ಕೃಷ್ಣ..ಕೃಷ್ಣ..ಕೃಷ್ಣ.. - ಶ್ರೀಕೃಷ್ಣ ಜನಿಸಿದ ಧರೆಯಲ್ಲಿ...

ಕೃಷ್ಣ..ಕೃಷ್ಣ..ಕೃಷ್ಣ.. - ಶ್ರೀಕೃಷ್ಣ ಜನಿಸಿದ ಧರೆಯಲ್ಲಿ...

ಚಿತ್ರ

ಕೃಷ್ಣ..ಕೃಷ್ಣ..ಕೃಷ್ಣ.. -   ಶ್ರೀಕೃಷ್ಣ ಜನಿಸಿದ ಧರೆಯಲ್ಲಿ...

 

(೧೨-೦೬-೨೦೧೩)

ಗಣೇಶ

“ಸರಿ ಕೃಷ್ಣ ಈಗ ನನಗೆ ಮೊದಲನೆ ಅನುಮಾನ ನೀನು ಹುಟ್ಟುವದಕ್ಕೆ ಮೊದಲಿನಿಂದಲೆ ಪ್ರಾರಂಬ, ಕಂಸನಿಗೆ ‘ನಿನ್ನ ಮರಣ ದೇವಕಿಯ ಎಂಟನೆ ಮಗುವಿನಿಂದ ‘ ಎಂದು ಅಶರೀರವಾಣಿಯಾಯಿತು ಎನ್ನುವ ಬಗ್ಗೆ ಏನು ಹೇಳುವೆ?. ಇಲ್ಲಿಯವರೆಗು ಯಾರಿಗೆ ಆಗಲಿ ನಿನ್ನ ಮರಣ ಹೀಗೆ ಎನ್ನುವ ರಹಸ್ಯವನ್ನು  ಸೃಷ್ಟಿ ಮೊದಲೆ ಬಿಟ್ಟುಕೊಡಲ್ಲ ಹಾಗಿರುವಾಗ ಕಂಸನಿಗೆ ಕೇಳಿದ ಅಶರೀರವಾಣಿ ಸತ್ಯವ?"

ಕೃಷ್ಣ

"ಗಣೇಶ, ಹಾಗೆ ನೋಡಿದರೆ ನಿನ್ನ ಅನುಮಾನಕ್ಕೆ ನಾನು ಉತ್ತರ ಕೊಡಬೇಕಾಗಿಯೆ ಇಲ್ಲ ಎಕೆಂದರೆ ನಾನು ಇನ್ನು ಆಗ ಹುಟ್ಟೆ ಇರಲಿಲ್ಲ. ಆದರು ಹೇಳುವೆ, ನನಗೆ ಅನ್ನಿಸುವಂತೆ ಆಗ ಮಥುರಾನಗರದಲ್ಲಿ   ಯಾದವರ ನಡುವೆ  ಗುಂಪುಗಳು ಹಾಗು ಪರಸ್ಪರ ಹೋರಾಟಗಳಿದ್ದವು, ಕಂಸನಿಗೆ ಅಸಂಖ್ಯಾತ ವೈರಿಗಳಿದ್ದರು. ಕಂಸನ ಆಕ್ರಮಣವನ್ನು ತಡೆಯುವ ಶಕ್ತಿಯು ಸಣ್ಣಪುಟ್ಟ ರಾಜರುಗಳಿಗೆ ಇರಲಿಲ್ಲ.

ಆದರೆ ಕಂಸನಿಗಿದ್ದ ಕೆಲವು ದೋಷಗಳು ತೀರ ಹತ್ತಿರದವರಿಗೆ ಗೊತ್ತಿತ್ತು ಅದರಲ್ಲಿ ಅವನು ತನ್ನ ಸಾವಿಗೆ ಅತಿಯಾಗಿ ಹೆದರುವನು ಎಂಬುದು ಒಂದು. ಕಂಸನ ಈ ದುರ್ಬಲತೆಯನ್ನು ತಿಳಿದಿದ್ದ ಯಾರೊ ಅವನ ಶತ್ರುಗಳು ಈ ಅಶರೀರವಾಣಿಯ ಕತೆ ಹುಟ್ಟಿಹಾಕಿರಬಹುದು, ದೇವಕಿ ವಸುದೇವರ ಮದುವೆಯ ಗಲಾಟೆಯಲ್ಲಿ ಕಂಸನಿಗೆ ಕೇಳಿಸುವಂತೆ ಮಾಡಿರಬಹುದು. ಹೆದರಿದ ಕಂಸ ಜೀವಭಯದಿಂದ ತನ್ನನ್ನು ರಕ್ಷಿಸಿಕೊಳ್ಳುವತ್ತ ಗಮನಹರಿಸಿದ ಹಾಗಾಗಿ ಅವನಿಗೆ ತನ್ನ ಶತ್ರು ರಾಜ್ಯದ ಕಡೆ ಆಕ್ರಮಣ ಮಾಡುವ ಗಮನ ಕಡೆಯಾಯಿತು ಅನ್ನಿಸುತ್ತೆ. ಹಾಗಾಗಿ ಇದು ಒಂದು ಶತ್ರುಗಳ ಸಂಚು ಇರಬಹುದು ಎನ್ನುವುದು ನನ್ನ ಅಭಿಪ್ರಾಯ.

ಮತ್ತೊಂದು ಉಲ್ಲೇಖ ಕೆಲವರು ಹೇಳುವಂತೆ ಅಶರೀರವಾಣಿ ಅನ್ನುವದೆಲ್ಲ ಏನು ಇಲ್ಲ. ಕಂಸನಿಗೆ ದೇವಗುರು ನಾರದರು ಬಂದು ಸಾವಿನ ಬಗ್ಗೆ ತಿಳಿಸಿದರು ಎನ್ನುವುದು,  ಈ ಸಂಭವನೀಯತೆ  ಸತ್ಯಕ್ಕೆ ಹತ್ತಿರವಾದುದ್ದು  ಅನಿಸುತ್ತಿದೆ” ಎಂದ ಕೃಷ್ಣ.

(೩೧-೦೭-೨೦೧೩)

ಗಣೇಶ ಸ್ವಲ್ಪ ನಗುತ್ತ

" ಕೃಷ್ಣ, ಕಂಸ ನಿನ್ನ ಬರುವಿಕೆಗೆ ಹೆದರಿದ,  ನಿನ್ನ ಹುಟ್ಟಿಗೆ ಮೊದಲೆ ನಿನ್ನ ದ್ವೇಷ ಮಾಡಲು ಪ್ರಾರಂಬಿಸಿದ ಎಂದು ಕೊಳ್ಳೋಣ. ಆದರೆ ಅಂತಹ ಭಯವಿದ್ದವನು  ನಿನ್ನ ತಾಯಿ ದೇವಕಿಯನ್ನು ಅಥವ ವಸುದೇವನನ್ನೆ ಕೊಲ್ಲ ಬಹುದಿತ್ತಲ್ಲ ಅವರನ್ನು ಅನಗತ್ಯ ಸೇರೆಯಲ್ಲಿಟ್ಟು ತನ್ನ ಸಾವನ್ನು ತಾನೆ ಏಕೆ ಕಾಯುತ್ತ ಕುಳಿತ? ಇದು ಗೊಂದಲ ಹುಟ್ಟಿಸುವದಿಲ್ಲವೆ. "

ಕೃಷ್ಣ

"ಗಣೇಶ ನಿನ್ನ ಅನುಮಾನ ಸಕಾರಣವಾಗಿದೆ, ಆದರೆ ಇದನ್ನು ಅರ್ಥ ಮಾಡಿಕೊಳ್ಳಲು ಮಥುರೆಯ ಆಗಿನ ರಾಜಕೀಯ ಸ್ಥಿಥಿಯನ್ನು ನೀನು ಅರ್ಥಮಾಡಿಕೊಳ್ಳಬೇಕು. ಮಥುರೆಗೆ ಮಹಾರಾಜ ಎಂದು ಉಗ್ರಸೇನನನ್ನು ಕೂಡಿಸಿದ್ದರು ಆದರೆ ಅವನು ಅಧಿಕಾರವೆ ಇಲ್ಲದ ಹೆಸರಿಗೆ ರಾಜ . ಯಾದವರು ಎಂದು ಎಲ್ಲಡೆ ಪ್ರಸಿದ್ದರಾಗಿದ್ದರು ಸಹ , ಒಳ ಹೊಕ್ಕು ನೋಡಿದರೆ ಅವರಲ್ಲಿ ಹತ್ತು ಹಲವು ಗುಂಪುಗಳು,  ಒಂದು ಗುಂಪಿಗು ಮತ್ತೊಂದಕ್ಕು ಬಿಡಿಸಲಾರದ ವೈಷಮ್ಯ.  ಹಾಗಿದ್ದಾಗ ತನ್ನ ತಂದೆಯನ್ನು ಬದಿಗೆ ಸರಿಸಿ, ಗೃಹಬಂಧನದಲ್ಲಿರಿಸಿ ಸಿಂಹಾಸನ ಏರಿದ ಕಂಸ. ಅವನು ಸಿಂಹಾಸನ ಏರಿ ಪ್ರಭಲನಾಗಿದ್ದರು ಸಹ ಅವನ ರಾಜ್ಯದಲ್ಲಿ ಎಲ್ಲರನ್ನು ಎದಿರು ಹಾಕಿಕೊಳ್ಳಲು ಅವನಿಗೆ ಸಾದ್ಯವಿರಲಿಲ್ಲ. ವಸುದೇವನನ್ನು ದೇವಕಿಯನ್ನು ಕೊಂದಿದ್ದರೆ ಅವನ ಪರಿಸ್ಥಿತಿ ಮತ್ತಷ್ಟು ಹೀನವಾಗಿ ಸಂಕಟಕ್ಕೆ ಒಳಗಾಗುತ್ತಿದ್ದ. ಅವನ ಸ್ಥಾನಕ್ಕೆ ಕುತ್ತು ಬರುವ ಸಾದ್ಯತೆಗಳು ಅಗಾದವಾಗಿದ್ದು, ತನ್ನ ಜೀವ ಭಯವನ್ನು ಮೀರಿ ಅವರನ್ನು ಜೀವಂತ ಉಳಿಸಲೆ ಬೇಕಿತ್ತು"

ಗಣೇಶ ಕೊಂಚ ಸಂಕೋಚದಿಂದಲೆ ಕೇಳಿದ

"ಅದು ಸರಿ ಕೃಷ್ಣ ಆದರೆ ಅವನು ವಸುದೇವನನ್ನು ದೇವಕಿಯನ್ನು ಒಂದೆ ಸೆರೆಯಲ್ಲಿ ಏಕಿರಿಸಿದ, ಬೇರೆ ಬೇರೆ ಮನೆಗಳಲ್ಲಿ ಬಂದಿಸಿ ಇರಿಸಿದ್ದರೆ, ಅವನ ತಂಗಿಗೆ ಮಕ್ಕಳಾಗುವ ಸಾಧ್ಯತೆ ಇರಲಿಲ್ಲ ಅಲ್ಲವೆ . ಹಾಗಾದಾಗ ದೇವಕಿಯ ಮಗನಿಂದ ಅವನಿಗೆ ಮರಣ ಎನ್ನುವುದು ಪೊಳ್ಳಾಗುತ್ತಿತ್ತು ಅನ್ನಿಸದೆ "

ಕೃಷ್ಣ ಅಚ್ಚರಿಯಿಂದ ಗಣಪನನ್ನು ನೋಡಿದ

"ಭಲೆ ಗಣೇಶ , ಪರವಾಗಿಲ್ಲ , ನೀನು ಇಷ್ಟು ಚುರುಕಾಗಿ ಯೋಚಿಸುತ್ತಿದ್ದೀಯಲ್ಲ. ಅದು ಬ್ರಹ್ಮಚಾರಿಯಾಗಿಯು . ಮೆಚ್ಚತಕ್ಕದೆ. ಬಹುಷಃ ತನಗಿದ್ದ ಜೀವಭಯದಲ್ಲಿ ಕಂಸನ ಮನಸ್ಸು  ಚುರುಕಾಗಿರಲಿಲ್ಲ ಅನ್ನಿಸುತ್ತೆ,ಅವನ  ಮಂದಮತಿಗೆ ಹೊಳೆದಿರಲಿಕ್ಕಿಲ್ಲ.

ಅವನ ಸುತ್ತ ಇದ್ದ ಅವನ ಹಿಂಬಾಲಕರು ಹಾಗು ಸಲಹೆ ಕೊಡುವರು ಸಹ ಹಾಗೆ ಇದ್ದರು ಅನ್ನಿಸುತ್ತೆ,

ಅಲ್ಲದೆ ದೇವಕಿ ಅವನಿಗೆ ಸ್ವಂತ ತಂಗಿ ಅಲ್ಲದಿದ್ದರು ಅವಳನ್ನು ಕಂಡರೆ ಅವನಿಗೆ ಅಪಾರ ಕರುಣೆ ಕಕ್ಕುಲತೆ ಇತ್ತಂತೆ ಹಾಗಾಗಿ ತನ್ನ ಗಂಡನ ಜೊತೆ ನೆಮ್ಮದಿಯಾಗಿರಲಿ ಎಂದು ಬಿಟ್ಟಿರಬಹುದು."

(01/08/13)

ಗಣೇಶ

"ಕೃಷ್ಣ .. ನೀನು ಹುಟ್ಟುವಾಗ ಹೊರಗೆ ದೊಡ್ಡ ಮಳೆ ಬರುತ್ತಿತ್ತು, ಎಲ್ಲಡೆಯು ಕತ್ತಲು, ಕಂಸ ಹಾಕಿದ ಬಲವಾದ ಕಾವಲು, ಅಷ್ಟಿದ್ದರು ಕಟ್ಟಿನ ಸುರಕ್ಷಿತ ಸೆರೆಮನೆಯಿಂದ ಹೊರಟು ಗೋಕುಲವನ್ನು ಸೇರಿಬಿಟ್ಟೆ, ಹರಿಯುತ್ತಿದ್ದ ಯಮುನಾ ನಿನ್ನ ತಂದೆಗೆ ದಾರಿ ಬಿಟ್ಟಳು, ತಲೆಯ ಮೇಲೆ ಆಧಿಶೇಷ ರಕ್ಷಣೆ ಕೊಡುತ್ತಿದ್ದ ಈ ಘಟನೆಗಳೆಲ್ಲ ನಿನಗೆ ನೆನಪಿದೆಯೆ"

ಕೃಷ್ಣ

"ನಾನು ಆಗಿನ್ನು ಹುಟ್ಟಿದ, ಕಣ್ಣು ತೆರೆಯದ ಕೂಸು , ಇಂತಹುವುದೆಲ್ಲ ನೆನಪಿರಲು ಹೇಗೆ ಸಾದ್ಯ, ಆದರೆ ಏನು ನಡೆದಿರಬಹುದು ಎನ್ನುವದನ್ನು ಕಲ್ಪಿಸಿಕೊಳ್ಳಬಲ್ಲೆ ಅಷ್ಟೆ. ಕಂಸ ಎಂತರ ಕ್ರೂರಿಯಾದರು, ಅವನ ವಿರುದ್ದ ಗುಂಪುಗಳು ಸದಾ ಸಕ್ರಿಯವಾಗಿದ್ದವು. ಅವನ ಬೆನ್ನ ಹಿಂದೆ ಅವನ ವಿರುದ್ದದ ದೇಶಕ್ಕೆ ಅನುಕೂಲವಾಗಬಲ್ಲ ಘಟನೆಗಳು ನಡೆಯುತ್ತಿದ್ದವು, ಕಂಸನ ಸ್ವಂತ ತಂದೆ ಉಗ್ರಸೇನನೆ ಕಂಸನಿಗೆ ವಿರುದ್ದವಾಗಿದ್ದ. ಹಾಗಿರುವಾಗ ನಾನು ಅಂತಹ ಭದ್ರವಾದ ಸೆರೆಯಿಂದ ಹೊರಬಂದುದ್ದು ಒಂದು ಪಿತೂರಿಯ ಬಾಗವಾಗಿತ್ತು. ಕಂಸನ ಮನದಲ್ಲಿ ಹೇಗೆ ತನ್ನ ಸಾವು ದೇವಕಿಯ ಎಂಟನೆ ಮಗನಿಂದ ಎಂದು ಅಚ್ಚುಹೊತ್ತಿತ್ತೊ, ಹಾಗೆ ರಾಜ್ಯದ ಜನವೆಲ್ಲ ನಂಬಿಹೋಗಿದ್ದರು. ದೇವಕಿಯ ಎಂಟನೆ ಮಗ ಬಂದು ಕಂಸನ ದುಷ್ಟ ಆಡಳಿತದಿಂದ ತಮ್ಮನ್ನು ಪಾರುಮಾಡುವನು ಎಂದು ಕಾಯುತ್ತಿದ್ದರು. ಶತ್ರು ಧಮನ ಮಾಡುವದರಲ್ಲಿ ಕಂಸ ಕುಖ್ಯಾತನಾಗಿದ್ದ. ಚಿಕ್ಕ ಮಕ್ಕಳನ್ನು ಬಿಡದೆ ಕೊಲ್ಲಿಸುತ್ತಿದ್ದ. ತನ್ನದೆ ಆದ ನಂಬುಗೆಯ ಒಂದು ಗುಂಪನ್ನು ಬೆಳೆಸಿ ಆಡಳಿತ ತನ್ನ ಕೈಯಲ್ಲೆ ಇಡಲು ಪ್ರಯತ್ನಪಡುತ್ತಿದ್ದ.

ಸರ್ವಾಧಿಕಾರಿಯ ಎಲ್ಲ ಲಕ್ಷಣಗಳು ಕಂಸನಲ್ಲಿದ್ದವು, ದೇಶದ ಜನರನ್ನು ತನ್ನ ಸೈನ್ಯದ ಭಯದಲ್ಲಿಟ್ಟಿದ್ದ, ಅವನಿಗೆ ಆಸರೆಯಾಗಿದ್ದವನು ಜರಾಸಂದ ಅವನ ಬಲದ ದೈರ್ಯದ ಮೇಲೆ ಕಂಸನ ರಾಜ್ಯಭಾರ ನಡೆಯುತ್ತಿತ್ತು.

ನಾನು ಈ ಎಲ್ಲವನ್ನು ಮೀರಿ ತಂದೆಯ ತಲೆಯ ಮೇಲೆ ಬುಟ್ಟಿಯಲ್ಲಿ ಕುಳಿತು, ಬಂದನದಿಂದ ಹೊರಗೆ ದಾಟಿ, ನದಿಯಲ್ಲಿ ಮತ್ತೊಂದು ದಡ ತಲುಪಿ ಗೋಕುಲವನ್ನು , ತಾಯಿ ಯಶೋದೆಯ ಮಡಿಲನ್ನು ಸೇರಿದೆ. ನನ್ನ ಆ ಪ್ರಯಾಣದ ಹಿಂದೆ ಸಾಕಷ್ಟು ಜನರ ಕೈವಾಡವಿದೆ, ಜೀವವನ್ನು ಒತ್ತೆ ಇಟ್ಟು ಆ ಕೆಲಸಕ್ಕೆ ಕೈ ಹಾಕಿದ್ದಾರೆ"

ಗಣೇಶ

"ನಿನ್ನನ್ನು ಹೊರಗೆ ಕಳಿಸುವುದು ನಿನ್ನ ಹೆತ್ತ ತಾಯಿಗೆ ಕಷ್ಟವಾಗಲಿಲ್ಲವೆ, ಆಕೆ ನಿನ್ನನ್ನು ತೊರೆದು ಹೇಗೆ ಇದ್ದಳು"

(೦೨-೦೮-೨೦೧೩)

ಕೃಷ್ಣ

" ಆಗ ತಾನೆ ಹೆತ್ತ ಮಗುವನ್ನು ಅಗಲುವುದು ಯಾರಿಗೆ ಆಗಲಿ ದುಃಖವೆ , ಇನ್ನು ನನ್ನ ತಾಯಿ ದೇವಕಿಗೆ ಸಂಕಟವಾಗದಿರುವುದೆ?. ಆದರೆ ತನ್ನ ಮಗುವಿನ ಪ್ರಾಣ ಅದಕ್ಕು ಮೀರಿದ್ದಲ್ಲವೆ. ಅವಳ ಎದುರಿಗೆ ಉಳಿದ ಏಳು ಮಕ್ಕಳು ಮರಣ ಹೊಂದಿದ್ದರು. ಅಲ್ಲೆ ಇದ್ದಲ್ಲಿ ನನ್ನ ಪ್ರಾಣವು ಹೋಗುತ್ತಿತ್ತು ಅನ್ನುವುದು ಸತ್ಯವಲ್ಲವೆ. ಹಾಗಿದ್ದಾಗ, ತನ್ನ ಮಗುವನ್ನು ಅಗಲುವುದರಿಂದ ಆ ಮಗುವಿನ ಪ್ರಾಣ ಉಳಿಯುತ್ತೆ ಅನ್ನುವದಾದರೆ ಯಾವ ತಾಯಿಯಾದರು ಸಿದ್ದಳಾಗುವಳು ಅಲ್ಲವೆ? ಹಾಗೆಯೆ ನನ್ನ ತಾಯಿ ನನ್ನ ಪ್ರಾಣ ಉಳಿಸುವ ಸಲುವಾಗಿ ನನ್ನ ಅಗಲಿಕೆಯನ್ನು ಸಹಿಸಿದಳು ಅನ್ನಿಸುತ್ತೆ. ಆದರು ಆ ಭಾವ ನನ್ನನ್ನು ಕಾಡಲಿಲ್ಲ ಅಂದುಕೋ ನನಗೆ ಯಶೋದೆಯೆ ತಾಯಿಯಾಗಿದ್ದಳು. ದೇವಕಿ ಎನ್ನುವ ತಾಯಿ ನನಗೆ ಇದ್ದಾಳೆ ಅನ್ನುವ ಕಲ್ಪನೆಯೆ ನನಗಿರಲಿಲ್ಲ"

ಗಣೇಶ

"ಬಹುಷ ನೀನು ಗೋಕುಲದಲ್ಲಿ ಇದ್ದದ್ದು ಕಂಸನಿಗೆ ತಿಳಿಯಿತು ಅನ್ನಿಸುತ್ತೆ, ಹಾಗಾಗಿ ನಿನ್ನ ಮೇಲೆ ಆಕ್ರಮಣ ಪ್ರಾರಂಭವಾಯಿತು ಅನ್ನಿಸುತ್ತೆ, ಆ ಪೂತನಿ ಮುಂತಾದವರೆಲ್ಲ ನಿನ್ನನ್ನು ಕೊಲ್ಲಲು ಬರುವಾಗ ನಿನಗೆ ಭಯ ಅನಿಸಲಿಲ್ಲವೆ. ನೀನು ಅವಳನ್ನು ರಕ್ತ ಹೀರಿಯೆ ಕೊಂದುಬಿಟ್ಟೆಯಂತೆ!"  

ಗಣಪನ ದ್ವನಿಯಲ್ಲಿ ಆಶ್ಚರ್ಯ.

=================

ಮುಂದುವರೆಯುವುದು…...

 

ಚಿತ್ರಮೂಲ :  http://vikastri.devi...

ಕೃಷ್ಣ .. ಕೃಷ್ಣ.. ಕೃಷ್ಣ   ಸರಣಿಯ ಎಲ್ಲ ಕಂತುಗಳನ್ನು ಒಟ್ಟಿಗೆ ಓದಲು , ಕೆಳಗೆ ’ಸರಣಿ’ ಎಂಬಲ್ಲಿ ಇರುವ ’ಕೃಷ್ಣ .. ಕೃಷ್ಣ ..ಕೃಷ್ಣ’  ಪದವನ್ನು ಕ್ಲಿಕ್ ಮಾಡಿ

Rating
No votes yet

Comments

Submitted by partha1059 Thu, 09/19/2013 - 17:32

ಪ್ರಿಯ ಸಂಪದಿಗರೆ
ಹಿಂದಿನ ಕಂತು ಬರೆಯುವಾಗ ಇಲ್ಲಿಗೆ ಕೃಷ್ಣ ಕೃಷ್ಣ ಕೃಷ್ಣ… ಸರಣಿಯನ್ನು ಈ ವೇದಿಕೆಯಲ್ಲಿ ನಿಲ್ಲಿಸುವದಾಗಿ ಹೇಳಿದ್ದೆ. ಅಲ್ಲದೆ ನನ್ನ ಬ್ಲಾಗಿನಲ್ಲಿ ಮಾತ್ರ ಹಾಕುವದಾಗಿ ಹೇಳಿಬಿಟ್ಟೆ. ನಂತರ ನನ್ನ ಅನೇಕ ಸ್ನೇಹಿತರು ಪ್ರತಿಕ್ರಿಯೆಗಳಲ್ಲಿ ಇಲ್ಲಿ ಮುಂದುವರೆಸಲು ಕೇಳಿದರು. ಅಲ್ಲದೆ ಮೊಬೈಲ್ ಗೆ ಕೆಲವು ಮೆಸೇಜ್ ಗಳು ಸಹ ಹರಿದು ಬಂದವು.
ನನಗೆ ಮತ್ತೊಂದು ಧರ್ಮ ಸಂಕಟವು ಎದುರಾಗಿತ್ತು. ಯಾವುದೆ ಈ ರೀತಿ ಬರಹ ಕತೆಯನ್ನು ಮೊದಲು ಸಂಪದದಲ್ಲಿ ಪ್ರಕಟಿಸಿ ನಂತರ ಎಲ್ಲಡೆ ಹಾಕುವುದು ನನ್ನ ಸಂಪ್ರದಾಯ. ಅಂತಹ ಒಂದು ಅಭ್ಯಾಸಕ್ಕೆ ಒಗ್ಗಿಕೊಂಡ ನನಗೆ ಸಂಪದದಲ್ಲಿ ಹಾಕದೆ ಬೇರೆಡೆ ಹಾಕುವುದು ಹಿಂಸೆಯಾಗಿತ್ತು.
ಮಹಾಭಾರತದಲ್ಲಿ ಪಾರ್ಥನಿಗೆ ದಾರಿ ತೋರಲು ಒಬ್ಬನೆ ಕೃಷ್ಣನಿದ್ದ. ಸಂಪದದಲ್ಲಿ ಈ ಪಾರ್ಥನಿಗೆ ಸಂಶಯ ಪರಿಹರಿಸಲು ಎಷ್ಟೊಂದು ಕೃಷ್ಣರು !!!!
ಮತ್ತೆ ಇಲ್ಲಿ ಸರಣಿ ಮುಂದುವರೆಸಲು ನಿರ್ಧರಿಸಿದಾಗ ಮನಸಿಗೆ ಒಂದು ನೆಮ್ಮದಿ ದೊರಕಿತು
ಇಲ್ಲಿ ಹಾಕುವದಿಲ್ಲ ಎಂದು ಹೇಳುವಾಗ ನನ್ನ ಯಾವುದೆ ವೈಯುಕ್ತಿಕ ಕಾರಣಗಳಿರಲಿಲ್ಲ. ನನ್ನ ಬರಹದ ಬಗ್ಗೆ ಯಾವುದೆ ಕಟು ವಿಮರ್ಷೆಗಳು ಬಂದರು ಎದುರಿಸಲು ತರ್ಕಬದ್ದವಾಗಿ ವಿವರಿಸಿಲು ಪ್ರಯತ್ನಿಸುತ್ತಿದ್ದೆ. ಆದರೆ ಬದಲಿಗೆ ಪ್ರತಿಕ್ರಿಯೆ ನೀಡುವರ ಮೇಲೆ ನಿಂದನೆಗಳಾದವು ಅದು ಹೋಗಲಿ ಎಂದರೆ ಕೃಷ್ಣನನ್ನು ಪೂಜಿಸುವರ ಮನೆಯ ಹೆಣ್ಣುಮಕ್ಕಳ ಬಗ್ಗೆ ಅಗೌರವವಾಗಿ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂತಹ ಸಂದರ್ಭದಿಂದ ಮನಸಿಗೆ ಬೇಸರವೆನಿಸಿ ನಿಲ್ಲಿಸೋಣ ಅನ್ನಿಸಿದ್ದು ಸತ್ಯ. ಆದರೆ ಯಾರು ನಿಂದನೆಗೊಳಗಾದರೊ ಅವರೆ ಹೇಳಿದ್ದಾರೆ ನಾನು ಹ್ಯಾಂಡಲ್ ಮಾಡ್ತೀನಿ ನೀವು ಬೇಸರ ಪಡಬೇಡಿ ಎಂದು. ಹಾಗಿದ್ದಾಗ ನಾನು ಪುನಃ ಪ್ರಾರಂಭಿಸಲು ಯಾವುದೆ ಅಡಚಣೆ ಇಲ್ಲ ಅಂದುಕೊಳ್ಳುವೆ.

ಸತ್ಯ ಎನ್ನುವುದು ಸದಾ ಉರಿಯುವ ಬೆಂಕಿಯಂತೆ, ಅದು ನಿತ್ಯ ಜ್ವಲಿಸುತ್ತಲೆ ಇರುತ್ತದೆ. ನಾವು ನಂಬಿರುವ ಯಾವುದೆ ನಂಭಿಕೆಗಳು ಅಥವ ಜೀವನವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ನಂತರವೆ ಒಪ್ಪಿಕೊಳ್ಳುವುದು ಸರಿಯಾದ ಮಾರ್ಗ. ಹಿಂದೂ ಧರ್ಮವು ಸದಾ ಟೀಕೆಗಳಿಗೆ ನಿಂದನೆಗಳಿಗೆ ತೆರೆದುಕೊಂಡಿದೆ. ಯಾವುದೆ ಚಿಂತನೆಯನ್ನು ಸ್ವಾಗತಿಸುತ್ತದೆ ಎನ್ನುವದು ಆಳವಾಗಿ ಅಭ್ಯಾಸ ಮಾಡಿದವರಿಗೆ ಅರಿವಿರುತ್ತದೆ. ನಾವು ನಂಬುವು ಯಾವುದೆ ನಂಬಿಕೆಯಾಗಲಿ ಅದನ್ನು ಪ್ರತಿನಿತ್ಯ ಸರಿ ಇದೆಯೆ ಎಂದು ಪರೀಕ್ಷಿಸಲೆ ಬೇಕು ಅಂತಹುದೆ ಪ್ರಯತ್ನ ಈ ಸರಣಿಯಲ್ಲಿ ನಾನು ಮಾಡಿರುವುದು.
ಕೃಷ್ಣ ಅಥವ ರಾಮ ದೇವರಲ್ಲ ಅವರು ಸಾಮಾನ್ಯ ಮನುಷ್ಯರು ಎನ್ನುವ ವಾದವೆಲ್ಲ ಮೊದಲಿನಿಂದ ಇರುವುದೆ. ಅವರು ಮನುಷ್ಯರಾಗಿ ಹುಟ್ಟಿದ್ದವರು ಎಂಬುದನ್ನು ಯಾರು ಅಲ್ಲಗೆಳೆಯುವದಿಲ್ಲ. ಅವರ ಜೀವನದ ಕತೆ ಅನಾಧಿಕಾಲದಿಂದ ಎಲ್ಲರಿಗು ತಿಳಿದಿರುವುದೆ ಅಲ್ಲಿ ಯಾವುದೆ ಹೇರಿಕೆಯಿಲ್ಲ. ಪಟ್ಟಣಗಳಿಂದ ಹಳ್ಳಿಗಳವರೆಗೂ ಎಲ್ಲ ಕಡೆಯು ಅವರದೆ ಆದ ರೀತಿಯಲ್ಲಿ ಕಾಣಲು ಪ್ರಯತ್ನಿಸಿದ್ದಾರೆ ಹಾಗೆ ಬಡವರು ಸಿರಿವಂತರು, ಎಲ್ಲ ಪಂಗಡಗಳು ಆ ಕತೆಗಳನ್ನು ಓದಿರುವವುದೆ ಆಗಿದೆ.
ಕೆಲವರು ಹೇಳುವಂತೆ ಅದು ಮೂಢನಂಬಿಕೆಯೆ ಆಗಿರಲಿ ಆದರೆ ಅವರ ಕತೆಯನ್ನು ಅರಿಯಲು ಪ್ರಯತ್ನಪಡುವುದು ಮಹಾಪಾಪ ಅಥವ ಅವರೆಲ್ಲ ಮೂರ್ಖರು ಎಂದು ಹೇಳುವ ವಾದವನ್ನು ಒಪ್ಪುವಂತಿಲ್ಲ.
ರಾಮ ಕೃಷ್ಣ ರಷ್ಟೆ ಅಲ್ಲ ಅಂದಿನಿಂದ ಇಂದಿನವರೆಗೂ ಯಾವುದೆ ಸಂಸ್ಥೆಯ ಯಾವುದೆ ವ್ಯಕ್ತಿಯ ಸಿದ್ದಾಂತಗಳನ್ನು ನಾವು ಓದಿ, ಬೇರೆಯವರಿಂದ ಕೇಳಿ.ಅರಿತು ಮನದಲ್ಲಿ ಮಥಿಸಿ ನಮಗೆ ಒಪ್ಪಿಗೆಯಾದನಂತರವಷ್ಟೆ ಅನುಸರಿಸಲು ಸಾದ್ಯ.
ಅದು ಓದಿ ಇದು ಓದಬೇಡಿ ಎನ್ನುವ ಯಾವುದೆ ಸಿದ್ದಾಂತಗಳು ಹೇರಿಕೆ ಹಾಗು ನಮ್ಮ ವ್ಯಕ್ತಿಗತ ಸ್ವಾತಂತ್ರದ ಹರಣವಷ್ಟೆ. ನಮ್ಮ ಸಿದ್ದಾಂತಗಳನ್ನು ಖಂಡಿಸಿದರು ಎಂದು ನಾವು ಬೇರೆಯವರ ಸಿದ್ದಾಂತಗಳನ್ನು ಖಂಡಿಸಲು ಹೋಗದೆ ಅವುಗಳನ್ನು ಅರಿಯಲು ಪ್ರಯತ್ನಿಸೋಣ.
ಕಡೆಯದಾಗಿ ನನಗೆ ಪ್ರತಿಕ್ರಿಯೆಗಳಲ್ಲಿ ಮೊಬೈಲ್ ಮೆಸೇಜ್ ಗಳಲ್ಲಿ ಬೆಂಬಲ ನೀಡಿ ಮುಂದುವರೆಸುವಂತೆ ಪ್ರೋತ್ಸಾಹ ನೀಡಿದ ಎಲ್ಲರಿಗು ನನ್ನ ವಂದನೆಗಳು.
ಈ ಎಲ್ಲ ಘಟನೆಗಳಿಂದ ನನ್ನ ಮನ ಮತ್ತೊಂದು ನಿರ್ಧಾರಕ್ಕೆ ಬಂದಿದೆ !!
ಕೃಷ್ಣ ..ಕೃಷ್ಣ ...ಕೃಷ್ಣ ಸರಣಿಯ ನಂತರ. ರಾಮಾಯಣವನ್ನು ಸಹ ಮತ್ತೊಮ್ಮೆ ಓದಲು ಪ್ರಯತ್ನಿಸುತ್ತೇನೆ. ಹಲವರು ಬರೆದಿರುವ ರಾಮಾಯಣವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವೆ. ನಂತರ ರಾಮಾಯಣವನ್ನು ಸಂಗ್ರಹ ರೂಪದಲ್ಲಿ ನಾನು ಮತ್ತೊಂದು ಸರಣಿ ರೂಪದಲ್ಲಿ ಇಲ್ಲೆ ಬರೆದು ಪ್ರಕಟಿಸುವೆ , ಅದಕ್ಕೆ ಹೆಸರು ಕೊಟ್ಟಿದ್ದೇನೆ “ಕರಿಗಿರಿ ರಾಮಾಯಣ” :-)

ವಿಶ್ವಾಸಗಳೊಡನೆ
ಪಾರ್ಥಸಾರಥಿ

Submitted by nageshamysore Thu, 09/19/2013 - 20:15

ಪಾರ್ಥಾ ಸಾರ್, ಮತ್ತೆ ಮುಂದುವರೆಸುವ ಸರಿಯಾದ ನಿರ್ಧಾರ ಕೈಗೊಂಡಿದ್ದಕ್ಕೆ, ಸಂಪದಿಗರ ಪರವಾಗಿ ಧನ್ಯವಾದಗಳು ಮತ್ತು ಅಭಿನಂದನೆಗಳು. ಕೆಂಪೇಗೌಡ ಕವನಕ್ಕೆ ಪ್ರತಿಕ್ರಿಯಿಸಿ ಒಂದು ಕೊಂಡರೆ ಮತ್ತೊಂದು ಉಚಿತ ಎಂದಿದ್ದಿರಿ - ಇಲ್ಲಿ ಅದನ್ನು ಅನುಷ್ಠಾನಕ್ಕು ತಂದುಬಿಟ್ಟಿದ್ದೀರಾ :-) ('ಕೃಷ್ಣಾಯಣ' ಕೊಳ್ಳುವಾಗ 'ಕರಿಗಿರಿ ರಾಮಾಯಣ' ಉಚಿತ ). ನಡೆದ ಸಂಘಟನೆಗಳೆಲ್ಲಾ ಈ ಅಂತಿಮ ಫಲಿತಕ್ಕೆ ಸ್ಪೂರ್ತಿಯಾಗಲೆಂದೆ ನಡೆಯಿತೆಂದು ಕಾಣುತ್ತದೆ. ಸರಣಿ ಮುಂದುವರೆಯಲಿ.
 
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
 

ನಾಗೇಶರವರಿಗೆ
ವಂದನೆಗಳು
ಉಚಿತ ಎಂದೇನಿಲ್ಲ, ರಾಮಾಯಣವನ್ನು ಓದಿ ಬಹಳವರ್ಷಗಳೆ ಕಳೆದಿವೆ. ಚಿಕ್ಕವಯಸಿನಲ್ಲಿ ಕುವೆಂಪುರವರ ರಾಮಾಯಣ ಓದಿದ್ದೆ , ಪುನಃ ಎಲ್ಲವನ್ನು ಓದೋಣ ವಿಭಿನ್ನ ದೃಷ್ಟಿಕೋನ ಕಾಣಾಬಹುದು ಎನ್ನುವ ಕುತೂಹಲ

Submitted by sathishnasa Thu, 09/19/2013 - 20:52

ಸರಣಿ ಮುಂದುವರೆಸುತ್ತಿರುವುದಕ್ಕೆ ಧನ್ಯವಾದಗಳು. ಶ್ರೀ ರಾಮ , ಶ್ರೀ ಕೃಷ್ಣ ಮತ್ತು ಅನೇಕ ಮಹಾಪುರುಷರು ಇದ್ದ ಕಾಲದಲ್ಲಿಯೇ ಅವರನ್ನು ದ್ವೇಷಿಸುವವರು ಹಲವಾರು ಜನರಿದ್ದರು ಅದರಿಂದ ಅವರುಗಳ ವರ್ಚಸ್ಸು ವೃದ್ದಿಯಾಯಿತೇ ವಿನಃ ಕುಂದಲಿಲ್ಲ...........ಸತೀಶ್

ಸತೀಶರಿಗೆ ವಂದನೆಗಳು
ದ್ವೇಷ ಪ್ರೀತಿ ಎಲ್ಲವು ಒಂದೆ ಬೇರೆ ಬೇರೆ ಮುಖಗಳು ಅಷ್ಟೆ

ಇವೆರಡನ್ನು ಬಿಟ್ಟು ನಿಂತವ‌ ನಿರ್ಲಿಪ್ತ‌ ಅವನೆ ` ಚಿತ್ತ‌ ಶುದ್ಧ‌ ಪರಮಾತ್ಮ‌` ಅದೇ ಜೀವನದ‌ ಸಾಧನೆಯ‌ ಗುರಿ.
ಚೆನ್ನಾಗಿದೆ ತಮ್ಮ‌ ವಿಚಾರ‌ ಧಾರೆ ಮುಂದುವರೆಯಲಿ. ಎಲ್ಲರಿಗೂ ಶುಭವಾಗಲಿ.
ರಾಮೋ.