಸ್ತ-ಭಕ್ತ-ಸುಖದಾ

          ಲಾಖಿನೀ ದೇವಿಯು ಲಲಿತಾಂಬಿಕೆಯ ಎಲ್ಲಾ ಭಕ್ತರಿಗೆ ಸಂತೋಷವನ್ನುಂಟು ಮಾಡುತ್ತಾಳೆ.

Lākinyambā-svarūpiṇī लाकिन्यम्बा-स्वरूपिणी (503)

೫೦೩. ಲಾಕಿನ್ಯಂಬಾ-ಸ್ವರೂಪಿಣೀ

           ಈ ಚಕ್ರದಲ್ಲಿ ನಿವಸಿಸುವ ಯೋಗಿನಿಯ ಹೆಸರು ಲಾಕಿನೀ ಆಗಿದ್ದು; ಆಕೆಯು ಮಾತೆಯ ಸ್ವರೂಪದಲ್ಲಿದ್ದಾಳೆ. (ಲಾಕಿನೀ+ಅಂಬಾ= ಲಾಕಿನ್ಯಂಬಾ=ಲಾಕಿನೀ ಮಾತೆ).

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 495 - 503 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.  

Rating
Average: 5 (1 vote)

Comments

ಶ್ರೀಧರ ಬಂಡ್ರಿಯವರೆ ಅರ್ಧಬಾಗ ದಾಟಿದಿರಿ, ಇನ್ನು ಅರ್ಧದಾರಿಯನ್ನು ಹೀಗೆ ಯಶಸ್ವಿಯಾಗಿ ಮುಗಿಸಿರಿ.
ಮಾಂಸನಿಷ್ಟ ಎನ್ನುವ ಪದ ನನಗೂ ಅರ್ಥವಾಗಿರಲಿಲ್ಲ ನಿಮ್ಮ ವಿವರಣೆ ಓದುವ ತನಕ

Submitted by makara Tue, 09/24/2013 - 20:21

ಪಾರ್ಥ ಸರ್ ಮತ್ತು ನಾಗೇಶರೆ,
ಇಬ್ಬರಿಗೂ ನಮಸ್ಕಾರಗಳು. ನಿಮ್ಮ ಶುಭಹಾರೈಕೆಗೆ ಧನ್ಯವಾದಗಳು. ಅದೇಕೋ ಸರಣಿಯನ್ನು ಇನ್ನಷ್ಟು ವೇಗವಾಗಿ ಮುಂದುವರೆಸೋಣವೆಂದುಕೊಂಡಾಗಲೆಲ್ಲಾ ಈ ವಿಧವಾದ ತೊಂದರೆಗಳು ಬರುತ್ತಿವೆ. ಜಗನ್ಮಾತೆಯ ಇಚ್ಛೆ ಬಹುಶಃ ನಿಧಾನವೇ ಪ್ರಧಾನವೆಂದು ಇರಬಹುದು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Wed, 09/25/2013 - 03:33

ಶ್ರೀಧರರೆ,  ೧೨೨. ಶ್ರೀ ಲಲಿತಾ ಸಹಸ್ರನಾಮದ ವಿವರಣಾ ಕಾವ್ಯಸಾರ, ಪರಿಷ್ಕರಣೆಗೆ ಸಿದ್ಧ :-)

ಲಲಿತಾ ಸಹಸ್ರನಾಮ ೪೯೫ - ೫೦೩
__________________________________

೪೯೫. ಮಣಿಪೂರಾಬ್ಜ-ನಿಲಯಾ 
ಮಣಿಪೂರಕ-ನಾಭಿಚಕ್ರ ನಿವಸಿತೆ ಯೋಗಿನಿ ಮಾತೆ
ಶೃಂಗ ಬುನಾದಿತ ತ್ರಿಕೋಣಪರಿಧಿ ದಶದಳ ಪದ್ಮದೆ
ಪ್ರತಿ ಕೆಂಪಿನ ದಳ ಬಿಂದುಸಹಿತ ವ್ಯಂಜನಾಕ್ಷರ ಬಲ
ಸ್ವಸ್ತಿಕ ಪಾರ್ಶ್ವ ಅಗ್ನಿ ತತ್ವದ ಮಣಿಪೂರಾಬ್ಜ ನಿಲಯಾ ||

೪೯೬. ವದನತ್ರಯ-ಸಂಯುತ
ಲಲಿತಾ ಹಾದಿ ಕುಂಡಲಿನಿ ಸೇರುವ ಸರದಿ ಕಟ್ಟೆಚ್ಚರ
ಕಾಯುವ ಯೋಗಿನಿ ಮಣಿಪೂರಕಚಕ್ರದಲಿ ಸಾದರ
ಏಕಮುಖಿಡಾಕಿನಿ ಕಂಠ, ದ್ವಿಮುಖಿರಾಕಿಣಿ ಅನಾಹತ
ತ್ರಿಮುಖಿ ತೃತೀಯಚಕ್ರದಲಿ ವದನತ್ರಯ ಸಂಯುತ ||

೪೯೭. ವಜ್ರಾಧಿಕಾಯುಧೋಪೇತಾ 
ಹಾದಿ ಕಾಯುವ ಸರದಿ, ಲಲಿತೆಗಿರದಂತೆ ಯಾವ ತೊಡಕು
ತರತರ ಆಯುಧ ಕೈಲ್ಹಿಡಿದು, ಯೋಗಿನಿ ಸನ್ನದ್ಧತೆ ಸಕಲಕು
ವರದ ಹಸ್ತ ಅಭಯ ಹಸ್ತದ ಜತೆ ಶಕ್ತ್ಯಾಯುಧವೂ ಸಮೇತ
ವಜ್ರಾಯುಧಸಹಿತ ಚತುರ್ಭುಜೆ ವಜ್ರಾಧಿಕಾಯುಧೋಪೇತಾ ||

೪೯೮. ಡಾಮರ್ಯಾದಿಭಿ-ರಾವೃತಾ 
ಪದ್ಮ ದಳಗಳ್ಹತ್ತು ಪ್ರತಿಯೊಂದಕು ವ್ಯಂಜನಾಕ್ಷರ ಬಿಂದು
ಪ್ರತಿದಳದೊಡತಿ ಡಾಮರೀ ಸಮೇತ ದಶಾನುಚರ ಸಿಂಧು
ಸುತ್ತುವರೆದಿಹರೆಲ್ಲರ ಜತೆ ನೆಲೆಸಿಹಳು ರಕ್ಷೆಗೆ ಅನವರತ
ಲಲಿತಾಪಥ ತೊಡಕಾಗದಂತೆ ಡಾಮರ್ಯಾದಿಭಿರಾವೃತಾ ||

೪೯೯. ರಕ್ತವರ್ಣಾ
ಅಗ್ನಿತತ್ವ ನಾಭಿ ಚಕ್ರ, ತ್ರಿಕೋನ ಮಧ್ಯ 'ರಂ' ಬೀಜಾಕ್ಷರಿ
ಅತಿಶಕ್ತಬೀಜಾಕ್ಷರ, ಅತೀಂದ್ರೀಯತೆ ಪಡೆಯೆ ಸಹಕಾರಿ
ಮಿಳಿತವಾಗೆ ಸೂಕ್ತಬೀಜ ಸೃಷ್ಟಿಲಯ ಸಾಮರ್ಥ್ಯಧಾರಣ
ಲಲಿತಾಕಾಂತಿ ಪ್ರತಿಫಲಿಸುತ, ಯೋಗಿನಿತಾ ರಕ್ತವರ್ಣಾ ||

೫೦೦. ಮಾಂಸ-ನಿಷ್ಠಾ
ತೊಗಲಿನ ಮೊದಲ ಪದರ, ರಕ್ತವಾಗಿ ಎರಡನೆ ಪದರ
ತಳದಲಿ ಮಾಂಸ ಖಂಡ, ಮೂರನೆ ಯೋಗಿನಿ ಸಾದರ
ಮಣಿಪೂರಕ ಮೂರನೆ ಚಕ್ರ ಮೂರನೆ ಯೋಗಿನಿ ತ್ರಿಪೀಠ
ಉಪಸ್ಥಿತಳು ಯೋಗಿನಿದೇವಿ, ಸಂರಕ್ಷಿಸುತ ಮಾಂಸನಿಷ್ಠಾ ||

೫೦೧. ಗುಡಾನ್ನಪ್ರೀತ-ಮಾನಸಾ 
ಕಬ್ಬು ಹಿಂಡಿದ ಹಾಲು, ಬೆಲ್ಲವಾಗಿ ಸಿಹಿ ತಾಳು
ಬೆಲ್ಲದಾ ಜತೆ ಕುದಿಸಿದಾನ್ನ ಗುಡಾನ್ನವಾಗಿ ತೆಳು
ಲಲಿತೆಯನೊಲಿಸೊ ಹಾದಿ ಲಾಖಿನಿಗು ಮನಸಾ
ಅರ್ಪಿಸೋಲೈಸೆಸುಸೂತ್ರ ಗುಡಾನ್ನಪ್ರೀತಮಾನಸ ||

೫೦೨. ಸಮಸ್ತ-ಭಕ್ತ-ಸುಖದಾ
ದ್ವಾದಶ ಸೂರ್ಯಶಕ್ತಿ 'ರಂ' ಬೀಜಾಕ್ಷರ, 'ಹ್ರೀಂ' 'ಶ್ರೀಂ' ಯಲಂತರ್ಗತ
ಆತ್ಮಬೀಜ ರೂಪಿಸೆ ವಹಿಸಿ ಪಾತ್ರ, ಚಕ್ರಾಸೀನೆ ಲಾಕಿನೀ ಶಕ್ತಿರಕ್ಷಿಸುತ
ಕಾಮಾಗ್ನಿ ಉಪಸ್ಥಿತ ಚಕ್ರ, ಪ್ರಚೋದಿತಕುಂಡಲಿನೀಶಕ್ತಿ ಕೆಳಗಿಳಿಬಿಡದ
ಲಲಿತಾಭಕ್ತರಿಗ್ಹಂಚುತ ಸುಖಸಂತಸ, ಲಾಕಿನೀ ಸಮಸ್ತ-ಭಕ್ತ-ಸುಖದಾ ||

೫೦೩. ಲಾಕಿನ್ಯಂಬಾ-ಸ್ವರೂಪಿಣೀ 
ನಾಭಿಚಕ್ರ ನಿವಸಿತೆ ಯೋಗಿನಿ ಲಾಕಿನೀ ಮಾತ ಸ್ವರೂಪಿಣಿ
ಲಲಿತಾ ಕಾಂತಿಯನ್ಹೊಮ್ಮಿಸೊ ತ್ರೈವದನ ಕರುಣಾದಾಯಿನಿ
ಪುಷ್ಟಿಯಾಗಿಸಿ ಅಂಗಾಂಗ ಖಂಡ, ಯೋಗ ಸಾಧನೆಗೆ ತ್ರಾಣಿ
 
ಧನ್ಯವಾದಗಳೊಂದಿಗೆ
-ನಾಗೇಶ ಮೈಸೂರು
 

ಶ್ರೀಧರರೆ, ೫೦೩. "ಲಾಕಿನ್ಯಂಬಾ-ಸ್ವರೂಪಿಣೀ " ಕಡೆಯಸಾಲು ಬಿಟ್ಟುಹೋಗಿದೆ, ಅದಕ್ಕೆ ಮತ್ತೆ ಸೇರಿಸುತ್ತಿದ್ದೇನೆ.

೫೦೩. ಲಾಕಿನ್ಯಂಬಾ-ಸ್ವರೂಪಿಣೀ 
ನಾಭಿಚಕ್ರ ನಿವಸಿತೆ ಯೋಗಿನಿ ಲಾಕಿನೀ ಮಾತ ಸ್ವರೂಪಿಣಿ
ಲಲಿತಾ ಕಾಂತಿಯನ್ಹೊಮ್ಮಿಸೊ ತ್ರೈವದನ ಕರುಣಾದಾಯಿನಿ
ಪುಷ್ಟಿಯಾಗಿಸಿ ಅಂಗಾಂಗ ಖಂಡ, ಯೋಗ ಸಾಧನೆಗೆ ತ್ರಾಣಿ
ತಾಯಾಗಿ ಸಲಹುವಾ ಯೋಗಿನಿ, ಲಾಕಿನ್ಯಂಬಾ-ಸ್ವರೂಪಿಣೀ ||
 
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು