' ಶಬರಿಯ ನಿರೀಕ್ಷೆ '

' ಶಬರಿಯ ನಿರೀಕ್ಷೆ '

ಚಿತ್ರ

ಸುತ್ತಲೂ ನಿಶ್ಯಬ್ದ ಕತ್ತಲಾವರಿಸುತಿದೆ 

ಏಕೆ ಹೀಗೆ ? ಒಂದೂ ತಿಳಿಯುತ್ತಿಲ್ಲ !

ಜಗದ ಯಾವ ಜಂಜಾಟವೂ ಬೇಡ

ನಿಶ್ಯಬ್ದ.! ಎಷ್ಟು ನಿಶ್ಯಬ್ದ..! ಉಸಿರಾಟದ 

ಸದ್ದೂ ಕೇಳಿಸದಷ್ಟು ನಿಶ್ಯಬ್ದ...! 

ನಿಶ್ಯಬ್ದ ವೆಂದರೆ ಅದು  ಬರಿ ಮೌನವಲ್ಲ 

ಮನದ ನಿಶ್ಯಬ್ದದ ನಡುವೆ 

ನಿರೀಕ್ಷೆಯ ಹೆಜ್ಜೆಯ ಸದ್ದು  ಕೇಳುತಿದೆ 

ಈ ಸ್ಥಿತಿ 'ಶಬರಿಯ ಸ್ಥಿತಿ ' ಇರಬಹುದೆ?

 

ಮೌನ ಲೋಕದ ನಡುವೆ

ಯಾರೋ ನಡೆದು ಬರುತ್ತಿದ್ದಾರೆ

ಯಾರದೋ ನಿರೀಕ್ಷೆಯಲಿ

ನಾವು ಕಾದಿರುವೆವೆ? ಶಬರಿ 

ರಾಮನ ಬರುವಿಕೆಗೆ ಕಾದಂತೆ

ಈ ವ್ಯಾಕುಲತೆಗೆ ಮೌನಕೆ 

ಕಾರಣಗಳು ತಿಳಿಯುತ್ತಿಲ್ಲ ಎಲ್ಲಿ 

ಯಾರಿಗಾಗಿ ಕಾಯುತ್ತಿದ್ದೇವೆ?

ಯಾರು ಬರಲಿದ್ದಾರೆ ? ಸಣ್ಣ 

ಸುಳಿವೂ ಇಲ್ಲ ಈ ನಿರೀಕ್ಷೆಯ 

ಅಂತ್ಯ ಎಲ್ಲಿ ಯಾವತ್ತು ಹೇಗೆ?

ಶಬರಿಗಾದರೋ ರಾಮನ 

ಬರುವಿಕೆಯ ನಿರೀಕ್ಷೆಯಿತ್ತು 

ಅದರೆ ನಮಗೆ ಯಾರ ನಿರೀಕ್ಷೆ?

 

ಪ್ರತಿಯೊಬ್ಬನ ನಿಶ್ಯಬ್ದ ಲೋಕದಲಿ 

ಶಬರಿಯೊಬ್ಬಳು ಬಂದು

ನೆಲೆ ನಿಂತಿರುತ್ತಾಳೆ ಆತನ ಬರಡು 

ಬದುಕಿನ ನಿಶ್ಯಬ್ದ ದಾರಿಯಲಿ 

ಕೈ ಹಿಡಿದು ನಡೆಸುವವಳೆ ಅವಳು 

ಯುಗಾಂತರಗಳ ಆ ಹಿಂದಿನ ಶಬರಿ

ಇಂದಿಗೂ ಎಲ್ಲರಲೂ ಸ್ಥಾಪಿತಳಾಗುತ್ತ 

ಮುನ್ನಡೆಸುತ್ತ ಬಂದಿದ್ದಾಳೆ

ಒಂಟಿತನದ ನಿಶ್ಯಬ್ದದ ನಿರೀಕ್ಷೆಯ ಸಂಗಾತಿ

ಆಕೆ ನಮ್ಮೊಳಗಿಂದ ಎದ್ದು ಹೋದಳೋ 

ಅಲ್ಲಿ ಸಂಭವನೀಯತೆಯೇನೂ ಇರುವುದಿಲ್ಲ

ಮನ ಬರಿ ಖಾಲಿ ಖಾಲಿ 

 

ಹೊರಗೆಲ್ಲ ಬರಿ ದಟ್ಟ ಕತ್ತಲೆಯೆ ಕತ್ತಲು 

ಚುಕ್ಕಿಗಳ ಬೆಳಕೂ ಕೂಡ ಮಂಕು ಮಂಕು 

ಅಸಹನೀಯ ಮೌನದಲಿ ಜೀವನದ 

ದಾರಿ ಸುಸ್ತಾಗಿ ಪವಡಿಸಿದೆ ಏಕಾಂತದ 

ನಿಶ್ಯಬ್ದದಲಿ ಅವ್ಯಕ್ತ ನಿರೀಕ್ಷೆಯೊಂದು 

ಕಾತರದಿ ಕಾಯ್ದಿದೆ ಯಾರಾದರಾ ದಾರಿಯಲಿ 

ಸಾಗಿ ಬರುವರೆ? ಬದುಕಿಗೊಂದು ಅರ್ಥ 

ಕೊಡುವರೆ ಎಂದು ? ನಿರೀಕ್ಷೆ.! ಬರಿ ನಿರೀಕ್ಷೆ..! 

ಅರ್ಥಹೀನ ನಿರೀಕ್ಷೆ...!

 

ಆದರೂ ನಮ್ಮ ನಿರೀಕ್ಷೆಗಳು ಜೀವಂತ 

ಅನೇಕ ಸಂಧರ್ಭಗಳಲವು 

ಸುಳ್ಳಾಗಲೂ ಬಹುದು ಆದರೂ

ಮೊಂಡು ಹಿಡಿದ ಮನ ಹುಸಿ ನಿರೀಕ್ಷೆಯ 

ಸೆರಗು ಹಿಡಿದು ನಿರಪೇಕ್ಷ ಭಾವ ಹೊತ್ತು 

ಕಾಯುತ್ತದೆ ಸಂತೈಸುತ್ತದೆ ಜೀವನದ 

ಕೊನೆಯ ಗಳಿಗೆಯ ವರೆಗೂ

ಇರಬಹುದೆ ಅದು 'ಶಬರಿಯ ಮನಸ್ಥಿತಿ' ? 

 

ಬಂಡೆಗಲ್ಲುಗಳ ಬೆಟ್ಟಗಳ ದಾರಿಯಲಿ ಒಣಗಿದ

ಬೋರೆ ಹಣ್ಣುಗಳ ಸೆರಗಲಡಗಿಸಿಕೊಂಡು 

ಯುಗ ಯುಗಾಂತರಗಳಿಂದ ರಾಮನಿಗಾಗಿ 

ಕಾದ ಶಬರಿ ಯಾವಾಗ ಎಂದು ಎಲ್ಲಿ ಎಲ್ಲರ 

ಮನವನಾವರಿಸಿದಳು ? ಆಕೆ ಬರಿ ರಾಮಾಯಣದ 

ಒಂದು ಪಾತ್ರವಾಗಿ ಮಾತ್ರ ಉಳಿಯಲಿಲ್ಲ.!

 

ಬರಿ ಶಬರಿಯೆ ಏಕೆ ನಮ್ಮನಾವರಿಸುತ್ತ ಕಾಡುತ್ತ

ಬಂದಿದ್ದಾಳೆ? ಅದೇ ರಾಮಾಯಣದ ಕಾಲದಲಿ 

ರಾಮನ ಆಗಮನಕೆ ಕಾದ ಅಹಲ್ಯೆಯಿದ್ದಳು 

ಸೀತೆಯಿದ್ದಳು ಆತನ ಕುಟುಂಬ ಪರಿವಾರವಿತ್ತು 

 

ಆದರೆ ಅಹಲ್ಯೆ ಶಬರಿಯಲ್ಲ ಆಕೆ ಇಂದ್ರನ 

ಲಂಪಟತನಕ್ಕೆ ಬಲಿಯಾಗಿ ಹುಂಬ ಗಂಡನ 

ಕೋಪಕ್ಕೆ ತುತ್ತಾಗಿ ಕಲ್ಲಾದ ಅಮಾಯಕೆಯವಳು 

ಆಕೆಯೊಂದು ಕಲ್ಲು ಅದಕೆ ನಿರೀಕ್ಷೆಯಿಲ್ಲ

ಅದು ಯಾರಿಗಾಗಿಯೂ ಕಾಯುವುದಿಲ್ಲ ಮೇಲಾಗಿ 

ಅದೊಂದು ಸಾಕ್ಷ್ಯವೂ ಅಲ್ಲ ಚಲನೆಯಿಲ್ಲದೆ 

ಬಿದ್ದುಕೊಂಡ ಜಡ ವಸ್ತುವದು ಶ್ರೀ ರಾಮನೆ 

ಆ ದಾರಿಯಲಿ ಬಂದು ಎಡವಿ ಮುಗ್ಗರಿಸಿ ಅದಕೆ 

ಕಾಲು ತಾಗಿದಾಗ ಅಹಲ್ಯೆಗೆ ಶಾಪ ವಿಮುಕ್ತಿ

ಅಲ್ಲಿಯ ವರೆಗೂ ನಿರೀಕ್ಷೆಯ ಭಾರದಲಿ

ನರಳಿದ ನಿರ್ಜೀವ ಸ್ಥಿತಿ ಆಕೆಯದು

 

ಆದರೆ ಸೀತೆಯದು ಇನ್ನೊಂದು ಬಗೆಯ ಸ್ಥಿತಿ

ಆಕೆಯ ಎದುರು ಆಯ್ಕೆಗೆ ಮಾರ್ಗಗಳಿವೆ 

ಬಿಟ್ಟು ಬಂದ ರಾಮನಿದ್ದಾನೆ ಅಪಹಿರಿಸಿ ತಂದ 

ರಾವಣನಿದ್ದಾನೆ ಕಾವಲಿನ ರಾಕ್ಷಸಿಯರಿದ್ದಾರೆ 

ನೀರವ ಮೌನದ ಅಶೋಕವನದ ಶೋಕವಿದೆ

ಹನುಮನ ಆಗಮನದ ನಿರೀಕ್ಷೆಯಿದೆ  ನೆನಪಿಗೆ 

ಬಂದು ಕಾಡಲು ರಾಮನಿದ್ದಾನೆ ಶಪಿಸಲು 

ಲಂಕೇಶನಿದ್ದಾನೆ ಲಂಕೆಯಿದೆ ಅಲ್ಲಿಂದ 

ಮರಳಿದರೆ ಅಯೋಧ್ಯೆಯಿದೆ

 

ಆದರೆ ಶಬರಿಗೇನಿದೆ? ಒಂದು ಹಿಡಿ ಬೋರೆಹಣ್ಣು 

ಕೊಣೆಗಾಣದ ನಿರೀಕ್ಷೆ ಯಾಕಾಗಿ ಅವಳು 

ಎಲ್ಲರಿಗೂ ಇಷ್ಟವಾಗುತ್ತಾಳೆ ? ನಿರಾಶೆ ಮುಪ್ಪು 

ನಿಶ್ಯಬ್ದ ಸ್ಥಗಿತ ಕಾಲ ಬೇಸರ ಪಡದ ಮನ 

ಎಷ್ಟು ಕಾಲ ಕಾದರೂ ಬಾರದ ಶ್ರೀರಾಮನ 

ನಿರೀಕ್ಷೆಯಲಿ ಸಂಯಮದಿಂದ ಕಾಯುತ್ತಲೆ 

ಇರುವ ಅವಳ ಸಹನೆಗಾಗಿ ಅವಳ ನಿರೀಕ್ಷೆ 

ಮುಗಿದ ನಂತರವೂ ಆಕೆ ಕಾಲ ಗರ್ಭ ಸೇರಲಿಲ್ಲ

ಪುನರಾವತಾರ ಪಡೆದು ನಮ್ಮೆಲ್ಲರೊಳಗೆ 

ಅವಿನಾಭಾವವಾಗಿ ಸೇರಿ ಬಿಟ್ಟಿದ್ದಾಳೆ ನಿರೀಕ್ಷೆಯ 

ಭಾರದಲಿ ಕಾದು ಮುಪ್ಪಾದ ಆಕೆಗೆ ಮತ್ತೆ ಮುಪ್ಪಿನ

ಭಯವಿಲ್ಲ ಮುಖ್ಯವಾಗಿ ಆಕೆಗೆ ಆಯ್ಕೆಗಳಿಲ್ಲ 

ನಿರೀಕ್ಷೆ ತಪ್ಪಲಿಲ್ಲ ಅದು ನಿರಂತರವಾದ ಕಾರಣ 

ಆಕೆಗೆ ಸಾವಿರಲಿಲ್ಲ ಎಂದಿಗೂ ಆಕೆಗೆ ಸಾವಿಲ್ಲ 

 

ಆಕೆ ಚಿರಂಜೀವಿ ಆಶೆ ನಿರೀಕ್ಷೆಗಳಲ್ಲಿಯೆ

ಬದುಕು ಮುಗಿದು ಹೋಗುತ್ತದೆ

ನಿರೀಕ್ಷೆಯ ಗೈರತ್ತು ಅದು.! ಆದರೂ ಮೌನದ 

ಅಸಹನೀಯ ದಾರಿಯಲಿ ಆಕೆಯ ಆರಾಧ್ಯ ದೈವ 

ಬರುವನೆಂದು ನಮ್ಮನಾವರಿಸಿ ಕಾದಿದ್ದಾಳೆ ಶಬರಿ 

ಯುಗಗಳಳಿದು ಯುಗಗಳು ಬಂದರೂ 

ನಿರೀಕ್ಷೆಯ ಶಬರಿ ಎಲ್ಲಿಗೂ ಹೋಗುವುದಿಲ್ಲ 

ಕಾಯುತ್ತಲೆ ಇರುತ್ತಾಳೆ ಸಹನಶೀಲೆ ಎಲ್ಲ ಕಾಲಕ್ಕೂ 

 

                 ***

 

ಚಿತ್ರ ಕೃಪೆ: ಅಂತರ್ ಜಾಲ

 

 

Rating
No votes yet

Comments

Submitted by nageshamysore Sat, 09/21/2013 - 20:38

ಪಾಟೀಲರೆ, ಮತ್ತೆ ತಮ್ಮನ್ನು ಸಂಪದದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದೀರಾ. ಈಗ ತಮ್ಮ ಆರೋಗ್ಯ ಗಣನೀಯವಾಗಿ ಸುಧಾರಿಸಿದೆಯೆಂದು ಭಾವಿಸುತ್ತೇನೆ.

ಬಹುಶಃ ಮೂರ್ತಾಮೂರ್ತ ನಿರೀಕ್ಷೆಗಳನ್ನು ಶಬರಿಗೆ ಮೀರಿದ ಸಾಂಕೇತಿಕತೆಯಲ್ಲಿ ವ್ಯಕ್ತಪಡಿಸುವುದು ಸಾಧ್ಯವೆ ಇಲ್ಲವೆಂದು ಕಾಣುತ್ತದೆ. ಆ ಭಾವ ಕಾವ್ಯದುದ್ದಕ್ಕೂ ಸೊಗಸಾಗಿ ಒಡಮೂಡಿದೆ. ನಿರೀಕ್ಷೆಗಳೆ ಇಲ್ಲದ ನಿರೀಕ್ಷೆಯ ರೂಪದಲ್ಲಿ ಮನತಟ್ಟುವ ಪಾತ್ರ ಅವಳದು. ತುಲನೆಗಿಟ್ಟ ಅಹಲ್ಯೆ, ಸೀತೆಯರ ಹೋಲಿಕೆ ಆ ಪಾತ್ರವನ್ನು ಮತ್ತಷ್ಟು ಔನ್ನತ್ಯಕ್ಕೇರಿಸಿದೆ. ಸೊಗಸಾದ ಅನುಭಾವ, ಕಾವ್ಯ ಓದಿದ ನಂತರ ಮೂಡಿ ಖುಷಿ ಕೊಟ್ಟಿತು.

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

Submitted by H A Patil Sun, 09/22/2013 - 17:58

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ಈ ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ. ರಾಮಾಯಣದಲ್ಲಿ ನನ್ನನ್ನು ಕಾಡಿದ ಕೆಲವು ಪ್ರಮುಖ ಪಾತ್ರಗಳಲ್ಲಿ ಶಬರಿಯ ಪಾತ್ರವೂ ಒಂದು. ಆಕೆಯನ್ನೆ ಕೇಂದ್ರ ಬಿಂದುವಾಗಿ ಒಂದು ಕವನ ರಚಿಸ ಬೇಖೆಂದು ಬಹಳ ದಿನಗಳೀಂದ ಯೋಚಿಸುತ್ತಿದ್ದೆ, ಅದರ ಫಲಶೃತಿಯೆ ಈ ಕವನ, ಕವನದ ವಸ್ತುನಿಷ್ಟ ವಿಮರ್ಶೆಗೆ ಧನ್ಯವಾದಗಳು.
ತಾವು ಊಹಿಸಿದಂತೆ ನಿಧಾನವಾಗಿ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ, ಇತ್ತೀಚೆಗೆ ನನ್ನ ಎಡಗಣ್ಣಿಗೆ ಪೊರೆ ಬಂದಿದ್ದು ಚಿಕತ್ಸೆ ಮಾಡಿಸಬೇಕಿದೆ. ಹೀಗಾಗಿ ಓದು ಮತ್ತು ಬರಹ ಆಮೆ ಗತಿಯಲ್ಲಿ ಸಾಗಿದೆ ತಮ್ಮ ಕಳಕಳಿಗೆ ಧನ್ಯವಾದಗಳು

Submitted by partha1059 Sat, 09/21/2013 - 22:05

ಶಬರಿಗಾದರೋ ರಾಮನ

ಬರುವಿಕೆಯ ನಿರೀಕ್ಷೆಯಿತ್ತು

ಅದರೆ ನಮಗೆ ಯಾರ ನಿರೀಕ್ಷೆ?
>>>
ನಿಜ ನಮಗೆ ಯಾರ ನಿರೀಕ್ಶೆಯೂ ಇಲ್ಲ ಆದರೂ ಮನ ಸದಾ ಯಾರನ್ನೊ ನಿರೀಕ್ಷಿಸುತ್ತ ಇರುತ್ತೆ>
ಶಬರಿ ಹಾಗು ನಿರೀಕ್ಷೆ ಒಂದೆ ಪದವೇನೊ !!

Submitted by H A Patil Sun, 09/22/2013 - 18:04

In reply to by partha1059

ಪಾರ್ಥ ಸಾರಥಿಯವರಿಗೆ ವಂದನೆಗಳು
ಈ ಕವನದ ಬಗೆಗೆ ತಾವು ವ್ಯಕ್ತ ಪಡಿಸಿದ ಅಭಿಪ್ರಾಯ ಓದಿದೆ. ತಾವಂದಂತೆ<<<< ಶಬರಿ ಹಾಗೂ ನಿರೀಕ್ಷೆ ಒಂದೇ ಪದವೇನೋ >>>> ನನಗೂ ಹೌದು ಎನಿಸುತ್ತೆ, ನಿರೀಕ್ಷೆಯನ್ನು ಶಬರಿ ಅರ್ಥಪೂರ್ಣವಾಗಿ ಪ್ರತಿನಿಧಿಸುತ್ತಾಳೆ, ಆಕೆಗಿಂತ ಮಿಗಿಲಾದ ಹೋಲಿಕೆ ನನಗೆ ಬೇರೆಡೆ ಕಂಡು ಬರಲಿಲ್ಲ, ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by sathishnasa Sun, 09/22/2013 - 13:17

ತಾಳ್ಮೆ, ಸಹನೆ ಇವುಗಳ ಪ್ರತಿರೂಪವೇ ಶಬರಿ ಮತ್ತು ಅಹಲ್ಯೆ ಒಳ್ಳಯ ಕವನ ಪಾಟೀಲ್ ರವರೇ ....ಸತೀಶ್

Submitted by H A Patil Sun, 09/22/2013 - 18:09

In reply to by sathishnasa

ಸತೀಶ ರವರಿಗೆ ವಂದನೆಗಳು
ತಮ್ಮ ಅನಿಸಿಕೆ ಸರಿ, ತಾಳ್ಮೆ ಮತ್ತು ಸಹನೆಗಳಿಗೆ ಶ್ರೇಷ್ಟ ಉದಾಹರಣೆ ಶಬರಿ ಮತ್ತು ಅಹಲ್ಯೆ. ಕವನದ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by swara kamath Mon, 09/30/2013 - 19:35

ಪಾಟೀಲರಿಗೆ ನಮಸ್ಕಾರಗಳು.

ಒಂದು ಸುಂದರ ಕವನದ ಮೂಲಕ 'ನಿರೀಕ್ಷೆ'ಯ ಕುರಿತು ಶಬರಿಯ ಅಭಿವ್ಯಕ್ತಿ ತೋರಿಸಿರುವಿರಾದರೂ ಈ ಧರೆಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿ ಗಳಲ್ಲಿ ಆಶೆ ಮತ್ತು ನಿರೀಕ್ಷೆ ಇದ್ದೆ ಇರುತ್ತದೆ. ಯಾವ ನಿರೀಕ್ಷೆ ಇಟ್ಟುಕೊಳ್ಳದೇ ನಾವು ದೈನಂದಿನ ಕರ್ಮಗಳನ್ನು ಮಾಡುತ್ತಾ ಹೋದರೆ,ಅದರಿಂದ ಸಿಗುವ ಆತ್ಮಾನಂದ ಖಂಡಿತ ಬೇರೊಂದಿಲ್ಲಾ.