೧೨೪. ಲಲಿತಾ ಸಹಸ್ರನಾಮ ೫೧೪ರಿಂದ ೫೨೦ನೇ ನಾಮಗಳ ವಿವರಣೆ

೧೨೪. ಲಲಿತಾ ಸಹಸ್ರನಾಮ ೫೧೪ರಿಂದ ೫೨೦ನೇ ನಾಮಗಳ ವಿವರಣೆ

ಚಿತ್ರ

ಮೂಲಾಧಾರ ಚಕ್ರ, ಚಿತ್ರ ಕೃಪೆ: ವಿಕಿಪೀಡಿಯಾ

ಲಲಿತಾ ಸಹಸ್ರನಾಮ ೫೧೪ - ೫೨೦

Mūlādhārāṁbujā-rūḍhā मूलाधारांबुजा-‍रूढा (514)

೫೧೪. ಮೂಲಾಧಾರಾಂಬುಜಾ-ರೂಢಾ

           ಮೂಲಾಧಾರ ಚಕ್ರದಲ್ಲಿ ಆಸೀನಳಾಗಿರುವವಳು ಸಾಕಿನೀ ದೇವಿ; ಅವಳನ್ನು ಏಳು ನಾಮಗಳಲ್ಲಿ ಅಂದರೆ ೫೨೦ನೇ ನಾಮದವರೆಗೆ ವರ್ಣಿಸಲಾಗಿದೆ. ಈ ಚಕ್ರವು ಕೆಳವಿಸರ್ಜನಾಂಗ ಪ್ರದೇಶದಲ್ಲಿ ಇರುತ್ತದೆ ಮತ್ತು ಅದಕ್ಕೆ ನಾಲ್ಕು ದಳದ ಪದ್ಮಿವಿದ್ದು, ಅದು ಕೆಂಪು ರಂಗಿನದಾಗಿದೆ. ಆ ನಾಲ್ಕೂ ದಳಗಳಲ್ಲಿ ಒಂದೊಂದು ವ್ಯಂಜನಾಕ್ಷರವು ಬಿಂದುವಿನೊಂದಿಗೆ ಕೆತ್ತಲ್ಪಟ್ಟಿರುತ್ತದೆ. ಈ ಚಕ್ರದ ಪರಿಧಿಯು ಚೌಕಾಕಾರವಾಗಿದ್ದು ಅದರಿಂದ ನಾಲ್ಕು ಭರ್ಜಿಗಳು (ಈಟಿಗಳು) ಹೊರಮುಖವಾಗಿ ಚಾಚಿಕೊಂಡಿರುತ್ತವೆ. ಈ ಪರಿಧಿಯೊಳಗೆ, ಈ ಚಕ್ರದ ಬೀಜವಾದ ಲಂ (लं) ಅಕ್ಷರವು ಇರಿಸಲ್ಪಟ್ಟಿರುತ್ತದೆ. ಈ ಚಕ್ರದ ಒಳಗಡೆ ತಲೆಕೆಳಗಾದ ಕೆಂಪು ತ್ರಿಕೋಣವಿದ್ದು ಅದು ಮಿಂಚಿನಂತೆ ಮಿನುಗುತ್ತಿರುತ್ತದೆ. ಈ ತ್ರಿಕೋಣದ ಒಳಗೆ ಕಾಮಕಲಾ ಬೀಜವೆಂದು ಕರೆಯಲ್ಪಡುವ ಶಕ್ತಿಯುತವಾದ ಕ್ಲೀಂ (क्लीं) ಬೀಜವು ಇರಿಸಲ್ಪಟ್ಟಿದೆ. ಭೂಮಿ ತತ್ವದ ಬೀಜಾಕ್ಷರವು ‘ಲಂ’ ಆಗಿದೆ ಮತ್ತು ಇದು ಸೂಕ್ತವಾದದ್ದು ಏಕೆಂದರೆ ಮೂಲಾಧಾರ ಚಕ್ರವು ಅತ್ಯಂತ ಕೆಳಗಿನ ಚಕ್ರವಾಗಿದ್ದು ಅದನ್ನು ಬುನಾದಿ ಚಕ್ರವೆಂದೂ ಕರೆಯುತ್ತಾರೆ. ಈ ಚಕ್ರದ ಒಳಗಡೆ ಒಂದು ಲಿಂಗವಿರುತ್ತದೆ (ಶಿವನ ಒಂದು ಪ್ರಮುಖವಾದ ಸ್ವರೂಪ). ಕುಂಡಲಿನೀ ಶಕ್ತಿಯು ಈ ಲಿಂಗವನ್ನು ಮೂರೂವರೆ ಸುತ್ತುಗಳುಳ್ಳ ಸರ್ಪದಂತೆ ಆವರಿಸಿರುತ್ತದೆ. ಈ ಚಕ್ರದಲ್ಲಿ ಸಂಸ್ಕೃತದಲ್ಲಿ ‘ದ್ವಾರ’ ಎಂದು ಕರೆಯಲ್ಪಡುವ ಒಂದು ರಂಧ್ರವಿದ್ದು (ತೂತಿದ್ದು) ಅದರ ಮೂಲಕವೇ ಕುಂಡಲಿನಿಯು ಆರೋಹಣ ಮತ್ತು ಅವರೋಹಣವನ್ನು ಮಾಡುತ್ತದೆ. ಸಾಮಾನ್ಯ ಪರಿಸ್ಥಿತಿಗಳಲ್ಲಿ ಈ ದ್ವಾರವು ಸರ್ಪದ ತಲೆಯಿಂದ ಮರೆಮಾಚಲ್ಪಟ್ಟಿರುತ್ತದೆ. ಇದು ಅತ್ಯಂತ ಪ್ರಮುಖವಾದ ಚಕ್ರವಾಗಿದ್ದು ಇಲ್ಲಿಯೇ ಪ್ರಾಣಶಕ್ತಿಯು ಕುಂಡಲಿನೀ ರೂಪದಲ್ಲಿರುತ್ತದೆ. ಲಲಿತಾಂಬಿಕೆಯು ಈ ಚಕ್ರದಲ್ಲಿ ಅವಳ ಸೂಕ್ಷ್ಮಾತಿಸೂಕ್ಷ್ಮ ರೂಪಾವಾದ ಕುಂಡಲಿನೀ ರೂಪದಲ್ಲಿ ನಿವಸಿಸುತ್ತಾಳೆ. ಹಳೆಯ ಶಾಸ್ತ್ರಗ್ರಂಥಗಳು ಈ ಚಕ್ರದಲ್ಲಿ ನಿವಸಿಸುವ ದೇವತೆಯನ್ನು ಡಾಕಿನೀ ಎಂದು ಹೆಸರಿಸುತ್ತವೆ ಆದರೆ ಈ ಲಲಿತಾ ಸಹಸ್ರನಾಮದ ಪ್ರಕಾರ ಆಕೆಯು ವಿಶುದ್ಧಿ ಚಕ್ರದಲ್ಲಿ ನೆಲೆಸಿರುವ ದೇವತೆಯಾಗಿದ್ದಾಳೆ.

          ಭೌತಿಕ ಸಂಪತ್ತನ್ನು ಪಡೆಯಲುಪಯೋಗಿಸುವ ‘ಲಂ’ ಬೀಜಾಕ್ಷರವನ್ನು ಇಲ್ಲಿ ಬಳಸಲಾಗಿದೆ. ಈ ತ್ರಿಕೋಣದಲ್ಲಿ ಇರಿಸಲಾಗಿರುವ ಮತ್ತೊಂದು ಬೀಜವಾದ ‘ಕ್ಲೀಂ’ ಸಹ ಸಂಪದಗಳನ್ನು ಪ್ರಸಾದಿಸುತ್ತದೆ. ಲಲಿತಾಂಬಿಕೆಯ ಅತಿ ಸೂಕ್ಷ್ಮರೂಪವಾದ ಕಾಮಕಲಾ (ನಾಮ ೩೨೨) ರೂಪವು ಇಲ್ಲಿ ಪ್ರಸ್ತಾವಿಸಿರುವ ಕಾಮ ಬೀಜವಾದ ’ಕ್ಲೀಂ’ ಗಿಂತ ಭಿನ್ನವಾದದ್ದೆಂದು ನೆನಪಿಡಿ.

Pañca-vaktrā पञ्च-वक्त्रा (515)

೫೧೫. ಪಂಚ-ವಕ್ತ್ರಾ

           ಸಾಕಿನೀ ದೇವಿಗೆ ಐದು ಮುಖಗಳಿರುವುದರಿಂದ ಈ ಚಕ್ರವನ್ನು ಐದನೆಯ ಚಕ್ರವಾಗಿ ವಿವರಿಸಲಾಗಿದೆ. ಪ್ರತಿಯೊಂದು ಮುಖವೂ ಪಂಚ ಮಹಾಭೂತಗಳಾದ ಆಕಾಶ, ವಾಯು ಮೊದಲಾದವುಗಳನ್ನು ಪ್ರತಿನಿಧಿಸುತ್ತದೆ.

ಪಂಚವಕ್ತ್ರಾ ಎನ್ನುವ ಯಂತ್ರವೊಂದಿದ್ದು ಅದನ್ನು ಶಿವನು ರಾವಣನ ತಪಸ್ಸಿಗೆ ಮೆಚ್ಚಿ ಅವನಿಗೆ ಕೊಟ್ಟನಂತೆ. ಇದನ್ನು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ.

Asthi-saṁsthitā अस्थि-संस्थिता (516)

೫೧೬. ಅಸ್ಥಿ-ಸಂಸ್ಥಿತಾ

          ಸಾಕಿನೀ ಯೋಗಿನಿಯು ಅಸ್ಥಿಗಳಲ್ಲಿ (ಮೂಳೆಗಳಲ್ಲಿ) ನೆಲಸಿರುತ್ತಾಳೆ, ಇದು ಚರ್ಮದಿಂದ ಐದನೆಯ ಪದರವಾಗಿರುತ್ತದೆ. ಇದನ್ನು ಐದನೆಯ ಚಕ್ರವಾಗಿ ಈ ಸಹಸ್ರನಾಮದಲ್ಲಿ ಕೈಗೆತ್ತಿಕೊಳ್ಳಲಾಗಿರುವುದಕ್ಕೆ ಇದು ಮತ್ತೊಂದು ಕಾರಣವಾಗಿದೆ.

Aṅkuśādi-praharaṇā अङकुशादि-प्रहरणा (517)

೫೧೭. ಅಂಕುಶಾದಿ-ಪ್ರಹರಣಾ

          ಸಾಕಿನೀ ದೇವಿಯು ಅಂಕುಶದಂತಹ ಆಯುಧಗಳನ್ನು ಹೊಂದಿದ್ದಾಳೆ. ಅವಳಿಗೆ ನಾಲ್ಕು ಕೈಗಳಿದ್ದು ಅಂಕುಶವಲ್ಲದೆ ಆಕೆಯು ಪದ್ಮ, ಪುಸ್ತಕ ಮತ್ತು ಚಿನ್ಮುದ್ರಾ (ಜ್ಞಾನ ಮುದ್ರಾ) ಇವುಗಳನ್ನು ಧರಿಸಿದ್ದಾಳೆ. ಆದರೆ ಶಾಸ್ತ್ರಗ್ರಂಥಗಳು ಈ ಆಯುಧಗಳನ್ನು ಒಪ್ಪುವುದಿಲ್ಲ. ಅವು ಶೂಲ (ತ್ರಿಶೂಲ), ದಂಡ (ಸಂನ್ಯಾಸಿಗಳು ಹೊತ್ತು ಓಡಾಡುವ ಧ್ವಜವಿರುವ ದಂಡ), ಕಮಂಡಲ (ತಾಮ್ರ ಅಥವಾ ಹಿತ್ತಾಳೆಯಿಂದ ಮಾಡಲ್ಪಟ್ಟು ಮೂಗಿನ ಹೊಳ್ಳೆಗಳಂತಿರುವ ಆಕಾರವನ್ನು ಹೊಂದಿರುವ ನೀರನ್ನು ಹೊಂದಿರುವ ಪಾತ್ರೆ) ಮತ್ತು ರುದ್ರಾಕ್ಷ ಮಾಲೆಯನ್ನು ಹೆಸರಿಸುತ್ತವೆ. ಇವೆಲ್ಲವೂ ಸಂನ್ಯಾಸಿಗಳ ಸಂಕೇತಗಳಾಗಿವೆ.

Varadādi-niṣevitā वरदादि-निषेविता (518)

೫೧೮. ವರದಾದಿ-ನಿಷೇವಿತಾ

           ಸಾಕಿನೀ ದೇವಿಯು ವರದಾ ಮೊದಲಾದ ಅವಳ ಪರಿಚಾರಿಕೆಯರಿಂದ ಸುತ್ತುವರೆಯಲ್ಪಟ್ಟಿರುತ್ತಾಳೆ. ಉಳಿದ ಮೂವರೆಂದರೆ ಶ್ರೀ (ಬಹುಶಃ ಶ್ರೀ ಎಂದರೆ ಲಕ್ಷ್ಮಿ ಅಥವಾ ಸಂಪತ್ತನ್ನು ಸೂಚಿಸುತ್ತದೆ), ಶಂದಾ ಮತ್ತು ಸರಸ್ವತೀ (ಜ್ಞಾನದ ಅಧಿದೇವತೆ).

Mudgaudanāsakta-cittā मुद्गौदनासक्त-चित्ता (519)

೫೧೯. ಮುದ್ಗೌದನಾಸಕ್ತ-ಚಿತ್ತಾ

           ಸಾಕಿನೀ ದೇವಿಯು ಹೆಸರು ಬೇಳೆಯಿಂದ ತಯಾರಿಸಿದ ಆಹಾರವನ್ನು ಇಷ್ಟಪಡುತ್ತಾಳೆ. ಮುದ್ಗೌದನ್ನಾ ಎಂದರೆ ಅದು ಅಕ್ಕಿ, ಹೆಸರು ಬೇಳೆ, ಬೆಲ್ಲ, ತೆಂಗಿನಕಾಯಿ, ತುಪ್ಪ ಮತ್ತು ಹಾಲು ಇವುಗಳ ಮಿಶ್ರಣದಿಂದ ತಯಾರಾದದ್ದು. ಇದನ್ನು ದೇವಿಗೆ ಅರ್ಪಿಸುವಾಗ ಅದನ್ನು ಒಂದು ಪ್ರತ್ಯೇಕ ವಿಧಾನದಿಂದ ತಯಾರಿಸಬೇಕು.

Sākinyambā-svarupiṇī साकिन्यम्बा-स्वरुपिणी (520)

೫೨೦. ಸಾಕಿನ್ಯಾಂಬಾ-ಸ್ವರೂಪಿಣೀ

          ಈ ಏಳು ನಾಮಗಳಲ್ಲಿ ವಿವರಿಸಿರುವ ಮೂಲಾಧಾರ ಚಕ್ರದಲ್ಲಿ ನೆಲೆಸಿರುವ ಸಾಕಿನೀ ದೇವಿಯ ಸ್ವರೂಪಳು.

******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 514-520 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.  

Rating
Average: 5 (1 vote)

Comments

Submitted by partha1059 Sat, 09/28/2013 - 13:01

ಸಾಕಿನಿ ಎನ್ನುವ ಹೆಸರು ಕೇಳಿರಲಿಲ್ಲ !
ಶಾಕಿನಿ ಅನ್ನುವುದು ಪ್ರೇತಗಳ ಹೆಸರಿಸುವಾಗ ಬರುತ್ತದೆ ಅನ್ನಿಸುತ್ತದೆ !

ಸಾಕಿನಿಗು ಶಾಕಿನಿಗೂ ಏನು ಸಂಬಂಧವಿಲ್ಲ ಅಲ್ಲವೆ ?

Submitted by makara Sat, 09/28/2013 - 13:32

ಪಾರ್ಥ ಸರ್,
ಈ ಹೆಸರು ಲಲಿತಾ ಸಹಸ್ರನಾಮದಲ್ಲೇ ಇದೆ. ಅದನ್ನೇ ಮೂಲ ಲೇಖಕರು ಇಲ್ಲಿ ಬಳಸಿರುವುದು. ನೀವು ಹೇಳಿದಂತೆ ಡಾಕಿನೀ, ಶಾಕಿನೀ ಮೊದಲಾದ ಹೆಸರುಗಳು ಕೆಲವೊಂದು ಕ್ಷುದ್ರ ದೇವತೆಗಳಿಗೂ ಇರುತ್ತವೆ. ಕ್ಷುದ್ರ ದೇವತೆಗಳೂ ದೈವೀ ಸ್ವರೂಪವನ್ನೇ ಹೊಂದಿರುತ್ತವೆ, ಆದರೆ ಅವುಗಳ ಶಕ್ತಿ ಪರಿಮಿತವಾದದ್ದು ಅದೇ ವಿಧವಾಗಿ ಪೈಶಾಚಿಕ ಮತ್ತು ಪ್ರೇತ ದೇವತೆಗಳು ಬೇರೆ ಎಂದುಕೊಳ್ಳುತ್ತೇನೆ, ನನಗೂ ಇದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಮ್ಮೆ ಶ್ರೀಯುತ ರವಿಯವರನ್ನು ಕೇಳಿ ದೃಢಪಡಿಸಿಕೊಳ್ಳುತ್ತೇನೆ.
ಕೃಷ್ಣ ಸರಣಿಯನ್ನು ಅದೇಕೋ ಮುಂದುವರೆಸಲಿಲ್ಲ. ನಿಮ್ಮ ಲೇಖನಗಳನ್ನು ಎದುರು ನೋಡುತ್ತಿದ್ದೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sat, 09/28/2013 - 19:40

ಶ್ರೀಧರರೆ, ೧೨೪. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯ ಸಾರ ಪರಿಷ್ಕರಣೆಗೆ ಸಿದ್ದ :-)

ಲಲಿತಾ ಸಹಸ್ರನಾಮ ೫೧೪ - ೫೨೦
_____________________________________________

೫೧೪. ಮೂಲಾಧಾರಾಂಬುಜಾ-ರೂಢಾ 
ಮೂಲಾಧಾರ ಚಕ್ರಾಸೀನೆ ಸಾಕಿನೀದೇವಿ, ಚತುರ್ದಳ ಪದ್ಮಾಕಾರ
ಕೆಂಪುದಳಕೊಂದೊಂದು ವ್ಯಂಜನಾಕ್ಷರಬಿಂದು, ಪರಿಧಿ ಚೌಕಾಕಾರ
ಈಟಿ ನಾಲ್ಕರಿಂದಾವೃತ್ತ ಪರಿಧಿ, 'ಲಂ' ಚಕ್ರದ ಬೀಜಾಕ್ಷರ ಪ್ರಸ್ತುತ
ಚಕ್ರದ ತಲೆಕೆಳ ಮಿನುಗು ತ್ರಿಕೋಣ, 'ಕ್ಲೀಂ' ಬೀಜಾಕ್ಷರ ಶಕ್ತಿಯುತ ||

ಮೂಲಾಧಾರಾ ಬುನಾದಿ ಚಕ್ರ, 'ಲಂ' ಭೂಮಿತತ್ವ ಬೀಜಾಕ್ಷರ ಸೂಕ್ತ
ಚಕ್ರದೊಳ ಶಿವರೂಪಿಲಿಂಗಕೆ, ಕುಂಡಲಿನೀ ಸರ್ಪ ಮೂರುವರೆ ಸುತ್ತ
ಕುಂಡಲಿನಿ ಆರೋಹಣ-ಅವರೋಹಣದ್ವಾರ, ಮರೆಮಾಚಿ ಸರ್ಪಶಿರ
ಪ್ರಾಣಶಕ್ತಿ ಕುಂಡಲಿನೀ ರೂಪ, ಸೂಕ್ಷ್ಮಾತಿಸೂಕ್ಷ್ಮ ಲಲಿತೆ ವಾಸಿಪಚಕ್ರ ||

೫೧೫. ಪಂಚ-ವಕ್ತ್ರಾ
ಸಾಕಿನೀ ದೇವಿ ಯೋಗಿನಿ, ಪಂಚಮುಖಿ ರೂಪದಿ ಅವತರಣ
ವಾಕ್ದೇವಿ ಐದನೆ ಮೂಲಾಧಾರಚಕ್ರದೆ, ಪರಿಗಣಿಸಲು ಕಾರಣ
ಪ್ರತಿ ಮುಖ ಪ್ರತಿನಿಧಿಸುತ, ಪಂಚ ಮಹಾಭೂತಗಳ ಸಾಲಲಿ
ಲಲಿತಾಕೈಂಕರ್ಯದಿ ನಿರತೆ, ಪಂಚವಕ್ತ್ರಾದೇವಿ ಅವಿರತದಲಿ ||

೫೧೬. ಅಸ್ಥಿ-ಸಂಸ್ಥಿತಾ 
ಚರ್ಮದಾ ಮೊದಲ ಪದರ, ದಾಟಿಸಿದರೆ ರಕ್ತ ಪದರ
ರಕ್ತದ ಪದರವ ದಾಟೆ ತಳದೆ ಮಾಂಸಖಂಡ ಸಾಧರ
ಕೆಳಗೆ ಕೊಬ್ಬಿನ ಪದರ, ತರುವಾಯದ ಪದರವೆ ಅಸ್ಥಿ
ಅಸ್ಥಿ ಸಂಸ್ಥಿತಾ ರೂಪದಿ, ನೆಲೆಸುತ ಸಾಕಿನೀ ನಿಯುಕ್ತಿ ||

೫೧೭. ಅಂಕುಶಾದಿ-ಪ್ರಹರಣಾ
ಚತುರ್ಭುಜ ಧಾರಿಣಿಯಾಗಿ, ಸಾಕಿನೀ ದೇವಿ ಪ್ರಸ್ತುತಿ
ಅಂಕುಶಾದಿತರ ಆಯುಧಪಾಣಿ, ಪ್ರತಿ ಕೈಯಲಿ ಶಕ್ತಿ
ಪದ್ಮ-ಪುಸ್ತಕ-ಚಿನ್ಮುದ್ರಾ, ಅಂಕುಶದೊಡನೆ ಧರಿಸುತ್ತ
ಅಂಕುಶಾದಿ ಪ್ರಹರಣಾ ಸನ್ಮತಿ, ರಕ್ಷಿಸಿ ಲಲಿತಾ ಪಥ ||

೫೧೮. ವರದಾದಿ-ನಿಷೇವಿತಾ 
'ಲಂ' ಭೌತಿಕ ಸಂಪತ್ತಿನ ಬೀಜಾಕ್ಷರ, 'ಕ್ಲೀಂ' ಪ್ರದಾಯಿಸಿ ಸಂಪದ
ಚತುರ್ದಳ ಕಮಲದ ಪ್ರತಿದಳ ವರದಾದಿ ಪರಿಚಾರಿಕೆ ಸರ್ವದಾ
ಸಂಪತ್ತಿನ 'ಶ್ರೀ', 'ಶಂದಾ' ಜತೆಗೆ, 'ಸರಸ್ವತೀ' ಜ್ಞಾನದಧಿದೇವತಾ
ಸಹಾಯಕಿಯರೊಡಗೂಡಿ ಸಾಕಿನೀ ದೇವಿ ವರದಾದಿ ನಿಷೇವಿತಾ ||

೫೧೯. ಮುದ್ಗೌದನಾಸಕ್ತ-ಚಿತ್ತಾ 
ಪ್ರತಿ ಯೋಗಿನಿಯರಂತೆ ಸಾಕಿನೀ, ಬಯಸುವಳು ಪ್ರೀತ್ಯರ್ಥ
ಅಕ್ಕಿ-ಬೆಲ್ಲ-ತುಪ್ಪ-ಹಾಲು-ಹೆಸರ್ಬೇಳೆ-ತೆಂಗಿನಕಾಯಿ ಮಿಶ್ರಿತ
ವಿಶೇಷ ವಿಧಾನ ತಯಾರಿಸಲೆ ಭಕ್ಷ್ಯ, ಮುದ್ಗೌದನ್ನಾ ಸಿದ್ದವಿತ್ತ
ಆನಂದದಿ ಆಸ್ವಾದಿಸುವಳು ಸಾಕಿನೀ ಮುದ್ಗೌದನಾಸಕ್ತ ಚಿತ್ತಾ ||

೫೨೦. ಸಾಕಿನ್ಯಾಂಬಾ-ಸ್ವರೂಪಿಣೀ 
ಪಂಚಮುಖೀ ಯೋಗಿನಿ, ದೇವಿ ಸಾಕೀನೀ ಶಕ್ತೆ
ಮೂಲಾಧಾರ ಚಕ್ರದೆ, ಚತುರ್ದಳ ಪದ್ಮದಜತೆ
ಐದನೆ ಅಸ್ಥಿ ಪದರದೆ, ನೆಲೆ ನಿಂತಾ ಯೋಗಿನೀ
ನಾಲ್ವರಿಂ ಸೇವಿತಳೆ, ಸಾಕಿನ್ಯಾಂಬಾ ಸ್ವರೂಪಿಣೀ ||

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು